ಶೇ.40 ಕಮಿಷನ್‌ ಆರೋಪ; ಎಸಿಎಸ್‌ ಹುದ್ದೆಯಲ್ಲೇ ಮುಂದುವರೆದ ರಾಕೇಶ್‌ಸಿಂಗ್‌ಗೆ ಸಚಿವರ ಶ್ರೀರಕ್ಷೆ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರಾವರಿ ನಿಗಮಗಳಲ್ಲಿ ಗುತ್ತಿಗೆದಾರರಿಂದ ಶೇ.40ರಷ್ಟು ಪರ್ಸೆಂಟೇಜ್‌ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿದ್ದ ಆರೋಪವನ್ನೇ ಪ್ರಮುಖ  ಅಸ್ತ್ರವನ್ನಾಗಿಸಿಕೊಂಡಿದ್ದ ಕಾಂಗ್ರೆಸ್‌,   ಅಧಿಕಾರಕ್ಕೇರಿ  ಹಲವು ದಿನಗಳಾದರೂ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಐಎಎಸ್‌ ಅಧಿಕಾರಿ ರಾಕೇಶ್‌ಸಿಂಗ್‌ ಅವರನ್ನು  ಉಪ ಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‍‌ ಅವರು ಇದುವರೆಗೂ ಬಿಡುಗಡೆಗೊಳಿಸಿಲ್ಲ.

 

ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಮತ್ತು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್‌ ಜಯರಾಮ್‌ ಅವರನ್ನು ನೇಮಿಸಿಕೊಂಡಿರುವ ಬೆನ್ನಲ್ಲೇ ಜಲಸಂಪನ್ಮೂಲ ಇಲಾಖೆಯಲ್ಲಿಯೂ ರಾಕೇಶ್‌ ಸಿಂಗ್‌ ಅವರು ಮುಂದುವರೆದಿರುವುದು ಅಧಿಕಾರಿಶಾಹಿಯೊಳಗೆ ಬಿರುಸಿನ ಚರ್ಚೆ ನಡೆದಿದೆ.

 

 

ಪ್ರತಿಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್‌,  ಜಲಸಂಪನ್ಮೂಲ ಇಲಾಖೆಯಲ್ಲಿನ ಭ್ರಷ್ಟಾಚಾರ ಮತ್ತು ಶೇ.40 ಪರ್ಸೆಂಟೇಜ್‌ ಆರೋಪ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಬೊಬ್ಬೆ ಹೊಡೆದಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಜಲಸಂಪನ್ಮೂಲ ಇಲಾಖೆಯಲ್ಲಿ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗಿತ್ತು ಎಂದು ಪ್ರಬಲವಾಗಿ ಆರೋಪಿಸಿದ್ದನ್ನೇ  ಮುಂದಿರಿಸಿಕೊಂಡು ಪ್ರತಿಪಕ್ಷದಲ್ಲಿದ್ದ ಡಿ ಕೆ ಶಿವಕುಮಾರ್‍‌ ಮತ್ತು ಕಾಂಗ್ರೆಸ್‌ ಪಕ್ಷವು ಕೂಡ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿತ್ತು.  ಆದರೀಗ  ರಾಕೇಶ್‌ ಸಿಂಗ್‌ ಅವರೇ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರೆದಿರುವುದು ಅಧಿಕಾರಿಶಾಹಿಯೊಳಗೆ ಚರ್ಚೆಗೆ ಕಾರಣವಾಗಿದೆ.

 

ಸಾಮಾನ್ಯವಾಗಿ ಇಲಾಖೆಗೆ  ಹಿಂದಿನ ಸರ್ಕಾರದ ಅವಧಿಯಲ್ಲಿ ಎಲ್ಲಾ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಆಯುಕ್ತರು, ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿ ತಮಗೆ ಆಪ್ತರಾದ ಮತ್ತು ನಿಷ್ಠರಾದ ಅಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡುತ್ತಾರೆ. ಆದರೆ ಈ ಪ್ರಕ್ರಿಯೆ ಇನ್ನೂ ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ರಾಕೇಶ್‌ ಸಿಂಗ್‌ ಅವರೇ ಇನ್ನು ಮುಂದೆಯೂ ಇದೇ ಇಲಾಖೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ.

 

ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಡಿ ಕೆ ಶಿವಕುಮಾರ್‌ ಅವರು ‘ಈ ಹಿಂದೆ ನಡೆದಿರುವ ಕಾಮಗಾರಿಗಳಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ, ಲೋಪದೋಷಗಳನ್ನು ಪತ್ತೆ ಮಾಡಲು ಪ್ರತ್ಯೇಕ  ಸಲಹಾ ಸಮಿತಿ ರಚಿಸಲಾಗುತ್ತಿದ್ದು  ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡದೇ ನೀರಾವರಿ ಯೋಜನೆಗಳನ್ನು ಮುಗಿಸಬೇಕು,’ ಎಂದು ಸೂಚಿಸಿದ್ದಾರೆ.

 

ಆದರೀಗ ಇಲಾಖೆಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ತನಿಖೆ ಮಾಡಲು ಪ್ರತ್ಯೇಕ ಸಲಹಾ ಸಮಿತಿ ರಚಿಸಲಾಗುತ್ತದೆ ಎಂದು ರಾಕೇಶ್‌ಸಿಂಗ್‌ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸದೆಯೇ ಘೋಷಿಸಿರುವುದು ವಿರೋಧಾಭಾಸವಾಗಿದೆ.

 

 

ಈ ವೇಳೆಯಲ್ಲಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಕೂಡ ಹಾಜರಿದ್ದದ್ದು ವಿಶೇಷ.

 

ಸಚಿವ ಡಿ ಕೆ ಶಿವಕುಮಾರ್‌ರೊಂದಿಗೆ ಸಭೆಯಲ್ಲಿ ಭಾಗವಹಿಸಿರುವ ರಾಕೇಶ್‌ಸಿಂಗ್‌ (ಎಡ ಭಾಗದಲ್ಲಿ)

 

 

ಉಪ ಮುಖ್ಯಮಂತ್ರಿಯೂ ಆಗಿರುವ  ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ನಡೆಸಿದ್ದ ಸಭೆಯಲ್ಲಿ ರಾಕೇಶ್‌ಸಿಂಗ್‌ ಅವರೇ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನೂ ಒದಗಿಸಿದ್ದಾರೆ.

 

 

ಶೇ.40ರ ಕಮಿಷನ್‌ ಆರೋಪ ಮುಚ್ಚಿ ಹಾಕಿದ್ದ ರಾಕೇಶ್‌ಸಿಂಗ್‌?

 

ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣದ ಹಾಗೂ ಶೇ. 40ರಷ್ಟು ಕಮಿಷನ್‌ಗೆ ವಿಚಾರವಾಗಿ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ವಿಚಾರದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರಿಗೆ ಸೂಚಿಸಿದ್ದರು.  ಈ ಸೂಚನೆ ಮೇರೆಗೆ ಹಿಂದಿನ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ಗೆ ಸೂಚಿಸಿದ್ದರು.

 

ಆದರೆ ರಾಕೇಶ್‌ ಸಿಂಗ್‌ ಅವರು ತನಿಖೆ ನಡೆಸದೆಯೇ ಯಾವ ನಿಗಮಗಳ ವಿರುದ್ಧ ಆರೋಪಿಸಲಾಗಿತ್ತೋ ಆ ನೀರಾವರಿ ನಿಗಮಗಳು ನೀಡಿದ್ದ ಸಮಜಾಯಿಷಿಯನ್ನೇ ಪುರಸ್ಕರಿಸಿ ತಮ್ಮ ಹಂತದಲ್ಲೇ ಕ್ಲೀನ್‌ ಚಿಟ್‌ ಕೊಟ್ಟಿದ್ದರು.

 

ಹತ್ತು ಕೋಟಿ ಅನುದಾನ ಮೀರಿದ ಎಲ್ಲಾ ಕಾಮಗಾರಿಗಳು, ಟೆಂಡರ್‌ ಪ್ರಕ್ರಿಯೆ ಅಥವಾ ಬಿಲ್‌ ಪಾವತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕುರಿತಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ತಮ್ಮ ಹಂತದಲ್ಲೇ ಕ್ಲೀನ್‌ ಚಿಟ್‌ ಕೊಟ್ಟುಕೊಂಡಿದ್ದವು.  ಅಲ್ಲದೆ ಶೇ. 40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಕುರಿತು ಒಂದೇ ಒಂದು ದೂರು ಬಂದಿಲ್ಲ ಎಂದು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರಿಗೆ ವರದಿ ನೀಡಿದ್ದವು.

 

40 ಪರ್ಸೆಂಟ್‌ ಕಮಿಷನ್‌ ಹಗರಣಕ್ಕೆ ಕ್ಲೀನ್‌ ಚಿಟ್‌; ತನಿಖೆ ನಡೆಸದೆಯೇ ಮಣ್ಣೆಳೆದು ಮುಚ್ಚಿ ಹಾಕಿದ ಸರ್ಕಾರ

 

ಈ ಸಂಬಂಧ ರಾಕೇಶ್‌ಸಿಂಗ್ ಅಧಿಕಾರಿಗಳೊಂದಿಗೆ 2021ರ ನವೆಂಬರ್‌ 29ರಂದು ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ವಿಶೇಷವೆಂದರೆ ಈ ಪ್ರಕರಣವು ಪ್ರಧಾನಿ ಕಚೇರಿ ಮೆಟ್ಟಿಲೇರಿದ್ದರೂ ಗಂಭೀರವಾಗಿ ಪರಿಗಣಿಸದ ರಾಕೇಶ್‌ಸಿಂಗ್‌ ಅವರು ನಿಗಮಗಳಿಂದಲೇ ವರದಿ ಪಡೆದಿದ್ದಾರೆ. ಹೀಗಾಗಿ ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ಬಿಲ್‌ ಪಾವತಿ ಹಂತ, ಟೆಂಡರ್‌ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ತಮ್ಮ ಹಂತದಲ್ಲಿಯೇ ಕ್ಲೀನ್‌ ಚಿಟ್‌ ಕೊಟ್ಟುಕೊಂಡಿದ್ದವು.

 

ಕರ್ನಾಟಕ ನೀರಾವರಿ ನಿಗಮ, ಕೃಷ್ಣಭಾಗ್ಯ ಜಲನಿಗಮ, ಕಾವೇರಿ ಜಲನಿಗಮ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರು ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿದ್ದಾರೆ. ಇದನ್ನಾಧರಿಸಿ ರಾಕೇಶ್‌ಸಿಂಗ್‌ ಅವರು 2021ರ ಡಿಸೆಂಬರ್‌ 01ರಂದೇ ವರದಿ ಸಲ್ಲಿಸಿದ್ದಾರೆ. ನಾಲ್ಕೂ ನಿಗಮಗಳೂ ಕೆಪಿಡಬ್ಲ್ಯೂಡಿ ಕೋಡ್‌ ಮತ್ತು ಕೆಟಿಪಿಪಿ ಕಾಯ್ದೆ ಮತ್ತು ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಆದೇಶ ಮತ್ತು ಸುತ್ತೋಲೆಗಳನ್ನು ಪಾಲಿಸುತ್ತಿವೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

 

‘ಹಾಲಿ ಮುಖ್ಯಮಂತ್ರಿ ಅವರು ಅಧಿಕಾರ ವಹಿಸಿಕೊಂಡ ನಂತರ 10 ಕೋಟಿ ರು.ಗೂ ಮೀರಿದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ, ಬಿಲ್‌ ಪಾವತಿ, ಭೂ ಸ್ವಾಧೀನದ ಬಾಕಿ ಮೊತ್ತ, ಸಣ್ಣ ಗುತ್ತಿಗೆದಾರರಿಗೆ ಆದ್ಯತೆ ಮೇಲೆ ಹಣ ಪಾವತಿಸಲಾಗುತ್ತಿದೆ. ಯಾವುದೇ ಬಿಲ್‌ಗಳು ಪಾವತಿಗಾಗಿ ಬಾಕಿ ಉಳಿದಿಲ್ಲ. ಈ ಬಿಲ್‌ಗಳ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ,’ ಎಂದು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಲಾಗಿತ್ತು.

 

ಕಾವೇರಿ ನೀರಾವರಿ ನಿಗಮದ ಉತ್ತರವೇನು?

 

2021ರ ಜುಲೈ 28ರಿಂದ ಇಲ್ಲಿಯವರೆಗೆ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 10.00 ಕೋಟಿ ಮೀರಿದ ಯಾವುದೇ ಕಾಮಗಾರಿಯ ಟೆಂಡರ್‌ನ್ನು ಅನುಮೋದಿಸಿರುವುದಿಲ್ಲ. ಹಾಗೂ 10.00 ಕೋಟಿ ಮೀರಿದ ಬಿಲ್‌ ಪಾವತಿಯೂ ಸಹ ಮಾಡಿರುವುದಿಲ್ಲ ಎಂದು 2021ರ ನವೆಂಬರ್‌ 29ರಂದು ಮಾಹಿತಿ ಒದಗಿಸಿತ್ತು.

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ  2021ರ ಜುಲೈ 28ರಂದು ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ 10.00 ಕೋಟಿ ರು.ಮೀರಿದ ಯಾವುದೇ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಅನುಮೋದಿಸಿಲ್ಲ. ಈ ಸಂಬಂಧ ಈ ಕಚೇರಿಯಲ್ಲಿ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ. ಈ ಅವಧಿಯಲ್ಲಿ ನಿಗಮವು ಬಿಲ್‌ಗಳನ್ನು ಶೇ.80ರಷ್ಟು ಕಾಮಗಾರಿಗಳಿಗೆ ಆದ್ಯತೆ ಮೇರೆಗೆ , ಸಣ್ಣ ಗುತ್ತಿಗೆದಾರರಿಗೆ ಹಿರಿತನದ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ. ಮತ್ತು ಬಾಕಿ ಉಳಿದಿರುವ ಶೇ.20ರಷ್ಟು ಅನುದಾನವನ್ನು ಕಾಮಗಾರಿಯ ತುರ್ತು ಅವಶ್ಯಕತೆಗಳಿಗನುಗುಣವಾಗಿ ಹಾಗೂ ಕಾಮಗಾರಿಯ ಪ್ರಗತಿಯ ದೃಷ್ಟಿಯಿಂದ ಬಿಲ್‌ಗಳನ್ನು ಪಾವತಿ ಮಾಡಲಾಗಿತ್ತು.

 

10.00 ಕೋಟಿ ಹಾಗೂ ಅದರ ಮೇಲ್ಪಟ್ಟಂಎ ಎಸ್‌ಡಿಪಿ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಸಾಕಷ್ಟು ಅನುದಾನ ಲಭ್ಯತೆ ಇದ್ದು ಆರ್ಥಿಕ ಪ್ರಗತಿ ಸಾಧಿಸಬೇಕಾಗಿದ್ದರಿಂದ ಪಾವತಿಸಲಾಗಿದೆ. ಈ ಬಿಲ್‌ನ್ನೂ ಹಿರಿತನದ ಆಧಾರದ ಮೇಲೆ ಪಾವತಿಸಲಾಗಿದೆ. ಪ್ರಸ್ತುತ ಎಸ್‌ಡಿಪಿ ಅಡಿಯಲ್ಲಿ 32.37 ಕೋಟಿ ಅನುದಾನ ಲಭ್ಯತೆ ಇದ್ದು ಯಾವುದೇ ಬಿಲ್‌ಗಳು ಪಾವತಿಗಾಗಿ ಬಾಕಿ ಉಳಿದಿಲ್ಲ. ಹಾಗೆಯೇ ಈ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ ಎಂದು 2021ರ ನವೆಂಬರ್‌ 30ರಂದು ಬರೆದ ಪತ್ರದಲ್ಲಿ ವಿವರಿಸಿತ್ತು.

 

ಹಾಗೆಯೇ ಜೆಎನ್‌ಎಸ್‌ ಸುಪ್ರದ ಏಜೆನ್ಸಿ ನಿರ್ವಹಿಸುತ್ತಿರುವ ಕಾಮಗಾರಿ ಪ್ರಗತಿಯ ಹಿತದೃಷ್ಟಿಯಿಂದ ಮುಖ್ಯ ಅಭಿಯಂತರರ ಕೋರಿಕೆ ಮೇರೆಗೆ 34.13 ಕೋಟಿ ರು.ಗಳ ಪೈಕಿ ಭಾಗಶಃ ಬಿಲ್‌ನ್ನು ಮಾತ್ರ ಪಾವತಿಸಲಾಗಿದೆ. ಹಾಗೆಯೇ ಬಿಲ್‌ ಪಾವತಿ ಸಂಬಂಧ ಯಾವುದೇ ದೂರುಗಳು ಈ ಕಚೇರಿಯಲ್ಲಿ ಸ್ವೀಕೃತವಾಗಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ಒದಗಿಸಿದ್ದರು.

 

ಕೃಷ್ಣಾ ವ್ಯಾಪ್ತಿ, ವಾರಾಹಿ, ಸೌಪರ್ಣಿಕಾ ಯೋಜನೆ, ಕಾರಂಜಾ ಮತ್ತು ಗೋದಾವರಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆದರೆ 2021ರ ಜುಲೈ 27ರಿಂದ ಇಲ್ಲಿಯವರೆಗೆ ಯಾವುದೇ ಕಾಮಗಾರಿಯನ್ನು ನಿಗಮವು ಅನುಮೋದಿಸಿಲ್ಲ. ನಿಗಮವು ಪ್ರತಿ ತಿಂಗಳೂ ಬಾಕಿ ಬಿಲ್‌ಗಳನ್ನು ಪಾವತಿಸುತ್ತಿದೆ. 2021ರ ಜುಲೈ 27ರಿಂದ ಇಲ್ಲಿಯವರೆಗೆ ಒಟ್ಟಾರೆ 38,850.08 ಲಕ್ಷ ರುಗ.ಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2021ರ ಜುಲೈ 30ರಿಂದ ನವೆಂಬರ್‌ 8ರವರೆಗೆ ಕಾಮಗಾರಿಗಳಿಗಾಗಿ 11,211.12 ಲಕ್ಷ ರು., ಮತ್ತು 2021ರ ನವೆಂಬರ್‌ 20ರಂದು 17,214.23 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದೆ ಎಂದು ವಿವರ ಒದಗಿಸಿತ್ತು.

 

ಇನ್ನುಳಿದ ವಿಶ್ವೇಶ್ವರಯ್ಯ ಜಲನಿಗಮ ಸಹ 10.00 ಕೋಟಿ ರು.ಗೂ ಮೀರಿದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮತ್ತು ಬಾಕಿ ಬಿಲ್‌ಗಳ ಪಾವತಿ ಸಂಬಂಧ ಯಾವುದೇ ದೂರುಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿಸಿರುವುದು ವ್ಯವಸ್ಥಾಪಕ ನಿರ್ದೇಶಕರು ಪತ್ರಗಳನ್ನು ಬರೆದಿದ್ದರು.

 

ಗುತ್ತಿಗೆದಾರರ ಪತ್ರದಲ್ಲಿ ಇರುವ ಅಂಶವನ್ನು ಪರಿಶೀಲನೆ ನಡೆಸಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಿಂದಿನ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶಿಸಿದ್ದರು.

 

‘ನಮ್ಮ ಸರ್ಕಾರದ ಅವಧಿಯಲ್ಲಿ ಅಂತಿಮವಾಗಿರುವ ಟೆಂಡರ್ ಪ್ರಕ್ರಿಯೆಗಳ ಬಗ್ಗೆಯೂ ವಿಶೇಷವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಹಿಂದಿನ ಸಂಪುಟ ಸಭೆಯಲ್ಲಿ ಟೆಂಡರ್ ಅಂದಾಜು ಹಾಗೂ ಪರಿಶೀಲನೆ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎರಡು ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಕೂಡಲೇ ಕಾರ್ಯಗತಗೊಳಿಸಬೇಕು,’ ಎಂದು ಸೂಚಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts