ಚಕ್ರತೀರ್ಥರನ್ನು ನೇಮಿಸಿದ್ದು ಸುರೇಶ್‌ಕುಮಾರ್‌; ಪರಾಮರ್ಶನೆಗೊಳಪಡದ ಮರುಪರಿಷ್ಕರಣೆ ವರದಿ?

ಬೆಂಗಳೂರು; ರೋಹಿತ್‌ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸೂಚಿಸಿದ್ದು ಹಾಲಿ ಸಚಿವ ಬಿ ಸಿ ನಾಗೇಶ್‌ ಅವರಲ್ಲ. ಬದಲಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್‌ ಸುರೇಶ್‌ಕುಮಾರ್‌ ಅವರು. ಅಷ್ಟೇ ಅಲ್ಲ, ರೋಹಿತ್‌ ಚಕ್ರತೀರ್ಥ ಅವರು ಸೂಚಿಸಿದ್ದವರನ್ನೇ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿತ್ತು .

 

ಹಾಗೆಯೇ ಈ ಸಮಿತಿಯು ನೀಡುವ ವರದಿಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನು ಹೆಸರಿಸಲಾಗುವುದು ಎಂದು ಅಂದಿನ ಸಚಿವ ಎಸ್‌ ಸುರೇಶ್‌ ಕುಮಾರ್‌ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಉನ್ನತ ಮಟ್ಟದ ತಜ್ಞರನ್ನು ನೇಮಿಸಲಾಗಿದೆಯೇ ಎಂಬ ಬಗ್ಗೆ ಕಡತದಲ್ಲಿ ಯಾವ ಮಾಹಿತಿಯೂ ಇಲ್ಲವಾಗಿದೆ. ಅದೇ ರೀತಿ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿಯು ನೀಡಿದ್ದ ವರದಿಯನ್ನು ಯಾರು ಪರಿಶೀಲಿಸಿದ್ದಾರೆ ಎಂಬ ಬಗ್ಗೆ ಸಣ್ಣ ಮಾಹಿತಿಯೂ ಇಲ್ಲ.

 

ರೋಹಿತ್‌ ಚಕ್ರತೀರ್ಥ ಐಐಟಿ ಮತ್ತು ಸಿಇಟಿ ಪ್ರೊಫೆಸರ್‌ ಎಂದು ಬಿ ಸಿ ನಾಗೇಶ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚನೆ ಸಂಬಂಧದ ಕೆಲ ಅಂಶಗಳು ಇದೀಗ ಮುನ್ನೆಲೆಗೆ ಬಂದಿವೆ. ಈ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಕಛೇರಿ ಟಿಪ್ಪಣಿ ಹಾಳೆ ಮತ್ತು ದಾಖಲೆಗಳನ್ನು ಪಡೆದುಕೊಂಡಿದೆ.

 

6ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ ಪಾಠ ಸಂಖ್ಯೆ 7ರ ಪುಟ ಸಂಖ್ಯೆ 82 ಹಾಗೂ 83ರಲ್ಲಿನ ವಿಷಯಾಂಶಗಳನ್ನು ಎಲ್ಲಾ ಏಳು ಮಾಧ್ಯಮಗಳ ಪಠ್ಯಪುಸ್ತಕಗಳಿಂದ ತೆಗೆದು ಹಾಕಲು ಅನುಮತಿ ಮತ್ತು 1ರಿಂದ 10ನೇ ತರಗತಿ ಸಮಾಜ ವಿಜ್ಞಾನ, ಭಾಷಾ ವಿಷಯಗಳಲ್ಲಿ ಇರಬಹುದಾದ ಸೂಕ್ಷ್ಮ ಹಾಗೂ ಆಕ್ಷೇಪಾರ್ಹ ವಿಷಯಾಂಶಗಳನ್ನು ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತೊಮ್ಮೆ ಪರಿಶೀಲಿಸಿ ವರದಿ ನೀಡಲು ಕರ್ನಾಟಕ ಪಠ್ಯಪುಸ್ತಕ ಸಂಘವು 2020ರ ಡಿಸೆಂಬರ್‌ 18ರಂದು ಪ್ರಸ್ತಾವನೆ ಸಲ್ಲಿಸಿತ್ತು.

 

ಇದನ್ನು ಅನುಮೋದಿಸಿದ್ದ ಹಿಂದಿನ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ‘ಸಮಿತಿ ರಚಿಸಲು ಸೂಚಿಸಿದ್ದರಲ್ಲದೇ ಈ ಸಮಿತಿಯ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರೋಹಿತ್‌ ಚಕ್ರತೀರ್ಥ ಇವರಿಗೆ ವಹಿಸಿ ಆದೇಶ ಹೊರಡಿಸಬೇಕು,’ ಎಂದು ಸೂಚಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಟಿಪ್ಪಣಿ ಹಾಳೆ ಪ್ರತಿ

 

ಸಚಿವರ ಸೂಚನೆಯಂತೆ ರೋಹಿತ್‌ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಸಂಘವು ಸಂಪರ್ಕಿಸಿತ್ತು. ಆ ನಂತರ ಚಕ್ರತೀರ್ಥ ಅವರು ಸೂಚಿಸಿದ ಮತ್ತು ಇಲಾಖೆಯ ತರಗತಿ ಶಿಕ್ಷಕರನ್ನು ಒಳಗೊಂಡಂತೆ ಒಟ್ಟು 15 ಜನ ಸಂಪನ್ಮೂಲ ವ್ಯಕ್ತಿಗಳ ಸಮಿತಿಯನ್ನು ರಚಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.

 

ಅ ನಂತರ ಈ ಸಮಿತಿ ರಚನೆ ಕುರಿತಂತೆ ಬಿ ಸಿ ನಾಗೇಶ್‌ ಅವರು ಸಚಿವರಾದ ನಂತರ ಇದಕ್ಕೆ ಅನುಮೋದನೆ ದೊರಕಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಹಾಗೆಯೇ ‘ಚಕ್ರತೀರ್ಥ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯು ನೀಡುವ ವರದಿಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಬೇಕು. ಮತ್ತು ಈ ಸಮಿತಿಗೆ ಸದಸ್ಯರನ್ನು ಹೆಸರಿಸಲಾಗುವುದು,’ ಎಂದು ಅಂದು ಸಚಿವರಾಗಿದ್ದ ಎಸ್‌ ಸುರೇಶ್‌ಕುಮಾರ್‌ ಅವರು 2020ರ ಡಿಸೆಂಬರ್‌ 17ರಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

ಈ ಪತ್ರದಲ್ಲಿ ಪ್ರಸ್ತಾಪಿಸಿದಂತೆ ಪರಿಶೀಲನಾ ಸಮಿತಿ ನೀಡಿದ್ದ ವರದಿಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

 

ಹೊಸಧರ್ಮಗಳ ಉದಯಕ್ಕೆ ಕಾರಣಗಳು ಮತ್ತು ಟಿಪ್ಪು ಸುಲ್ತಾನ್‌ ಸಾಧನೆ ಮತ್ತು ಕೊಡುಗೆಗಳನ್ನು ವಿವರಿಸುವ ಪಾಠಾಂಶಗಳನ್ನು ಪಠ್ಯದಿಂದ ತೆಗೆದುಹಾಕುವ ಮುನ್ನವೇ 2021-22ನೇ ಸಾಲಿಗೆ ಒಟ್ಟು 83 ಶೀರ್ಷಿಕೆಗಳ ಒಟ್ಟು 6,76,997 ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿತ್ತು. ಇಷ್ಟೊಂದು ಸಂಖ್ಯೆಯಲ್ಲಿರುವ ಪಠ್ಯಪುಸ್ತಕಗಳು 2022-23ನೇ ಸಾಲಿಗೆ ಅನುಪಯುಕ್ತವಾಗಿವೆ. ಆರರಿಂದ ಹತ್ತನೇ ತರಗತಿ ಸಮಾಜ ವಿಜ್ಞಾನದ ವಿಷಯದ ಪಠ್ಯಪುಸ್ತಕಗಳನ್ನು ಹಠಕ್ಕೆ ಬಿದ್ದು ಪರಿಷ್ಕರಿಸಿರುವುದರ ಪರಿಣಾಮ 2.5 ಕೋಟಿ ರು. ನಷ್ಟವಾಗಿದೆ.

 

ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ ಅಧ್ಯಾಯ 4.2ರಲ್ಲಿ ಹೊಸ ಧರ್ಮಗಳ ಉದಯ ಪಠ್ಯಭಾಗವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸುವ ಹೊಣೆಗಾರಿಕೆಯನ್ನೂ ರೋಹಿತ್‌ ಚಕ್ರತೀರ್ಥ ಸಮಿತಿಗೆ ವಹಿಸಬೇಕು ಎಂದು ಸಚಿವ ಬಿ ಸಿ ನಾಗೇಶ್‌ ಅವರು 2022ರ ಫೆ.17ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts