ಪೂಜೇನಹಳ್ಳಿ ಭೂ ಹಗರಣಕ್ಕೆ ಕಾರಣರಾದ ಅಧಿಕಾರಿಗಳು ಬದುಕಿದ್ದಾರಾ ಸತ್ತು ಹೋಗಿದ್ದಾರಾ?

ಬೆಂಗಳೂರು; ಅಂತರರಾಷ್ಟ್ರೀಯ ಕೃಷಿ ಮಾರಾಟ ಕೇಂದ್ರ ಸ್ಥಾಪನೆಗೆ ಪೂಜೇನಹಳ್ಳಿಯಲ್ಲಿ ನೀಡಲಾಗಿದ್ದ ಒಟ್ಟು 77 ಎಕರೆ ಭೂಮಿ ಪೈಕಿ 24 ಎಕರೆ ವಿಸ್ತೀರ್ಣದ  ಸರ್ಕಾರಿ ಜಾಗ  ಖಾಸಗಿ ವ್ಯಕ್ತಿಗಳ ಪಾಲಾಗಿರುವ ಬಹುದೊಡ್ಡ ಭೂ ಕಬಳಿಕೆ ಪ್ರಕರಣ ಇದೀಗ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನೇ ದಂಗುಬಡಿಸಿದೆ.  

 

ಅಂದಾಜು 500 ಕೋಟಿ ರು. ಬೆಲೆ ಬಾಳಲಿರುವ ಜಮೀನನ್ನು ತೋಟಗಾರಿಕೆ ಇಲಾಖೆಯ ಅನುಮೋದನೆ ಇಲ್ಲದೆ ಮತ್ತು ಇಲಾಖೆ ಜತೆ ಸಮಾಲೋಚಿಸದೆಯೇ ಹೇಗೆ ಖಾಸಗಿ ವ್ಯಕ್ತಿಗಳಿಗೆ ಮಂಜೂರಾಗಿದೆ ಎಂದು ಸಮಿತಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತಡಬಡಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಸಭೆಯಲ್ಲಿ ಭಾಗವಹಿಸಿದ್ದ ಕೆ ಆರ್‌ರಮೇಶ್‌ಕುಮಾರ್‌, ಎಚ್‌ಡಿ ರೇವಣ್ಣ ಆದಿಯಾಗಿ ಬಹುತೇಕ ಶಾಸಕರು ‘ಇದೊಂದು ಬಹುದೊಡ್ಡ ಹಗರಣ. ಇಂತಹ ಕೆಲಸಗಳನ್ನು ಮಾಡಲು  ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳು ಕೋಟ್ಯಂತರ ರು.ಗಳಷ್ಟು ಹಣ ನೀಡುತ್ತಿದ್ದಾರೆ. ಎಲ್ಲವೂ ಈ ಸಮಿತಿ ಮುಂದೆ ಬರಬೇಕು. ಒಂದು ತಿಂಗಳು ಸಮಯ ತೆಗೆದುಕೊಂಡರೂ ಪರವಾಗಿಲ್ಲ. ಈ ಪ್ರಕರಣದ ಹಿಂದಿರುವ ಎಲ್ಲಾ ಸತ್ಯಗಳನ್ನು ಹೊರತೆಗೆಯಬೇಕು. ಇದರಲ್ಲಿ ಭೂ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವರ ಬಣ್ಣ ಬಯಲು ಮಾಡೋಣ,’ ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ಶಾಸಕರೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

 

‘1984-85ರಲ್ಲಿ ಯಾರು ವಿಶೇಷ ಜಿಲ್ಲಾಧಿಕಾರಿಗಳಾಗಿದ್ದರು. ಅವರು ಬದುಕಿದ್ದಾರಾ ಅಥವಾ ಸತ್ತು ಹೋಗಿದ್ದಾರಾ ಎಂಬುದನ್ನು ಪರಿಶೀಲಿಸಿ. ಅವರನೇನಾದರೂ ಬದುಕಿದ್ದರೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಿ ಜೈಲಿಗೆ ಕಳಿಸುವಂತಹ ಕೆಲಸವನ್ನು ಮಾಡಿ,’ ಎಂದು ಕೆ ಆರ್‌ ರಮೇಶ್‌ ಕುಮಾರ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕರೊಬ್ಬರು ತಿಳಿಸಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಒಂದು ವಾರದ ಕಾಲಾವಕಾಶ ಪಡೆದಿದ್ದಾರೆ. ಒಂದು ವಾರದ ನಂತರ ಯಾವುದೇ ಮಾಹಿತಿ ಕೊರತೆ ಆಗದ ಹಾಗೆ ಉತ್ತರವನ್ನು ನೀಡಬೇಕು ಎಂದು ಸಮಿತಿ ಅಧ್ಯಕ್ಷ ಎಚ್‌ಕೆ ಪಾಟೀಲ್‌ಅವರು ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಮತ್ತೊಬ್ಬ ಸದಸ್ಯ ಶಾಸಕ ರವಿಸುಬ್ರಹ್ಮಣ್ಯ ಕೂಡ ಕಾರ್ಯದರ್ಶಿಗಳನ್ನು ತರಾಟೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ‘ಸರ್ವೆ ಆಗಿದ್ದರೆ ಆ ಜಾಗದಲ್ಲಿ ಇನ್ಸಿಟಿಟ್ಯೂಷನ್‌ಗಳನ್ನೇಕೆ ಆರಂಭಿಸಲಿಲ್ಲ. ಇದಕ್ಕೆ ಸಂಬಂಧಪಟ್ಟ ಕಂದಾಯ ಇಲಾಖೆಯವರು ಏಕೆ ಸರ್ವೆ ಮಾಡಿಕೊಡಲಿಲ್ಲ. ಇದರ ಹಿಂದಿನ ಉದ್ದೇಶವೇನು, ಯಾವ್ಯಾವ ಅಧಿಕಾರಿಗಳು ಯಾವ ಕಾರಣದಿಂದ ಸರ್ವೆ ಮಾಡಲಿಲ್ಲ ಎಂಬ ಮಾಹಿತಿಯನ್ನು ಒದಗಿಸಿ’ ಎಂದು ಕಾರ್ಯದರ್ಶಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.

ತೋಟಗಾರಿಕೆ ಇಲಾಖೆಯ ಅನುಮೋದನೆ ಇಲ್ಲದೆ ಮತ್ತು ಇಲಾಖೆಯೊಂದಿಗೆ ಸಮಾಲೋಚಿಸದೆಯೇ ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಜಮೀನು ಮಂಜೂರು ಮಾಡಿರುವುದು ಬಹಿರಂಗವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ 77 ಎಕರೆ ವಿಸ್ತೀರ್ಣ ಪೈಕಿ 53 ಎಕರೆಯಷ್ಟೇ ಇಲಾಖೆ ಬಳಿ ಉಳಿದಿದೆ ಎಂದು ‘ದಿ ಫೈಲ್‌’ ವರದಿ ಮಾಡಿತ್ತು.

 

ಪ್ರಕರಣದ ಹಿನ್ನೆಲೆ

 

1972ರಲ್ಲಿದ್ದ ಅಂದಿನ ಸರ್ಕಾರ ಜಮೀನು ನೀಡಿದ್ದರೂ  ತೋಟಗಾರಿಕೆ ಇಲಾಖೆ 13 ವರ್ಷಗಳವರೆಗೂ ಆರ್‌ಟಿಸಿ ಮಾಡಿಸಿಕೊಂಡಿರಲಿಲ್ಲ. ಒಟ್ಟು ವಿಸ್ತೀರ್ಣದಲ್ಲಿ 53 ಎಕರೆ ಹೊರತುಪಡಿಸಿ 24 ಎಕರೆ ವಿಸ್ತೀರ್ಣದ ಜಮೀನು ಯಾರ ವಶದಲ್ಲಿದೆ ಎಂಬ ಬಗ್ಗೆ ತೋಟಗಾರಿಕೆ ಇಲಾಖೆಯ ಬಳಿಯೇ ಮಾಹಿತಿ ಇಲ್ಲ.

 

ಪೂಜೇನಹಳ್ಳಿ ಸರ್ವೆ ನಂಬರ್‌21ರಲ್ಲಿ 18.06 ಎಕರೆಯನ್ನು 1947ರ ಅಕ್ಟೋಬರ್‌23ರಂದು ಕಂದಾಯ ಇಲಾಖೆಯು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿತ್ತು. 1984ರ ಮೇ 26ರಂದು ಬೆಂಗಳೂರು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದವರು 7 ಮಂದಿಗೆ 17 ಎಕರೆಯನ್ನು ಮಂಜೂರು ಮಾಡಲಾಗಿತ್ತು. ಆದರೆ ಇವರ್ಯಾರು ಈ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದಿರಲಿಲ್ಲ. ಇದೇ ಸರ್ವೆ ನಂಬರ್‌ನಲ್ಲಿ 17.32 ಎಕರೆ ಜಮೀನನ್ನು 1975ರಿಂದ 2003ರ ಮಧ್ಯೆ 11 ಮಂದಿಗೆ ಮಂಜೂರಾಗಿತ್ತು. ಆದರೆ ತೋಟಗಾರಿಕೆ ಇಲಾಖೆಗೆ ಇದಾವುದು ಗಮನಕ್ಕೆ ಬಂದಿರಲಿಲ್ಲ.  

 

ಮೇಲ್ನೋಟಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎನ್ನಬಹುದಾದರೂ ಖಾಸಗಿ ವ್ಯಕ್ತಿಗಳಿಗೆ ಜಮೀನನ್ನು ಮಂಜೂರು ಮಾಡಿದ್ದ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಲೋಪವೂ ಇದರಲ್ಲಿದೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇದೇ ಜಮೀನಿಗೆ ಹೊಂದಿಕೊಂಡಿರುವ ಕಾರಣ ಎಕರೆಗೆ 20ರಿಂದ 30 ಕೋಟಿ ರು. ಬೆಲೆ ಇದೆ. ಇಲ್ಲಿನ ಜಮೀನುಗಳು ಇಷ್ಟೊಂದು ಬೆಲೆ ಬಾಳುತ್ತಿದ್ದರೂ ಅಧಿಕಾರಿಗಳು ಮಾತ್ರ ಒಟ್ಟು ಜಮೀನನ್ನು ಸರ್ವೆ ಮಾಡಿಸಿರಲಿಲ್ಲ.

2007-08 ಮತ್ತು 2008-09ರಲ್ಲಿ ಸರ್ವೆ ನಂಬರ್‌90, 21 ಮತ್ತು 73ರಲ್ಲಿದ್ದ ಜಮೀನು ಸರ್ವೆ ಆಗಿದೆ. ಇದರಲ್ಲಿನ ಒಟ್ಟು 53.28 ಎಕರೆ ಪ್ರದೇಶದಲ್ಲಿ 5 ಎಕರೆ ಜಮೀನನ್ನು 30 ವರ್ಷಗಳ ಕಾಲ ಭೋಗ್ಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌)ಗೆ ನೀಡಲಾಗಿದೆ. 3.08 ಎಕರೆ ಜಮೀನನ್ನು ಮೇಲು ರಸ್ತೆ ಮಾಡಲು ನೀಡಿದ್ದರೆ 0.20 ಗುಂಟೆ ಜಮೀನು ರಾಷ್ಟ್ರೀಯ ಹೆದ್ದಾರಿಗೆ ನೀಡಲಾಗಿದೆ. ಇನ್ನುಳಿದ 45.00 ಎಕರೆ ಇಲಾಖೆಯ ಸುಪರ್ದಿಯಲ್ಲಿದೆ. ಈ ಜಾಗದಲ್ಲಿ ಈವರೆವಿಗೂ ಯಾವುದೇ ಚಟುವಟಿಕೆಗಳು ಆರಂಭವಾಗಿಲ್ಲ.  

 

ಸರ್ವೆ ನಂಬರ್‌90, 21 ಮತ್ತು 73ಕ್ಕೆ ಸಂಬಂಧಿಸಿದಂತೆ 2008ರಲ್ಲಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದವು. 11 ವರ್ಷಗಳಿಂದಲೂ ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. 2017-18ರಲ್ಲಿ ಈ ಪ್ರಕರಣ ಹೈಕೋರ್ಟ್‌ಮೆಟ್ಟಿಲೇರಿತ್ತು. 2008 ಮೇ 27ರಂದು ಅಂದಿನ ವಿಭಾಗೀಯ ಆಯುಕ್ತರಾಗಿದ್ದ ಜಯರಾಂ ಅವರು ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಿದ್ದರು.

the fil favicon

SUPPORT THE FILE

Latest News

Related Posts