‘ಬ್ರಾಹ್ಮಣ್ಯ ಎಂಬುದೇ ಆಧ್ಯಾತ್ಮಿಕ ಭಯೋತ್ಪಾದನೆ, ನಾನು ಕೂಡ ಬ್ರಾಹ್ಮಣ್ಯ ವ್ಯವಸ್ಥೆಯಿಂದ ಲಾಭ ಪಡೆದಿದ್ದೇನೆ’

ಬೆಂಗಳೂರು; ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಭಂಗವುಂಟು ಮಾಡಿದ್ದಾರೆ’ ಎನ್ನಲಾದ ಪ್ರಕರಣದಲ್ಲಿ ವಿಚಾರಣೆಗೆ ಒಳಗಾಗಿದ್ದ ನಟ ಚೇತನ್ ತನಿಖಾಧಿಕಾರಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಲ್ಲದೆ ವಿಡಿಯೋದಲ್ಲಿದ್ದ ತಮ್ಮ ಮಾತುಗಳಿಗೆ ಆಧ್ಯಾತ್ಮಿಕ ಭಯೋತ್ಪಾದನೆ, ಗೌಡಿಕೆ, ಅಂಬೇಡ್ಕರ್‌, ಪೆರಿಯಾರ್‌, ವಚನ ಸಾಹಿತ್ಯವನ್ನು ಪ್ರಸ್ತಾಪಿಸಿ ಆಧಾರವನ್ನು ಒದಗಿಸಿದ್ದಾರೆ.

 

ಚೇತನ್‌ ವಿರುದ್ಧ ಬಸವನಗುಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ 338 ಪುಟಗಳನ್ನು ಪಡೆದಿದೆ. ತನಿಖಾಧಿಕಾರಿ ಮುಂದೆ ಎರಡು ಬಾರಿ ಹಾಜರಾಗಿ ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟ ಮತ್ತು ಖಚಿತ ಉತ್ತರ ನೀಡಿರುವುದು ತಿಳಿದು ಬಂದಿದೆ.

 

ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಗಳಿಗೆ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಬ್ರಾಹ್ಮಣ್ಯ, ಅಂಬೇಡ್ಕರ್‌, ಪೆರಿಯಾರ್‌ ಕುರಿತು ತನಿಖಾಧಿಕಾರಿ ಮುಂದೆ ನೀಡಿದ್ದ ಉತ್ತರಗಳು ಮುನ್ನೆಲೆಗೆ ಬಂದಿವೆ.

 

ಶ್ರೇಣಿಕ ವ್ಯವಸ್ಥೆಯಿಂದ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಹಂತದಲ್ಲಿ ಪ್ರತಿಯೊಂದು ಸಮುದಾಯಗಳು ಲಾಭವನ್ನು ಪಡೆದಿರುತ್ತಾರೆ. ಅನೇಕ ಸಮುದಾಯಗಳು ಅದೇ ಬ್ರಾಹ್ಮಣ್ಯ ವ್ಯವಸ್ಥೆಯಿಂದ ನಷ್ಟವನ್ನೂ ಹೊಂದಿರುತ್ತಾರೆ. ಬಹುತೇಕರು ಒಂದು ಕಡೆ ಲಾಭವನ್ನು ಪಡೆಯುತ್ತಿರವಾಗಲೂ ಇನ್ನೊಂದು ಕಡೆ ನಷ್ಟವನ್ನೂ ಹೊಂದಿರುತ್ತಾರೆ. ಇದು ಒಂದು ಜಾತಿಗೆ ಸೀಮಿತವಲ್ಲ, ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ತನಿಖಾಧಿಕಾರಿಗೆ ವಿವರಿಸಿದ್ದಾರೆ.

 

‘ಯಾವುದೇ ಜಾತಿ ಜನಾಂಗದ ಬಗ್ಗೆ ನೋವುಂಟು ಮಾಡುವ ಉದ್ದೇಶ ಇರುವುದಿಲ್ಲ. ಅನೇಕ ಬಹುಜನ ಚಿಂತಕರು ಏನು ಹೇಳಿದ್ದಾರೋ ಅದನ್ನೇ ನಾನು ಹೇಳಿರೋದು. ಈ ಬ್ರಾಹ್ಮಣ್ಯದ ವಿಚಾರವನ್ನು ಅನೇಕ ಪುಸ್ತಕಗಳು, ಅನೇಕ ಚರ್ಚೆಗಳು ದೇಶಾದ್ಯಂತ ಹಾಗೂ ಪ್ರಪಂಚದಾದ್ಯಂತ ಇವತ್ತಿಗೂ ನಡೆಯುತ್ತಿದೆ. ಅದರಲ್ಲಿ ಚರ್ಚೆಗಳು ನಡೆದಿದ್ದು ಪುಸ್ತಕಗಳೂ ಬರೆದಿದ್ದಾರೆ. ನಾನೇ ಮೊದಲಲ್ಲ,’ ಎಂದು ವಿಡಿಯೋದಲ್ಲಿನ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.

 

2021ರ ಜೂನ್‌ 16ರಂದು ನಡೆದ ವಿಚಾರಣೆ ವೇಳೆಯಲ್ಲಿನ ಪ್ರಶ್ನೋತ್ತರದ ಆಯ್ದ ಭಾಗ ಇಲ್ಲಿದೆ

 

ತನಿಖಾಧಿಕಾರಿ; ನೀವು ಮಾತನಾಡಿರುವ ವಿಡಿಯೋದಲ್ಲಿ ಬ್ರಾಹ್ಮಣ್ಯದ ಬಗ್ಗೆ ಭಯೋತ್ಪಾದಕರು ಎಂಬ ಆರೋಪ ಇದೆ.

 

ಚೇತನ್‌; ನಾನು ಬ್ರಾಹ್ಮಣ್ಯ ಅನ್ನೋ ಒಂದು ಭೇದ ಭಾವ ಅನ್ನೋ ಒಂದು ವ್ಯವಸ್ಥೆಯ್ನನು ಸಿದ್ದಾಂತವನ್ನು ಪ್ರಶ್ನೆ ಮಾಡಿರೋದು ಹೊಸತಲ್ಲ. ಏನು ನಮ್ಮ ಶರಣರು 12ನೇ ಶತಮಾನದಲ್ಲಿ ವಚನ ಸಾಹಿತ್ಯದಲ್ಲಿ ಪ್ರಶ್ನೆ ಮಾಡಿದ್ದಾರೋ, ಮತ್ತೆ ಬಾಬಾಸಾಹೇಬ್‌ ಅಂಬೇಡ್ಕರ್‌ರವಾಗಿರಬಹುದು, ಪೆರಿಯಾರ್‌ ಅಂತಹವರಾಗಿರಬಹುದು, ಅನೇಕ ಒಂದು ರೀತಿಯ ಬಹುಜನ ಚಿಂತನೆಗಾರರು ಮಾಡಿರುವ ಅವರ ವಿಚಾರಗಳನ್ನು ಆಧುನಿಕ ಚೌಕಟ್ಟಿನಲ್ಲಿ ಆ ಮಾತುಗಳನ್ನು ಆಡಿರುತ್ತೇನೆ. 1935ರಲ್ಲಿ ನಾಸಿಕ್‌ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್‌ರವರೇ ಹೇಳಿದ್ದಂತೆ ನಮ್ಮ ದೇಶದ ವೈರಿಗಳು ಒಂದು ಕಡೆ ಬ್ರಾಹ್ಮಣ್ಯ ವ್ಯವಸ್ಥೆ ಮತ್ತೊಂದು ಬಂಡವಾಳಶಾಹಿ ವ್ಯವಸ್ಥೆ ಎಂದು ಹೇಳಿರುತ್ತಾರೆ. ಅಂದರೆ ಬ್ರಾಹ್ಮಣ್ಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತುಹಾಕಬೇಕೆಂದು ಬಾಬಾಸಾಹೇಬ್‌ ಅಂಬೇಡ್ಕರ್‌ರವರೂ ಸಹ ಹೇಳಿರುತ್ತಾರೆ.

 

ತನಿಖಾಧಿಕಾರಿ ಪ್ರಶ್ನೆಗಳಿಗೆ ನಟ ಚೇತನ್‌ ಉತ್ತರಿಸಿರುವ ಪ್ರತಿ

 

ಬ್ರಾಹ್ಮಣ್ಯ ಅಂದರೆ ಅದೂ ಒಂದು ರೀತಿ ಹುಟ್ಟಿರೋದ್ರಿಂದ ಶ್ರೇಣಿಕ ಅಸಮಾನತೆ, ಅದು ಕೆಲವರಲ್ಲಿ ಬೇರೆ ಬೇರೆ ಹಂತದಲ್ಲಿ ಶ್ರೇಷ್ಠ ಮತ್ತು ಇನ್ನು ಕೆಲವರಲ್ಲಿ ಕನಿಷ್ಟ ಎಂದು ಪರಿಗಣಿಸುತ್ತೆ. ಅದು ಬೇಧಭಾವ ಅನ್ನೋ ಸಿದ್ಧಾಂತ ಮನೋಭಾವ ಮತ್ತು ವ್ಯವಸ್ಥೆಯೂ ಕೂಡ. ಇದು ಸ್ಪಷ್ಟವಾಗಿ ನಮ್ಮ ಸಂವಿಧಾನದ ಮುನ್ನುಡಿಯಲ್ಲಿರುವ ಸಮಾನತೆ ಮತ್ತು ನ್ಯಾಯ ಎಂಬ ವಿಚಾರದಲ್ಲಿ ಸಂಪೂರ್ಣವಾಗಿ ವಿರುದ್ಧವಾಗಿದೆ.

 

ಬ್ರಾಹ್ಮಣ್ಯ ಎಂದರೆ ಸಂವಿಧಾನದ ವಿರುದ್ಧ ಒಂದು ಮನಸ್ಥಿತಿ ಮತ್ತು ವ್ಯವಸ್ಥಿತ ವ್ಯವಸ್ಥೆ. ಬ್ರಾಹ್ಮಣ್ಯ ಅಂದರೆ ಯಾವ ಗರ್ಭದಿಂದ ಹುಟ್ಟುತ್ತೀರಾ ಅನ್ನುವ ಕಾರಣಕ್ಕಾಗಿ ನಿಮ್ಮಲ್ಲಿ ಎಲ್ಲೋ ಒಂದು ಕಡೆ ಬೇರೆ ಬೇರೆ ಹಂತಗಳಲ್ಲಿ ಶ್ರೇಷ್ಠರು ಮತ್ತು ಬೇರೆ ಬೇರೆ ಹಂತಗಳಲ್ಲಿ ಕನಿಷ್ಟರು ಅನ್ನೋ ಭಾವನೆ ಮತ್ತು ವ್ಯವಸ್ಥೆ ಮನುಷ್ಯ  ಮನುಷ್ಯರ ನಡುವೆ ಹುಟ್ಟಿದಾಗಿನಿಂದ ರೂಪಿಸಿಕೊಂಡು ಬರುವುದಾಗಿದ್ದು ಅದು ಎಲ್ಲಾ ಜಾತಿಗಳಲ್ಲೂ ಅನೇಕ ಧರ್ಮಗಳಲ್ಲೂ ನಮ್ಮ ಭಾರತದ ಚೌಕಟ್ಟಿನಲ್ಲಿ ಈ ಬ್ರಾಹ್ಮಣ್ಯ ಇವತ್ತಿಗೂ ಜೀವಂತವಾಗಿದೆ. ಇದು ಖಂಡಿತ ಒಂದು ಜಾತಿಯ ಬಗ್ಗೆ ಸೀಮಿತವಾಗಿರುವುದಿಲ್ಲ. ಅದು ಯಾವುದೇ ಜಾತಿಯಾಗಿರಬಹುದು.

 

ತನಿಖಾಧಿಕಾರಿ; ನೀವು ಸ್ವಂತ ಅಭಿಪ್ರಾಯವನ್ನು ಹೇಳಿಕೆ ನೀಡಿ ನಿರ್ದಿಷ್ಟ ಜನರ ವಿರುದ್ಧ ಮಾತನಾಡಿರುತ್ತೀರಿ ಹೌದಾ?

 

ಚೇತನ್‌; ಈ ಬ್ರಾಹ್ಮಣ್ಯ ಅನ್ನೋದು ಪ್ರತಿಯೊಂದು ಜಾತಿಯಲ್ಲಿಯೂ, ವ್ಯವಸ್ಥೆಯಲ್ಲಿಯೂ ಹಾಗೂ ಅನೇಕ ಧರ್ಮಗಳಲ್ಲಿಯೂ ಇದೆ. ನನ್ನ ತಂದೆ ತಾಯಿ ಲಿಂಗಾಯತ ಸಮುದಾಯದವರಾಗಿರುತ್ತಾರೆ. ನಾನೂ ಕೂಡ ಬ್ರಾಹ್ಮಣ್ಯ ವ್ಯವಸ್ಥೆಯಿಂದ ಲಾಭ ಪಡೆದಿದ್ದು, ನನ್ನ ತಂದೆ ತಾಯಿಯವರೂ ಸಹ ಶಿಕ್ಷಣ ದೃಷ್ಟಿಯಲ್ಲಿ ಲಾಭವನ್ನು ಹೊಂದಿರುತ್ತಾರೆ. ಇದು ಒಂದು ರೀತಿ ಯಾವುದೇ ಅರ್ಹತೆಯಿಂದ ಅಥವಾ ಮೆರಿಟ್‌ ಇಂದ ಅಲ್ಲದೆ ಶ್ರೇಣಿಕ ವ್ಯವಸ್ಥೆಯಿಂದ ಪಡೆದ ಲಾಭವಾಗಿರುತ್ತದೆ. ನಾನೂ ಸಹ ಈ ಶ್ರೇಣಿಕ ವ್ಯವಸ್ಥೆಯಿಂದ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಲಾಭವನ್ನು ಪಡೆದುಕೊಂಡಿರುತ್ತೇನೆ. ಶ್ರೇಣಿಕ ವ್ಯವಸ್ಥೆಯಿಂದ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಹಂತದಲ್ಲಿ ಪ್ರತಿಯೊಂದು ಸಮುದಾಯಗಳು ಲಾಭವನ್ನು ಪಡೆದಿರುತ್ತಾರೆ.

 

ತನಿಖಾಧಿಕಾರಿ ಪ್ರಶ್ನೆಗಳಿಗೆ ನಟ ಚೇತನ್‌ ಉತ್ತರಿಸಿರುವ ಪ್ರತಿ

 

ಅನೇಕ ಸಮುದಾಯಗಳು ಅದೇ ಬ್ರಾಹ್ಮಣ್ಯ ವ್ಯವಸ್ಥೆಯಿಂದ ನಷ್ಟವನ್ನೂ ಹೊಂದಿರುತ್ತಾರೆ. ಬಹುತೇಕರು ಒಂದು ಕಡೆ ಲಾಭವನ್ನು ಪಡೆಯುತ್ತಿರವಾಗಲೂ ಇನ್ನೊಂದು ಕಡೆ ನಷ್ಟವನ್ನೂ ಹೊಂದಿರುತ್ತಾರೆ. ಇದು ಒಂದು ಜಾತಿಗೆ ಸೀಮಿತವಲ್ಲ, ಒಂದು ಸಮುದಾಯಕ್ಕೆ ಸೀಮಿತವಲ್ಲ.

 

ತನಿಖಾಧಿಕಾರಿ; ಅಸಮಾನತೆ ವಿಚಾರವಾಗಿ ಯಾವುದಾದರೂ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದೀರಾ? ಕಾನೂನು ಹೋರಾಟ ಮಾಡಿದ್ದೀರಾ?

 

ಚೇತನ್‌; ಇಲ್ಲ, ಯಾವುದೇ ಕಾನೂನು ಹೋರಾಟ ಮಾಡಿರುವುದಿಲ್ಲ.

 

ತನಿಖಾಧಿಕಾರಿ; ನೀವು ನಿರ್ದಿಷ್ಟವಾಗಿ ಒಂದು ಜಾತಿ/ಸಮುದಾಯದವರಿಗೆ ನೋವುಂಟು ಮಾಡುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಮಾತನಾಡಿರುತ್ತೀರಿ?

 

ಚೇತನ್‌; ಇಲ್ಲ

 

ನಿಖಾಧಿಕಾರಿ; ಬ್ರಾಹ್ಮಣ್ಯಕ್ಕೆ ನೀವು ನೀಡುವ ಅರ್ಥ ಎಲ್ಲಿ ವ್ಯಾಖ್ಯಾನಿಸಲಾಗಿದೆ?

 

ಚೇತನ್‌; ಪೆರಿಯಾರ್‌ ಹೇಳ್ತಾರೆ, ಎಲ್ಲರೂ ಸರಿಸಮಾನವಾಗಿ ಜನಿಸಿದವರೇ, ಅದೇ ಬ್ರಾಹ್ಮಣರು ಮಾತ್ರ ಅತ್ಯುನ್ನತರು. ಉಳಿದವರೆಲ್ಲರೂ ಕೆಳಹಂತದವರು, ಮತ್ತು ಅಸ್ಪಶ್ಯೃರು ಎಂದು ಹೇಳುವುದು ಸಂಪೂರ್ಣ ಅಶಬ್ದ. ಇದೊಂದು ದೊಡ್ಡ ವಂಚನೆ ಎಂದು ಪೆರಿಯಾರ್‌ ಹೇಳ್ತಾರೆ.

 

ತನಿಖಾಧಿಕಾರಿ; ಈಗ ನೀವು ಇದನ್ನು ಹೇಳೋ ಅವಶ್ಯಕತೆ ಏನಿತ್ತು?

 

ಚೇತನ್‌; ಹಿನ್ನೆಲೆ ಏನು ಅಂದ್ರೆ ಈ ಭೇದಬಾವ ವ್ಯವಸ್ಥೆಯಿಂದ, ದೇಶದಲ್ಲಿರಬಹುದು. ರಾಜ್ಯದಲ್ಲಿರಬಹುದು.ನಾನು ತೊಡಗಿಸಿಕೊಂಡ ಹೋರಾಟ, ಭಾಷಣಗಳಿಂದ ನಾನು ಮಾಡಿಕೊಂಡು ಬರುತ್ತಿದ್ದೇನೆ. ಈ ಸಂದರ್ಭದಲ್ಲಿ ಕೆಲವರು ಲಾಕ್‌ಡೌನ್‌ ಸಂದರ್ಭದಲ್ಲಿ ನಾನು ಮೀಡಿಯಾದಲ್ಲಿ ನೋಡಿರೋದು, ಕೇಳಿರೋದು, ಬರುತ್ತಿರುವ ಕರೆಗಳಿಂದ ಅನೇಕ ರೀತಿ ಶ್ರೇಷ್ಠ ಕನಿಷ್ಟ ಹೆಸರಿನಲ್ಲಿ ಅನೇಕ ದೌರ್ಜನ್ಯ ಮಹಿಳೆಯರ ಮೇಲೆ ಅತ್ಯಾಚಾರ ಬೇರೆ ಬೇರೆ ರೀತಿ ದೌರ್ಜನ್ಯ ಇವತ್ತಿಗೂ ನಡೆಯುತ್ತಿದೆ.

ಬ್ರಾಹ್ಮಣರ ಅವಹೇಳನ ಆರೋಪ; ಕಾನೂನು ತಜ್ಞರ ಮೇಲೆ ಒತ್ತಡ ಹೇರಿ ಚೇತನ್‌ ವಿಚಾರಣೆಗೆ ಅನುಮತಿ

ತನಿಖಾಧಿಕಾರಿ; ಕಾನೂನು ರೀತಿ ಕ್ರಮ ತೆಗೆದುಕೊಳ್ಳಬಹುದಿತ್ತಲ್ಲಾ? ಏಕೆ ತೆಗೆದುಕೊಳ್ಳಲಿಲ್ಲಾ?

 

ಚೇತನ್‌; ಕಾನೂನುಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟವರಿಗೆ ಕಾನೂನಾತ್ಮಕ ಸಲಹೆಗಳನ್ನು ಕೊಟ್ಟಿರುತ್ತೇನೆ. ಜನಜಾಗೃತಿಯನ್ನೂ ಸಹ ಮೂಡಿಸುತ್ತಿದ್ದೇವೆ. ಈ ಲಾಕ್‌ಡೌನ್‌ ಟೈಮಲ್ಲಿ ಈ ರೀತಿ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿರುವ ಸಮಯದಲ್ಲಿ ಒಬ್ಬರು ಸಿನಿಮಾ ಸೆಲೆಬ್ರಿಟಿ ಸಮಾಜದಲ್ಲಿಯೂ ರಾಜಕೀಯ ಪಕ್ಷವನ್ನು ಕಟ್ಟಿರುವ ನಟ ಉಪೇಂದ್ರ ಜಾತಿ ಬಗ್ಗೆ ಮಾತನಾಡಬಾರದು. ಮಾತನಾಡಿದರೆ ಅದು ಇರುತ್ತೆ.

 

ಮಾತನಾಡದಿದ್ರೆ ಅದು ಹೊರಟುಹೋಗುತ್ತೆ ಅಂತ ಹೇಳಿದ ಸಂದರ್ಭದಲ್ಲಿ ನಾನು ಆ ವ್ಯಕ್ತಿಯ ಹೆಸರನ್ನು ತೆಗೆದುಕೊಳ್ಳದೇ ನನ್ನ ಮೊದಲನೇ ವಿಡಿಯೋ ಜಾತಿ ವ್ಯವಸ್ಥೆ ಬಗ್ಗೆ ಬ್ರಾಹ್ಮಣ್ಯದ ಭೇದಭಾವನೆಯ ಬಗ್ಗೆ ಹಾಗೂ ಎಲ್ಲಾ ರೀತಿಯ ಅಸಮಾನತೆ ಬಗ್ಗೆ ನಾನು ಜನರಿಗೆ ಜಾಗೃತಿ ಮೂಡಿಸಬೇಕೆಂದು ಹಾಗೂ ನಾನೂ ಒಬ್ಬ ಸಿನಿಮಾದವನಾಗಿ, ಸಮಾಜದಲ್ಲಿ ಕೆಲಸ ಮಾಡುತ್ತಿರುವವನಾಗಿ ಅದು ನನ್ನ ಮುಖ್ಯ ಕರ್ತವ್ಯ. ಏನು ನಮ್ಮ ಸಂವಿಧಾನ ಮತ್ತು ದೇಶ ಕಟ್ಟಿರುವವರಿಗೆ ಅಂಬೇಡ್ಕರ್‌ ಅಂತಹರು ಬ್ರಾಹ್ಮಣ್ಯದ ಬಗ್ಗೆ ಅಸಮಾನತೆ ಬಗ್ಗೆ ಏನು ಹೇಳಿದ್ದಾರೆ ಅಂತ ಜಾಗೃತಿ ಮೂಡಿಸುವ ಸಲುವಾಗಿ ಈ ವಿಡಿಯೋ ಮಾಡಿರುತ್ತೇನೆ.

 

ತನಿಖಾಧಿಕಾರಿ; ನಿರ್ದಿಷ್ಟವಾಗಿ ಬ್ರಾಹ್ಮಣ್ಯದ ಬಗ್ಗೆ ವ್ಯಾಖ್ಯಾನ ನೀಡುವ ಮೂಲಕ ನಿರ್ದಿಷ್ಟವಾದ ಸಮುದಾಯದವರಿಗೆ ಅವರ ಭಾವನೆಗೆ ನೋವುಂಟು ಮಾಡುವ ಸಲುವಾಗಿ ಈ ರೀತಿಯ ಹೇಳಿಕೆ ನೀಡಿರುತ್ತೀರಿ

 

ಚೇತನ್‌; ಖಂಡಿತ ಇಲ್ಲ, ನಾನು ಯಾವುದೇ ಜಾತಿ ಜನಾಂಗದ ಬಗ್ಗೆ ನೋವುಂಟು ಮಾಡುವ ಉದ್ದೇಶ ಇರುವುದಿಲ್ಲ. ಅನೇಕ ಬಹುಜನ ಚಿಂತಕರು ಏನು ಹೇಳಿದ್ದಾರೋ ಅದನ್ನೇ ನಾನು ಹೇಳಿರೋದು. ಈ ಬ್ರಾಹ್ಮಣ್ಯದ ವಿಚಾರವನ್ನು ಅನೇಕ ಪುಸ್ತಕಗಳು, ಅನೇಕ ಚರ್ಚೆಗಳು ದೇಶಾದ್ಯಂತ ಹಾಗೂ ಪ್ರಪಂಚದಾದ್ಯಂತ ಇವತ್ತಿಗೂ ನಡೆಯುತ್ತಿದೆ. ಅದರಲ್ಲಿ ಚರ್ಚೆಗಳು ನಡೆದಿದ್ದು ಪುಸ್ತಕಗಳೂ ಬರೆದಿದ್ದಾರೆ.

 

ನಾನೇ ಮೊದಲಲ್ಲ. ಈ ಚರ್ಚೆಗಳು ಅನೇಕ ರೀತಿ ಮುಂದುವರೆಯುತ್ತಿವೆ. ಉದಾಹರಣೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದಲಿತ ಸಮುದಾಯದಿಂದ ಬಂದ ಚಿಂತಕರಾದ ಡಾ ಸೂರಜ್‌ ಯಂಗಡೆ ಮತ್ತು ಬ್ರಾಹ್ಮಣ ಸಮುದಾಯದಿಂದ ಬಂದಿರುವ ಕರ್ನಾಟಿಕ್‌ ಶಾಸ್ತ್ರೀಯ ಸಂಗೀತಗಾರರಾದ ಟಿ ಎನ್‌ ಕೃಷ್ಣ ನಡುವೆ ನಡೆದ ಸಂವಾದ/ಸಂದರ್ಶನದ ಸಮಯದಲ್ಲಿಯೂ ಬ್ರಾಹ್ಮಣ್ಯ ಅನ್ನೋ ವಿಚಾರಗಳ ಬಗ್ಗೆ ಲಾಕ್‌ಡೌನ್‌ ಸಮಯದಲ್ಲಿ ಈಗ್ಗೆ ದಿನಾಂಕ 12-06-2021ರಂದು ಆನ್‌ಲೈನ್ ಮೂಲಕ ಅನೇಕ ಚರ್ಚೆಗಳಾಗಿರುತ್ತವೆ. ಈ ಚರ್ಚೆಗೆ ಸಂಬಂಧಿಸಿದ ವಿಡಿಯೋ ಯೂ ಟ್ಯೂಬ್‌ನಲ್ಲಿ ಲಭ್ಯವಿರುತ್ತವೆ.

 

ತನಿಖಾಧಿಕಾರಿ; ಬ್ರಾಹ್ಮಣ್ಯ ಅನ್ನೋದು ಭಯೋತ್ಪಾದನೆ ಅಂತೀರಾ, ಯಾಕೆ?

 

ಚೇತನ್‌; ಇದು ಒಂದು ಆಧ್ಯಾತ್ಮಿಕ ಭಯೋತ್ಪಾದನೆ ಅಂತ ಹೇಳ್ತೀನಿ. ಯಾಕಂದ್ರೆ ಒಂದು ವ್ಯವಸ್ಥೆ, ಸಿದ್ದಾಂತ ಅನ್ನೋ ಮನಸ್ಥಿತಿಯನ್ನು ಪ್ರಶ್ನೆ ಮಾಡಿರುತ್ತೇನೆ. ನಾನು ಯಾವ ಜಾತಿ ಜನಾಂಗದ ವಿರುದ್ಧನೂ ಇದು ಆಗಿರುವುದಿಲ್ಲ.

 

 

ತನಿಖಾಧಿಕಾರಿ; ಹಾಗಾದ್ರೆ ಆಧ್ಯಾತ್ಮಿಕ ಭಯೋತ್ಪಾದನೆ ಅಂದರೆ ನಿಮ್ಮ ಪ್ರಕಾರ ಏನು?

 

ಚೇತನ್‌; ನಾನು ವಿಡಿಯೋದಲ್ಲಿ ನೀಡಿರುವ ಉಲ್ಲೇಖದಂತೆ ಒಂದು ರಾಜಕೀಯ, ಧರ್ಮದ ಯಾವುದೇ ಸಿದ್ಧಾಂತದ ಹೆಸರಲ್ಲಿ ಹಿಂಸೆ ಮಾಡೋದು ಅನ್ನೋದನ್ನು ಒಂದು ಭಯೋತ್ಪಾದನೆ ಅಂತ ವ್ಯಾಖ್ಯಾನಿಸಬಹುದು. ಈ ರೀತಿ ಕೆಲವರು ಹುಟ್ಟಿದ ತಕ್ಷಣ ಶ್ರೇಷ್ಠರು ಮತ್ತು ಕೆಲವ್ರು ಅನಿಷ್ಠರು ಎನ್ನೋದು ಒಂದು ಆಧ್ಯಾತ್ಮಿಕ ಭಯೋತ್ಪಾದನೆ. ಈ ಒಂದು ಬ್ರಾಹ್ಮಣ್ಯದ ವ್ಯವಸ್ಥೇಲಿ ಇತಿಹಾಸದಲ್ಲಿ ಮೇಲ್ಜಾತಿಯ ಗಂಡಸರು, ಜಾಸ್ತಿ ಬ್ರಾಹ್ಮಣ್ಯದಲ್ಲಿ  ಸವಲತ್ತು ಪಡೆದಿರೋದರ ಜೊತೆ ಶೂದ್ರರೂ ಕೂಡ ನಮ್ಮ ಪಂಚಮವರೂ ಅಂದರೆ ನಮ್ಮ ದಲಿತ ಸಮುದಾಯ, ಅಸ್ಪೃಶ್ಯ ಸಮುದಾಯಕ್ಕಿಂತ ಹೆಚ್ಚಿನ ಗೌರವ, ಸವಲತ್ತು ಮತ್ತು ಘನತೆಯನ್ನು ಪಡೆದಿರುತ್ತಾರೆ.

 

ತನಿಖಾಧಿಕಾರಿ; ಹಾಗಾದ್ರೆ ನಿಮ್ಮ ಪ್ರಕಾರ ಬ್ರಾಹ್ಮಣರು, ಕ್ಷತ್ರಿಯರೂ ಹಾಗೂ ವೈಶ್ಯರು ಭಯೋತ್ಪಾದಕರೇ?
ಚೇತನ್‌; ಅಲ್ಲಾ ಅವರು ಭಯೋತ್ಪಾದಕರಲ್ಲ. ಆದರೆ ಈ ಒಂದು ಆಧ್ಯಾತ್ಮಿಕ ಭಯೋತ್ಪಾದನೆ ವ್ಯವಸ್ಥೆಯಲ್ಲಿ ಅವರ ಎಷ್ಟೋ ಫಲಾನುಭವಿಗಳು, ಎಷ್ಟೋ ಸವಲತ್ತು ಪಡೆದಿದ್ದಾರೆ. ನಾನೂ ಕೂಡ ಅರ್ಹತೆ ಇಲ್ಲದಿದ್ದರೂ ಸಹ ಸವಲತ್ತು ಪಡೆದಿದ್ದೇನೆ. ಈ ಆಧ್ಯಾತ್ಮಿಕ ಭಯೋತ್ಪಾದನೆ ವ್ಯವಸ್ಥೆ ಈ ಒಂದು ವ್ಯವಸ್ಥೆ ಮತ್ತು ಸಿದ್ದಾಂತವನ್ನು ಮುಂದುವರೆಸ್ತಾ ಇದ್ದಾರೆ. ಅದನ್ನು ಯಾರ್ಯಾರು ಪಾಲುದಾರರು, ಸವಲತ್ತು ಪಡೆದಿದ್ದಾರೋ ಅವರೆಲ್ಲಾ ಪ್ರಶ್ನೆ ಮಾಡದೇ ಬದಲಾವಣೆ ತರದೇ ಪ್ರತಿಯೊಬ್ಬರೂ ಮುಂದುವರೆಸ್ತಾ ಇದ್ದಾರೋ ಸಂವಿಧಾನದ ವಿರುದ್ಧವಾಗಿ ಸಮಾಜದಲ್ಲಿ ಮುಂದುವರೆಸುತ್ತಿದ್ದಾರೆ.

 

ತನಿಖಾಧಿಕಾರಿ; ಒಂದು ವರ್ಗದ ಜನಕ್ಕೆ ನಿಮ್ಮ ಹೇಳಿಕೆಯಿಂದ ಅವಮಾನ ಆಗುತ್ತೆ, ಧಕ್ಕೆ ಆಗುತ್ತೆ ನಿಮಗೆ ಗೊತ್ತಿತ್ತಾ? ಗೊತ್ತಿದ್ದರೂ ಕೂಡ ಅದು ಅಪರಾಧ ಆಗುತ್ತೆ ಅಂತ ಗೊತ್ತಿತ್ತಾ?

 

ಚೇತನ್‌; ನನಗೆ ಯಾವುದೇ ಒಂದು ಜಾತಿ ಜನಾಂಗಕ್ಕೆ ಇದರಿಂದ ನೋವಾಗುತ್ತದೆ ಅಂತ ಗೊತ್ತಿರುವುದಿಲ್ಲ.

the fil favicon

SUPPORT THE FILE

Latest News

Related Posts