ನೀಲಗಿರಿ ಕಿರಿಕಿರಿ; ಅರಣ್ಯ ನಿಗಮ ಪ್ರದೇಶಗಳಲ್ಲಿ ಬೆಳೆಯಲು ಅನುಮತಿಗೆ ತಾರಾ ಮೊರೆ

ಬೆಂಗಳೂರು; ನೀಲಗಿರಿ ಬೆಳೆಯುವುದನ್ನು ನಿಷೇಧಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದುಕೊಳ್ಳುವ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ಕುರಿತು ಚರ್ಚೆಗಳು ನಡೆಯುತ್ತಿದ್ದರೆ ಇತ್ತ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಅವರು ನಿಗಮದ ಅರಣ್ಯ ಪ್ರದೇಶಗಳಲ್ಲಿ ನೀಲಗಿರಿ ಬೆಳೆ ಬೆಳೆಯುವುದಕ್ಕೆ ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಅಂತರ್ಜಲ ಮಟ್ಟ ಹೆಚ್ಚಿರುವ ಮಲೆನಾಡಿನ ಪ್ರದೇಶಗಳಲ್ಲಿ ಈ ನಿರ್ಬಂಧನೆಯನ್ನು ತೆಗೆದು ಹಾಕುವ ಬಗ್ಗೆ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇಲಾಖೆ ಅಧಿಕಾರಿಗಳಿಗೆ 4 ತಿಂಗಳ ಹಿಂದೆಯೇ ಹೊರಡಿಸಿದ್ದ ಆದೇಶವನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮುಂದಾಗಿರುವ ಬೆನ್ನಲ್ಲೇ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಅವರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ನಿಗಮಕ್ಕೆ ಹಸ್ತಾಂತರಿಸಿದ ಭೂಮಿಯಲ್ಲಿ ಮಾತ್ರ ನೀಲಗಿರಿ ಬೆಳೆಯಲು ಆದೇಶವಿದೆ. ಹಾಗೆಯೇ ಇಲ್ಲಿಯವರೆಗೂ ಕೆಎಫ್‌ಡಿಸಿ ನಡೆದುಕೊಂಡಿದೆ. ಅರಣ್ಯ ಅಭಿವೃದ್ಧಿ ನಿಗಮವು 2017ರಿಮದಲೂ ಈವರೆವಿಗೂ ನೀಲಗಿರಿ ಬೆಳೆಯನ್ನು ಬೆಳೆದಿರುವುದಿಲ್ಲ. ಇದರಿಂದ ನಿಗಮವು ಮುಂದಿನ ದಿನಗಳಲ್ಲಿ ಯಾವುದೇ ಆದಾಯವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತದೆ. ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನವನ್ನು ನೀಡಲು ಸಹ ಕಷ್ಟವಾಗಿರುತ್ತದೆ,’ ಎಂದು ಸರ್ಕಾರವನ್ನು ಅಲವತ್ತುಕೊಂಡಿದ್ದಾರೆ.

ಹಾಗೆಯೇ ‘ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನೀಲಗಿರಿ ಬೆಳೆಯನ್ನು ಒಂದು ಮುಖ್ಯ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿರುವುದರಿಂದ ನಿಗಮದ ಅರ್ಥಿಕ ಪರಿಸ್ಥಿತಿಗೆ ಅನುಕೂಲಕರವಾಗಿರುತ್ತದೆ. ಈ ರೀತಿ ನೀಲಗಿರಿ ಬೆಳೆಯುವ ನಿಷೇಧ ನಮ್ಮ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಾಗಲಿ, ಇತರೆ ದೇಶಗಳಲ್ಲಾಗಲಿ ಇರುವುದಿಲ್ಲ. ನೀಲಗಿರಿ ಬೆಳೆಯನ್ನು ಬೆಳೆಯುವ ಬಗ್ಗೆ ಸರ್ಕಾರದ ಉನ್ನತ ಸಮಿತಿ ವರದಿ ನೀಡಿದ್ದು, ನಿಗಮವು ಮೃದು (ನೀಲಗಿರಿ) ಮರಗಳನ್ನು ಬೆಳೆಯುವ ಬಗ್ಗೆ ಸಾಕ್ಷ್ಯ ಚಿತ್ರವೊಂದನ್ನು ತಯಾರಿಸಿದೆ. ಉಚ್ಛ ನ್ಯಾಯಾಲಯದ ನಿಷೇಧದ ಬಗ್ಗೆ ತಡೆಯಾಜ್ಞೆಯೂ ಇರುವುದರಿಂದ ಅರಣ್ಯ ಅಭಿವೃದ್ಧಿ ನಿಗಮದ ಅರಣ್ಯ ಪ್ರದೇಶಗಳಲ್ಲಿ ಮಾತ್ರ ನೀಲಗಿರಿ ಬೆಳೆಯುವುದಕ್ಕೆ ಅನುಮತಿ ನೀಡಬೇಕು,’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸುವ ಬಗ್ಗೆ ಇರುವ ಆದೇಶವನ್ನು ಹಿಂಪಡೆಯುವ ಬಗ್ಗೆ ಚರ್ಚಿಸಲಾಗಿದೆ. ಹೆಚ್ಚು ಮಳೆಯಾಗುವ ಮತ್ತು ಅಂತರ್ಜಲ ಮಟ್ಟ ಹೆಚ್ಚಿರುವ ಮಲೆನಾಡಿನ ಪ್ರದೇಶಗಳಿಗೆ ಈ ನಿರ್ಬಂಧನೆಯನ್ನು ತೆಗೆದುಹಾಕುವ ಬಗ್ಗೆ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗಳು ಆದೇಶ ನೀಡಿರುತ್ತಾರೆ,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ 2020ರ ಅಕ್ಟೋಬರ್‌ 9ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದನ್ನು ಸ್ಮರಿಸಬಹುದು.

ಕೈಗಾರಿಕೆ, ವಾಣಿಜ್ಯ ಇಲಾಖೆ, ಮೈಸೂರು ಕಾಗದ ಕಾರ್ಖಾನೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ಸಲ್ಲಿಸಿದ್ದ ಪ್ರಸ್ತಾವನೆಗಳನ್ನಾಧರಿಸಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲು 2020ರ ಸೆಪ್ಟಂಬರ್‌ 14ರಂದು ನಡೆದಿದ್ದ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು.

ನಿಷೇಧಿಸಲು ಬಲವಾದ ಕಾರಣಗಳಿಲ್ಲ

‘ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲು ಬಲವಾದ ಕಾರಣಗಳು ಇಲ್ಲದಿರುವ ಬಗ್ಗೆ ಹಾಗೂ ಕರ್ನಾಟಕವನ್ನು ಹೊರತುಪಡಿಸಿ ದೇಶದ ಇತರೆ ರಾಜ್ಯಗಳಲ್ಲಿ ಎಲ್ಲಿಯೂ ನೀಲಗಿರಿ ಬೆಳೆಸಲು ನಿಷೇಧವಿಲ್ಲ,’ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಇತರೆ ಅಧಿಕಾರಿಗಳು ಇದನ್ನೇ ಅನುಮೋದಿಸಿದ್ದರು.

ಅಂತರ್ಜಲಕ್ಕೂ ಹಾನಿಯಿಲ್ಲ

‘ನೀಲಗಿರಿ ಬೆಳೆಸುವುದರಿಂದ ಅಂತರ್ಜಲ ಮಟ್ಟಕ್ಕೆ ಯಾವುದೇ ಹಾನಿಯಾಗಿರುವ ಪ್ರಸಂಗಗಳು ಇಲ್ಲದಿರುವುದರಿಂದ ರಾಜ್ಯಾದ್ಯಂತ ನೀಲಗಿರಿ ಬೆಳೆಸಲು ಇರುವ ನಿಷೇಧ ತೆಗೆದುಹಾಕಲು ಒಮ್ಮತದಿಂದ ಅಭಿಪ್ರಾಯ ಕೈಗೊಳ್ಳಲಾಗಿದೆ,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬರೆದಿರುವ ಪತ್ರದಲ್ಲಿ ವಿವರಿಸಿದ್ದರು.

ಕೈಗಾರಿಕೆ ಇಲಾಖೆ ನಿಲುವೇನು?

ನೀಲಗಿರಿ ಮತ್ತು ಅಕೇಶಿಯಾ ಬೆಳೆಯುವುದಕ್ಕಾಗಿ ಮೈಸೂರು ಕಾಗದ ಕಾರ್ಖಾನೆಗೆ ಕ್ಷೀಣಿತ ಅರಣ್ಯ ಪ್ರದೇಶವನ್ನು ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಸ್ತಾಪಿಸಿದೆ. ಅಲ್ಲದೆ ಇದೇ ಪ್ರಸ್ತಾವನೆಯಲ್ಲಿ ಪ್ರಸ್ತುತ ನೀಲಗಿರಿ ಬೆಳೆಯಲು ಇರುವ ನಿಷೇಧವನ್ನು ಹಿಂಪಡೆಯಬೇಕು ಎಂದು 2020ರ ಆಗಸ್ಟ್‌ 7ರಂದು ಪತ್ರ ಬರೆದಿತ್ತು.

the fil favicon

SUPPORT THE FILE

Latest News

Related Posts