ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಪಠ್ಯ ಪರಿಷ್ಕರಣೆ; ಹೆಗಡೆ ಸಂಯೋಜಕತ್ವದಲ್ಲಿ 5 ಅಧ್ಯಕ್ಷರು, 37 ಸದಸ್ಯರ ನೇಮಕ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ಅವರಿಂದ ಆರರಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಸೇರಿದಂತೆ ಇನ್ನಿತರೆ ವಿ‍ಷಯಗಳಲ್ಲಿ ಪಠ್ಯ ಪರಿಶೀಲಿಸಿ ಮರು ಪರಿಷ್ಕರಿಸಿದ್ದ ಪಠ್ಯ ಪುಸ್ತಕಗಳ ಸಂಬಂಧ ಈಗಾಗಲೇ ತಿದ್ದುಪಡಿ ತಂದು ತಿದ್ದೋಲೆಗಳನ್ನು ರವಾನಿಸಿರುವ  ಕಾಂಗ್ರೆಸ್‌ ಸರ್ಕಾರವು ಇದೀಗ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು 2005ರ ಮಾರ್ಗಸೂಚಿಯಂತೆ  ರಾಜ್ಯ ಪಠ್ಯಕ್ರಮದ ಪಠ್ಯ ಪುಸ್ತಕಗಳ ಪರಿಷ್ಕರಣೆ ಕಾರ್ಯಕ್ಕೆ ತಜ್ಞರ ಸಮಿತಿ ಮತ್ತು ಸಂಯೋಜಕರನ್ನು ನೇಮಿಸಿ ಆದೇಶಿಸಿದೆ.

 

ರಾಜ್ಯದಲ್ಲಿ ಎನ್‌ಸಿಎಫ್‌ 2005 ಆಧಾರಿತವಾಗಿ ರಚನೆಗೊಂಡು ಜಾರಿಯಲ್ಲಿರುವ 1ರಿಂದ 10ನೇ ತರಗತಿವರೆಗಿನ ಕನ್ನ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು ಮತ್ತು 06ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಸಂಬಂಧ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಲಹೆ ನೀಡಲು  ಉತ್ತರ ಕನ್ನಡ ಜಿಲ್ಲೆಯ ಡಾ ಮಂಜುನಾಥ ಜಿ  ಹೆಗಡೆ ಅವರನ್ನು ಮುಖ್ಯ ಸಂಯೋಜಕರನ್ನಾಗಿ ನೇಮಿಸಿ 2023ರ ಸೆ.25ರಂದು ಆದೇಶ ಹೊರಡಿಸಿದೆ. ಈ ಆದೇಶದ (ಇಪಿ 270 ಪಿಎಂಸಿ 2023, ದಿನಾಂಕ 25-09-2023)  ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2024-25ನೇ ಸಾಲಿನ ಶೈಕ್ಷಣಿಕ ಸಾಲು ಪ್ರಾರಂಭವಾಗುವ ಮೊದಲು ಪಠ್ಯ ಪುಸ್ತಕಗಳು ಶಾಲಾ ಹಂತಕ್ಕೆ ತಲುಪಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ಕಾರ್ಯವನ್ನು ತುರ್ತಾಗಿ ನಿರ್ವಹಿಸಿ ವರದಿ ಸಲ್ಲಿಸಲು ಕಾಲಾವಧಿ ನಿಗದಿಪಡಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ಕೋರಿತ್ತು. ಅದರಂತೆ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು 2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯ ಕ್ರಮದಲ್ಲಿ ಪಠ್ಯ ಪುಸ್ತಕಗಳ ಪರಿಷ್ಕರಣೆ ನಡೆಸಲು ಸಮಿತಿ ರಚಿಸಿದೆ. ಈ ಸಮಿತಿಯು ಮುಂದಿನ 3 ತಿಂಗಳ ಅವಧಿಗೆ ನೇಮಿಸಿರುವುದು ಆದೇಶದಿಂದ ತಿಳಿದು ಬಂದಿದೆ. ಈ ಪಟ್ಟಿಗೆ ಸಚಿವ ಮಧು ಬಂಗಾರಪ್ಪ ಅವರು ಅನುಮೋದನೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಸಮಿತಿ ಸದಸ್ಯರಿಗೆ ಮಾಸಿಕ ಗೌರವ ಧನ ಸಂಭಾವನೆ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

 

ಡಾ ಮಂಜುನಾಥ ಜಿ ಹೆಗಡೆ ಅವರು ಮುಖ್ಯ ಸಂಯೋಜಕರಾಗಿರುವ ಪಠ್ಯಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನೊಳಗೊಂಡಂತೆ  37 ಮಂದಿ ಸದಸ್ಯರನ್ನು ನೇಮಿಸಲಾಗಿದೆ. 2023-24ನೇ ಸಾಲಿನ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ ಆಂಜನಪ್ಪ,ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಚಿಕ್ಕಮಗಳೂರಿನ ಬಸವನಹಳ್ಳಿಯ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ ಎಚ್‌ ಎಸ್‌ ಸತ್ಯನಾರಾಯಣ್‌, ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ದಾವಣಗೆರೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆಯ ಉಪನ್ಯಾಸಕ ಡಾ ಮಂಜಣ್ಣ, 6 ಮತ್ತು 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಕಲ್ಬುರ್ಗಿಯ ಕೇಂದ್ರೀಯ ವಿದ್ಯಾಲದಯ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಕಿರಣ ಎಂ, 8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯ ಸಮಿತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ ಅಶ್ವಥನಾರಾಯಣ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿರುವುದು ಗೊತ್ತಾಗಿದೆ.

 

ಕನ್ನಡ ಪ್ರಥಮ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ

ಡಾ ಬಿ ಸಿ ನಾಗೇಂದ್ರ ಕುಮಾರ್‍‌, ಚಿಕ್ಕದೇವೇಗೌಡ, ಅಜಮೀರ್ ನಂದಾಪುರ, ನರಸಿಂಹಮೂರ್ತಿ ಬಿ ಕೆ , ಸುಶೀಲಾ , ವಿಶ್ವನಾಥ್‌ ಜಿ ಎಸ್‌, ಅಕ್ಷತಾ, ನೇತ್ರಾವತಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

 

ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ

ಸಹ ಪ್ರಾಧ್ಯಾಪಕ ಡಾ ಬಿ ಪಾಪಣ್ಣ, ಡಾ ಗಣೇಶ್‌ ಜಿ ಎಂ, ಡಾ ಗಜಾನಂದ್‌ ಸೊಗಲನ್ನವರ, ಅನಿತಾ, ಈರಪ್ಪ ಮಹಾಲಿಂಗಪುರ, ರವೀಶ್‌ ಕುಮಾರ್‍‌, ರಶ್ಮಿ, ಪವಿತ್ರ ಅವರನ್ನು ಸಮಿತಿ ಸದಸ್ಯರನ್ನಾಗಿಸಲಾಗಿದೆ.

 

ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ 

ಶಿವಣ್ಣ ಹೆಂದೋರೆ, ಮಮತಾ ಭಾಗವತ್‌ ಅವರು ಸದಸ್ಯರಾಗಿದ್ದಾರೆ.

 

ಸಮಾಜ ವಿಜ್ಞಾನ (6-7 ನೇ ತರಗತಿ) ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ 

ಮೈಸೂರು ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ ಕೃಷ್ಣ ಹೊಂಬಾಳೆ, ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ ಪ್ರದೀಪ್‌ ಕೆಂಚನೂರು, ನಿವೃತ್ತ ಪ್ರಾಂಶುಪಾಲ ಡಾ ಕೋಡಿ ರಂಗಪ್ಪ, ಉಪ ಪ್ರಾಂಶುಪಾಲರಾದ ದಾನಮ್ಮ ಜಳಕಿ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವಸೀಮ್‌ ಅನ್ವರ್‍‌ ಅವರನ್ನು ಸದಸ್ಯರನ್ನಾಗಿಸಲಾಗಿದೆ.

 

ಸಮಾಜ ವಿಜ್ಞಾನ (8-9 ನೇ ತರಗತಿ) ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ

ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಕಲಾ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಗಂಗಾಧರ ಪಿ ಎಸ್‌, ತುಮಕೂರು ವಿ ವಿಯ  ಪ್ರೊ ಬಿ ಶೇಖರ್, ಬೆಳಗಾವಿಯ ಡಾ ಎ ಬಿ ವಗ್ಗರ, ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳ ಶಾಸ್ತ್ರದ ಸಹ ಪ್ರಾಧ್ಯಾಪಕ ಡಾ ಶ್ರೀನಿವಾಸ್‌ ಯಡವಾಣಿ, ಕನಕಪುರ ಪಟ್ಟಣದ ಉರ್ದು ಪ್ರೌಢಶಾಲೆಯ ಸಹ ಶಿಕ್ಷಕಿ ತಬಸ್ಸುಮ್‌ ಫಾತಿಮ, ಮಧುಗಿರಿ ಪಬ್ಲಿಕ್‌ ಶಾಲೆಯ ಪಿ ಎಂ ಕಾಗಿನಕರ್‍‌, ನೆಲಮಂಗಲದ ಸರ್ಕಾರಿ ಶಾಲೆಯ ಸಹ ಶಿಕ್ಷಕಿ ಶಾಹಿನಾ ಅಲ್ಲಾಪುರ, ಬೆಂಗಳೂರು ದಕ್ಷಿಣ ವಲಯದ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮೋಹನಕುಮಾರಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆಯು ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು.  ಆರರಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿನ ಪಠ್ಯವನ್ನು ಪರಿಶೀಲಿಸಿ ಮರು ಪರಿಷ್ಕರಿಸಲು ವರದಿ ನೀಡಿರುವ ರೋಹಿತ್‌ ಚಕ್ರತೀರ್ಥ ಅವರನ್ನು ಸಮಿತಿಯಿಂದಲೇ ವಜಾಗೊಳಿಸಬೇಕು ಎಂಬ ಒತ್ತಡ ಹೆಚ್ಚಿತ್ತು.

 

ಪಠ್ಯ ಪುಸ್ತಕ ಪರಿಷ್ಕರಿಸಲು ಸರ್ಕಾರವು ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ‘ದಿ ಫೈಲ್‌’ ಮೊದಲ ಬಾರಿಗೆ ವರದಿ ಪ್ರಕಟಿಸುವ ಮೂಲಕ ವರದಿ ಹೇಗಿರಲಿದೆ ಎಂದು ಗಮನ ಸೆಳೆದಿತ್ತು. ಆ ನಂತರ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬೆನ್ನೆತ್ತಿದ್ದ ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

 

ಹೊಸ ಧರ್ಮಗಳ ಉದಯ ಕುರಿತಾದ ಪಠ್ಯ ವಿಷಯಗಳನ್ನು ಕಡಿತಗೊಳಿಸಲು ಸರ್ಕಾರವು ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಿ ಹೊರಡಿಸಿದ್ದ ಆದೇಶದ ಕುರಿತು ‘ದಿ ಫೈಲ್‌’ 2021ರ ಸೆ.9ರಂದು ಮೊದಲ ವರದಿ ಪ್ರಕಟಿಸಿತ್ತು. ಈ ಸಮಿತಿಯಲ್ಲಿ ಯಾರ್ಯಾರಿದ್ದಾರೆ ಎಂಬ ವಿವರವನ್ನೂ ಈ ವರದಿಯಲ್ಲಿ ನೀಡಿತ್ತು.

ಹೊಸಧರ್ಮಗಳ ಉದಯ ಪಠ್ಯ ಕಡಿತ; ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚನೆ

 

ಚಕ್ರತೀರ್ಥ ನೇತೃತ್ವದ ಸಮಿತಿಯು ರಚನೆಯಾಗಿ 2 ತಿಂಗಳಾದರೂ ವರದಿ ಸಲ್ಲಿಸಿರಲಿಲ್ಲ. ಅಲ್ಲದೆ ವರದಿ ಸಲ್ಲಿಸಲು ಸಮಯಾವಕಾಶವನ್ನು ವಿಸ್ತರಿಸಲು ಸರ್ಕಾರವನ್ನು ಕೋರಿರಲಿಲ್ಲ. ಈ ಕುರಿತು ಕರ್ನಾಟಕ ಪಠ್ಯ ಪುಸಕ್ತ ಸಂಘದ ವ್ಯವಸ್ಥಾಪಕ ನಿರ್ದೇಶಕ ಬೋರೇಗೌಡ ಅವರು ನೀಡಿದ್ದ ಮಾಹಿತಿಯನ್ನಾಧರಿಸಿ 2021ರ ನವೆಂಬರ್‌ 30ರಂದು ವರದಿ ಪ್ರಕಟಿಸಿತ್ತು.

ಪಠ್ಯ ಕಡಿತ; ಗಡುವು ಮೀರಿದರೂ ವರದಿ ಸಲ್ಲಿಸದ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ

ಈ ಕುರಿತಾದ ವರದಿ ಪ್ರಕಟವಾದ 2 ತಿಂಗಳ ನಂತರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ವರದಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು 2021ರ ಡಿಸೆಂಬರ್‌ 31ರಂದು ಸೂಚಿಸಿತ್ತು. ಈ ಸಂಬಂಧ 2022ರ ಜನವರಿ 2ರಂದು ವರದಿ ಪ್ರಕಟಿಸಿತ್ತು.

ಪಠ್ಯದಲ್ಲಿ ವೈದಿಕ ಧರ್ಮದ ಟೀಕೆ; ಜರೂರಾಗಿ ಪರಿಶೀಲನಾ ಸಮಿತಿ ವರದಿ ಸಲ್ಲಿಸಲು ಸೂಚನೆ

ಆ ನಂತರ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಸಮಿತಿಯು ಪರಿಷ್ಕರಿಸಿರುವ ಪಾಠಾಂಶವನ್ನು ಅಳವಡಿಸಬೇಕು ಎಂದು ಸರ್ಕಾರವು ಸೂಚಿಸಿತ್ತು. 2022ರ ಮಾರ್ಚ್‌ 8ರಂದು ಸಲ್ಲಿಸಿದ್ದ ವರದಿಯನ್ನು ಸರ್ಕಾರವು ಬಹಿರಂಗಗೊಳಿಸಿರಲಿಲ್ಲ. ಈ ಕುರಿತು 2022ರ ಮಾರ್ಚ್‌ 24ರಂದು ವರದಿ ಪ್ರಕಟಿಸಿತ್ತು.

ಪಠ್ಯಪುಸ್ತಕ ಪರಿಷ್ಕರಣೆ ವರದಿ; ರೋಹಿತ್‌ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಾಠಾಂಶ ಅಳವಡಿಕೆಗೆ ಆದೇಶ

ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಕುರಿತಾದ ಮಹತ್ವದ ಸಂಗತಿಗಳನ್ನು ಸಮಿತಿಯು ಕೈಬಿಟ್ಟಿತ್ತು. ರಾಕೆಟ್‌ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ನೀಡಿದ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶವನ್ನು ಕೈಬಿಟ್ಟಿತ್ತು. ಪಾಠಾಂಶವನ್ನು ಕೈಬಿಟ್ಟಿದ್ದರ ಕುರಿತು ದಾಖಲೆ ಸಮೇತ 2022ರ ಮಾರ್ಚ್‌ 29ರಂದು ವರದಿ ಪ್ರಕಟಿಸಿತ್ತು.

ಟಿಪ್ಪುವಿನ ರಾಕೆಟ್‌ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶ ಕೈಬಿಟ್ಟ ಚಕ್ರತೀರ್ಥ ಸಮಿತಿ

ಇದಲ್ಲದೆ ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ ಮಾಡಿದ್ದ ಸಮಿತಿಯು ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ಕಿತ್ತೊಗೆದಿತ್ತು. ಈ ಕುರಿತು 2022ರ ಏಪ್ರಿಲ್‌ 23ರಂದು ಪ್ರಕಟಿಸಿತ್ತು.

ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ; ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದ ಕಿತ್ತೊಗೆದ ಸಮಿತಿ

ಪಠ್ಯ ಪರಿಷ್ಕರಣೆಯಿಂದಾಗಿ 2.5 ಕೋಟಿ ರು. ನಷ್ಟವಾಗಿತ್ತು. ಅಲ್ಲದೆ 6.76 ಲಕ್ಷ ಪುಸ್ತಕಗಳು ಅನುಪಯುಕ್ತವಾಗಿದ್ದವಲ್ಲದೆ ಹರಾಜಿಗೂ ನಕಾರ ವ್ಯಕ್ತವಾಗಿತ್ತು ಎಂಬ ಕುರಿತಾಗಿ ಆರ್‌ಟಿಐ ದಾಖಲೆ ಸಮೇತ 2022ರ ಏಪ್ರಿಲ್‌ 26ರಂದು ವರದಿ ಪ್ರಕಟಿಸಿತ್ತು.

ಪಠ್ಯ ಪರಿಷ್ಕರಣೆ ಪರಿಣಾಮ ; 2.5 ಕೋಟಿ ನಷ್ಟ, ಮುದ್ರಿತ 6.76 ಲಕ್ಷ ಪುಸ್ತಕಗಳು ಅನುಪಯುಕ್ತ, ಹರಾಜಿಗೂ ನಕಾರ

6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಪರಿಷ್ಕರಿಸಿರುವ ರೋಹಿತ್‌ ಚಕ್ರತೀರ್ಥ ಸಮಿತಿಗೆ ಪಿಯು ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಲು ವಹಿಸಲು ಸರ್ಕಾರ ಸೂಚಿಸಿತ್ತು. ಈ ಕುರಿತು ಸಚಿವ ಬಿ ಸಿ ನಾಗೇಶ್‌ ಅವರು ಬರೆದಿದ್ದ ಪತ್ರ ಮತ್ತು ಪಿಯು ಮಂಡಳಿ ನಿರ್ದೇಶಕರು ಬರೆದಿದ್ದ ಪತ್ರವನ್ನಾಧರಿಸಿ 2022ರ ಮೇ 23ರಂದು ವರದಿ ಪ್ರಕಟಿಸಿತ್ತು.

ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆ; ರೋಹಿತ್‌ ಚಕ್ರತೀರ್ಥ ಸಮಿತಿಗೆ ವಹಿಸಲು ಸೂಚನೆ

ರೋಹಿತ್‌ ಚಕ್ರತೀರ್ಥ ಅವರನ್ನು ನೇಮಿಸಿದ್ದು ಬಿ ಸಿ ನಾಗೇಶ್‌ ಅವರಲ್ಲ, ಬದಲಿಗೆ ಹಿಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್‌ಕುಮಾರ್ ಎಂಬ ಸಂಗತಿಯನ್ನು ‘ದಿ ಫೈಲ್‌’ ಆರ್‌ಟಿಐ ದಾಖಲೆ ಆಧರಿಸಿ ಹೊರಗೆಳೆದಿತ್ತು. ಈ ಕುರಿತು 2022ರ ಮೇ 25ರಂದು ವರದಿ ಪ್ರಕಟಿಸಿತ್ತು.

ಚಕ್ರತೀರ್ಥರನ್ನು ನೇಮಿಸಿದ್ದು ಸುರೇಶ್‌ಕುಮಾರ್‌; ಪರಾಮರ್ಶನೆಗೊಳಪಡದ ಮರುಪರಿಷ್ಕರಣೆ ವರದಿ?

ರೋಹಿತ್‌ ಚಕ್ರತೀರ್ಥ ಅವರು ಸೂಚಿಸಿದ್ದವರನ್ನೇ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿತ್ತು . ಹಾಗೆಯೇ ಈ ಸಮಿತಿಯು ನೀಡುವ ವರದಿಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನು ಹೆಸರಿಸಲಾಗುವುದು ಎಂದು ಅಂದಿನ ಸಚಿವ ಎಸ್‌ ಸುರೇಶ್‌ ಕುಮಾರ್‌ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಉನ್ನತ ಮಟ್ಟದ ತಜ್ಞರನ್ನು ನೇಮಿಸಲಾಗಿದೆಯೇ ಎಂಬ ಬಗ್ಗೆ ಕಡತದಲ್ಲಿ ಯಾವ ಮಾಹಿತಿಯೂ ಇಲ್ಲವಾಗಿದೆ. ಅದೇ ರೀತಿ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿಯು ನೀಡಿದ್ದ ವರದಿಯನ್ನು ಯಾರು ಪರಿಶೀಲಿಸಿದ್ದಾರೆ ಎಂಬ ಬಗ್ಗೆ ಸಣ್ಣ ಮಾಹಿತಿಯೂ ಇಲ್ಲ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿತ್ತು.

 

ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ತೀವ್ರ ಟೀಕೆಗೆ ಒಳಗಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಇದೀಗ ತನ್ನದೇ ಅಧ್ಯಕ್ಷತೆಯಲ್ಲಿರುವ ಸಮಿತಿಯು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವೇಶ್ವರರು ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು, ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಮತ್ತು ಲಿಂಗಾಯತ ಮಠಗಳನ್ನು ಹೆಸರಿಸದೇ ಕೇವಲ ಅಷ್ಟಮಠಗಳನ್ನು ಹೆಸರಿಸಿ ಪರಿಷ್ಕರಿಸಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಈ ಕುರಿತು ಮೇ 31ರಂದು ವರದಿ ಪ್ರಕಟಿಸಿತ್ತು.

ಬಸವಣ್ಣನಿಗೆ ಉಪನಯನ, ಲಿಂಗದೀಕ್ಷೆ, ಅಷ್ಟಮಠಗಳ ಉಲ್ಲೇಖಿಸಿ ಲಿಂಗಾಯತ ಮಠಗಳ ಹೆಸರಿಸದ ಚಕ್ರತೀರ್ಥ

ಕುವೆಂಪು ಅವರನ್ನು ನಿಂದಿಸಿದ್ದಕ್ಕೆ ಒಕ್ಕಲಿಗ ಸಮುದಾಯ ಪ್ರಭಾವಿ ಮಠ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮತ್ತು ಒಕ್ಕಲಿಗರ ಅಧಿಕಾರಿ ಮತ್ತು ನೌಕರರ ಸಂಘವು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ ರೋಹಿತ್‌ ಚಕ್ರತೀರ್ಥರನ್ನು ಸಮಿತಿಯಿಂದಲೇ ವಜಾಗೊಳಿಸಬೇಕು ಎಂದು ಪತ್ರ ಬರೆದಿರುವ ಬೆನ್ನಲ್ಲೇ ಬಸವೇಶ್ವರ ಕುರಿತಾಗಿಯೂ ತಪ್ಪು ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಿರುವುದು ಲಿಂಗಾಯತ ಸಮುದಾಯದಿಂದಲೂ ತೀವ್ರ ಟೀಕೆಗೆ ಗುರಿಯಾಗಿತ್ತು.

the fil favicon

SUPPORT THE FILE

Latest News

Related Posts