ಕೆಪಿಎಸ್ಸಿಗೆ ಕಳಂಕಿತರ ನೇಮಕಕ್ಕೆ ಕಾಂಗ್ರೆಸ್‌ ಸರ್ಕಾರದಿಂದ ಎರಡನೇ ಯತ್ನ; ಸಿಎಂ ಟಿಪ್ಪಣಿ ಬಹಿರಂಗ

ಬೆಂಗಳೂರು; ಅಕ್ರಮ ಮರಗಳ ಕಡಿತಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಸೇರಿದಂತೆ ಇನ್ನಿತರೆ ಗಂಭೀರ ಮತ್ತು ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಕುವೆಂಪು ವಿಶ್ವವಿದ್ಯಾಲಯದ ಕೈಗಾರಿಕೆ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ ಹೆಚ್‌ ಎಸ್ ಭೋಜ್ಯನಾಯ್ಕ ಇವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸಲು ಕಾಂಗ್ರೆಸ್‌ ಸರ್ಕಾರವು ಮತ್ತೊಮ್ಮೆ  ಮುಂದಾಗಿದೆ.

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬೋಜ್ಯನಾಯ್ಕ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿಸಲು ಮುಂದಾಗಿತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇವರ ನೇಮಕವನ್ನು ಮುಂದೂಡಲಾಗಿತ್ತು. ಬೋಜ್ಯನಾಯ್ಕ ಅವರನ್ನು ಕೈ ಬಿಟ್ಟು ಅದೇ ಪಟ್ಟಿಯಲ್ಲಿದ್ದ ಕಾವಲಮ್ಮ ಅವರನ್ನು ಆಯೋಗದ ಸದಸ್ಯರನ್ನಾಗಿಸಿ ನೇಮಿಸಿದೆ.

 

ಇದೀಗ ಪ್ರೊ ಹೆಚ್‌ ಎಸ್‌ ಬೋಜ್ಯನಾಯ್ಕ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿಸಲು ಎರಡನೇ ಬಾರಿಗೆ ಮುಂದಾಗಿರುವುದು ಗೊತ್ತಾಗಿದೆ. ಬೋಜ್ಯನಾಯ್ಕ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿಸಲು ಸಚಿವರೊಬ್ಬರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

 

ಈ ಕುರಿತು ಕಡತ ಮಂಡಿಸಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. 2024ರ ಜೂನ್‌ 19ರಂದು ಹೊರಡಿಸಿರುವ ಟಿಪ್ಪಣಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕುವೆಂಪು ವಿಶ್ವವಿದ್ಯಾಲಯದ ಪ್ರೊ ಹೆಚ್‌ ಎಸ್‌ ಬೋಜ್ಯನಾಯ್ಕ್ ಅವರ ವಿರುದ್ಧದ ಪ್ರಕರಣವೊಂದರಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಅನುಮತಿ ನೀಡುವ ಸಂಬಂಧ ಸರ್ಕಾರದ ಹಂತದಲ್ಲಿ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ.

 

ಹೀಗಿದ್ದರೂ ಅವರು ಹೆಚ್‌ ಎಸ್‌ ಬೋಜ್ಯನಾಯ್ಕ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆಯಲ್ಲದೇ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ವಿಶೇಷವೆಂದರೇ ಬೋಜ್ಯನಾಯ್ಕ್ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳು ಮತ್ತು ದೋಷಾರೋಪಣೆ ಪಟ್ಟಿ ಕುರಿತು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‍ ಅವರು ‌ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿದ್ದಾರೆ. 2023ರ ಸೆ.16ರಂದು ಸಲ್ಲಿಸಿರುವ ಮಾಹಿತಿ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಲಕ್ಕವಳ್ಳಿ ವನ್ಯಜೀವಿ ವಲಯ ವ್ಯಾಪ್ತಿಯ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಅಕ್ರಮ ಮರಗಳ ಕಡಿತಲೆಯಲ್ಲಿ ಭಾಗಿಯಾಗಿರುವ ಆರೋಪಕ್ಕೆ ಹೆಚ್‌ ಎಸ್‌ ಬೋಜ್ಯನಾಯ್ಕ ಅವರು ಗುರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಬೋಜ್ಯನಾಯ್ಕ ಅವರು ಎರಡನೇ ಆರೋಪಿ ಎಂದು ಗುರುತಿಸಿರುವುದು ಗೊತ್ತಾಗಿದೆ.

 

 

ಎರಡನೇ ಆರೋಪಿಯಾಗಿರುವ ಬೋಜ್ಯನಾಯ್ಕ ಅವರೂ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ವಿವಿಯ ಇಬ್ಬರು ಸಿಬ್ಬಂದಿ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆಯು ಸರ್ಕಾರವನ್ನು 4 ವರ್ಷಗಳ ಹಿಂದೆಯೇ ಕೋರಿತ್ತು.

 

ಅದರಂತೆ ಮೂವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ಕುವೆಂಪು ವಿವಿಯ ಸಿಂಡಿಕೇಟ್‌ ಸಭೆಯು 2021ರ ಜನವರಿ 21ರಂದು ಅನುಮತಿ ನೀಡಿರಲಿಲ್ಲ. ಆದರೆ ಸರ್ಕಾರವು ದೋಷಾರೋಪಣೆ ಪಟ್ಟಿ ಸಲ್ಲಿಸಲು ಅರಣ್ಯ ಇಲಾಖೆಗೆ 2021ರ ನವೆಂಬರ್‍‌ 2021ರಂದು ಅನುಮತಿ ನೀಡಿತ್ತು ಎಂಬುದು ತಿಳಿದು ಬಂದಿದೆ. ಮತ್ತೊಂದು ವಿಶೇಷವೆಂದರೇ 2022ರ ಫೆ.28ರಂದು ಕುವೆಂಪು ವಿವಿ ಸಿಂಡಿಕೇಟ್‌ ಸಭೆಯು ಈ ಬಗ್ಗೆ ಸರ್ಕಾರದ ಹಂತದಲ್ಲಿಯೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪತ್ರ ಬರೆದಿತ್ತು.

 

2023ರಲ್ಲಿಯೂ ಜೈ ಭೀಮ್‌ ಕನ್ನಡ ಜಾಗೃತಿ ವೇದಿಕೆಯು ಹೆಚ್‌ ಎಸ್‌ ಬೋಜ್ಯನಾಯ್ಕ ಅವರ ವಿರುದ್ಧ ಸರ್ಕಾರಕ್ಕೆ ದೂರು ನೀಡಿತ್ತು. ಈ ದೂರಿನ ಕುರಿತು ಸತ್ಯಾಸತ್ಯತೆ ಕಂಡುಕೊಳ್ಳಲು ಇದೇ ಕಾಂಗ್ರೆಸ್‌ ಸರ್ಕಾರವು 2023ರ ಮೇ 6ರಂದು ಪ್ರಾಥಮಿಕ ತನಿಖೆ ಸಮಿತಿ ರಚಿಸಿತ್ತು. ಈ ಸಮಿತಿಯು ಈಗಾಗಲೇ ತನಿಖೆ ಪೂರ್ಣಗೊಳಿಸಿ 2023ರ ಜುಲೈ 17ರಂದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

 

ಹಾಗೆಯೇ ಪರೀಕ್ಷಾ ವಿಭಾಗದ ಅಂಕಪಟ್ಟಿಗಳು, ದಾಖಲಾತಿಗಳ ಡಿಜಿಟಿಲೀಕರಣ ಮತ್ತು ಇ-ವೆರಿಫಿಕೇಷನ್ ಗೆ ಸಂಬಂಧಿಸಿದಂತೆ ಬೋಜ್ಯನಾಯ್ಕ ಅವರ ವಿರುದ್ಧ ಎಸಿಬಿಗೆ ದೂರು ದಾಖಲಾಗಿತ್ತು. 2023ರವರೆಗೂ ಇವರ ವಿರುದ್ಧ ವಿಚಾರಣೆ, ತನಿಖೆ ನಡೆಸಲು ಸರ್ಕಾರವು ಅನುಮತಿ ನೀಡಿರಲಿಲ್ಲ.

 

ಅಷ್ಟೇ ಅಲ್ಲದೇ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಬೋಜ್ಯನಾಯ್ಕ ಅವರ ಹೆಸರಿತ್ತು.

 

ಆದರೆ ಶೋಧನಾ ಸಮಿತಿಯು ಇವರ ವಿರುದ್ಧದ ಆರೋಪಗಳು ಮತ್ತು ವಿಚಾರಣೆ ಬಾಕಿ ಇದ್ದದ್ದರಿಂದ ಇವರ ಹೆಸರನ್ನು ಶಿಫಾರಸ್ಸು ಮಾಡಿರಲಿಲ್ಲ ಎಂಬುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts