ಪರಿಷ್ಕೃತ ಪಠ್ಯಪುಸ್ತಕ ಬಳಕೆಗೆ ನಿರ್ದೇಶನ; ಪ್ರತಿಭಟನೆ ನಡುವೆಯೂ ಭಂಡತನ ಮೆರೆದ ಸರ್ಕಾರ

ಬೆಂಗಳೂರು; ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ನಾಡಿನಾದ್ಯಂತ ಪ್ರತಿಭಟನೆ, ಚಳವಳಿಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೂ ಈಗಾಗಲೇ ಪರಿಷ್ಕೃತಗೊಂಡಿರುವ ಪಠ್ಯಪುಸ್ತಕಗಳನ್ನೇ 2022-23ನೇ ಶೈಕ್ಷಣಿಕ ಸಾಲಿಗೆ ಬಳಸಬೇಕು ಎಂದು ರಾಜ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜ್ಞಾಪನ ಪತ್ರಗಳನ್ನು ಶಿಕ್ಷಣ ಇಲಾಖೆಯು ಹೊರಡಿಸುವ ಮೂಲಕ ಭಂಡತನ ಪ್ರದರ್ಶಿಸಿದೆ.

 

ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಎಂದು ಅಗ್ರಹಿಸಿ 2022ರ ಜೂನ್‌ 18ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರಮಾಣದ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ ಶಿಕ್ಷಣ ಇಲಾಖೆಯು ಹೊರಡಿಸಿರುವ ಜ್ಞಾಪನ ಪತ್ರಗಳು ಮುನ್ನೆಲೆಗೆ ಬಂದಿವೆ.

 

ಮರು ಪರಿಷ್ಕರಣೆಗೊಂಡಿರುವ ಪುಸ್ತಕಗಳಲ್ಲಿ ಸೇರ್ಪಡೆಗೊಳಿಸಿರುವ ಅಂಶಗಳ ಕುರಿತು ನಾಡಿನ ವಿದ್ವಾಂಸರು, ಭಾಷೆ, ಇತಿಹಾಸ ತಜ್ಞರು, ಕವಿಗಳು ಮತ್ತು ಕನ್ನಡಪರ ಸಂಘಟನೆಗಳಿಗೆ ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಹೇಳಿಕೆ ನೀಡಿದ್ದರು. ಆಕ್ಷೇಪಣೆ ಮತ್ತು ಅಹವಾಲುಗಳನ್ನು ಆಲಿಸಿದ ನಂತರ ಪಠ್ಯಪುಸ್ತಕಗಳ ಬಳಕೆಗೆ ಕ್ರಮಕೈಗೊಳ್ಳಬೇಕಿದ್ದ ಸರ್ಕಾರವು ಈಗ ಪರಿಷ್ಕೃತಗೊಂಡಿರುವ ಪಠ್ಯಪುಸ್ತಕಗಳನ್ನೇ ಬಳಸಬೇಕು ಎಂದು ಜ್ಞಾಪನ ಪತ್ರ ಹೊರಡಿಸಿ ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನೂ ನೀಡಿದೆ.

 

ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು 2022ರ ಜೂನ್‌ 4ರಂದು ವಲಯದ ಎಲ್ಲಾ ಶಿಕ್ಷಕರುಗಳಿಗೆ ಹೊರಡಿಸಿರುವ ಜ್ಞಾಪನ ಪತ್ರ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘2022-23ನೇ ಶೈಕ್ಷಣಿಕ ಸಾಲಿಗೆ 1,2,4,5,6,7,8,.9. 10ನೇ ತರಗತಿಗಳ ಕನ್ನಡ ಪ್ರಥಮ ಭಾಷೆ, 6, 8,9 ನೇ ತರಗತಿಗಳ ದ್ವಿತೀಯ ಭಾಷೆ ಕನ್ನಡ, 7,8,9ನೇ ತರಗತಿಗಳ ತೃತಿಯ ಭಾಷೆ ಕನ್ನಡ ಪಠ್ಯಪುಸ್ತಕ, 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಎಲ್ಲಾ ಮಾಧ್ಯಮದ ಪಠ್ಯಪುಸ್ತಕಗಳನ್ನೇ ಬಳಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ. ಅನುದಾನರಹಿತ ಶಾಲೆಗಳು ಸಹ ಪರಿಷ್ಕೃತಗೊಂಡಿರುವ ಪಠ್ಯಪುಸ್ತಕಗಳಿಗಾಗಿ ಈಗಾಗಲೇ ಸಲ್ಲಿಸಿರುವ ಬೇಡಿಕೆಗಿಂತ ಹೆಚ್ಚುವರಿಯಾಗಿ ಅವಶ್ಯಕತೆ ಇದ್ದಲ್ಲಿ 2022ರ ಜೂನ್‌ 10ರೊಳಗಾಗಿ ಕ್ಲಸ್ಟರ್‌ ಸಿಆರ್‌ಪಿಗಳ ಮುಖಾಂತರ ಬೇಡಿಕೆ ಸಲ್ಲಿಸಬೇಕು. ನಿಗದಿತ ಸಮಯದಲ್ಲಿ ಬೇಡಿಕೆ ಸಲ್ಲಿಸದಿದ್ದಲ್ಲಿ ನೀವೇ ಜವಾಬ್ದಾರರಾಗಿರುತ್ತೀರಿ,’ ಎಂದೂ ಜ್ಞಾಪನ ಪತ್ರದಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.

 

ಮೈಸೂರು ವಲಯದಲ್ಲಿ ಹೊರಡಿಸಿರುವ ಜ್ಞಾಪನ ಪತ್ರದ ಪ್ರತಿ

 

ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿದ್ದ ಸಮಿತಿಯು ಪರಿಷ್ಕರಿಸಿದ್ದ 83 ಶೀರ್ಷಿಕೆಗಳ ಪಠ್ಯಪುಸ್ತಕಗಳು ಅನುಪಯುಕ್ತ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ತೀರ್ಮಾನಿಸಿದ್ದ ಪಠ್ಯಪುಸ್ತಕಗಳು ಓದುಗರ ಕೈ ಸೇರಬಾರದು ಎಂದು ಸರ್ಕಾರವು ಕ್ರಮಕೈಗೊಂಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಕುರಿತಾದ ಮಹತ್ವದ ಸಂಗತಿಗಳನ್ನು ಸಮಿತಿಯು ಕೈಬಿಟ್ಟಿತ್ತು. ರಾಕೆಟ್‌ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ನೀಡಿದ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶವನ್ನು ಕೈಬಿಟ್ಟಿತ್ತು. ಪಾಠಾಂಶವನ್ನು ಕೈಬಿಟ್ಟಿತ್ತು. ಇದಲ್ಲದೆ ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ ಮಾಡಿದ್ದ ಸಮಿತಿಯು ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ಕಿತ್ತೊಗೆದಿತ್ತು.

 

ಸಮಿತಿಯು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವೇಶ್ವರರು ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು, ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಮತ್ತು ಲಿಂಗಾಯತ ಮಠಗಳನ್ನು ಹೆಸರಿಸದೇ ಕೇವಲ ಅಷ್ಟಮಠಗಳನ್ನು ಹೆಸರಿಸಿ ಪರಿಷ್ಕರಿಸಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಬಸವೇಶ್ವರ ಕುರಿತಾಗಿಯೂ ತಪ್ಪು ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಿರುವುದು ಲಿಂಗಾಯತ ಸಮುದಾಯದಿಂದಲೂ ತೀವ್ರ ಟೀಕೆಗೆ ಗುರಿಯಾಗಿತ್ತು.

 

ಪಠ್ಯದಲ್ಲಿ ಅಷ್ಟಮಠಗಳ ಕುರಿತು ಉಲ್ಲೇಖಿಸಿರುವ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಲಿಂಗಾಯತರ ಸಾವಿರಾರು ಮಠಗಳಷ್ಟೇ ಅಲ್ಲದೆ ದರ್ಗಾಗಳು, ಗುರುದ್ವಾರ, ಚರ್ಚುಗಳಿದ್ದರೂ ಇವುಗಳ ಹೆಸರುಗಳನ್ನು ಪ್ರಸ್ತಾಪಿಸದ ಸಮಿತಿ ವಿರುದ್ಧ ಟೀಕೆ ವ್ಯಕ್ತವಾಗಿದ್ದವು.

 

ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಯಾವುದೇ ಜಾತಿ, ಧರ್ಮ, ಪಂಥ, ಸಮುದಾಯಗಳಿಗೆ ಅಥವಾ ವ್ಯಕ್ತಿಗಳಿಗೆ ಅಪಮಾನವಾಗುವ ಆಕ್ಷೇಪಾರ್ಹ ಅಂಶಗಳಿರದಂತೆ ಎಚ್ಚರಿಕೆ ವಹಿಸಬೇಕು ಮತ್ತು ಪಠ್ಯಗಳಲ್ಲಿ ಕೊಡುವ ಮಾಹಿತಿಗಳಲ್ಲಿ ಸುಳ್ಳು, ಉತ್ಪ್ರೇಕ್ಷೆಗಳಿರಬಾರದು ಎಂದು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ತನ್ನ ವರದಿಯ ಪೀಠಿಕೆಯಲ್ಲಿ ಆಶಯ ವ್ಯಕ್ತಪಡಿಸಿದೆಯಾದರೂ ಪಠ್ಯಪುಸ್ತಕಗಳಲ್ಲಿ ಬಸವಣ್ಣ, ಅಂಬೇಡ್ಕರ್‌ ಸೇರಿದಂತೆ ಹಲವು ದಾರ್ಶನಿಕರಿಗೆ ಅವಮಾನವಾಗುವಂತೆ ಪರಿಷ್ಕರಿಸಿ ನೈಜ ಸಂಗತಿಗಳನ್ನು ಮರೆಮಾಚಿ, ಸುಳ್ಳುಗಳಿಂದ ಕೂಡಿರುವ ಅಂಶಗಳನ್ನು ಇದೇ ಸಮಿತಿಯು ತುರುಕಿರುವುದು ಪೀಠಿಕೆಯಲ್ಲಿನ ಆಶಯಗಳನ್ನು ಉಲ್ಲಂಘಿಸಿದಂತಾಗಿತ್ತು.

 

ಪಠ್ಯಪರಿಷ್ಕರಣೆಯಲ್ಲಿ ಕಂಡು ಬಂದಿರುವ ಲೋಪದೋಷಗಳನ್ನು ಸರಿಪಡಿಸಿ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿದ್ದ ಸಮಿತಿಯು ಪರಿಷ್ಕರಿಸಿದ್ದ ಪಠ್ಯಪುಸ್ತಕಗಳನ್ನೇ ಬಳಸಬೇಕು ಎಂದು ಆಗ್ರಹಿಸಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಯಿಂದ ತೀರ್ಥಹಳ್ಳಿಯವರೆಗೆ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಪಾದಯಾತ್ರೆ ನಡೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts