ಲೈಂಗಿಕ ಕಿರುಕುಳ ಆರೋಪ; ಡಿಐಜಿ ವಿರುದ್ಧ ಲಾಜಿಸ್ಟಿಕ್ಸ್‌ ಕಂಪನಿ ಮಹಿಳಾ ಉದ್ಯೋಗಿ ದೂರು

ಬೆಂಗಳೂರು: ವಿಧಾನ ಪರಿಷತ್‌ನ ಮಾಜಿ ಸದಸ್ಯ ಹಾಗೂ ಬಿಜೆಪಿ ಪ್ರಭಾವಿ ಮುಖಂಡರೊಬ್ಬರಿಗೆ ಸೇರಿರುವ ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗುರುತರ ಆರೋಪಕ್ಕೆ ಸಿಐಡಿ ಡಿಐಜಿ ದಿಲೀಪ್‌ ಎಂಬುವರು ಗುರಿಯಾಗಿದ್ದಾರೆ. ಈ ಸಂಬಂಧ ಗೃಹ ಇಲಾಖೆಗೆ ಮಹಿಳಾ ಉದ್ಯೋಗಿ ಲಿಖಿತ ದೂರನ್ನೂ ಸಲ್ಲಿಸಿದ್ದಾರೆ.

ಬಡ ಕುಟುಂಬಗಳಿಗೆ ನೆರವು ನೀಡುವ ಸರ್ಕಾರೇತರ ಸಂಸ್ಥೆಯಲ್ಲೂ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಗೃಹ ಇಲಾಖೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ದೂರು ಸಲ್ಲಿಕೆಯಾಗಿದೆ ಎಂಬುದನ್ನು ‘ದಿ ಫೈಲ್‌’ ಖಚಿತಪಡಿಸಿಕೊಂಡಿದೆ. ಗೌಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೂರಿನ ಪ್ರತಿಯನ್ನು ಇಲ್ಲಿ ಪ್ರಕಟಿಸುತ್ತಿಲ್ಲ.

ಕೇಂದ್ರ ಸಚಿವರೊಬ್ಬರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ ಸಿಐಡಿ ಡಿಐಜಿ ದಿಲೀಪ್‌ ಅವರು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಿಂದ ಗೊತ್ತಾಗಿದೆ.

ದೂರಿನಲ್ಲೇನಿದೆ?

ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ ಸಮೂಹ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ, ವಿವಿಧ ಸಂಸ್ಥೆಗಳ ಐ ಟಿ ವಿಭಾಗಗಳನ್ನು ಮುನ್ನೆಡೆಸುತ್ತಿರುವ ಮತ್ತೊಬ್ಬ ಸ್ನೇಹಿತೆಯೊಂದಿಗೆ ಕಳೆದ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ದಿಲೀಪ್‌ ಅವರನ್ನು ಭೇಟಿ ಆಗಿದ್ದರು. ಈ ವೇಳೆ ಮೊಬೈಲ್‌ ನಂಬರ್‌ನ್ನು ಪಡೆದಿದ್ದ ದಿಲೀಪ್‌ ಅವರು ಮಹಿಳಾ ನೌಕರರೊಬ್ಬರಿಗೆ ರಾತ್ರಿ 11 ರ ಹೊತ್ತಿನಲ್ಲಿ ಕರೆ ಮಾಡಿ ತಮ್ಮನ್ನು ಅವರ ನಿವಾಸದಲ್ಲಿ ಸಂಪರ್ಕಿಸಲು ಹೇಳಿದ್ದರು ಎಂಬ ಸಂಗತಿ ದೂರಿನಿಂದ ತಿಳಿದು ಬಂದಿದೆ.

ದಿಲೀಪ್‌ ಅವರ ಸೂಚನೆಯಂತೆ ಅವರ ನಿವಾಸದಲ್ಲಿ ಮಹಿಳಾ ಉದ್ಯೋಗಿ ಅವರನ್ನು ಭೇಟಿಯಾಗಿದ್ದರು. ಆದರೆ ಮನೆಯಲ್ಲಿ ಅವರ ಕುಟುಂಬ ಸದಸ್ಯರು ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಾವೊಬ್ಬರೇ ಮನೆಯಲ್ಲಿ ಇರುವುದು ಎಂದು ತಿಳಿಸಿದ್ದರು. ಜ್ಯೂಸ್‌ ಕುಡಿಯಲು ಹೇಳಿದ್ದ ದಿಲೀಪ್‌ ಅವರು ತಮ್ಮ ಸೌಂದರ್ಯದ ಬಗ್ಗೆ ವರ್ಣಿಸಿದ್ದರು. ಅಲ್ಲದೆ ಮಾತನಾಡುತ್ತಲೇ ತಮ್ಮ ಸನಿಹಕ್ಕೆ ಬಂದಿದ್ದರಲ್ಲದೆ ತಮ್ಮನ್ನು ತುಂಬಾ ಇಷ್ಟಪಡುತ್ತಿದ್ದೇನೆ ಎಂದು ಹೇಳಿದ್ದರು. ಹಾಗೆಯೇ ಸಂಬಂಧವಿರಿಸಿಕೊಳ್ಳಲು ಇಚ್ಛಿಸಿರುವುದಾಗಿಯೂ ತಿಳಿಸಿದ್ದರು. ಈಗಾಗಲೇ ತಮಗೆ ಮದುವೆಯಾಗಿದೆ ಎಂದು ಹೇಳಿ ಅ ಸ್ಥಳದಿಂದ ಹೊರಟಿದ್ದರು ಎಂಬ ಸಂಗತಿ ದೂರಿನಲ್ಲಿ ವಿವರಿಸಲಾಗಿದೆ.

ಅದೇ ದಿನ ತಮಗೆ ಒಟ್ಟು 12 ಅಶ್ಲೀಲ ಸಂದೇಶಗಳನ್ನು ಮೊಬೈಲ್‌ಗೆ ಕಳಿಸಿದ್ದರಲ್ಲದೆ ಅವರ ಮಾತಿಗೆ ಒಪ್ಪದಿದ್ದರೆ ತಮ್ಮ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂಬ ಬೆದರಿಕೆಯನ್ನೂ ಒಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ನಂತರ ಹುಬ್ಬಳ್ಳಿಯನ್ನು ತೊರೆದಿದ್ದ ಮಹಿಳಾ ಉದ್ಯೋಗಿ ಈಗ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸಂಗತಿ ದೂರಿನಿಂದ ಗೊತ್ತಾಗಿದೆ.

ಬೆಂಗಳೂರಿಗೆ ಬಂದ ನಂತರ ದಿಲೀಪ್‌ ಅವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿರುವ ಬಗ್ಗೆಯೂ ದೂರಿನಲ್ಲಿ ವಿವರಿಸಿರುವ ಮಹಿಳಾ ಉದ್ಯೋಗಿ, ಧಾರವಾಡದಲ್ಲಿ ಮಹಿಳಾ ಉಪ ಪೊಲೀಸ್‌ ಆಯುಕ್ತರೊಂದಿಗೂ ಅದೇ ವರ್ತನೆ ತೋರಿದ್ದರು ಎಂದು ತಿಳಿಸಿದ್ದಾರೆ. ಆ ಮಹಿಳಾ ಉಪ ಪೊಲೀಸ್‌ ಆಯುಕ್ತರನ್ನು ತಮ್ಮ ಜೊತೆ ಮಲಗಲು ಬಲವಂತ ಮಾಡಿದ್ದರು. ಆದರೆ ಆ ಮಹಿಳಾ ಉಪ ಪೊಲೀಸ್‌ ಆಯುಕ್ತರು ಇದನ್ನು ನಿರಾಕರಿಸಿದ್ದರು. ಹೀಗಾಗಿ ದಿಲೀಪ್‌ ಅವರು ಅವರ ಬಗ್ಗೆ ಸಲ್ಲದ ಸುದ್ದಿಯನ್ನು ಹರಡಿದ್ದರು. ಅಲ್ಲದೆ ಆ ಮಹಿಳಾ ಉಪ ಪೊಲೀಸ್‌ ಆಯುಕ್ತರು ಮತ್ತೊಬ್ಬ ಎಸಿಪಿಯೊಂದಿಗೆ ಮಲಗುತ್ತಾರೆ ಎಂದು ಪ್ರಚುರಪಡಿಸಿದ್ದರು ಎಂಬ ಸಂಗತಿ ದೂರಿನಿಂದ ತಿಳಿದು ಬಂದಿದೆ.

ಇನ್ನು, ಐ ಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಿತೆಯೊಂದಿಗೂ ಇದೇ ವರ್ತನೆಯನ್ನು ತೋರಿದ್ದಾರೆ ಎಂಬ ಸಂಗತಿಯೂ ದೂರಿನಲ್ಲಿ ಪ್ರಸ್ತಾಪವಾಗಿದೆ. ಅವರಿಗೂ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆಯಲ್ಲದೆ ಇದಕ್ಕೆ ಸಹಕರಿಸದಿದ್ದಕ್ಕೆ ಇಲಾಖೆಯಿಂದ ಬರಬೇಕಿದ್ದ ಬಿಲ್‌ಗಳನ್ನು ಅನುಮೋದಿಸಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಹಿಳಾ ಉದ್ಯೋಗಿ ಇಷ್ಟಕ್ಕೇ ಸುಮ್ಮನಾಗಿಲ್ಲ. ಐಪಿಎಸ್‌ ಅಧಿಕಾರಿ ದಿಲೀಪ್‌ ಬಗ್ಗೆ ಇಲಾಖೆಯ ಹಿರಿಯ ನಾಲ್ವರು ಅಧಿಕಾರಿಗಳನ್ನು ವಿಚಾರಿಸಿ ಹಲವು ಸಂಗತಿಗಳನ್ನು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಮಂಗಳೂರಿನಲ್ಲಿ ಎಸ್ಪಿಯಾಗಿದ್ದ ವೇಳೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪವನ್ನು ದೂರಿನಲ್ಲಿ ತಿಳಿಸಿರುವ ಅವರು ಕಾರವಾರದಲ್ಲಿ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ದೂರಿನಲ್ಲಿ ದೂರು ನೀಡಿರುವ ಮಹಿಳಾ ಉದ್ಯೋಗಿಯು ತಿಳಿಸಿದ್ದಾರೆ.

the fil favicon

SUPPORT THE FILE

Latest News

Related Posts