500 ಕೋಟಿ ಮೌಲ್ಯದ 24 ಎಕರೆ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ಪಾಲೆಷ್ಟು?

ಬೆಂಗಳೂರು; ಅಂತರರಾಷ್ಟ್ರೀಯ ಕೃಷಿ ಮಾರಾಟ ಕೇಂದ್ರ ಸ್ಥಾಪನೆಗೆ ದೇವನಹಳ್ಳಿ ತಾಲೂಕಿನ ಪೂಜೇನಹಳ್ಳಿಯಲ್ಲಿ ನೀಡಲಾಗಿದ್ದ ಒಟ್ಟು 77 ಎಕರೆ ಭೂಮಿ ಪೈಕಿ 24 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗಿರುವ ಬಹುದೊಡ್ಡ ಭೂ ಕಬಳಿಕೆ ಪ್ರಕರಣವನ್ನು ‘ದಿ ಫೈಲ್’ ಹೊರಗೆಡವುತ್ತಿದೆ. ಈ ಜಮೀನು ಅಂದಾಜು 500 ಕೋಟಿ ರು. ಬೆಲೆ ಬಾಳಲಿದೆ ಎಂದು ತಿಳಿದು ಬಂದಿದೆ.


ತೋಟಗಾರಿಕೆ ಇಲಾಖೆಯ ಅನುಮೋದನೆ ಇಲ್ಲದೆ ಮತ್ತು ಇಲಾಖೆಯೊಂದಿಗೆ ಸಮಾಲೋಚಿಸದೆಯೇ ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಜಮೀನು ಮಂಜೂರು ಮಾಡಿರುವುದು ಬಹಿರಂಗವಾಗಿದೆ.


ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ 77 ಎಕರೆ ವಿಸ್ತೀರ್ಣ ಪೈಕಿ 53 ಎಕರೆಯಷ್ಟೇ ಇಲಾಖೆ ಬಳಿ ಉಳಿದಿದೆ. ಈ ಪ್ರಕರಣದಲ್ಲಿ ಭೂ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳ ಕೈವಾಡವೂ ಇದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ತೋಟಗಾರಿಕೆ ಹಾಲಿ ಸಚಿವ ನಾರಾಯಣಗೌಡ ಅವರು ಈ ಪ್ರಕರಣದ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.


1972ರಲ್ಲಿದ್ದ ಅಂದಿನ ಸರ್ಕಾರ ಜಮೀನು ನೀಡಿದ್ದರೂ ತೋಟಗಾರಿಕೆ ಇಲಾಖೆ 13 ವರ್ಷಗಳವರೆಗೂ ಆರ್ಟಿಸಿ ಮಾಡಿಸಿಕೊಂಡಿರಲಿಲ್ಲ. ಒಟ್ಟು ವಿಸ್ತೀರ್ಣದಲ್ಲಿ 53 ಎಕರೆ ಹೊರತುಪಡಿಸಿ 24 ಎಕರೆ ವಿಸ್ತೀರ್ಣದ ಜಮೀನು ಯಾರ ವಶದಲ್ಲಿದೆ ಎಂಬ ಬಗ್ಗೆ ತೋಟಗಾರಿಕೆ ಇಲಾಖೆಯ ಬಳಿಯೇ ಮಾಹಿತಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.


ಪೂಜೇನಹಳ್ಳಿ ಸರ್ವೆ ನಂಬರ್21ರಲ್ಲಿ 18.06 ಎಕರೆಯನ್ನು 1947ರ ಅಕ್ಟೋಬರ್23ರಂದು ಕಂದಾಯ ಇಲಾಖೆಯು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿತ್ತು. 1984ರ ಮೇ 26ರಂದು ಬೆಂಗಳೂರು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದವರು 7 ಮಂದಿಗೆ 17 ಎಕರೆಯನ್ನು ಮಂಜೂರು ಮಾಡಲಾಗಿತ್ತು. ಆದರೆ ಇವರ್ಯಾರು ಈ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದಿರಲಿಲ್ಲ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇದೇ ಸರ್ವೆ ನಂಬರ್ನಲ್ಲಿ 17.32 ಎಕರೆ ಜಮೀನನ್ನು 1975ರಿಂದ 2003ರ ಮಧ್ಯೆ 11 ಮಂದಿಗೆ ಮಂಜೂರಾಗಿತ್ತು. ಆದರೆ ತೋಟಗಾರಿಕೆ ಇಲಾಖೆಗೆ ಇದಾವುದು ಗಮನಕ್ಕೆ ಬಂದಿರಲಿಲ್ಲ ಎಂಬ ಸಂಗತಿ ತಿಳಿದು ಬಂದಿದೆ.


ಮೇಲ್ನೋಟಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎನ್ನಬಹುದಾದರೂ ಖಾಸಗಿ ವ್ಯಕ್ತಿಗಳಿಗೆ ಜಮೀನನ್ನು ಮಂಜೂರು ಮಾಡಿದ್ದ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಲೋಪವೂ ಇದರಲ್ಲಿದೆ. ಆದರೂ ಈ ಅಧಿಕಾರಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.


ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇದೇ ಜಮೀನಿಗೆ ಹೊಂದಿಕೊಂಡಿರುವ ಕಾರಣ ಎಕರೆಗೆ 20ರಿಂದ 30 ಕೋಟಿ ರು. ಬೆಲೆ ಇದೆ. ಇಲ್ಲಿನ ಜಮೀನುಗಳು ಇಷ್ಟೊಂದು ಬೆಲೆ ಬಾಳುತ್ತಿದ್ದರೂ ಅಧಿಕಾರಿಗಳು ಮಾತ್ರ ಒಟ್ಟು ಜಮೀನನ್ನು ಸರ್ವೆ ಮಾಡಿಸದೆ ಭಂಡ ನಿರ್ಲಕ್ಷ್ಯ ವಹಿಸಿರುವುದು ದಾಖಲೆಯಿಂದ ಗೊತ್ತಾಗಿದೆ. 


‘ದಿ ಫೈಲ್’ಗೆ ಲಭ್ಯವಿರುವ ದಾಖಲೆಗಳ ಪ್ರಕಾರ 2007-08 ಮತ್ತು 2008-09ರಲ್ಲಿ ಸರ್ವೆ ನಂಬರ್90, 21 ಮತ್ತು 73ರಲ್ಲಿದ್ದ ಜಮೀನು ಸರ್ವೆ ಆಗಿದೆ. ಇದರಲ್ಲಿನ ಒಟ್ಟು 53.28 ಎಕರೆ ಪ್ರದೇಶದಲ್ಲಿ 5 ಎಕರೆ ಜಮೀನನ್ನು 30 ವರ್ಷಗಳ ಕಾಲ ಭೋಗ್ಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ ನೀಡಲಾಗಿದೆ. 3.08 ಎಕರೆ ಜಮೀನನ್ನು ಮೇಲು ರಸ್ತೆ ಮಾಡಲು ನೀಡಿದ್ದರೆ 0.20 ಗುಂಟೆ ಜಮೀನು ರಾಷ್ಟ್ರೀಯ ಹೆದ್ದಾರಿಗೆ ನೀಡಲಾಗಿದೆ. ಇನ್ನುಳಿದ 45.00 ಎಕರೆ ಇಲಾಖೆಯ ಸುಪರ್ದಿಯಲ್ಲಿದೆ. ಈ ಜಾಗದಲ್ಲಿ ಈವರೆವಿಗೂ ಯಾವುದೇ ಚಟುವಟಿಕೆಗಳು ಆರಂಭವಾಗಿಲ್ಲ ಎಂದು ತಿಳಿದು ಬಂದಿದೆ.  


ಸರ್ವೆ ನಂಬರ್90, 21 ಮತ್ತು 73ಕ್ಕೆ ಸಂಬಂಧಿಸಿದಂತೆ 2008ರಲ್ಲಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದವು. 11 ವರ್ಷಗಳಿಂದಲೂ ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. 2017-18ರಲ್ಲಿ ಈ ಪ್ರಕರಣ ಹೈಕೋರ್ಟ್ಮೆಟ್ಟಿಲೇರಿತ್ತು. 2008 ಮೇ 27ರಂದು ಅಂದಿನ ವಿಭಾಗೀಯ ಆಯುಕ್ತರಾಗಿದ್ದ ಜಯರಾಂ ಅವರು ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಿದ್ದರು. ಆದರೆ ಈ ವರದಿ ಏನಾಯಿತು ಎಂಬುದು ಈವರೆಗೂ ಬಹಿರಂಗಗೊಂಡಿಲ್ಲ.

the fil favicon

SUPPORT THE FILE

Latest News

Related Posts