ಆರ್‌ಟಿಪಿಸಿಆರ್‌ ಕಿಟ್‌ಗೆ 4 ಪಟ್ಟು ಹೆಚ್ಚುವರಿ ದರ: ಕೊಟೇಷನ್‌ನಲ್ಲಿ ಅಡಗಿದೆಯೇ ಸಂಚು?

ಬೆಂಗಳೂರು; ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿರುವ ಗಂಭೀರ ಸ್ವರೂಪದ ಅಕ್ರಮಗಳು ವಿವಿಧ ಆಯಾಮ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಆರ್‌ಟಿಪಿಸಿಆರ್‌ ಕಿಟ್‌ (ಆರ್‌ಎನ್‌ಎ ಎಕ್ಷಾಟ್ರಾಕ್ಷನ್‌ ಒಳಗೊಂಡಂತೆ) ಖರೀದಿಯಲ್ಲೂ ಅಕ್ರಮದ ದುರ್ನಾತ ಹಬ್ಬಿದೆ.


ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌ ಉಪಕರಣಗಳಿಗೆ ಹೆಚ್ಚುವರಿ ದರ ತೆತ್ತಿರುವ ಮಾದರಿಯಲ್ಲೇ ಆರ್‌ಟಿಪಿಸಿಆರ್‌ ಕಿಟ್‌ಗಳನ್ನೂ 4 ಪಟ್ಟು ಹೆಚ್ಚಿನ ದರದಲ್ಲಿ ಖರೀದಿಸಿರುವುದು ಇದೀಗ ಬಹಿರಂಗವಾಗಿದೆ. ಈ ಕಿಟ್‌ಗಳನ್ನು 3.92 ಕೋಟಿ ರು. ದರದಲ್ಲಿ ಖರೀದಿಸಲು 2020ರ ಮೇ 29ರಂದು ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಆದೇಶ ನೀಡಿದೆ. ಈ ಆದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುಮೋದಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಆರ್‌ಎನ್‌ಎ ಕಿಟ್‌ ಒಳಗೊಂಡಂತೆ ಆರ್‌ಟಿಪಿಸಿಆರ್‌ನ ತಲಾ ಕಿಟ್‌ಗೆ 1.12 ಲಕ್ಷ ರು. ದರದಲ್ಲಿ ಒಟ್ಟು 350 ಕಿಟ್‌ಗಳನ್ನು 3.92 ಕೋಟಿ ರು.ಗೆ ಖರೀದಿಸಿದೆ. ಕಿಟ್‌ವೊಂದರಿಂದ 100 ಟೆಸ್ಟ್‌ಗಳನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಇದೇ ನಿರ್ದಿಷ್ಟತೆಯುಳ್ಳ ಉಪಕರಣವೊಂದರ ದರಕ್ಕಿಂತಲೂ ಹೆಚ್ಚುವರಿ ದರ ನೀಡಿ ಈ ಉಪಕರಣಗಳನ್ನು ಖರೀದಿಸಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.


ಮಾರುಕಟ್ಟೆಯಲ್ಲಿ ಪ್ರತಿ ಆರ್‌ಟಿಪಿಸಿಆರ್‌ಗೆ 17,964 ರು. ಮತ್ತು ಆರ್‌ಎನ್‌ಎ ಕಿಟ್‌ಗೆ 16,920 ರು. ಇದೆ. ಈ ದರದ ಪ್ರಕಾರ ಖರೀದಿಸಿದ್ದರೆ ಎರಡೂ ಉಪಕರಣಗಳಿಗೆ ಒಟ್ಟು 38,000 ರು. ವೆಚ್ಚವಾಗುತ್ತಿತ್ತು. ಅದರಂತೆ 350 ಕಿಟ್‌ಗಳಿಗೆ 1.33 ಕೋಟಿ ವೆಚ್ಚವಾಗುತ್ತಿತ್ತು. ಆದರೆ 2.95 ಕೋಟಿ ರು. ಹೆಚ್ಚುವರಿ ದರದಲ್ಲಿ ಖರೀದಿಸುವ ಮೂಲಕ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.


ಮಾರುಕಟ್ಟೆಯಲ್ಲಿರುವ ದರಕ್ಕೂ ಫ್ಯಾಬ್‌ ಇಂಡಿಯಾ ಫಾರ್ಮಾಸ್ಯುಟಿಕಲ್ಸ್‌ನಿಂದ ಖರೀದಿಸಿರುವ ತಲಾ ಉಪಕರಣದ ದರದ ಮಧ್ಯೆ ಒಟ್ಟು 74,000 ರು.ನಂತೆ ಒಟ್ಟು 350 ಉಪಕರಣಗಳ ಖರೀದಿ ದರದ ಮಧ್ಯೆ 2.95 ಕೋಟಿ ರು. ವ್ಯತ್ಯಾಸವಿದೆ.
ಕೊಟೇಷನ್‌ನಲ್ಲಿ ಕಡಿಮೆ ದರ ನಮೂದಿಸಿದ್ದ ಈ ಕಂಪನಿಯನ್ನು ಆಹ್ವಾನಿಸಿದ್ದ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌, ಮೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿದ್ದ ದರವನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ ಎಂಬುದು ಖರೀದಿ ಆದೇಶದಿಂದಲೇ ಮೇಲ್ನೋಟಕ್ಕೆ ಕಂಡು ಬಂದಿದೆ.


ಸಿಗದ ಕಾಲಾವಕಾಶ


ಆರ್‌ಎನ್‌ಎ ಒಳಗೊಂಡಂತೆ ಆರ್‌ಟಿಪಿಸಿಆರ್‌ ಕಿಟ್ ಖರೀದಿ ಸಂಬಂಧ ಕರ್ನಾಟಕ ಸ್ಟೇಟ್‌ ಡ್ರಗ್ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿ ಕರೆದಿದ್ದ ಕೊಟೇಷನ್(ಐಎಫ್ ಕ್ಯೂ)ನಲ್ಲಿ ಭಾಗವಹಿಸುವ ಬಗ್ಗೆ ಕಂಪನಿಗಳಿಗೆ ಕಡಿಮೆ ಕಾಲಾವಕಾಶ ನೀಡಿರುವುದು ಗೊತ್ತಾಗಿದೆ.


2020ರ ಮೇ 11ರಂದು ಕೊಟೇಷನ್‌ ಕರೆದಿದ್ದ ಸೊಸೈಟಿಯು ಕೇವಲ 4 ದಿನಗಳು ಅಂದರೆ ಮೇ 15ರವರೆಗೆ ಮಾತ್ರ ಕಾಲಾವಕಾಶ ನೀಡಿತ್ತು. ಅಲ್ಲದೆ ಆರ್‌ಎನ್‌ಎ ಮ್ಯಾನುಯಲ್‌, ಆರ್‌ಎನ್‌ಎ ಆಟೋಮ್ಯಾಟಿಕ್‌ ,ಆರ್‌ಟಿಪಿಸಿಆರ್‌ ಕಿಟ್‌, ವಿಟಿಎಂ ಕಿಟ್‌ ಸೇರಿದಂತೆ ಒಟ್ಟು 4 ಉಪಕರಣಗಳ ಖರೀದಿಗೆ ಕೊಟೇಷನ್‌ ಕರೆದಿತ್ತು.

ಹಾಗೆಯೇ ಒಂದೊಂದು ಉಪಕರಣಕ್ಕೆ ಪ್ರತ್ಯೇಕ ದರದಲ್ಲಿ ಕೊಟೇಷನ್‌ ಸಲ್ಲಿಸಬೇಕಿತ್ತು. ಈ ಪ್ರಕ್ರಿಯೆ ನಡೆಯದ ಕಾರಣ ಒಟ್ಟಾರೆ ಕೊಟೇಷನ್‌ ಪ್ರಕ್ರಿಯೆ ಬಗ್ಗೆಯೇ ಹಲವು ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ಪ್ರತ್ಯೇಕ ಆದೇಶ ನೀಡಿಲ್ಲ. ಕೊಟೇಷನ್‌ನಲ್ಲಿ 4 ಕ್ರಮ ಸಂಖ್ಯೆಗಳಲ್ಲಿ ಉಪಕರಣಗಳನ್ನು ನಮೂದಿಸಿದ್ದರೂ ಖರೀದಿ ಆದೇಶ ನೀಡುವಾಗ ಒಂದೇ ಕ್ರಮ ಸಂಖ್ಯೆಯಲ್ಲಿ 2 ಉಪಕರಣಗಳನ್ನು ಒಟ್ಟಿಗೇ ಸೇರಿಸುವ ಮೂಲಕ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.


ಪ್ರತ್ಯೇಕವಾಗಿ ಖರೀದಿ ಆದೇಶ ನೀಡಿದ್ದರೆ ಪ್ರತಿ ಉಪಕರಣಕ್ಕೂ ಎಷ್ಟು ದರ ನಿಗದಿಪಡಿಸಲಾಗಿದೆ ಎಂಬುದು ಬಹಿರಂಗವಾಗುತ್ತಿತ್ತು. ಆದರೆ ಒಂದೇ ಕ್ರಮ ಸಂಖ್ಯೆಯಲ್ಲಿ 2 ಉಪಕರಣಗಳನ್ನೂ ಸೇರಿಸುವ ಮೂಲಕ ಪ್ರತಿ ಉಪಕರಣದ ದರ ಮರೆಮಾಚಿದಂತಾಗಿದೆಯಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಗೊಂದಲ ಮೂಡಿಸಿದಂತಾಗಿದೆ. ಇದರಿಂದಾಗಿ ಪ್ರತಿ ಆರ್‌ಟಿಪಿಸಿಆರ್ ಮತ್ತು ಪ್ರತಿ ಆರ್‌ಎನ್‌ಎ ಕಿಟ್‌ಗೆ ಎಷ್ಟು ದರವಿದೆ ಎಂಬುದು ಸ್ಪಷ್ಟವಾಗಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.


ಕೊಟೇಷನ್ ಷರತ್ತಿನ ಕರಾಮತ್ತು


ಕೊಟೇಷನ್‌ನಲ್ಲಿ ವಿಧಿಸಿರುವ ಬಹುತೇಕ ಷರತ್ತುಗಳು ಪೂರ್ವ ನಿರ್ಧರಿತ ಕಂಪನಿ ಪರವಾಗಿಯೇ ಇವೆ ಎಂಬ ಆರೋಪಗಳು ಕೇಳಿ ಬಂದಿವೆ. ಪೂರ್ವ ನಿರ್ಧರಿತ ಕಂಪನಿಗಳಿಗೆ ಬ್ಯಾಂಕ್‌ ಗ್ಯಾರಂಟಿ ಮತ್ತು ಠೇವಣಿ ಹಣ ನೀಡಬೇಕು ಎಂದು ಕೊಟೇಷನ್‌ನಲ್ಲಿ ನಮೂದಿಸುವ ಅಧಿಕಾರಿಗಳು, ಉಳಿದ ಕಂಪನಿಗಳಿಂದ ಡಿ ಡಿ ರೂಪದಲ್ಲಿ ಠೇವಣಿ ಇರಿಸುವ ಷರತ್ತು ವಿಧಿಸುತ್ತಿರುವುದು ಕೂಡ ಅನುಮಾನಗಳಿಗೆ ಕಾರಣವಾಗಿದೆ.


ಹಾಗೆಯೇ ಕಂಪನಿ ಆದೇಶ ಪಡೆದ 5 ದಿನದೊಳಗೆ ಉಪಕರಣಗಳನ್ನು ಸರಬರಾಜು ಮಾಡಬೇಕು. ಇಲ್ಲದಿದ್ದರೆ ಆದೇಶ ರದ್ದುಗೊಳ್ಳುವುದು ಎಂದು ಷರತ್ತು ವಿಧಿಸುವ ಅಧಿಕಾರಿಗಳು, ಪೂರ್ವ ನಿರ್ಧರಿತ ಕಂಪನಿಗಳಿಗೆ ತಡವಾಗಿ ಖರೀದಿ ಆದೇಶ ನೀಡುವುದು, ಆ ಕಂಪನಿಗಳಿಂದ ಸರಬರಾಜುದಾರರು ಉಪಕರಣಗಳನ್ನು ಖರೀದಿಸಲು ಕಾಲಾವಕಾಶ ನೀಡುವ ಸಂಚಿನ ಭಾಗವಾಗಿರುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.


ಇದಷ್ಟೇ ಅಲ್ಲ, ಪೂರ್ವ ನಿರ್ಧರಿತ ಕಂಪನಿಗಳ ಸರಬರಾಜುದಾರರು ಉಪಕರಣಗಳನ್ನು ಪೂರೈಕೆ ಮಾಡಿದ ಅತ್ಯಲ್ಪ ದಿನದಲ್ಲಿ ಹಣ ಪಾವತಿಸುವ ಷರತ್ತು ವಿಧಿಸುವ ಅಧಿಕಾರಿಗಳು, ಉಪಕರಣಗಳ ಪರೀಕ್ಷೆಯನ್ನೂ ನಡೆಸುವುದಿಲ್ಲ ಎಂಬ ಆರೋಪಗಳಿವೆ.
ಅಧಿಕಾರಿಗಳ ತಾಳಕ್ಕೆ ಕುಣಿಯದ ಇರುವ ಕಂಪನಿಗಳು ಉಪಕರಣಗಳನ್ನು ಸರಬರಾಜು ಮಾಡುತ್ತಿದ್ದಂತೆ ಅವುಗಳನ್ನು ಪರೀಕ್ಷೆಗೆ ಕಳಿಸಲಾಗುತ್ತಿದೆಯಲ್ಲದೆ ಅದರ ವರದಿ ಬಂದ ಬಳಿಕ ಹಣ ಪಾವತಿಸಲಾಗುತ್ತದೆ. ಇದಕ್ಕೆಂದು ಶೇ. 0.5ರಷ್ಟು ಪರೀಕ್ಷಾ ಶುಲ್ಕವೆಂದು ವಸೂಲು ಮಾಡಲಾಗುತ್ತಿದೆಯಾದರೂ ಅಸಲಿಗೆ ಪರೀಕ್ಷೆಗೆ ಕಳಿಸುತ್ತಿಲ್ಲ. ಹೀಗಾಗಿ ಉಪಕರಣಗಳ ಗುಣಮಟ್ಟದ ಬಗ್ಗೆ ವರದಿಯೂ ಬರುತ್ತಿಲ್ಲ ಎಂದು ಮತ್ತೊಬ್ಬ ಅಧಿಕಾರಿಯೊಬ್ಬರು ತಿಳಿಸಿದರು.

the fil favicon

SUPPORT THE FILE

Latest News

Related Posts