ಬೆಂಗಳೂರು; ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದ್ದ ಲಕ್ಷಾಂತರ ರುಪಾಯಿಗಳನ್ನು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೇ ಅಕ್ರಮವಾಗಿ ಖಾಸಗಿ ಬ್ಯಾಂಕ್‌ಗೆ ವರ್ಗಾವಣೆ ಮಾಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಸರ್ಕಾರಿ ಕಾಲೇಜು, ಪಾಲಿಟೆಕ್ನಿಕ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ್ದ ಸರ್ಕಾರಿ ಹಣವನ್ನು ಖಾಸಗಿ ಬ್ಯಾಂಕ್‌ಗಳಿಗೆ ವರ್ಗಾವಣೆ, ಕ್ಯೂ ಆರ್ ಕೋಡ್ ಬಳಸಿ ಹೈಟೆಕ್ ವಂಚನೆ ಮತ್ತು ವಿದ್ಯಾರ್ಥಿಗಳ ಶುಲ್ಕವೂ ಸೇರಿದಂತೆ ಇನ್ನಿತರೆ ಮೂಲದ ಹಣವನ್ನು ಸ್ವಂತ ಖಾತೆಗಳಿಗೆ ಡ್ರಾ ಮಾಡಿಕೊಂಡಿರುವ ಪ್ರಕರಣಗಳು ಬಹಿರಂಗಗೊಂಡ ನಂತರ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಪ್ರಕರಣವೂ ಮುನ್ನೆಲೆಗೆ ಬಂದಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಎಸ್ ಎಂ ಝಲ್ಪಿಕಾರುಲ್ಲಾ ಅವರು ಮಂಡಳಿಗೆ ಸೇರಿದ್ದ ಲಕ್ಷಾಂತರ ರುಪಾಯಿಗಳನ್ನು ಅಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟದಲ್ಲಿರುವ ವಿಜಯಾ ಬ್ಯಾಂಕ್ ಶಾಖೆಗೆ ವರ್ಗಾವಣೆ ಮಾಡಿದ್ದರು. ಈ ಸಂಬಂಧ ಐಪಿಸಿ ಕಲಂ 409ರಂತೆ ಕ್ರಮಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಮಂಡಳಿಯ ಈಗಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದಾರೆ.
ಸರ್ಕಾರದ ಕಾರ್ಯದರ್ಶಿಯು 2024ರ ಜೂನ್ 12ರಂದು ಬರೆದಿದ್ದ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮಂಡಳಿಯ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಂ ಝುಲ್ಪಿಕಾರುಲ್ಲಾ ಅವರು ಮಂಡಳಿಗೆ ಸೇರಿದ್ದ 4,00,45,465 ರು.ಗಳನ್ನು ಅಕ್ರಮವಾಗಿ ಚಿಂತಾಮಣಿಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆಯಲ್ಲಿನ ಸ್ಥಿರ ಠೇವಣಿಗೆ ವರ್ಗಾವಣೆ ಮಾಡಿದ್ದರು. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕ್ರಮಕೈಗೊಳ್ಳುವುದು ಮತ್ತು ಈಹಣವನ್ನು ವಸೂಲು ಮಾಡಬೇಕು ಎಂದು ಸರ್ಕಾರದ ಕಾರ್ಯದರ್ಶಿಯು 2023ರ ಏಪ್ರಿಲ್ 19ರಂದೇ ಪತ್ರ ಬರೆಯಲಾಗಿತ್ತು ಎಂಬುದು ಪತ್ರದಿಂದ ಗೊತ್ತಾಗಿದೆ.
ಎಸ್ ಎಂ ಝುಲ್ಪಿಕಾರುಲ್ಲಾ ಅವರು ಮೂಲತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಯಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಂಡಳಿಯು 2023ರ ಡಿಸೆಂಬರ್ 19ರಂದು ಪತ್ರ ಬರೆದಿದ್ದರು. ಇದಾದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯೂ ಸಹ 2024ರ ಮಾರ್ಚ್ 18ರಂದು ಪತ್ರ ಬರೆದಿತ್ತು ಎಂಬುದು ತಿಳಿದು ಬಂದಿದೆ.
ಈ ಪ್ರಕರಣದ ಕುರಿತು ಅಧಿಕಾರಿಗಳು ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧೀನದಲ್ಲಿರುವ ಮಯೂರ ಬಾಲ ಭವನದ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಿಗಮದ ಕ್ಯೂ ಆರ್ ಕೋಡ್ ಬಳಸದೇ ವೈಯಕ್ತಿಕ ಕ್ಯೂ ಆರ್ ಕೋಡ್ ಬಳಸಿ ಲಕ್ಷಾಂತರ ರುಪಾಯಿ ದುರುಪಯೋಗಪಡಿಸಿಕೊಂಡಿದ್ದರು.
ಬಾಲ ಭವನದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ನಾಗಭೂಷಣ್ ಎಂಬುವರೂ ಸೇರಿದಂತೆ ಒಟ್ಟು 4 ಮಂದಿಯೂ ಸಹ ನಿಗಮದ ಹಣದ ವ್ಯವಹಾರವನ್ನು ನಿಗಮದ ಕ್ಯೂ ಆರ್ ಕೋಡ್ ಬಳಸದೇ ವೈಯಕ್ತಿಕ ಕ್ಯೂ ಆರ್ ಕೋಡ್ ಬಳಸಿ ಹಣ ದುರುಪಯೋಗ ಮಾಡಿಕೊಂಡಿದ್ದರು. ವೈಯಕ್ತಿಕ ಬ್ಯಾಂಕ್ ಖಾತೆಯ ಪರಿಶೀಲನೆಯಿಂದ ದೃಢಪಟ್ಟಿದ್ದರ ಹಿನ್ನೆಲೆಯಲ್ಲಿ ಈ ಸಿಬ್ಬಂದಿಗಳ ಕ್ರಿಮಿನಲ್ ಕೇಸ್ ಮತ್ತು ಎಫ್ಐಆರ್ ದಾಖಲಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು 2024ರ ಜೂನ್ 18ರಂದು ಕಛೇರಿ ಆದೇಶ ಹೊರಡಿಸಿದ್ದರು.
ಕ್ಯೂ ಆರ್ ಕೋಡ್ ಬಳಸಿ ಲಕ್ಷಾಂತರ ರು ದುರುಪಯೋಗ; ಪ್ರವಾಸೋದ್ಯಮ ನಿಗಮದಲ್ಲಿ ಹೈಟೆಕ್ ವಂಚನೆ
ಈ ಪ್ರಕರಣಗಳು ಸಚಿವ ಹೆಚ್ ಕೆ ಪಾಟೀಲ್ ಅವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಆಂತರಿಕ ತನಿಖೆ ನಡೆಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಈ ಸಂಬಂಧ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆದಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯನ್ನು ಅಮಾನತು ಮತ್ತು ವಜಾಗೊಳಿಸಿರುವುದನ್ನು ಸ್ಮರಿಸಬಹುದು.