ಅರಣ್ಯ ವೀಕ್ಷಕರ ಖಾಸಗಿ ಮೊಬೈಲ್‌ನಲ್ಲಿ ದತ್ತಾಂಶ ಸಂಗ್ರಹ; ಗಡಿ ರೇಖೆ, ಪರಿಶೀಲನೆ, ದೈನಂದಿನ ವಿವರ ಸೋರಿಕೆ!

photo credit;thenewsminute

ಬೆಂಗಳೂರು; ಅರಣ್ಯ ಗಡಿಗಳ ರಕ್ಷಣೆ, ನಿರ್ವಹಣೆ ಮತ್ತು ಗಡಿರೇಖೆಗಳ ಪರಿಶೀಲನೆ ಮಾಡುವುದಕ್ಕಾಗಿ ದೈನಂದಿನ ಗಸ್ತು ಕೈಗೊಳ್ಳಲು ಇ-ಪ್ರಹರಿ Android app ತಂತ್ರಾಂಶವನ್ನು ಅಭಿವೃದ್ದಿಪಡಿಸಿರುವ ಸರ್ಕಾರವು ಅರಣ್ಯ ಸಿಬ್ಬಂದಿಗೆ ಯಾವುದೇ ಆಂಡ್ರಾಯ್ಡ್‌ ಮೊಬೈಲ್‌ಗಳನ್ನು ನೀಡಿಲ್ಲ. ಸರ್ಕಾರದ ಉದ್ದೇಶವನ್ನು ಸಾಕಾರಗೊಳಿಸಲು ಅರಣ್ಯ ಸಿಬ್ಬಂದಿ ತಮ್ಮ ಸ್ವಂತ ಮೊಬೈಲ್‌, ಸಿಮ್‌ಕಾರ್ಡ್‌ನ್ನು ಬಳಸಲು ಸೂಚಿಸಿರುವ ಸರ್ಕಾರವು ಅರಣ್ಯಗಳ ಸಮಗ್ರ ವಿವರವು ಸೋರಿಕೆಯಾಗಲು ದಾರಿಮಾಡಿಕೊಟ್ಟಿದೆ.

 

ಡಿಜಿಟಲ್‌ ಇಂಡಿಯಾ ಎಂದು ಕೇಂದ್ರ ಸರ್ಕಾರವು ಬೊಬ್ಬೆ ಹೊಡೆಯುತ್ತಿದ್ದರೂ ರಾಜ್ಯದ ಬಿಜೆಪಿ ಸರ್ಕಾರವು ಅರಣ್ಯ ಗಡಿ ರಕ್ಷಣೆ, ನಿರ್ವಹಣೆ, ಗಡಿ ರೇಖೆಗಳ ಪರಿಶೀಲನೆಗೆ ಅರಣ್ಯ ವೀಕ್ಷಕರು, ಅರಣ್ಯ ರಕ್ಷಕರಿಗೆ ಆಂಡ್ರಾಯ್ಡ್‌ ಮೊಬೈಲ್,‌ ಸಿಮ್‌ ಕಾರ್ಡ್‌, ಇಂಟರ್‌ನೆಟ್‌ ಸೌಲಭ್ಯ ನೀಡದಿರುವುದು ಡಿಜಿಟಲ್‌ ಇಂಡಿಯಾವನ್ನೇ ಅಣಕಿಸುತ್ತಿದೆ.

 

ಅಷ್ಟೇ ಅಲ್ಲ ಸರ್ಕಾರದಿಂದಲೇ ಪ್ರತ್ಯೇಕವಾಗಿ ಮೊಬೈಲ್‌ ನೀಡದ ಕಾರಣ ಅರಣ್ಯ ಪ್ರದೇಶಗಳ ಗಡಿ ರೇಖೆ, ದೈನಂದಿನ ಗಸ್ತಿನ ವಿವರವು ಸಿಬ್ಬಂದಿಯ ಸ್ವಂತ ಮೊಬೈಲ್‌ನಲ್ಲಿ ಈ ದತ್ತಾಂಶವು ಸಂಗ್ರಹವಾಗುವ ಮೂಲಕ ಅರಣ್ಯಗಳ ಸಮಗ್ರ ವಿವರವು ಸೋರಿಕೆಯಾಗಲು ಅರಣ್ಯ ಇಲಾಖೆಯೇ ಪರೋಕ್ಷವಾಗಿ ದಾರಿಮಾಡಿಕೊಟ್ಟಿದೆ.  ಆಂಡ್ರಾಯ್ಡ್‌ ಮೊಬೈಲ್‌, ಸಿಮ್‌ ಕಾರ್ಡ್‌, ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಿ ಎಂದು ರಾಜ್ಯ ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರ ಸಂಘವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ವಹಿಸಿಲ್ಲ.

 

ಅರಣ್ಯ ರಕ್ಷಕರು, ವೀಕ್ಷಕರ ಸಂಘ ಬರೆದಿರುವ ಮನವಿ ಪತ್ರದ ಪ್ರತಿ

 

‘ಕ್ಷೇತ್ರ ಮುಂಚೂಣಿಯ ಸಿಬ್ಬಂದಿಗಳಿಗೆ ಇ-ಪ್ರಹರಿ ತಂತ್ರಾಂಶಕ್ಕಾಗಿ ಆಂಡ್ರಾಯ್ಡ್‌ ಮೊಬೈಲ್‌ಗಳನ್ನು ಇಲಾಖೆಯಿಂದಲೇ ಪೂರೈಸಬೇಕು. ಈ ಎಲ್ಲಾ ಮೊಬೈಲ್‌ಗಳಿಗೆ ಸಿಮ್‌ ಕಾರ್ಡ್‌ ನೀಡಬೇಕು. ಸೆರೆ ಹಿಡಿಯಲಾದ ಮಾಹಿತಿಯನ್ನು ವೆಬ್‌ ಸರ್ವರ್‌ನಲ್ಲಿ ಸಿಂಕ್‌ ಮಾಡಲು ಅಂತರ್ಜಾಲದ ವ್ಯವಸ್ಥೆ ಬೇಕಿರುವುದರಿಂದ ಈ ಸಿಮ್‌ಗಳಿಗೆ ಇಂಟರ್‌ನೆಟ್‌ ಪ್ಯಾಕೇಜ್‌ ಒದಗಿಸಬೇಕು. ಈ ಎಲ್ಲಾ ಮೂಲಸೌಲಭ್ಯ ಒದಗಿಸಿದ ನಂತರ ಕ್ಷೇತ್ರ ಮುಂಚೂಣಿ ಸಿಬ್ಬಂದಿಗಳಿಗೆ ವಿಭಾಗವಾರು ಇ-ಪ್ರಹರಿ ತಂತ್ರಾಂಶವನ್ನು ಸಮರ್ಪಕವಾಗಿ ಬಳಸಲು ತರಬೇತಿ, ಕಾರ್ಯಾಗಾರ ಏರ್ಪಡಿಸಬೇಕು, ‘ ಎಂದು ಅರಣ್ಯ ವೀಕ್ಷಕರ, ರಕ್ಷಕರ ಸಂಘವು ಮನವಿ ಮಾಡಿತ್ತು. ಆದರೆ ಇಲಾಖೆಯು ಇದನ್ನು ಪುರಸ್ಕರಿಸಿಲ್ಲ ಎಂದು ತಿಳಿದು ಬಂದಿದೆ.

 

 

ಬದಲಿಗೆ ಸ್ವಂತ ಮೊಬೈಲ್‌, ಅವರದ್ದೇ ಸಿಮ್‌ ಕಾರ್ಡ್‌ ಮತ್ತು ಅವರು ಸ್ವಂತಕ್ಕಾಗಿ ಹೊಂದಿರುವ ಇಂಟರ್‌ನೆಟ್‌ ಸೌಲಭ್ಯವನ್ನೇ ಬಳಸಿ ಇ-ಪ್ರಹರಿ ತಂತ್ರಾಂಶವನ್ನು ಬಳಸಬೇಕು ಎಂದು ಅರಣ್ಯ ಸಂರಕ್ಷಣಾಧಿಕಾರಿಗಳ ಕಿರುಕುಳ ನೀಡಲಾರಂಭಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೆ ಪೂರಕವಾಗಿ ಧಾರವಾಡ, ಶಿವಮೊಗ್ಗ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ಸಹ ಇ-ಪ್ರಹರಿ ತಂತ್ರಾಂಶವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೊರಡಿಸಿರುವ ಸುತ್ತೋಲೆಯು ಮುಂಚೂಣಿ ಸಿಬ್ಬಂದಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

 

ಮೊಬೈಲ್‌ ನೀಡದ ಸರ್ಕಾರವು ಸಿಮ್‌ ಕಾರ್ಡ್‌, ಸೆರೆ ಹಿಡಿಯಲಾದ ಮಾಹಿತಿಯನ್ನು ವೆಬ್‌ ಸರ್ವರ್‌ನಲ್ಲಿ ಸಿಂಕ್ ಮಾಡಲು ಇಂಟರ್‌ನೆಟ್‌ ಸೌಲಭ್ಯವನ್ನೂ ಕೂಡ ನೀಡಿಲ್ಲ. ಇದರಿಂದ ಮತ್ತಷ್ಟು ಅಕ್ರೋಶಗೊಂಡಿರುವ ಅರಣ್ಯ ವೀಕ್ಷಕರು ಮತ್ತು ರಕ್ಷಕರ ಸಂಘವು ಈ-ಪ್ರಹರಿ ತಂತ್ರಾಂಶವನ್ನು ಅನುಪಾಲನೆ ಮಾಡಲಾಗದು ಎಂದು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಅರಣ್ಯ ಸಚಿವ ಉಮೇಶ್‌ ಕತ್ತಿ ಮಾತ್ರ ಜಪ್ಪಯ್ಯ ಅನ್ನುತ್ತಿಲ್ಲ.

 

ಪ್ರತಿಯೊಂದು ಶಾಖೆಯಲ್ಲಿ ಬರುವ ಅರಣ್ಯ ಗಡಿರೇಖೆ, ಗಸ್ತು ಪುಸ್ತಕಗಳನ್ನು ನಕಾಶೆಯೊಂದಿಗೆ ಹಾಗೂ ಇತರೆ ದಾಖಲಾತಿಯೊಂದಿಗೆ ‘ಡಿ’ ಲೈನ್‌ ನಿರ್ವಹಣೆ ಹಾಗೂ ಸಂಬಂಧಪಟ್ಟ ರಕ್ಷಿತ ಅರಣ್ಯದ ಗಡಿಗಳನ್ನು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನದವರೆಗೆ 10ರಿಂದ 12 ಕಿ ಮೀ ಅರಣ್ಯ ಗಡಿ ರೇಖೆ ಮೇಲೆ ಗಸ್ತು ಮಾಡಿ ಪರಿಶೀಲನೆ ಮಾಡಬೇಕಿದೆ. ಅಲ್ಲದೆ ಯಾವ ಬೀಟಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಗಡಿಗಳ ಪರಿಶೀಲನೆ ನಡೆಸಲಾಗುವುದು ಎಂಬ ಮಾಹಿತಿಯೂ ಸೇರಿದಂತೆ ಈ ಎಲ್ಲವನ್ನು ಈ-ಪ್ರಹರಿ ತಂತ್ರಾಂಶನಲ್ಲಿ ವರದಿ ಮಾಡಬೇಕಿದೆ.

 

 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಿಬ್ಬಂದಿ ‘ ಇ-ಪ್ರಹರಿ ತಂತ್ರಾಂಶವನ್ನು ಸ್ವಂತ ಮೊಬೈಲ್‌ಗಳನ್ನು ಬಳಸಿ ಜಾರಿಗೊಳಿಸಲು ನಿರ್ಧರಿಸಿರುವುದು ಸಮಂಜಸವಾದ ಕ್ರಮವಾಗಿರುವುದಿಲ್ಲ. ಮುಂಜಾಗ್ರತ ಕ್ರಮ ಮತ್ತು ಸೌಲಭ್ಯಗಳನ್ನು ಒದಗಿಸಿದ ನಂತರ ಇ-ಪ್ರಹರಿ ತಂತ್ರಾಂಶವನ್ನು ಜಾರಿಗೊಳಿಸಲು ನಿಯೋಜಿಸಬಹುದು,’ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

the fil favicon

SUPPORT THE FILE

Latest News

Related Posts