‘ದಿ ಫೈಲ್‌’ ವರದಿ ಪರಿಣಾಮ; ಅಕ್ರಮ ನೇಮಕ ಪ್ರಕರಣ ಕುರಿತು ತನಿಖೆಗೆ ಪತ್ರ

ಬೆಂಗಳೂರು; ಕನಿಷ್ಠ ವೇತನ ಕಾಯ್ದೆಯಲ್ಲಿ ನಿಗದಿಪಡಿಸಿರುವ ವೇತನಕ್ಕಿಂತಲೂ ಹೊರಗುತ್ತಿಗೆ ನೌಕರರಿಗೆ ಕಳೆದ ಎರಡೂವರೆ ವರ್ಷಗಳಿಂದಲೂ ಹೆಚ್ಚುವರಿಯಾಗಿ ವೇತನ ಪಾವತಿಸಿರುವ ಕರ್ನಾಟಕ ವಿಧಾನಪರಿಷತ್‌ ಸಚಿವಾಲಯದ ಬೊಕ್ಕಸಕ್ಕೆ 48 ಲಕ್ಷ ನಷ್ಟವಾಗಿರುವ ಕುರಿತು ‘ದಿ ಫೈಲ್‌’ ಹೊರಗೆಡವಿದ್ದ ಪ್ರಕರಣದ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರು ಮೌನ ವಹಿಸಿರುವ ಬೆನ್ನಲ್ಲೇ ಅಕ್ರಮ ನೇಮಕಾತಿ ಪ್ರಕರಣವನ್ನು ಕೈಗೆತ್ತಿಕೊಂಡಿರುವ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಅವರು ಇದನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದಿದ್ದಾರೆ.

ಕಿಯೋನಿಕ್ಸ್‌ ಮೂಲಕ ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿಕೊಂಡಿರುವ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿರುವ ಪರಿಷತ್‌ ಸಚಿವಾಲಯವು ಆರ್ಥಿಕ ಇಲಾಖೆಯ ಅನುಮತಿಯನ್ನೇ ಪಡೆಯದೇ ನಿಯಮಬಾಹಿರವಾಗಿ ನೇಮಕ ಮಾಡಿದೆ ಎಂದು ‘ದಿ ಫೈಲ್‌’ ಜೂನ್ 18ರಂದು ವರದಿ ಪ್ರಕಟಿಸಿದ್ದ ವರದಿ ಆಧರಿಸಿ ರಮೇಶ್‌ಬಾಬು ಅವರು 2021ರ ಜುಲೈ 6ರಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದಿರುವುದು ಪ್ರಕರಣವನ್ನು ವಿಸ್ತರಿಸಿದಂತಾಗಿದೆ.

ಪರಿಷತ್‌ನಲ್ಲಿ ಅಕ್ರಮ ನೇಮಕ, ಹೆಚ್ಚುವರಿ ವೇತನ, 48 ಲಕ್ಷ ನಷ್ಟ; ಹೊರಟ್ಟಿ ಮೌನ!

‘ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ ಮಾಡಿರುವ ನೇಮಕಾತಿ ಅಕ್ರಮವಾಗಿದ್ದು, ಈ ಸಂಬಂಧ ಪರಿಷತ್ತಿನ ಸಚಿವಾಲಯ ಮತ್ತು ಆರ್ಥಿಕ ಇಲಾಖೆಯೊಂದಿಗೆ ನಡೆದಿರುವ ಪತ್ರ ವ್ಯವಹಾರಗಳನ್ನು ಪಾರದರ್ಶಕತೆ ದೃಷ್ಟಿಯಿಂದ ವಿಧಾನಪರಿಷತ್ತಿನ ಅಧಿವೇಶನದಲ್ಲಿ ಬಹಿರಂಗಗೊಳಿಸಬೇಕು. ನಿಯಮಾವಳಿಗಳನ್ನು ಮೀರಿ ಹೆಚ್ಚುವರಿ ವೇತನ ಪಾವತಿ ಮಾಡಿರುವ ಸಚಿವಾಲಯದ ಅಧಿಕಾರಿಗಳನ್ನು ಅಮಾನತಿನಲ್ಲಿಡಬೇಕು. ಪ್ರಕರಣ ಕುರಿತು ವಿಧಾನಪರಿಷತ್‌ನ 5 ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ತನಿಖೆಗೆ ಒಳಪಡಿಸಬೇಕು,’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅದೇ ರೀತಿ ‘ಸಚಿವಾಲಯದ ಅಧಿಕಾರಿಗಳ ಸಂಬಂಧಿಕರಾದ ನಿಖಿಲ್‌ ಮತ್ತು ಸುಹಾಸ್‌ ಎಂಬುವರು ನಿಯಮಾವಳಿ ಮೀರಿ ನೇಮಕಗೊಂಡು ಸ್ವಜನಪಕ್ಷಪಾತಕ್ಕೆ ಒಳಗಾಗಿರುವುದನ್ನೂ ತನಿಖೆಗೊಳಪಡಿಸಬೇಕು. ತಾಂತ್ರಿಕ ಹುದ್ದೆಗಳಿಗೆ ಪರೀಕ್ಷೆ ಮತ್ತು ಸಂದರ್ಶನಗಳಿಲ್ಲದೆ ನೇಮಕ ಮಾಡಿರುವುದು ಸಂಪೂರ್ಣ ಅಕ್ರಮವಾಗಿರುತ್ತದೆ. ಪರಿಷತ್ತಿನ ಸಚಿವಾಲಯದ ಸಂಬಂಧಿಕರು, ನಿಕಟವರ್ತಿಗಳು ಅಕ್ರಮದ ಮೂಲಕ ನೇಮಕಾತಿಗಳನ್ನು ಪಡೆದುಕೊಂಡಿದ್ದು ತನಿಖೆ ಪೂರ್ವದಲ್ಲಿ ಇವರನ್ನು ಕೆಲಸದಿಂದ ಬಿಡುಗಡೆ ಮಾಡಿ.’ ಎಂದೂ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸಾರ್ವಜನಿಕ ಹಣವನ್ನು ಪೋಲು ಮಾಡಿ ಸ್ವಜನಪಕ್ಷಪಾತಕ್ಕೆ ಕಾರಣವಾಗಿರುವ ಅಕ್ರಮ ನೇಮಕಾತಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆಯುವುದರ ಜೊತೆಗೆ ಶಾಮೀಲಾಗಿರುವ ಅಧಿಕಾರಿಗಳನ್ನೂ ಅಮಾನತುಗೊಳಿಸಬೇಕು. ಹಾಗೆಯೇ ವಿಧಾನಪರಿಷತ್‌ನ ನೇಮಕಾತಿ ಹಾಗೂ ಖರ್ಚು ವೆಚ್ಚಗಳನ್ನು ಪಾರದರ್ಶಕತೆಯಿಂದ ಇಡಬೇಕು. ಈ ನಿಟ್ಟಿನಲ್ಲಿ ನಿಯಮಾವಳಿಗಳ ಬದಲಾವಣೆ/ತಿದ್ದುಪಡಿ ಆಗಬೇಕು. ಹೀಗಾಗಿ ಈ ಪ್ರಕರಣವನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ವಿಶೇಷ ಮಂಡಳಿ ಮುಂದೆ ಮಂಡಿಸಿ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು,’ ಎಂದು ಒತ್ತಾಯಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್ಸ್‌, ಡಿಟಿಪಿ ಆಪರೇಟರ್ಸ್‌ಗಳನ್ನು ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿರುವ ಪರಿಷತ್‌ ಸಚಿವಾಲಯವು ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿಯಾಗಿ ಕಳೆದ ಎರಡೂವರೆ ವರ್ಷಗಳಿಂದ 48,42,564 ರು.ಗಳನ್ನು ಪಾವತಿಸಲಾಗಿತ್ತು. ಈ ಸಂಬಂಧ ತಕರಾರು ತೆಗೆದಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು 2021ರ ಏಪ್ರಿಲ್‌ 9ರಂದು ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.

ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಸತೀಶ್‌ ಸಿ, ಶೃತಿ ಎಸ್‌, ಪ್ರತೀಕ್‌ ಶೆಟ್ಟಿ, ಸುಶಾಂತ್‌ ನಾಯಕ್‌, ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಸುಹಾಸ್‌ ಎಂ, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಯೋಗೇಶ್ವರಿ ಬಿ, ಪುಷ್ಪಾ ಎಚ್‌ ಎಂ, ಯೋಗಿತಾ ಪಿ ಆರ್‌, ಜ್ಯೂನಿಯರ್‌ ಆಪರೇಟರ್‌ ಕನ್ಸಲ್ಟೆಂಟ್‌ ಹುದ್ದೆಗೆ ಎಂ ನಿಖಿಲ್‌ ಅವರನ್ನು ಕಿಯೋನಿಕ್ಸ್‌ ಮೂಲಕ ನೇಮಿಸಲಾಗಿತ್ತು.

‘ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿರುವುದು ನಿಯಮಬಾಹಿರವಾಗಿರುತ್ತದೆ. ಆದ್ದರಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ನಿಗದಿಗೊಳಿಸಬೇಕು,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪರಿಷತ್‌ನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.

ಹೆಚ್ಚುವರಿ ಪಾವತಿಸಿದ್ದೆಷ್ಟು?

ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಕನಿಷ್ಠ ವೇತನ ಕಾಯ್ದೆಯಡಿ ಆರ್ಥಿಕ ಇಲಾಖೆಯು 22,800 ರು. ನಿಗದಿಪಡಿಸಿದೆ. ಆದರೆ ವಿಧಾನಪರಿಷತ್ತಿನ ಸಚಿವಾಲಯವು ನೀಡುತ್ತಿರುವುದು 42,065 ರು. . ಅಂದರೆ ಹೆಚ್ಚುವರಿಯಾಗಿ 19,265 ರು. ಪ್ರತಿ ತಿಂಗಳೂ ಪಾವತಿಯಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಹೆಚ್ಚುವರಿಯಾಗಿ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 5,58,685 ರು. ಪಾವತಿಯಾಗಿದೆ. ಅದರಂತೆ ಇಬ್ಬರು ಜ್ಯೂನಿಯರ್‌ ಪ್ರೋಗ್ರಾಮರ್‌ಗಳಿಗೆ ಒಟ್ಟು 11,17,370 ರು. ಹೆಚ್ಚುವರಿಯಾಗಿ ಪಾವತಿಯಾದಂತಾಗಿದೆ.

ಅದೇ ರೀತಿ ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು. ಕನಿಷ್ಠ ವೇತನ ನಿಗದಿಪಡಿಸಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 38,266 ರು. ನೀಡುತ್ತಿದೆ. ಹೆಚ್ಚುವರಿ 18,266 ರು. ನಂತೆ ಹೆಚ್ಚುವರಿಯಾಗಿ 5,29,714 ರು. ಪಾವತಿಸಲಾಗಿದೆ. ಅದರಂತೆ ಮೂವರು ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಒಟ್ಟು 15,89,142 ರು. ಪಾವತಿಸಲಾಗಿದೆ.

ಹಾಗೆಯೇ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗೆ 13,284 ರು. ನೀಡಬೇಕಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 18,414.25 ರು.ಗಳನ್ನು ಹೆಚ್ಚುವರಿ ನೀಡಿ ಒಟ್ಟು 31,699 ರು. ನಂತೆ ಒಬ್ಬರಿಗೆ 5,34, 013 ರು ಪಾವತಿಯಾಗಿದೆ. ನೀಡುತ್ತಿದೆ. ಅದರಂತೆ ನಾಲ್ವರು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಹೆಚ್ಚುವರಿಯಾಗಿ 21,36,052 ರು. ರು. ಪಾವತಿಸಿರುವುದು ಆರ್ಥಿಕ ಇಲಾಖೆ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

‘ವಿಧಾನ ಪರಿಷತ್‌ನ ಲೆಕ್ಕ ಶೀರ್ಷಿಕೆ (2011-02-103-2-01-034)ಯಂತೆ ಕರ್ನಾಟಕ ವಿಧಾನ ಪರಿಷತ್‌ನ ಸಚಿವಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು ವೇತನವನ್ನು 30,350 ರು.ಗಳಿಗೆ ನಿಗದಿಗೊಳಸಲಾಗಿದೆ. ಇದು ಕನಿಷ್ಠ ವೇತನ ಕಾಯ್ದೆ ಮೀರಿದ್ದರಿಂದ ಪರಿಷ್ಕರಿಸಿ 22,000 ರು.ಗಳಿಗೆ ನಿಗದಿಪಡಿಸಿ 2021-22ನೇ ಸಾಲಿನ ಅಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಆದ್ದರಿಂದ ಶೀಘ್ರಲಿಪಿಗಾರರ ವೇತನವನ್ನೂ ಮರು ನಿಗದಿಪಡಿಸಬೇಕು,’ ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ನಿರ್ದೇಶಿಸಿತ್ತು.

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳ ಭರ್ತಿಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶೇ.50ರಷ್ಟನ್ನು ಪದನ್ನೋತಿಯಿಂದ ಶೇ.50ರಷ್ಟು ನೇರ ನೇಮಕಾತಿಯಿಂದ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಎರಡೂ ಇಲ್ಲದ ಪಕ್ಷದಲ್ಲಿ ನಿಯೋಜನೆ ಮೇಲೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನಿಯಮಬಾಹಿರವಾಗಿ ಭರ್ತಿ ಮಾಡಿರುವುದು ಪತ್ರದಿಂದ ಗೊತ್ತಾಗಿದೆ.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 22,800 ರು., ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು., ಮತ್ತು ಕನಿಷ್ಠ ವೇತನ ಕಾಯ್ದೆ ಪ್ರಕಾರ ಡಾಡಾ ಎಂಟ್ರಿ ಆಪರೇಟರ್‌, ಸ್ವಚ್ಛತಾ ಕಾರ್ಮಿಕರಾದ ಸಫಾಯಿ ಕರ್ಮಚಾರಿಗಳಿಗೆ ಆಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಕ್ರಮ ವಹಿಸಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿರುವುದು ತಿಳಿದು ಬಂದಿದೆ.

ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದು 1 ತಿಂಗಳಾದರೂ ಪರಿಷತ್‌ ಸಚಿವಾಲಯವು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ ಈ ಕುರಿತು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಈವರೆವಿಗೂ ಮೌನ ಮುರಿದಿಲ್ಲ ಮತ್ತು ವೇತನದಲ್ಲಿ ಪಾವತಿಯಾಗಿರುವ ಹೆಚ್ಚುವರಿ ಮೊತ್ತವನ್ನು ವಸೂಲು ಮಾಡಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts