ಎಂಎಸ್‌ಐಎಲ್‌ ಟೆಂಡರ್‍‌ನಲ್ಲಿ ಅಕ್ರಮ; ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆಗೆ ಆದೇಶ

ಬೆಂಗಳೂರು; ಮೈಸೂರ್‍‌ ಇಂಟರ್‍‌ ನ್ಯಾಷನಲ್‌ ಲಿಮಿಟೆಡ್‌ನ ಪ್ರವಾಸೋದ್ಯಮ  ವ್ಯವಹಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಡೆದಿದ್ದ ಟೆಂಡರ್‍‌ ಪ್ರಕ್ರಿಯೆಯೂ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರವು ಆದೇಶಿಸಿದೆ.

 

ಎಂಎಸ್‌ಐಎಲ್‌ನಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳ ಭಾಗವಾಗಿರುವ ಟಿಕೆಟ್‌ ಪ್ಯಾಕೇಜ್‌, ಮಾರಾಟ ಮತ್ತ ಫೋರೆಕ್ಸ್‌ ಇತ್ಯಾದಿಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳ ಶಾಖೆಗಳಲ್ಲಿ ನಿರ್ವಹಿಸಲು ಕರೆದಿದ್ದ ಟೆಂಡರ್‍‌ನಲ್ಲಿ ಅಕ್ರಮಗಳು ನಡೆದಿದ್ದವು ಎಂದು ಹಲವು ದೂರುಗಳು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸಲ್ಲಿಕೆಯಾಗಿದ್ದವು.

 

ಈ ದೂರನ್ನಾಧರಿಸಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಪಿ ಸತ್ಯಭಾಮ ಅವರ ನೇತೃತ್ವದಲ್ಲಿ ನಡೆದಿದ್ದ ಪ್ರಾಥಮಿಕ ತನಿಖೆಯು ಅಕ್ರಮಗಳು ನಡೆದಿವೆ ಎಂದು ಸಾಬೀತುಪಡಿಸಿತ್ತು. ಇದರ ಮುಂದುವರೆದ ತನಿಖೆಯನ್ನು ಇದೀಗ ರಾಜ್ಯ ಸರ್ಕಾರವು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ನಡೆಸಲು 2023ರ ಸೆ.21ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಾಥಮಿಕ ತನಿಖಾ ವರದಿ ಆಧರಿಸಿ ಮುಂದಿನ ತನಿಖೆ ನಡೆಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ ವಿ ಪ್ರಕಾಶ್‌ ಎಂಬುವರನ್ನು ನೇಮಿಸಿದೆ.

 

ಮೈಸೂರ್‍‌ ಸೇಲ್ಸ್‌ ಇಂಟರ್‍‌ ನ್ಯಾಷನಲ್‌ ಲಿಮಿಟೆಡ್‌ನಿಂದ ನಡೆಯುತ್ತಿರುವ ಪ್ರವಾಸೋದ್ಯಮ ಚಟುವಟಿಕೆಗಳಾದ ಟಿಕೆಟಿಂಗ್‌ ಪ್ಯಾಕೇಜ್‌, ಮಾರಾಟ ಮತ್ತು ಫೋರೆಕ್ಸ್‌ ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ನಿಶಿ ಫೋರೆಕ್ಸ್‌ ಅಂಡ್‌ ಲೆಸ್ಯೂರ್‍‌ ಪ್ರೈವೈಟ್‌ ಲಿಮಿಟೆಡ್‌ಗೆ ವಹಿಸಲಾಗಿತ್ತು. ಈ ಕಂಪನಿಯು 2022ರ ಮೇ 21ರಿಂದ ಜಾರಿಗೆ ಬರುವಂತೆ ರಾಜ್ಯದ ಹಾಗೂ ರಾಜ್ಯದ ಹೊರಗಿನ ಶಾಖೆಗಳಲ್ಲಿ ಕಾರ್ಯನಿರ್ವಹಿಸಬೇಕಿತ್ತು.
ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ನಡೆದಿದ್ದ ಟೆಂಡರ್‍‌ನಲ್ಲಿ ಅಕ್ರಮಗಳು ನಡೆದಿವೆ ಎಂದು ಮಂಡಳಿಯ ನಿರ್ದೇಶಕರಾದ ವೆಂಕಟೇಶ್‌ ನಾಯ್ಡು ಮತ್ತು ರವೀಂದ್ರ ಹಾಗೂ ಮಾಜಿ ನಿರ್ದೇಶಕರಾದ ಎಸ್‌ ಆರ್‍‌ ಸನತ್‌ಕುಮಾರ್‍‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.

 

ಈ ಅಕ್ರಮದ ಕುರಿತು ಸತ್ಯಾಸತ್ಯತೆ ತಿಳಿಯಲು 2023ರ ಮಾರ್ಚ್‌ 24 ಮತ್ತು ಜೂನ್‌ 7ರಂದು ತನಿಖೆ ನಡೆಸಲು ಆದೇಶ ಹೊರಡಿಸಲಾಗಿತ್ತು. ಅದರಂತೆ ಪ್ರಾಥಮಿಕ ತನಿಖೆ ನಡೆಸಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಪಿ ಸತ್ಯಭಾಮ ಅವರು ತನಿಖೆ ನಡೆಸಿ 2023ರ ಜೂನ್‌ 28ರಂದು ತನಿಖಾ ವರದಿ ಸಲ್ಲಿಸಿದ್ದರು.

 

‘ಎಂಎಸ್‌ಐಎಲ್‌ ಸಂಸ್ಥೆಯು ಪ್ರವಾಸ ಮತ್ತು ಪ್ರಯಾಣ ಅಭಿವೃದ್ಧಿಗಾಗಿ ನಡೆಸಿದ್ದ ಟೆಂಡರ್‍‌ ಹಾಗೂ ನಿಶಿ ಫೋರೆಕ್ಸ್‌ ಲೆಸ್ಯರ್‍‌ ಪ್ರೈವೈಟ್‌ ಲಿಮಿಟೆಡ್‌ಗೆ ನೀಡಿದ್ದ ಟೆಂಡರ್‍‌ನಲ್ಲಿ ಕೆಟಿಪಿಪಿ ನಿಯಮಗಳು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಮತ್ತು ನಿಸ್ಸಂಶಯವಾಗಿ ಕಂಡು ಬರುತ್ತದೆ,’ ಎಂದು ಸತ್ಯಭಾಮ ಅವರು ತಮ್ಮ ವಿಚಾರಣೆ ವರದಿಯಲ್ಲಿ ಹೇಳಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.
ಈ ಕಂಪನಿಯು ವಿದೇಶಿ ವಿನಿಮಯ, ಹಣ ವರ್ಗಾವಣೆ, ಪಾಸ್‌ಪೋರ್ಟ್‌ ಮತ್ತು ವಿಮೆ ಸೇವೆಗಳನ್ನು ಒದಗಿಸುತ್ತಿದೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts