ತಾಲೂಕುಗಳ ಆಡಳಿತ ಕುಸಿತ; ಸರ್ಕಾರವನ್ನೇ ಲೆಕ್ಕಿಸದ ತಹಶೀಲ್ದಾರ್‌ಗಳು, ಹೇಳೋರಿಲ್ಲ, ಕೇಳೋರಿಲ್ಲ

photo credit;bangaloremirror

ಬೆಂಗಳೂರು; ರಾಜ್ಯದಲ್ಲಿ ಕಳೆದ 2 ವರ್ಷಗಳಿಂದಲೂ ಸಾರ್ವಜನಿಕ ಆಡಳಿತವು ಕುಸಿತವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ಇದೀಗ ರಾಜ್ಯದ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್‌ಗಳು ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಕಸದಬುಟ್ಟಿಗೆ ಎಸೆದು ಮರು ಆದೇಶವನ್ನು ಪಡೆಯದೆಯೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿರುವ ಹಲವು ಪ್ರಕರಣಗಳು ಬಹಿರಂಗವಾಗಿವೆ.

 

ತಾಲೂಕುಗಳಿಂದ ವರ್ಗಾವಣೆಗೊಳ್ಳುವ ತಹಶೀಲ್ದಾರ್‌ಗಳು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೊಕ್ಕು ತಡೆಯಾಜ್ಞೆ ತರುತ್ತಿದ್ದಾರೆ. ಆದರೆ ಈ ತಡೆಯಾಜ್ಞೆಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಿಲ್ಲ ಮತ್ತು ಈ ಸಂಬಂಧ ಮನವಿಯನ್ನೂ ಸಲ್ಲಿಸುತ್ತಿಲ್ಲ. ತಹಶೀಲ್ದಾರ್‌ಗಳು ಸಹ ಸರ್ಕಾರವನ್ನು ಲೆಕ್ಕಿಸುತ್ತಿಲ್ಲ ಎಂಬುದು ಕಂದಾಯ ಇಲಾಖೆಯು 2022ರ ಜೂನ್‌ 13ರಂದು ಎಲ್ಲಾ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಹೊರಡಿಸಿರುವ ಸುತ್ತೋಲೆಯು ಪುಷ್ಠೀಕರಿಸಿದೆ. ಈ ಸುತ್ತೋಲೆ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕಂದಾಯ ಇಲಾಖೆಯ ತಹಶೀಲ್ದಾರ್‌ಗಳು ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ಸರ್ಕಾರದಿಂದ ಹೊರಡಿಸಿದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದ ನಂತರ ಬಹುತೇಕ ತಹಶೀಲ್ದಾರ್‌ಗಳು ಸರ್ಕಾರದಲ್ಲಿ ಮನವಿ ಸಲ್ಲಿಸಿ ಮರು ಆದೇಶವನ್ನು ಪಡೆಯದೇ ನೇರವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಥವಾ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿನ ತಹಶೀಲ್ದಾರ್‌ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ,’ ಎಂದು ಸುತ್ತೋಲೆಯಲ್ಲಿ ಹೇಳಿದೆ.

 

ಕಂದಾಯ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರತಿ

 

ಅಧಿಕಾರ ವಹಿಸಿಕೊಂಡ ಅತ್ಯಲ್ಪ ದಿನಗಳು ಮತ್ತು ಹಲವು ವರ್ಷಗಳಿಂದಲೂ ಒಂದೇ ಕಡೆ ಬೇರು ಬಿಟ್ಟಿರುವ ತಹಶೀಲ್ದಾರ್‌ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತಿದೆ. ಈ ಆದೇಶಗಳನ್ನು ಪ್ರಶ್ನಿಸಿ ಹಲವು ತಹಶೀಲ್ದಾರ್‌ಗಳು ಕೆಎಟಿ ಮೊರೆ ಹೋಗುತ್ತಿದ್ದಾರೆ. ಈ ಜಾಗಕ್ಕೆ ಬೇರೆ ಯಾರೂ ಕರ್ತವ್ಯ ವಹಿಸಿಕೊಳ್ಳದಂತೆ ಪ್ರಭಾವಿ ತಹಶೀಲ್ದಾರ್‌ಗಳು ಖಾಲಿ ಇರುವಂತೆಯೇ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ಹೀಗಾಗಿ ತಾಲೂಕುಗಳ ಆಡಳಿತವು ಕುಸಿದು ಬಿದ್ದಿದೆ.

 

ಕೆಎಟಿಯಲ್ಲಿ ತಡೆಯಾಜ್ಞೆ ಪಡೆದುಕೊಳ್ಳುವ ತಹಶೀಲ್ದಾರ್‌ಗಳು ನಿಯಮಗಳ ಪ್ರಕಾರ ಸರ್ಕಾರಕ್ಕೆ ನ್ಯಾಯಾಲಯದ ದೃಢೀಕೃತ ಆದೇಶದ ಪ್ರತಿಯೊಂದಿಗೆ ಕೋರಿಕೆ ಸಲ್ಲಿಸಬೇಕು. ಅಲ್ಲದೆ ಈ ಸಂಬಂಧ ಸರ್ಕಾರದಿಂದ ಮರು ಆದೇಶ ಪಡೆಯಬೇಕು. ಇದಾದ ನಂತರ ಮರು ಆದೇಶವನ್ನು ಪಡೆದ ನಂತರವಷ್ಟೇ ಕರ್ತವ್ಯ ವಹಿಸಿಕೊಳ್ಳಬೇಕು. ಆದರೆ ರಾಜ್ಯದ ಹಲವು ತಾಲೂಕುಗಳಲ್ಲಿನ ತಹಶೀಲ್ದಾರ್‌ಗಳು ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪಗಳಿವೆ.

 

‘ಕಂದಾಯ ಇಲಾಖೆಯ ತಹಶೀಲ್ದಾರ್‌ಗಳು ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಲಾದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದ ನಂತರ ಹಾಗೂ ನ್ಯಾಯಾಲಯವು ಸರ್ಕಾರದಿಂದ ಹೊರಡಿಸಿದ ಆದೇಶವನ್ನು ಪ್ರಶ್ನಿಸಿದ ತಹಶೀಲ್ದಾರ್‌ಗಳು ಇನ್ನು ಮುಂದೆ ನ್ಯಾಯಾಲಯದ ಆದೇಶದ ದೃಢೀಕೃತ ಪ್ರತಿಯೊಂದಿಗೆ ಮನವಿಯನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಹೊರಡಿಸಿರುವ ಸುತ್ತೋಲೆಯು ತಹಶೀಲ್ದಾರ್‌ಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪಗಳನ್ನು ಬಲಪಡಿಸಿವೆ.

 

‘ಸರ್ಕಾರದಿಂದ ಮರು ಆದೇಶವನ್ನು ಪಡೆದ ನಂತರವಷ್ಟೇ ಹಿಂದೆ ಕರ್ತವ್ಯ ನಿರ್ವಹಿಸಿದ ತಾಲೂಕು ಕಚೇರಿಯಲ್ಲಿನ ತಹಶೀಲ್ದಾರ್‌ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಅಲ್ಲದೇ ಸರ್ಕಾರದಿಂದ ಮರು ಆದೇಶವನ್ನು ಪಡೆಯದೇ ಕರ್ತವ್ಯ ವರದಿ ಮಾಡಿಕೊಳ್ಳಲು ಬರುವ ತಹಶೀಲ್ದಾರ್‌ಗಳನ್ನು ಜಿಲ್ಲಾಧಿಕಾರಿಗಳು ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳತಕ್ಕದ್ದಲ್ಲ. ಒಂದುವೇಳೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಲ್ಲಿ ಅಂತಹ ತಹಶೀಲ್ದಾರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿಯಮಾನುಸಾರ ಪರಿಶೀಲಿಸಲಾಗುವುದು,’ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನಿರ್ದೇಶಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.

 

ರಾಜ್ಯದಲ್ಲಿ ಈಗಾಗಲೇ ಮುಂಗಾರು ಪೂರ್ವ ಅವಧಿಯಲ್ಲಿ ಬೆಳೆ ನಾಶವಾಗಿದೆ. ತಾಲೂಕುಗಳ ರೈತಾಪಿ ಸಮುದಾಯ ಸೇರಿದಂತೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತೆಯ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ. ಇದರಿಂದ ತಾಲೂಕಿನಾದ್ಯಂತ ಇರುವ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಅನುಕೂಲವಾಗುತ್ತಿಲ್ಲ.

 

‘ವರ್ಗಾವಣೆ ಪ್ರಕ್ರಿಯೆಯಲ್ಲಿನ ದೋಷಗಳು ಮತ್ತು ನ್ಯಾಯಾಲಯಗಳು ಹೊರಡಿಸುತ್ತಿರುವ ತಡೆಯಾಜ್ಞೆ ಆದೇಶಗಳು, ಪ್ರಭಾವಿ ತಹಶೀಲ್ದಾರ್‌ಗಳು ವರ್ಗಾವಣೆಗೊಂಡು ಬರುವ ತಹಶೀಲ್ದಾರ್‌ಗಳಿಗೆ ಕರ್ತವ್ಯ ವಹಿಸಿಕೊಡದೇ ಇರುವುದು, ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದರೂ ಅದನ್ನು ನಿಯಮಾನುಸಾರವಾಗಿ ಸರ್ಕಾರಕ್ಕೆ ಸಲ್ಲಿಸದಿರುವುದು, ಮರು ಆದೇಶವನ್ನು ಪಡೆಯದೇ ನೇರವಾಗಿ ಕರ್ತವ್ಯ ವಹಿಸಿಕೊಳ್ಳುತ್ತಿರುವ ಪ್ರಕರಣಗಳು ಸಾಲು ಸಾಲಾಗಿ ಹೊರಬೀಳುತ್ತಲೇ ಇದೆ. ಆದರೆ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಇದುವರೆಗೂ ಕುಸಿದು ಬಿದ್ದಿರುವ ಆಡಳಿತವನ್ನು ಸರಿದಾರಿಗೆ ತರಲು ಯಾವುದೇ ಕಠಿಣ ಕ್ರಮಕೈಗೊಂಡಿಲ್ಲ,’ ಎನ್ನುತ್ತಾರೆ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts