2,500 ಕೋಟಿ ರು., ಮೊತ್ತದ ಬಿಲ್‌ ಬಾಕಿ, ಚಾಲ್ತಿ ಕಾಮಗಾರಿಗಳಿಗೂ ಹಣವಿಲ್ಲ; ಆರ್ಥಿಕ ಪರಿಸ್ಥಿತಿ ಕೆಟ್ಟಿತೇ?

ಬೆಂಗಳೂರು; ಕೆರೆ ಸಂಜೀವಿನಿ, ಕೆರೆಗಳ ಸಮಗ್ರ ಅಭಿವೃದ್ಧಿ, ಏತ ನೀರಾವರಿ ಸೇರಿದಂತೆ ಇನ್ನಿತರೆ ಚಾಲ್ತಿಯಲ್ಲಿರುವ ಕಾಮಗಾರಿ ನಿರ್ವಹಿಸಿರುವ ಸಣ್ಣ  ನೀರಾವರಿ ಇಲಾಖೆಯ  ಗುತ್ತಿಗೆದಾರರಿಗೆ 2,500 ಕೋಟಿ ರು. ಮೊತ್ತದ ಬಿಲ್‌ಗಳನ್ನು ಪಾವತಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಹರಸಾಹಸ ಪಡುತ್ತಿದೆ. ದುರಸ್ತಿ ಕಾಮಗಾರಿಗಳಿಗೆ ಹಣಕಾಸನ್ನು ಹೊಂದಿಸಲು ಜಿಲ್ಲಾ ವಿಪತ್ತು ನಿಧಿಗೆ ಕೈ ಹಾಕಿದೆ.

 

ಅಷ್ಟೇ ಅಲ್ಲ, ದುರಸ್ತಿ ಕಾಮಗಾರಿಗಳಿಗೂ ಹಣ ಹೊಂದಿಸಲು ಬೇರೆ ಇಲಾಖೆಗಳತ್ತ ಕಣ್ಣು ಹಾಕಿದೆ. ಹಾಗೆಯೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬೊಕ್ಕಸದಲ್ಲಿ ಹಣವಿಲ್ಲದಂತಾಗಿದೆ. ಬಜೆಟ್‌ನಲ್ಲಿ ಘೋಷಿಸಿದ್ದ ಕಾಮಗಾರಿಗಳಿಗೆ ಹೆಚ್ಚುವರಿ ಹಣ ಹೊಂದಿಸಲು ಹೆಣಗಾಡುತ್ತಿದೆ.

 

ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಆರ್ಥಿಕ ಪರಿಣಾಮ ಉಂಟಾಗುವ ಪ್ರಸ್ತಾವನೆಗಳನ್ನು ಇನ್ನು ಮುಂದೆ ಸಲ್ಲಿಸಬಾರದು. ಹೊಸ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಬಾರದು ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗಳಿಗೆ ಸ್ಪಷ್ಟವಾಗಿ ಹೇಳಿದೆ.

 

ಹಲವು ಯೋಜನೆ ಕಾಮಗಾರಿಗಳಿಗೆ ಅನುದಾನ, ಹೆಚ್ಚುವರಿ ಅನುದಾನ ಮತ್ತು ಹೊಸ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯು 2024ರ ವಿವಿಧ ತಿಂಗಳುಗಳಲ್ಲಿ ಹತ್ತಾರು ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಗೆ ಕಳಿಸಿತ್ತು. ಈ ಎಲ್ಲಾ ಪ್ರಸ್ತಾವನೆಗಳನ್ನೂ ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಸದ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆರ್ಥಿಕ ಪರಿಣಾಮ ಬೀರುವ ಯಾವುದೇ ಪ್ರಸ್ತಾವನೆ ಸಲ್ಲಿಸಬಾರದು ಎಂದು ಪದೇ ಪದೇ ಪುನರುಚ್ಛರಿಸಿದೆ.

 

ಇದಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಗೆ ಆರ್ಥಿಕ ಇಲಾಖೆಯು ಬರೆದಿರುವ ಎಲ್ಲಾ ಪತ್ರಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಅತೀವವಾದ ಆರ್ಥಿಕ ಪರಿಣಾಮ ಬೀರುತ್ತಿದೆ.  ಮುಂದಿನ ದಿನಗಳಲ್ಲಿ ಇದು ದಿವಾಳಿಗೂ ಕಾರಣವಾಗಬಹುದು ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಬರೆದಿರುವ ಪತ್ರಗಳೂ ಮುನ್ನೆಲೆಗೆ ಬಂದಿವೆ.

 

ಸಣ್ಣ ನೀರಾವರಿ ಇಲಾಖೆಯಡಿ ಅನುಮೋದಿತ ಅಧಿಕ ಕಾರ್ಯಭಾರವಿದೆ. ಹಾಗೂ 2,500 ಕೋಟಿ ರು. ಮೊತ್ತದ ಬಿಲ್‌ಗಳು ಪಾವತಿಗಾಗಿ ಬಾಕಿ ಇವೆ. ಈ ಬಿಲ್‌ಗಳನ್ನು ಪಾವತಿಸಲು ಆದ್ಯತೆ ಮೇಲೆ ಅನುದಾನ ಒದಗಿಸಬೇಕಾಗಿದೆ. ಹೀಗಾಗಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಾಗುವುದಿಲ್ಲ. ಹೀಗಾಗಿ ಪ್ರಸ್ತಾವನೆಯನ್ನು ಮುಂದೂಡಬೇಕು ಎಂದು ಆರ್ಥಿಕ ಇಲಾಖೆಯು 2024ರ ಮಾರ್ಚ್‌ನಿಂದ ನವೆಂಬರ್‍‌ವರೆಗೆ ಬರೆದಿರುವ ಹಲವು ಪತ್ರಗಳಲ್ಲಿ ಸ್ಪಷ್ಟಪಡಿಸಿದೆ.

 

 

ಅಲ್ಲದೇ ಎಸ್‌ಡಿಆರ್‍‌ಎಫ್‌ ನಿಧಿಯ ಅಡಿಯಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಿಲ್ಲವೇ, ಈ ಬಗ್ಗೆ ಪರಿಶೀಲಿಸಬೇಕು ಎಂದು ಆರ್ಥಿಕ ಇಲಾಖೆಯ (ಲೋಕೋಪಯೋಗಿ ಆರ್ಥಿಕ ಕೋಶ)ದ ಸರ್ಕಾರದ ಅಧೀನ ಕಾರ್ಯದರ್ಶಿ ವೆಂಕಟೇಶ್‌ ಎಸ್‌ ಎನ್‌ ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2024ರ ಸೆ.24ರಂದು ಪತ್ರ (ಸಂಖ್ಯೆ; ಆಇ 358 ಆಕೋ-1/2024 (ಇ-ಆಫೀಸ್‌) (MID 461 MISU 2024) ಬರೆದಿರುವುದು ಗೊತ್ತಾಗಿದೆ.

 

2024ರ ಅಕ್ಟೋಬರ್‍‌ 3, 4, 5 ರಂದು ಇದೇ ಶಾಖೆಯು ಮತ್ತೊಂದು ಪತ್ರ (ಆಇ 392 ಆಕೋ-1/2024 )(ಆಇ 386, ಆಇ 482, ಆಇ 396, ಆಇ 322, ಆಇ 372 ಆಕೋ-1/2024) (ಇ-ಆಫೀಸ್‌) (MID 496 MISU 2024) (ಇ- ಆಫೀಸ್‌ (MID 482 MISU 2024) (MID 396 MIS 2024) (MID 47 LIS 2204) (MID 35 FIM ) ಬರೆದಿದೆ.

 

‘ಸಣ್ಣ ನೀರಾವರಿ ಇಲಾಖೆಯಡಿ ಅಧಿಕ ಅನುಮೋದಿತ ಚಾಲ್ತಿ ಕಾಮಗಾರಿಗಳಿರುವುದರಿಂದ ಸದರಿ ಕಾಮಗಾರಿಗಳಿಗೆ ಆದ್ಯತೆ ಮೇಲೆ ಅನುದಾನದ ಒದಗಿಸಬೇಕಾದ ಕಾರಣ ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಾಗುವುದಿಲ್ಲ,’ ಎಂದು ಪತ್ರದಲ್ಲಿ ತಿಳಿಸಿತ್ತು.

 

ಅಕ್ಟೋಬರ್‍‌ 8ರಂದು ಪತ್ರ (ಸಂಖ್ಯೆ; ಆಇ 329, 394, MID 52 LIS 2024, MID 423) ಆಕೋ-1/2024 (ಇ-ಆಫೀಸ್) ಬರೆದಿತ್ತು. ಅಧಿಕ ಚಾಲ್ತಿ ಕಾಮಗಾರಿಗಳ ಕಾರ್ಯಭಾರವಿರುವುದರಿಂದ ಸದರಿ ಕಾಮಗಾರಿಗಳಿಗೆ ಆದ್ಯತೆ ಮೇಲೆ ಅನುದಾನ ಒದಗಿಸಬೇಕಾದ ಹಿನ್ನೆಲೆಯಲ್ಲಿ ಹೊಸ ಕಾರ್ಯಭಾರಕ್ಕೆ ಅವಕಾಶವಾಗುವುದಿಲ್ಲವೆಂದು ಆಡಳಿತ ಇಲಾಖೆಗೆ ತಿಳಿಸಿದೆ.

 

ಬಿಲ್‌ಗಳ ಪಾವತಿಗೆ ಸಂಬಂಧಿಸಿದಂತೆ 2024ರ ನವೆಂಬರ್‍‌ 15ರಂದು ಪತ್ರಗಳನ್ನು ಬರೆದಿತ್ತು (ಆಇ 415 ಆಕೋ-1/2024) (MID 537, 53 LIS, 474, 476, 69 LIS, 501, 72 LIS, 510 MISU 2024). ಸಣ್ಣ ನೀರಾವರಿ ಇಲಾಖೆಯಡಿ ಅಧಿಕ ಮೊತ್ತದ ಚಾಲ್ತಿ ಕಾಮಗಾರಿಗಳು ಹಾಗೂ ಅಧಿಕ ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇವೆ. ಇವುಗಳಿಗೆ ಆದ್ಯತೆ ಮೇಲೆ ಅನುದಾನ ಒದಗಿಸಬೇಕಾಗಿರುವುದರಿಂದ ಹೊಸ ಕಾಮಗಾರಿಗಳ ಅನುಮೋದನೆಗೆ ಅವಕಾಶವಿರುವುದಿಲ್ಲ. ಆದ ಕಾರಣ ಪ್ರಸ್ತಾವನೆಗಳನ್ನು ಮುಂದೂಡಬೇಕು ಎಂದು ತಿಳಿಸಿತ್ತು.

 

ಕೆರೆ ಸಂಜೀವಿನ ಯೋಜನೆ ಮತ್ತು  ಕೆರೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿತ್ತು.

 

ಇವುಗಳನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ನವೆಂಬರ್‍‌ 20 ಮತ್ತು 25 ರಂದು ಪತ್ರ (ಸಂಖ್ಯೆ ಆಇ 410, ಆಇ 304, ಆಕೋ-1/2024 )(MID 63 FIM 2024) (MID 15 LCQ 2024) ಬರೆದಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಅಧಿಕ ಮೊತ್ತದ ಚಾಲ್ತಿ ಕಾಮಗಾರಿಗಳಿದ್ದು ಇವುಗಳಿಗೆ ಆದ್ಯತೆ ಮೇಲೆ ಅನುದಾನ ಒದಗಿಸಬೇಕಾಗಿದೆ. ಹೊಸ ಕಾಮಗಾರಿಗಳಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಬೇಕು ಎಂದು ತಿಳಿಸಿತ್ತು.

 

ಜೂನ್‌ 12ರಂದು ಬರೆದಿದ್ದ ಪತ್ರದಲ್ಲಿಯೂ ( ಆಇ 225 ಆಕೋ-1/2024 , ಆಇ 230) (ಇ-ಆಫೀಸ್‌) (MID 227, 291 MIS 2024) ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಈಗಾಗಲೇ ಅನುಮೋದಿತ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲು ಅಥವಾ ಹೆಚ್ಚುವರಿ ಅನುದಾನ ಒಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಸ್ತಾಪಿತ ಕಾಮಗಾರಿಯನ್ನು ಸದ್ಯಕ್ಕೆ ಮುಂದೂಡಬೇಕು ಎಂದು ಆಡಳಿತ ಇಲಾಖೆಗೆ ತಿಳಿಸಿತ್ತು.

 

 

2024ರ ಜೂನ್‌ 19ರಂದು ಬರೆದಿದ್ದ ಎರಡು ಪತ್ರಗಳಲ್ಲಿಯೂ ಜೂನ್‌ 12ರಂದೇ ಬರೆದಿದ್ದ ಪತ್ರದಲ್ಲಿದ್ದ ಅಂಶವನ್ನು ಮತ್ತೊಮ್ಮೆ ಪುನರುಚ್ಛರಿಸಿತ್ತು. (ಸಂಖ್ಯೆ ಆಇ 228 ಆಕೋ-1/2024 (ಇ-ಆಫೀಸ್‌) (MID 164 MIS 2024 ) ಬರೆದಿತ್ತು. ಸಣ್ಣ ನೀರಾವರಿ ಇಲಾಖೆಯಡಿ ಆಯವ್ಯಯದಲ್ಲಿ ಒದಗಿಸಲಾದ ಅನುದಾನಕ್ಕಿಂತ 5 ಪಟ್ಟು ಹೆಚ್ಚುವರಿ ಕಾರ್ಯಭಾರವಿರುವುದರಿಂದ ಪ್ರಸ್ತಾಪಿತ ಕಾಮಗಾರಿಯನ್ನು ಸದ್ಯಕ್ಕೆ ಮುಂದೂಡಬೇಕು ಎಂದು ಪತ್ರದಲ್ಲಿ ನಿರ್ದೇಶಿಸಿತ್ತು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಅದೇ ರೀತಿ ಇದೇ ದಿನಾಂಕದಂದು ಮತ್ತೊಂದು ಪತ್ರ (ಸಂಖ್ಯೆ; ಆಇ 244 ಆಕೋ-1/2024 (ಇ-ಅಫೀಸ್‌) MID 32 REJ 2024) ಬರೆದಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಈಗಾಗಲೇ ಅನುಮೋದಿತ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲು ಅಥವಾ ಹೆಚ್ಚುವರಿ ಅನುದಾನ ಒಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಸ್ತಾಪಿತ ಕಾಮಗಾರಿಯನ್ನು ಸದ್ಯಕ್ಕೆ ಮುಂದೂಡಬೇಕು ಎಂದು ಆಡಳಿತ ಇಲಾಖೆಗೆ ತಿಳಿಸಿತ್ತು.

 

2024ರ ಮಾರ್ಚ್‌ 27ರಂದು ಪತ್ರ ( ಸಂಖ್ಯೆ;ಆಇ 81 ಆಕೋ-1/2024 (ಇ-ಅಫೀಸ್) (MID 114 MISU 2024) ಬರೆದಿತ್ತು.

 

ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 92ರಲ್ಲಿ 115 ಕಾಮಗಾರಿಗಳನ್ನು 200 ಕೋಟಿ ರು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ. ಪ್ರಸ್ತುತದ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಾಗದ ಕಾರಣ ಇಲಾಖೆಗೆ ಒದಗಿಸಲಾದ ಅನುದಾನದಲ್ಲಿಯೇ ನಿಯಮಾನುಸಾರ ಪರಿಶೀಲಿಸಿ ಕೈಗೆತ್ತಿಕೊಳ್ಳುವಂತೆ ಇಲಾಖೆಗೆ ತಿಳಿಸಿತ್ತು.

 

ಅದೇ ರೀತಿ 2024ರ ಆಗಸ್ಟ್‌ 12ರಂದು ಪತ್ರ (ಆಇ 309 ಆಕೋ-1/2024 (ಇ-ಆಫೀಸ್) (MID 48 LIS 2024) ಬರೆದಿತ್ತು. ಖಾಗಿಣಾ ನದಿಯಿಂದ ನೀರನ್ನು ಎತ್ತಿ ನೀರಾವರಿ ಒದಗಿಸಲು ಯಡಳ್ಳಿ-ತೆರನಳ್ಳಿ ಏತ ನೀರಾವರಿ ಯೋಜನೆಯನ್ನು 2023ರಲ್ಲಿ 143.80 ಕೊಟಿ ರು ಮೊತ್ತದ ಅಂದಾಜಿಗೆ ಜಲಸಂಪನ್ಮೂಲ ಇಲಾಖೆಯಡಿ ಅನುಮೋದನೆ ನೀಡಲಾಗಿದ್ದು ಸದರಿ ಯೋಜನೆಗೆ ಟೆಂಡರ್ ಪೂರ್ಣಗೊಂಡು ಈಗಾಗಲೇ ಕಾಮಗಾರಿಯು ಚಾಲ್ತಿಯಲ್ಲಿರುತ್ತದೆ. ಆದ ಕಾರಣ ಸಣ್ಣ ನೀರಾವರಿ ಇಲಾಖೆಯು ಪ್ರಸ್ತುತ ಪ್ರಸ್ತಾಪಿಸಿರುವ ಯೋಜನೆಗಳು ಅವಶ್ಯಕವಿರುವುದಿಲ್ಲ ಎಂದು ತಿಳಿಸಿತ್ತು.

 

ಅಲ್ಲದೇ ಇದೇ ಆಗಸ್ಟ್‌ 8ರಂದು ಮತ್ತೊಂದು ಪತ್ರ (ಸಂಖ್ಯೆ ಆಇ 293 ಆಕೋ 1/2024 (MID 105 BCB 2024) ಬರೆದಿತ್ತು. 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 94ರಲ್ಲಿ ಘೋಷಿಲಾಗಿರುವ ರಾಯಚೂರು ಜಿಲ್ಲೆಯ ಚಿಕ್ಕಲಪರ್ವಿ ಗ್ರಾಮದ ಹತ್ತಿರ ತುಂಗಾಭದ್ರಾ ನಿದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು 397.50 ಕೋಟಿ ರು ಅಂದಾಜು ಮೊತ್ತದೊಂದಿಗೆ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ತಯಾರಿಸಿರುವ ಕರಡು ಸಚಿವ ಸಂಪುಟ ಟಿಪ್ಪಣಿಗೆ ಆರ್ಥಿಕ ಇಲಾಖೆಯು ಸಹಮತಿಸಿತ್ತು.

 

ಹಾಗೆಯೇ ಆಯವ್ಯಯ ಭಾಷಣ ಕಂಡಿಕೆ 94ರಲ್ಲಿ ಘೋಷಿಸಿದ್ದ 8 ಯೋಜನೆಗಳಲ್ಲಿ ಪ್ರಸ್ತಾಪಿತ ಯೋಜನೆಯು ಸೇರಿದಂತೆ 850 ಕೊಟಿ ರು.ಗಳ ಅಂದಾಜು ಮೊತ್ತದಲ್ಲಿ 5 ಯೋಜನೆಗಳಿಗೆ ಒಟ್ಟು 640.30 ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿರುವುದರಿಂದ ಉಳಿದ 3 ಯೋಜನೆಗಳನ್ನು 209.70 ಕೋಟಿ ರು.ಗಳಿಗೆ ಸೀಮಿತಗೊಳಿಸಿ ಕ್ರೋಢೀಕೃತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಡಳಿತ ಇಲಾಖೆಯನ್ನು ಕೋರಿತ್ತು.

 

ಅದೇ ರೀತಿ ಆರ್ಥಿಕ ಇಲಾಖೆಯ ಗಮನಕ್ಕೆ ಬರದೇ ರಾಜ್ಯ ಸರ್ಕಾರಕ್ಕೆ ಆರ್ಥಿಕ ಪರಿಣಾಮ ಉಂಟಾಗುವ ಪ್ರಸ್ತಾವನೆಗಳನ್ನು ಇನ್ನು ಮುಂದೆ ಸಲ್ಲಿಸಬಾರದು ಎಂದು ಹೇಳಿತ್ತು.

SUPPORT THE FILE

Latest News

Related Posts