ದತ್ತ ಮಾಲಾಧಾರಿಗಳ ವಿರುದ್ಧದ ಪ್ರಕರಣ ಹಿಂಪಡೆದಿದ್ದ ಬಿಜೆಪಿ ಸರ್ಕಾರ; ಮುನ್ನೆಲೆಗೆ ಬಂದ ದಾಖಲೆ

ಬೆಂಗಳೂರು; ದತ್ತ ಪೀಠಕ್ಕೆ ತೆರಳುತ್ತಿದ್ದ ದತ್ತ ಮಾಲಾಧಾರಿಗಳು ಉರೂಸ್‌ ಹಬ್ಬಕ್ಕೆಂದು ಕಟ್ಟಿದ್ದ ಧ್ವಜವನ್ನು ಕಿತ್ತು ಹಾಕಿದ್ದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆಯಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರವು ಪ್ರಕರಣವನ್ನು ಹಿಂಪಡೆದಿತ್ತು ಎಂಬುದು ಇದೀಗ ಮುನ್ನೆಲೆಗೆ ಬಂದಿದೆ.

 

ಬಾಬಾಬುಡನ್ ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣವನ್ನು ಮರು ತನಿಖೆಗೆ ಆದೇಶ ನೀಡಲಾಗಿದೆ ಎಂದು ಪ್ರಸಾರವಾಗುತ್ತಿರುವ ಸುದ್ದಿಯು ಬಿಜೆಪಿಯನ್ನು ಕೆರಳಿಸಿದೆ. ಆದರೆ ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಪೊಲೀಸ್‌ ಠಾಣೆಯಲ್ಲಿ ಕಳೆದ 9 ವರ್ಷಗಳ ಹಿಂದೆಯೇ ದತ್ತಮಾಲಾಧಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಹಿಂಪಡೆಯಲಾಗಿತ್ತು ಎಂಬುದು ಚರ್ಚೆಗೆ ಗ್ರಾಸವಾಗಿದೆ.

 

ಬಾಬಾಬುಡನ್ ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ  ದತ್ತಪೀಠ ಹೋರಾಟಗಾರರನ್ನು ವಿಚಾರಣೆ ನಡೆಸಲು 2020ರ ಮಾರ್ಚ್‌ 19ರಂದು ಪೊಲೀಸರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ  ಅವರು ಈ ಪ್ರಕರಣವನ್ನು ವಿಚಾರಣೆಯಿಂದ ಹಿಂಪಡೆದಿರಲಿಲ್ಲ. ಮತ್ತು ಪೊಲೀಸರ ಮನವಿಯನ್ನು ಪುರಸ್ಕರಿಸಿರಲಿಲ್ಲ ಎಂದು ಗೊತ್ತಾಗಿದೆ.

 

ಬದಲಿಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ (ಮೊಕದ್ದಮೆ ಸಂಖ್ಯೆ; 114/2014) ಪ್ರಕರಣವನ್ನು 2020ರ ಮಾರ್ಚ್‌ 9ರಂದು ಹಿಂಪಡೆಯಲು ಅನುಮೋದಿಸಿದ್ದರು.

 

ಈ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡಿದೆ.

 

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯು 2020ರ ಮಾರ್ಚ್‌ 9ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಒಟ್ಟು 164 ಪ್ರಕರಣಗಳಿಗೆ ಸಂಬಂಧಿಸಿದ 19 ಕಡತಗಳನ್ನು ಪರಿಶೀಲನೆಗಾಗಿ ಸಮಿತಿ ಮುಂದೆ ಇರಿಸಿತ್ತು.

 

ಈ ಪೈಕಿ ದತ್ತಮಾಲಾಧಾರಿಗಳ ವಿರುದ್ಧದ ಪ್ರಕರಣದ ಕಡತವೂ ಪಟ್ಟಿಯಲ್ಲಿತ್ತು. 2014ರಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಆದರೂ ವಿಚಾರಣೆಯಿಂದ ಈ ಪ್ರಕರಣವನ್ನು ಹಿಂಪಡೆಯುವುದು ಸೂಕ್ತ ಎಂದು ಸಭೆಯು ತೀರ್ಮಾನಿಸಿತ್ತು ಎಂಬುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

 

ಪ್ರಕರಣದ ಹಿನ್ನೆಲೆ

 

ಚಿಕ್ಕಮಗಳೂರಿನಲ್ಲಿರುವ ಇನಾಮ್‌ ದತ್ತಾತ್ರೇಯ ಪೀಠ (ದತ್ತ ಪೀಠ)ದಲ್ಲಿ ನಡೆಯುತ್ತಿದ್ದ ದತ್ತ ಜಯಂತಿಯಲ್ಲಿ ಪಾಲ್ಗೊಳ್ಳಲು ಸಹಕಾರ ಸಾರಿಗೆ ಬಸ್‌ನಲ್ಲಿ ( ಕೆಎ 18;7827)ಆರೋಪಿತರು ತೆರಳುತ್ತಿದ್ದರು. ಅ ವೇಳೆಯಲ್ಲಿ ವಾಹನವನ್ನು ನಿಲ್ಲಿಸಿ ಅಕ್ರಮಕೂಟ ಕಟ್ಟಿಕೊಂಡು ಮುಸ್ಲಿಂ ಜನಾಂಗಕ್ಕೆ ಅವಹೇಳನಕಾರಿಯಾಗುವಂತೆ ಕೂಗಿದ್ದರು.

 

‘ಅವರ ದೇವರಾದ ಅಲ್ಲಾನಿಗೆ ಅಲ್ಲಾ ಅಲ್ಲಾ ಅವನೊಬ್ಬ ಕಳ್ಳ, ಮುಸ್ಲಿಂ ಜನಾಂಗಕ್ಕೆ ಧಿಕ್ಕಾರ ಎಂದು ಕೂಗುತ್ತಾ ಉರೂಸ್ ಹಬ್ಬಕ್ಕೆಂದು ಕಟ್ಟಿದ್ದ ಮುಸ್ಲಿಂ ಜನಾಂಗದ ಬಾವುಟ ನೋಡಿ ದತ್ತಪೀಠದಿಂದ ಬರುವಾಗ ಬಾವುಟ ಕಿತ್ತು ಸುಟ್ಟು ಹಾಕುವುದಾಗಿ ಕೂಗಾಡಿದ್ದರು. ಅದೇ ವಾಹನದಲ್ಲಿ ದತ್ತಪೀಠಕ್ಕೆ ಹೋಗಿರುವುದು ತನಿಖೆಯಿಂದ ದೃಢಪಟ್ಟಿದೆ,’ ಎಂದು ಪೊಲೀಸರು ವರದಿ ಮಾಡಿದ್ದರು.

 

ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಐಪಿಸಿ 143, 147, 153(ಎ), 504, 506, ರೆ;ವಿ 149 ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ 2020ರ ಮಾರ್ಚ್‌ 9ರಂದು ನಡೆದಿದ್ದ ಸಚಿವ ಸಂಪುಟ ಉಪ ಸಮಿತಿಯ ಸಭೆಯು ಈ ಪ್ರಕರಣವನ್ನು ಹಿಂಪಡೆದಿತ್ತು.

 

‘ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ 187/2014, ಬಾಳೆಹೊನ್ನೂರು ಪೊಲೀಸ್‌ ಠಾಣೆ ಮೊಕದ್ದಮೆ ಸಂಖ್ಯೆ 114/2014, 41/2015 ಹಾಗೂ ಹರಿಹರಪುರ ಪೊಲೀಸ್‌ ಠಾಣೆ ಮೊಕದ್ದಮೆ 39/2012ರ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟು ಸಚಿವ ಸಂಪುಟ ನಿರ್ಣಯಕ್ಕೆ ಮಂಡಿಸಲು ಶಿಫಾರಸ್ಸು ಮಾಡಿತು,’ ಎಂದು ನಡವಳಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

ಬಾಬಾಬುಡನ್ ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣವನ್ನು ಮರುತನಿಖೆಗೆ ಆದೇಶ ನೀಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು, ಇದು ತಪ್ಪು ಮಾಹಿತಿ ಹಾಗೂ ಸುಳ್ಳಿನಿಂದ ಕೂಡಿದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದನ್ನು ಸ್ಮರಿಸಬಹುದು.

 

‘ಇದು ಸಹಜ ಕಾನೂನು ಪ್ರಕ್ರಿಯೆ, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ರಾಜ್ಯ ಸರ್ಕಾರ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಎಂದು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿ, ಪ್ರಚೋದನೆ ನೀಡುವ ಕೆಲಸ ಮಾಡಬಾರದು. ಇಂತಹ ಸುಳ್ಳು ಸುದ್ದಿ ಪ್ರಸಾರದಿಂದ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ ಜೊತೆಗೆ ಕಾನೂನು ಸುವ್ಯವಸ್ಥೆ ಕೂಡ ಹದಗೆಡುವ ಸಾಧ್ಯತೆ ಅಲ್ಲಗಳೆಯಲಾಗದು. ಹೀಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು,’ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು.

SUPPORT THE FILE

Latest News

Related Posts