ಅವರೆಕಾಳು ದಾಸ್ತಾನು ಹಗರಣ; 23 ಕೋಟಿ ರು. ನಷ್ಟದ ತನಿಖಾ ವರದಿ ಸಲ್ಲಿಸಲು ಸಿಐಡಿಗೆ ನಿರ್ದೇಶನ

photo credit-deccanhearald

ಬೆಂಗಳೂರು; ಚಿಕ್ಕಬಳ್ಳಾಪುರದ ಚಿಂತಾಮಣಿಯ ಉಗ್ರಾಣ ನಿಗಮದ ಗೋದಾಮಿನಲ್ಲಿದ್ದ ಅವರೆಕಾಳು ಸೇರಿದಂತೆ ಇನ್ನಿತರೆ ಧಾನ್ಯಗಳ ದಾಸ್ತಾನನ್ನು ಒಟ್ಟು ವಿವಿಧ ಬ್ಯಾಂಕ್‌ಗಳಲ್ಲಿ ಅಡಮಾನವಿರಿಸಿದ್ದ ಪ್ರಕರಣದಲ್ಲಿ ಅಧಿಕಾರಿಗಳು ವೈಯಕ್ತಿಕ ಸಾಲ ಎತ್ತಿ 23 ಕೋಟಿ ರು. ಆರ್ಥಿಕ ನಷ್ಟಕ್ಕೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಪ್ರಸ್ತುತ ಹಂತದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಗೃಹ ಇಲಾಖೆಯು ಸಿಐಡಿಗೆ ನಿರ್ದೇಶಿಸಿದೆ.

 

ಪ್ರಕರಣವನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಐಡಿಗೆ ಒಪ್ಪಿಸಿದ್ದರು. ಮೂರು ವರ್ಷಗಳಾದರೂ ಸಿಐಡಿ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಗೃಹ ಇಲಾಖೆಯು ತನಿಖೆಯ ಸದ್ಯದ ಹಂತದ ಕುರಿತು ವರದಿ ಸಲ್ಲಿಸಬೇಕು ಎಂದು 2022ರ ಏಪ್ರಿಲ್‌ 28ರಂದು ಗೃಹ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಜ್ಯ ಉಗ್ರಾಣದ ಚಿಂತಾಮಣಿಯ ಶಾಖೆಯಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ 23 ಕೋಟಿಗೂ ಹೆಚ್ಚು ಆರ್ಥಿಕ ನಷ್ಟ ಆಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿತ್ತು. ಪ್ರಕರಣದ ಪ್ರಸ್ತುತ ಹಂತದ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ನಿರ್ದೇಶಿಸಿದ್ದಾರೆ.

 

ಒಳಾಡಳಿತ ಇಲಾಖೆಯು ಸಿಐಡಿಗೆ ಬರೆದಿರುವ ಪತ್ರದ ಪ್ರತಿ

 

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ದಾಸ್ತಾನು ಗೋದಾಮುಗಳಲ್ಲಿ ಸಂಗ್ರಹವಾಗಿರುವ ಆಹಾರ ಧಾನ್ಯಗಳ ದುರುಪಯೋಗವಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಚಿಂತಾಮಣಿ ಪ್ರಕರಣ ಮತ್ತಷ್ಟು ವಿಸ್ತರಿಸಿತ್ತು. ಆದರೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

 

ಪ್ರಕರಣದ ಹಿನ್ನೆಲೆ

 

ರಾಜ್ಯ ಉಗ್ರಾಣ ನಿಗಮದ ಚಿಂತಾಮಣಿ ಶಾಖೆಯ ಲೆಕ್ಕ ಪರಿಶೋಧನೆ ವೇಳೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಿಗಮದ ವ್ಯವಸ್ಥಾಪಕ ಗಂಗರುದ್ರಯ್ಯ ಎಂಬುವರು ಗೋದಾಮಿನಲಿದ್ದ ಅವರೆಕಾಳು ಸೇರಿದಂತೆ ಇನ್ನಿತರ ಧಾನ್ಯಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡಮಾನ ಇರಿಸಿ ಖಾಸಗಿ ಉದ್ದೇಶಕ್ಕೆ ಸಾಲ ಎತ್ತುವ ಮೂಲಕ  ನಿಗಮಕ್ಕೆ 23,15,43,455 ರು. ಆರ್ಥಿಕ ನಷ್ಟ ಉಂಟು ಮಾಡಿದ್ದರು ಎಂದು ಲೆಕ್ಕ ಪರಿಶೋಧನೆಯ ಮಧ್ಯಂತರ ವರದಿಯಲ್ಲಿ ವಿವರಿಸಲಾಗಿತ್ತು.

 

2014-2015 ನೇ ಸಾಲಿನಿಂದಲೂ ಚಿಂತಾಮಣಿಯಲ್ಲಿರುವ ಗೋದಾಮಿನಲ್ಲಿ ಅವರೆ ಕಾಳು ಸಂಗ್ರಹವಾಗಿತ್ತು. ಉಗ್ರಾಣ ನಿಗಮದ ವ್ಯವಸ್ಥಾಪಕ ಗಂಗರುದ್ರಯ್ಯ ಎಂಬುವರು ವಿವಿಧ ಬ್ಯಾಂಕುಗಳಲ್ಲಿ ಅಡಮಾನ ಮಾಡುವ ಮೂಲಕ ದುರಪಯೋಗಪಡಿಸಿಕೊಂಡಿದ್ದರು. ಈ ಸಂಬಂಧ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಬೆಂಗಳೂರಿನ ಪ್ರಾದೇಶಿಕ ವ್ಯವಸ್ಥಾಪಕ ಅಶೋಕ್‌ಕುಮಾರ್‌ ಅವರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.

 

ದೂರಿನಲ್ಲೇನಿದೆ?

 

ಚಿಂತಾಮಣಿ ನಗರದ ಉಗ್ರಾಣದಲ್ಲಿದ್ದ ದಾಸ್ತಾನನ್ನು ಉಗ್ರಾಣದ ವ್ಯವಸ್ಥಾಪಕ ಗಂಗರುದ್ರಯ್ಯ ಕೆಲ ವ್ಯಾಪಾರಸ್ಥರೊಂದಿಗೆ ಶಾಮೀಲಾಗಿ ದಾಸ್ತಾನನ್ನು ವಿವಿಧ ಬ್ಯಾಂಕ್‌ಗಳಿಗೆ ಅಡಮಾನ ಮಾಡಿ 22 ಕೋಟಿ ರೂ.ಗಳ ಸಾಲ ಪಡೆದಿದ್ದರು.  2014-15ನೇ ಸಾಲಿನಲ್ಲಿ ಉಗ್ರಾಣದ ದಾಸ್ತಾನಿನಲ್ಲಿದ್ದ ಅವರೆಕಾಳನ್ನು ಬ್ಯಾಂಕ್‌ನಲ್ಲಿ  ಅಡಮಾನ ಇರಿಸಿ ಸಾಲ ಪಡೆದಿದ್ದಾರೆ. ಸಾಲ ಪಡೆದು ವರ್ಷಗಳೇ ಕಳೆದಿದ್ದರೂ ಸಾಲ ಮರುಪಾವತಿ ಆಗಿರಲಿಲ್ಲ.  ಸಾಲದ ಅಸಲು ಮತ್ತು ಇದುವರೆಗಿನ ಬಡ್ಡಿ ಸೇರಿ ಒಂದೂವರೆ ಕೋಟಿ ರೂ.ಮೀರಿತ್ತು.  ಈ ಹಣವನ್ನು ಬ್ಯಾಂಕಿಗೆ ಪಾವತಿ ಮಾಡದ ಗಂಗಭೈರಯ್ಯ ಅವರು ದಾಸ್ತಾನನ್ನೂ ಅಕ್ರಮವಾಗಿ ಬಿಡುಗಡೆ ಮಾಡಿದ್ದರು ಎಂದು ವಿವರಿಸಲಾಗಿದೆ.

 

ಹಾಗೆಯೇ ಉಗ್ರಾಣದಲ್ಲಿದ್ದ 55, 215 ಚೀಲಗಳನ್ನು ಹಿರಿಯ ಅಧಿಕಾರಿಗಳಿಗೆ ಹಾಗೂ ಬ್ಯಾಂಕ್‌ಗಳಿಗೂ ಸ್ವಲ್ಪವೂ ಮಾಹಿತಿ ನೀಡದೆ ಮಹಾಂತೇಶ್‌ ಮತ್ತು ಕಾರ್ತಿಕ್‌ ಎಂಬ ವ್ಯಾಪಾರಸ್ಥರಿಂದ ದಾಸ್ತಾನು ಶುಲ್ಕ ಪಡೆಯದೆ ಗಂಗರುದ್ರಯ್ಯ ವ್ಯಾಪಾರಿಗಳಿಗೆ ಬಿಡುಗಡೆ ಮಾಡಿದ್ದರು.

 

ಈ ಮೂಲಕ ಉಗ್ರಾಣ ನಿಮಗಕ್ಕೆ ಕೋಟ್ಯಂತರ ರೂ.ಗಳ ನಷ್ಠ ಉಂಟಾಗಿದೆ ಎಂದು  ದೂರಿನಲ್ಲಿ ವಿವರಿಸಿದ್ದರು.  ಪ್ರತಿ ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಲೆಕ್ಕಪರಿಶೋಧನೆ ನಡೆಸಬೇಕು. ಆದರೆ ಕಳೆದ 5 ವರ್ಷಗಳ ಅವಧಿಯಲ್ಲಿ ಕೇವಲ 1 ಬಾರಿಯಷ್ಟೇ ಆಡಿಟ್‌ ನಡೆದಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

 

ರಾಜ್ಯದ ವಿವಿಧೆಡೆ ಇರುವ ಉಗ್ರಾಣ ನಿಗಮದ ಅಧಿಕಾರಿಗಳು ಆಹಾರ ಧಾನ್ಯಗಳನ್ನು ಕಳ್ಳ ಮಾರ್ಗದಲ್ಲಿ ಬ್ಯಾಂಕ್‌ಗಳಲ್ಲಿ ಅಡಮಾನ ಇರಿಸುವ ಪ್ರಕರಣಗಳಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರು.ಗಳ ಆರ್ಥಿಕ ನಷ್ಟ ಸಂಭವಿಸುತ್ತಿದೆ ಎನ್ನಲಾಗಿದೆ.

 

ಸಿಐಡಿ ತನಿಖಾ ತಂಡ ಈ ಜಾಲವನ್ನು ಭೇದಿಸಿದಲ್ಲಿ ರಾಜ್ಯ ಉಗ್ರಾಣ ನಿಗಮದ ವಿವಿಧ ಜಿಲ್ಲೆಗಳಲ್ಲಿರುವ ಗೋದಾಮುಗಳಲ್ಲಿಯೂ ಆಹಾರ ಧಾನ್ಯಗಳ ದುರುಪಯೋಗ ಮತ್ತು ಬ್ಯಾಂಕ್‌ಗಳಲ್ಲಿ ಅಡಮಾನ ಇರಿಸಿ ಖಾಸಗಿ ಉದ್ದೇಶಕ್ಕೆ ವೈಯಕ್ತಿಕ ಸಾಲ ಎತ್ತಿ ಆರ್ಥಿಕ ನಷ್ಟವಾಗಿರುವ ಮತ್ತಷ್ಟು ಪ್ರಕರಣಗಳು ಹೊರಬೀಳುವ ಸಾಧ್ಯತೆಗಳಿವೆ.

 

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೇರಿದ ಪಡಿತರ, ಆಹಾರ ಧಾನ್ಯಗಳನ್ನು ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಶೇಖರಿಸಿಡಲಾಗುತ್ತದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಯೋಜನೆ ಅನ್ನಭಾಗ್ಯದ ಪಡಿತರವೂ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿತ್ತು. ವ್ಯಾಪಾರಸ್ಥರು ಮತ್ತು ಅಧಿಕಾರಿಗಳ ಶಾಮೀಲಿನಿಂದಾಗಿ ಅನ್ನಭಾಗ್ಯದ ಅಕ್ಕಿಯೂ ಕಾಳಸಂತೆಕೋರರ ಪಾಲಾಗುತ್ತಲೇ ಇದೆ.

 

ಬೆಳಕಿಗೆ ಬಂದ ಪ್ರಕರಣಗಳಲ್ಲಿ ಒಂದಷ್ಟು ಮಂದಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಆಹಾರ ನಾಗರಿಕ ಸರಬರಾಜು, ಸಹಕಾರ ಮತ್ತು ಪೊಲೀಸ್‌ ಇಲಾಖೆ ಈ ಬಗ್ಗೆ ವಿಸ್ತ್ರತವಾಗಿ ತನಿಖೆ ನಡೆಸಿಲ್ಲ. ಚಿಂತಾಮಣಿ ಪ್ರಕರಣವನ್ನು ಮೇಲ್ಪಂಕ್ತಿಯನ್ನಾಗಿಸಿಕೊಂಡು ಸಿಐಡಿ ತನಿಖಾ ತಂಡ, ಇದರ ಜಾಲವನ್ನು ಭೇದಿಸಬೇಕಿದೆ ಎನ್ನುತ್ತಾರೆ ಉಗ್ರಾಣ ನಿಗಮದ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts