ಬೆಂಗಳೂರು; ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದ 671 ಕೋಟಿ ರು. ಮೊತ್ತದ ಕಾಮಗಾರಿಯ ಕಾರ್ಯಯೋಜನೆಯ ಮೂಲ ಕಡತಗಳು, ಗುತ್ತಿಗೆದಾರರಿಗೆ ನೀಡಿದ ಬಿಲ್‌ಗಳು ಸೇರಿ ಇದಕ್ಕೆ ಸಂಬಂಧಿಸಿದ ಮೂಲ ದಾಖಲೆಗಳೇ ನಾಶವಾಗಿರುವ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆಯ ಡಿವೈಎಸ್ಪಿ ತನಿಖೆಗೆ ಕೈಗೆತ್ತುಕೊಂಡಿದ್ದಾರೆ. ಕಡತಗಳ ನಾಶ ಮತ್ತು ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ದಾಖಲೆಗಳನ್ನು ಕೋರಿ ಡಿವೈಎಸ್ಪಿ ಪತ್ರ ಬರೆದು ಹಲವು ದಿನಗಳು ಕಳೆದರೂ ನೀರಾವರಿ ನಿಗಮದ ಅಧಿಕಾರಿಗಳು ನೀಡದೇ ಕಳ್ಳಾಟ ಮುಂದುವರೆಸಿದ್ದಾರೆ.
ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ಅಂತರ್ಜಲ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರಿನ ಸಲುವಾಗಿ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರವಾಗಿರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಎಚ್ ಎಂ ವೆಂಕಟೇಶ್ ಅವರು ಇ-ಮೇಲ್ ಮೂಲಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕು ಎಂದು ಕರ್ನಾಟಕ ಲೋಕಾಯುಕ್ತದ ಹೊಸಪೇಟೆ ಡಿವೈಎಸ್ಪಿ 2022ರ ಮೇ 18ರಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕೋರಿರುವ ಮಾಹಿತಿ ಏನು?
ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಎಷ್ಟು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ವಿವರವಾದ ಮಾಹಿತಿ ನೀಡುವುದು. ಯೋಜನೆಗೆ ಮಂಜೂರಾಗಿರುವ ಒಟ್ಟು ಮೊತ್ತದ ವಿವರ, ಏತ ನೀರಾವರಿ ಪ್ರಧಾನ ಯೋಜನೆ, ಕಾಮಗಾರಿಯ ಅಂದಾಜು ಪಟ್ಟಿ, ಅಂದಾಜುಪಟ್ಟಿಗೆ ತಾಂತ್ರಿಕ ಮಂಜೂರಾತಿ, ಯಾವ ದಿನಾಂಕದಂದು ಟೆಂಡರ್ ಕರೆಯಲಾಗಿತ್ತು, ಯಾವ ದಿನಪತ್ರಿಕೆಯಲ್ಲಿ ಟೆಂಡರ್ ಕರೆಯುವ ಬಗ್ಗೆ ಮಾಹಿತಿ ಹಾಕಲು ತಿಳಿಸಿರುತ್ತೀರಿ, ಟೆಡರ್‌ಗೆ ಅರ್ಜಿಹಾಕಿದ ಎಲ್ಲಾ ಅರ್ಜಿದಾರರ ಅರ್ಜಿಗಳ ದೃಢೀಕೃತ ನಕಲು ಪ್ರತಿ, ಟೆಂಡರ್‌ನಲ್ಲಿ ಭಾಗವಹಿಸಿದ ಅರ್ಜಿದಾರರ ವಿವರ ಕೋರಿದ್ದಾರೆ.
ಟೆಂಡರ್ ಪ್ರಕ್ರಿಯೆ ನಿಯಮಾವಳಿಗಳ ನಕಲು ಪ್ರತಿ, ಟೆಂಡರ್ ಷರತ್ತುಗಳು, ಟೆಂಡರ್‌ಗೆ ಸಂಬಂಧಿಸಿದ ದಾಖಲಾತಿಗಳು, ಕಾಮಗಾರಿಗೆ ಉಪಯೋಗಿಸಿದ ಸಾಮಗ್ರಿಗಳನ್ನು ಖರೀದಿಸಿದ ಕಂಪನಿಗಳ ವಿವರ, ಗುಣಮಟ್ಟದ ಪ್ರಮಾಣಪತ್ರ, ಕಾಮಗಾರಿ ಎಷ್ಟು ಹಣ ಯಾವ ಯಾವ ಹಂತದಲ್ಲಿ ಬಿಡುಗಡೆಯಾಗಿರುತ್ತದೆ ಎಂಬ ವಿವರವಾದ ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಸಚಿವ ಗೋವಿಂದ ಕಾರಜೋಳ ಅವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ಅಂತರ್ಜಲ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರಿನ ಸಲುವಾಗಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 670 ಕೋಟಿ ರು. ಮೊತ್ತದ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಮೂಲ ಕಡತಗಳು ನಾಶವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಮಾಹಿತಿ ನೀಡಿದವರಿಂದಲೇ ದಾಖಲೆಗಳನ್ನು ಕೇಳಿತ್ತು. ಈ ಕುರಿತು ‘ದಿ ಫೈಲ್’ 2022ರ ಮೇ 5ರಂದು ವರದಿ ಪ್ರಕಟಿಸಿತ್ತು.
671 ಕೋಟಿ ರು. ಯೋಜನೆಯ ಕಡತಗಳು ನಾಶ; ಮಾಹಿತಿ ನೀಡಿದವರಿಂದಲೇ ದಾಖಲೆ ಕೇಳಿದ ಲೋಕಾಯುಕ್ತ
ಪ್ರಕರಣ ಹಿನ್ನೆಲೆ
ಕೂಡ್ಲಿಗಿ ತಾಲೂಕಿನ 74ಕೆರೆಗಳಿಗೆ ಅಂತರ್ಜಲ ಅಭಿವೃದ್ಧಿಗಾಗಿ ಮತ್ತು ಕುಡಿಯುವ ನೀರಿನ ಸಲುವಾಗಿ ತುಂಗಭದ್ರಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಮೂಲ ಕಡತಗಳನ್ನು ಪಡೆಯಲು 2021ರ ಡಿಸೆಂಬರ್ 6ರಂದು ಮಾಹಿತಿ ಹಕ್ಕು ಅಧಿನಿಯಮದಲ್ಲಿ ಕಡತಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ಆದರೆ ಹೂವಿನಹಡಗಲಿ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರರು ಕಡತಗಳನ್ನು ಹಸ್ತಾಂತರಿಸಬೇಕು ಎಂದು ಮುಂಡರಗಿಯ ಏತನೀರಾವರಿ ಯೋಜನೆ ನಿರ್ವಹಿಸುತ್ತಿರುವ ವಿಭಾಗಕ್ಕೆ 2021ರ ಡಿಸೆಂಬರ್ 27ರಂದು ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಮುಂಡರಗಿಯ ಏತನೀರಾವರಿ ಯೋಜನೆಯ ವಿಭಾಗವು ಮೂಲಕಡತಗಳನ್ನು ಇದುವರೆಗೂ ಹಸ್ತಾಂತರಿಸಿಲ್ಲ ಎಂಬುದು ಇಲಾಖೆಯ ಆಂತರಿಕ ವ್ಯವಹಾರ ಪತ್ರಗಳಿಂದ ತಿಳಿದು ಬಂದಿತ್ತು.
ಇದಾದ ನಂತರ 2022ರ ಫೆ.23ರಂದು ಹೂವಿನಹಡಗಲಿಯ ಕಾರ್ಯಪಾಲಕ ಅಭಿಯಂತರರು ಮೂಲ ಕಡತಗಳನ್ನು ಹಸ್ತಾಂತರಿಸಬೇಕು ಎಂದು ಬರೆದಿದ್ದ ನೆನಪೋಲೆಗಳಿಗೂ ಯಾವುದೇ ಉತ್ತರ ಬಂದಿಲ್ಲ.
‘ಡಿಪಿಆರ್ ಮೂಲ ಕಡತಗಳನ್ನು ಹಸ್ತಾಂತರಿಸಬೇಕು ಎಂದು ಹೂವಿನಹಡಗಲಿ ಪತ್ರ ಬರೆದಿದ್ದರು ಸಹ ಕಡತಗಳನ್ನು ನೀಡಿಲ್ಲ. ಇದರಿಂದ ಅಧಿಕಾರಿಗಳು ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸಾರ್ವಜನಿಕರ ತೆರಿಗೆ ಹಣದಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಇದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಯೋಜನೆಯ ಮೂಲ ಕಡತಗಳು ನಾಶ ಮಾಡಿದ್ದಾರೆ,’ ಎಂದು ಸಾಮಾಜಿಕ ಕಾರ್ಯಕರ್ತ ಎಚ್ ಎಂ ವೆಂಕಟೇಶ್ ಅವರು ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ‘ದಿ ಫೈಲ್’ 2022ರ ಏಪ್ರಿಲ್ 27ರಂದು ವರದಿ ಪ್ರಕಟಿಸಿತ್ತು.
ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ; 671 ಕೋಟಿ ರು.ಮೊತ್ತದ ಕಾರ್ಯಯೋಜನೆ ಕಡತಗಳು ನಾಶ!
ಸಾರ್ವಜನಿಕರ ತೆರಿಗೆ ಹಣದಿಂದ ಈ ಯೋಜನೆ ರೂಪುಗೊಂಡಿದೆ. ಯೋಜನೆಗೆ ಸಂಬಂಧಿಸಿದ ಮೂಲ ಕಡತಗಳನ್ನು ನಾಶಪಡಿಸಿರುವ ಮುಂಡರಗಿ ಮತ್ತು ಹೂವಿನಹಡಗಲಿ ಕಾರ್ಯಪಾಲಕ ಅಭಿಯಂತರರು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು ಎಂದು ನೀಡಿದ್ದ ದೂರನ್ನೂ ಕಸದಬುಟ್ಟಿಗೆ ಎಸೆದಿದ್ದರು.
‘ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಕಡತಗಳು ಸರ್ಕಾರದ ಕೋಟ್ಯಾಂತರ ರೂಪಾಯಿಗಳ ಖರ್ಚುವೆಚ್ಚಗಳ ದಾಖಲೆಗಳನ್ನು ಕಣ್ಮರೆ ಮಾಡಿರುವ ಹಿಂದೆ ಭಾರೀ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ನಡೆದಿರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ದಾಖಲೆಗಳು ನಾಶ ಮಾಡಿರುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಅಧಿಕಾರಿಗಳನ್ನು ತಕ್ಷಣ ಅಮಾನತಿನಲ್ಲಿಟ್ಟು ತನಿಖೆ ಮಾಡಬೇಕು,’ ಎಂದು ವೆಂಕಟೇಶ್ ಅವರು ದೂರು ಸಲ್ಲಿಸಿದ್ದರು.
ಕೂಡ್ಲಿಗಿಯಲ್ಲಿ 27 ದೊಡ್ಡ ಮತ್ತು 28 ಸಣ್ಣ ಕೆರೆಗಳಿವೆ. ದೊಡ್ಡ ಕೆರೆಗಳ ಒಟ್ಟು ನೀರಿನ ಸಾಮರ್ಥ್ಯ 1455.89 ಎಂಸಿಎಫ್ ಇದ್ದರೆ ಸಣ್ಣ ಕೆರೆಗಳ ಸಾಮರ್ಥ್ಯ 278.24 ಎಂಸಿಎಫ್‌ಟಿ ಇದೆ. ಉಳಿದಂತೆ 19 ಸಣ್ಣಪುಟ್ಟ ಕೆರೆಗಳಿವೆ.