ಹೊಸಧರ್ಮಗಳ ಉದಯ ಪಠ್ಯ ಕಡಿತ; ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚನೆ

ಬೆಂಗಳೂರು; ವೈದಿಕ ಧರ್ಮದ ದೋಷಗಳಿಂದಾಗಿಯೇ ಹೊಸ ಧರ್ಮಗಳ ಉದಯವಾದವು ಎಂಬ ಸಾರಾಂಶವಿದ್ದ ಆರನೇ ತರಗತಿ ಸಮಾಜ ವಿಜ್ಞಾನ ವಿಷಯದ ಭಾಗ 1 ರ ಪಠ್ಯ ಪುಸ್ತಕದ ನಿರ್ದಿಷ್ಟ ಪಾಠಾಂಶವನ್ನು ಕೈ ಬಿಡುವ ಕುರಿತಂತೆ ಸಂಘ ಪರಿವಾರದ ಹಿನ್ನೆಲೆ ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಿ ಆದೇಶ ಹೊರಡಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.

ಈ ಸಮಿತಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪ್ರಾಂಶುಪಾಲ ಮತ್ತು ಮಿಥಿಕ್‌ ಸೊಸೈಟಿಯ ಸಂಶೋಧಕರೊಬ್ಬರನ್ನು ಸೇರಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಬಿ ಸಿ ನಾಗೇಶ್‌ ಅಧಿಕಾರ ವಹಿಸಿಕೊಂಡ ಅತ್ಯಲ್ಪ ದಿನಗಳಲ್ಲೇ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದೆ ಎಂದು ತಿಳಿದು ಬಂದಿದೆ.

ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥ ಡಾ ರಾಜರಾಮ್‌ ಹೆಗಡೆ, ಹಗರಿಬೊಮ್ಮನಹಳ್ಳಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪ್ರಾಂಶುಪಾಲ, ರಂಗನಾಥ್‌, ಮಿಥಿಕ್‌ ಸೊಸೈಟಿಯ ಸಂಶೋಧಕ ವಿಠಲ್‌ ಪೋತೆದಾರ್‌, ಪ್ರಾಣಿಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ ಎಂ ಜೆ ಸುಂದರರಾವ್‌, ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಜಾನಪದ ಶಾಸ್ತ್ರ ಬುಡಕಟ್ಟು ಅಧ್ಯಯನ ವಿಭಾಗದ ಸಹಾಯ ಪ್ರಾಧ್ಯಾಪಕ ಡಾ ರೋಹಿಣಾಕ್ಷ ಸೇರಿದಂತೆ ಒಟ್ಟು 16 ಮಂದಿಯನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಿದೆ!. ಆದರೆ ಆದೇಶವು (ಸರ್ಕಾರದ ಆದೇಶ ಸಂಖ್ಯೆ; ಇಡಿ 52 ಪಿಎಂಸಿ 2021, ಬೆಂಗಳೂರು) ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ.

ಇನ್ನುಳಿದಂತೆ ಬೆಂಗಳೂರು ವಿವಿಎಸ್‌ ಪ್ರೌಢಶಾಲೆಯ ಸತ್ಯಪ್ರಕಾಶ್‌, ಯಳಂದೂರು ವಿವಕೇಕಾನಂದ ಗಿರಿಜನ ಪ್ರೌಢಶಾಲೆಯ ಸಹ ಶಿಕ್ಷಕ ಬಿ ಜಿ ವಾಸುಕಿ, ಮಂಗಳೂರಿನ ಡಾ ಅನಂತಕೃಷ್ಣ ಭಟ್‌, ಬೆಂಗಳೂರು ನ್ಯಾಷನಲ್‌ ಪ್ರೌಢಶಾಲೆಯ ಸಹ ಶಿಕ್ಷಕ ಮಂಜುನಾಥ್‌, ಸಿದ್ದನ ಹೊಸಹಳ್ಳಿಯ ಸಂದೀಪ್‌ ಕುಮಾರ್‌, ಚಿಕ್ಕಬಳ್ಳಾಪುರದ ಡಯಟ್‌ನ ಹಿರಿಯ ಉಪನ್ಯಾಸಕರಾದ ರಾಧಿ ಪಿ, ಹೆಬ್ಬಾಳದ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಆರ್‌ ಎನ್‌ ವಸಂತ ಸುಜಯ್‌, ಉತ್ತರಹಳ್ಳಿಯ ಪಬ್ಲಿಕ್‌ ಶಾಲೆಯ ಕನ್ನಡ ಭಾಷಾ ಶಿಕ್ಷಕ ಚಿಕ್ಕದೇವೇಗೌಡ, ಮದ್ದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಹ ಶಿಕ್ಷಕರಾದ ಸುಶೀಲಾ, ಕರ್ನಾಟಕ ಪಠ್ಯ ಪುಸ್ತಕ ಸಂಘದ ಹಿರಿಯ ಸಹಾಯಕ ನಿರ್ದೇಶಕ ಡಾ ಎಂ ವಿ ಕೃಷ್ಣಮೂರ್ತಿ ಅವರು ಪರಿಶೀಲನಾ ಸಮಿತಿಯ ಇನ್ನಿತರೆ ಸದಸ್ಯರನ್ನಾಗಿ ನೇಮಿಸಿರುವುದು ತಿಳಿದು ಬಂದಿದೆ.

ಆರನೇ ತರಗತಿ ಸಮಾಜ ವಿಜ್ಞಾನ ಭಾಗ -1 ಪಠ್ಯ ಪುಸ್ತಕದ ಪುಟ ಸಂಖ್ಯೆ 82 ಹಾಗೂ 83ರಲ್ಲಿನ ‘ಹೊಸ ಧರ್ಮಗಳು ಏಕೆ ಉದಯಿಸಿದವು’ ಎಂಬ ಶೀರ್ಷಿಕೆಯಲ್ಲಿನ ಎರಡು ಪ್ಯಾರಾಗಳು ಮತ್ತು ಪುಟ ಸಂಖ್ಯೆ 83ರ ಪ್ರಾರಂಭಿಕ ಆರು ಸಾಲುಗಳನ್ನು 2021-22ನೇ ಶೈಕ್ಷಣಿಕ ಸಾಲಿನಿಂದ ಎಲ್ಲಾ 7 ಮಾಧ್ಯಮಗಳ ಪಠ್ಯ ಪುಸ್ತಕದಿಂದ ಕೈ ಬಿಡಲು ಮತ್ತು 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪರಿಸರ ಅಧ್ಯಯನ ಮತ್ತು ಭಾಷ ವಿಷಯಗಳ ಪಠ್ಯಗಳಲ್ಲಿ ಇರಬಹುದಾದ ಸಂಕೀರ್ಣ ವಿಚಾರಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ವರದಿ ನೀಡಲಿದೆ. ಒಂದು ತಿಂಗಳೊಳಗೆ ವರದಿ ನೀಡಲು ಈ ಸಮಿತಿಗೆ ಆದೇಶಿಸಲಾಗಿದೆ ಎಂದು ಗೊತ್ತಾಗಿದೆ.

6ನೇ ತರಗತಿಯ ಸಮಾಜ ವಿಜ್ಞಾನ ಭಾಗ 1 ರ ಪುಟ ಸಂಖ್ಯೆ 82 ಮತ್ತು 83ರಲ್ಲಿರುವ ಹೊಸ ಧರ್ಮಗಳು ಏಕೆ ಉದಯಿಸಿದವು ಎಂಬ ಪೀಠಿಕಾ ಸ್ವರೂಪದ ಅನಗತ್ಯ ಹಾಗೂ ಆ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯ ಬೋಧನೆಯನ್ನು ಈ ಶೈಕ್ಷಣಿಕ ಸಾಲಿನಿಂದ ಕೈ ಬಿಡಲು ಸುತ್ತೋಲೆ ಹೊರಡಿಸಿತ್ತು.

ಅದೇ ರೀತಿ ಸಾರ್ವಜನಿಕ ಶಿಕ್ಷಣ ಇಲಾಖೆಯ 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಹುದಾದ ವಿಷಯಗಳ ಕುರಿತು ಶಿಕ್ಷಕರು ಹಾಗೂ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಅವರಿಂದ 15 ದಿನಗಳ ಒಳಗೆ ವರದಿ ಪಡೆದು ಸಲ್ಲಿಸಲು ಕ್ರಮ ವಹಿಸಬೇಕು ಎಂದು ಇಲಾಖೆ ಸೂಚಿಸಿತ್ತು. ಅಲ್ಲದೆ ಈ ವರದಿಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ತಜ್ಞರ ಸಮಿತಿಗೆ ಸದಸ್ಯರನ್ನು ಹೆಸರಿಸಲಾಗುವುದು ಎಂದು ಹೇಳಿತ್ತು. ಅದರಂತೆ ಪರಿಶೀಲನಾ ಸಮಿತಿ ರಚಿಸಿರುವ ಸರ್ಕಾರವು ಯಾವುದೇ ಕ್ಷಣದಲ್ಲಿ ಆದೇಶ ಹೊರಡಿಸುವ ಸಾಧ್ಯತೆಗಳಿವೆ.

6ನೇ ತರಗತಿ ಸಮಾಜ ವಿಜ್ಞಾನ ವಿಷಯದ ಹೊಸ ಧರ್ಮಗಳ ಉದಯ ಎನ್ನುವ 7ನೇ ಪಾಠದ 82, 83, 87 ಪುಟದಲ್ಲಿನ ಕೆಲವೊಂದು ಪ್ಯಾರಾಗಳನ್ನು ಕಡಿತ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಪಠ್ಯವನ್ನು ಬೋಧನೆಗೆ (ಕಲಿಕೆಗೆ) ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸದಿರುವಂತೆ ಸೂಚಿಸಿದ್ದು ವಿವಾದಕ್ಕೀಡಾಗಿತ್ತು.

ಪಠ್ಯ ಪುಸ್ತಕದಲ್ಲಿ ಇದ್ದಿದ್ದೇನು?

ಉತ್ತರ ವೇದಗಳ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆಯು ಕುಂಠಿತವಾಯಿತು. ಅಷ್ಟು ಮಾತ್ರವಲ್ಲ ಯಾಗ, ಯಜ್ಞಗಳಲ್ಲಿ ಆಹಾರಧಾನ್ಯ, ಹಾಲು, ತುಪ್ಪಗಳನ್ನು ಹವಿಸ್ಸು ಎಂದು ದಹಿಸಲಾಗುತ್ತಿತ್ತು. ಪರಿಣಾಮವಾಗಿ ಆಹಾರದ ಅಭಾವ ಕೂಡ ಸೃಷ್ಟಿಯಾಯಿತು.

ಇನ್ನೊಂದು ಕಡೆ ವೈದಿಕ ಆಚರಣೆಗಳಾದ ಯಾಗ, ಯಜ್ಞ, ಮೊದಲಾದ ಆಚರಣೆಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಈ ದುಬಾರಿ ಆಚರಣೆಗಳು ಜನ ಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಈ ಆಚರಣೆಗಳನ್ನು ಸಂಸ್ಕೃತ ಮಂತ್ರಗಳ ಮೂಲಕ ನಡೆಸಲಾಗುತ್ತಿತ್ತು. ಸಂಸ್ಕೃತ ಪುರೋಹಿತ ಭಾಷೆಯಾದ್ದರಿಂದ ಅದು ಜನ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ.

ಜನ ಸಾಮಾನ್ಯರ ಭಾಷೆಯಲ್ಲಿಯೇ ಸರಳಮಾರ್ಗಗಳ ಮೂಲಕ ಮುಕ್ತಿ ತೋರುವ ಹೊಸ ಧರ್ಮಗಳನ್ನು ಜನರು ಅಪೇಕ್ಷಿಸುತ್ತಿದ್ದರು. ಮತ್ತೊಂದು ಕಡೆ ಉತ್ತರ ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆ ಆರಂಭವಾಯಿತು. ಇದು ಸಮಾಜದಲ್ಲಿ ತಾರತಮ್ಯಕ್ಕೂ ಎಡೆಮಾಡಿತು.

ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲ್ಪಡುತ್ತಿದ್ದ ಪುರೋಹಿತ ವರ್ಗವು ಹಲವು ಸವಲತ್ತುಗಳನ್ನು ಹೊಂದಿತ್ತು. ಇದೇ ಕಾಲದಲ್ಲಿ ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಹಲವು ಗಣರಾಜ್ಯಗಳು ಉದಯಿಸಿದವು. ಈ ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತನ್ನು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು ಎಂಬ ವಿವರಣೆ ಇತ್ತು.

ಇವೆಲ್ಲವುಗಳ ಪರಿಣಾಮವಾಗಿ 2600 ವರ್ಷಗಳ ಹಿಂದೆ ಗಂಗಾ ಬಯಲಿನಲ್ಲಿ ಸುಮಾರು 62 ಹೊಸ ಧರ್ಮಗಳು ಉದಯಿಸಿದವು. ಅವುಗಳಲ್ಲಿ ಜೈನಧರ್ಮ ಮತ್ತು ಬೌದ್ಧ ಧರ್ಮಗಳು ಪ್ರಮುಖವಾದವು. ಬೌದ್ಧ ಧರ್ಮ ಸ್ಥಾಪಕ ಗೌತಮ ಬುದ್ಧ ಹಾಗೂ ಜೈನ ಧರ್ಮದ ಪ್ರಮುಖ ತೀರ್ಥಂಕರ ವರ್ಧಮಾನ ಮಹಾವೀರ. ಈ ಇಬ್ಬರೂ ಕೂಡ ಗಣರಾಜ್ಯಗಳ ಕುಲಗಳಿಗೆ ಸೇರಿದ ಕ್ಷತ್ರಿಯರು ಎಂದು ಹೇಳಲಾಗಿತ್ತು.

ಇದು ವಿವಾದಕ್ಕೀಡಾಗುತ್ತಿದ್ದಂತೆ ಶಿಕ್ಷಣ ಇಲಾಖೆಯ ಹಿಂದಿನ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಆರನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದ ಭಾಗವಾಗಿರುವ ವೇದ ಕಾಲದ ಸಂಸ್ಕೃತಿ ಕುರಿತು ಪಾಠ ಮಾಡದಂತೆ ಶಿಕ್ಷಕರಿಗೆ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಸ್ಪಷ್ಟ ಕಾರಣವನ್ನು ನೀಡಿರಲಿಲ್ಲ.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಯೋಗವು ಇದಕ್ಕೆ ವಿರೋಧ ವ್ಯಕ್ತಪಡಿಸಿ, “ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಆಘಾತಕಾರಿ ವಿಷಯ. ಅಲ್ಲದೆ, ಇದು ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ” ಎಂದು ತನ್ನ ಮನವಿಯಲ್ಲಿ ದೂರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts