ಬೆಂಗಳೂರು; ಕೋವಿಡ್ ಅವಧಿಯಲ್ಲಿ ನಡೆದಿದ್ದ ವಿವಿಧ ರೀತಿಯ ಅಕ್ರಮ, ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರು ಸಲ್ಲಿಸಿರುವ ವರದಿಗಳಲ್ಲಿ ಹಲವು ಪ್ರಕರಣಗಳ ಕುರಿತು ವಿಸ್ತೃತವಾದ ತನಿಖೆಯನ್ನೇ ನಡೆಸಿಲ್ಲ. ಅಲ್ಲದೇ ನಿರ್ದಿಷ್ಟ ಕಂಪನಿಗಳನ್ನು ತನಿಖಾ ವ್ಯಾಪ್ತಿಯಿಂದ ಹೊರಗಿಟ್ಟಿದೆ!
ಹೆಚ್ಚುವರಿ ದರದಲ್ಲಿ ಆರ್‍ಎನ್‌ಎ ಕಿಟ್ ಸರಬರಾಜು ಮಾಡಿದ್ದ ಕಂಪನಿಗಳ ಬಗ್ಗೆ ದೂರುಗಳಿದ್ದವು. ಆದರೆ ಆರ್‍ಎನ್‌ಎ ಕಿಟ್ ಸರಬರಾಜು ಬಗ್ಗೆ ವರದಿಯಲ್ಲಿ ಪ್ರಸ್ತಾಪ ಮಾಡಿದೆಯಾದರೂ ಫ್ಯಾಬ್ ಫಾರ್ಮಾಸ್ಯುಟಿಕಲ್ಸ್ ಗೆ ಹೆಚ್ಚುವರಿ ದರ ನೀಡಿರುವ ಕುರಿತು ವರದಿಯಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.
ಆರ್‍ಎನ್‌ಎ ಕಿಟ್ ಕುರಿತು ಫ್ಯಾಬ್ ಗೆ ಹೆಚ್ಚುವರಿ ದರದಲ್ಲಿ ಆದೇಶ ನೀಡಿತ್ತು. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಆರ್‌ಟಿಪಿಸಿಆರ್ ಕಿಟ್‌ಗೆ 4 ಪಟ್ಟು ಹೆಚ್ಚುವರಿ ದರ: ಕೊಟೇಷನ್‌ನಲ್ಲಿ ಅಡಗಿದೆಯೇ ಸಂಚು?
ಆದರೆ ಕುನ್ಹಾ ವರದಿಯಲ್ಲಿ ಈ ಕಂಪನಿಯ ಹೆಸರಿಲ್ಲ. ಬದಲಿಗೆ ಟ್ರೈಯರ್ ಸೊಲ್ಯೂಷನ್ಸ್ ಇಂಕ್, ಜೆನೆಟಿಕ್ಸ್ ಬಯೋ ಟೆಕ್ ಏಷಿಯನ್ ಪ್ರೈವೈಟ್ ಲಿಮಿಟೆಡ್, ಬೆಂಗಳೂರು ಮೆಡಿಕಲ್ ಸಿಸ್ಟಂ ಹೆಸರು ಮಾತ್ರ ಇದೆ. ಫ್ಯಾಬ್ ಫಾರ್ಮಾಸ್ಯುಟಿಕಲ್ಸ್‌ನಿಂದ ಹೆಚ್ಚುವರಿ ದರದಲ್ಲಿ ಆರ್‍ಎನ್‌ಎ ಕಿಟ್ ಖರೀದಿಸಿರುವ ಕುರಿತು ತನಿಖಾ ಸಮಿತಿಯು ವಿಚಾರಣೆಯನ್ನೇಕೆ ನಡೆಸಿಲ್ಲ ಎಂಬ ಪ್ರಶ್ನೆಗಳೂ ಉದ್ಭವವಾಗಿವೆ.
ಅದೇ ರೀತಿ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖರೀದಿಯಲ್ಲಿ 10 ಕೋಟಿಗೂ ಹೆಚ್ಚು ನಷ್ಟವಾಗಿತ್ತು. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಸಕಾಲದಲ್ಲಿ ಕಿಟ್‌ಗಳನ್ನು ಖರೀದಿಸಿರಲಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 10 ಕೋಟಿಯಷ್ಟು ನಷ್ಟವಾಗಿತ್ತು. ಈ ಕುರಿತು ‘ದಿ ಫೈಲ್’ 2021ರ ಮೇ 31ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
‘ದಿ ಫೈಲ್’ ತನಿಖೆ; ಆ್ಯಂಟಿಜನ್ ಟೆಸ್ಟ್ ಕಿಟ್ ಖರೀದಿಯಲ್ಲಿ 10 ಕೋಟಿ ನಷ್ಟ?
ಆದರೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುನ್ಹಾ ಅವರ ವರದಿಯಲ್ಲಿ ಆಂಟಿಜೆನ್ ಟೆಸ್ಟ್ ಕಿಟ್‌ಗಳನ್ನು ಸಕಾಲದಲ್ಲಿ ಖರೀದಿ ಮಾಡದೇ ಇದ್ದ ಕೆಎಸ್‌ಎಂಎಸ್‌ಸಿಎಲ್‌ನ ಧೋರಣೆ ಕುರಿತು ಪ್ರಸ್ತಾಪ ಮಾಡಿಲ್ಲ.
ಬದಲಿಗೆ ಆರ್‍ಟಿಪಿಸಿಆರ್ ಕಿಟ್‌ಗಳ ಬಗ್ಗೆ ಪ್ರಸ್ತಾಪ ಮಾಡಿರುವ ತನಿಖಾ ಸಮಿತಿಯು ಟ್ರಿವಿಟ್ರಾನ್ ಹೆಲ್ತ್ ಕೇರ್ ಕಂಪನಿಯಿಂದ 2.05 ಕೋಟಿ ರು.ಗಳನ್ನು ಬಡ್ಡಿ ಸಮೇತ ವಸೂಲು ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ.
ಹಾಗೆಯೇ ಕೋವಿಡ್ ಸಂದರ್ಭದಲ್ಲಿ ಬಳಸಿ ಬಿಸಾಡಿದ್ದ ವೆಂಟಿಲೇಟರ್‍ಗಳನ್ನು ಸರ್ಕಾರವು ಖರೀದಿಸಿತ್ತು.
ಬಳಸಿ ಬಿಸಾಡಿದ್ದ ವೆಂಟಿಲೇಟರ್ ಖರೀದಿ!; ಭ್ರಷ್ಟತೆಯ ಮತ್ತೊಂದು ಮುಖ ಅನಾವರಣ
ಆದರೆ ಕುನ್ಹಾ ಸಮಿತಿಯು ಬಳಸಿ ಬಿಸಾಡಿದ್ದ ವೆಂಟಿಲೇಟರ್ ಖರೀದಿ ಕುರಿತು ಗಮನಿಸಿಲ್ಲ. ಆದರೆ ಸ್ಕ್ಯಾನ್ ರೇ ಟೆಕ್ನಾಲಜೀಸ್ ಖರೀದಿಸಿದ್ದ ವೆಂಟಿಲೇಟರ್‍ಗಳ ಕುರಿತು ಪ್ರಸ್ತಾಪಿಸಿದೆ. ಈ ಕಂಪನಿಯಿಂದ 2.25 ಕೋಟಿ ರು. ವಸೂಲು ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ.
ಅಲ್ಲದೇ ದುಪ್ಪಟ್ಟು ದರದಲ್ಲಿ ವೆಂಟಿಲೇಟರ್‍ಗಳನ್ನು ಖರೀದಿಸಿದ್ದ ಪ್ರಕರಣದ ಕುರಿತು ಕುನ್ಹಾ ಸಮಿತಿ ಪರಿಗಣಿಸಿದಂತಿಲ್ಲ.
ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅಕ್ರಮ; ತಮಿಳುನಾಡಿನಲ್ಲಿ 4.78 ಲಕ್ಷ, ಕರ್ನಾಟಕದಲ್ಲಿ 18 ಲಕ್ಷ
ತಮಿಳುನಾಡಿನಲ್ಲಿ ವೆಂಟಿಲೇಟರ್‍ವೊಂದಕ್ಕೆ 4.78 ಲಕ್ಷ ರು. ದರವಿದ್ದರೂ ಸಹ ಕರ್ನಾಟಕದಲ್ಲಿ ವೆಂಟಿಲೇಟರ್‍ವೊಂದಕ್ಕೆ 18 ಲಕ್ಷ ರು. ನೀಡಿ ಖರೀದಿಸಿತ್ತು. ಈ ಕುರಿತು ಕುನ್ಹಾ ಸಮಿತಿ ಕಣ್ಣೆತ್ತಿಯೂ ನೋಡಿಲ್ಲ ಎಂದು ಗೊತ್ತಾಗಿದೆ.
ವಿಟಿಎಂ ಕಿಟ್ ಖರೀದಿ ಗುಜರಾತ್ ಕಂಪನಿ ವಿಳಂಬದಿಂದ 4 ಕೋಟಿ ನಷ್ಟ ಆಗಿತ್ತು.
ಈ ಪ್ರಕರಣದ ಕುರಿತು ಕುನ್ಹಾ ಕಮಿಟಿ ಗಮನಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ ವಿಟಿಎಂ ಕಿಟ್‌ನಲ್ಲಿ ಮೆಟಾ ಡಿಸೈನ್, ಭಟ್ ಬಯೋಟೆಕ್ ಇಂಡಿಯಾ ಪ್ರೈವೈಟ್ ಲಿಮಿಟೆಡ್ ಕುರಿತು ವರದಿಯಲ್ಲಿ ಉಲ್ಲೇಖಿಸಿದೆ.
ಕೋವಿಡ್ ಅಕ್ರಮಗಳ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈ ವರದಿ ಆಧರಿಸಿ ಕರ್ನಾಟಕ ರಾಷ್ಟ್ರಸಮಿತಿಯು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ದೂರು ನೀಡಿತ್ತು. ಈ ದೂರನ್ನಾಧರಿಸಿ ಸಮಿತಿಯು ವಿಚಾರಣೆ ನಡೆಸಿ, ವಿಧಾನಸಭೆಗೆ ವರದಿಯನ್ನು ಮಂಡಿಸಿದ್ದನ್ನು ಸ್ಮರಿಸಬಹುದು.