ರಾಜಕೀಯ ಮೀಸಲಾತಿ; ನಿ.ನ್ಯಾಯಮೂರ್ತಿ ಭಕ್ತವತ್ಸಲ ವರದಿಯಲ್ಲಿ ಮೋದಿ ರಾಜಕೀಯ ವೃತ್ತಿ ಜೀವನ ಉಲ್ಲೇಖ

ಬೆಂಗಳೂರು; ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ಸಂಬಂಧ ನೇಮಿಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಭಕ್ತವತ್ಸಲ ಆಯೋಗವು ನೀಡಿರುವ ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆರಂಭದ ರಾಜಕೀಯ ವೃತ್ತಿ ಜೀವನದ ಕುರಿತು ಪ್ರಸ್ತಾಪಿಸಿರುವುದು ಇದೀಗ ಬಹಿರಂಗವಾಗಿದೆ.

 

ರಾಜಕೀಯ ಪಕ್ಷಗಳಲ್ಲಿ ವಂಶಾಡಳಿತ, ಕುಟುಂಬ ರಾಜಕಾರಣವು ಆಳವಾಗಿ ಬೇರೂರಿದೆ ಎಂಬುದನ್ನು ವಿವರಿಸುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಆರಂಭದ ರಾಜಕೀಯ ವೃತ್ತಿ ಜೀವನದ ಕುರಿತು ವರದಿಯಲ್ಲಿ ಪ್ರಸ್ತಾಪಿಸಿದೆ. ಆಯೋಗವು ನೀಡಿರುವ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

‘ನರೇಂದ್ರ ಮೋದಿ ಅವರು ರಾಜಕೀಯ ವೃತ್ತಿ ಜೀವನವನ್ನು ಆರಂಭಿಸುವ ಮುನ್ನ ಸಂಘಟನೆಯಲ್ಲಿ ‘ಸೇವಕ್‌’ ಆಗಿದ್ದರು. ಆ ನಂತರ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾದರು ಎಂಬುದನ್ನು ಉಲ್ಲೇಖಿಸುವುದು ಸೂಕ್ತವಾಗಿದೆ. ಅದೇ ರೀತಿ ಒಂದೇ ವರ್ಷದಲ್ಲೇ ಶಾಸಕ, ಸಂಸದ, ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗಿ ಚುನಾಯಿತರಾಗುವುದು ಸಾಧ್ಯವಿಲ್ಲ. ಹಲವು ವರ್ಷಗಳ ತಯಾರಿ ಮತ್ತು ಕಠಿಣ ಪರಿಶ್ರಮಕ್ಕೆ ಒಳಗೊಳ್ಳಬೇಕು.,’ ಎಂದು ವರದಿಯಲ್ಲಿ (ವರದಿ ಪುಟ ಸಂಖ್ಯೆ 19) ಪ್ರಸ್ತಾಪಿಸಿದೆ.

 

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಲು ಶಿಫಾರಸ್ಸು ಮಾಡಿರುವ ಆಯೋಗವು ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರುವ ಮೊದಲಿನ ರಾಜಕೀಯ ವೃತ್ತಿ ಜೀವನವನ್ನು ಪ್ರಸ್ತಾಪಿಸಿ ಅವರನ್ನು ಕಠಿಣ ಪರಿಶ್ರಮಿ ಎಂದು ಬಿಂಬಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ರಾಜಕೀಯಕ್ಕೆ ಪ್ರವೇಶಿಸುವ ವ್ಯಕ್ತಿಗಳಿಗೆ ಯಾವುದೇ ಔಪಚಾರಿಕ ಶೈಕ್ಷಣಿಕ ಅಗತ್ಯತೆ ಅಥವಾ ಪ್ರವೇಶ ಪರೀಕ್ಷೆ ಇರುವುದಿಲ್ಲ. ಅಲ್ಲದೆ ರಾಜಕೀಯ ವೃತ್ತಿ ಜೀವನ ಎನ್ನುವುದು ಮುಖ್ಯವಾಹಿನಿಯೂ ಆಗಿರುವುದಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಸ್ಥಳೀಯ ಸಂಸ್ಥೆಗಳಲ್ಲಿನ ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದರಷ್ಟು ಅಂದರೆ ಶೇ 33ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳಿಗೆ (ಅಲ್ಪಸಂಖ್ಯಾತರೂ ಸೇರಿ) ನೀಡುವುದು ನ್ಯಾಯೋಚಿತ. ಆದರೆ, ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದೂ ಶಿಫಾರಸಿನಲ್ಲಿ ಪ್ರತಿಪಾದಿಸಿದೆ.

 

1996, 2001, 2010 ಮತ್ತು 2015ರಲ್ಲಿ ನಡೆದ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪ್ರಾಯೋಗಿಕ ದತ್ತಾಂಶವನ್ನು ವಿಶ್ಲೇಷಿಸಿದಾಗ ಹಿಂದುಳಿದ ವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳು ಇನ್ನೂ ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿವೆ ಎಂದೂ ಆಯೋಗ ಹೇಳಿರುವುದನ್ನು ಸ್ಮರಿಸಬಹುದು.

 

ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2010ರಲ್ಲಿ ತೀರ್ಪು ನೀಡಿತ್ತು. ‘ನಿಖರವಾದ ಅಂಕಿ– ಅಂಶಗಳ ಆಧಾರದಲ್ಲಿ ಮೂರು ಹಂತದಲ್ಲಿ ಪರಿಶೀಲನೆ ನಡೆಸಬೇಕು. ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿದ ಬಳಿಕವೇ ರಾಜಕೀಯ ಮೀಸಲಾತಿ ನೀಡಬೇಕು’ ಎಂದಿತ್ತು. 2021ರ ಮಾರ್ಚ್‌ನಲ್ಲೂ ಸುಪ್ರೀಂ ಕೋರ್ಟ್‌ ಈ ಮಾತು ಪುನರುಚ್ಚರಿಸಿತ್ತು.

 

2022ರ ಜನವರಿಯಲ್ಲಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೂರು ಹಂತದ ಪರಿಶೀಲನೆ ಇಲ್ಲದೆ ಹಿಂದುಳಿದ ವರ್ಗಗಳಿಗೆ ಮೀಸಲು ನೀಡಲು ಅವಕಾಶ ನಿರಾಕರಿಸಿತ್ತು. ಈ ಆದೇಶ ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂದೂ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿತ್ತು.

 

ಈ ತೀರ್ಪುಗಳಿಂದಾಗಿ ರಾಜ್ಯದಲ್ಲಿ ಬಿಬಿಎಂಪಿ, ಪಂಚಾಯತ್‌, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ಮೊದಲೇ ಮೀಸಲಾತಿ ನಿಗದಿ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಲು ಉಂಟಾಗಿದ್ದ ತೊಡಕು ನಿವಾರಿಸಲು ಮಾರ್ಚ್‌ 31ರಂದು ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿತ್ತು. ಅದರ ಪ್ರಕಾರ ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ರಚಿಸಿ, ನಿವೃತ್ತ ಐಎಎಸ್‌ ಅಧಿಕಾರಿ ಸಿ.ಆರ್‌.ಚಿಕ್ಕಮಠ ಅವರನ್ನು ಸದಸ್ಯರಾಗಿ ನೇಮಿಸಲಾಗಿತ್ತು.

the fil favicon

SUPPORT THE FILE

Latest News

Related Posts