ಪಿಎಸ್‌ಐ ನೇಮಕಾತಿ ಅಕ್ರಮದ ಮತ್ತೊಂದು ಮುಖ; ಹುದ್ದೆಗಳೇ ಇಲ್ಲದಿದ್ದರೂ ಹೊರಡಿಸಿತ್ತೇ ಅಧಿಸೂಚನೆ?

photo credit;deccanhearald

ಬೆಂಗಳೂರು; ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳು ಒಂದರ ಹಿಂದೆ ಮತ್ತೊಂದು ಎಂಬಂತೆ ಸಾಲುಸಾಲಾಗಿ ಹೊರಬೀಳುತ್ತಿರುವ ಬೆನ್ನಲ್ಲೇ 947 ಹುದ್ದೆಗಳನ್ನು ಹೊಸದಾಗಿ ಸೃಜಿಸದಿದ್ದರೂ ತರಾತುರಿಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಲಾಗಿದೆ ಎಂಬ ಗುರುತರವಾದ ಅರೋಪಗಳು ಕೇಳಿಬಂದಿವೆ.

 

ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ದಿನಾಂಕವನ್ನು ಶೀಘ್ರದಲ್ಲೇ ನಿಗದಿಮಾಡಿ ಪ್ರಕಟಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಖಾಲಿ ಹುದ್ದೆಗಳು ಇಲ್ಲದಿದ್ದರೂ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಒಂದೊಮ್ಮೆ ನೇಮಕ ಆದೇಶ ನೀಡಿದರೂ ಆ ಅಭ್ಯರ್ಥಿಗಳು ಕಾರ್ಯನಿರ್ವಹಿಸಲು ಹುದ್ದೆಯೇ ಖಾಲಿ ಇಲ್ಲ ಎಂಬ ಆರೋಪಗಳು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಅಶೋಕ್‌ಕುಮಾರ್‌ ಅಡಿಗ ಎಂಬುವರು ಮುಖ್ಯಮಂತ್ರಿ, ಗೃಹ ಸಚಿವ, ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ 2022ರ ಮೇ 2ರಂದು ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಸಿರುವುದನ್ನು  ಅಡಿಗ ಅವರು ‘ದಿ ಫೈಲ್‌’ ಗೆ ಖಚಿತಪಡಿಸಿದ್ದಾರೆ.

 

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶ್ರೇಣಿಯ 947 ಹುದ್ದೆಗಳಿಗೆ ಪರೀಕ್ಷೆಗೆ ನಡೆದಿದೆಯಾದರೂ ಅಷ್ಟೊಂದು ಸಂಖ್ಯೆಯ ಹುದ್ದೆಗಳು ಇಲಾಖೆಯಲ್ಲಿಯೇ ಇಲ್ಲ. ಈ ಹುದ್ದೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಬ್‌ ಇನ್ಸ್‌ಪೆಕ್ಟರ್‌ಗಳು ಮುಂದಿನ 5-7 ವರ್ಷಗಳಲ್ಲಿ ನಿವೃತ್ತರಾದ ನಂತರವಷ್ಟೇ ಈ ಹುದ್ದೆಗಳು ಖಾಲಿಯಾಗುತ್ತವೆ. ಆದರೂ ಮುಂಗಡವಾಗಿಯೇ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಲಾಗಿದೆ ಎಂಬ ಆಪಾದನೆ ಕೇಳಿ ಬಂದಿವೆ.

 

402 ಹುದ್ದೆಗಳಿಗೆ ದೈಹಿಕ ಪರೀಕ್ಷೆ ನಡೆದಿದೆ. ಲಿಖಿತ ಪರೀಕ್ಷೆ ನಡೆದಿಲ್ಲ. 545 ಹುದ್ದೆಗಳಿಗೆ ದೈಹಿಕ ಮತ್ತು ಲಿಖಿತ ಪರೀಕ್ಷೆ ನಡೆದಿದೆ. ಇದರಲ್ಲಿ 545 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾರಣಕ್ಕೆ ಸಿಐಡಿ ತನಿಖೆ ನಡೆಸುತ್ತಿದೆ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಇಲಾಖೆಯಲ್ಲಿ ಹುದ್ದೆಗಳೇ ಖಾಲಿ ಇಲ್ಲ. ಹಾಗೊಂದು ವೇಳೆ ಹುದ್ದೆಗಳು ಖಾಲಿ ಇದ್ದರೆ ಅದರ ಅಂಕಿ ಅಂಶಗಳನ್ನು ಬಹಿರಂಗಪಡಿಸಬೇಕು. ಅಲ್ಲದೆ ಈ ಹಿಂದಿನ ವರ್ಷಗಳಲ್ಲಿ ನೇಮಕವಾಗಿರುವ ಸಬ್‌ ಇನ್ಸ್‌ಪೆಕ್ಟರ್‌ಗಳು ತರಬೇತಿ ಶಾಲೆಯಲ್ಲಿ ಮೂರೂವರೇ ವರ್ಷದ ಅವಧಿಗೆ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪೂರ್ಣಗೊಂಡ ನಂತರ ಅವರಿಗೆ ಹುದ್ದೆಗಳನ್ನು ತೋರಿಸಬೇಕಿದೆ.

 

‘ತರಬೇತಿ ಪೂರ್ಣಗೊಳಿಸಿದವರಿಗೆ ಹುದ್ದೆಗಳನ್ನು ತೋರಿಸಿದರೆ ಯಾವ ಹುದ್ದೆಯೂ ಖಾಲಿ ಉಳಿಯುವುದಿಲ್ಲ. ಹೀಗಿದ್ದರೂ 947 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿರುವುದಕ್ಕೆ ಸೂಕ್ತ ಸಮರ್ಥನೆ ಮತ್ತು ಕಾರಣಗಳನ್ನು ಸರ್ಕಾರವು ಒದಗಿಸಬೇಕು. ಇಲ್ಲವಾದರೆ ಇದು ಮತ್ತೊಂದು ಬಹುದೊಡ್ಡ ಹಗರಣ ಎನ್ನಬೇಕಾದೀತು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅಶೋಕ್‌ ಕುಮಾರ್ ಅಡಿಗ.

 

ಮುಂದಿನ 5ರಿಂದ 7 ವರ್ಷಗಳಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಲ್ಲಿ ಖಾಲಿಯಾಗುವ ಹುದ್ದೆಗಳ ಸಂಖ್ಯೆ ಎಷ್ಟು, ಬಡ್ತಿಯಿಂದ ಭರ್ತಿ ಮಾಡುವ ಹುದ್ದೆಗಳೆಷ್ಟು, ಎಷ್ಟು ಮಂದಿ ನಿವೃತ್ತರಾಗಲಿದ್ದಾರೆ, ಇದರ ನಿಖರವಾದ ಸಂಖ್ಯೆ ನಿಮ್ಮ ಬಳಿ ಇದೆಯೇ ಎಂದು ಇ-ಮೈಲ್‌ನಲ್ಲಿ ಪ್ರಶ್ನಿಸಿದ್ದಾರೆ.

 

947 ಹುದ್ದೆಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೂ ಇಷ್ಟೇ ಸಂಖ್ಯೆಯಲ್ಲಿ ನೇಮಕಗೊಳ್ಳುವವರಿಗೆ ವೇತನ ಹೇಗೆ ಪಾವತಿಸುತ್ತೀರಿ, ಹಣಕಾಸು ಇಲಾಖೆಯು ಈ ಪ್ರಸ್ತಾವನೆಯನ್ನು ಹೇಗೆ ಅನುಮೋದಿಸಿದೆ , ಮತ್ತು ಎಷ್ಟು ಮೊತ್ತವನ್ನು ಬಿಡುಗಡೆ ಮಾಡಲಿದೆ, ಪ್ರತಿ ವರ್ಷ ಬೊಕ್ಕಸಕ್ಕೆ 75.00 ಕೋಟಿ ಹೊರೆ ಬೀಳುವುದಿಲ್ಲವೇ ಎಂಬ ಪ್ರಶ್ನೆಗಳನ್ನೂ ಸರ್ಕಾರಕ್ಕೆ ಕೇಳಿದ್ದಾರೆ.

 

ಕರ್ನಾಟಕ ಪೊಲೀಸ್ ಇಲಾಖೆಯು 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆ, ಆರೋಪಿಗಳ ಮೇಲೆ ಸಿಐಡಿ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಅಕ್ರಮದಲ್ಲಿ ಪಾಲ್ಗೊಂಡವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸದರಿ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಂಡಿದೆ.

 

ಮರು ಪರೀಕ್ಷೆಯಲ್ಲಿ ಈ ಹಿಂದೆ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಿದ್ದು, ಆಪಾಧಿತರಿಗೆ ಈ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಬೆಂಗಳೂರಿನ ಕೆಲವು ಸೆಂಟರ್‌ಗಳಲ್ಲೂ ಈ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು.

 

ಪಿಎಸ್ಐ ಹುದ್ದೆಗಳ ಪರೀಕ್ಷೆ ಅಕ್ರಮ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಸಾವಿರಾರು ಅಭ್ಯರ್ಥಿಗಳ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಅದೆಷ್ಟೋ ಅಭ್ಯರ್ಥಿಗಳು ತಮ್ಮ ಗರಿಷ್ಠ ವಯೋಮಿತಿಯ ಅಂಚಿನಲ್ಲಿ ಪರೀಕ್ಷೆ ಬರೆದಿದ್ದರು ಎನ್ನಲಾಗಿದೆ.

the fil favicon

SUPPORT THE FILE

Latest News

Related Posts