ಒತ್ತುವರಿದಾರರಿಂದಲೇ ನಕಲಿ ದಾಖಲೆ ಸೃಷ್ಟಿ, ಅಸಮರ್ಪಕ ಕಾರ್ಯಾಚರಣೆ; ಚಾಟಿ ಬೀಸಿದರೂ ಎದ್ದೇಳದ ನಿಗಮ

ಬೆಂಗಳೂರು; ರಾಜ್ಯದಲ್ಲಿನ ಸರ್ಕಾರಿ ಜಮೀನುಗಳನ್ನು ಗುರುತಿಸಿ ಒತ್ತುವರಿಯಾಗಿರುವ ಜಮೀನುಗಳನ್ನು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತವು ಸಮರ್ಪಕವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ. ಅಕ್ರಮ ಒತ್ತುವರಿಯನ್ನು ಅಧಿಕಾರಿಗಳೇ ಮುಂದೆ ನಿಂತು ಕಾನೂನುಬದ್ಧಗೊಳಿಸುತ್ತಿದ್ದಾರೆ  ಎಂಬುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ ಒತ್ತುವರಿ ತೆರವು ಸಂಬಂಧ ನೀಡುತ್ತಿರುವ ಜಿ 8 ಸಿ ರಲ್ಲಿನ ಮಾಹಿತಿಯೂ ನಿಖರವಾಗಿಲ್ಲ. ನಕಲಿ ದಾಖಲೆ ಸೃಷ್ಟಿಸುತ್ತಿರುವ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಂದಾಯ ಇಲಾಖೆಯು ಇದೀಗ ನೇರವಾಗಿ ಕರ್ನಾಟಕ ಸಾರ್ವಜನಿಕ ನಿಗಮಗಳ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಚಾಟಿ ಬೀಸಿದೆ. ಆದರೂ ಕೆಪಿಎಲ್‌ಸಿ ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಮೈ ಕೊಡವಿ ಸಮರ್ಪಕವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ.

 

ಸರ್ಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸದಿದ್ದರೇ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಮತ್ತು ಯಾವ ಮುಲಾಜೂ ಇಲ್ಲದೇ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದರೂ ಸಹ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮವು ವಹಿಸಿರುವ ನಿರ್ಲಕ್ಷ್ಯವು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಕೆಪಿಎಲ್‌ಸಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಎರಡು ಪತ್ರಗಳನ್ನು  (ಅ. ಸ. ಪತ್ರ ಸಂಖ್ಯೆ; ಆರ್‍‌ಡಿ 188 ಎಲ್‌ಜಿಬಿ, 268  2023) ಬರೆದಿದ್ದಾರೆ. ಈ ಎರಡೂ  ಪತ್ರಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಜ್ಯದಲ್ಲಿನ ಸರ್ಕಾರಿ ಜಮೀನುಗಳನ್ನು ಒತ್ತುವರಿ, ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆಯಾಗಿರುವ ಪ್ರಕರಣಗಳಲ್ಲಿ ಸರ್ಕಾರಿ ಜಮೀನುಗಳನ್ನು ಸರ್ಕಾರದ ಮರು ವಶಕ್ಕೆ ಪಡೆಯುವ ಪ್ರಕ್ರಿಯೆಯು ಮಂದಗತಿಯಲ್ಲಿದೆ. ಹಾಗೂ ಈ ಸಂಬಂಧ ಕೆಪಿಎಲ್‌ಸಿಗೆ ನೀಡುತ್ತಿರುವ ಜಿ8 ಸಿರಲ್ಲಿನ ಮಾಹಿತಿಯೂ ನಿಖರವಾಗಿಲ್ಲ. ಭೂ ಕಬಳಿಕೆದಾರರು ಹಾಗೂ ಇಂತಹ ಭೂ ಕಬಳಿಕೆದಾರರರಿಗೆ ಪ್ರೇರಣೆ ನೀಡಿದವರ ವಿರುದ್ಧ ಕಠಿಣ ಕ್ರಮಗಳಾಗದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುತ್ತದೆ,’ ಎಂದು 2023ರ ಸೆ.26ರಂದು ಬರೆದ ಪತ್ರದಲ್ಲಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಎಚ್ಚರಿಕೆ ಸಂದೇಶ ರವಾನಿಸಿರುವುದು ಗೊತ್ತಾಗಿದೆ.

 

 

ಪತ್ರದಲ್ಲೇನಿದೆ?

 

ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿ, ಅಧಿಕಾರಿಗಳೊಂದಿಗೆ 2020ರ ಜನವರಿ 20ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ದೇಶನ ನೀಡಲಾಗಿತ್ತು. ಆದರೂ ಸಮರ್ಪಕವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸದಿರುವುದು ಕಂಡು ಬಂದಿರುತ್ತದೆ. ಇದನ್ನು ಕಂದಾಯ ಸಚಿವರು ಗಂಭೀರವಾಗಿ ಪರಿಗಣಿಸಿರುತ್ತಾರೆ.

 

ರಾಜ್ಯದಲ್ಲಿನ ಸರ್ಕಾರಿ ಜಮೀನುಗಳನ್ನು ಗುರುತಿಸಿ ಒತ್ತುವರಿಯಾಗಿರುವ ಜಮೀನುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸಾರ್ವಜನಿಕ ಜಮೀನು ನಿಗಮವನ್ನು ಸ್ಥಾಪಿಸಲಾಗಿರುತ್ತದೆ. ಕೆಪಿಎಲ್‌ಸಿಗೆ ಒತ್ತುವರಿ ತೆರವು ಸಂಬಂಧ ನೀಡುತ್ತಿರುವ ಜಿ 8 ಸಿ ರಲ್ಲಿನ ಮಾಹಿತಿಯು ನಿಖರವಾಗಿಲ್ಲ. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುತ್ತದೆ.

 

ಈ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕುರಿತಾಗಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಬೇಕು.

 

ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿದ ಪ್ರಕರಣಗಳಲ್ಲಿ ಒತ್ತುವರಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಅಕ್ರಮ ಒತ್ತುವರಿಯನ್ನು ಕಾನೂನು ಬದ್ಧಗೊಳಿಸುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿರುವ ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಬೇಕು. ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಮೀನಿನ ಲ್ಯಾಂಡ್‌ ಆಡಿಟ್‌ ಮಾಡುವ ಮೂಲಕ ಒತ್ತುವರಿ ತೆರವು ಪ್ರಕರಣಗಳನ್ನು ಖುದ್ದು ಮೇಲ್ವಿಚಾರಣೆ ನಡೆಸಬೇಕು ಎಂದು ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಚಾಟಿ ಬೀಸಿರುವುದು ಪತ್ರದಿಂದ ಗೊತ್ತಾಗಿದೆ.

 

‘ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಬೇಕು. ಸರ್ಕಾರಿ ಜಮೀನಿನ ಲ್ಯಾಂಡ್‌ ಆಡಿಟಿಂಗ್‌ ಮಾಡಿ ಒಂದು ಕ್ರಿಯಾ ಯೋಜನೆಯನ್ನು 15 ದಿನದೊಳಗೆ ಸರ್ಕಾರಕ್ಕ ಸಲ್ಲಿಸಬೇಕು. ಈ ಸಂಬಂಧ ನಡೆಯಲಿರುವ ಮುಂದಿನ ಸಭೆಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು,’ ಎಂದು ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಪತ್ರದಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಅದೇ ರೀತಿ ರಾಜ್ಯದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳ ನಿಖರ ಮಾಹಿತಿಯನ್ನು ಕೆಪಿಎಲ್‌ಸಿಎಗೆ ನೀಡಬೇಕಕು. ಈ ಮಾಹಿತಿಯಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿ, ನೌಕರರ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತುಕ್ರಮ ಜರುಗಿಸಬೇಕು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿದ ಪ್ರಕರಣಗಳಲ್ಲಿ ಒತ್ತುವರಿದಾರರು ನಕಲಿ ದಾಖಲೆ ಸೃಷ್ಟಿಸುತ್ತಿದ್ದಾರೆ. ಅಕ್ರಮ ಒತ್ತುವರಿಯನ್ನು ಕಾನೂನುಬದ್ಧಗೊಳಿಸುತ್ತಿರುವುದರ ಕುರಿತು ಜಿಲ್ಲಾಡಳಿತವು ಸೂಕ್ಷ್ಮವಾಗಿ ಪರಿಶೀಲಿಸಬೇಕು. ನಕಲಿ ದಾಖಲೆ ಸೃಷ್ಟಿಸಿರುವ ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿ, ನೌಕರರ ವಿರುದ್ಧ ಕಾಲಮಿತಿಯೊಳಗೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ಒತ್ತುವರಿಯಾದ ಹಾಗೂ ಒತ್ತುವರಿ ತೆರವುಗೊಳಿಸಿದ ಕುರಿತು ನಿಖರವಾದ ವಿವರ, ಮಾಹಿತಿಗಳನ್ನು ಒದಗಿಸುವಲ್ಲಿ ವಿಫಲವಾದಲ್ಲಿ ಅಥವಾ ತಪ್ಪಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದೂ ಸೂಚಿಸಿದ್ದಾರೆ.

 

 

ಜಿಲ್ಲಾಧಿಕಾರಿಗಳಿಂದ ಬಂಧಿರುವ ಮಾಹಿತಿ ಅನ್ವಯ ಒಟ್ಟು 2022ರ ಜುಲೈ 31ರ ಅಂತ್ಯಕ್ಕೆ 14,21, 361 ಎಕರೆ ನೇರ ಒತ್ತುವರಿಯಾಗಿರುವುದನ್ನು ಗುರುತಿಸಲಾಗಿತ್ತು. ನಮೂನೆ 50/53ರ ಅಡಿಯಲ್ಲಿ 9,92,802 ಎಕರೆ ವಿಸ್ತೀರ್ಣದ ಜಮೀನು ಒತ್ತುವರಿಯಾಗಿತ್ತು. 26,844 ಪ್ರಕರಣಗಳು ನ್ಯಾಯಾಲಯದಲ್ಲಿವಿದೆ. 2022 ಜುಲೈ 31ರ ಅಂತ್ಯಕ್ಕೆ 2,70,998 ಎಕರೆ ವಿಸ್ತೀರ್ಣದ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿದೆ. ಇನ್ನೂ 1,30,712 ಎಕರೆ ವಿಸ್ತೀರ್ಣದ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇತ್ತು.

 

2023ರ ಏಪ್ರಿಲ್‌ 30ರ ಅಂತ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆ 14,62,639 ಎಕರೆ ಒತ್ತುವರಿಯಾಗಿದೆ. ಈ ಪೈಕಿ 2,72,677 ಎಕರೆ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸಿದೆ. ಇನ್ನೂ12,6,247 ಎಕರೆ ಜಮೀನನ್ನು ಒತ್ತುವರಿ ತೆರವಿನಿಂದ ಮುಕ್ತಗೊಳಿಸಲು ಬಾಕಿ ಇರುವುದು ಗೊತ್ತಾಗಿದೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 36,229 ಎಕರೆ ಒತ್ತುವರಿ ಪೈಕಿ 11,779 ಎಕರೆ ತೆರವುಗೊಳಿಸಿದ್ದು ಒತ್ತುವರಿ ತೆರವಿಗೆ ಇನ್ನು 830 ಎಕರೆ ಬಾಕಿ ಇದೆ. ಅದೇ ರೀತಿ ಬೆಂಗಳೂರು ನಗರ ಜಿಲ್ಲೆಯಲ್ಲಿ 38,946 ಎಕರೆ ಒತ್ತುವರಿ ಪೈಕಿ 16,478 ಎಕರೆ ತೆರವುಗೊಳಿಸಿದ್ದು 269 ಎಕರೆ ತೆರವುಗೊಳಿಸಲು ಬಾಕಿ ಇರುವುದು ಗೊತ್ತಾಗಿದೆ.

 

ಬಳ್ಳಾರಿಯಲ್ಲಿ 53,089 ಎಕರೆ ಒತ್ತುವರಿ ಪೈಕಿ 45,310 ಎಕರೆ ತೆರವುಗೊಳಿಸಿದ್ದು ಇನ್ನೂ 1,925 ಎಕರೆ ತೆರವಿಗೆ ಬಾಕಿ ಇದೆ. ಚಿಕ್ಕಮಗಳೂರಿನಲ್ಲಿ 1,45,111 ಎಕರೆ ಒತ್ತುವರಿ ಪೈಕಿ ಕೇವಲ 7,974 ಎಕರೆ ಮಾತ್ರ ತೆರವುಗೊಳಿಸಿದ್ದು 34,114 ಎಕರೆಯನ್ನು ಒತ್ತುವರಿಯಿಂದ ಮುಕ್ತಗೊಳಿಸಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2, 06, 441 ಎಕರೆ ಒತ್ತುವರಿ ಪೈಕಿ 9,800 ಎಕರೆಯನ್ನು ಒತ್ತುವರಿಯಿಂದ ಮುಕ್ತಗೊಳಿಸಿದೆ.

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 61,995 ಎಕರೆ ಒತ್ತುವರಿ ಪೈಕಿ 8,578 ಎಕರೆ ತೆರವುಗೊಳಿಸಿದೆ. ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯಲ್ಲಿ 97, 246 ಎಕರೆ ಒತ್ತುವರಿ ಪೈಕಿ 1,968 ಎಕರೆ ಮಾತ್ರ ಒತ್ತುವರಿಯಿಂದ ಮುಕ್ತಗೊಳಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ 13,379 ಎಕರೆ ಪೈಕಿ 4,920 ಎಕರೆಯನ್ನು ಒತ್ತುವರಿಯಿಂದ ತೆರವುಗೊಳಿಸಿದೆ. ಹಾಸನ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ 74,737 ಎಕರೆ ಪೈಕಿ 3,323 ಎಕರೆ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸಿದೆ. ಇನ್ನೂ 28,243 ಎಕರೆ ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇರುವುದು ತಿಳಿದು ಬಂದಿದೆ.

 

ಶಿವಮೊಗ್ಗ ಜಿಲ್ಲೆಯಲ್ಲಿ 1,44,063 ಎಕರೆ ಒತ್ತುವರಿ ಪೈಕಿ 3,974 ಎಕರೆ ಮಾತ್ರ ತೆರವುಗೊಳಿಸಿದೆ. ರಾಮನಗರದಲ್ಲಿ 38,036 ಎಕರೆ ಒತ್ತುವರಿಯಾಗಿದ್ದು ಈ ಪೈಕಿ 2,866 ಎಕರೆ ಮಾತ್ರ ತೆರವುಗೊಳಿಸಿದೆ.
ಬೆಂಗಳೂರು ನಗರ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿಜಮೀನು ಸಂರಕ್ಷಿಸಲು ಮತ್ತು ಅವಶ್ಯವಿದ್ದಲ್ಲಿ ಅಭಿವೃದ್ಧಿಪಡಿಸಲು ಮತ್ತು ಅವುಗಳನ್ನು ಸ್ಪರ್ಧಾತ್ಮಕವಾಗಿ ವಿಲೇ ಮಾಡಿ ಸಂಪನ್ಮೂಲ ಸಂಗ್ರಹಿಸಲು, ಹಂಚಿಕೆ ಮಾಡಲು 2008ರ ಡಿಸೆಂಬರ್‍‌ 1ರಿಂದಲೇ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮವು ನೋಂದಾಯಿತವಾಗಿ ಕಾರ್ಯನಿರ್ವಹಿಸುತ್ತಿದೆ.

 

ಭೂ ಕಬಳಿಕೆ ಪ್ರಕರಣಗಳಿಗೆ ಸಿಗದ ತಾರ್ಕಿಕ ಅಂತ್ಯ; ಸರ್ಕಾರ ನೀಡಿದ್ದ ಭರವಸೆಗಳನ್ನೇ ಮುಕ್ತಾಯಗೊಳಿಸಿದ ಸಮಿತಿ

 

ಸರ್ಕಾರಿ/ಶಾಸನಾತ್ಮಕ ಸಂಸ್ಥೆಗಿಗೆ ಸೇರಿದ ಜಮೀನುಗಳ ವ್ಯವಹರಣೆ, ಅಭಿವೃದ್ಧಿಪಡಿಸಿ ಉಪಯುಕ್ತವಾಗಿ ಬಳಸುವುದು ಇದರ ಮೂಲ ಉದ್ದೇಶ. ಅಲ್ಲದೇ ಸರ್ಕಾರಿ ಜಮೀನುಗಳ ದತ್ತಾಂಶ ಕ್ರೋಢೀಕರಣ, ಒತ್ತುವರಿಯಿಂದ ಹಿಂಪಡೆದ ಜಮೀನುಗಳನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡುವುದು, ಒತ್ತುವರಿಯಾಗದಂತೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಸಹ ಇದರ ಉದ್ದೇಶವಾಗಿದೆ.

the fil favicon

SUPPORT THE FILE

Latest News

Related Posts