ವಿಟಿಎಂ ಕಿಟ್‌ ಖರೀದಿ; ಗುಜರಾತ್‌ ಕಂಪನಿಯ ವಿಳಂಬದಿಂದ 4 ಕೋಟಿ ನಷ್ಟ?

ಬೆಂಗಳೂರು; ಗಂಟಲು ಮತ್ತು ಮೂಗಿನ ದ್ರವ ಮಾದರಿ ಸಂಗ್ರಹಿಸುವ ವಿಟಿಎಂ ಕಿಟ್‌ ಖರೀದಿಯಲ್ಲಿಯೂ ಅಕ್ರಮಗಳು ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಖರೀದಿ ಆದೇಶ ಪಡೆದಿದ್ದ ಗುಜರಾತ್‌ ಮೂಲದ ಕಂಪನಿಯು ಸಕಾಲದಲ್ಲಿ ಉಪಕರಣಗಳನ್ನು ಸರಬರಾಜು ಮಾಡದ ಕಾರಣ ಬೇರೊಂದು ಕಂಪನಿಗಳಿಂದ ಹೆಚ್ಚುವರಿ ದರದಲ್ಲಿ ಖರೀದಿಸಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಅಂದಾಜು 4 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

ಕೋವಿಡ್‌ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ಅಕ್ರಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆ ನಡೆಸುತ್ತಿರುವ ಹೊತ್ತಿನಲ್ಲಿಯೇ ವಿಟಿಎಂ ಕಿಟ್‌ ಖರೀದಿಯಲ್ಲಿಯೂ ನಡೆದಿರುವ ಅಕ್ರಮಗಳು ಮುನ್ನೆಲೆಗೆ ಬಂದಿವೆ.

ವಿಟಿಎಂ ಕಿಟ್‌ ಪೂರೈಕೆಗೆ ಖರೀದಿ ಆದೇಶ ಪಡೆದಿದ್ದ ಮೆರಿಲ್‌ ಹೆಸರಿನ ಕಂಪನಿಯೊಂದು ಸಕಾಲದಲ್ಲಿ ಸರಬರಾಜು ಮಾಡದಿದ್ದರೂ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸದೇ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿರುವುದು ಗೊತ್ತಾಗಿದೆ. ಕಾಯ್ದೆಯ ಪ್ರಕಾರ ನಿಗದಿತ ಗಡುವಿನೊಳಗೆ ಉಪಕರಣಗಳನ್ನು ಸರಬರಾಜು ಮಾಡದಿದ್ದಲ್ಲಿ ಭದ್ರತಾ ಠೇವಣಿ ಹಣವನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕಿದ್ದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಕಾಯ್ದೆಯನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಈ ಬಗ್ಗೆ ಗಮನಹರಿಸದಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಕಿಟ್‌ವೊಂದಕ್ಕೆ 13 ರು. ದರದಲ್ಲಿ ಪೂರೈಕೆ ಮಾಡುವ ಖರೀದಿ ಆದೇಶ ಪಡೆದಿದ್ದ ಕಂಪನಿಯು ಸಕಾಲದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಿರಲಿಲ್ಲ. ಹೀಗಾಗಿ ನಿತ್ಯ ತಪಾಸಣೆ ಸಂಖ್ಯೆಯಲ್ಲಿ ಕುಂಠಿತಗೊಂಡಿತ್ತು. ಹೀಗಾಗಿ ಬೇರೊಂದು ಕಂಪನಿಯಿಂದ 13.8 ರು. ಹೆಚ್ಚುವರಿ ದರದಲ್ಲಿ ಅಂದರೆ 26.80 ರು. ದರದಲ್ಲಿ ಕಿಟ್‌ಗಳನ್ನು ಖರೀದಿಸಲಾಗಿತ್ತು. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 4 ಕೋಟಿ ರು.ನಷ್ಟು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣದ ಹಿನ್ನೆಲೆ

ಒಟ್ಟು 4.79 ಕೋಟಿ ರು. ವೆಚ್ಚದಲ್ಲಿ 36 ಲಕ್ಷ ವಿಟಿಎಂ ಕಿಟ್‌ಗಳನ್ನು ಖರೀದಿ ಸಂಬಂಧ ಗುಜರಾತ್‌ ಮೂಲದ ಕಂಪನಿ ಮೆರಿಲ್‌ ಡಯೋಗ್ನೋಸ್ಟಿಕ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2021ರ ಏಪ್ರಿಲ್‌ 24ರಂದು ಸರಬರಾಜು ಆದೇಶ ನೀಡಲಾಗಿತ್ತು. ಖರೀದಿ ಆದೇಶ ಪಡೆದ 10 ದಿನದೊಳಗೆ 36 ಲಕ್ಷ ಉಪಕರಣಗಳನ್ನು ಸರಬರಾಜು ಮಾಡಲು ಅದೇಶದಲ್ಲಿ ಸೂಚಿಸಲಾಗಿತ್ತು. ಆದರೂ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿರಲಿಲ್ಲ. ಕಪ್ಪು ಪಟ್ಟಿಗೆ ಸೇರಿಸುವ ಸಂಬಂಧ ನಿಗಮವು ಕೇವಲ ನೋಟೀಸ್‌ ನೀಡಿ ಕೈತೊಳೆದುಕೊಂಡಿತ್ತು.

ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ವಿಟಿಎಂ ಕಿಟ್‌ಗಳ ದರದಲ್ಲೂ ಹೆಚ್ಚಳ ಕಂಡಿತ್ತು. ಹೀಗಾಗಿ ಮೆರಿಲ್‌ ಕಂಪನಿಯು ಸರಬರಾಜಿನಿಂದ ಹಿಂದೆ ಸರಿದಿತ್ತು ಎಂದು ಹೇಳಲಾಗಿದೆ. ಆದರೆ ಜುಲೈನಲ್ಲಿ ದರ ಕಡಿಮೆಯಾದ ಕಾರಣ ಈ ಕಂಪನಿಯು ಕೇವಲ 2 ಲಕ್ಷ 3 ಸಾವಿರ 300 ಕಿಟ್‌ಗಳನ್ನು ಮಾತ್ರ ಪೂರೈಕೆ ಮಾಡಿ ಇನ್‌ವಾಯ್ಸ್‌ನ್ನು 2021ರ ಜೂನ್‌ 18ರಂದು ನಿಗಮಕ್ಕೆ ಸಲ್ಲಿಸಿತ್ತು. ಉಳಿದ 33.07 ಲಕ್ಷ ಕಿಟ್‌ಗಳನ್ನು ಸರಬರಾಜು ಮಾಡದೆಯೇ ಬಾಕಿ ಉಳಿಸಿಕೊಂಡಿತ್ತು ಎಂದು ಗೊತ್ತಾಗಿದೆ.

ಬಾಕಿ ಉಳಿದಿದ್ದ 33.07 ಲಕ್ಷ ಕಿಟ್‌ಗಳನ್ನು ಖರೀದಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ನಿಗಮದ ಅಧಿಕಾರಿಗಳು ಪಟೇಲ್‌ ಎಂಟರ್‌ಪ್ರೈಸೆಸ್‌ ಮತ್ತು ಬೋಗಿಲಾಲ್‌ ಕಂಪನಿನಿಂದ 26 .80 ರು. ಹೆಚ್ಚುವರಿ ದರದಲ್ಲಿ ಖರೀದಿಸಿತ್ತು. 13.33 ರು. ದರಕ್ಕೆ ಹೋಲಿಸಿದರೆ 13.8 ರು. ಹೆಚ್ಚುವರಿಯಾಗಿತ್ತು. ಇದಕ್ಕಾಗಿ ನಿಗಮವು 9.03 ಕೋಟಿ ರು. ವೆಚ್ಚ ಮಾಡಿತ್ತು ಎಂದು ತಿಳಿದು ಬಂದಿದೆ.

ಖರೀದಿ ಆದೇಶದಲ್ಲಿನ ಷರತ್ತುಗಳ ಪ್ರಕಾರ ಉಪಕರಣಗಳನ್ನು ಸರಬರಾಜು ಮಾಡದೇ ಇದ್ದಲ್ಲಿ ಅನ್ಯ ರಾಜ್ಯಗಳಲ್ಲಿ ಕಂಪನಿಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ ಮಾರುಕಟ್ಟೆಯಲ್ಲಿನ ದರದ ವ್ಯತ್ಯಾಸದ ಮೊತ್ತವನ್ನೂ ವಸೂಲು ಮಾಡುತ್ತಿವೆ. ಆದರೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಮೆರಿಲ್‌ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸದೆಯೇ ಕೇವಲ ನೋಟೀಸ್‌ ಕೊಟ್ಟು ಕೈ ತೊಳೆದುಕೊಂಡಿದೆ. ಅಧಿಕಾರಿಗಳ ಈ ನಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts