Wednesday | April 15, 2026 |

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ ಮೊತ್ತದ ಪೈಕಿ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಅತ್ಯಂತ ಕನಿಷ್ಟ ಮೊತ್ತವನ್ನು ಮಾತ್ರ ಆಯವ್ಯಯದಲ್ಲಿ ನಿಗದಿಪಡಿಸಿದೆ. ಹೀಗಾಗಿ ಈ ವರ್ಷವೂ ಸಹ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ ಪಾವತಿಸಲು ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿವೆ.

2026-27ನೇ ಸಾಲಿಗೆ ವಿಶ್ರಾಂತಿ ವೇತನ ಪಾವತಿಸಲು ಹೆಚ್ಚುವರಿ ಅನುದಾನ ಹಂಚಿಕೆಗೆ ಹಲವು ವಿಶ್ವವಿದ್ಯಾಲಯಗಳು 2025ರ ನವೆಂಬರ್‍‌ನಿಂದಲೇ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದವು. ಆದರೆ ವಿಶ್ವವಿದ್ಯಾಲಯಗಳ ಕೋರಿಕೆಯನ್ನು ಸರ್ಕಾರವು ಈಡೇರಿಸಿಲ್ಲ. 2026ರ ಮಾರ್ಚ್‌ನಲ್ಲಿ ಮಂಡನೆಯಾದ ಆಯವ್ಯಯದಲ್ಲಿ ಅತ್ಯಂತ ಕನಿಷ್ಟ ಮೊತ್ತವನ್ನು ನಿಗದಿಪಡಿಸಿರುವುದು ವಿಶ್ವವಿದ್ಯಾಲಯಗಳಿಗೆ ತಲೆನೋವಾಗಿ ಪರಿಣಿಮಿಸಲಿದೆ.

ಉನ್ನತ ಶಿಕ್ಷಣ ವಲಯದಡಿ ಬರುವ 6 ವಿಶ್ವವಿದ್ಯಾಲಯಗಳಿಗೆ (ರಾಜ್ಯ ವಲಯದ ಯೋಜನೆಗಳು) 2025-26ನೇ ಸಾಲಿಗೆ ಪಿಂಚಣಿ ಪಾವತಿಗಾಗಿ 2026ರ ಜನವರಿ 12ರಂದು ಒಟ್ಟು 100 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಆದರೆ 20262-7ನೇ ಸಾಲಿಗೆ ಪಿಂಚಣಿ ಪಾವತಿಸಲು ಆಯವ್ಯಯದಲ್ಲೇ ಅತ್ಯಲ್ಪ ಅನುದಾನವನ್ನು ನಿಗದಿಪಡಿಸಿರುವುದು ಗೊತ್ತಾಗಿದೆ. ಇದಕ್ಕೆ ತುಮಕೂರು ವಿಶ್ವವಿದ್ಯಾಲಯವು ಉತ್ತಮ ನಿದರ್ಶನವಾಗಿದೆ.

ಕೇಳಿದ್ದು 5.63 ಕೋಟಿ

ತುಮಕೂರು ವಿಶ್ವವಿದ್ಯಾಲಯವು 2026-27ನೇ ಸಾಲಿಗೆ ಪಿಂಚಣಿ ಅನುದಾನ ಕೋರಿ ಸರ್ಕಾರಕ್ಕೆ 2025ರ ನವೆಂಬರ್‍‌ 11ರಂದೇ ಪ್ರಸ್ತಾವ ಸಲ್ಲಿಸಿತ್ತು. ಇದೇ ಪ್ರಸ್ತಾವದಲ್ಲಿ ತುಮಕೂರು ವಿಶ್ವವಿದ್ಯಾಲದಲ್ಲಿ ಲಭ್ಯವಿದ್ದ  ಆರ್ಥಿಕ ಸಂಪನ್ಮೂಲದ ಕುರಿತು ವಿವರಿಸಿತ್ತು. ಇದರ ಪ್ರಕಾರ 2024-25ನೇ ಸಾಲಿನಲ್ಲಿ  39.46 ಕೋಟಿ ರುಪಾಯಿ ಆಂತರಿಕ ಸಂಪನ್ಮೂಲವಿತ್ತು. ಈ ಆಂತರಿಕ ಸಂಪನ್ಮೂಲದಿಂದಲೇ ಅತಿಥಿ ಉಪನ್ಯಾಸಕರ ವೇತನಕ್‌ಕಾಗಿ 8.88 ಕೋಟಿ 46 ಲಕ್ಷ ರು ಭರಿಸಿತ್ತು. ಅಲ್ಲದೇ ಹೊರಗುತ್ತಿಗೆ ಸಿಬ್ಬಂದಿಗಳಿಗೆ 8.78 ಕೋಟಿ ರುಪಾಯಿ ಆಡಳಿತಾತ್ಮಕ ವೆಚ್ಚಗಳಿಗಾಗಿ 8.74 ಕೋಟಿ 85 ಲಕ್ಷ ರು.ಗಳನ್ನು ಭರಿಸಿತ್ತು.

ತುಮಕೂರು ವಿಶ್ವವಿದ್ಯಾಲಯದಲ್ಲಿ 291 ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಿದ್ದರೇ 294 ಮಂದಿ ಹೊರಗುತ್ತಿಗೆ ಸಿಬ್ಬಂದಿಗಳಿದ್ದವು. ಪ್ರಸ್ತುತ 17 ಮಂದಿ ನಿವೃತ್ತಿ ಸಿಬ್ಬಂದಿಗಳಿದ್ದರು. 2026-27ನೇ ಸಾಲಿನಲ್ಲಿ ಕೇವಲ ಒಬ್ಬರು ಮಾತ್ರ ನಿವೃತ್ತಿ ಹೊಂದಲಿದ್ದಾರೆ. 2026-27ನೇ ಸಾಲಿಗೆ ಪಿಂಚಣಿ ವೇತನಕ್ಕೆ 5.63 ಕೋಟಿ ರುಪಾಯಿ ಅನುದಾನ ಕೋರಿತ್ತು. 2026-27ನೇ ಸಾಲಿಗೆ ವಿಶ್ವವಿದ್ಯಾಲಯದಲ್ಲಿ  40.00 ಕೋಟಿ ರು ಆಂತರಿಕ ಸಂಪನ್ಮೂಲವಿದೆ.

 

 

226 ಮಂದಿ ಬೋಧಕ ಮತ್ತು 215 ಮಂದಿ ಬೋಧಕೇತರ ಸೇರಿ ಒಟ್ಟಾರೆ 441 ಮಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿದ್ದಾರೆ. ಬೋಧಕ ವೃಂದದಲ್ಲಿ 122 ಮತ್ತು ಬೋಧಕೇತರ ವೃಂದದಲ್ಲಿ 48 ಸೇರಿ ಒಟ್ಟಾರೆ 170 ಹುದ್ದೆಗಳು ಖಾಲಿ ಇವೆ. 2024-25ನೇ ಸಾಲಿನಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ 39,886 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು ಎಂದು ವಿಶ್ವವಿದ್ಯಾಲಯವು ತನ್ನ ಪ್ರಸ್ತಾವನೆಯಲ್ಲಿ ವಿವರಿಸಿತ್ತು. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸಚಿವ ಡಾ ಎಂ ಸಿ ಸುಧಾಕರ್ ಅವರೊಂದಿಗೆ ಚರ್ಚಿಸಿದ್ದರು ಎಂದು ಗೊತ್ತಾಗಿದೆ.

ಆಯವ್ಯಯದಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ

20262-7ನೇ ಸಾಲಿಗೆ ತುಮಕೂರು ವಿಶ್ವವಿದ್ಯಾಲಯವು 5.63 ಕೋಟಿ ರು ಪಿಂಚಣಿ ವೇತನಕ್ಕಾಗಿ ಅನುದಾನ ಒದಗಿಸಬೇಕು ಎಂದು ಕೋರಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಉನ್ನತ ಶಿಕ್ಷಣ ಇಲಾಖೆಯು ಆಯವ್ಯಯದಲ್ಲಿ ಕೇವಲ 1.00 ಲಕ್ಷ ರು ಮಾತ್ರ ನಿಗದಿಪಡಿಸಿತ್ತು. ಹೀಗಾಗಿ 5.63 ಕೋಟಿ ರು ಬಿಡುಗಡೆ ಮಾಡಬೇಕು ಎಂದು ವಿಶ್ವವಿದ್ಯಾಲಯವು ಕೋರಿತ್ತು. ಆದರೆ ಈಗಾಗಲೇ 2026-27ನೇ ಸಾಲಿನ ಆಯವ್ಯಯ ಮಂಡನೆಯಾಗಿರುವ ಕಾರಣ ಅಗತ್ಯವಿರುವ ಅನುದಾನವನ್ನು ಪೂರಕ ಅಂದಾಜಿನಲ್ಲಿ ಒದಗಿಸಲು ಅಗತ್ಯ ದಾಖಲೆಗಳೊಂದಿಗೆ ಕೋರಿಕೆ ಸಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯು 2026ರ ಏಪ್ರಿಲ್‌ 1ರಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ, ಆರ್ಥಿಕ ಅಧಿಕಾರಿಗಳಿಗೆ ಸೂಚಿಸಿದೆ.

 

 

2023-24ನೇ ಸಾಲಿನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿಗಳ ಪಿಂಚಣಿ ಸೌಲಭ್ಯಕ್ಕಾಗಿ 45.79 ಕೋಟಿ ರು ಪುನರ್ ವಿನಿಯೋಗದ ಮೂಲಕ ಒದಗಿಸಿ ಮಂಜೂರಾತಿ ನೀಡಿತ್ತು. ಅಲ್ಲದೇ ಈ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯ 7ನೇ ಯುಜಿಸಿ ಪರಿಷ್ಕೃತ ವೇತನ ಶ್ರೇಣಿಯ ಹಿಂಬಾಕಿಗಾಗಿ ಬಿಡುಗಡೆ ಮಾಡಿದ್ದ 38.95 ಕೋಟಿ ರುಪಾಯಿ ಪೈಕಿ  13.98 ಕೋಟಿ, ಮತ್ತು ಇದರಿಂದ ಗಳಿಸಿರುವ ಬಡ್ಡಿ ಮೊತ್ತ 1.39 ಕೋಟಿ ಸೇರಿ ಒಟ್ಟಾರೆ 15.38 ಕೋಟಿ ರು ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಯಲ್ಲಿ ಲಭ್ಯವಿತ್ತು. ಈ ಮೊತ್ತವನ್ನು ಬಳಸಿಕೊಂಡು ವಿಶ್ವವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವಿಶ್ರಾಂತಿ ವೇತನ ಪಾವತಿಸಲು 2023ರ ಸೆ.6ರಂದು ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿತ್ತು.

 

 

ಅಲ್ಲದೇ 2025-26ನೇ ಆರ್ಥಿಕ ಸಾಲಿನ ಪೂರಕ ಅಂದಾಜು-2ರಲ್ಲಿ ಮೈಸೂರು, ಮಂಗಳೂರು, ಗುಲ್ಬರ್ಗಾ, ಬೆಂಗಳೂರು, ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯಗಳಿಗೆ 100 ಕೋಟಿ ರು ಬಿಡುಗಡೆ ಮಾಡಿತ್ತು.

 

 

 

ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ತಲಾ 25 ಕೋಟಿ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ 5 ಕೋಟಿ, ಗುಲ್ಬರ್ಗಾ, ಮಂಗಳೂರು, ಕುವೆಂಪು ವಿವಿಗೆ ತಲಾ 15 ಕೋಟಿ ಸೇರಿ ಒಟ್ಟಾರೆ 100 ಕೋಟಿ ರುಗಳನ್ನು 2026ರ ಜನವರಿ 12ರಂದೇ  ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.

 

 

ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಕಳೆದ 5 ವರ್ಷಗಳಲ್ಲಿ ಶೇ. 80ರಷ್ಟು ಹೆಚ್ಚಿಸಿದ್ದರೂ ಸಹ   ಪಿಂಚಣಿ ಮೊತ್ತ ಭರಿಸಲು ಸಾಧ್ಯವಾಗುತ್ತಿಲ್ಲ.  13 ವಿಶ್ವವಿದ್ಯಾಲಯಗಳಿಗೆ 2025-26ನೇ ಸಾಲಿನಲ್ಲಿ  ಪಿಂಚಣಿಗಾಗಿ 562.94 ಕೋಟಿ ರೂ.ಅವಶ್ಯಕತೆ ಇತ್ತು. ಆದರೆ ಸರ್ಕಾರವು  ಪಿಂಚಣಿಗಾಗಿ 166.09 ಕೋಟಿ ರೂ. ಅನುದಾನ ನೀಡುತ್ತಿದೆ. ಅಂದರೆ, ಶೇ.30ರಷ್ಟು ಅನುದಾನ  ಸಿಗುತ್ತಿದೆ. ಇನ್ನು, 54.46 ಕೋಟಿ ರೂ. ಅಂದರೆ, ಶೇ.10ರಷ್ಟು ಅನುದಾನವನ್ನು ವಿಶ್ವವಿದ್ಯಾಲಯ ಆಂತರಿಕ ಸಂಪನ್ಮೂಲದಿಂದ ಕ್ರೋಢೀಕರಿಸುತ್ತಿದೆ. ಉಳಿದ ಶೇ.70ರಧಿಷ್ಟು ಅನುದಾನಕ್ಕಾಗಿ ವಿಶ್ವವಿದ್ಯಾಲಯವು ಮತ್ತೆ ಸರಕಾರವನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ.

ಪಿಂಚಣಿ ಅನುದಾನವನ್ನು ಸರ್ಕಾರವು ಪೂರ್ಣ ಪ್ರಮಾಣದಲ್ಲಿ ನೀಡದೇ ಇದ್ದಲ್ಲಿ ಮುಂದಿನ ಒಂದೇ ವರ್ಷದಲ್ಲಿ ವಿಶ್ವವಿದ್ಯಾಲಯದ ನಿಶ್ಚಿತ ಠೇವಣಿಗಳು ಸಂಪೂರ್ಣವಾಗಿ ಖರ್ಚಾಗಿ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆ ಮತ್ತು ದಿನನಿತ್ಯದ ಆಡಳಿತಾತ್ಮಕ ವೆಚ್ಚವನ್ನೂ ಭರಿಸುವುದು ಕಷ್ಟಕರವಾಗಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು ಸರ್ಕಾರದ ಗಮನಕ್ಕೆ ಹಿಂದೆಯೂ ತಂದಿತ್ತು.  ಈ ಮೂಲಕ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಗತಿಯನ್ನು ಬಹಿರಂಗಗೊಳಿಸಿದ್ದರು.

ಯುವಿಸಿಇ ಕಾಲೇಜಿನ ಮೆಕ್ಯಾನಿಕಲ್‌ ಬ್ಲಾಕ್‌ ವಿಭಾಗದ ನಿರ್ಮಾಣದ ಕಾಮಗಾರಿಗಳಿಗೆ ಅಂದಾಜು ವೆಚ್ಚವಾಗಿರುವ 85.00 ಕೋಟಿ ರು.ಗಳ ವೆಚ್ಚವನ್ನು ಬೆಂಗಳೂರು ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ ಭರಿಸಬೇಕು ಎಂದು ಸರ್ಕಾರವು ಬರೆದಿದ್ದಕ್ಕೆ ಉತ್ತರಿಸಿರುವ ಕುಲಸಚಿವರು ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಗತಿ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದರು.

 

 

ಪತ್ರದಲ್ಲೇನಿತ್ತು?

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸರ್ಕಾರವು ಸಿಬ್ಬಂದಿಗಳ ವೇತನಕ್ಕೆ ಅನುದಾನವನ್ನು ಮಾತ್ರ ಪೂರ್ಣ ಪ್ರಮಾಣದಲ್ಲಿ ಹೆಚ್‌ಆರ್‌ಎಂಎಸ್‌ ಮೂಲಕ ನೀಡುತ್ತಿದೆ. ನಿವೃತ್ತ ನೌಕರರ ವಾರ್ಷಿಕ ಪಿಂಚಣಿ ಅನುದಾನವಾದ 90.00 ಕೋಟಿಗಳಲ್ಲಿ ಕೇವಲ 15.00 ಕೋಟಿಗಳನ್ನು ಮಾತ್ರ 2023-24ನೇ ಆಯವ್ಯಯದಲ್ಲಿ ನಿಗದಿಪಡಿಸಿದೆ. (ಕಳೆದ 5 ವರ್ಷಗಳಿಂದ ಇದೇ ಮೊತ್ತವನ್ನು ನೀಡಲಾಗುತ್ತಿದೆ) ಹಾಗಾಗಿ ಉಳಿದ ವ್ಯತ್ಯಾಸದ ಮೊತ್ತವಾದ 75.00 ಕೋಟಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ನಿಶ್ಚಿತ ಠೇವಣಿಯಿಂದಲೇ ಭರಿಸಲಾಗುತ್ತಿದೆ ಎಂದು ಕುಲಸಚಿವರು ಹೇಳಿದ್ದರು.

‘ಒಂದು ವೇಳೆ ಸರ್ಕಾರವು ವಿಶ್ವವಿದ್ಯಾಲಯದ ಪಿಂಚಣಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ನೀಡದಿದ್ದಲ್ಲಿ ಇನ್ನು 3 ವರ್ಷಗಳಲ್ಲೇ ವಿಶ್ವವಿದ್ಯಾಲಯದ ನಿಶ್ಚಿತ ಠೇವಣಿಗಳು ಸಂಪೂರ್ಣವಾಗಿ ಖರ್ಚಾಗುತ್ತದೆ. ಮತ್ತು ಬೆಂಗಳೂರು ವಿಶ್ವವಿದ್ಯಾಲಯವು ತ್ರಿಭಜನೆಗೊಂಡು ಬೆಂಗಳೂರು ನಗರ, ಬೆಂಗಳೂರು ಉತ್ತರ ಎಂದು ಹಾಗೂ 2021ರಲ್ಲಿ ಪುನಃ ವಿಭಜನೆಗೊಂಡ ಯುವಿಸಿಇ ವಿಶ್ವವಿದ್ಯಾಲಯಗಳ ಬೋಧಕ ಬೋಧಕೇತರ ಸಿಬ್ಬಂದಿಗಳ ಪಿಂಚಣಿ ಹಣ ನೀಡಬೇಕಾಗಿ ಬಂದಲ್ಲಿ ಸುಮಾರು 140.00 ಕೋಟಿಗಳಷ್ಟು ಹಣವನ್ನು ನೀಡಬೇಕಾಗುತ್ತದೆ.

 

 

 

ಹಾಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ನಿಶ್ಚಿತ ಠೇವಣಿ ಹಣವು ಒಂದೇ ವರ್ಷದಲ್ಲಿ ಸಂಪೂರ್ಣವಾಗಿ ಖರ್ಚಾಗುತ್ತದೆ. ಆದ್ದರಿಂದ ವಿಶ್ವವಿದ್ಯಾಲಯದ ದಿನ ನಿತ್ಯದ ಆಡಳಿತಾತ್ಮಕ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯವಾಗುತ್ತದೆ,’ ಎಂದು ಪ್ರಸ್ತಕ ಆರ್ಥಿಕ ಸ್ಥಿತಿಗತಿಯನ್ನು ಪತ್ರದಲ್ಲಿ ಕುಲಸಚಿವರು ತೆರೆದಿಟ್ಟಿದ್ದರು.

ಇನ್ನು ಏಷ್ಯಾ ಖಂಡದಲ್ಲಿಯೇ ಬಹುದೊಡ್ಡ ವಿಶ್ವವಿದ್ಯಾಲಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯವು ಈಗ ಸಾಮಾನ್ಯ ವಿಶ್ವವಿದ್ಯಾಲಯದ ಮಟ್ಟಕ್ಕೆ ಇಳಿದಿದೆ. 2014ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆ ಮತ್ತು 2021ರ ಯುವಿಸಿಇ ವಿಭಜನೆಯಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಹಾಲಿ ಆಂತರಿಕ ಸಂಪನ್ಮೂಲವು ವಾರ್ಷಿಕವಾಗಿ 80 ಕೋಟಿಗೆ ಬಂದಿಳಿದಿದೆ. ಈ ಹಣದಿಂದ ವಿಶ್ವವಿದ್ಯಾಲಯದ ಎಲ್ಲಾ ತರಹದ ಆಡಳಿತಾತ್ಮಕ ವೆಚ್ಚಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ನಿರ್ವಹಣೆಗಳನ್ನು ಒಳಗೊಂಡ ವೆಚ್ಚವನ್ನು ಭರಿಸಬೇಕಾಗಿದೆ ಎಂದು ಪತ್ರದಲ್ಲಿ ಕುಲಸಚಿವರು ವಿವರಿಸಿದ್ದರು.

ಸರ್ಕಾರದ ಸಾಧನೆ ಬಿಂಬಿಸಲು ದಿನಪತ್ರಿಕೆ ಮತ್ತು ಟಿ ವಿ ಚಾನಲ್‌ಗಳಿಗೆ ಜಾಹೀರಾತುಗಳಿಗೆ ಕೋಟ್ಯಂತರ ರುಪಾಯಿಗಳನ್ನು ವೆಚ್ಚ ಮಾಡಿದ್ದ ಈ ಹಿಂದಿನ  ಬಿಜೆಪಿ ಸರ್ಕಾರವು ವಿಶ್ವವಿದ್ಯಾಲಯಗಳಲ್ಲಿ ವಯೋ ನಿವೃತ್ತಿ, ಸ್ವಯಂ ನಿವೃತ್ತಿ ಹೊಂದಿರುವ ಅಧ್ಯಾಪಕರು, ಪ್ರಾಧ್ಯಾಪಕರಿಗೆ ಕುಟುಂಬ ಪಿಂಚಣಿ, ವಿಶ್ರಾಂತಿ ವೇತನ, ಮರಣ ಉಪದಾನ ಮತ್ತು ನಿವೃತ್ತಿ ಉಪದಾನಗಳ ಶೀರ್ಷಿಕೆಯಡಿಯಲ್ಲಿ 299.24 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು.

ವಿಶ್ವವಿದ್ಯಾಲಯಗಳಲ್ಲಿ 2016ರ ನಂತರ ನಿವೃತ್ತಿ ಹೊಂದಿದ ಪ್ರಾಧ್ಯಾಪಕರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಲು ಕನ್ನಡ ವಿಶ್ವವಿದ್ಯಾಲಯವೂ ಸೇರಿದಂತೆ ರಾಜ್ಯದ ಸಾಂಪ್ರದಾಯಿಕ 17 ವಿಶ್ವವಿದ್ಯಾಲಯಗಳು ಸಲ್ಲಿಸಿದ್ದ ಅನುದಾನದ ಕೋರಿಕೆ ಪ್ರಸ್ತಾವನೆಗಳು ಸರ್ಕಾರದ ಹಂತದಲ್ಲೇ ನೆನೆಗುದಿಗೆ ಬಿದ್ದಿದ್ದವು. ಇದರಲ್ಲಿ ಯುಜಿಸಿ 7ನೇ ಆಯೋಗದ ಅನ್ವಯ ಪರಿಷ್ಕೃತ ವೇತನಕ್ಕೆ ಪರಿಷ್ಕರಿಸಿರುವ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪಾವತಿಯ ಮೊತ್ತವೂ ಸೇರಿತ್ತು.

ಯುಜಿಸಿ 7ನೇ ಆಯೋಗದನ್ವಯ ಪರಿಷ್ಕೃತ ವೇತನಕ್ಕೆ ಪರಿಷ್ಕರಿಸಿರುವ ಪಿಂಚಣಿ, ಪಿಂಚಣಿ ಸೌಲಭ್ಯಗಳ ಪಾವತಿಗಾಗಿ ಮೈಸೂರು ವಿಶ್ವವಿದ್ಯಾಲಯವು ಒಟ್ಟು 15,14,43,829 ಕೋಟಿ ರು ಮತ್ತು ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ, ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ 2016ರ ನಂತರ ನಿವೃತ್ತಿ ಹೊಂದಿರುವ ಅಧ್ಯಾಪಕರುಗಳಿಗೆ 2016ನೇ ಯುಜಿಸಿ ಪರಿಷ್ಕೃತ ಪಿಂಚಣಿ ಸೌಲಭ್ಯದ 154.57 ಕೋಟಿ ರು. .ಗಳ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು.

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 2016ರ ನಂತರ ವಯೋ ನಿವೃತ್ತಿ, ಸ್ವಯಂ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರಿಗೆ ಒಟ್ಟು 299, 24,33,378 ರು. ಅನುದಾನ ಕೋರಿಕೆ ಸಲ್ಲಿಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಉನ್ನತ ಶಿಕ್ಷಣ ಇಲಾಖೆಯು ಕಳೆದ ಒಂದು ವರ್ಷದಿಂದ ಆರ್ಥಿಕ ಇಲಾಖೆಯ ಜತೆ ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡಿತ್ತು.

 

ಪಿಂಚಣಿ ಅನುದಾನ ಕೋರಿಕೆ ಪಟ್ಟಿ

ಮೈಸೂರು ವಿಶ್ವವಿದ್ಯಾಲಯ – 50,70, 91,704 ರು., ಕರ್ನಾಟಕ ವಿ ವಿ – 5,72,23,832 ರು., ಬೆಂಗಳೂರು ವಿ ವಿ – 29, 62, 02, 932 ರು, ಗುಲ್ಬರ್ಗಾ ವಿ ವಿ – 7, 29, 17, 585 ರು., ಮಂಗಳೂರು ವಿ ವಿ – 11, 83, 57,195 ರು., ಕನ್ನಡ ವಿ ವಿ – 4, 59, 90, 595 ರು., ಕುವೆಂಪು ವಿ ವಿ – 1, 40, 85,509 ರು., ಅಕ್ಕಮಹಾದೇವಿ ಮಹಿಳಾ ವಿ ವಿ – 80, 20, 341 ರು., ದಾವಣಗೆರೆ ವಿ ವಿ – 6, 49, 55, 545 ರು., ವಿಜಯನಗರ ವಿ ವಿ – 1, 19, 37, 694 ರು., ಬೆಳಗಾವಿ ವಿ ವಿ – 7, 81, 47, 268 ರು., ಕರ್ನಾಟಕ ಮುಕ್ತ ವಿ ವಿ – 2, 03, 12, 228 ರು, ಕಾಲೇಜು, ತಾಂತ್ರಿಕ ಶಿಕ್ಷಣ – 154, 57, 47, 121 ರು. ಕೋರಿತ್ತು.

2016ರ ಜನವರಿ 1ರ ನಂತರ ವಯೋ ನಿವೃತ್ತಿ ಹೊಂದಿರುವ ಅಧ್ಯಾಪಕರುಗಳಿಗೆ 7ನೇ ವೇತನ ಆಯೋಗದ ಅನ್ವಯ ಪರಿಷ್ಕೃತ ವೇತನಕ್ಕೆ ಪಿಂಚಣೀ ಸೌಲಭ್ಯಗಳನ್ನು ಮಂಜೂರು ಮಾಡಿತ್ತು. ಮೇ 2020ರ ನಂತರ ಪ್ರತಿತಿಂಗಳು ಪಿಂಚಣಿಯನ್ನು ಮಾತ್ರ ಪಾವತಿಸಲಾಗುತ್ತಿತ್ತು.  2016ರ ನಂತರ ನಿವೃತ್ತಿ ಹೊಂದಿದ ಅಧ್ಯಾಪಕರಿಗೆ ಇತರೆ ಪಿಂಚಣಿ ಸೌಲಭ್ಯಗಳನ್ನು ನೀಡಲು 50, 70, 91, 704 ರು.ಗಳ ಅನುದಾನವನ್ನು ಬಿಡುಗಡೆ ಮಾಡಲು ಮೈಸೂರು ವಿಶ್ವವಿದ್ಯಾಲಯವು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿತ್ತು .

Hot this week

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

Topics

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

Related Articles

Popular Categories

error: Content is protected !!