ಆಗ ವಿಜಯೇಂದ್ರ, ಈಗ ಯತೀಂದ್ರ; ಸಿಎಂ ಸಚಿವಾಲಯದ ಗುತ್ತಿಗೆ ನೌಕರರಲ್ಲಿ ವರುಣಾ ಕ್ಷೇತ್ರದವರ ಸಿಂಹಪಾಲು

ಬೆಂಗಳೂರು; ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮಂಜೂರಾಗಿರುವ ಒಟ್ಟು 120 ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು ನಡೆಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಡೀ ಮುಖ್ಯಮಂತ್ರಿ ಸಚಿವಾಲಯಕ್ಕೆ ಮೈಸೂರು ಜಿಲ್ಲೆಗೆ ಸೇರಿದ ಮಂದಿಯನ್ನೇ ಅಧಿಕ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿರುವುದು ಇದೀಗ ಬಹಿರಂಗವಾಗಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ವರುಣ ವಿಧಾನಸಭೆ ಕ್ಷೇತ್ರದ ಮಂದಿ ಮೂರು ಪಟ್ಟಿಯಲ್ಲಿ ಸಿಂಹಪಾಲು ಪಡೆದಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.

 

ಗೃಹ ಕಚೇರಿ ಕೃಷ್ಣಾ ಮತ್ತು ವಿಧಾನಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 235ರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವರುಣ ವಿಧಾನಸಭೆ ಕ್ಷೇತ್ರಕ್ಕೆ ಸೇರಿದವರನ್ನೇ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದೆ. ಈ ಪಟ್ಟಿಯನ್ನು ಎಲ್ಲಿಯೂ ಬಹಿರಂಗಗೊಳಿಸದಂತೆ ನೇಮಕವಾದವರಿಗೆ ಮತ್ತು ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ ಎಂದು ಗೊತ್ತಾಗಿದೆ.

 

ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಅವರ ಸ್ವಕ್ಷೇತ್ರ ಶಿಕಾರಿಪುರ, ಹಾವೇರಿ ಜಿಲ್ಲೆಯವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. ಆ ಅವಧಿಯಲ್ಲಿಯೂ ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಶಾಸಕ ಬಿ ವೈ ವಿಜಯೇಂದ್ರ ಅವರ ಅಣತಿ ಮೇರೆಗೆ ಮುಖ್ಯಮಂತ್ರಿ ಸಚಿವಾಲಯಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಆ ವೇಳೆಯಲ್ಲಿಯೂ ಶಿಕಾರಿಪುರ ಕ್ಷೇತ್ರದವರಿಗೆ ಮತ್ತು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಗಲೂ ಮೀಸಲಾತಿ ಪಾಲನೆಯಾಗಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.

 

ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರ ಅಣತಿಯಂತೆಯೇ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಯಥಾ ಪ್ರಕಾರ  ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವ ಕ್ಷೇತ್ರ ವರುಣಾ ವಿಧಾನಸಭೆ ಕ್ಷೇತ್ರದ ಮಂದಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಪಟ್ಟಿಯಿಂದ ಕಂಡು ಬಂದಿದೆ.

 

ಮುಖ್ಯಮಂತ್ರಿಗಳ ಸಚಿವಾಲಯ, ಗೃಹ ಕಚೇರಿ ಕೃಷ್ಣಾದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಪಟ್ಟಿಯನ್ನು ‘ದಿ ಫೈಲ್‌’ ಇದೀಗ ಬಹಿರಂಗಗೊಳಿಸಿದೆ. 2023ರ ಜೂನ್‌ 2, ಜೂನ್‌ 3 ಮತ್ತು ಜೂನ್‌ 15ರಂದು ಹೊರಡಿಸಿರುವ ಸರ್ಕಾರದ ಆದೇಶ (ಸಂಖ್ಯೆ;ಸಿಆಸುಇ 61 ಎಎಂಸಿ 2023 ಬೆಂಗಳೂರು ದಿನಾಂಕ 02/06/2023)ದ ಪ್ರಕಾರ ಮೂರು ಹಂತದಲ್ಲಿ 70 ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿ ಆದೇಶ ಹೊರಡಿಸಲಾಗಿದೆ. ಮೂರು ಹಂತದಲ್ಲಿ ಹೊರಡಿಸಿರುವ ನೇಮಕಾತಿ ಆದೇಶ ಪಟ್ಟಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸೇರಿದ ಎಲ್ಲಾ ವಿಭಾಗದ ಕಚೇರಿಗಳಿಗೂ ಗುತ್ತಿಗೆ ಆಧಾರದ ಮೇಲಿನ ನೇಮಕ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಕೆಎಎಸ್‌ ಅಧಿಕಾರಿ ಶಿವಸ್ವಾಮಿ ಅವರ ಸೂಚನೆ ಮೇರೆಗೆ ನಡೆಸಲಾಗಿದೆ. ಇಡೀ ಮುಖ್ಯಮಂತ್ರಿ ಕಚೇರಿಯನ್ನು ಇವರಿಬ್ಬರೇ ನಿಯಂತ್ರಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

 

ಮೀಸಲಾತಿ ಪಾಲನೆ ಇಲ್ಲ?

 

ಮತ್ತೊಂದು ವಿಶೇಷವೆಂದರೆ ಈಗಿನ ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿಗೂ ಗುತ್ತಿಗೆ ಆಧಾರದ ನೇಮಕ ಆದೇಶದ ಪಟ್ಟಿಯು ದೊರೆತಿಲ್ಲ ಮತ್ತು ನೇಮಕಾತಿಯಲ್ಲಿ ಮೀಸಲಾತಿಯನ್ನೂ ಪಾಲಿಸಿಲ್ಲ. ಮೊದಲ ಮತ್ತು ಎರಡನೇ ಹಂತದಲ್ಲಿ ಹೊರಡಿಸಿರುವ ಪಟ್ಟಿಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಒಬ್ಬರೂ ಇಲ್ಲ. ಮೂರನೇ ಹಂತದಲ್ಲಿ ಜೂನ್‌ 15ರಂದು ಹೊರಡಿಸಿರುವ 19 ಮಂದಿಯಲ್ಲಿ ಟಿ ನರಸೀಪುರ ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಅಲ್ಪಸಂಖ್ಯಾತರ ಸಮುದಾಯದ ಒಬ್ಬರನ್ನು ಮಾತ್ರ ನೇಮಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

 

ಮೊದಲ ಹಂತದಲ್ಲಿ ಹೊರಡಿಸಿರುವ ಆದೇಶದ ಪಟ್ಟಿಯ ಪ್ರಕಾರ 35 ಮಂದಿ ಮೈಸೂರು, ಸಿದ್ದರಾಮನಹುಂಡಿ, ಮುದ್ದೇಗೌಡನಹುಂಡಿ, ನಂಜನಗೂಡು, ಟಿ ನರಸೀಪುರ, ಹುಣಸೂರು ತಾಲೂಕಿಗೆ ಸೇರಿದವರಾಗಿದ್ದಾರೆ. ಇನ್ನುಳಿದಂತೆ ತುಮಕೂರು, ಹರಿಹರ, ದಕ್ಷಿಣ ಕನ್ನಡ, ಬೆಂಗಳೂರು ನಗರಕ್ಕೆ ಸೇರಿದವರಾಗಿದ್ಧಾರೆ.

 

ಜೂನ್‌ 2ರಂದು ಹೊರಡಿಸಿರುವ ಸರ್ಕಾರದ ಆದೇಶದ ಪ್ರತಿ

 

ಮೊದಲ ಪಟ್ಟಿಯಲ್ಲಿರುವ ಹೆಸರುಗಳಿವು

 

ಕುಮಾರ್‍‌ (ಮೈಸೂರು), ಗಿರೀಶ್‌ ಎಲ್‌ (ಸಿದ್ದರಾಮನ ಹುಂಡಿ), ಯೋಗಾನಂದ (ಮೈಸೂರು ತಾಲೂಕು), ಪುಟ್ಟರಾಜು (ಮೈಸೂರು ತಾಲೂಕು), ಶಶಾಂಕ್‌ ವೈ (ಮುದ್ದೇಗೌಡನ ಹುಂಡಿ, ಮೈಸೂರು, ಗಂಗರಾಜು (ಬೊಮ್ಮನಾಯಕನಹಳ್ಳಿ ಮೈಸೂರು), ನಂಜುಂಡನಾಯ್ಕ (ಹುಣಸೂರು), ಸಂಜಯ್‌ ಆರ್‍‌ (ಬೊಮ್ಮನಾಯಕನಹಳ್ಳಿ ಮೈಸೂರು), ಮಂಜುಕುಮಾರ್‍‌ (ಎಲಚೆಗೆರೆ ನಂಜನಗೂಡು), ಯತೀಶ್‌ (ಮುದ್ದುಬೀರನಹುಂಡಿ ಮೈಸೂರು), ತೇಜಸ್ವಿನಿ ( ಟಿ ನರಸೀಪುರ), ಸಿದ್ದರಾಜು (ಮುದ್ದೇಗೌಡನ ಹುಂಡಿ), ಗೋವಿಂದರಾಜು ಹೆಚ್‌ ಜಿ (ಟಿ ನರಸೀಪುರ), ದೀಪಾ (ನಾಗರಬಾವಿ ಬೆಂಗಳೂರು), ರೇವಣ್ಣ (ಹರಿಹರ), ಮಂಜುನಾಥ ಎಂ (ಟಿ ನರಸೀಪುರ), ಪ್ರವೀಣ್‌ (ಗುಂಡ್ಲುಪೇಟೆ), ಪುಟ್ಟೇಗೌಡ (ದೋಗಳಾಪುರ ಮೈಸೂರು ಜಿಲ್ಲೆ), ಚಿಕ್ಕಸ್ವಾಮಿ (ಬೆಂಗಳೂರು), ರಮೇಶ್ ಆರ್‍‌ (ಸಿದ್ದರಾಮನಹುಂಡಿ), ಕೆ ಎಂ ಮಲ್ಲಿಕಾರ್ಜುನ (ಕುರುಬಾಳನಹುಂಡಿ ನರಸೀಪುರ ತಾಲೂಕು) ಚೈತ್ರ ಕೆ (ಕುರುಬರಹಳ್ಳಿ ಬೆಂಗಳೂರು), ನೂತನಕುಮಾರಿ (ದಕ್ಷಿಣ ಕನ್ನಡ), ಹಂಸವೇಣಿ (ಟಿ ನರಸೀಪುರ), ಬಸವಣ್ಣ (ಸಿದ್ದರಾಮನಹುಂಡಿ) ಇವರನ್ನು ಸಿ ಗುಂಪಿನ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.

 

ಗ್ರೂಪ್‌ ಡಿ ಹುದ್ದೆಗೆ ಸಂತೋಷ್‌ (ಸಿದ್ದರಾಮನಹುಂಡಿ), ಗಿರೀಶ (ಮೈಸೂರು ತಾಲೂಕು), ಲತಾ (ದೇವೇಗೌಡನ ಹುಂಡಿ), ನಿಂಗರಾಜು (ಹೊಸಹಳ್ಳಿ ಮೈಸೂರು ), ರಾಜೇಶ್‌ (ಚಟ್ನಹಳ್ಳಿ ಮೈಸೂರು ತಾಲೂಕು), ಹುಚ್ಚಯ್ಯ ಕುಪ್ಪೇಗಾಲ (ಮೈಸೂರು ತಾಲೂಕು), ಸುದರ್ಶನ್‌ (ಕುಡಿನೀರು ಮೊದ್ದನಹಳ್ಳಿ) ನಾಗೇಂದ್ರ (ಮನ್ನೇಹುಂಡಿ), ನಾಗೇಂದ್ರ ಜಿ (ಟಿ ನರಸೀಪುರ), ಪ್ರಸಾದ್‌ ಸಿ (ಚಿನ್ನಂಬಳ್ಳಿ ಮೈಸೂರು), ಪ್ರತಾಪ್‌ ಕುಮಾರ್‍‌ ಹೆಚ್‌ ಎಂ (ಹೊಸಕೋಟೆ ಮೈಸೂರು), ಕೆ ನಾಗರಾಜು (ಸಿದ್ದರಾಮನಹುಂಡಿ), ರಾಜಣ್ಣ (ಸಿದ್ದರಾಮನಹುಂಡಿ), ಕುಮಾರ್‍‌ ಎಂ (ಹೊಸಹಳ್ಳಿ ಮೈಸೂರು ತಾಲೂಕು), ಯಶೋಧಮ್ಮ(ಮಿಡಿಗೇಶಿ ಮಧುಗಿರಿ), ಮಾರುತಿ ಕೆ (ಮಧುಗಿರಿ) ಅವರನ್ನು ನೇಮಿಸಿರುವುದು ಆದೇಶದ ಪಟ್ಟಿಯಿಂದ ಗೊತ್ತಾಗಿದೆ.

 

ಎರಡನೇ ಪಟ್ಟಿಯಲ್ಲಿರುವ ಹೆಸರುಗಳಿವು

ಸಿ ಗುಂಪಿಗೆ ಪಿ ಎಂ ನರಸಿಂಹಮೂರ್ತಿ (ಗಾಯತ್ರಿನಗರ, ಬೆಂಗಳೂರು), ಯಮುನ (ವಿದ್ಯಾರಣ್ಯಪುರ, ಬೆಂಗಳೂರು), ಶ್ರೀರಾಮರೆಡ್ಡಿ (ನ್ಯೂ ಬಿಇಎಲ್‌ ರಸ್ತೆ, ಬೆಂಗಳೂರು) ಅವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.

 

ಮೂರನೇ ಪಟ್ಟಿಯಲ್ಲಿರುವ ಹೆಸರುಗಳು

 

ಮಾದೇಶ ಎಂ (ಸಿದ್ದರಾಮನಹುಂಡಿ, ವರುಣಾ ಹೋಬಳಿ), ರೋಜಾ ಎಸ್‌ (ವರುಣಾ ಹೋಬಳಿ), ರಘುವೀರ ಡಿ ( ಮೂಡಹಳ್ಳಿ, ಹಡಿನಾರು ಅಂಚೆ), ಯೋಗೇಶ್‌ ಎಂ (ಕರೆಪುರ ಗ್ಋಆಮ ಕವಲಹುಂಡೆ ಹೋಬಳಿ), ಕಿರಣ ಕುಮಾರ (ಸ್ಥಳ ತೋರಿಸಿಲ್ಲ), ನಿವೇದಿತಾ ಎಂ ಸಿ (ಸ್ಥಳ ತೋರಿಸಿಲ್ಲ), ಬೀರೇಶ್‌ (ದೊಡ್ಡಕೊಪ್ಪಲು ಕೆ ಆರ್‍‌ ನಗರ), ಆರ್‍‌ ರವಿಕುಮಾರ (ಕಸಬಾ ಹೋಬಳಿ ಸಿದ್ದಲಿಂಗಪುರ ಮೈಸೂರು), ಮಹಮ್ಮದ್‌ ಆಫನ್‌ (ಟಿ ನರಸೀಪುರ), ಜಗದೀಶ್‌ ಎಂ ಎಂ (ವರುಣಾ ಹೋಬಳಿ), ಚೈತ್ರ ಸಿ (ಕೊಡಿಗೇಹಳ್ಳಿ ಬೆಂಗಳೂರು), ಶೋಭಾ ಹೆಚ್‌ ಕೆ (ವಿಶ್ವೇಶ್ವರಯ್ಯ ಲೇ ಔಟ್‌ ಬೆಂಗಳೂರು), ಸಿ ರಾಜೇಶ್ವರಿ (ಚೊಕ್ಕಹಳ್ಳಿ ನಂಜನಗೂಡು), ಪ್ರಕಾಶ್‌ ಕೆ ಯು (ನಂದಿನಿ ಲೇಔಟ್‌ ಬೆಂಗಳೂರು), ಮಹದೇವ ಎಂ (ದೇವೇಗೌಡನ ಹುಂಡಿ, ವರುಣಾ), ರವಿ ಕೋರಿ ಶೆಟ್ರ (ಹಾವೇರಿ) ಮಹಾದೇವು ಎಸ್‌ (ಸಾಲುಂಡಿ, ಜಯಪುರ ಹೋಬಳಿ ಸಾಲುಂಡಿ), ಬಸವರಾಜ್‌ ಆರ್‍‌ (ವಿನಾಯಕ ಬಡಾವಣೆ ಮೈಸೂರು ರಸ್ತೆ ಬೆಂಗಳೂರು), ತಿಪ್ಪೇಸ್ವಾಮಿ ಬಿ ಕೆ (ಸಿರಾ ತಾಲೂಕು ತುಮಕೂರು)

 

ಅದೇ ರೀತಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸೇರಿದ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ(ಕೊಠಡಿ 326 ಎ), ಕಾರ್ಯದರ್ಶಿ (ಕೊಠಡಿ 239) ಅಪರ ಕಾರ್ಯದರ್ಶಿ (ಕೊಠಡಿ 318) ಜಂಟಿ ಕಾರ್ಯದರ್ಶಿ (ಪರಿಹಾರ ನಿಧಿ-ಕೊಠಡಿ 235 ಎ), ಉಪ ಕಾರ್ಯದರ್ಶಿ, ಆಡಳಿತ (ಕೊಠಡಿ 235 ಮತ್ತು 236), ಗೃಹ ಕಚೇರಿ (ಕೃಷ್ಣ), ಮುಖ್ಯಮಂತ್ರಿಯವರ ವಾರ್ತಾಧಿಕಾರಿ, ಮಾಧ್ಯಮ ಕಚೇರಿ ( ಕೊಠಡಿ 363), ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ (ಕೊಠಡಿ 319 ಎ ಮತ್ತು 241, 324) ಕಚೇರಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬಹುತೇಕರನ್ನು ಈಗಲೂ ಹಾಗೇ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

 

ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಬಹುತೇಕರಿಗೆ ಸೂಕ್ತ ವಿದ್ಯಾರ್ಹತೆ ಮತ್ತು ಅನುಭವವೂ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ನೇಮಕವಾಗಿರುವ ಬಹುತೇಕರಿಗೆ ಅನುಭವ ಮತ್ತು ಅರ್ಹತೆ ಇರದ ಕಾರಣ ಹೊರಗಿನ ಸ್ಥಳವೊಂದರಲ್ಲಿ ತರಬೇತಿ ನೀಡಿ ಕಳಿಸಲಾಗುತ್ತಿದೆ. ಅಲ್ಲದೇ ನೇಮಕವಾಗಿರುವ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿಗಳು ಕರೆ ಮಾಡಿ ವಿದ್ಯಾರ್ಹತೆಯನ್ನು ಗೊತ್ತುಪಡಿಸಿಕೊಂಡು ಪಟ್ಟಿಯಲ್ಲಿ ವಿದ್ಯಾರ್ಹತೆಯನ್ನು ನಮೂದಿಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದೆ.

 

ಈ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗಲೂ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಸೂಚನೆ ಮೇರೆಗೇ ಮುಖ್ಯಮಂತ್ರಿಯವರ ಸಚಿವಾಲಯವು ಕಾರ್ಯನಿರ್ವಹಿಸುತ್ತಿತ್ತು. ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸೇರಿದ ಎಲ್ಲಾ ಕಚೇರಿಗಳಿಗೂ ವಿಜಯೇಂದ್ರ ಅವರ ಅಣತಿಯಂತೆಯೇ ಗುತ್ತಿಗೆಯೂ ಸೇರಿದಂತೆ ಅನ್ಯ ಸೇವೆ ಮೇಲೆ ಸರ್ಕಾರಿ ನೌಕರರನ್ನು ನಿಯೋಜಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

 

ಅಲ್ಲದೇ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಶಿಕಾರಿಪುರ, ಶಿವಮೊಗ್ಗ ಜಿಲ್ಲೆಯವರದ್ದೇ ಸಿಂಹಪಾಲು ಇತ್ತು. ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಸ್ವಂತ ನಿವಾಸ ಮತ್ತು ಆಪ್ತ ಸಹಾಯಕರ ಕಚೇರಿಗೂ ಶಿಕಾರಿಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದವರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಲಾಗಿತ್ತು.

the fil favicon

SUPPORT THE FILE

Latest News

Related Posts