ವಸತಿ ಶಾಲೆಗಳಲ್ಲಿ ರಂಗ ಚಟುವಟಿಕೆ; ‘ನಿರ್ದಿಗಂತ’ಕ್ಕೆ ಹಣ ಪಾವತಿಯ ಮಾಹಿತಿ, ದಾಖಲೆ ಒದಗಿಸಿದ ಸರ್ಕಾರ

ಬೆಂಗಳೂರು; ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯ ಚಟುವಟಿಕೆ ನಡೆಸಲು ಬಿಡುಗಡೆ ಮಾಡಿದ್ದ  ಒಟ್ಟು 9.00 ಲಕ್ಷ ರು ಪೈಕಿ ನಟ ಪ್ರಕಾಶ್‌ ರೈ ಅವರ ನಿರ್ದಿಗಂತ ಸಂಸ್ಥೆಗೆ ಕ್ರೈಸ್‌ ಸಂಸ್ಥೆಯು  ಹಣ  ಪಾವತಿಸಿರುವುದು  ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

 

ಅಲ್ಲದೇ ವಸತಿ ಶಾಲೆಗಳಲ್ಲಿ ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ದಿಗಂತ ಸಂಸ್ಥೆಯೇ  ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಮೈಸೂರು ವಿಭಾಗದ 201  ವಸತಿ ಶಾಲೆ, ಕಾಲೇಜುಗಳ ಪೈಕಿ 18 ಶಾಲೆ, ಕಾಲೇಜುಗಳಲ್ಲಿ  ರಂಗಭೂಮಿ ಚಟುವಟಿಕೆ  ನಡೆಸಿತ್ತು. ನಂತರ ಇಲಾಖೆಯು ವಸತಿ ಶಾಲೆ, ಕಾಲೇಜುಗಳಿಗೆ ಈ ಸಂಬಂಧ ಹಣ ಬಿಡುಗಡೆ ಮಾಡಿರಲಿಲ್ಲ.

 

ಹೀಗಾಗಿ ನಿರ್ದಿಂಗತ ಸಂಸ್ಥೆಯು ಸರ್ಕಾರಕ್ಕೆ  ಹಲವು ಬಾರಿ ಪತ್ರಗಳನ್ನು ಬರೆದಿತ್ತು. ಈ ಪತ್ರಗಳನ್ನಾಧರಿಸಿ ವಸತಿ ಶಾಲೆಗಳ ಪ್ರಾಂಶುಪಾಲರು ಹಣ ಬಿಡುಗಡೆ ಮಾಡುವ ಸಂಬಂಧ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದರು   ಎಂಬುದು ಇಲಾಖೆಯು ಒದಗಿಸಿರುವ ದಾಖಲೆಗಳಿಂದ ತಿಳಿದು ಬಂದಿದೆ.

 

ರಂಗಭೂಮಿ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುತ್ತಿರುವ ರಂಗಾಯಣಗಳು ಸೇರಿದಂತೆ ಮತ್ತಿತರೆ ರಂಗ ಸಂಸ್ಥೆಗಳನ್ನು  ಬದಿಗೊತ್ತಿ ನಟ ಪ್ರಕಾಶ್‌ ರೈ ಅವರು  ಈಚೆಗಷ್ಟೇ ಸ್ಥಾಪಿಸಿದ್ದ ‘ನಿರ್ದಿಗಂತ’ಕ್ಕೆ ಸಮಾಜ ಕಲ್ಯಾಣ ಇಲಾಖೆಯು  ರತ್ನಗಂಬಳಿ ಹಾಸಿತ್ತು. ಇಲಾಖೆಯ  ನಡೆಗೆ ರಂಗಕರ್ಮಿಗಳಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯು ‘ದಿ ಫೈಲ್‌’ ಗೆ  ನೀಡಿರುವ ಆರ್‍‌ಟಿಐ ದಾಖಲೆಗಳು ಮುನ್ನೆಲೆಗೆ ಬಂದಿವೆ.

 

ವಸತಿ ಶಾಲೆ, ಕಾಲೇಜುಗಳಲ್ಲಿ ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಚಟುವಟಿಕೆ ನಡೆಸಲು ಖುದ್ದು ನಿರ್ದಿಗಂತ ಸಂಸ್ಥೆಯೇ ಶಾಲಾರಂಗ ಕಾರ್ಯಕ್ರಮ ಪ್ರಾರಂಭಿಸಲು  ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.

 

ಪ್ರಸ್ತಾವನೆಯಲ್ಲೇನಿತ್ತು?

 

ವಿದ್ಯಾರ್ಥಿಗಳಲ್ಲಿ ಓದಿನ ಜತೆಗೆ ಸಾಮಾಜಿಕ ಮತ್ತು ಸಾಹಿತ್ಯದ ಹಾಗೂ ಸಾಂಸ್ಕೃತಿಕ ಅಭಿರುಚಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಓದಿನಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ಶಿಕ್ಷಣದಲ್ಲಿ ರಂಗಭೂಮಿಯನ್ನು ಸಮನ್ವಯಗೊಳಿಸುವ ಆಶಯದೊಂದಿಗೆ ಕ್ರೈಸ್‌ ವಸತಿ ಶಾಲೆಗಳಲ್ಲಿ ಶಾಲಾರಂಗ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ದಿಗಂತ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿತ್ತು.

 

ಶಾಲಾರಂಗದ ಮೂಲಕ ಕಲಾವಿದರು ಹಾಡು ಹೇಳುತ್ತಾ, ಕಥೆ ಹೇಳುತ್ತಾ, ಚಿತ್ರ ಬಿಡಿಸುತ್ತಾ, ಆಟವಾಡಿಸುತ್ತಾ, ಬೊಂಬೆಗಳ ಮೂಲಕ ಕಥೆಗಳನ್ನು ಪ್ರಸ್ತುತ ಪಡಿಸತ್ತಾ ಹಾಗೂ ತಾವೇ ಕಥೆಯನ್ನು ಆಭಿನಯಿಸುವ ವರ್ತಮಾನದ ಅನೇಕ ಸಂಗತಿಗಳ ಅರಿವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು ಎಂದು ಪ್ರಸ್ತಾವನೆಯಲ್ಲಿ ನಿರ್ದಿಗಂತ ಸಂಸ್ಥೆಯು ವಿವರಿಸಿತ್ತು.

 

ಅಲ್ಲದೇ ‘ಶಿಕ್ಷಣದಲ್ಲಿ ರಂಗಭೂಮಿಯೆಂದರೆ ಅದು ಪಾಠ-ಪ್ರವಚನಗಳನ್ನು ನಾಟಕ ರೂಪದಲ್ಲಿ ಮಂಡಿಸುವುದಂದಲ್ಲ. ಅದು ದೈನಂದಿನ ಪಠ್ಯ ಸಂವಹನೆಯಲ್ಲಿ ಅಗತ್ಯವಾದ ಹಾವ-ಭಾವ,ಕಲ್ಪನೆ ಮುಂತಾದವುಗಳ ಪರಿಣಾಮಕಾರಿ ಬಳಕೆಯ ಸಾಧ್ಯತೆಯನ್ನು ಶೋಧಿಸುವುದು ಎಂದರ್ಥ. ಪ್ರತಿ ಮಗುವಿಗೂ ಇರುವ ಪ್ರತ್ಯೇಕ ಅಸ್ತಿತ್ವವನ್ನು ಗೌರವಿಸುವುದು ಶಾಲಾರಂಗ ಗುರಿಯಾಗಿದೆ,’ ಎಂದೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು.

 

ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ 80ನೇ ಆಡಳಿತ  ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿತ್ತು.  ನಿರ್ದಿಗಂತ ಸಂಸ್ಥೆ ಅಥವಾ ಇದೇ ರೀತಿಯ ಇತರೆ ಖಾಸಗಿ ಸಂಸ್ಥೆಗಳ ಮೂಲಕ ಆಯಾ ವಸತಿ ಶಾಲೆ, ಕಾಲೇಜುಗಳ ಪ್ರಾಂಶುಪಾಲರುಗಳು ಎಂಒಯು ಮಾಡಿಕೊಳ್ಳಬೇಕು ಮತ್ತು ಸಂಘದ ನಿರ್ವಹಣಾ ವೆಚ್ಚದಲ್ಲಿ  50,000 ರು.ಗಳಿಗೆ ಮೀರದಂತೆ ಭರಿಸಬೇಕು ಎಂದು  ಸಭೆಯು ತೀರ್ಮಾನಿಸಿತ್ತು ಎಂಬುದು ಗೊತ್ತಾಗಿದೆ.

 

ಆಡಳಿತ ಮಂಡಳಿಯ ತೀರ್ಮಾನದಂತೆ ಮೈಸೂರು ಜಿಲ್ಲೆ ವ್ಯಾಪ್ತಿಯ 18 ಶಾಲೆಗಳಲ್ಲಿ ಶಾಲಾರಂಗ ಕಾರ್ಯಕ್ರಮವನ್ನು ನಿರ್ದಿಗಂತ ಸಂಸ್ಥೆಯು ಅನುಷ್ಠಾನಗೊಳಿಸಿತ್ತು. ಆದರೆ 2024ರ  ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಇದ್ದ ಕಾರಣ ಶಾಲಾರಂಗ ಕಾರ್ಯಕ್ರಮವನ್ನು ಮುಂದೂಡಿತ್ತು.

 

ಒಪ್ಪಂದದ ಪ್ರಕಾರ ಶಾಲಾರಂಗ ಕಾರ್ಯಕ್ರಮವನ್ನು 2024ರ ಮೇ ತಿಂಗಳ ನಂತರ ಮುಂದುವರೆಸಲಾಗುವುದು ಎಂದು ಹೇಳಿತ್ತು. ಅದೇ ರೀತಿ ಈಗಾಗಲೇ ಪ್ರಸ್ತುತಪಡಿಸಿದ್ದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಯಾ ಶಾಲೆಗಳಿಂದ ಒಪ್ಪಂದದ ಪ್ರಕಾರ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಬೇಕು ಎಂದು ನಿರ್ದಿಂಗತ ಸಂಸ್ಥೆಯು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರವನ್ನೂ ಬರೆದಿತ್ತು.

 

ಅಲ್ಲದೇ ಟಿ ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ  ಬಿ ಸೀಹಳ್ಳಿ ಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವ)ದ ಪ್ರಾಂಶುಪಾಲರು ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಚಟುವಟಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲು  50,000 ರು.ಗಳ ಅನುದಾನ ಬಿಡುಗಡೆಗೊಳಿಸಬೇಕು ಎಂದು ಕ್ರೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ 2024ರ ಮಾರ್ಚ್‌ 6ರಂದು ಪತ್ರ ಬರೆದಿದ್ದರು.

 

ಇದೇ ತಾಲೂಕಿನ ಕೂಡ್ಲೂರಿನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಮೂಗೂರಿನಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆ (ಪಜಾ), ನಂಜನಗೂಡಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಬಾಲಕಿಯರ ಸರ್ಕಾರಿ ವಸತಿ ಪ್ರೌಢಶಾಲೆ, ಎಸ್‌ ಹೊಸಕೋಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜು, ಮುಳ್ಳೇಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಹದಿನಾರು ಗ್ರಾಮದಲ್ಲಿರುವ ಡಾ ಬಿ ಆರ್‍‌ ಅಂಬೇಡ್ಕರ್‍‌ ವಸತಿ ಶಾಲೆ ಸೇರಿದಂತೆ ಇನ್ನಿತರೆ ವಸತಿ ಶಾಲೆಗಳ ಪ್ರಾಂಶುಪಾಲರುಗಳು ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಘಕ್ಕೆ ಪತ್ರ ಬರೆದಿದ್ದರು ಎಂಬುದು ತಿಳಿದು ಬಂದಿದೆ.

 

‘ಸಂಘದ ಉಲ್ಲೇಖಿತ ಪತ್ರದ ಅನ್ವಯ ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಚಟುವಟಿಕೆ ಅನುಷ್ಠಾನಗೊಳಿಸಲು ಪ್ರಕಾಶ್‌ ರಾಜ್‌ ಫೌಂಡೇಷನ್‌  ನಿರ್ದಿಗಂತ ಇವರೊಂದಿಗೆ ಎಂಒಯು ಮಾಡಿಕೊಂಡಿರುತ್ತೇವೆ. ಎಂಒಯು ಅನುಸಾರ ಮೊದಲ ಹಂತದಲ್ಲಿ ಶೇ.50ರಂತೆ 22,000 ರು.ಗಳನ್ನು ಪಾವತಿಸಬೇಕಿರುತ್ತದೆ. ನಂತರದಲ್ಲಿ ಎರಡನೇ ಹಂತದಲ್ಲಿ ಉಳಿದ ಶೇ. 50ರ ಮೊತ್ತವಾದ 22,000 ರು.ಗಳನ್ನು ಪಾವತಿಸಬೇಕಿರುತ್ತದೆ.

 

ಜೊತೆಗೆ ಶಿಕ್ಷಕರ ತರಬೇತಿಯ ಮೊತ್ತ 6,000 ರು.ಗಳನ್ನು ಸೇರಿಸಿ ಒಟ್ಟು 50,000 ರು.ಗಳನ್ನು ಫೌಂಡೇಷನ್‌ ಅವರಿಗೆ ಪಾವತಿಸಬೇಕಿರುತ್ತದೆ. ಈ ಹಿನ್ನೆಲೆಯಲ್ಲಿ 50,000 ರು.ಗಳ ಅನುದಾನವನ್ನು ಬಿಡುಗಡೆ ಮಾಡಬೇಕು,’ ಎಂದು ಅಟಲ್‌ ಬಿಹಾರಿ ವಾಜಪೇಯಿ  ವಸತಿ ಶಾಲೆಯ ಪ್ರಾಂಶುಪಾಲರು 2024ರ ಮಾರ್ಚ್‌ 5ರಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದರು ಎಂಬುದು ಗೊತ್ತಾಗಿದೆ.

 

ಹೀಗೆ  18 ಶಾಲೆ, ಕಾಲೇಜುಗಳ ಪೈಕಿ ಮೈಸೂರು ಮತ್ತು ಎಚ್‌ ಡಿ ಕೋಟೆಯ ಶಾಲೆಗಳಿಗೆ ತಲಾ 44,000 ರು.ಗಳಂತೆ ಒಟ್ಟು 88,000 ರು.ಗಳನ್ನು ಆರ್‍‌ಟಿಜಿಎಸ್‌ ಮೂಲಕ ನಿರ್ದಿಗಂತ ಸಂಸ್ಥೆಗೆ  ಪಾವತಿಯಾಗಿದೆ.  ಇನ್ನುಳಿದಂತೆ ನಂಜನಗೂಡು, ಟಿ ನರಸೀಪುರ ತಾಲೂಕಿನ ಶಾಲೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಇನ್ನು ಕೆಲವೆಡೆ ಕಾರ್ಯಕ್ರಮ ನಡೆಯದ ಕಾರಣ ಹಣ ಬಿಡುಗಡೆಯಾಗಿರಲಿಲ್ಲ ಮತ್ತು  ಪಾವತಿಯನ್ನು ಮುಂದೂಡಲಾಗಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ವಸತಿ ಶಾಲೆ, ಕಾಲೇಜುಗಳಲ್ಲಿ ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಚಟುವಟಿಕೆ ನಡೆಸಲು ಮೈಸೂರು ವಿಭಾಗವೊಂದಕ್ಕೆ  1.00 ಕೋಟಿ ರು. ಮಂಜೂರು ಮಾಡಿಸಿಕೊಳ್ಳಲು  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಪ್ರಸ್ತಾವನೆ ಸಲ್ಲಿಸಿತ್ತು.

 

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಸಾಂಸ್ಕೃತಿಕ ಮತ್ತು ರಂಗಭೂಮಿ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರವು ಉದ್ದೇಶಿಸಿದೆ. ಇದಕ್ಕಾಗಿ  ನಿರ್ದಿಗಂತ ಸಂಸ್ಥೆಯೂ ಸೇರಿದಂತೆ ಇನ್ನಿತರೆ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು  ಅಧಿಕೃತ ಜ್ಞಾಪನ ಪತ್ರದಲ್ಲೇ  ನಿರ್ದಿಷ್ಟವಾಗಿ  ಸೂಚಿಸಿತ್ತು.

 

ರಂಗ ಚಟುವಟಿಕೆಗಳಿಗೆ ಅಂದಾಜು 4.20 ಕೋಟಿ ವೆಚ್ಚ; ಪ್ರಕಾಶ್‌ ರೈ ‘ನಿರ್ದಿಗಂತ’ಕ್ಕೆ ಸಿಂಹಪಾಲು!

ನಟ ಪ್ರಕಾಶ್‌ ರೈ ಅವರು ಆರಂಭಿಸಿರುವ ನಿರ್ದಿಗಂತ ಸಂಸ್ಥೆ ಆರಂಭವಾಗಿ ಇನ್ನೂ ಒಂದು ವರ್ಷವೂ ಕಳೆದಿಲ್ಲ. ಸರ್ಕಾರವು ನಡೆಸುತ್ತಿರುವ ರಂಗಾಯಣಗಳನ್ನು ಬಳಸಿಕೊಳ್ಳದೇ ಖಾಸಗಿ ಸಂಸ್ಥೆಯಾಗಿರುವ ನಿರ್ದಿಗಂತಕ್ಕೆ ಮಣೆ ಹಾಕಿದ್ದಾದರೂ ಏಕೆ, ಇದರಲ್ಲಿ ಲಾಭ ಉದ್ದೇಶವೂ ಇರಬಹುದು ಎಂಬ ಮಾತುಗಳು ರಂಗಕರ್ಮಿಗಳ ವಲಯದಲ್ಲಿ ಕೇಳಿ ಬಂದಿದ್ದವು.

 

ವಸತಿ ಶಾಲೆ ಮತ್ತು ಕಾಲೇಜುಗಳಿಗೆ ನೀಡುತ್ತಿದ್ದ ನಿರ್ವಹಣ ವೆಚ್ಚವನ್ನು ಏರಿಕೆ ಮಾಡದೆಯೇ ಇರುವ ಅಲ್ಪ ಹಣದಲ್ಲಿಯೇ ರಂಗ ಸಂಸ್ಥೆಗಳಿಗೆ ನೀಡುವ ಬಗ್ಗೆಯೂ ಪ್ರಾಂಶುಪಾಲರುಗಳು ತಕರಾರು ತೆಗೆದಿದ್ದರು ಎಂಬುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts