ಬೆಂಗಳೂರು; ಕೋವಿಡ್ ಮೊದಲ ಮತ್ತು ಎರಡನೇ ಅಲೆ ವೇಳೆಯಲ್ಲಿ ವೈದ್ಯಕೀಯ ಸಲಕರಣೆ, ಉಪಕರಣ, ಔಷಧ ಸೇರಿದಂತೆ ಇನ್ನಿತರೆ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚನೆಯಾಗಿರುವ ಬೆನ್ನಲ್ಲೇ ಇವೇ ಅಕ್ರಮಗಳ ಕುರಿತು 3 ವರ್ಷಗಳ ಹಿಂದೆಯೇ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ 38 ದೂರುಗಳ ವಿಚಾರಣೆಯು ಮುಂದುವರೆಯಲಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಕಳೆದ ಮೂರು ವರ್ಷಗಳ ಹಿಂದೆಯೇ ದಾಖಲೆ ಸಹಿತ ಸಲ್ಲಿಕೆಯಾಗಿದ್ದ ಕೋವಿಡ್ ಅಕ್ರಮಗಳ ಕುರಿತಾದ ದೂರುಗಳ ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಅಲ್ಲದೇ ಲೋಕಾಯುಕ್ತ ಪೊಲೀಸ್ ವಿಭಾಗದಿಂದ ಇನ್ನೂ ತನಿಖಾ ವರದಿಗಳು ಲೋಕಾಯುಕ್ತರ ಕೈ ಸೇರಿಲ್ಲ. ವರದಿ ಸಲ್ಲಿಸುವ ಸಂಬಂಧ ಲೋಕಾಯುಕ್ತರು ಹಲವು ನೆನಪೋಲೆಗಳನ್ನು ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಪ್ರಕರಣಗಳು ಲೋಕಾಯುಕ್ತರ ಪರಿಧಿಯಲ್ಲಿಯೇ ಅಂತಿಮ ಪರಿಶೀಲನೆಯಲ್ಲಿವೆ. ಕೆಲ ದೂರುಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗವು ತನಿಖೆ ಮುಂದುವರೆಸಿದೆ. ಹಲವು ದೂರುಗಳಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ಹಿರಿಯ ಐಎಎಸ್ ಅಧಿಕಾರಿಗಳು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಅಕ್ರಮಗಳು ನಡೆದೇ ಇಲ್ಲವೆಂದೂ ಸಮರ್ಥನೆ ಮತ್ತು ಇದಕ್ಕೆ ಪೂರಕವಾಗಿ ದಾಖಲಾತಿಗಳನ್ನೂ ಒದಗಿಸಿದ್ದಾರೆ.
ಈ ಹಂತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಕೋವಿಡ್ ಅಕ್ರಮಗಳ ಕುರಿತು ತನಿಖೆ ನಡೆಸಲು ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿರುವುದರಿಂದ ಏಕಕಾಲದಲ್ಲಿ ನ್ಯಾಯಾಂಗ ಮತ್ತು ಲೋಕಾಯುಕ್ತ ಸಂಸ್ಥೆಯು ಸಮಾನಾಂತರವಾಗಿ ತನಿಖೆ ನಡೆಸಲು ಸಾಧ್ಯವೇ ಎಂಬ ಕಾನೂನಾತ್ಮಕ ಪ್ರಶ್ನೆಯೂ ಉದ್ಭವಿಸಿದೆ.
ಕೋವಿಡ್ ಅಕ್ರಮಗಳ ಕುರಿತು ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಕಳೆದ 2 ವರ್ಷಗಳ ಹಿಂದೆಯೇ ಲೋಕಾಯುಕ್ತದಲ್ಲಿ 40 ದೂರುಗಳನ್ನು ಸಲ್ಲಿಸಿದ್ದರು. ಈ ಪೈಕಿ 2 ದೂರುಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಲೋಕಾಯುಕ್ತರು ಯಾವುದೇ ಕ್ರಮವಿಲ್ಲದೆಯೇ ಮುಕ್ತಾಯಗೊಳಿಸಿದ್ದಾರೆ. ಇನ್ನೂ 38 ದೂರುಗಳ ವಿಚಾರಣೆಯು ಕಳೆದ 2 ವರ್ಷಗಳಿಂದಲೂ ತೆವಳುತ್ತಲೇ ಇದೆ. ಈ ದೂರುಗಳ ವಿಚಾರಣೆಯು 2023ರ ಸೆಪ್ಟಂಬರ್ ಮತ್ತು ಅಕ್ಟೋಬರ್‌ನ ವಿವಿಧ ದಿನಾಂಕಗಳಂದು ನಡೆಯಲಿದೆ ಎಂದು ಗೊತ್ತಾಗಿದೆ.
ಪಿಪಿಇ ಕಿಟ್, ಸ್ಯಾನಿಟೈಸರ್, ವೆಂಟಿಲೇಟರ್ಸ್, ಪಲ್ಸ್ ಆಕ್ಸಿಮೀಟರ್, ಡಯಾಲಿಸಿಸ್ ಯಂತ್ರ, ಥರ್ಮೋಮೀಟರ್, ಆಂಬ್ಯುಲೆನ್ಸ್, ಆರ್‌ಎನ್‌ಎ ಉಪಕರಣ, ಸಿರಿಂಜ್, ಮಾಸ್ಕ್, ಥರ್ಮಲ್ಸ್ಕ್ಯಾನರ್, ಆಕ್ಸಿಜನ್ ಉಪಕರಣ ಸೇರಿದಂತೆ ಹಲವು ರೀತಿಯ ಉಪಕರಣ, ಸಾಧನಗಳ ಖರೀದಿಯಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರುಗಳನ್ನು ಸಲ್ಲಿಸಿದ್ದರು.
ಈ ಎಲ್ಲಾ ದೂರುಗಳಲ್ಲಿಯೂ ಅಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಬಿ ಶ್ರೀರಾಮುಲು, ಡಾ ಕೆ ಸುಧಾಕರ್, ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಡಾ ಮಂಜುಶ್ರೀ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ ಕಾರ್ಯದರ್ಶಿಯಾಗಿದ್ದ ಜಾವೇದ್ ಅಖ್ತರ್, ಪಂಕಜ್‌ಕುಮಾರ್ ಪಾಂಡೆ, ಪ್ರಭುಲಿಂಗ ಕವಳಿಕಟ್ಟಿ, ಅರುಂಧತಿ ಚಂದ್ರಶೇಖರ್, ಮುಖ್ಯ ಪರಿವೀಕ್ಷಕ ಮಹೇಶ್‌ಕುಮಾರ್, ಡಾ ಪ್ರಿಯಾಲತಾ, ಡಾ ಲತಾ ಪರಿಮಳ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಕೋವಿಡ್-19ರ ಜಾಗೃತಿ ಕಾರ್ಯಕ್ರಮಗಳ ಹೆಸರಿನಲ್ಲಿ ಖಾಸಗಿ ವಾಹನಗಳನ್ನು ಬಳಸದೆಯೇ 5 ಕೋಟಿ ರು.ಗೂ ಹೆಚ್ಚಿನ ಮೊತ್ತಕ್ಕೆ ಬಿಲ್ ಸೃಷ್ಟಿಸಿರುವ ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆಯ ಬಿಲ್ವಿದ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ವಿಶೇಷವೆಂದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರನ್ನು ದೂರಿನಲ್ಲಿ ಮೊದಲ ಪ್ರತಿವಾದಿಯನ್ನಾಗಿಸಲಾಗಿತ್ತು.
ಮಾಸ್ಕ್ ತಯಾರಿಕೆ ಕಂಪನಿಗಳಲ್ಲದ ಸಾಫ್ಟ್‌ವೇರ್ ಕಂಪನಿಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಮೂರು ಪದರುಳ್ಳ ಮತ್ತು ಎನ್-95 ಮಾಸ್ಕ್‌ಗಳನ್ನು ಖರೀದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸೇರಿದಂತೆ ಇನ್ನಿತರೆ ಐಎಎಸ್ ಅಧಿಕಾರಿಗಳಿಂದ ವಿವರಣೆ ಕೇಳಿತ್ತು.
ಆಂಧ್ರಪ್ರದೇಶ ಮೂಲದ ಎಸ್‌ಪಿವೈ ಆಗ್ರೋ ಇಂಡಸ್ಟ್ರೀಸ್‌ನಿಂದ 2,500 ರು. ದರದಲ್ಲಿ ಸ್ಯಾನಿಟೈಸರ್ ಖರೀದಿಸಿರುವ ಪ್ರಕರಣವೂ ಸೇರಿದಂತೆ ವಿವಿಧ ಕಂಪನಿಗಳಿಂದ ವಿವಿಧ ದರಗಳಲ್ಲಿ ಸ್ಯಾನಿಟೈಸರ್ ಖರೀದಿಸಿರುವುದಕ್ಕೆ ಸಂಬಂಧಿಸಿದಂತೆ ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳ ವಿರುದ್ಧವೂ ದೂರು ಸಲ್ಲಿಕೆಯಾಗಿತ್ತು.
ಸಾಫ್ಟ್‌ವೇರ್ ಕಂಪನಿ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯಿಂದ ಪಿಪಿಇ ಕಿಟ್ ಖರೀದಿಸಿದ್ದ ಪ್ರಕರಣಗಳ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಸಲ್ಲಿಸಿದ್ದ ದೂರಿನನ್ವಯ ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆ ಸೂಚಿಸಿತ್ತು.
4 ಪಟ್ಟು ಹೆಚ್ಚುವರಿ ದರ ತೆತ್ತು ಆರ್‌ಟಿಪಿಸಿಆರ್ ಉಪಕರಣಗಳನ್ನು ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಹಿತ ಸಲ್ಲಿಕೆಯಾಗಿರುವ ದೂರಿನ ವಿಚಾರಣೆ ನಡೆಯುತ್ತಿದೆ. ಈ ಎಲ್ಲಾ ಪ್ರಕರಣಗಳ ಕುರಿತು ‘ದಿ ಫೈಲ್’ ದಾಖಲೆ ಸಹಿತವಾಗಿ ಸರಣಿ ರೂಪದಲ್ಲಿ 50 ವರದಿಗಳನ್ನು ಪ್ರಕಟಿಸಿತ್ತು.
ಐಎಸ್‌ಒ ಗುಣಮಟ್ಟ ಸೂಚಿಸುವ ಪ್ರಮಾಣ ಪತ್ರ ಮತ್ತು ಸೂಕ್ತ ಪುರಾವೆಗಳೇ ಇಲ್ಲದಿರುವುದು, ಆಸ್ಪತ್ರೆಗಳಲ್ಲಿ ಹಲವು ವರ್ಷಗಳ ಕಾಲ ಬಳಸಿರುವ, ಮುರಿದಿರುವ ಮತ್ತು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆದಿರುವ ಬಗೆಗಿನ ದೂರಿನ ವಿಚಾರಣೆ ತೆವಳುತ್ತಿದೆ.