Monday | July 6, 2026 |

ಒಂದೇ ಜಾಗದಲ್ಲಿ ಎರಡು ಫ್ಲೈ ಓವರ್, ಶೇ.50ರಷ್ಟು ಕಾಮಗಾರಿಯಾಗಿದ್ದರೂ ಪೂರ್ಣ ಪಾವತಿ; ಬ್ಯಾಂಕ್‌ ಗ್ಯಾರಂಟಿ ಮುಟ್ಟುಗೋಲಿಲ್ಲ, ಗುತ್ತಿಗೆದಾರರಿಗೆ ಲಾಭ, ಬಿಬಿಎಂಪಿ ನಿಧಿಗೆ ನಷ್ಟ

ಬೆಂಗಳೂರು;  ಈಜಿಪುರ ಮೇಲ್ಸೇತುವೆ ಎಲಿವೇಟೆಡ್‌ ಕಾರಿಡಾರ್  ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ  ಪೂರ್ಣಗೊಳಿಸದ ಗುತ್ತಿಗೆದಾರರು ನೀಡಿದ್ದ ಬ್ಯಾಂಕ್‌ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳದೆಯೇ ಪೂರ್ಣ ಮೊತ್ತವನ್ನು  ಪಾವತಿಸಿರುವ ಪ್ರಕರಣವನ್ನು ಮುಖ್ಯ ಲೆಕ್ಕಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

2023-24ನೇ ಸಾಲಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿಗಳು ಸಲ್ಲಿಸಿರುವ ಲೆಕ್ಕ ಪರಿಶೋಧನಾ  ವರದಿಯು ಅಪೂರ್ಣ ಕಾಮಗಾರಿಗಳು, ಬ್ಯಾಂಕ್‌ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಳ್ಳದೇ ಗುತ್ತಿಗೆದಾರರಿಗೆ ಪಾವತಿಸಿರುವ ಹಣದ ವಿವರಗಳನ್ನು ತೆರೆದಿಟ್ಟಿದ್ದಾರೆ.

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈಜಿಪುರ ಮೇಲ್ಸೇತುವೆ ಎಲಿವೇಟೆಡ್ ಕಾರಿಡಾರ್‍‌ ಕಾಮಗಾರಿಗೆ 2012ರ ಡಿಸೆಂಬರ್‍‌ 10ರಂದು ಸಿಂಪ್ಲೆಕ್ಸ್ ಇನ್ಫ್ರಾಸ್ಟಕ್ಚರ್ ಲಿಮಿಟೆಡ್‌ನೊಂದಿಗೆ  ಕರಾರು ಮಾಡಿಕೊಂಡಿತ್ತು. ಆದರೆ ಕಾಮಗಾರಿಯು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿರಲಿಲ್ಲ.  ಕಾಮಗಾರಿ ವಿಳಂಬವಾಗಿದ್ದರಿಂದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿತ್ತು. ಈ ರಿಟ್‌ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸರ್ಕಾರದಿಂದ ಅನುಮೋದನೆ ಪಡೆದು ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು 2022ರ ಮಾರ್ಚ್‌ 9ರಂದೇ ಆದೇಶ ಹೊರಡಿಸಿತ್ತು.

ಅಲ್ಲದೇ ಒಪ್ಪಂದದ ಕ್ಲಾಸ್‌ 50.1 ರ ಪ್ರಕಾರ ರಿಸ್ಕ್ ಅಂಡ್‌ ಕಾಸ್ಟ್‌ ಲೆಕ್ಕಚಾರದಂತೆ ಗುತ್ತಿಗೆದಾರರಿಂದ 58.76 ಕೋಟಿ ರು.ಗಳನ್ನು ವಸೂಲು ಮಾಡಬೇಕಿತ್ತು. ಆದರೆ 2023-24ನೇ ಸಾಲಿನ ಲೆಕ್ಕ ಪರಿಶೋಧನೆ ವರದಿ ಸಿದ್ಧಪಡಿಸುವ ಹೊತ್ತಿನಲ್ಲಿ ಕೇವಲ 20.45 ಕೋಟಿಯಷ್ಟೇ ವಸೂಲು ಮಾಡಲಾಗಿತ್ತು. ಉಳಿದ 38.31 ಕೋಟಿಯನ್ನು ವಸೂಲು ಮಾಡಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಬಾಕಿ ಇರುವ ಮೊತ್ತವನ್ನು ಇದೇ ಗುತ್ತಿಗೆದಾರರು ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾವತಿಗೆ ಬಾಕಿ ಇರುವ ಮೊತ್ತ ಮತ್ತು ಬ್ಯಾಂಕ್‌ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮವಹಿಸಲಾಗುವುದು ಎಂದು ನಿರ್ಧರಿಸಿತ್ತು. ಆದರೆ ಉಳಿದ 38.31 ಕೋಟಿಯನ್ನು ವಸೂಲು ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ಲೆಕ್ಕಪರಿಶೋಧಕರಿಗೆ ಯಾವುದೇ ಮಾಹಿತಿ, ವಿವರಣೆಯನ್ನೇ ಒದಗಿಸಿರಲಿಲ್ಲ.

ಅದೇ ರೀತಿ ಟರ್ನ್‌ ಕೀ ಲಂಪ್‌ ಸಂ ಫಿಕ್ಸೆಡ್‌ ಪ್ರೈಸ್‌ ವಿಧಾನದ ಯೋಜನೆಯಲ್ಲಿ ಕಾಮಗಾರಿಯ ಐಟಂಗಳ ಬಳಕೆ ಪ್ರಮಾಣ ಲಭ್ಯತೆ ಬಗ್ಗೆ ನಿಖರ ವಿವರಗಳನ್ನೂ ಲೆಕ್ಕ ಪರಿಶೋಧನೆಗೆ ಲಭ್ಯವಿರಲಿಲ್ಲ. ಪಾವತಿ ಬಿಲ್‌ನಲ್ಲಿ ಕೇವಲ ಪಾವತಿ ಮೊತ್ತಕ್ಕೆ ಸಂಬಂಧಿಸಿದಂತೆ ಶೇಕಡವಾರು ವಿವರಗಳನ್ನು ಮಾತ್ರ ನಮೂದಿಸುತ್ತಿತ್ತು. ಹೀಗಾಗಿ ಐಟಂಗಳ ಬಳಕೆ ಪ್ರಮಾಣ ಪತ್ರಗಳೇ ಲೆಕ್ಕ ಪರಿಶೋಧಕರಿಗೆ ಲಭ್ಯವಿರಲಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಈ ಕಾಮಗಾರಿಯನ್ನು 18 ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು 2012ರಲ್ಲೇ ಕಾರ್ಯಾದೇಶ ಹೊರಡಿಸಿತ್ತು. ಆದರೆ ಈ ಕಾಮಗಾರಿಗೆ ಅಗತ್ಯವಿರುವ ಸ್ಥಳಾವಕಾಶವನ್ನೂ ನಿಗದಿತ ಸಮಯದಲ್ಲಿ ಹಸ್ತಾಂತರಿಸಿರಲಿಲ್ಲ. ಹೀಗಾಗಿ 2012ರಿಂದ 2015ರವರೆಗಿನ ಅವಧಿಯನ್ನು ಶೂನ್ಯ ಅವಧಿ ಎಂದು ಪರಿಗಣಿಸಿತ್ತು. ಆ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತಾದರೂ ಒಟ್ಟು 7 ಬಾರಿ ಅಂದರೇ 2021ರ ಏಪ್ರಿಲ್‌ 30ರವರೆಗೆ ದಂಡ ರಹಿತವಾಗಿ ಕಾಮಗಾರಿಯ ಕಾಲಾವಧಿಯನ್ನು ವಿಸ್ತರಿಸಿತ್ತು. ಆದರೂ ಕಾಮಗಾರಿಯು ಪೂರ್ಣಗೊಂಡಿರಲಿಲ್ಲ.

2023-24ನೇ ಸಾಲಿನಲ್ಲಿಯೂ ಪಾವತಿಯಾಗಿದ್ದ 26ನೇ ಭಾಗಶಃ ಬಿಲ್‌ನಲ್ಲಿ 16,12,792 ರು.ಗಳ ದಂಡವನ್ನು ವಿಧಿಸಿತ್ತು. ಆ ನಂತರ 2022ರ ಡಿಸೆಂಬರ್‍‌ 31ರವರೆಗೆ ಕಾಮಗಾರಿ ಕಾಲಾವಧಿ ವಿಸ್ತರಣೆಯಾಗಿತ್ತು. ಆದರೂ ಕಾಮಗಾರಿ ಪೂರ್ಣವಾಗಿರಲಿಲ್ಲ. 2023-24ನೇ ಸಾಲಿನಲ್ಲಿಯೂ ಕೂಡ ಕಾಮಗಾರಿ ಮುಕ್ತಾಯವಾಗದೇ ಇನ್ನೂ ಮುಗಿಯದೇ ಇರುವುದು ಕಂಡು ಬಂದಿದೆ. ಈ ಕಾಮಗಾರಿಯು ಪ್ರಾರಂಭವಾಗಿ ಸುಮಾರು 12 ವರ್ಷಗಳೇ ಕಳೆದಿದ್ದರೂ ಇನ್ನೂ ಮುಗಿಯದೇ ಕಂಡು ಬಂದಿದೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಆದರೆ ಇದೇ ಗುತ್ತಿಗೆದಾರರು ಓಕಳಿಪುರಂ ಜಂಕ್ಷನ್‌ನಲ್ಲಿಯೂ ಗುತ್ತಿಗೆ ಪಡೆದಿದ್ದಾರೆ. ಈ ಕಾಮಗಾರಿಯ ಪಾವತಿಯೂ ಬಾಕಿ ಇತ್ತು. 2023ರ ಅಕ್ಟೋಬರ್‍‌ 31ರಂದು 1,13,15,915 ರು.ಗಳನ್ನು ಗುತ್ತಿಗೆದಾರರಾದ ಸಿಂಪ್ಲೆಕ್ಸ್‌ ಇನ್ಫ್ರಾಸ್ಟಕ್ಚರ್‍‌ ಲಿಮಿಟೆಡ್‌ಗೆ ಪಾವತಿಸಿತ್ತು. ‘ಈ ಮೂಲಕ ಒಂದೇ ಗುತ್ತಿಗೆದಾರರ ಇನ್ನೊಂದು ಕಾಮಗಾರಿ ಚಾಲ್ತಿಯಲ್ಲಿದ್ದರೂ ಈ ಕಾಮಗಾರಿಯ ಪಾವತಿ ಮೊತ್ತ ಹಾಗೂ ಬ್ಯಾಂಕ್‌ ಗ್ಯಾರಂಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ಪ್ರಥಮ ಆದ್ಯತೆಯೆಂದು ಪರಿಗಣಿಸಿ ಪಾಲಿಕೆಗೆ ಲಾಭವಾಗುವ ಕ್ರಮವನ್ನು ಕೂಡಲೇ ಪ್ರಾರಂಭಿಸಿರಲಿಲ್ಲ. ಸಿಂಪ್ಲೆಕ್ಸ್‌  ಓಕಳಿಪುರಂನಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದರೂ ಸಹ ಎಲ್ಲಿಯೂ ಉಲ್ಲೇಖಿಸಿರಲಿಲ್ಲ. ಇದನ್ನು ಸರ್ಕಾರದ ಗಮನಕ್ಕೂ ತಂದಿರಲಿಲ್ಲ,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿದ್ದಾರೆ.

 

 

ಸರ್ಕಾರದ ಗಮನಕ್ಕೆ ತರದೇ 2022ರಿಂದ ಮಾರ್ಚ್‌ 10ರಿಂದ ಇಲ್ಲಿಯವರೆಗೆ 5.90 ಕೋಟಿ ರು.ಗಳನ್ನು ಪಾವತಿಸುವ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಅಧಿಕಾರಿ, ಸಿಬ್ಬಂದಿಗಳು ಸರ್ಕಾರಿ ನೌಕರರು ಕಡ್ಡಾಯವಾಗಿ ಪಾಲಿಸಬೇಕಿರುವ ಕರ್ನಾಟಕ ಆರ್ಥಿಕ ಸಂಹಿತೆಗಳನ್ನು ಪಾಲಿಸಿರಲಿಲ್ಲ. ಇವರ ಕರ್ತವ್ಯ ಲೋಪದಿಂದಾಗಿ ಬಿಬಿಎಂಪಿ ನಿಧಿಗೆ ನಷ್ಟ ಉಂಟಾಗಿದೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಮತ್ತೊಬ್ಬ ಗುತ್ತಿಗೆದಾರರಾದ ವೆಂಕಟರಾವ್‌ ಇನ್ಫ್ರಾ ವು ಶೇ. 50ರಷ್ಟು ಕಾಮಗಾರಿ ಕೈಗೊಂಡಿದ್ದರೂ ಸಹ ಪೂರ್ಣಪ್ರಮಾಣಕ್ಕೆ ಪಾವತಿ ಮಾಡಲಾಗಿತ್ತು. ಈ ಪ್ರಕರಣದಲ್ಲಿಯೂ ಲೆಕ್ಕ ಪರಿಶೋಧಕರು ಹಲವು ಲೋಪಗಳನ್ನು ಪತ್ತೆ ಹಚ್ಚಿದ್ದಾರೆ.

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯು ಹಾದು ಹೋಗಿರುವ ಮಂಜುನಾಥ್ ನಗರ ಮತ್ತು ಶಿವನಗರದ ಮುಖ್ಯ ರಸ್ತೆಯಲ್ಲಿನ ಗ್ರೇಡ್ ಸಪರೇಟರ್  ಕಾಮಗಾರಿಯು 2016ರ ಮಾರ್ಚ್‌ 14ರಂದು ಆರಂಭವಾಗಿತ್ತು. ಈ ಕಾಮಗಾರಿಯು 2017ರ ಸೆ.17ರಂದು ಮುಕ್ತಾಯವಾಗಬೇಕಿತ್ತು. ಆದರೆ 1,814 ದಿನಗಳಾದರೂ ಸಹ ಈ ಕಾಮಗಾರಿಯು ಪೂರ್ಣಗೊಂಡಿರಲಿಲ್ಲ. ಕಾಮಗಾರಿಯಲ್ಲಿ ವಿಳಂಬವಾಗಿದ್ದರೂ ಸಹ ಕನಿಷ್ಠ ದಂಡ ವಿಧಿಸಿರಲಿಲ್ಲ. ಅಲ್ಲದೇ ದಂಡವನ್ನು ವಿಧಿಸದೆಯೇ ಕಾಲಾವಧಿಯನ್ನು ವಿಸ್ತರಿಸಲಾಗಿತ್ತು.  ಇದೇ ರೀತಿ ಒಟ್ಟು 8 ಬಾರಿ   1,031 ದಿನಗಳ ವರೆಗೆ ಕಾಲಾವಧಿ ವಿಸ್ತರಣೆ ಮಾಡಲಾಗಿತ್ತು. ಆದರೆ ಈ ಯಾವ ಹಂತದಲ್ಲಿಯೂ ದಂಡವನ್ನೇ ವಿಧಿಸಿರಲಿಲ್ಲ.

ಈ ಕಾಮಗಾರಿಯು ಟರ್ನ್‌ ಕೀ ಆಧಾರದ ಮೇಲೆ ನಿರ್ವಹಿಸಲಾಗಿತ್ತು. ಹೀಗಾಗಿ ಅಳತೆಗಳನ್ನು ಕೇವಲ ಶೇಕಡವಾರು ನಮೂದಿಸಿ ಅಳತೆಯನ್ನು ದಾಖಲಿಸಲಾಗುತ್ತದೆಯಲ್ಲದೇ ಇದರ ಪ್ರಕಾರವೇ ಹಣವನ್ನು ಪಾವತಿ ಮಾಡಲಾಗುತ್ತದೆ. ಹೀಗಾಗಿ ಬಳಕೆ ಮಾಡಲಾದ ಉಪ ಖನಿಜಗಳಿಗೆ ಸಂಬಂಧಿಸಿದಂತೆ ಸೂಕ್ತ ವಿವರಗಳು ಲೆಕ್ಕ ಪರಿಶೋಧಕರಿಗೂ ಲಭ್ಯವಾಗಿಲ್ಲ. ಆದರೆ ಸರ್ಕಾರವು 2023ರ ನವೆಂಬರ್‍‌ 7ರಂದು ಹೊರಡಿಸಿದ್ದ  ಸುತ್ತೋಲೆ ಪ್ರಕಾರ  ರಾಜಧನವನ್ನು ವಸೂಲಿ ಮಾಡಬೇಕಿತ್ತು. ಆದರೂ ಬಿಬಿಎಂಪಿಯು ರಾಜಧನವನ್ನು ವಸೂಲಿ ಮಾಡಿರಲಿಲ್ಲ ಎಂಬ ಸಂಗತಿಯನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

ಹಾಗೆಯೇ ಟರ್ನ್‌ ಕೀ ವಿಧಾನದ ಪದ್ಧತಿಯನ್ನು ಮುಂದುವರೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಲೆಕ್ಕ ಪರಿಶೋಧಕರು ಬಸವೇಶ್ವರ ನಗರದ ಪ್ರಕರಣದಲ್ಲಿ ವಿವರಿಸಿದ್ದಾರೆ. ಬಸವೇಶ್ವರ ನಗರದ 1ನೇ ಜಂಕ್ಷನ್‌ನಲ್ಲಿ (ಐಟಂ ಸಂಖ್ಯೆ 5) ರಲ್ಲಿ ಆರ್‍‌ಇ ಪೆನಲ್‌ಗೆ ಶೇ. 1.40 ಎಂದು ಇದುವರೆಗೆ ಆದ ಶೇ. 1.30ಕ್ಕೆ  19,71,9000 ರು ಎಂದು ಪರಿಗಣಿಸಿದೆ. ಪ್ರಸ್ತುತ ಪಾವತಿಗೆ ಶೇ. 0.10ಕ್ಕೆ ನಂತೆ 2,19,000 ರು ಪಾವತಿ ಮಾಡಲಾಗಿದೆ. ಮತ್ತು ಒಟ್ಟು  ಶೇ. 1.40ರ ಭಾಗಕ್ಕೆ 30,67,400 ರು ಎಂದು ನಮೂದಿಸಿದೆ. ಆದರೆ ಈ ಮೊತ್ತದ ಮಧ್ಯೆ 8,76,000 ರು ವ್ಯತ್ಯಾಸ  ಇದೆ ಎಂದು ಲೆಕ್ಕ ಪರಿಶೋಧಕರು ವಿವರಿಸಿರುವುದು ಗೊತ್ತಾಗಿದೆ.

‘ಈ ರೀತಿಯ ನ್ಯೂನತೆಗಳು ಟರ್ನ್‌ ಕೀ ವಿಧಾನದ ಪದ್ಧತಿಯಲ್ಲಿ ಕಂಡು ಬರುತ್ತಿದ್ದು, ಹೀಗಾಗಿ ಟರ್ನ್‌ ಕೀ ಪದ್ಧತಿಯ ವಿಧಾನವನ್ನು ಮತ್ತೊಮ್ಮೆ ಪರಿಶೀಲಿಸಬೇಕಾದ ಅಗತ್ಯವಿದೆ,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಇದೇ ಕಾಮಗಾರಿಯಲ್ಲಿ ಶೇ.50ರಷ್ಟು ಕಾಮಗಾರಿ ಪೂರ್ಣವಾಗಿದೆ. ಆದರೆ ಕಾಮಗಾರಿಗೆ ಸಂಬಂಧಿಸಿದಂತೆ ಪೂರ್ಣ ಮೊತ್ತವನ್ನು ಪಾವತಿಸಲಾಗಿದೆ. ಮಂಜುನಾಥ ನಗರದ ಜಂಕ್ಷನ್‌ನಲ್ಲಿಯೂ ಸಹ (ಐಟಂ -5 ಬಿ(ಸಿ) ಎಲೆಕ್ಟ್ರಿಕಲ್‌ ಅಂಡ್‌ ಇಲ್ಯುಮುನೇಷನ್‌) ಭಾಗದಲ್ಲಿ ಫ್ಲೈ ಓವರ್‍‌ ಭಾಗಕ್ಕೆ ರ್‍ಯಾಂಪ್ ಭಾಗಕ್ಕೆ ಶೇ. 0.10ರ ಪ್ರಮಾಣವನ್ನು ಗುರುತಿಸಿತ್ತು. ಇದರಲ್ಲಿ ಶೇ.50ರಷ್ಟು ಕಾಮಗಾರಿ ಪೂರ್ಣವಾಗಿದೆ ಎಂದು ನಮೂದಿಸಿದ್ದರೂ ಸಹ ಇದಕ್ಕೆ ಸಂಬಂಧಿಸಿದ ಪೂರ್ಣ ಮೊತ್ತವನ್ನು ಪಾವತಿ ಮಾಡಲಾಗಿತ್ತು.

ಹಾಗೆಯೇ ಮಂಜುನಾಥ ನಗರದ ಜಂಕ್ಷನ್‌ನಲ್ಲಿರುವ ಆರ್‍‌ಇ ಪೆನಲ್‌ ಗೆ ಸಂಬಂಧಿಸಿದಂತೆ ಕೇವಲ 177 ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಶೇ. 50ರಷ್ಟು ಮುಕ್ತಾಯವಾಗಿದೆ ಎಂದು ಎಂದು ನಮೂದಿಸಿತ್ತು. ಆದರೂ ಈ ಪ್ರಕರಣದಲ್ಲಿಯೂ ಪೂರ್ಣ ಮೊತ್ತವನ್ನು ಪಾವತಿಸಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

 

 

ಬಸವೇಶ್ವರ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣವಾಗಿರುವ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಬಸವೇಶ್ವರ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ಅಂದಾಜಿಸಿದ್ದರೂ ಸಹ ಇದೇ ಸ್ಥಳದಲ್ಲಿ ಇನ್ನೊಂದು ಮೇಲ್ಸೇತುವೆ ಬಗ್ಗೆ ಪ್ರತ್ಯೇಕ ಕಾಮಗಾರಿಯನ್ನು ಕೂಡ 20.64 ಕೋಟಿ ರು. ಅಂದಾಜು ವೆಚ್ಚವನ್ನು ಸಿದ್ಧಪಡಿಸಿ ಕಾಮಗಾರಿ ನಿರ್ವಹಿಸಿದ್ದರು. ಒಂದೇ ಜಾಗದಲ್ಲಿ ಎರಡು ಪ್ರತ್ಯೇಕ ಕಾಮಗಾರಿಗಳು ನಡೆಯುತ್ತಿರುವುದರಿಂದ ಒಂದೇ ಐಟಂಗಳ ನಿರ್ವಹಣೆಯಲ್ಲಿ ಎರಡು ಬಾರಿ ಪಾವತಿಗೆ ಅವಕಾಶಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಹೀಗಾಗಿ ಈ ಬಗ್ಗೆ ಸೂಕ್ತ ದೃಢೀಕರಣ ಸ್ಥಳ ತನಿಖೆ ಅಗತ್ಯವಿದೆ ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯಿಸಿದ್ದಾರೆ.

ಅಲ್ಲದೇ ಈ ಪ್ರಕರಣದಲ್ಲಿನ ನ್ಯೂನತೆಗಳಿಗೆ ಯಾವುದೇ ವಿವರಗಳನ್ನೂ ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ. ಹೀಗಾಗಿ 2,04,73,160 ರು ಗಳನ್ನು ಮುಖ್ಯ ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ಗೊತ್ತಾಗಿದೆ.

Hot this week

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...
Please Scan to make Your Contribution

Topics

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

ರಾಷ್ಟ್ರೀಯ ಪರೀಕ್ಷೆಗಳಿಂದಾಗಿ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ, ನಗರ ವಿಶ್ವವಿದ್ಯಾಲಯಗಳೊಂದಿಗೆ ಗ್ರಾಮೀಣ ಕಾಲೇಜುಗಳ ವಿಲೀನಕ್ಕೆ ಆಯೋಗ ಅಸಮ್ಮತಿ

ಬೆಂಗಳೂರು;  ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ...

Related Articles

Popular Categories

error: Content is protected !!