ಬೆಂಗಳೂರು; ಸಣ್ಣಪುಟ್ಟ ಜಾತಿಯವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿ ಸಾಮಾಜಿಕ ನ್ಯಾಯ ನೀತಿಯನ್ನು ಪಾಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿ, ನೌಕರರನ್ನು ಮುಖ್ಯಮಂತ್ರಿಗಳ ಸಚಿವಾಲಯದಿಂದಲೇ ದೂರ ಇಟ್ಟಿದ್ದಾರೆ ಎಂದು ‘ದಿ ಫೈಲ್’ ವರದಿ ಬೆನ್ನಲ್ಲೇ ಇದೀಗ ನಿವೃತ್ತ ಐಎಎಸ್ ಅಧಿಕಾರಿ ಎಸ್ ಜಿಯಾವುಲ್ಲಾ ಅವರನ್ನು ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಈ ಸಂಬಂಧ 2023ರ ಜೂನ್ 6ರಂದು ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಅರ್ಹ ಉನ್ನತ ಅಧಿಕಾರಿಗಳಿದ್ದರೂ ಸಹ ಅವರನ್ನು ನೇಮಿಸಿಕೊಂಡಿರಲಿಲ್ಲ. ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮುಸ್ಲಿಂ ಅಧಿಕಾರಿಗಳನ್ನು ನೇಮಿಸಬಾರದು ಎಂದು ಸಿದ್ದರಾಮಯ್ಯ ಅವರ ನಿಕಟವರ್ತಿ ಶಾಸಕರೊಬ್ಬರ ಸಲಹೆ ಮೇರೆಗೆ ಯಾವೊಬ್ಬ ಮುಸ್ಲಿಂ ಅಧಿಕಾರಿಯನ್ನೂ ಸಿಎಂ ಕಚೇರಿಗೆ ನೇಮಿಸಿಲ್ಲ ಎಂದು ಹೇಳಲಾಗಿತ್ತು. ಈ ಕುರಿತು ‘ದಿ ಫೈಲ್’ 2023ರ ಮೇ 29ರಂದು ವರದಿ ಪ್ರಕಟಿಸಿತ್ತು.
ಅಲ್ಪಸಂಖ್ಯಾತರ ಅಧಿಕಾರಿಗಳನ್ನು ದೂರವಿರಿಸಿ, ಸ್ವಜಾತಿ, ಬಿಜೆಪಿ ದುರಾಡಳಿತ ಅವಧಿಯಲ್ಲಿನ ಅಧಿಕಾರಿಗಳಿಗೆ ಮಣೆ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿವಾದದ ತೀರ್ಮಾನಗಳನ್ನು ಕೈಗೊಂಡು ಆದೇಶ ಹೊರಡಿಸಿದ್ದ ಬಹುತೇಕ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಚಿವಾಲಯಕ್ಕೆ ನೇಮಿಸಿಕೊಂಡಿದ್ದ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಸಮುದಾಯದ ಅಧಿಕಾರಿ, ನೌಕರರನ್ನು ದೂರವಿರಿಸಿದ್ದು ಆ ಸಮುದಾಯಗಳ ಅಧಿಕಾರಿ ವರ್ಗದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿವೃತ್ತ ಐಎಎಸ್ ಅಧಿಕಾರಿ ಜಿಯಾವುಲ್ಲಾ ಅವರನ್ನು ಹೆಚ್ಚುವರಿ ಕಾರ್ಯದರ್ಶಿಯನ್ನಾಗಿ ಗುತ್ತಿಗೆ ಆಧಾರದ ಮೇರೆಗೆ ನೇಮಿಸಲಾಗಿದೆ.
ಈಗಾಗಲೇ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆ ಕಾರ್ಯಭಾರ ಹೊಂದಿರುವ ರಜನೀಶ್ ಗೋಯಲ್ ಅವರು ಮುಖ್ಯಮಂತ್ರಿಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಏಕಕಾಲದಲ್ಲಿ ಮೂರು ಹುದ್ದೆಗಳಲ್ಲಿ ರಜನೀಶ್ ಗೋಯಲ್ ಅವರು ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಧಿಕಾರಿಶಾಹಿ ವರ್ಗದಿಂದಲೇ ಅಪಸ್ವರ ಕೇಳಿ ಬಂದಿದೆ.
ಅದೇ ರೀತಿ ಎನ್ ಜಯರಾಂ ಅವರನ್ನು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆಯಾದರೂ ವಾರ್ತಾ ಇಲಾಖೆಯ ಜವಾಬ್ದಾರಿ ಜತೆಯಲ್ಲಿಯೇ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿರುವುದಕ್ಕೂ ಅಧಿಕಾರಿಶಾಹಿ ವಲಯದಲ್ಲಿ ಆಕ್ಷೇಪಗಳು ಕೇಳಿ ಬಂದಿವೆ.
ಗೋಯಲ್ ನೇಮಕಕ್ಕೆ ಆಕ್ಷೇಪವೇಕೆ?
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಅರ್ಹ ಐಎಎಸ್ ಉನ್ನತ ಅಧಿಕಾರಿಗಳು ಇದ್ದರೂ ಸಿದ್ದರಾಮಯ್ಯ ಅವರು ರಜನೀಶ್ ಗೋಯಲ್ ಅವರನ್ನೇ ನೇಮಿಸಿಕೊಂಡಿರುವುದಕ್ಕೆ ಅಧಿಕಾರಶಾಹಿ ವಲಯದಲ್ಲಿ ತೀವ್ರ ಆಕ್ಷೇಪಗಳು ಕೇಳಿ ಬಂದಿವೆ.
ಬಿಜೆಪಿ, ಬಜರಂಗ ದಳ ಸೇರಿದಂತೆ ಹಿಂದೂ ಪರ ಸಂಘಟನೆಗಳಿಗೆ ಸೇರಿದ ನೂರಾರು ಕಾರ್ಯಕರ್ತರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಅವುಗಳನ್ನು ವಿಚಾರಣೆಯಿಂದಲೇ ಹಿಂಪಡೆಯುವ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಜನೀಶ್ ಗೋಯಲ್ ಅವರೇ ಸಚಿವ ಸಂಪುಟಕ್ಕೆ ಕಡತವನ್ನು ಮಂಡಿಸಿ ಸರ್ಕಾರದ ಆದೇಶವನ್ನು ಹೊರಡಿಸಿದ್ದರು.
ಅಲ್ಲದೇ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂಪಡೆದುಕೊಂಡಿದ್ದರು ಎಂದು ಬಿಜೆಪಿ ಸಚಿವರು ಪದೇ ಪದೇ ಟೀಕಿಸಿದ್ದರು. ಈ ಸಂಬಂಧ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದುಕೊಂಡಿರುವ ಬಗ್ಗೆ ಮಾಹಿತಿ ಕೇಳಿದ್ದರೂ ಇದೇ ರಜನೀಶ್ ಗೋಯಲ್ ಅವರ ಕಚೇರಿಯು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ.
ಅಷ್ಟೇ ಅಲ್ಲದೇ ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಹಿಂದಿನ ಸರ್ಕಾರದ ಸಚಿವ ಡಾ ಅಶ್ವಥ್‌ನಾರಾಯಣ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ರಜನೀಶ್ ಗೋಯಲ್ ಅವರು ಸೂಚಿಸಿರಲಿಲ್ಲ. ಆದರೀಗ ಇವರನ್ನೇ ತಮ್ಮ ಕಚೇರಿಗೆ ನೇಮಿಸಿಕೊಂಡಿರುವುದು ವಿರೋಧಾಭಾಸಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಜಂಟಿಯಾಗಿ ನಡೆಸಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿಯೂ ಟಿಪ್ಪುವಿನಂತೆ ಸಿದ್ದರಾಮಯ್ಯರನ್ನೂ ಹೊಡೆದು ಹಾಕಿ ಎಂದು ಕೊಲೆಗೆ ನೀಡಿದ್ದ ಪ್ರಚೋದನೆ, ದ್ವೇಷ ಭಾಷಣ ಮಾಡಿದ್ವವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಅಶಾಂತಿ, ಗಲಭೆ ವಾತಾವರಣ ಸೃಷ್ಟಿಗೆ ಕಾರಣವಾಗಿದ್ದರೂ ಪೊಲೀಸ್ ಇಲಾಖೆಯು ನಿರ್ಲಕ್ಷ್ಯ ವಹಿಸಿದ್ದರ ಕುರಿತು ಪ್ರಸ್ತಾಪವಾಗಿತ್ತು. ಪೊಲೀಸ್ ಕೇಸರೀಕರಣದ ಕುರಿತು ಡಿ ಕೆ ಶಿವಕುಮಾರ್ ಅವರು ಕಿಡಿ ಕಾರಿದ್ದನ್ನು ಸ್ಮರಿಸಬಹುದು.
ಅಲ್ಲದೇ ಪಿಎಸ್‌ಐ ಹಗರಣದ ಕುರಿತು ದಾಖಲೆ ಬಿಡುಗಡೆ ಮಾಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಪೊಲೀಸ್ ಇಲಾಖೆ ನೀಡಿದ್ದ ಕಿರುಕುಳದ ಬಗ್ಗೆಯೂ ಇದೇ ಸಭೆಯಲ್ಲಿಯೇ ಕಿಡಿ ಕಾರಿದ್ದರು. ಈ ಸಭೆಯಲ್ಲಿ ರಜನೀಶ್ ಗೋಯಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಭಾಗವಹಿಸಿದ್ದರು. ಆದರೆ ರಜನೀಶ್ ಗೋಯಲ್ ಅವರು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿರುವುದಕ್ಕೆ ಇದುವರೆಗೂ ತಗಾದೆ ತೆಗೆಯದಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸ್ವಜಾತಿ ಅಧಿಕಾರಿಗಳಿಗೆ ಮನ್ನಣೆ
ಅದೇ ರೀತಿ ಸ್ವಜಾತಿ ಕುರುಬ ಸಮುದಾಯಕ್ಕೆ ಸೇರಿದ ಕೆಎಎಸ್ ಅಧಿಕಾರಿ ಶಿವಸ್ವಾಮಿ, ನಿವೃತ್ತ ಅಧಿಕಾರಿ ರಾಮಯ್ಯ ಅವರನ್ನು ಜಂಟಿ ಕಾರ್ಯದರ್ಶಿಯನ್ನಾಗಿ, ಎನ್ ಮಹದೇವ್ ಅವರನ್ನು ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ, ಕೆ ವಿ ಪ್ರಭಾಕರ್ ಅವರನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಈ ಪೈಕಿ ಶಿವಸ್ವಾಮಿ ಮತ್ತು ಎನ್ ಮಹದೇವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎಂದೂ ಗೊತ್ತಾಗಿದೆ.