ನಿರ್ಮಿತಿ ಕೇಂದ್ರ ಪ್ರಗತಿ ಪರಿಶೀಲನೆಗೆ ಮುಂದಾದ ಸಮಿತಿ; ಈಜುಕೊಳಕ್ಕೆ ಬೀಳಲಿದೆಯೇ ಕಲ್ಲು?

ಬೆಂಗಳೂರು; ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಸಾ ರಾ ಮಹೇಶ್‌ ಅವರ ಮಧ್ಯೆ ನಡೆದಿದ್ದ ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಿಂತಿದ್ದರೂ ಹನಿ ಮಾತ್ರ ಇನ್ನೂ ಸಣ್ಣದಾಗಿ ಬೀಳುತ್ತಲೇ ಇದೆ. ಇವರಿಬ್ಬರ ಮಧ್ಯೆ ನಡೆದಿದ್ದ ಕಾದಾಟ ಸದ್ಯಕ್ಕೆ ನಿಲ್ಲುವುದಿಲ್ಲ. ಇದಕ್ಕೆ ಪೂರಕವೆಂಬಂತೆ  ಸಭೆಯ ಮುಂದಿಡಲಾದ ಕಾಗದಪತ್ರಗಳ ಸಮಿತಿಯು ಶಾಸಕರ ಭವನದಲ್ಲಿ ಇದೇ ಜುಲೈ 13ರಂದು ನಡೆಸಲಿರುವ ಸಭೆಯ ಕಾರ್ಯಸೂಚಿಯೇ ಉತ್ತಮ ನಿದರ್ಶನ.

ಕಲ್ಯಾಣ ಮಂಟಪ ಒತ್ತುವರಿ ವಿಚಾರ ಮತ್ತು ಜಲಸನ್ನಿಧಿಯಲ್ಲಿ ಈಜುಕೊಳ ನಿರ್ಮಾಣ ಪ್ರಕರಣಗಳು ಸಾ ರಾ ಮಹೇಶ್‌ ಮತ್ತು ರೋಹಿಣಿ ಸಿಂಧೂರಿ ಅವರ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದವು. ಆ ನಂತರ ಭೂ ದಾಖಲೆಗಳ ಇಲಾಖೆಯು ನಡೆಸಿದ ತನಿಖೆಯಲ್ಲಿ ಒತ್ತುವರಿ ಪ್ರಕರಣದಲ್ಲಿ ಸಾ ರಾ ಮಹೇಶ್‌ ಅವರನ್ನು ಆರೋಪದಿಂದ ಮುಕ್ತಗೊಳಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಂತರ ನಡೆಯುತ್ತಿರುವ ಸಭೆಯ ಮುಂದಿಡಲಾದ ಕಾಗದಪತ್ರಗಳ ಸಮಿತಿ ಸಭೆಯಲ್ಲಿ ನಿರ್ದಿಷ್ಟವಾಗಿ ಮೈಸೂರಿನ ನಿರ್ಮಿತಿ ಕೇಂದ್ರದ ಪ್ರಗತಿ ಪರಿಶೀಲನೆಯನ್ನು ಕಾರ್ಯಸೂಚಿಯಲ್ಲಿ ಸೇರ್ಪಡೆಗೊಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸರ್ಕಾರಿ ನಿವಾಸ ಜಲ ಸನ್ನಿಧಿಯಲ್ಲಿ ಮೈಸೂರು ಜಿಲ್ಲೆಯ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಾಣವಾಗಿದ್ದ ಈಜುಕೊಳ ಪ್ರಕರಣವು ಇದೇ ಸಭೆಯಲ್ಲಿ ಸಹಜವಾಗಿಯೇ ಚರ್ಚೆಗೆ ಬರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು. ಅಧ್ಯಕ್ಷ ಸಾ ರಾ ಮಹೇಶ್‌ ಅವರು ಈಜುಕೊಳಕ್ಕೆ ಮತ್ತೊಮ್ಮೆ ಕಲ್ಲು ಎಸೆದರೂ ಅಚ್ಚರಿಯೇನಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ರಾಜೀವ್‌ಗಾಂಧಿ ವಸತಿ ನಿಗಮಗಳು ಬಾಕಿ ಇರುವ ವಾರ್ಷಿಕ ವರದಿ, ಲೆಕ್ಕ ಪರಿಶೋಧನಾ ವರದಿಗಳ ಕುರಿತೂ ಬೆಳಗ್ಗೆ 11;30ರಿಂದ 12;30ರವರೆಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 1;00 ಗಂಟೆಯಿಂದ ಮೈಸೂರು ನಿರ್ಮಿತಿ ಕೇಂದ್ರದ ಪ್ರಗತಿ ವಿವರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಸಭೆಯ ಕಾರ್ಯಸೂಚಿಯಿಂದ ಗೊತ್ತಾಗಿದೆ.

ಜುಲೈ 13ರಂದು ನಡೆಯಲಿರುವ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ನಡೆಸುವ ಸಭೆಗೆ ಮೈಸೂರು ಜಿಲ್ಲೆಯ ನಿರ್ಮಿತಿ ಕೇಂದ್ರದ ಪ್ರಗತಿ ವಿವರಗಳೊಂದಿಗೆ ಹಾಜರಾಗಬೇಕು ಎಂದು ಸಮಿತಿಯು ಮೈಸೂರು ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದಿದೆ ಎಂದು ತಿಳಿದು ಬಂದಿದೆ.

ಮೈಸೂರು ನಿರ್ಮಿತಿ ಕೇಂದ್ರದ ಪ್ರಗತಿ ವಿವರಗಳ ಪರಿಶೀಲನೆ ಸಂದರ್ಭದಲ್ಲಿಯೇ ಜಲಸನ್ನಿಧಿಯಲ್ಲಿ ನಿರ್ಮಾಣವಾಗಿರುವ ಈಜುಕೊಳ ನಿರ್ಮಾಣದ ಕುರಿತೂ ಚರ್ಚೆಗೆ ಬರಲಿದೆ. ಆ ವೇಳೆಯಲ್ಲಿ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿಯನ್ನೂ ಸಮಿತಿಯ ಸಭೆಯು ಈಜುಕೊಳ ನಿರ್ಮಾಣ ವಿಚಾರವನ್ನು ಪರಾಮರ್ಶನೆಗೆ ಒಡ್ಡಲಿದೆ.

ಜಿಲ್ಲಾಧಿಕಾರಿ ಅವರ ಅಧಿಕೃತ ಸರ್ಕಾರಿ ನಿವಾಸ ಜಲಸನ್ನಿಧಿಯಲ್ಲಿ ನಿಯಮ ಬಾಹಿರವಾಗಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಈಜುಕೊಳ ಕಾಮಗಾರಿಯ ಕುರಿತು ಪ್ರಾದೇಶಿಕ ಆಯುಕ್ತ ಜಿ ಸಿ ಪ್ರಕಾಶ್‌ ಅವರು ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿ ಕುರಿತೂ ಚರ್ಚೆ ನಡೆಯುವುದನ್ನು ತಳ್ಳಿಹಾಕಲಾಗದು ಎಂದು ಸಮಿತಿ ಸದಸ್ಯ ಶಾಸಕರೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

ಈಜುಕೊಳ ಪ್ರಕರಣದ ಹಿನ್ನೆಲೆ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಈಜುಕೊಳ ನಿರ್ಮಾಣ ಮಾಡಲಾಗಿತ್ತು. ಈಜುಕೊಳ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಶಾಸಕ ಸಾ.ರಾ. ಮಹೇಶ್ ಮುಖ‍್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರು ನೀಡಿದ್ದನ್ನು ಸ್ಮರಿಸಬಹುದು. ಈಜುಕೊಳ ನಿರ್ಮಾಣದಲ್ಲಿ 6 ತಪ್ಪುಗಳನ್ನು ನಡೆದಿರುವುದನ್ನು ಪ್ರಾದೇಶಿಕ ಆಯುಕ್ತರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು.

1. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 32 ಲಕ್ಷ ರೂ ಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದ್ದು, ಅಂದಾಜುಪಟ್ಟಿ ಗೆ ತಾಂತ್ರಿಕ ವರ್ಗದವರಿಂದ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ.

2. ಈಜುಕೊಳದ ನಿರ್ಮಾಣದ ಬಗ್ಗೆ ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ. ಆಡಳಿತಾತ್ಮಕ ಮಂಜೂರಾತಿ ಇಲ್ಲದೆ ಈಜುಕೊಳ ನಿರ್ಮಾಣಗೊಂಡಿದೆ.

3. ಈಜುಕೊಳದ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಾದೇಶ ಇಲ್ಲ.

4. ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳು ಇಲ್ಲ.

5. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ.

6. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿಲ್ಲ.

ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣದ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದರು. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ನಿರ್ಮಿಸಿದ್ದ ಈಜುಕೊಳ ಭಾರೀ ವಿವಾದ ಸೃಷ್ಟಿಸಿತ್ತು. ನಿಯಮ ಉಲ್ಲಂಘನೆ ಮಾಡಿ ಅನುಮತಿ ಪಡೆಯದೇ ರೋಹಿಣಿ ಸಿಂಧೂರಿಯವರು ಸ್ವಹಿತಾಸಕ್ತಿಯಿಂದ ಈಜುಕೊಳ ನಿರ್ಮಿಸಿಕೊಂಡಿದ್ದರು ಎಂದು ಮೈಸೂರು ಪ್ರಾದೇಶಿಕ ಆಯುಕ್ತ ಜಿ ಸಿ ಪ್ರಕಾಶ್ ಸಲ್ಲಿಸಿದ್ದ ವರದಿಯಲ್ಲಿ ಹೇಳಲಾಗಿದೆ.

ಕರ್ನಾಟಕದ ಐಜಿಪಿ, ಮಹಿಳಾ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅವರು, ಜಿಲ್ಲೆಯಲ್ಲಿ ಕೊರೋನಾದಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರೋಹಿಣಿ ಸಿಂಧೂರಿಯವರಿಗೆ ಈಜುಕೊಳ ನಿರ್ಮಿಸುವ ಅಗತ್ಯವಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಈಜುಕೊಳ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರದ ತಾಂತ್ರಿಕ ವಿಭಾಗದ ಅನುಮತಿ ಇದೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಈ ಕಾಮಗಾರಿ ನಡೆದಿಲ್ಲ ಎಂದು ರೋಹಿಣಿ ಸಿಂಧೂರಿ ಸ್ಪಷ್ಟೀಕರಣ ನೀಡಿದ್ದರು. ಅದರ ಕುರಿತಾದ ಪತ್ರಿಕಾ ವರದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಡಿ. ರೂಪಾ, ರೋಹಿಣಿ ಅವರಿಗೆ ಹಲವು ಪ್ರಶ್ನೆಗಳನ್ನು ಇರಿಸಿದ್ದರು.

ರೂಪಾ ಅವರು ಮುಂದಿರಿಸಿದ್ದ ಪ್ರಶ್ನೆಗಳಿವು

1. ನಿರ್ಮಿತಿ ಕೇಂದ್ರ ಆಯಾ ಜಿಲ್ಲೆಗಳಲ್ಲಿ ಇದ್ದು, ಅದಕ್ಕೆ ಡಿಸಿ ಅವರೇ ಅಧ್ಯಕ್ಷ ಆಗಿರುತ್ತಾರೆ. ಅವರ ಮನೆಯ ಅಂಗಳದಲ್ಲಿ ಈಜು ಕೊಳ ಕಟ್ಟಿಸುವುದು ಅವರಿಗೆ ಕಷ್ಟವೇ ಅಲ್ಲ. ವಿಷಯ ಅದಲ್ಲ. ಕಾರ್ಪೋರೇಶನ್ ಪರವಾನಗಿ ಬೇಡವೇ? ಅದು ಇತ್ತೇ? ಇರಲ್ಲಿಲ್ಲ. ತಪ್ಪಲ್ಲವೇ? ಜನ ಸಾಮಾನ್ಯನಿಗೆ ಒಂದು, ಡಿಸಿಗೆ ಬೇರೆ ನ್ಯಾಯವೇ? ಕಾರ್ಪೋರೇಶನ್ ಪರವಾನಗಿ ಇಲ್ಲ, ಹಾಗಾದ್ರೆ ಒಡೆಯಬೇಕಲ್ಲ? ಅಥವಾ ದಂಡ ಕಟ್ಟಿಸಬೇಕಲ್ಲ? ಈ ಅಧಿಕಾರಿಯಿಂದ ದಂಡ ವಸೂಲಿ ಮಾಡುತ್ತಾರೆಯೇ?

2. ಈ ಅಧಿಕಾರಿಯು ಕೊಟ್ಟಿರುವ ಇನ್ನೊಂದು ದಾರಿ ತಪ್ಪಿಸುವ ಹೇಳಿಕೆ, ಇದು ಕೋವಿಡ್ ಸಮಯದಲ್ಲಿ ನಿರ್ಮಿಸಿಲ್ಲ. ಕೋವಿಡ್ ಮುಗಿದಿದೆ ಅಂತ ಸರ್ಕಾರ ಘೋಷಿಸಿದೆಯೇ? ಶಾಲಾ ಕಾಲೇಜು ತೆರೆದಿದೆಯೇ? ಮಾಸ್ಕ್ ಹಾಕೋದು ನಿಲ್ಲಿಸಿ ಅಂತ ಸರ್ಕಾರ ಹೇಳಿದೆಯೆ? ಮತ್ತೆ ಇವರು ಕೋವಿಡ್ ಸಮಯ ಇರಲಿಲ್ಲ ಅಂತ ಹೇಳೋದು ಒಪ್ಪಲು ಸಾಧ್ಯವೇ?

3. ಒಬ್ಬ ಡಿಸಿ ಈಜುಕೊಳ ಕಟ್ಟಿದಾಗ, ಬಾಕಿ ಜಿಲ್ಲೆಯ ಡಿಸಿಗಳೂ ಕಟ್ಟಬಹುದಲ್ಲವೆ. ಅವರನ್ನು ನೋಡಿ ಎಸ್‌ಪಿಗಳು, ಅಂದರೆ ಪೊಲೀಸ್ ವರಿಷ್ಠ ಅಧಿಕಾರಿಗಳೂ ಕಟ್ಟಬಹುದಲ್ಲವೆ? ಹಾಗೆ ಎಲ್ಲರೂ ತಮ್ಮ ತಮ್ಮ ಬಂಗಲೆಯಲ್ಲಿ ಸಾರ್ವಜನಿಕ ಹಣ ಉಪಯೋಗಿಸಿ ಕಟ್ಟುವುದನ್ನು ಒಪ್ಪಲು ಸಾಧ್ಯವೇ? ಅದೂ ಇಂದಿನ ಪರಿಸ್ಥಿತಿಯಲ್ಲಿ? ಡಿಸಿ ಬಂಗಲೆಯಲ್ಲಿ ಸಾಮಾನ್ಯ ಜನರು ಉಪಯೋಗಿಸಲು ಅವಕಾಶ ಇದೆಯೇ? ಇಲ್ಲವಲ್ಲ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts