ವಿಜ್ಞಾನ ಪರಿಷತ್‌ಗೆ ಅಜ್ಞಾತ ಮೂಲದಿಂದ 39.97 ಲಕ್ಷ ನಗದು ಜಮೆ; ಪಿಎಸ್‌ಐ ಹಗರಣದೊಂದಿಗೆ ತಳಕು?

ಬೆಂಗಳೂರು; ಡಾ ಹೆಚ್‌ ನರಸಿಂಹಯ್ಯ ಮತ್ತು ಪ್ರೊ ಎಂ ಎ ಸೇತುರಾವ್‌ ಮತ್ತಿತರರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನಲ್ಲಿ ಹಣಕಾಸು ಅವ್ಯವಹಾರಗಳು ನಡೆದಿವೆ ಎಂಬ ಗುರುತರವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಪರಿಷತ್‌ನ  ಅಧಿಕೃತ ಬ್ಯಾಂಕ್‌ ಖಾತೆಗೆ ಅಜ್ಞಾತ ವ್ಯಕ್ತಿಯೊಬ್ಬರು  39.97 ಲಕ್ಷ ರು.ಗಳನ್ನು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ.

 

ಸದಸ್ಯತ್ವದ ಹೆಸರಿನಲ್ಲಿ  ವಿಜ್ಞಾನ ಪರಿಷತ್‌ನ ಅಧಿಕೃತ ಬ್ಯಾಂಕ್‌ಗೆ ಅಜ್ಞಾತ ವ್ಯಕ್ತಿಯೊಬ್ಬರು ಜಮೆ ಮಾಡಿರುವ 39.97 ಲಕ್ಷ ರು.ಗೂ  ಪಿಎಸ್‌ಐ ಹಗರಣಕ್ಕೂ ನಿಕಟ ಸಂಬಂಧವಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಕೂಡ ದಾಖಲಾಗಿದೆ. ಪಿಎಸ್‌ಐ ಹಗರಣವನ್ನು ಪ್ರತಿಪಕ್ಷವು ಜೀವಂತವಾಗಿರುವ ಇಟ್ಟಿರುವ ಹೊತ್ತಿನಲ್ಲೇ ವಿಜ್ಞಾನ ಪರಿಷತ್‌ಗೆ ಅಜ್ಞಾತ ಮೂಲದಿಂದ ಜಮೆಯಾಗಿರುವ 39.97 ಲಕ್ಷ ರು. ನಗದು ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ದೂರು, ಪಿಎಸ್‌ಐ ಹಗರಣದ ಮತ್ತೊಂದು ಮುಖವನ್ನು ತೆರೆದಿಟ್ಟಂತಾಗಿದೆ.   ಈ ಕುರಿತು ‘ದಿ ಫೈಲ್‌’ಗೆ ಸಮಗ್ರ ದಾಖಲೆಗಳು ಲಭ್ಯವಾಗಿವೆ.

 

 

ಕಲ್ಬುರ್ಗಿಯ ಅಫಜಲ್‌ಪುರವು ಪಿಎಸ್‌ಐ ಹಗರಣ ದಂಧೆಯ ಮೂಲ ಕಾರಸ್ಥಾನವಾಗಿದೆ ಎಂದು ಕೇಳಿಬಂದಿದ್ದ ಆರೋಪ ಮತ್ತು ಇದೇ ಅಫ್‌ಜಲ್‌ಪುರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ  ಗಿರೀಶ್‌ ಕಡ್ಲೇವಾಡ್‌ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ಗೆ  ಅಜ್ಞಾತ ಮೂಲದಿಂದ ಜಮೆಯಾಗಿರುವ ಹಣವು ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ್ದು ಎಂದು ದೂರುದಾರರು ಶಂಕಿಸಿದ್ದಾರೆ.  ಪಿಎಸ್‌ಐ ಹಗರಣದ ಹಣವನ್ನು ಸದಸ್ಯತ್ವಕ್ಕಾಗಿ ಉಪಯೋಗ ಮಾಡಿಕೊಂಡಿರಬಹುದೇ ಎಂದು ದೂರುದಾರರು ಆಪಾದಿಸಿದ್ದಾರೆ.

 

ಈ ದೂರಿನ ವಿಚಾರಣೆಯು 2023ರ ಏಪ್ರಿಲ್‌ 5ಕ್ಕೆ ನಿಗದಿಯಾಗಿದೆ.

 

 

ಕರ್ನಾಟಕ ಬ್ಯಾಂಕ್‌ನಲ್ಲಿರುವ ವಿಜ್ಞಾನ ಪರಿಷತ್‌ನ ಉಳಿತಾಯ ಖಾತೆಗೆ 39.97 ಲಕ್ಷ ರು. ಜಮೆ ಮಾಡಿರುವ ಬ್ಯಾಂಕ್‌ ಚಲನ್‌ನಲ್ಲಿ ವ್ಯಕ್ತಿಯ ಹೆಸರಿನ ಬದಲಿಗೆ 9448830454 ಮೊಬೈಲ್‌ ನಂಬರ್‌ನ್ನು ನಮೂದಿಸಲಾಗಿದೆ.  ಈ ಸಂಖ್ಯೆಯು ಕರಾವಿಪ ಅಧ್ಯಕ್ಷರಾದ 1ನೇ ಎದುರುದಾರರಾದ ಗಿರೀಶ್‌ ಕಡ್ಲೆವಾಡ್‌ ಅವರದ್ದೇ ಆಗಿರುವುದರಿಂದ ಅಜ್ಞಾತ ಮೂಲದಿಂದ ಜಮೆಯಾದ ಹಣಕ್ಕೆ ಪಿಎಸ್‌ಐ ಹಗರಣದೊಂದಿಗೆ ತಳಕು ಹಾಕಿಕೊಳ್ಳಲು ಮೂಲ ಕಾರಣ ಎಂದು ದೂರಿನಿಂದ ತಿಳಿದು ಬಂದಿದೆ.

 

ಸದಸ್ಯತ್ವದ ಅರ್ಜಿ ಮತ್ತು ಸದಸ್ಯತ್ವ ಶುಲ್ಕವನ್ನು ಪಾವತಿಸುವಾಗ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಬೈಲಾದಂತೆ ಕಾರ್ಯನಿರ್ವಹಿಸಿಲ್ಲ. 2022ರ ಫೆ.25ರಂದು ಒಂದೇ ದಿನ ಬೆಂಗಳೂರಿನ ಬನಶಂಕರಿಯಲ್ಲಿರುವ ಕರ್ನಾಟಕ ಬ್ಯಾಂಕ್‌ನಲ್ಲಿ ಪರಿಷತ್‌ನ ಬ್ಯಾಂಕ್‌ ಖಾತೆಗೆ ಅನಾಮಧೇಯ ವ್ಯಕ್ತಿಯೊಬ್ಬ 39.97 ಲಕ್ಷ ರು. ನಗದು ಜಮೆ ಮಾಡಿದ್ದಾನೆ. ಈ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಿರುವ ಚಲನ್‌ ಗಮನಿಸಿದರೆ ಜಮೆ ಮಾಡಿದವರ ಹೆಸರು ಕರಾವಿಪ ಎಂದಿದೆ. ಈ ರೀತಿ ಕರಾವಿಪ ಎಂದು ನಮೂದಿಸಬೆಕಾದರೆ ಹಣ ಸಲ್ಲಿಸುವವರು ಕರಾವಿಪ ಹಣಕಾಸು ಶಾಖೆಗೆ ತುಂಬಿ ರಸೀತಿ ಪಡೆಯಬೇಕಿತ್ತು ಎಂದು ದೂರುದಾರರು ತಮ್ಮ ದೂರಿಗೆ ಸಮರ್ಥನೆ ಒದಗಿಸಿದ್ದಾರೆ.

 

ಕರಾವಿಪ ಹಣಕಾಸು ಶಾಖೆಯ ಸಿಬ್ಬಂದಿ ಅದನ್ನು ತಮ್ಮ ನಗದು ಪುಸ್ತಕದಲ್ಲಿ ದಾಖಲಿಸಿ ನಂತರ ಅದಕ್ಕೆ ಚಲನ್‌ ಬರೆದು ಬ್ಯಾಂಕ್‌ಗೆ ಕಳಿಸಬೇಕು. ಆದರೆ ಕರಾವಿಪ ಹಣಕಾಸು ಶಾಖೆಗೆ ಇದರ ವಿವರಗಳೇ ಇಲ್ಲ. ಹಾಗಾಗಿ ಹಣ ಜಮೆ ಮಾಡಿದ ವ್ಯಕ್ತಿ ತನ್ನ ಹೆಸರು ಬರೆಯುವ ಬದಲು ಕರಾವಿಪ ಎಂದು ಬರೆದು ಬ್ಯಾಂಕ್‌ ಸಿಬ್ಬಂದಿಯನ್ನು ದಿಕ್ಕು ತಪ್ಪಿಸಿದ್ದಾನೆ ಎಂದು  ದೂರಿನಲ್ಲಿ ವಿವರಿಸಲಾಗಿದೆ.

 

ಈ ಚಲನ್‌ನಲ್ಲಿ ಮೊಬೈಲ್‌ ಸಂಖ್ಯೆ ಬರೆಯುವ ಕಡೆ ಕರಾವಿಪ ಅಧ್ಯಕ್ಷ ಗಿರೀಶ್‌ ಕಡ್ಲೇವಾಡ್‌ ಅವರ ಮೊಬೈಲ್ ನಂಬರ್‌ ಇದೆ. ಇದು ಮತ್ತೊಂದು ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ. ತನ್ನ ಮೊಬೈಲ್‌ ನಂಬರ್‌ ಬರೆಯಬೇಕಾದರೆ ಜಮೆ ಮಾಡುವವರ ಹೆಸರಿನ ಮುಂದೆ ತನ್ನ ಹೆಸರನ್ನೇ ಗಿರೀಶ್‌ ಕಡ್ಲೇವಾಡ್‌ ಎಂದು ಬರೆದುಕೊಳ್ಳಬೇಕಾಗಿತ್ತು. ಇಷ್ಟೊಂದು ಮೊತ್ತದ ಹಣ ಎಲ್ಲಿಂದ ಬಂತು , ಈ ಚಲನ್‌ನ ಮೂರನೇ ಭಾಗವಾದ ಜಮೆ ಮಾಡುವವರ ಸಹಿ ಇರುವ ಜಾಗದಲ್ಲಿ ಒಂದು ಸಹಿ ಇದೆ. ಇದು ಯಾರ ಸಹಿ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.

 

2022ರ ಫೆ.25ರಂದು ರಾಜ್ಯದ ಬೇರೆ ಬೇರೆ ಕಡೆಗಳಿಂದ ಕೆಲವು ಕಾರ್ಯಕಾರಿ ಸಮಿತಿ ಸದಸ್ಯರು ಕರಾವಿಪ ಬ್ಯಾಂಕ್‌ ಖಾತೆಗೆ ಹಣ ತುಂಬಿದ್ದಾರೆ. ಇದನ್ನೆಲ್ಲಾ ಸೇರಿಸಿ ಒಟ್ಟು ಹಣಕ್ಕೆ ಎಷ್ಟು ಸದಸ್ಯತ್ವದ ಅರ್ಜಿಗಳನ್ನು ಹಾಕಬೇಕೋ ಅಷ್ಟೂ ಅರ್ಜಿಗಳನ್ನು ಅಪರಿಚಿತ ವ್ಯಕ್ತಿಗಳು ತಂದು ಕರಾವಿಪ ಸಿಬ್ಬಂದಿಗೆ ಕೊಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

‘ಸಾಮಾನ್ಯವಾಗಿ ಕರಾವಿಪ ಚಟುವಟಿಕೆಗಳ ಬಗ್ಗೆ ಆಸಕ್ತಿ ಮತ್ತು ತೊಡಗಿಸಿಕೊಂಡಿರುವ ವ್ಯಕ್ತಿಗಳಿಂದ ಹಣ ಪಡೆದು ಸದಸ್ಯರನ್ನಾಗಿ ಮಾಡಲಾಗುತ್ತದೆ. ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಸದಸ್ಯರನ್ನು ನೋಂದಾಯಿಸುತ್ತಾರೆ. ಅಲ್ಲದೇ ತಮ್ಮ ಕಂದಾಯ ವಿಭಾಗದವರನ್ನು ಸದಸ್ಯರನ್ನಾಗಿ ಮಾಡುವುದು ಸಹಜ. ಆದರೆ ಫೆ.25ರಂದು ವಿಜ್ಞಾನ ಪರಿಷತ್‌ಗೆ ಒಂದೇ ಬಂಡಲ್‌ನಲ್ಲಿ ಬಂದಿರುವ ಸದಸ್ಯರ ಅರ್ಜಿಗಳು ಎಲ್ಲಾ ಕಂದಾಯ ವಿಭಾಗಗಳಿಗೂ ಸೇರಿವೆ. ಇದು ವಿಜ್ಞಾನ ಪರಿಷತ್‌ನ್ನು ಇಡಿಯಾಗಿ ಕಬಳಿಸಲು ಯಾರೋ ಮಾಡಿರುವ ಸಂಚು. ಇದೊಂದು ರೀತಿಯ ಮಾಫಿಯಾ,’ ಎಂದು ದೂರಿನಲ್ಲಿ ಆರೋಪಿಸಿರುವುದು  ತಿಳಿದು ಬಂದಿದೆ.

 

39.97 ಲಕ್ಷ ರು.ಗಳನ್ನು ಅಜ್ಞಾತವ್ಯಕ್ತಿಯೊಬ್ಬರು ಪಾವತಿಸಿರುವ ಸಂಬಂಧ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸಭೆಯಲ್ಲಿಯೂ ಚರ್ಚಿತವಾಗಿತ್ತು. ಇದಕ್ಕೆ ಅಧ್ಯಕ್ಷರಾದ ಗಿರೀಶ್‌ ಕಡ್ಲೇವಾಡ್ ಅವರು ಸಮಜಾಯಿಷಿಯನ್ನೂ ನೀಡಿದ್ದರು.

 

ಅಧ್ಯಕ್ಷರ ಸಮಜಾಯಿಷಿಯಲ್ಲೇನಿದೆ?

 

ಕರಾವಿಪ ಸಂಸ್ಥೆಯು ತನ್ನ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಹೊಂದಿದೆ. ಆನ್‌ಲೈನ್‌ ಮೂಲಕ ಡಿಜಿಲೈಸ್ಡ್‌ ಹಣವನ್ನು ಪಾವತಿಸುವ ವಿಧಾನವನ್ನು ತಪ್ಪು ಎನ್ನುವುದು ಸರಿಯಲ್ಲ. ಕಚೇರಿಗೆ ಬಂದು ಹಣಕಾಸಿನ ವಿಭಾಗಕ್ಕೆ ಪಾವತಿಸಿ ಸದಸ್ಯತ್ವನ್ನು ತೆಗೆದುಕೊಳ್ಳಬೇಕೆಂಬ ಖಜಾಂಚಿಯವರ ವಾದ ಸರಿಯಾದುದಲ್ಲ. 2022ರ ಫೆ.25ರಂದು ನಡೆದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು, ಪೋಷಕರು, ವಿಜ್ಞಾನ ಆಸಕ್ತರು ಮತ್ತು ಮಕ್ಕಳು ಒಟ್ಟಾಗಿ ಸೇರಿ 850 ಮಂದಿ ಭಾಗವಹಿಸಿದ್ದರು. ಇವರಲ್ಲಿ ಅನೇಕರು ಕರಾವಿಪದ ಮೇಲಿನ ನಂಬಿಕೆ ಹಾಗು ಕಾರ್ಯವಿಧಾನವನ್ನು ಮೆಚ್ಚಿ ತಮ್ಮ ತಮ್ಮ ಜಿಲ್ಲೆಗಳಿಂದ ಸದಸ್ಯತ್ವ ಅರ್ಜಿಗಳನ್ನು ತಂದಿದ್ದರು.

 

 

ಅ ದಿನದ ಸಮಾವೇಶ ಮುಗಿಯುವ ವೇಳೆಗೆ ಸಂಸ್ಥೆಯ ಅಧ್ಯಕ್ಷನಾದ ನನ್ನನ್ನು ಭೇಟಿ ಮಾಡಿದ ಅನೇಕ ಜಿಲ್ಲೆಗಳ ಸದಸ್ಯರು ಮತ್ತು ವಿಜ್ಞಾನ ಆಸಕ್ತರು ತಮ್ಮ ಜಿಲ್ಲೆಗಳ ಸದಸ್ಯತ್ವ ಕೋರಿ ಬಂದಿರುವ ಅರ್ಜಿಗಳನ್ನು ಮತ್ತು ಸದಸ್ಯತ್ವ ಶುಲ್ಕವನ್ನು ಸಂಸ್ಥೆಗೆ ತಂದುಕೊಟ್ಟು ಸದಸ್ಯತ್ವ ನೀಡುವಂತೆ ಕೋರಿದರು.
ಆಗ ಕರಾವಿಪ ಸಿಬ್ಬಂದಿ ರಾಜಶೇಖರ ಪಾಟೀಲ್‌ ಅವರನ್ನು ಕರೆಸಿ ಎಲ್ಲಾ ಅರ್ಜಿಗಳನ್ನು ಮತ್ತು ಹಣವನ್ನು ಕರಾವಿಪ ಕಚೇರಿಗೆ ತಲುಪಿಸುವಂತೆ ಹೇಳಿದ್ದೇನೆ. ಫೆ.26ರ ನಾಲ್ಕನೇ ಶನಿವಾರ ಮತ್ತು ಫೆ.27 ಭಾನುವಾರ ಸರ್ಕಾರಿ ರಜೆ ಮತ್ತು ಫೆ.28ರಂದು ಯುವ ವಿಜ್ಞಾನಿ ಪ್ರಶಸ್ತಿ ಕಾರ್ಯಕ್ರಮಗಳು ಇರುವುದರಿಂದ ಸತತವಾಗಿ 3 ದಿನಗಳ ಕಾಲ ದೊಡ್ಡ ಮಟ್ಟದ ಮೊತ್ತವನ್ನು ಕಚೇರಿಯಲ್ಲಿ ಇಡುವುದು ಸೂಕ್ತವಲ್ಲ ಎಂಬ ವಿಷಯವನ್ನು ರಾಜಶೇಖರ ಪಾಟೀಲ್‌ ಅವರು ನನ್ನ ಗಮನಕ್ಕೆ ತಂದರು.

 

ಹೀಗಾಗಿ ಬ್ಯಾಂಕ್‌ಗೆ ಹಣವನ್ನು ಪಾವತಿಸಲಾಯಿತು. ಬ್ಯಾಂಕ್‌ನ ವಹಿವಾಟಿನ ಕೊನೆಯ ಸಮಯವಾಗಿದ್ದರಿಂದ ಒಂದೇ ಖಾತೆಗೆ ಹಣ ಜಮಾವಣೆ ಮಾಡಬೇಕಿತ್ತು. ಒಂದು ಚಲನ್‌ ಭರ್ತಿ ಮಾಡಿ ಹಣವನ್ನು ಪಾವತಿಸಿ ಎಂದು ಬ್ಯಾಂಕ್‌ನವರು ಹೇಳಿದರು. ಹೀಗಾಗಿ ಏಕ ವ್ಯಕ್ತಿಯ ಸಹಿ ಆಧಾರದ ಮೇಲೆ ಅಧ್ಯಕ್ಷನಾದ ನನ್ನ ಜವಾಬ್ದಾರಿಯಾಗಿ ನಿಂತು ಬ್ಯಾಂಕ್‌ನಲ್ಲಿ ಜಮೆ ಮಾಡಲಾಗಿದೆ. ಆ ದಿನವೇ ಎಲ್ಲಾ ಅರ್ಜಿಗಳನ್ನು ಹಾಗೂ ಜಮೆ ಮಾಡಿದ ಶುಲ್ಕದ ರಸೀದಿಯನ್ನು ಕಚೇರಿಗೆ ಒಪ್ಪಿಸಲಾಯಿತು ಎಂದು ಸಭೆಯಲ್ಲಿಯೇ ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.

 

ಆದರೆ ಅಧ್ಯಕ್ಷರ ಸಮಜಾಯಿಷಿಯನ್ನು ಪರಿಷತ್‌ನ ಖಜಾಂಚಿ ಸೇರಿದಂತೆ ಹಲವರು ಒಪ್ಪಿಲ್ಲ. ಪರಿಷತ್‌ನ ಬೈಲಾ ನಿಯಮಾವಳಿಗಳ ಅನ್ವಯ ಸದಸ್ಯತ್ವದ ಅರ್ಜಿಗಳನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡಿಸಿ ಕೂಲಂಕಷವಾಗಿ ಚರ್ಚಿಸಿದ ನಂತರವೇ ಅರ್ಜಿಗಳನ್ನು ಸ್ವೀಕರಿಸಬೇಕಿತ್ತು ಎಂದು ಪ್ರತಿಪಾದಿಸಿದ್ದರು.

 

2022ರ ಫೆ.25ರಂದು ಸದಸ್ಯರುಗಳು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಅದೇ ದಿನ ಜರುಗಿದ ಕಾರ್ಯಕಾರಿ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿ ನಮೂದಾಗಿಲ್ಲ. ಅರ್ಜಿಗಳನ್ನು ಸಲ್ಲಿಸಿರುವ ಎಲ್ಲ ಸದಸ್ಯರ ವಿವರ ಮತ್ತು ವಿಳಾಸದ ವಿವರಗಳನ್ನು ಸೇರಿಸಿ ನಿರ್ಣಯದಲ್ಲಿ ದಾಖಲು ಮಾಡಬೇಕಿತ್ತು. ಅದರೆ ನಿರ್ಣಯ ಸಂಖ್ಯೆ 4ರಲ್ಲಿ ಯಾವುದೇ ವಿವರವಿಲ್ಲದೇ 2022ರ ಫೆ.25ರವರೆಗೆ ಬಂದಿರುವ ಸದಸ್ಯತ್ವದ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಭೆಯಲ್ಲಿಯೇ ಹೇಳಿರುವುದು ತಿಳಿದು ಬಂದಿದೆ.

 

‘ಕರಾವಿಪ ಕಚೇರಿಯಲ್ಲಿ ಹಣಕಾಸು ವಿಭಾಗವಿದೆ. ಅವರ ಬಳಿ ಹಣವನ್ನು ನೀಡಿ ಸದಸ್ಯತ್ವದ ಅರ್ಜಿಗಳನ್ನು ಕಛೇರಿಗೆ ನೀಡುವುದು ಸರಿಯಾದ ಮಾರ್ಗ. ಕಛೇರಿಯವರು ಅದನ್ನು ಬ್ಯಾಂಕ್‌ಗೆ ಜಮೆ ಮಾಡುತ್ತಾರೆ. ಆದರೆ ಹಣಕಾಸು ವಿಭಾಗ, ಕಾರ್ಯದರ್ಶಿ, ಖಜಾಂಚಿ ಗಮನಕ್ಕೂ ತಾರದೇ ಕರಾವಿಪ ಕಛೇರಿ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕ್‌ಗೆ 39.97 ಲಕ್ಷ ರು. ಬೃಹತ್‌ ಮೊತ್ತವನ್ನು ಹಣ ಹಾಕಿದ್ದಾರೆ. ಇವರು ಯಾರು,’ ಎಂದು ಪರಿಷತ್‌ನ ಖಜಾಂಚಿ ಮತ್ತಿತರರು ಸಭೆಯಲ್ಲಿಯೇ ಪ್ರಶ್ನಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts