ಕಾಂಗ್ರೆಸ್‌ ಸರ್ಕಾರಕ್ಕೆ ನೂರು ದಿನ; ವರ್ಗಾವಣೆ, ವಿವಾದ, ಕಳಂಕಿತ, ಭ್ರಷ್ಟ ಅಧಿಕಾರಿಗಳಿಗೆ ‘ಆಶ್ರಯ’

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತ, ವಿಪರೀತ ಭ್ರಷ್ಟಾಚಾರ, ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಿದ್ದ ಆರೋಪ, ನೇಮಕಾತಿಗಳಲ್ಲಿನ ಅಕ್ರಮಗಳು ಸೇರಿದಂತೆ ಒಟ್ಟಾರೆಯಾಗಿ ಆಡಳಿತ ವಿರೋಧಿ ಅಲೆಯನ್ನು ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಅಧಿಕಾರಕ್ಕೇರಿರುವ ಕಾಂಗ್ರೆಸ್‌ ಸರ್ಕಾರ 100 ದಿನಗಳನ್ನು ಪೂರೈಸಿದೆ.

 

ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದು ಶತದಿನೋತ್ಸವ ಸಂಭ್ರಮದಲ್ಲಿರುವ ಕಾಂಗ್ರೆಸ್‌ ಸರ್ಕಾರವು, ಅಧಿಕಾರಕ್ಕೇರುವ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಅನ್ನ ಭಾಗ್ಯ, ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಯನ್ನು ಆರ್ಥಿಕ ನಿರ್ಬಂಧ, ಮುಗ್ಗಟ್ಟಿನ ಕುರಿತು ಹಣಕಾಸು ಇಲಾಖೆ ಅಧಿಕಾರಿಗಳು ನೀಡಿದ್ದ ಅಭಿಪ್ರಾಯದ ನಡುವೆಯೂ ಅನುಷ್ಠಾನಗೊಳಿಸಿದೆ.

 

ಅದೇ ರೀತಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮ, ಹಗರಣಗಳ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದೆ. ಇದನ್ನು ಹೊರತುಪಡಿಸಿದರೇ ಈ ನೂರು ದಿನದಲ್ಲಿ ಸಾಧನೆ ಎಂಬ ಹೆಜ್ಜೆಗುರುತುಗಳು ಅಷ್ಟೇನೂ ಕಾಣಸಿಗದು. ಬಜೆಟ್‌ನಲ್ಲಿ ಘೋಷಿಸಿದ್ದ ಹಲವು ಯೋಜನೆಗಳು ಹೇಳಿಕೆಗಳಾಗಿದ್ದವೆಯೇ ವಿನಃ ಅನುದಾನವನ್ನೂ ನಿಗದಿಗೊಳಿಸಿಲ್ಲ. ಆದರೂ ಶತ ದಿನೋತ್ಸವಕ್ಕೆ ಸಜ್ಜಾಗುತ್ತಿರುವ ಕಾಂಗ್ರೆಸ್‌ ಸರ್ಕಾರವು ಕಿರು ಹೊತ್ತಿಗೆಯನ್ನೂ ಪ್ರಕಟಿಸಲು ಮುಂದಾಗಿದೆ.

ವರ್ಗಾವಣೆ, ಶಾಸಕರ ಅಸಮಾಧಾನ ಮಧ್ಯೆಯೇ ಶತ ದಿನೋತ್ಸವಕ್ಕೆ ಸಜ್ಜು; ಕಿರು ಹೊತ್ತಿಗೆ ಪ್ರಕಟಣೆಗೆ ಸೂಚನೆ

ಹಿಂದಿನ ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತಂತೆ ಬಲವಾಗಿ ಆರೋಪಿಸಿದ್ದ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೇರಿದ 100 ದಿನದಲ್ಲಿಯೇ ಹಲವು ಆರೋಪಗಳನ್ನು ಎದುರಿಸಿದೆ. ಸರ್ಕಾರವು 100 ದಿನದಲ್ಲಿ ಸಾಧನೆ ಮಾಡಿದ್ದಕ್ಕಿಂತಲೂ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಆರೋಪಗಳನ್ನು ಎದುರಿಸಿದ್ದೇ ಹೆಚ್ಚು. ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ, ತನಿಖಾ ಸಂಸ್ಥೆಗಳಲ್ಲಿ ವಿಚಾರಣೆಗೆ ಗುರಿಯಾಗಿರುವ ಅಧಿಕಾರಿಗಳನ್ನೇ ಆಯಕಟ್ಟಿನ ಹುದ್ದೆಗೆ ನೇಮಿಸಲಾಗಿದ್ದೂ ಸಹ ಚರ್ಚೆಗೆ ಗ್ರಾಸವಾಗಿತ್ತು.

 

 

ಅಲ್ಲದೇ  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಒಬ್ಬರೇ ಒಬ್ಬ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಅಧಿಕಾರಿಯನ್ನು ನೇಮಿಸಿಕೊಂಡಿರಲಿಲ್ಲ. ಬಿಜೆಪಿ ಅವಧಿಯಲ್ಲಿ ದುರಾಡಳಿತ ನಡೆದಿದ್ದ ಅವಧಿಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದ ಅಧಿಕಾರಿಗಳನ್ನೇ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನೇ ನೇಮಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

 

ಅಲ್ಪಸಂಖ್ಯಾತರ ಅಧಿಕಾರಿಗಳನ್ನು ದೂರವಿರಿಸಿ, ಸ್ವಜಾತಿ, ಬಿಜೆಪಿ ದುರಾಡಳಿತ ಅವಧಿಯಲ್ಲಿನ ಅಧಿಕಾರಿಗಳಿಗೆ ಮಣೆ

 

‘ದಿ ಫೈಲ್‌’ ವರದಿ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ನಿವೃತ್ತ ಐಎಎಸ್‌ ಅಧಿಕಾರಿಯನ್ನು ನೇಮಿಸಿಕೊಳ್ಳಲಾಗಿತ್ತು.

‘ದಿ ಫೈಲ್‌’ ವರದಿ ಬೆನ್ನಲ್ಲೇ ಸಿಎಂ ಕಚೇರಿಗೆ ಅಲ್ಪಸಂಖ್ಯಾತರ ಸಮುದಾಯದ ನಿವೃತ್ತ ಐಎಎಸ್‌ ಅಧಿಕಾರಿ ನೇಮಕ

 

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಲವಾಗಿ ಕೇಳಿ ಬಂದಿದ್ದ ಗುತ್ತಿಗೆದಾರರಿಂದ ಶೇ.40 ಪರ್ಸೆಂಟ್‌ ಕಮಿಷನ್‌ಗೆ ಬೇಡಿಕೆ ಇರಿಸಲಾಗಿತ್ತು ಎಂಬ ಆರೋಪವನ್ನೇ ಕಾಂಗ್ರೆಸ್‌ ಪಕ್ಷವು ಪ್ರಬಲ ಅಸ್ತ್ರವನ್ನಾಗಿಸಿಕೊಂಡಿತ್ತು. ಆದರೆ ಅಧಿಕಾರಕ್ಕೇರಿ 100 ದಿನಗಳನ್ನು ಪೂರ್ಣಗೊಳಿಸಿರುವ ಕಾಂಗ್ರೆಸ್‌ ಸರ್ಕಾರವು ಇದೇ ಆರೋಪಕ್ಕೆ ಗುರಿಯಾಗಿದ್ದ ಅಧಿಕಾರಿಗಳನ್ನು ಈಗಲೂ ಮುಂದುವರೆಸಿಕೊಂಡು ಬಂದಿರುವುದು ಅಧಿಕಾರಶಾಹಿಯೊಳಗೆ ಚರ್ಚೆಗೆ ಗ್ರಾಸವಾಗಿದೆ.

 

ಶೇ.40 ಕಮಿಷನ್‌ ಆರೋಪ; ಎಸಿಎಸ್‌ ಹುದ್ದೆಯಲ್ಲೇ ಮುಂದುವರೆದ ರಾಕೇಶ್‌ಸಿಂಗ್‌ಗೆ ಸಚಿವರ ಶ್ರೀರಕ್ಷೆ?

 

ಸರ್ಕಾರದ ಅಧಿಕಾರಿ, ನೌಕರರ ವರ್ಗಾವಣೆ, ಮುಖ್ಯಮಂತ್ರಿಗಳ ಗೃಹ ಕಚೇರಿ, ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಸಚಿವಾಲಯ, ಅಧಿಕಾರಿ, ನೌಕರರಿಗೆ ವರ್ಗಾವಣೆಗೊಳಿಸಲು ನೀಡಿದ್ದ ಟಿಪ್ಪಣಿಗಳು, ಅಧಿಕಾರಿಯೊಬ್ಬರ ವರ್ಗಾವಣೆಗಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಹೆಸರಿನಲ್ಲಿ 1.50 ಕೋಟಿ ಲಂಚ ಪಡೆದಿದ್ದ ಆರೋಪ, ಒಂದೇ ಹುದ್ದೆಗೆ ನಾಲ್ಕು ಅಧಿಕಾರಿಗಳಿಗೆ ಶಿಫಾರಸ್ಸಿನ ಟಿಪ್ಪಣಿ ಪತ್ರಗಳು, ಸುತ್ತೋಲೆಯನ್ನೂ ಉಲ್ಲಂಘಿಸಿ ನಿರಂತರವಾಗಿ ಹೊರಬೀಳುತ್ತಿರುವ ವರ್ಗಾವಣೆ ಆದೇಶ, ಅಧಿಸೂಚನೆ, ಅವಧಿ ಪೂರ್ವ ವರ್ಗಾವಣೆ ಆದೇಶಗಳು, ವರ್ಗಾವಣೆ ಆದೇಶಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಅವರ ಹೆಸರು ತಳಕು ಹಾಕಿಕೊಂಡು ಸಾಕಷ್ಟು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದವು.

 

ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಿಂತಲೂ ವರ್ಗಾವಣೆ ಆದೇಶಗಳೇ ಹೆಚ್ಚು ಸದ್ದು ಮಾಡಿದ್ದವು. ಇದನ್ನೇ ಮುಂದಿರಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿದ್ದವು. ಜುಲೈನಲ್ಲಿ ನಡೆದಿದ್ದ ಬಜೆಟ್‌ ಅಧಿವೇಶನದುದ್ದಕ್ಕೂ ವರ್ಗಾವಣೆ ವ್ಯಾಪಾರ, ವರ್ಗಾವಣೆ ದಂಧೆ ಎಂದೆಲ್ಲಾ ಪ್ರತಿಪಕ್ಷಗಳು ಆರೋಪಿಸಿ ಸದನದಲ್ಲಿ ಗದ್ದಲ ಎಬ್ಬಿಸಿದ್ದವು. ಅದರಲ್ಲೂ ತುಂಬಾ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ವಾಕ್ಸಮರವೇ ನಡೆದಿತ್ತು.

 

ಈ ಬೆಳವಣಿಗೆಗಳನ್ನು ಎದುರಿಸುತ್ತಲೇ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ, ಸಾಲ ಎತ್ತುಲು ಏದುರಿಸಿರು ಬಿಡುತ್ತಿವೆ. ಹಿಂದಿನ ಬಿಜೆಪಿ ಸರ್ಕಾರವು ಕಳೆದ ಮಾರ್ಚ್‌ ಅಂತ್ಯಕ್ಕೆ ಬಿಡುಗಡೆ ಮಾಡಿದ್ದ, ಮತ್ತು ವಿವಿಧ ಇಲಾಖೆಗಳು ಪೂರ್ಣಗೊಳಿಸಿದ್ದ ಯೋಜನೆಗಳನ್ನೇ ಕಾಂಗ್ರೆಸ್‌ ಸರ್ಕಾರವು ಈಗ ತನ್ನ 100 ದಿನಗಳ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೇ ಶುರುವಾಗಿದ್ದ ವರ್ಗಾವಣೆ ದಂಧೆ ಕುರಿತು ‘ದಿ ಫೈಲ್‌’ ಸರಣಿ ರೂಪದಲ್ಲಿ ದಾಖಲೆ ಸಹಿತ ವರದಿಗಳನ್ನು ಪ್ರಕಟಿಸಿದೆ. ಆ ಎಲ್ಲಾ ವರದಿಗಳನ್ನು ಇಲ್ಲಿ ಕ್ರೋಢೀಕರಿಸಿ ಮತ್ತೊಮ್ಮೆ ಕೊಡಲಾಗಿದೆ.

 

 

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸುಮಾರು ಒಂದು ತಿಂಗಳ ಆಸುಪಾಸಿನಲ್ಲಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ 120 ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಈ ಪೈಕಿ ನೇಮಕವಾಗಿದ್ದ ನೌಕರರ ಪೈಕಿ ಬಹುತೇಕರು ಮೈಸೂರು ಜಿಲ್ಲೆಗೇ ಸೇರಿದವರಾಗಿದ್ದರು. ಅದರಲ್ಲೂ ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ವರುಣಾಗೇ ಸೇರಿದವರಾಗಿದ್ದರು. ಈ ಎಲ್ಲ ನೇಮಕಾತಿಗಳು ಸಿದ್ದರಾಮಯ್ಯನವರ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯನವರ ಆಣತಿಯಂತೆ ನಡೆದಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತಾಗಿ  ಜೂನ್ 21, 2023ರಂದು the-file.in ದಾಖಲೆ ಸಮೇತ ಬಹಿರಂಗಗೊಳಿಸಿತ್ತು.

 

 

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂರು ಹಂತಗಳಲ್ಲಿ ನೇಮಕಾತಿಯಾಗಿದ್ದ ಅಷ್ಟೂ ಅಭ್ಯರ್ಥಿಗಳ ಹೆಸರುಗಳನ್ನು ಆ ವರದಿಯಲ್ಲಿ ಬಹಿರಂಗಗೊಳಿಸಲಾಗಿತ್ತು. ಹೀಗೆ ನೇಮಕಾತಿಗೊಂಡ ಅಭ್ಯರ್ಥಿಗಳಿಗೆ ಸೂಕ್ತ ವಿದ್ಯಾರ್ಹತೆ ಹಾಗೂ ಅನುಭವವೂ ಇಲ್ಲ ಎಂಬ ಆರೋಪಗಳ ಕುರಿತೂ ಆ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು.

 

 

ಹೀಗೆ ನೇಮಕಗೊಂಡ 70 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲು ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಸಂಗತಿಯತ್ತಲೂ ಆ ವರದಿಯಲ್ಲಿ ಬೊಟ್ಟು ಮಾಡಲಾಗಿತ್ತು. ಈ ವರದಿಯ ಕಾರಣಕ್ಕೆ, ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಹಸ್ತಕ್ಷೇಪದ ಕುರಿತು ಅಧಿಕಾರಿಗಳು ಹಾಗೂ ಪಕ್ಷದ ವಲಯದಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ನಂತರದಲ್ಲಿ ಯತೀಂದ್ರ ಸಿದ್ದರಾಮಯ್ಯ,  ಮುಖ್ಯಮಂತ್ರಿ ಸಚಿವಾಲಯದ ಮೇಲೆ ಪ್ರಭಾವ ಬೀರುವ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದವು.

 

ಆಗ ವಿಜಯೇಂದ್ರ, ಈಗ ಯತೀಂದ್ರ; ಸಿಎಂ ಸಚಿವಾಲಯದ ಗುತ್ತಿಗೆ ನೌಕರರಲ್ಲಿ ವರುಣಾ ಕ್ಷೇತ್ರದವರ ಸಿಂಹಪಾಲು

 

 

2. ಜೂನ್ 24, 2023ರಂದು “ಅಬಕಾರಿ ಲೇಬಲ್ ಮುದ್ರಣ: ಕಪ್ಪು ಪಟ್ಟಿ, ಕ್ರಿಮಿನಲ್ ಆರೋಪಿತ ಕಂಪನಿಗೆ ಆದೇಶ, ಕಮಿಷನ್ ವ್ಯವಹಾರ?” ಎಂಬ ತಲೆಬರಹದೊಂದಿಗೆ, ಕಪ್ಪು ಪಟ್ಟಿ ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿದೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿದ್ದ ಮಣಿಪಾಲ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಗೆ ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ಮತ್ತು ಸರಬರಾಜು ಮಾಡಲು ನೀಡಿದ್ದ ಕಾರ್ಯಾದೇಶದ ಕುರಿತು the-file.in ವರದಿ ಮಾಡಿತ್ತು. 51.26 ಕೋಟಿ ರು. ನಷ್ಟಕ್ಕೆ ಕಾರಣವಾಗಿದ್ದ ಈ ಟೆಂಡರ್‍‌ನ್ನು ರದ್ದುಗೊಳಿಸಬೇಕು ಎಂದು ಖುದ್ದು ಸಚಿವ ಆರ್‍‌ ಬಿ ತಿಮ್ಮಾಪುರ ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದರೂ ಸಹ ಇದುವರೆಗೂ ಟೆಂಡರ್‍‌ ರದ್ದುಗೊಂಡಿಲ್ಲ.

 

ಅಬಕಾರಿ ಭದ್ರತಾ ಚೀಟಿ ಮುದ್ರಣ ಟೆಂಡರ್‌ನಲ್ಲಿ ಅಕ್ರಮ; ಹೆಚ್ಚಿನ ದರ ನಮೂದು, 51.26 ಕೋಟಿ ನಷ್ಟ

 

 

ಈ ಪ್ರಕರಣದಲ್ಲಿ ರೂ. 1,000 ಕೋಟಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ನೀಡಿದ್ದ ದೂರಿನ ಕುರಿತೂ ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ತನಿಖಾ ವರದಿಯಿಂದ ತೀವ್ರ ಮುಜಗರಕ್ಕೀಡಾದ ಕಾಂಗ್ರೆಸ್ ಸರ್ಕಾರವು, ಕೆಲವೇ ದಿನಗಳಲ್ಲಿ ಆ ಆದೇಶವನ್ನು ಹಿಂಪಡೆದಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ the-file.in ಬಯಲಿಗೆಳೆದಿದ್ದ ಪ್ರಮುಖ ಭ್ರಷ್ಟಾಚಾರ ಆರೋಪದ ಪ್ರಕರಣ ಅದಾಗಿತ್ತು.

 

ಅಬಕಾರಿ ಲೇಬಲ್‌ ಮುದ್ರಣ; ಕಪ್ಪುಪಟ್ಟಿ, ಕ್ರಿಮಿನಲ್ ಆರೋಪಿತ ಕಂಪನಿಗೆ ಆದೇಶ, ಕಮಿಷನ್‌ ವ್ಯವಹಾರ?

 

 

3. ಜೂನ್ 28, 2023ರಂದು “ವರ್ಗಾವಣೆಗೆ ಚಿರತೆ ವೇಗ; ಬಕ್ರೀದ್ ಹಬ್ಬವಿದ್ದರೂ ಮಾಹಿತಿ ಕ್ರೋಡೀಕರಿಸಲು ಕರ್ತವ್ಯಕ್ಕೆ ಹಾಜರಾಗಿ, ಇಲ್ಲವೇ ಶಿಸ್ತುಕ್ರಮ” ಎಂಬ ತಲೆಬರಹದಡಿ, ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30, 2023 ಅಂತಿಮ ದಿನವಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ರಜಾ ದಿನವಾಗಿದ್ದ ಬಕ್ರೀದ್ ನಂದೂ ಕರ್ತವ್ಯಕ್ಕೆ ಹಾಜರಾಗಿ, ಸಚಿವಾಲಯವು ಕೋರಿರುವ ಮಾಹಿತಿಗಳನ್ನು ಕ್ರೋಡೀಕರಿಸುವಂತೆ ಬಹುತೇಕ ಇಲಾಖೆಗಳ ಮುಖ್ಯಸ್ಥರು ಕೆಳ ಹಂತದ ಅಧಿಕಾರಿಗಳಿಗೆ ಹೊರಡಿಸಿದ್ದ ಸುತ್ತೋಲೆಯ ಕುರಿತು the-file.in ದಾಖಲೆ ಸಮೇತ ವರದಿ ಮಾಡಿತ್ತು.

 

ವರ್ಗಾವಣೆಗೆ ಚಿರತೆ ವೇಗ; ಬಕ್ರೀದ್‌ ಹಬ್ಬವಿದ್ದರೂ ಮಾಹಿತಿ ಕ್ರೋಢೀಕರಿಸಲು ಕರ್ತವ್ಯಕ್ಕೆ ಹಾಜರಾಗಿ,ಇಲ್ಲವೇ ಶಿಸ್ತುಕ್ರಮ

 

4. ಜೂನ್ 29, 2023ರಂದು “ಕಾಸಿಗಾಗಿ ಪೋಸ್ಟಿಂಗ್ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೆ ಒಳಗಾಗಿದ್ದ ಮುಖ್ಯ ಎಂಜಿನಿಯರ್ ಗೆ ಹೊಸ ಹುದ್ದೆ” ಎಂಬ ತಲೆಬರಹದಡಿ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಒಳಗಾಗಿದ್ದ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಅಭಿಯಂತರ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿರುವುದನ್ನು the-file.in ದಾಖಲೆ ಸಮೇತ ಬಯಲು ಮಾಡಿತ್ತು.

 

ಕಾಸಿಗಾಗಿ ಪೋಸ್ಟಿಂಗ್‌ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍‌ಗೆ ಹೊಸ ಹುದ್ದೆ

 

 

5. ಜೂನ್ 30, 2023ರಂದು “ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ” ಎಂಬ ತಲೆಬರಹದಡಿ, ಆದಾಯಕ್ಕಿಂತ ಶೇ. 207.11 ಹೆಚ್ಚು ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿಗೊಳಗಾಗಿ ಸೇವೆಯಿಂದ ಅಮಾನತುಗೊಂಡಿದ್ದ ಬಿಬಿಎಂಪಿ ನಿವೃತ್ತ ಮುಖ್ಯ ಎಂಜಿನಿಯರ್ (ಯೋಜನೆ-ಕೇಂದ್ರ) ಕೆ.ಟಿ.ನಾಗರಾಜ್ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡು, ವಿವಾದಕ್ಕೀಡಾಗಿರುವ ಕುರಿತು the-file.in ವರದಿ ಮಾಡಿತ್ತು.

 

 

ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ

 

6. ಜುಲೈ 1, 2023ರಂದು “ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದ ಆರೋಪಿ ಅಧಿಕಾರಿ, ಈಗ ಗಣಿ ಸಚಿವರ ಆಪ್ತ ಕಾರ್ಯದರ್ಶಿ” ಎಂಬ ತಲೆಬರಹದಡಿ, ಹಾಲಿ ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಖಾರದ ಪುಡಿ ಮಹೇಶ್ ಎಂಬಾತನಿಂದ ಅಕ್ರಮವಾಗಿ ಸಂಭಾವನೆ ಪಡೆದ ಆರೋಪಕ್ಕೆ ಗುರಿಯಾಗಿದ್ದ ಕೆಎಸ್ಎಸ್ ಅಧಿಕಾರಿ ಮಂಜುನಾಥ್ ಆರ್. ಬಳ್ಳಾರಿ ಅವರು ತಮ್ಮ ಮೇಲಿನ ಆರೋಪದ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಯು ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥಗೊಳ್ಳದಿದ್ದರೂ, ಅವರನ್ನು ಗಣಿ, ಭೂವಿಜ್ಞಾನಿ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಆಪ್ತ ಕಾರ್ಯದರ್ಶಿಯನ್ನಾಗಿ ಸರ್ಕಾರ ನೇಮಿಸಿದ್ದ ಕುರಿತು the-file.in ವರದಿ ಮಾಡಿತ್ತು.

 

ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದ ಆರೋಪಿ ಅಧಿಕಾರಿ, ಈಗ ಗಣಿ ಸಚಿವರ ಆಪ್ತ ಕಾರ್ಯದರ್ಶಿ

 

 

7. ಜುಲೈ 3, 2023ರಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ‍್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್ (ಕಿರಿಯ ಶ‍್ರೇಣಿ) ಅಧಿಕಾರಿಗಳನ್ನು ಯಾವುದೇ ಸಕಾರಣವಿಲ್ಲದೆ ಮತ್ತು ಅತಿ ವಿಶೇಷ ಸಂದರ್ಭವಿಲ್ಲದಿದ್ದರೂ ಅವಧಿಪೂರ್ವ ವರ್ಗಾವಣೆ ಮಾಡುವ ಮೂಲಕ ವರ್ಗಾವಣೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರಿಯಾಗಿದ್ದರು. ಈ ಆರೋಪದ ಕುರಿತು the-file.in ದಾಖಲೆ ಸಮೇತ ವರದಿ ಮಾಡಿತ್ತು.

 

ಈ ವರದಿಯನ್ನು ಆಧರಿಸಿ, ಜೆಡಿಎಸ್ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯನವರ ವಿರುದ್ಧ ‘ಕಾಸಿಗಾಗಿ ಪೋಸ್ಟಿಂಗ್’ ಎಂದು ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೆ, ಈ ಅವಧಿಪೂರ್ವ ವರ್ಗಾವಣೆಗಳನ್ನು ‘ವೈಎಸ್‍ಟಿ’ ಟ್ಯಾಕ್ಸ್ ಎಂದು ಬಣ್ಣಿಸುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವರದಿಯು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸಂಚಲನ ಸೃಷ್ಟಿಸಿದ ತನಿಖಾ ವರದಿಗಳ ಪೈಕಿ ಒಂದಾಗಿತ್ತು.

 

ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

 

 

8. ಜುಲೈ 4, 2023ರಂದು ಮತ್ತೊಂದು ವರ್ಗಾವಣೆ ಪ್ರಕರಣವನ್ನು ಬಯಲಿಗೆಳೆದಿದ್ದ the-file.in, ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗದ ಉಪವಿಭಾಗಾಧಿಕಾರಿ ಹುದ್ದೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಶಿಫಾರಸು ಟಿಪ್ಪಣಿ ಪತ್ರ ಹೊರಡಿಸಿರುವುದನ್ನು ದಾಖಲೆ ಸಮೇತ ಬಹಿರಂಗಗೊಳಿಸಿತ್ತು. ಈ ವರದಿಯನ್ನು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, “ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವರ್ಗಿ ‘ಹುಂಡಿ’ ಇದೆ ಇದೆ ಎನ್ನುವುದು ಇಲ್ಲಿ ದಾಖಲೆ ಸಮೇತ ಬಟಾಬಯಲಾಗಿದೆ.

 

 

ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? ಸಿಎಂಒ ಎಂದರೆ ಸಿಎಂ ಆಫ್ ಕರ್ನಾಟಕವೋ ಅಥವಾ ಕರಪ್ಷನ್ ಆಫ್ ಕರ್ನಾಟಕವೋ?” ಎಂದು ತರಾಟೆಗೆ ತೆಗೆದುಕೊಂಡಿದ್ದರು. ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಕೂಡಾ, “ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.

 

 

ಒಂದು ಎ.ಸಿ. ಹುದ್ದೆಗೆ ಮೂವರು ಕೆಎಎಸ್‌ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು; ಬಿಕರಿಯಾದವೇ ಸಿಎಂ ಟಿಪ್ಪಣಿ?

 

9. ಜುಲೈ 5, 2023ರಂದು “47 ಕೋಟಿ ನಷ್ಟ: ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತರಬೇತಿ ಅಧಿಕಾರಿ ಹುದ್ದೆ” ಎಂಬ ತಲೆಬರಹದಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಬಯೋ ಮೆಡಿಕಲ್ ಉಪಕರಣ ನಿರ್ವಹಣೆ ಸೇರಿದಂತೆ ಹಲವು ಉಪಕರಣಗಳ ಖರೀದಿಯಲ್ಲಿ ಹಲವು ನಿಯಮಾವಳಿಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ರೂ. 47 ಕೋಟಿ ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಡಾ. ಸ್ವತಂತ್ರಕುಮಾರ್ ಅವರನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯ ತರಬೇತಿ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಿರುವ ಕುರಿತು the-file.in ವರದಿ ಮಾಡಿತ್ತು.

 

 

47 ಕೋಟಿ ನಷ್ಟ; ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತರಬೇತಿ ಅಧಿಕಾರಿ ಹುದ್ದೆ

 

10. ಜುಲೈ 21, 2023ರಂದು “ಸಿಎಂ ಕಚೇರಿಯಲ್ಲಿ ನಿಲ್ಲದ ವರ್ಗಾವಣೆ ಭರಾಟೆ: ಅರಣ್ಯಾಧಿಕಾರಿಯ ಒಂದೇ ಹುದ್ದೆಗೆ ಇಬ್ಬರಿಗೆ ಶಿಫಾರಸು” ಎಂಬ ತಲೆಬರಹದಡಿ, ಬೆಳ್ತಂಗಡಿ ವಲಯ ಅಧಿಕಾರಿಯ ಒಂದೇ ಹುದ್ದೆಗೆ ಇಬ್ಬರು ಅರಣ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸು ಪತ್ರ ನೀಡಿದ್ದುದನ್ನು the-file.in ದಾಖಲೆ ಸಮೇತ ಬಹಿರಂಗಗೊಳಿಸಿತ್ತು.

 

ಸಿಎಂ ಕಚೇರಿಯಲ್ಲಿ ನಿಲ್ಲದ ವರ್ಗಾವಣೆ ಭರಾಟೆ; ಅರಣ್ಯಾಧಿಕಾರಿಯ ಒಂದೇ ಹುದ್ದೆಗೆ ಇಬ್ಬರಿಗೆ ಶಿಫಾರಸ್ಸು

 

11. ಜುಲೈ 26, 2023ರಂದು “ಸುತ್ತೋಲೆ ಬದಿಗಿರಿಸಿ 208 ಪಿಡಿಒಗಳ ವರ್ಗಾ: ಒಂದೇ ಪಂಚಾಯ್ತಿಗೆ ಇಬ್ಬರು ಅಧಿಕಾರಿಗಳ ವರ್ಗಾವಣೆ” ಎಂಬ ತಲೆಬರಹದಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಆದೇಶದಲ್ಲಿ ಒಂದೇ ಪಂಚಾಯ್ತಿಗೆ ಇಬ್ಬರು ಪಿಡಿಒಗಳನ್ನು ವರ್ಗಾಯಿಸಿರುವುದನ್ನು the-file.in ದಾಖಲೆ ಸಮೇತ ಬಯಲು ಮಾಡಿತ್ತು.

 

ಸುತ್ತೋಲೆ ಬದಿಗಿರಿಸಿ 208 ಪಿಡಿಒಗಳ ವರ್ಗಾ, ಒಂದೇ ಪಂಚಾಯ್ತಿಗೆ ಇಬ್ಬರು ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

 

 

12. ಆಗಸ್ಟ್ 4, 2023ರಂದು “ವರ್ಗಾವಣೆಗಾಗಿ ರೂ. 1.50 ಕೋಟಿ ಬೇಡಿಕೆ: ತಡರಾತ್ರಿ ದೂರೇ ಅದಲು ಬದಲು, ಪ್ರಭಾವಿಗಳ ಒತ್ತಡಕ್ಕೆ ಮಣಿದ ಪೊಲೀಸರು” ಎಂಬ ತಲೆಬರಹದಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಹೆಸರಿನಲ್ಲಿ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು ಕಾಮಗಾರಿ ಗುತ್ತಿಗೆ ಹಾಗೂ ಬಾಕಿ ಇರುವ ಬಿಲ್ ಗಳ ಮೊತ್ತವನ್ನು ಬಿಡುಗಡೆ ಮಾಡಿಸಿಕೊಡುವುದಲ್ಲದೆ, ಅಧಿಕಾರಿಯೊಬ್ಬರಿಗೆ ವರ್ಗಾವಣೆ ಮಾಡಿಸಿಕೊಡಲು ರೂ. 1.50 ಕೋಟಿಗೆ ಬೇಡಿಕೆ ಇರಿಸಿ, ಆ ಪೈಕಿ ಮುಂಗಡವಾಗಿ ರೂ. 25 ಲಕ್ಷಗಳನ್ನು ಪಡೆದಿರುವ ಪ್ರಕರಣ ಹಾಗೂ ಆ ಕುರಿತು ದಾಖಲಾಗಿದ್ದ ಪ್ರಾಥಮಿಕ ಮಾಹಿತಿ ವರದಿಯ ಕುರಿತು the-file.in ವರದಿ ಮಾಡಿತ್ತು.

 

ವರ್ಗಾವಣೆಗಾಗಿ 1.50 ಕೋಟಿ ಬೇಡಿಕೆ; ತಡರಾತ್ರಿ ದೂರೇ ಅದಲು ಬದಲು, ಪ್ರಭಾವಿಗಳ ಒತ್ತಡಕ್ಕೆ ಮಣಿದ ಪೊಲೀಸರು!

 

 

ಅದೇ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಅಕ್ರಮ, ಭ್ರಷ್ಟಾಚಾರ ಕುರಿತಂತೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಮುಂದಿರಿಸಿದ್ದ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೇರಿದ ನಂತರ ತನಿಖೆ ನಡೆಸಲಾಗುವುದು ಎಂದು ಹೇಳಿಕೊಂಡಿತ್ತು. ಅದರಂತೆ ವಿಶೇ‍ಷ ತನಿಖಾ ತಂಡವನ್ನು ರಚನೆ ಮಾಡಿದೆಯಾದರೂ ಆರಂಭದಲ್ಲಿ ಖಡಕ್‌ ಅಧಿಕಾರಿಗಳನ್ನು ನೇಮಿಸಲು ಮುಂದಾಗಿ ಆ ನಂತರ ಅವರನ್ನು ಕೈಬಿಟ್ಟು ಸಮಿತಿ ರಚಿಸಲಾಗಿತ್ತು.

 

ಕಾಮಗಾರಿಗಳಲ್ಲಿ ಅಕ್ರಮ; ಮೊದಲ ಟಿಪ್ಪಣಿಯಲ್ಲಿದ್ದ ಖಡಕ್‌ ಅಧಿಕಾರಿಗಳ ಕೈಬಿಟ್ಟು ತನಿಖಾ ಸಮಿತಿ ರಚನೆ

ಹೀಗೆ ವರ್ಗಾವಣೆ, ಕಳಂಕಿತ, ವಿಚಾರಣೆಗೆ ಗುರಿಯಾಗಿರುವ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಿಗೆ ನೇಮಕ ಮಾಡಿರುವ ಪ್ರಕರಣಗಳು  ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗುವ ಎಲ್ಲ ಸಾಮರ್ಥ್ಯ ಹೊಂದಿದ್ದರೂ, ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೌನ ವಹಿಸಲು ಇದ್ದ ಕಾರಣವನ್ನೂ ಬಯಲು ಮಾಡಲಾಗಿತ್ತು.

 

ಬಿ ಎಸ್ ಯಡಿಯೂರಪ್ಪ ಅವರ ನಂತರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 100 ದಿನಗಳ ಸಂಭ್ರಮಾಚರಣೆ ಆಚರಿಸಿದ್ದರು.

ನೂರು ದಿನ ಪೂರ್ಣ; ಸಂಭ್ರಮಾಚರಣೆಯ ಖಯಾಲಿಗೆ ಬಿದ್ದ ಬಸವರಾಜ ಬೊಮ್ಮಾಯಿ

ಅಲ್ಲದೇ ಈ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ, ಎಸಿಬಿಗೆ ದಾಖಲಾಗಿದ್ದ ದೂರುಗಳ ಕುರಿತಾಗಿಯೂ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ನೂರು ದಿನದಲ್ಲಿ 98 ಭ್ರಷ್ಟಾಚಾರ ಪ್ರಕರಣ, ಎಸಿಬಿ, ಲೋಕಾಯುಕ್ತದಲ್ಲಿ 2,950 ದೂರು ಸಲ್ಲಿಕೆ

ಇದೀಗ 100 ದಿನಗಳ ಸಂಭ್ರಮದಲ್ಲಿರುವ  ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲೂ ಭ್ರಷ್ಟಾಚಾರ, ಕರ್ತವ್ಯಲೋಪ, ಅಧಿಕಾರ ದುರುಪಯೋಗದಂತಹ ಹಲವು ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts