Sunday | April 19, 2026 |

ನಗದು ಶಿಲ್ಕು ಇದ್ದರೂ 48,499 ಕೋಟಿ ಸಾಲ; ಹಣಕಾಸು ಆಡಳಿತವನ್ನೇ ಹಾಳುಗೆಡವಿದ್ದರೇ?

ಬೆಂಗಳೂರು; ಮಾರುಕಟ್ಟೆಯ ಸಾಲವೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಪಡೆಯುವ ಕೋಟ್ಯಂತರ ಮೊತ್ತದ ಸಾಲವನ್ನು ಬಂಡವಾಳ ಸೃಜನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರವು ಸಾಲದ ಬಡ್ಡಿ ಮತ್ತು ಸಾಲ ಮರುಪಾವತಿಸಲು ಬಳಸಿದೆ.

ಅಲ್ಲದೆ ಅಧಿಕ ಪ್ರಮಾಣದಲ್ಲಿ ನಗದು ಶಿಲ್ಕು ಹೊಂದಿದ್ದರೂ ಹಲವು ಸಂದರ್ಭಗಳಲ್ಲಿ ಮಾರುಕಟ್ಟೆಯಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿದೆ. 2019-20ರಲ್ಲೇ ಸರಾಸರಿ ಶೇ. 6.38 ದರದಲ್ಲಿ 19,903 ಕೋಟಿ ರು. ಬಡ್ಡಿ ಪಾವತಿಸಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಬಹಿರಂಗಗೊಳಿಸಿದೆ.

ಇಂದು (ಸೆ.15,2021) ನಡೆದ ವಿಧಾನಸಭೆಗೆ ಮಂಡನೆಯಾಗಿರುವ ಸಿಎಜಿ ವರದಿಯು 2020ರ ಮಾರ್ಚ್‌ 31 ಅಂತ್ಯಕ್ಕೆ ರಾಜ್ಯ ಹಣಕಾಸಿನ ವ್ಯವಹಾರಗಳ ಮೇಲೆ ಬೆಳಕು ಚೆಲ್ಲಿದೆ. ಬಹುಪಾಲು ಸಾಲವನ್ನು ತಪ್ಪಿಸಬಹುದಾಗಿದ್ದರೂ 48,499 ಕೋಟಿಯಷ್ಟು ಸಾಲ ಪಡೆಯುವ ಮೂಲಕ ರಾಜ್ಯದ ಹಣಕಾಸು ವ್ಯವಸ್ಥೆಯನ್ನೇ ಬಿಜೆಪಿ ಸರ್ಕಾರವು ಹಾಳುಗೆಡವಿತ್ತು ಎಂಬ ಆರೋಪಗಳನ್ನು ಸಿಎಜಿ ವರದಿಯು ಪುಷ್ಠೀಕರಿಸಿದೆ.

ಅಲ್ಲದೆ ಹಿಂದಿನ ಕಾಂಗ್ರೆಸ್‌ ಸರ್ಕಾರದಿಂದಲೂ ಅಗತ್ಯಕ್ಕಿಂತಲೂ ಹೆಚ್ಚಿನ ಸಾಲವನ್ನು ಪಡೆದಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅದರಲ್ಲೂ ತಾರ್ಕಿಕ ಕಾರಣಗಳಿಲ್ಲದಿದ್ದರೂ ಸಾವಿರಾರು ಕೋಟಿ ಸಾಲ ಪಡೆದಿತ್ತು. ಬಹುಪಾಲು ಸಾಲವನ್ನು ತಪ್ಪಿಸಬಹುದಾಗಿದ್ದರೂ ಮಾರುಕಟ್ಟೆಯಿಂದ 48,499 ಕೋಟಿಗಳಷ್ಟು ಸಾಲ ಪಡೆದಿರುವುದನ್ನು ಸಿಎಜಿ ವರದಿಯು ಇದೀಗ ಮುನ್ನೆಲೆಗೆ ತಂದಿದೆ.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ 2019-20ರ ಅವಧಿಯಲ್ಲಿ ರಾಜ್ಯದ ಬಂಡವಾಳ ವೆಚ್ಚದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಆದ್ದರಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯಲು ಯಾವುದೇ ತಾರ್ಕಿಕ ಕಾರಣವಿರಲಿಲ್ಲ. ಶೇ.60ರಷ್ಟು ನಗದು ಶಿಲ್ಕನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮೀಸಲು ನಿಧಿಯಲ್ಲಿ ತೊಡಗಿಸಿತ್ತು. ಈ ಶೇಕಡ 60 ಭಾಗದ ಹೂಡಿಕೆಯನ್ನು ತೂಗಿಸಲು ರಾಜ್ಯ ಸರ್ಕಾರದ ಮಾಸಿಕ ನಗದು ಶಿಲ್ಕು ಸಮಾಧಾನಕರವಾಗಿದ್ದರಿಂದ ಹೆಚ್ಚಿನ ಸಾಲಗಳಿಗೆ ಮೊರೆ ಹೋಗುವ ಅಗತ್ಯವೇ ಇರಲಿಲ್ಲ. ಆದ್ದರಿಂದ ಸಾಲ ಅದರಲ್ಲೂ ಮಾರುಕಟ್ಟೆ ಸಾಲವನ್ನು ಮತ್ತು ಅದರ ಮೇಲಿನ ಬಡ್ಡಿ ಹೊರೆಯನ್ನು ತಪ್ಪಿಸಬಹುದಾಗಿತ್ತು,’ ಎಂದು ಸಿಎಜಿ ವರದಿಯು ವಿವರಿಸಿದೆ.

‘ಸಾಲಗಳಿಂದ ಪಡೆದ ಮೊತ್ತಗಳನ್ನು ಸಾಮಾನ್ಯವಾಗಿ ಬಂಡವಾಳ ಸೃಜನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ವರ್ತಮಾನ ವೆಚ್ಚಕ್ಕೆ ಹಾಗೂ ಬಾಕಿ ಉಳಿದ ಸಾಲಗಳ ಬಡ್ಡಿ ಮರು ಪಾವತಿಗೆ ಸಾಲದ ಮೂಲಕ ಪಡೆದ ಮೊತ್ತವನ್ನು ಬಳಸುವುದು ಸಹಿಷ್ಣುತೆಯಲ್ಲ,’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿದೆ.

2015-16ರಿಂದ 2019-20ರವರೆಗೆ ಒಟ್ಟು 1,69,723 ಲಕ್ಷ ಕೋಟಿ ರು.ಗಳನ್ನು ವಿವಿಧ ಮೂಲಗಳಿಂದ ಸಾಲ ಪಡೆದಿದೆ. ಈ ಪೈಕಿ 42,062 ಕೋಟಿ ರು.ಗಳನ್ನು ಹಿಂದೆ ಪಡೆದ ಸಾಲದ (ಅಸಲು) ಮರು ಪಾವತಿ ಮಾಡಲಾಗಿದೆ. ಈ 5 ವರ್ಷದಲ್ಲಿ ಬಂಡವಾಳ ವೆಚ್ಚವನ್ನು (ಸಾಲ ಮತ್ತು ಮುಂಗಡಗಳನ್ನೊಳಗೊಂಡು) ಭರಿಸಲು ಪಡೆದ ಸಾಲ ಅಪರ್ಯಾಪ್ತವಾಗಿರುವುದನ್ನು ಸಿಎಜಿ ಗಮನಿಸಿದೆ. ‘2019-20ರಲ್ಲಿ ಪಡೆದ ಸಾಲದ ಮೊತ್ತವು ಬಂಡವಾಳ ವೆಚ್ಚ ಭರಿಸುವಲ್ಲಿ ಪರ್ಯಾಪ್ತವಾಗಿತ್ತು. ಇದು ಸರ್ಕಾರವು ಅಗತ್ಯಕ್ಕಿಂತ ಹೆಚ್ಚು ಮೊತ್ತದ ಸಾಲವನ್ನು ಪಡೆಯಲಾಗಿದೆ ಎಂಬುದನ್ನು ಸೂಚಿಸುತ್ತದೆ,’ ಎಂದು ಸಿಎಜಿ ವರದಿ ವಿವರಿಸಿದೆ.

2015-16ರಲ್ಲಿ 21,072 ಕೋಟಿ ರು. ಸಾಲ ಪಡೆಯಲಾಗಿತ್ತು. ಅದೇ ರೀತಿ 2016-17ರಲ್ಲಿ 31,156 ಕೋಟಿ, 2017-18ರಲ್ಲಿ 25,122 ಕೋಟಿ, 2018-19ರಲ್ಲಿ 41,914 ಕೋಟಿ ಮತ್ತು 2019-20ರಲ್ಲಿ 50,459 ಕೋಟಿ ರು. ಸಾಲ ಪಡೆದಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ದೊಡ್ಡಪ್ರಮಾಣದ ನಗದು ಶಿಲ್ಕನ್ನು ಹೊಂದಿದ್ದರೂ ಸಹ ರಾಜ್ಯ ಸರ್ಕಾರವು ಮಾರುಕಟ್ಟೆ ಸಾಲಗಳನ್ನು ಅವಲಂಬಿಸಿತ್ತು. ಉತ್ಪಾದಕ ಬಳಕೆಗೆ ಬಾರದ ನಗದು ಶಿಲ್ಕುಗಳನ್ನು ಹೆಚ್ಚಿಸಲು ಇದು ಕಾರಣವಾಯಿತು ಎಂದು ಸಿಎಜಿ ಅಭಿಪ್ರಾಯಿಸಿದೆ. ಅದೇ ರೀತಿ ವರ್ಷದ ಕೊನೆಯಲ್ಲಿ ರಾಜ್ಯದ ನಗದು ಶಿಲ್ಕು 34,463 ಕೋಟಿ ಇದ್ದಿತಾದರೂ ನಗದು ಹೆಚ್ಚಳವು ಹಿಂದಿನ ವರ್ಷಕ್ಕಿಂತ ಶೇ.57ರಷ್ಟಿತ್ತು.

ಪ್ರಸಕ್ತ ವರ್ಷದ ಕೊನೆಯಲ್ಲಿ ರಾಜ್ಯ ಸರ್ಕಾರದ ನಗದು ಶಿಲ್ಕು 2018-19ರಲ್ಲಿದ್ದ 22,003.87 ಕೋಟಿಯಿಂದ 2019-20ರಲ್ಲಿ 34,463.13 ಕೋಟಿಗೆ ಏರಿತ್ತು. ಇದು ಒಟ್ಟಾರೆ 12,459 ಕೋಟಿಗಳಷ್ಟು ಗಣನೀಯವಾಗಿ ಹೆಚ್ಚಿತ್ತು. ಹೆಚ್ಚುವರಿ ನಗದು ಶಿಲ್ಕು ಮುಖ್ಯವಾಗಿ 2019-20ರ ಅವಧಿಯಲ್ಲಿ 48,499 ಕೋಟಿ ರು. ಮಾರುಕಟ್ಟೆ ಸಾಲದಿಂದಲೇ ಉಂಟಾಗಿದೆ ಎಂದು ಸಿಎಜಿ ವಿವರಿಸಿದೆ.

‘ರಾಜ್ಯ ಸರ್ಕಾರವು ಅಧಿಕ ಪ್ರಮಾಣದ ನಗದು ಶಿಲ್ಕು ಹೊಂದಿದ್ದರೂ ಸಹ ವರ್ಷದ ಹಲವಾರು ಸಂದರ್ಭಗಳಲ್ಲಿ ಮಾರುಕಟ್ಟೆ ಸಾಲಗಳನ್ನು ಪಡೆದುಕೊಂಡಿದೆ ಮತ್ತು ಅದನ್ನು ಉತ್ಪಾದಕ ಬಳಕೆಗೆ ಒಳಪಡಿಸದೇ ನಗದು ಶಿಲ್ಕುಗಳು ಹೆಚ್ಚಾಗಲು ಕಾರಣವಾಗಿದೆ,’ ಎಂದು ಸಿಎಜಿ ವರದಿ ಹೇಳಿದೆ.

ಮಾರ್ಚ್‌ 2020ರ ಅಂತ್ಯಕ್ಕೆ 13,654 ಕೋಟಿಯಷ್ಟಿದ್ದು 34,464 ಕೋಟಿಯಷ್ಟಲ್ಲ ಎಂದು ಆರ್ಥಿಕ ಇಲಾಖೆ ತಿಳಿಸಿತ್ತು. ಹಣಕಾಸು ಲೆಕ್ಕಗಳ ಪ್ರಕಾರ ನಗದು ಶಿಲ್ಕು 34,464 ಕೋಟಿಗಳಾಗಿದ್ದು ಇದು ಹಿಂದಿನ ಎಲ್ಲಾ ರಾಜ್ಯ ಹಣಕಾಸು ವರದಿಗಳಲ್ಲಿ ತಿಳಿಸಿರುವಂತೆ ಮೀಸಲು ನಿಧಿಗಳಲ್ಲಿನ ಹೂಡಿಕೆ ಮತ್ತು ಇತರ ಬಾಬ್ತನ್ನು ಒಳಗೊಂಡಿದೆ.

ನಗದು ಶಿಲ್ಕುಗಳಲ್ಲಿನ ಹೂಡಿಕೆಯು 5,139.28 ಕೋಗಳಿಂದ 13,634 ಕೋಟಿಗಳಾಗಿರುವುದನ್ನು ಗಮನಿಸಿರುವ ಲೆಕ್ಕ ಪರಿಶೋಧನೆ ವರದಿಯು 2019-20ರಲ್ಲಿ ಹೂಡಿಕೆಗಳಿಂದ ಸರಾಸರಿ ಶೇ. 2.31ರಂತೆ 535 ಕೋಟಿಗಳ ಬಡ್ಡಿಯನ್ನು 14 ದಿನಗಳ ಖಜಾನೆ ಬಿಲ್‌ಗಳಿಂದ ಗಳಿಸಿತ್ತು ಎಂಬ ಅಂಶವು ಸಿಎಜಿ ವರದಿಯಿಂದ ತಿಳಿದು ಬಂದಿದೆ.

‘ಸರಾಸರಿ ಶೇಕಡ 6.38ರ ದರದಲ್ಇ 19.903 ಕೋಟಿ ರು.ಗಳ ಬಡ್ಡಿಯನ್ನು ಪಾವತಿಸಿದೆ. ಆದ್ದರಿಂದ ರಾಜ್ಯ ಸರ್ಕಾರವು ಅಧಿಕ ನಗದು ಶಿಲ್ಕನ್ನು ಹೊಂದಿದ್ದರೂ ಹೆಚ್ಚಿನ ಸಾಲಕ್ಕೆ ಮೊರೆ ಹೋಗಿತ್ತು,’ ಎಂದು ಸಿಎಜಿ ಆಭಿಪ್ರಾಯಿಸಿದೆ.

Hot this week

ಹಾರೋಹಳ್ಳಿ ಭೂ ಹಗರಣ; ದಿ ಫೈಲ್ ವರದಿ ಬೆನ್ನಲ್ಲೇ 108 ಕೋಟಿ ಮೌಲ್ಯದ ಜಮೀನು ಸರ್ಕಾರದ ಹೆಸರಿಗೆ ದಾಖಲು

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತವರು ಕ್ಷೇತ್ರದಲ್ಲಿಯೇ  ನಕಲಿ...

ಸರ್ಕಾರದ ಪೂರ್ವಾನುಮೋದನೆ ಇಲ್ಲದಿದ್ದರೂ ದಲಿತರ ಜಮೀನು ಭೂಪರಿವರ್ತನೆಗೆ ಶಿಫಾರಸ್ಸು; ತಹಶೀಲ್ದಾರ್ ಭಾಗಿ!

ಬೆಂಗಳೂರು; ಪಿಟಿಸಿಎಲ್ ಕಾಯ್ದೆ,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ...

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ

ಬೆಂಗಳೂರು; ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಿಂದಿನ ಕಾಂಗ್ರೆಸ್‌...

ಪುರಾತತ್ವ ಇಲಾಖೆಯಲ್ಲಿಯೂ ಶೇ.60ರಷ್ಟು ಕಮಿಷನ್‌ಗೆ ಬೇಡಿಕೆ; ಲಂಚದ ಪ್ರಮಾಣ ಕಡಿಮೆ ಮಾಡಿಸಲು ಅಲವತ್ತುಕೊಂಡ ಗುತ್ತಿಗೆದಾರರು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಚೇರಿ ಹೊಂದಿರುವ  ಪುರಾತತ್ವ...

Topics

ಹಾರೋಹಳ್ಳಿ ಭೂ ಹಗರಣ; ದಿ ಫೈಲ್ ವರದಿ ಬೆನ್ನಲ್ಲೇ 108 ಕೋಟಿ ಮೌಲ್ಯದ ಜಮೀನು ಸರ್ಕಾರದ ಹೆಸರಿಗೆ ದಾಖಲು

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತವರು ಕ್ಷೇತ್ರದಲ್ಲಿಯೇ  ನಕಲಿ...

ಸರ್ಕಾರದ ಪೂರ್ವಾನುಮೋದನೆ ಇಲ್ಲದಿದ್ದರೂ ದಲಿತರ ಜಮೀನು ಭೂಪರಿವರ್ತನೆಗೆ ಶಿಫಾರಸ್ಸು; ತಹಶೀಲ್ದಾರ್ ಭಾಗಿ!

ಬೆಂಗಳೂರು; ಪಿಟಿಸಿಎಲ್ ಕಾಯ್ದೆ,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ...

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ

ಬೆಂಗಳೂರು; ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಿಂದಿನ ಕಾಂಗ್ರೆಸ್‌...

ಪುರಾತತ್ವ ಇಲಾಖೆಯಲ್ಲಿಯೂ ಶೇ.60ರಷ್ಟು ಕಮಿಷನ್‌ಗೆ ಬೇಡಿಕೆ; ಲಂಚದ ಪ್ರಮಾಣ ಕಡಿಮೆ ಮಾಡಿಸಲು ಅಲವತ್ತುಕೊಂಡ ಗುತ್ತಿಗೆದಾರರು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಚೇರಿ ಹೊಂದಿರುವ  ಪುರಾತತ್ವ...

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ

ಬೆಂಗಳೂರು; ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ, ಕಂದಾಯ,...

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

Related Articles

Popular Categories

error: Content is protected !!