ಆಸ್ತಿ ನಗದೀಕರಣವಷ್ಟೇ ಅಲ್ಲ, ಬಂಡವಾಳವೂ ಹಿಂತೆಗೆತ; ಇಲಾಖೆಗಳಿಂದ ಸಮಗ್ರ ಪಟ್ಟಿ ಕೋರಿದ್ದ ಪತ್ರ ಮುನ್ನೆಲೆಗೆ

ಬೆಂಗಳೂರು; ಆಡಳಿತ ಇಲಾಖೆಗಳ ಅಧೀನದಲ್ಲಿರುವ ಆಸ್ತಿಗಳ ನಗದೀಕರಣ, ಇಲಾಖೆಗಳ ಅಧೀನದಲ್ಲಿರುವ ಆಸ್ತಿಗಳ ವಿವರಣೆ ಮತ್ತು ಬಂಡವಾಳ ಹಿಂತೆಗೆತ ಕುರಿತು ಮಾಹಿತಿ ಒದಗಿಸಬೇಕು ಎಂದು ಸರ್ಕಾರವು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಒಂದು ತಿಂಗಳ ಹಿಂದೆಯೇ ಬರೆದಿದ್ದ ಪತ್ರ ಇದೀಗ ಬಹಿರಂಗವಾಗಿದೆ.

 

ಅಲ್ಲದೇ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಡಾ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆಯೂ ನಡೆದಿತ್ತು.ಇದೇ ಸಭೆಯಲ್ಲಿಯೇ  ಆಸ್ತಿ ನಗದೀಕರಣದ ಅಡಿಯಲ್ಲಿ ಆಡಳಿತ ಇಲಾಖೆಗಳ ಆಸ್ತಿಗಳ ಸಮಗ್ರ ಪಟ್ಟಿ ಮತ್ತು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಸಹ ಸೂಚಿಸಿತ್ತು.

 

ರಾಜ್ಯ ಕಾಂಗ್ರೆಸ್‌ ಸರ್ಕಾರವು ಆಸ್ತಿ ನಗದೀಕರಣದ ಭಾಗವಾಗಿ 25 ಸಾವಿರ ಎಕರೆ ಜಮೀನನ್ನು ವರಮಾನಕ್ಕೆ ಬಳಸಿಕೊಳ್ಳಲು ಮುಂದಾಗಿದೆ ಎಂದು ದಿನಪತ್ರಿಕೆಯೊಂದರ ವರದಿಗೆ ಮುಖ್ಯಮಂತ್ರಿ ಸಚಿವಾಲಯವು ಸ್ಪಷ್ಟನೆ ನೀಡಿರುವ ಬೆನ್ನಲ್ಲೇ ಇಲಾಖೆಗಳ ಅಧೀನದಲ್ಲಿರುವ ಆಸ್ತಿಗಳ ವಿವರಗಳು ಮತ್ತು ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಮುಖ್ಯಸ್ಥರಿಗೆ 2024ರ ಮೇ 18ರಂದು ಬರೆದಿದ್ದಾರೆ. ಇದೇ ಪತ್ರದೊಂದಿಗೆ ಆಸ್ತಿ ನಗದೀಕರಣದ ವಿವರಗಳ ಮಾದರಿಯನ್ನು ಒದಗಿಸಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಆಸ್ತಿ ನಗದೀಕರಣ (Asset Monetization) ಮತ್ತು ಸುಸ್ಥಿರ ಮೂಲಸೌಕರ್ಯ ಆರ್ಥಿಕತೆಯ ಭಾಗವಾಗಿದೆ. ಸ್ವತ್ತುಗಳ ಸಮರ್ಥ ಬಳಕೆ, ಸಂಪನ್ಮೂಲಗಳನ್ನು ಸಮರ್ಥವಾಗಿ ಹಂಚಿಕೆ, ರಾಜ್ಯದ ಆದಾಯವನ್ನು ಹೆಚ್ಚಿಸಲು ವಿವಿಧ ಇಲಾಖೆಗಳ ಆಸ್ತಿಗಳ ಬಳಕೆಯನ್ನು ಗರಿಷ್ಠಗೊಳಿಸುವುದು ಅವಶ್ಯಕವಾಗಿದೆ.

 

ರಾಜ್ಯದ ಹೆಚ್ಚಿನ ಸಂಪನ್ಮೂಲಗಳನ್ನು ಉತ್ಪಾದಿಸುವ ಕುರಿತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಆಡಳಿತ ಇಲಾಖೆಗಳ ಆಸ್ತಿಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಲು ಹಾಗೂ ಈ ಆಸ್ತಿಗಳನ್ನು ನಗದೀಕರಿಸಲು ಅಥವಾ ಮರು ಬಳಕೆ ಮಾಡಲು ಇಲಾಖೆಯ ಆಂತರಿಕ ಪಿಪಿಪಿ ಕೋಶದ ಮೂಲಕ ಪರಿಶೀಲಿಸಬೇಕು ಎಂದು ಪತ್ರದಲ್ಲಿ ವಿವರಿಸಿತ್ತು.

 

ಸಂಪನ್ಮೂಲಗಳ ಸಮರ್ಥವಾದ ಬಳಕೆಯೊಂದಿಗೆ ನಿಧಿ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಬಹುದೆಂದು ಸಭೆಯಲ್ಲಿ ತಿಳಿಸಲಾಗಿತ್ತು. ಆಸ್ತಿ ನಗದೀಕರಣ ಅಡಿಯಲ್ಲಿ ಕಾರ್ಯಗತಗೊಳಿಸಬಹುದಾದ ಪ್ರಸ್ತಾವನೆಗಳನ್ನು ಮೂಲಸೌಕರ್ಯ ಅಭಿವೃದ್ಧಿ , ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಕಳಿಸಬೇಕು ಎಂದು ಸೂಚಿಸಲಾಗಿದೆ.

 

ಮೂಲಸೌಕರ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಆಸ್ತಿನಗದೀಕರಣ ವಿಷಯವನ್ನು ನಿರ್ವಹಿಸಲು (to evalute asset monetization proposal and appoint transaction advisior) ರಾಜ್ಯದ ಇಲಾಖೆಗಳಲ್ಲಿ ಲಭ್ಯವಿರುವ ಆಸ್ತಿಗಳನ್ನು ಕ್ರೋಢಿಕರಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದೆ. ಆದರೆ ಕೆಲವು ಇಲಾಖೆಗಳಿಂದ ಮಾತ್ರ ಆಸ್ತಿ ನಗದೀಕರಣದ ಮಾಹಿತಿಯು ಸ್ವೀಕೃತವಾಗಿದೆ ಎಂದು ಮಾಹಿತಿ ಒದಗಿಸಿದೆ.

 

‘ಆಸ್ತಿ ನಗದೀಕರಣ ಅಡಿಯಲ್ಲಿ ವಿವರಗಳ ಪ್ರಗತಿಯನ್ನು ಪರಿಶೀಲಿಸಿ 2024ರ ಜೂನ್‌ 10 ಅಂತ್ಯದೊಳಗೆ ಪ್ರತಿಯೊಂದು ಇಲಾಖೆಯು ಆಸ್ತಿಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು,’ ಎಂದು ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಇಲಾಖೆಗಳ ಮುಖ್ಯಸ್ಥರಿಗೆ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಸರ್ಕಾರವು ನಾಗರಿಕರಿಗೆ ಯಾವುದೇ ಹೆಚ್ಚಿನ ಹೊರೆಯಾಗದಂತೆ ಹೆಚ್ಚುವರಿ ಸಂಪನ್ಮೂಲ ಕ್ರೋಢಿಕರಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಈ ಕುರಿತು ಹಲವು ಪ್ರಸ್ತಾವನೆಗಳು ಸರ್ಕಾರದ ಮುಂದಿವೆ ಎಂದು ಮುಖ್ಯಮಂತ್ರಿ ಸಚಿವಾಲಯವು ಪತ್ರಿಕೆಯೊಂದರ ವರದಿಗೆ ಸ್ಪಷ್ಟೀಕರಣ ನೀಡಿದೆ.

 

ಕರ್ನಾಟಕ ರಾಜ್ಯದಲ್ಲಿ ಗಣಿಗಾರಿಕೆ, ನಗರ ವಲಯದಲ್ಲಿ ಜಾಹೀರಾತು, ನಾಮಕರಣದ ಹಕ್ಕು ಸೇರಿದಂತೆ ಹಲವು ತೆರಿಗೆಯೇತರ ಮೂಲಗಳಿಂದ ಹೆಚ್ಚುವರಿ ಸಂಪನ್ಮೂಲ ಕ್ರೋಢಿಕರಿಸಲು ಸಾಕಷ್ಟು ಅವಕಾಶಗಳಿವೆ. ಸರ್ಕಾರದ ಆಸ್ತಿಗಳ ಸೀಮಿತ ಮಟ್ಟದ ನಗದೀಕರಣವೂ ಇದರಲ್ಲಿ ಒಳಗೊಂಡಿರಬಹುದು. ಆದರೆ ಸರ್ಕಾರಿ ಜಮೀನಿನ ವಿಲೇವಾರಿ ಅಥವಾ ಮಾರಾಟ ಎಂಬುದು ಇದರ ಅರ್ಥವಲ್ಲ ಎಂದು ಹೇಳಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts