ನೂರು ದಿನ ಪೂರ್ಣ; ಸಂಭ್ರಮಾಚರಣೆಯ ಖಯಾಲಿಗೆ ಬಿದ್ದ ಬಸವರಾಜ ಬೊಮ್ಮಾಯಿ

ಬೆಂಗಳೂರು; ಬಿ ಎಸ್‌ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಎರಡನೇ ವರ್ಷದ ಸಂಭ್ರಮಾಚರಣೆ ಮಾಡಿರುವ ಕಾರ್ಯಕ್ರಮ ಹಸಿರಾಗಿರುವಾಗಲೇ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಸಂಭ್ರಮ ಆಚರಿಸಲು ಸಜ್ಜಾಗುತ್ತಿದ್ದಾರೆ. ಯಡಿಯೂರಪ್ಪ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿ ವಿವರವನ್ನೇ ಬಸವರಾಜ ಬೊಮ್ಮಾಯಿ ಅವರ 100 ದಿನ ಪೂರ್ಣಗೊಳಿಸಿರುವ ಸಂಭ್ರಮದ ಸಾಧನೆ ಪಟ್ಟಿಗೆ ಸೇರಿಸಲು ಅಧಿಕಾರಿಗಳು ಅಂತಿಮ ತಯಾರಿ ನಡೆಸಿದ್ದಾರೆ.

ಜುಲೈ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರು ಇದೇ ಅಕ್ಟೋಬರ್‌ ಅಂತ್ಯಕ್ಕೆ ನೂರು ದಿನಗಳನ್ನು ಪೂರೈಸಲಿದ್ದಾರೆ. ಈ ನೂರು ದಿನಗಳ ಅವಧಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ, ನೂತನ ಕಾರ್ಯಕ್ರಮಗಳೂ, ಪ್ರಮುಖ ಸಾಧನೆಗಳು, ಸಚಿವ ಸಂಪುಟ ಸಭೆಗಳ ನಿರ್ಣಯಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳು, ಕೋವಿಡ್‌ 19 ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ತೆಗೆದುಕೊಂಡ ಕ್ರಮಗಳು ಮತ್ತು ಸಾಧನೆಗಳ ಪಟ್ಟಿ ತಯಾರಿಕೆಯಲ್ಲಿ ಅಧಿಕಾರಿಗಳು ಮುಳುಗಿದ್ದಾರೆ.

ಇಲಾಖಾವಾರು ಮಾಹಿತಿಗಳನ್ನು 2021ರ ಅಕ್ಟೋಬರ್‌ 25 ರೊಳಗೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಅವರು 2021ರ ಅಕ್ಟೋಬರ್‌ 21ರಂದು ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಈ ಟಿಪ್ಪಣಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ನೂರು ದಿನಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹಾಗೂ ತನ್ಮೂಲಕ ಸಾರ್ವಜನಿಕರಿಗೆ ಪ್ರಗತಿ ಕುರಿತು ಮಾಹಿತಿ ನೀಡಬೇಕಾಗಿರುತ್ತದೆ. ಹೀಗಾಗಿ ಜುಲೈ 28ರಿಂದ ಅಕ್ಟೋಬರ್‌ ಅಂತ್ಯದವರೆಗೆ ಪ್ರಗತಿ ಸಾಧನೆ ಕುರಿತು ಮಾಹಿತಿ ನೀಡಬೇಕು,’ ಎಂದು ಸೂಚಿಸಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ನಂತರ ಹಲವು ದಿನಗಳ ಕಾಲ ದೆಹಲಿ ಯಾತ್ರೆ ಕೈಗೊಂಡಿದ್ದರು. ಈ ಮಧ್ಯೆಯೇ ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟಿನಲ್ಲಿ ಮುಳುಗಿದ್ದರು. ಪ್ರಮುಖವಾಗಿ ಆನಂದ್‌ಸಿಂಗ್‌ ಅವರ ಭಿನ್ನಮತವನ್ನು ಉಪಶಮನಗೊಳಿಸಿದರು. ವಿಜಯನಗರ ಜಿಲ್ಲೆಯನ್ನು ಉದ್ಘಾಟಿಸಿದರು. ಸುದ್ದಿವಾಹಿನಿಗಳು ನಡೆಸಿದ್ದ ಸಂದರ್ಶನದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಹಾನಗಲ್‌, ಸಿಂಧಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಎರಡು ಬಾರಿ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಗಳಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿಯಾಗಿ ಅಧಿಕಾರ ಪದಗ್ರಹಣ ಮಾಡಿದ ನಂತರ ಏಕವ್ಯಕ್ತಿ ಸಂಪುಟ ನಡೆಸಿದ್ದ ಬಸವರಾಜ ಬೊಮ್ಮಾಯಿ ಇಷ್ಟು ದಿನ ಹೆಂಗೋ ಕೆಲಸ ಮಾಡಿದ್ದೀರೋ ಗೊತ್ತಿಲ್ಲ, ಇನ್ನುಂದೆ ಚಲ್ತಾ ಹೈ ಎಂದರೆ ನಡೆಯುವುದಿಲ್ಲ. ಬಾಕಿ ಇರುವ ಕಡತಗಳ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಆಜ್ಞಾಪಿಸಿದ್ದರು. ಸೆಪ್ಟಂಬರ್‌ನಲ್ಲಿ 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಗಳು ಕಡತಗಳು ವಿಲೇವಾರಿಯಾಗದೇ ಇಲಾಖೆಗಳಲ್ಲಿ ಕೊಳೆಯುತ್ತಿದ್ದವು. ಇದರ ಮಧ್ಯೆ ನೆರೆ ಪೀಡಿತ ಪ್ರದೇಶಗಳಲ್ಲಿ ತಿರುಗಾಟ ನಡೆಸಿದ್ದರು. ಸೆಪ್ಟಂಬರ್‌ನಲ್ಲಿ ಅಧಿವೇಶನ ನಡೆಸಿದ್ದರು. ಇದನ್ನು ಹೊರತುಪಡಿಸಿದರೆ 100 ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಸಾಧಿಸಿದ್ದಾದರೂ ಏನು ಎಂಬುದು ಪ್ರಶ್ನಾರ್ಹವಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ 2 ವರ್ಷದ ಅವಧಿಯಲ್ಲಿ ಮಂಡಿಸಿದ್ದ ಬಜೆಟ್‌ ಮೇಲೆ ಕೈಗೊಂಡ ಹಲವು ಕಾರ್ಯಕ್ರಮ ಮತ್ತು ಬಹುತೇಕ ಯೋಜನೆಗಳಿಗೆ ಇನ್ನೂ ಸರ್ಕಾರದ ಆದೇಶಗಳು ಹೊರಬಿದ್ದಿಲ್ಲ. ಮುಂದುವರೆದ ಮತ್ತು ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಸಾಧಿಸಿರುವ ಪ್ರಗತಿಯ ವಿವರಗಳನ್ನೇ 100 ದಿನದಲ್ಲಿ ಅದರ ವೇಗದ ವಿವರಗಳನ್ನಷ್ಟೇ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಜಲಾನಯನ ಅಭಿವೃದ್ಧಿ ಮತ್ತು ಸಹಕಾರ ಇಲಾಖೆಯು 100 ದಿನಗಳ ಅವಧಿಯಲ್ಲಿ ವಿವಿಧ ಯೋಜನೆಗಳ ಪ್ರಗತಿ ವಿವರಗಳನ್ನು ಸಲ್ಲಿಸಿವೆ. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ 8.91 ಕೋಟಿಗಳ ವೆಚ್ಚ ಭರಿಸಿ 119 ವಿವಿಧ ನೀರು ಸಂಗ್ರಹಣೆಗೆ ಕ್ರಮ ಕೈಗೊಂಡಿದೆ. ಬರಗಾಲ ತಡೆಯುವಿಕೆ ಕುರಿತು ಈವರೆವಿಗೆ ಬಿಡುಗಡೆಯಾಗಿದ್ದ 20.00 ಕೋಟಿ ರು.ನಲ್ಲಿ 14.51 ಕೋಟಿ ವೆಚ್ಚ ಮಾಡಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಡೆ ಅಣೆ/ಕಿಂಡಿ ಅಣೆ ನಿರ್ಮಾಣ ಕಾರ್ಯಕ್ರಮದಡಿಯಲ್ಲಿ 2021-22ನೇ ಸಾಲಿನಲ್ಲಿ 2,105 ಲಕ್ಷ ರು.ಗಳ ಆರ್ಥಿಕ ಗುರಿಯೊಂದಿಗೆ 421 ತಡೆ ಅಣೆಗಳ ಭೌತಿಕ ಗುರಿಯನ್ನಿರಿಸಲಾಗಿದೆ ಎಂದು ಜಲಾನಯನ ಇಲಾಖೆ ಅಧಿಕಾರಿಗಳು ಸಾಧನೆ ಪಟ್ಟಿ ತಯಾರಿಸಿರುವುದು ಗೊತ್ತಾಗಿದೆ.

2021-22ನೇ ಸಾಲಿನಲ್ಲಿ 4650 ಹೆಕ್ಟೇರ್‌ ಪ್ರದೇಶದಲ್ಲಿ ಸವಳು-ಜವಳು, ಆಮ್ಲ ಮಣ್ಣಿನ ಉಪಚಾರ ಕೈಗೊಳ್ಳಲು 2,506.75 ಲಕ್ಷ ರು.ಗಳ ಅನುದಾನ ಕ್ರಿಯಾ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆ ಕೋರಿ ಸಲ್ಲಿಸಿದೆ. ಕೃಷಿ ಉತ್ಪಾದನೆ ಹೆಚ್ಚಿಸಲು 2021-22ನೇ ಸಾಲಿಗೆ ಈ ಅವಧಿಯಲ್ಲಿ 929.65 ಲಕ್ಷ ಬಿಡುಗಡೆಯಾಗಿದ್ದು, ಇದರಲ್ಲಿ 49.83 ಲಕ್ಷ ವೆಚ್ಚ ಮಾಡಲಾಗಿದೆ. 147 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ, ಪಶು ಸಂಗೋಪನೆ, ಮರ ಅಧಾರಿತ ಸಮಗ್ರ ಕೃಷಿ ಪದ್ಧತಿಗಳೊಂದಿಗೆ ಸೈಲೇಜ್‌ ಘಟಕ ಅನುಷ್ಠಾನಗೊಂಡಿದೆ. ಇದರಲ್ಲಿ 178 ಫಲಾನುಭವಿಗಳು ಸವಲತ್ತುಗಳನ್ನು ಪಡೆದಿದ್ದಾರೆ.

ಈಗಾಗಲೇ ರಾಜ್ಯದ 26 ಜಿಲ್ಲೆಗಳಲ್ಲಿ ಈಗಾಗಲೇ ಕಂಪನಿ ಕಾಯ್ದೆಯಡಿ 130 ರೈತ ಉತ್ಪಾದಕ ಸಂಸ್ಥೆಗಳನ್ನು ನೋಂದಣಿ ಮಾಡಲಾಗಿದೆ. ಇದರಲ್ಲಿ 85 ರೈತ ಉತ್ಪಾದಕರ ಸಂಸ್ಥೆಗಳಲ್ಲಿ ಪರಿಕರ ವ್ಯವಹಾರ ಮತ್ತು 27 ರೈತ ಉತ್ಪಾದಕರ ಸಂಸ್ಥೆಗಳು ಉತ್ಪನ್ನಗಳ ವ್ಯವಹಾರ ಆರಂಭಿಸಿವೆ ಎಂದು ಅಧಿಕಾರಿಗಳು ಪಟ್ಟಿಯಲ್ಲಿ ತಿಳಿಸಿದ್ದಾರೆ.

ಇನ್ನು, 2021ರ ಆಗಸ್ಟ್‌ 15ರಂದು ಘೋಷಿಸಿದ್ದ 750 ಅಮೃತ ರೈತ/ಮೀನುಗಾರರ/ ರೈತ/ ನೇಕಾರರ ಉತ್ಪಾದಕರ ಸಂಸ್ಥೆಗಳ ರಚನೆ ಘೋಷಣೆ ಕುರಿತು ಸಂಪನ್ಮೂಲ ಸಂಸ್ಥೆಗಳ ಆಯ್ಕೆಯಾಗಿ ಟೆಂಡರ್‌ ಕಾರ್ಯ ಇನ್ನೂ ಅಂತಿಮಗೊಂಡಿಲ್ಲ. ಸುಜಲ ನಿರ್ಗಮನ ಕಾರ್ಯಕ್ರಮದಡಿಯಲ್ಲಿ 2021-22ನೇ ಸಾಲಿಗೆ ನಿಗದಿಯಾಗಿರುವ 501.83 ಲಕ್ಷ ಅನುದಾನದಲ್ಲಿ ಇದುವರೆಗೆ 189.96 ಲಕ್ಷ ಬಿಡುಗಡೆಯಾಗಿದ್ದು, ಆಗಸ್ಟ್‌ 2021ರಿಂದ ಅಕ್ಟೋಬರ್‌ ಅಂತ್ಯದವರಿಗೆ 36.50 ಲಕ್ಷ ವೆಚ್ಚಾಗಿದೆ ಎಂದು ಅಧಿಕಾರಿಗಳು ಸಾಧನೆ ಲೆಕ್ಕ ತೋರಿಸಿದ್ದಾರೆ.

ಅದೇ ರೀತಿ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಮತ್ತು ಶೇ.3ರ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಣೆಗೆ ಸಂಬಂಧಿಸಿದಂತೆ ಜುಲೈ 28ರಿಂದ ಅಕ್ಟೋಬರ್‌ 22ರವರೆಗೆ ಸಹಕಾರ ಸಂಘಗಳ ಮೂಲಕ 6.78 ಲಕ್ಷ ರೈತರಿಗೆ 3,032.14 ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಣೆ ಗುರಿ ಪೈಕಿ 4.90 ಲಕ್ಷ ರೈತರಿಗೆ 3,214.95 ಕೋಟಿ ಸಾಲ ವಿತರಿಸಲಾಗಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ.

ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಣೆ ಸಂಬಂಧ ಜುಲೈ 28ರಿಂದ ಅಕ್ಟೋಬರ್‌ವರೆಗೆ 160.76 ಕೋಟಿ, ಸ್ವಸಹಾಯ ಗುಂಪುಗಳಿಗೆ 200 ಕೋಟಿ ಸಾಲ ವಿತರಿಸಲಾಗಿದೆ. ಹಾಗೆಯೇ 255.72 ಕೋಟಿಗಳ ಬಡ್ಡಿ ಸಹಾಯ ಧನವನ್ನು ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಹಕಾರ ಇಲಾಖೆಯು ವರದಿ ನೀಡಿದೆ.

ಕಸ್ಕಾರ್ಡ್‌ ಬ್ಯಾಂಕ್‌ ನಬಾರ್ಡ್‌ನಿಂದ ಪುನರ್‌ ಧನ ಪಡೆಯಲು 1,550 ಕೋಟಿ ಗಳ ಸಾಲಕ್ಕೆ 2021-22ರ ಅವಧಿಗೆ ಸರ್ಕಾರದ ಖಾತರಿ ನೀಡಿದೆ. ಡಿಸಿಸಿ ಬ್ಯಾಂಕ್‌ಗಳಲ್ಲಿ ಸರ್ಕಾರದ ಸಹಭಾಗಿತ್ವವನ್ನು ಪ್ರೋತ್ಸಾಹಿಸಲು 21 ಡಿಸಿಸಿ ಬ್ಯಾಂಕ್‌ಗಳಿಗೆ 10 ಲಕ್ಷಗಳ ಮಿತಿಗೊಳಪಟ್ಟು 2.10 ಕೋಟಿ ಬಿಡುಗಡೆ ಮಾಡಲಾಗಿದೆ.

ಇದಲ್ಲದೆ ಕೋವಿಡ್‌ ಸಾಂಕ್ರಾಮಿಕ ತಡೆಗಟ್ಟಲು ಸಹಕಾರ ಇಲಾಖೆಯ ಕಚೇರಿಗಳು, ಸಹಕಾರ ಸಂಘಗಳ ಪ್ರವೇಶ ದ್ವಾರದಲ್ಲಿ ಹ್ಯಾಂಡ್‌ ಸ್ಯಾನಿಟೈಸೇಷನ್‌ಗೆ ಕ್ರಮವಿಡಲಾಗಿದೆ. ಸಹಕಾರ ಸಂಘಗಳ ವಾರ್ಷಿಕ ಸಾಮಾನ್ಯ ಸಭೆಗಳನ್ನು ವರ್ಚುವಲ್‌ ಮತ್ತು ವಿಡಿಯೋ ಮೂಲಕ ನಡೆಸಲು ಅನುಮತಿ ನೀಡಲಾಗಿದೆ. 2021ರ ಅಕ್ಟೋಬರ್‌ 22ರ ಅಂತ್ಯಕ್ಕೆ 17,498 ನೋಂದಾಯಿತ ರೈತರಿಂದ 98,816 ಕ್ವಿಂಟಾಲ್‌ ಪ್ರಮಾಣದ ಹೆಸರುಕಾಳನ್ನು ಖರೀದಿಸಲಾಗಿದೆ ಎಂದು ಸಹಕಾರ ಇಲಾಖೆಯು ಸಾಧನೆಪಟ್ಟಿಯನ್ನು ನೀಡಿದೆ.

ಬಿ ಎಸ್‌ ಯಡಿಯೂರಪ್ಪ ಅವರು ಮೊದಲ ಮತ್ತು ಎರಡನೇ ವರ್ಷ ಪೂರೈಸಿದ್ದನ್ನು ಸಂಭ್ರಮಿಸಿದ್ದರು. ಇದಕ್ಕಾಗಿ ವಿಧಾನಸೌಧದ ನೆಲಮಹಡಿಯಲ್ಲಿರುವ ಬ್ಯಾಂಕ್ವೆಂಟ್‌ ಹಾಲ್‌ನಲ್ಲಿ ನಡೆದಿದ್ದ ಸಂಭ್ರಮಾಚರಣೆಯ ಸಮಾರಂಭ, ಪುಸ್ತಕ ಮುದ್ರಣ, ಸಾಕ್ಷ್ಯ ಚಿತ್ರ ನಿರ್ಮಾಣ, ಪತ್ರಿಕೆ ಮತ್ತು ಟಿ ವಿ ಚಾನಲ್‌, ರೇಡಿಯೋಗಳಲ್ಲಿ ನೀಡಿದ್ದ ಜಾಹೀರಾತಿಗೆ ಒಟ್ಟು 7.96 ಕೋಟಿ ರು. ಖರ್ಚಾಗಿತ್ತು.

ಒಟ್ಟು ವೆಚ್ಚ 7.96 ಕೋಟಿ ರು.ನಲ್ಲಿ ರಾಜ್ಯ, ಪ್ರಾದೇಶಿಕ, ಜಿಲ್ಲಾ ಮತ್ತು ಟಿ ವಿ ಚಾನಲ್‌ಗಳಿಗೆ ನೀಡಿದ್ದ ಸರ್ಕಾರದ ಎರಡೂ ವರ್ಷದ ಸಾಧನೆ ಕುರಿತು ನೀಡಿದ್ದ ಪತ್ರಿಕೆಗಳ ಜಾಹೀರಾತಿಗೆ 6.62 ಕೋಟಿ ರು. ವೆಚ್ಚವಾಗಿತ್ತು. ಕಿಯೋನಿಕ್ಸ್‌ ಮೂಲಕ 2020-21ನೇ ಸಾಲಿನಲ್ಲಿ ಏರ್ಪಡಿಸಿದ್ದ ಮೊದಲ ವರ್ಷದ ಸಮಾರಂಭಕ್ಕೆ 46,01,357 ರು., 2021-22ರಲ್ಲಿ ಎರಡನೇ ವರ್ಷದ ಸಮಾರಂಭಕ್ಕೆ 54,19,836 ರು. (ಅನ್ವಯವಾಗುವ ತೆರಿಗೆ ಪ್ರತ್ಯೇಕ) ಸೇರಿ ಒಟ್ಟು 1.02 ಕೋಟಿ ವೆಚ್ಚವಾಗಿತ್ತು.

ಅದೇ ರೀತಿ ಬಿಜೆಪಿ ಸರ್ಕಾರವು ಒಂದು ವರ್ಷ ಪೂರೈಸಿದ್ದ (2020-21) ಸಂದರ್ಭದಲ್ಲಿ ಹೊರತಂದಿದ್ದ ಕನ್ನಡ ಪುಸ್ತಕದ ಮುದ್ರಣಕ್ಕೆ 89,000 ರು. ವೆಚ್ಚವಾಗಿದ್ದರೆ ಎರಡನೇ ವರ್ಷ ಪೂರೈಸಿದ್ದ ಸಂದರ್ಭದಲ್ಲಿ (2021-22) 24,76,800 ರು. ಖರ್ಚಾಗಿದೆ. ಇನ್ನು, ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆಂದು 7,87,500 ರು. ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts