ಸಿಎಂ ಕಾರ್ಯದರ್ಶಿ ಕಚೇರಿ ದುರ್ಬಳಕೆ;ವಿಧಾನಸಭೆ ಸಚಿವಾಲಯ ಅಧಿಕಾರಿಯ ಅನಧಿಕೃತ ಕಾರ್ಯನಿರ್ವಹಣೆ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿ ಹಿರಿಯ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಸಿ ಹೊಸೂರ್‌ ಅವರ ಕಚೇರಿಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧಿಕಾರಿಯೂ ಸೇರಿದಂತೆ ಹಲವರು ‘ಅನಧಿಕೃತ’ವಾಗಿ ಕಾರ್ಯನಿರ್ವಹಿಸುತ್ತಿರುವುದು ಇದೀಗ ಬಹಿರಂಗವಾಗಿದೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಗೆ ಅನ್ಯ ಕರ್ತವ್ಯ ಅಥವಾ ನಿಯೋಜನೆ ಮೇಲೆ ತೆರಳದಿದ್ದರೂ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ ಪಿ ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಯಾಗಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಹಲವು ಟಿಪ್ಪಣಿಗಳನ್ನು ಹೊರಡಿಸಿದ್ದಾರೆ.

ಅದೇ ಕಚೇರಿಯಲ್ಲಿ ಅಧಿಕೃತವಾಗಿ ಆಪ್ತ ಕಾರ್ಯದರ್ಶಿ ಕಾರ್ಯನಿರ್ವಹಿಸುತ್ತಿದ್ದರೂ ಮುಖ್ಯಮಂತ್ರಿಗಳ ಕಾರ್ಯದರ್ಶಿಗೆ ಅಧಿಕೃತ ಆಪ್ತ ಕಾರ್ಯದರ್ಶಿ ಎಂದು ಹಲವು ಟಿಪ್ಪಣಿಗಳಿಗೆ ಪ್ರಶಾಂತ್‌ಕುಮಾರ್‌ ಅವರು ಸಹಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಆರ್‌ಟಿಐ ಅಡಿಯಲ್ಲಿ ದಾಖಲೆ ಮತ್ತು ಪ್ರಶಾಂತ್‌ಕುಮಾರ್‌ ಅವರು ಆಪ್ತ ಕಾರ್ಯದರ್ಶಿ ಎಂದು ಸಹಿ ಮಾಡಿ ಹೊರಡಿಸಿರುವ ಟಿಪ್ಪಣಿ ಪ್ರತಿಗಳೂ ಲಭ್ಯವಾಗಿದೆ.

ಕರ್ನಾಟಕ ವಿಧಾನಸಭೆ ಸಚಿವಾಲಯದ ಶಾಖಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ ಪಿ ಪ್ರಶಾಂತ್‌ಕುಮಾರ್‌ ಅವರಿಗೆ 2020ರ ಮೇ 29ರಂದು ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ದೊರೆತಿತ್ತು. ಇದಾದ ನಂತರ ಎಂ ಪಿ ಪ್ರಶಾಂತ್‌ಕುಮಾರ್‌ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಪ್ರಶಾಂತ್‌ಕುಮಾರ್‌ ಅವರು ಅನ್ಯ ಕರ್ತವ್ಯ ಮತ್ತು ನಿಯೋಜನೆ ಮೇಲೆ ತೆರಳಿರುವುದಿಲ್ಲಎಂದು ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಬಿ ಎಂ ಶಂಭು ಅವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದಾರೆ.

ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್‌ ಎಸ್‌ ಹೊಸೂರ್‌ ಅವರ ಕಚೇರಿಗೆ ಅನ್ಯ ಕರ್ತವ್ಯ/ ನಿಯೋಜನೆ ಮೇಲೆ ತೆರಳದಿದ್ದರೂ ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಿರುವುದು ಮತ್ತು ಅವರ ಆಪ್ತ ಕಾರ್ಯದರ್ಶಿ ಎಂದು ಸಹಿ ಮಾಡಿ ಟಿಪ್ಪಣಿಗಳನ್ನು ಹೊರಡಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಮುಖ್ಯಮಂತ್ರಿ ಕಾರ್ಯದರ್ಶಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಜರಾತಿ ದೃಢೀಕರಣ, ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಸರ್ಕಾರಿ ವಸತಿಗೃಹಗಳಲ್ಲಿ ಕೊಠಡಿ ಕಾಯ್ದಿರಿಸುವುದು ಮತ್ತು ಅನ್ಯ ಕರ್ತವ್ಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರಕ್ಕೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿಯೇ ಸಹಿ ಮಾಡಿ ದೃಢೀಕರಿಸಿದ್ದಾರೆ. ಅಲ್ಲದೆ ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯ ರವಾನೆ ಪುಸ್ತಕದಲ್ಲಿ ಒಎಸ್‌ಡಿ ಎಂದೇ ಸಹಿ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಗಿರೀಶ್‌ ಸಿ ಹೊಸೂರ್‌ ಅವರಿಗೆ ಲೋಕೋಪಯೋಗಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೃಷಿ, ಸಾರಿಗೆ, ಅಲ್ಪಸಂಖ್ಯಾತರ ಕಲ್ಯಾಣ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಧಾನಸಭೆ, ವಿಧಾನಪರಿಷ್‌ ಸದಸ್ಯರು, ಸಂಸತ್‌ ಸದಸ್ಯರೊಂದಿಗೆ ಸಮನ್ವಯ, ಇಂಧನ ಇಲಾಖೆಯ ಸೇವೆಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳ ಕಚೇರಿ, ಅಧಿಕಾರಿ, ನೌಕರರ ವರ್ಗಾವಣೆ ವಿಷಯಗಳು ಸೇರಿದಂತೆ ಹಲವು ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ.

the fil favicon

SUPPORT THE FILE

Latest News

Related Posts