ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ; ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದ ಕಿತ್ತೊಗೆದ ಸಮಿತಿ

ಬೆಂಗಳೂರು; ಭಾರತದ ನಾಗರೀಕತೆಗಳು ಎಂಬ ಅಧ್ಯಾಯದಲ್ಲಿ ಸಿಂಧೂ ನಾಗರೀಕತೆ ಶೀರ್ಷಿಕೆಗೆ ಸರಸ್ವತಿ ಹೆಸರನ್ನೂ ಸೇರಿಸಿ ಸಿಂಧೂ-ಸರಸ್ವತಿ ನಾಗರೀಕತೆ ಎಂದು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಪರಿಷ್ಕರಿಸಲಾಗಿದೆ. ಅಲ್ಲದೆ ಬೌದ್ಧ, ಜೈನ ದರ್ಶನಗಳು ಹೊಸ ಮತಗಳ ಉದಯಕ್ಕೆ ಕಾರಣಗಳು ಎಂಬುದು ನಿರಾಧಾರ ಎಂದಿರುವ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯು ಈ ಭಾಗವನ್ನು ಕೈ ಬಿಟ್ಟಿದೆ.

 

ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಿಂಧೂ-ಸರಸ್ವತಿ ಎಂದು ಹೊಸ ಸೇರ್ಪಡೆ ಮಾಡಿದೆ.

 

ಅಲ್ಲದೆ ಮುಂದೊಂದು ದಿನ ಪರಿಷ್ಕರಣೆ ಅಥವಾ ಪುನರಾಚನೆ ಮಾಡುವುದಾದರೆ ಎಲ್ಲ ಪಠ್ಯಗಳನ್ನು ಹೊಸ ವಿನ್ಯಾಸದಲ್ಲಿ ಬರೆಯಬೇಕಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಈ ವರದಿಯನ್ನು ಸಚಿವ ಬಿ ಸಿ ನಾಗೇಶ್‌ ಅವರು ಒಪ್ಪಿಕೊಂಡಿದ್ದಾರೆ.  ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಹಿಂದಿನ ಪಠ್ಯಪುಸ್ತಕದಲ್ಲಿ ಸನಾತನಧರ್ಮದ ಮಾಹಿತಿ ಇರಲಿಲ್ಲ. ಈಗ ಅದನ್ನೂ ಸೇರಿಸಿರುವ ಸಮಿತಿಯು ವೈದಿಕ ಕಾಲ ಎಂಬ ಅಧ್ಯಾಯದ ಹೊರತು ಇದನ್ನು ಸೇರಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

‘ಸಮಾಜ ವಿಜ್ಞಾನ ಪಠ್ಯದಲ್ಲಿ ವೈದಿಕ ಕಾಲದ ಬಗ್ಗೆ ತಪ್ಪು ಮಾಹಿತಿಗಳಿದ್ದವು. ನಿರ್ದಿಷ್ಟ ಸಮುದಾಯಗಳ ಅವಹೇಳನ ಮಾಡಲಾಗಿತ್ತು. ಭಾರತದ ಬಗ್ಗೆ ಕೀಳು ಅಭಿಪ್ರಾಯಗಳು ಬರುವಂತೆ ಪಠ್ಯಗಳ ರಚನೆಯಾಗಿತ್ತು. ಮಾತೃಭೂಮಿ, ಭಾರತೀಯ ಎಂಬಂಥ ಪದಗಳ ಬದಲಾವಣೆಯಾಗಿತ್ತು. ಕಾಲಾನುಕ್ರಮಣಿಕೆಯಲ್ಲಿ ಇಲ್ಲದ ಪಠ್ಯಗಳಿದ್ದವು. ನೂರಾರು ಕಾಗುಣಿತ ತಪ್ಪುಗಳಿದ್ದವು,’ ಎಂದು ಸಮಿತಿಯು ಹೇಳಿರುವುದು ವರದಿಯಿಂದ ಗೊತ್ತಾಗಿದೆ.

 

ರೋಹಿತ್‌ ಚಕ್ರತೀರ್ಥ ಸಮಿತಿ ನೀಡಿರುವ ವರದಿ ಪ್ರತಿ

 

ಪರಿಷ್ಕರಣೆಯಲ್ಲೇನಾಗಿದೆ?

 

ಆಕ್ಷೇಪಾರ್ಹ ಭಾಗಗಳಿಗೆ ಸೂಕ್ತ ಪರಿಷ್ಕರಣೆ ಮಾಡಲಾಗಿದೆಯಲ್ಲದೆ ಭಾರತದ ಸಂಸ್ಕೃತಿ, ಪರಂಪರೆಗಳಿಗೆ ಸೂಕ್ತ ಪ್ರಾತಿನಿಧ್ಯ, ಖಚಿತ ಮತ್ತು ಅಧಿಕೃತ ಇತಿಹಾಸ ಅಂಶಗಳ ಸೇರ್ಪಡೆ, ಸಂದಿಗ್ಧತೆ, ಅಸ್ಪಷ್ಟತೆಗಳ ನಿವಾರಣೆ, ಇತಿಹಾಸ ಪಠ್ಯದ ಕಾಲಾನುಕ್ರಮದ ಜೋಡಣೆ, ಅನಗತ್ಯ, ಪುನರಾವರ್ತಿತ ಭಾಗಗಳನ್ನು ತೆಗೆದು ಹಾಕಿರುವುದು ವರದಿಯಿಂದ ತಿಳಿದು ಬಂದಿದೆ.

 

ಹಾಗೆಯೇ ಸಮಾಜ ವಿಜ್ಞಾನದ ವಿಷಯಾಂಶಗಳಲ್ಲಿ ತಂದಿರುವ ಬದಲಾವಣೆಗಳಿಗೆ ಕಾರಣಗಳನ್ನೂ ಸಮಿತಿಯು ವರದಿಯಲ್ಲಿ ವಿವರಿಸಿದೆ. 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ಭಾಗವನ್ನು ಸಂಕ್ಷಿಪ್ತಗೊಳಿಸಿ ಸಮಗ್ರವಾಗಿ ಕರ್ನಾಟಕ ಮಾಹಿತಿ ಸಿಗುವಂತೆ ಪರಿಷ್ಕರಿಸಿದೆ. ಭಾರತೀಯ ವೈಚಾರಿಕತೆ ಹಾಗೂ ಭಕ್ತಿಪಂಥ, ಚೈತನ್ಯ ಮಹಾಪ್ರಭು, ಶಂಕರದೇವ, ಮಾಧವದೇವ ಮುಂತಾದ ಶರಣರ ಮಾಹಿತಿಯನ್ನು ಹೊಸದಾಗಿ ಸೇರಿಸಿದೆ.

 

7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಮಂಗೋಲರ ರಾಜ್ಯ ವಿಸ್ತರಣೆ ಮತ್ತು ಕ್ರುಸೇಡ್‌ ಯುದ್ಧಗಳ ಮಾಹಿತಿಯನ್ನು ಮರು ಸೇರ್ಪಡೆ ಮಾಡಿದೆ. ಭಾರತಕ್ಕೆ ಐರೋಪ್ಯರ ಆಗಮನ ಭಾಗದಲ್ಲಿ ಮಲಬಾರ್‌ ಪ್ರಾಂತ್ಯದಲ್ಲಿ ಡಚ್ಚರ ವಸಾಹತು, ಮಾರ್ತಾಂಡವರ್ಮನ ಯುದ್ಧಗಳು, ಡಚ್ಚರ ಅವನತಿಯನ್ನು ಹೊಸದಾಗಿ ಸೇರ್ಪಡೆಗೊಳಿಸಿದೆ.

 

ಮೈಸೂರು ಮತ್ತು ಇತರ ಸಂಸ್ಥಾನಗಳ ಭಾಗದಲ್ಲಿ ಮೈಸೂರು ರಾಜ್ಯ, ಕೆಳದಿ, ಚಿತ್ರದುರ್ಗ, ಯಲಹಂಕ, ಕೊಡಗು, ಚಿತ್ತೂರು, ತುಳುನಾಡು, ಹೈದ್ರಾಬಾದ್‌ ಕರ್ನಾಟಕ ರಾಜವಂಶಗಳನ್ನು ಪರಿಚಯಿಸಿದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ತೆಗೆದುಹಾಕಲಾಗಿದೆ. ಅದೇ ರೀತಿ ಸ್ವಾತಂತ್ರ್ಯ ಚಳವಳಿ ಹಾಗೂ ಗಾಂಧಿಯುಗ ಎಂಬ ಎರಡು ಭಾಗಗಳನ್ನು ಸೇರಿಸಿದೆ. ಕ್ರಾಂತಿಕಾರಿಗಳ ವಿಚಾರಗಳನ್ನು ವಿಸ್ತರಿಸಲಾಗಿದೆ. ಅನೇಕ ಹೊಸ ವಿಚಾರಗಳನ್ನು ಔಚಿತ್ಯಕ್ಕನುಗುಣವಾಗಿ ಸೇರಿಸಲಾಗಿದೆ ಎಂಬ ಅಂಶವು ವರದಿಯಿಂದ ಗೊತ್ತಾಗಿದೆ.

 

8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಸಿಂಧೂ ಸರಸ್ವತಿ ನಾಗರೀಕತೆ ಎಂದು ಹೊಸದಾಗಿ ಸೇರ್ಪಡೆ ಮಾಡಿದೆ. ಹೊಸದಾಗಿ ಸರಸ್ವತಿ ಎಂದು ಸೇರ್ಪಡೆ ಮಾಡಿರುವುದಕ್ಕೆ ಸಂಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

‘ಸಿಂಧೂ ಬಯಲಿನ ನಾಗರಿಕತೆ ಅಥವಾ ಹರಪ್ಪಾ ನಾಗರಿಕತೆ ಎಂದು ನಾವೆಲ್ಲಾ ಓದಿಕೊಂಡು ಬಂದಿರುವ ನಾಗರಿಕತೆಗೆ ಹೊಸದಾಗಿ ‘ಸರಸ್ವತಿ’ ಹೆಸರು ಸೇರ್ಪಡೆ ಮಾಡಿರುವುದು ಆರೆಸ್ಸೆಸ್ ಪ್ರಣೀತ ಕಾಗಕ್ಕ ಗುಬ್ಬಕ್ಕನ ಕತೆಯನ್ನು ಇತಿಹಾಸವಾಗಿ ಅಧಿಕೃತಗೊಳಿಸುವ ಪ್ರಯತ್ನದ ಭಾಗವಾಗಿದೆ. ಅಸಲಿಗೆ ಸರಸ್ವತಿ ನದಿ ಎಂಬುದು ಹರಪ್ಪಾ ನಾಗರಿಕತೆಯ ಪ್ರದೇಶದಲ್ಲಿ ಇತ್ತು ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ರುಗ್ವೇದದಲ್ಲಿ ಎರಡು ಬಗೆಯಲ್ಲಿ ಪ್ರಸ್ತಾಪಗೊಳ್ಳುವ ಸರಸ್ವತಿ ಎಂಬುದು ಇಂದಿನ ಅಫ್ಘಾನಿಸ್ತಾನದ ಅರ್ಗಂಡಾಬ್ ಇಲ್ಲವೇ ಹೆಲ್ಮಂಡ್ ನದಿಗಳಿಗೆ ಇದ್ದ ಪ್ರಾಚೀನ ಹೆಸರಾದ ಹರಕ್ಸೈತಿ ಯ ಅಪಬ್ರಂಶವಾಗಿ ಸರಸ್ವತಿ ಎಂಬುದಾಗಿದೆ ಎಂಬುದನ್ನು ಇತಿಹಾಸಕಾರರು ಖಚಿತಪಡಿಸಿದ್ದಾರೆ.   ಅದೇ ರುಗ್ವೇದದಲ್ಲಿ ಮತ್ತೊಂದು ಕಡೆ ಸರಯೂ ಎಂದು ಉಲ್ಲೇಖವಾಗುವುದು ಗಗರ್ ಹಾಕ್ರಾ ನದಿಯ ಒಂದು ಸಣ್ಣ ಉಪನದಿಯಾಗಿತ್ತು, ಆದರೆ ಅದು ಇಂದು ಅಸ್ತಿತ್ವದಲ್ಲಿ ಇಲ್ಲ. ದೊಡ್ಡ ನಾಗರಿಕತೆಯನ್ನು ಪೋಶಿಸುವ ಯಾವ ಲಕ್ಷಣಗಳೂ ಅಲ್ಲಿರಲಿಲ್ಲ,’ ಎನ್ನುತ್ತಾರೆ ಪತ್ರಕರ್ತ ಹಾಗೂ ಸಂಶೋಧಕ ಹರ್ಷಕುಮಾರ್‌ ಕುಗ್ವೆ

 

ಅದೇ ರೀತಿ ‘ ಇತ್ತೀಚೆಗೆ ರಾಖಿಗಡಿ ಡಿ ಎನ್ ಎ ಸಂಶೋಧನೆಗಳು ಯಾವುದೇ ಅನುಮಾನಕ್ಕೆ ಎಡೆ ಇಲ್ಲದಂತೆ ವೇದಗಳನ್ನು ರಚಿಸಿದವರಿಗೂ ಸಿಂಧೂ ಅಥವಾ ಹರಪ್ಪಾ ನಾಗರಿಕತೆಗೂ ಯಾವುದೇ ಸಂಬಂಧವಿರಲಿಲ್ಲ ಎಂದು ಸಾಬೀತು ಮಾಡಿವೆ. ಇದರಿಂದ ಗಾಬರಿ ಬಿದ್ದಿರುವ ಆರೆಸ್ಸೆಸ್ ಈಗ ಈ ‘ಸರಸ್ವತಿ’ ನಾಗರಿಕತೆಯ ಕಟ್ಟು ಕತೆ ಪ್ರಚಾರ ಮಾಡುತ್ತಿದೆ. ರೋಹಿತ್ ಚಕ್ರತೀರ್ಥನಂತಹ ಯಾವುದೇ ಕನಿಷ್ಟ ಅರ್ಹತೆ ಇಲ್ಲದೇ ಇರುವ ಆರೆಸ್ಸೆಸ್ ಕಾರ್ಯಕರ್ತನಿಂದ ಇಂತಹ ಅವಿವೇಕತನವನ್ನಲ್ಲದೇ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದೂ ಪ್ರಶ್ನಿಸುತ್ತಾರೆ ಹರ್ಷಕುಮಾರ್‌ ಕುಗ್ವೆ.

 

9ನೇ ತರಗತಿಯ ಪಠ್ಯದಲ್ಲಿ ಪಾಶ್ಚಾತ್ಯ ರಿಲೀಜನ್‌ ಭಾಗದಲ್ಲಿ ಯೆಹೂದಿ, ಪಾರ್ಸಿ ರಿಲೀಜನ್‌ಗಳ ಮಾಹಿತಿ ಸೇರಿಸಿದೆ. ಆಧುನಿಕ ಯೋರೋಪ್‌ನ ಎರಡು ಅಧ್ಯಾಯಗಳನ್ನು ಜೋಡಿಸಿದೆ. 6ರಿಂದ 14ನೇ ಶತಮಾನದವರೆಗಿನ ಭಾರತ, ಕಾಶ್ಮೀರ, ಅಹೋಮ್‌ ರಾಜವಂಶಗಳ ಮಾಹಿತಿ, ಹಲವು ಭಕ್ತಿಪಂಥದ ವ್ಯಕ್ತಿಗಳ ಮಾಹಿತಿಯನ್ನು ಸೇರಿಸಿದೆ.

 

 

10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕರ್ನಾಟಕದಲ್ಲಿ ಬ್ರಿಟೀಷ್‌ ಆಳ್ವಿಕೆಗೆ ಪ್ರತಿರೋಧಗಳು, ಮೈಸೂರಿನ ಒಡೆಯರ್‌ ರಾಜವಂಶದ ಬಗ್ಗೆ ಹೆಚ್ಚುವರಿ ಮಾಹಿತಿ, ಮೈಸೂರು ಲ್ಯಾನ್ಸರ್‌ ಮೊದಲಾದ ಭಾರೀಐರ ಸಾಹಸದ ಕಥೆಗಳನ್ನು ಸೇರ್ಪಡೆ ಮಾಡಿದೆ. ಮಹಾಯುದ್ಧಗಳು ಹಾಗೂ ಭಾರತದ ಪಾತ್ರ ಭಾಗದಲ್ಲಿ ಎರಡು ಮಹಾಯುದ್ಧಗಳಲ್ಲಿ ಭಾರತವು ಹೇಗೆ ಭಾಗವಹಿಸಿತು, ಭಾರತೀಯ ಯೋಧರು ಎಲ್ಲೆಲ್ಲಿ ಹೋರಾಡಿದರು ಎಂಬ ವಿವರಗಳನ್ನು ಕೊಡುವ ಹೊಸ ಅಧ್ಯಾಯನಗಳನ್ನು ಸೇರಿಸಿದೆ. ಇಂಡಿಯನ್‌ ನ್ಯಾಷನಲ್‌ ಆರ್ಮಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸೇರಿಸಿರುವ ಸಮಿತಿಯು, ಕ್ರಾಂತಿಕಾರಿಗಳಲ್ಲಿ ಗಾಯಿಡಿನ್‌ ಲೂ ಮೊದಲಾದ ಅನೇಕರ ಮಾಹಿತಿಯನ್ನು ಕೊಟ್ಟಿರುವುದು ವರದಿಯಿಂದ ತಿಳಿದು ಬಂದಿದೆ.

 

‘ಸಮಾಜ ವಿಜ್ಞಾನ ಪಠ್ಯಭಾಗದಲ್ಲಿ ಒಟ್ಟಾರೆಯಾಗಿ ಅನೇಕ ಹೊಸ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಮುಖ್ಯವಾಗಿ ಸೇರಿಸಿದ ಅಂಶಗಳು ವಿದ್ಯಾರ್ಥಿಗಳು ಅನೇಕ ಉತ್ತಮಾಂಶಗಳನ್ನು ಕಲಿಸುವಂತಿರಬೇಕು. ಅವರಲ್ಲಿ ಇತಿಹಾಸದ ಬಗ್ಗೆ ಪ್ರೀತಿ, ಆಸಕ್ತಿಗಳನ್ನು ಹುಟ್ಟಿಸುವಂತಿರಬೇಕು. ಹೆಚ್ಚುವರಿ ಮಾಹಿತಿಯನ್ನು ಅವರು ಹುಡುಕಿ ಓದಲು ಪ್ರೇರಣೆ ಪಡೆಯುವಂತಿರಬೇಕು. ಪಠ್ಯಗಳಲ್ಲಿ ಕೊಡುವ ಮಾಹಿತಿಗಳು ಸುಳ್ಳು, ಉತ್ಪ್ರೇಕ್ಷೆಗಳು ಇರಬಾರದು. ಯಾವುದೇ ಸಮುದಾಯ, ಜನಾಂಗಗಳಿಗೆ ಅವಹೇಳನ ಇಲ್ಲದಂತೆ ಎಚ್ಚರವಹಿಸಲಾಗಿದೆ. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ,’ ಎಂದು ಸಮಿತಿಯು ತನ್ನ ವರದಿಯಲ್ಲಿ ವಿವರಿಸಿದೆ.

 

ಅಲ್ಲದೆ ‘ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸದ್ಯಕ್ಕೆ ನಾವು ಮಾಡಿರುವ ಪರಿಷ್ಕರಣೆಯು ಕಾಲಮಿತಿ, ವಿಷಯಮಿತಿಗಳಿಗೆ ಒಳಪಟ್ಟಿತ್ತು. ಆದರೆ ಮುಂದೊಂದು ದಿನ ಪರಿಷ್ಕರಣೆ ಅಥವಾ ಪುನರಾಚನೆ ಮಾಡುವುದಾದರೆ ಎಲ್ಲ ಪಠ್ಯಗಳನ್ನು ಹೊಸ ವಿನ್ಯಾಸದಲ್ಲಿ ಬರೆಯಬೇಕಿದೆ.

 

 

ವಿಷಯ ಪ್ರಸ್ತುತಿ, ಭಾಷೆ, ಚಿತ್ರಗಳು, ಹಾಗೂ ನಕಾಶೆಗಳ ಬಳಕೆ, ಅಭ್ಯಾಸಪ್ರಶ್ನೆಗಳ ವಿನ್ಯಾಸ ಇವೆಲ್ಲವೂ ಮಕ್ಕಳ ವಯೋಮಾನ ಮತ್ತು ಕಲಿಕಾ ಸಾಮರ್ಥ್ಯಗಳಿಗನುಗುಣವಾಗಿ ಬದಲಾಗಬೇಕಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಂಡಿಸಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಾಯಗಳನ್ನು ಹೊಸ ರೀತಿಯಲ್ಲಿ ಬರೆಯಬೇಕಿದೆ,’ ಎಂದು ಸಮಿತಿಯು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

the fil favicon

SUPPORT THE FILE

Latest News

Related Posts