ಕೋವಿಡ್‌ ಭ್ರಷ್ಟಾಚಾರ; ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ದೇಶನ

ಬೆಂಗಳೂರು; ಸ್ಯಾನಿಟೈಸರ್‌, ಪಿಪಿಇ ಕಿಟ್, ವೆಂಟಿಲೇಟರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆ ಮತ್ತು ಔಷಧ ಸಾಮಗ್ರಿಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪಗಳ ಕುರಿತು ಸಮಗ್ರ ವರದಿ ನೀಡಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ನಿರ್ದೇಶಿಸಿದ್ದಾರೆ.


ವೈದ್ಯಕೀಯ ಸಲಕರಣೆ ಮತ್ತು ಔಷಧ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಯಾವುದೇ ಮಾಹಿತಿ ನೀಡದ ಕಾರಣ, ಸಮಗ್ರ ವರದಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರಿಗೆ ಸಮಿತಿ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.


‘ಕರೊನಾದಂತಹ ಸಂಕಷ್ಟ ಸಂದರ್ಭದಲ್ಲಿ ನಡೆದಿರುವ ಗಂಭೀರ, ಕ್ರಿಮಿನಲ್‌ ಸ್ವರೂಪದ ಆರೋಪಗಳು ಬಂದಿದ್ದು, ಈ ಆಪಾದನೆಗಳ ಕುರಿತು ಸಮಗ್ರ ಮಾಹಿತಿಯೊಂದಿಗೆ ವರದಿ ಮಂಡಿಸಿ,’ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.


ಕರ್ನಾಟಕ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ವೇರ್‌ ಹೌಸಿಂಗ್‌ ಸೊಸೈಟಿ ಮೂಲಕ ವೈದ್ಯಕೀಯ ಸಲಕರಣೆಗಳಲ್ಲಿ ಅಕ್ರಮಗಳಾಗಿವೆ ಎಂದು ‘ದಿ ಫೈಲ್‌’ ಪ್ರಕಟಿಸಿದ್ದ ಸರಣಿ ವರದಿಗಳನ್ನಾಧರಿಸಿ ಕರ್ನಾಟಕ ರಾಷ್ಟ್ರಸಮಿತಿ ದೂರು ಸಲ್ಲಿಸಿತ್ತು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಮೇ 26ರಂದು ನಡೆದಿದ್ದ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಂಡಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಸದಸ್ಯ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ, ಕೆ ಆರ್‌ ರಮೇಶ್‌ಕುಮಾರ್‌ ಆದಿಯಾಗಿ ಬಹುತೇಕ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿದ್ದರು.


ಇದರ ನಡುವೆಯೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕರ್ನಾಟಕ ರಾಷ್ಟ್ರ ಸಮಿತಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿತ್ತು. ಇದನ್ನಾಧರಿಸಿ 2020ರ ಜೂನ್‌ 9ರಂದು ನಡೆದ ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಸಮಗ್ರ ವರದಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಯಿತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕರೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.


ಹಗರಣಗಳ ವಿವರ


ಕರ್ನಾಟಕ ಡ್ರಗ್ ಅಂಡ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಪಿಪಿಇ ಕಿಟ್‌ ಖರೀದಿ ಸಂಬಂಧ ಒಟ್ಟು ನೀಡಿದ್ದ 9 ಖರೀದಿ ಆದೇಶಗಳ ಪೈಕಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಪ್ರೈವೈಟ್‌ ಲಿ, ಗೆ 2 ಆದೇಶಗಳನ್ನು ನೀಡಲಾಗಿತ್ತು. 2020ರ ಮಾರ್ಚ್‌ 9ರಂದು ನೀಡಿದ್ದ ಖರೀದಿ ಆದೇಶದಲ್ಲಿ ಪ್ರತಿ ಪಿಪಿಇ ಕಿಟ್‌ಗೆ 334.40 ರು. ಇದ್ದರೆ 2020ರ ಮಾರ್ಚ್‌ 14ರಂದು ನೀಡಿದ್ದ 725.00 ರು.ದರದಲ್ಲಿ ಖರೀದಿ ಆದೇಶ ನೀಡಲಾಗಿತ್ತು. ಅಲ್ಲದೆ ಈ ಸಂಸ್ಥೆಯಿಂದ ಖರೀದಿಸಿದ್ದ ಬಹುತೇಕ ಪಿಪಿಇ ಕಿಟ್‌ಗಳು ಕಳಪೆ ದರ್ಜೆಯಿಂದ ಕೂಡಿದ್ದವು.


ಅದೇ ರೀತಿ ವೈದ್ಯಕೀಯ ಸಲಕರಣೆಗಳ ಉತ್ಪಾದಕರಲ್ಲದ ಎಟೆಕ್‌ ಟ್ರಾನ್‌ ಮತ್ತು ರುದ್ರಾಂಶ್‌ ವಿಗ್‌ ಆಗ್ರೋ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ಎಂಬ ಎರಡು ಕಂಪನಿಗಳಿಗೂ ಪಿಪಿಇ ಕಿಟ್‌ ಖರೀದಿ ಆದೇಶ ನೀಡಲಾಗಿತ್ತು.
ಹಲವು ಕೋಟಿ ರು.ಗಳ ದರದಲ್ಲಿ ಐ ವಿ ಫ್ಲೂಯಿಡ್‌ಗಳನ್ನು ಗುಜರಾತ್‌ ಮೂಲದ ಆಕ್ಯುಲೈಫ್‌ ಹೆಲ್ತ್‌ ಕೇರ್‌ ಪ್ರೈ ಲಿಮಿಟೆಡ್‌ ಕಂಪನಿಗೆ ಖರೀದಿ ಆದೇಶ ನೀಡಲಾಗಿತ್ತು. ಆದರೆ ಈ ಕಂಪನಿಯನ್ನು ಗುಜರಾತ್‌ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೂ ಇದೇ ಕಂಪನಿಯಿಂದ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.


ಇನ್ನು ಬಳಸಿ ಬಿಸಾಡಿದ್ದ ವೆಂಟಿಲೇಟರ್‌ಗಳನ್ನು 3.88 ಕೋಟಿ ರು.ದರದಲ್ಲಿ ಖರೀದಿಸಿದ್ದ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿಯು ಆ ನಂತರ ಈ ವೆಂಟಿಲೇಟರ್‌ ಬಳಕೆಗೆ ಯೋಗ್ಯವಲ್ಲ ಎಂದು ಹಿಂದಿರುಗಿಸಿತ್ತು. ಉಪಕರಣಗಳನ್ನು ಸರಬರಾಜು ಮಾಡಿದ್ದ ದೆಹಲಿ ಮೂಲದ ಆರ್‌ ಕೆ ಮೆಡಿಕಲ್‌ ಅಸೋಸಿಯೇಷನ್‌ ಗೆ ನೋಟೀಸ್‌ ಕೂಡ ಜಾರಿ ಮಾಡಿತ್ತು.
ಈ ವೆಂಟಿಲೇಟರ್‌ಗಳು 2007ರ ಜನವರಿ 11ರಂದು ತಯಾರಿಸಲಾಗಿತ್ತಲ್ಲದೆ, 46,583 ಗಂಟೆಗಳ ಕಾಲ ಬಳಕೆ ಆಗಿದ್ದವು. ಹಾಗೆಯೇ ವೆಂಟಿಲೇಟರ್‌ಗಳ ಬಗ್ಗೆ ಯಾವ ಮಾಹಿತಿಯನ್ನೂ ನೀಡಿರಲಿಲ್ಲ.


ಸ್ಯಾನಿಟೈಸರ್‌ ಖರೀದಿಯಲ್ಲಿಯೂ ಅಕ್ರಮಗಳಾಗಿವೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು. ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ಗೆ 47,000 ಯುನಿಟ್‌ಗಳ 500 ಎಂ ಎಲ್‌ಗಳಂತೆ ಪ್ರತಿ ಸ್ಯಾನಿಟೈಸರ್‌ ಬಾಟಲಿಗೆ 97.44 ರು.ಗಳಂತೆ ಖರೀದಿಸಿ ಆ ನಂತರ ಇದೇ ಕಂಪನಿಗೆ 250 ರು.ನಂತೆ ಖರೀದಿ ಆದೇಶ ನೀಡಿತ್ತು.


ಸಿರಿಂಜ್‌ ಪಂಪ್‌, ಟೇಬಲ್‌ ಟಾಪ್‌ ಪಲ್ಸ್‌ ಆಕ್ಸಿಮೀಟರ್‌, ಇಸಿಜಿ ಯಂತ್ರ, ಮಲ್ಟಿಪ್ಯಾರಾ ಪೇಷಂಟ್‌ ಮಾನಿಟರ್‌, ಬೈಪಾಪ್‌ ಯಂತ್ರ, ಎಲೆಕ್ಟ್ರಿಕ್‌ ಸೆಕ್ಷನ್‌ ಆಪರೇಟರ್‌, ಇನ್ಫೂಷನ್‌ ಪಂಪ್‌ ಸೇರಿದಂತೆ ಇನ್ನಿತರೆ ಉಪಕರಣಗಳನ್ನು ಮದ್ರಾಸ್‌ ಸರ್ಜಿಕಲ್ಸ್‌, ಆಕಾಸ್‌ ಕಂಪನಿಗಳಿಂದ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಖರೀದಿಸಿತ್ತು.

the fil favicon

SUPPORT THE FILE

Latest News

Related Posts