Thursday | April 16, 2026 |

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ

ಬೆಂಗಳೂರು; ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ, ಕಂದಾಯ, ಶಿಕ್ಷಣ, ಕಲ್ಯಾಣ, ಅರಣ್ಯ, ತೋಟಗಾರಿಕೆ, ಸಾಮಾನ್ಯ ಇಲಾಖೆಗಳಲ್ಲಿ 2023-24ನೇ ಸಾಲಿಗೆ ಸಂಬಂಧಿಸಿದಂತೆ  ಒಟ್ಟಾರೆ 1704, 69, 63, 162.00 ರು ಗಳಿಗೆ ಮುಖ್ಯ ಲೆಕ್ಕ ಪರಿಶೋಧಕರು ಆಕ್ಷೇಪಣೆ ವ್ಯಕ್ತಪಡಿಸಿರುವುದು ಇದೀಗ ಬಹಿರಂಗವಾಗಿದೆ.

ಅದಷ್ಟೇ ಅಲ್ಲ 2023-24ನೇ ಸಾಲಿನಲ್ಲಿ ರಸ್ತೆ, ಚರಂಡಿ, ಸುರಂಗ ಮಾರ್ಗ, ಮೇಲ್ಸೇತುವೆ, ಸೇತುವೆ, ಕಟ್ಟಡಗಳ ನಿರ್ಮಾಣ ಮಾಡಲು ವಾರ್ಷಿಕವಾಗಿ ಸಾವಿರಾರು ಕೋಟಿ ರುಪಾಯಿ ವೆಚ್ಚ ಮಾಡುತ್ತಿದ್ದರೂ ಸಹ ಹಿಂದಿನ ಸಾಲಿನ ಮೊತ್ತ 17.16 ಕೋಟಿ ರುಗಳನ್ನು  ಚಾಲ್ತಿ ಬಂಡವಾಳ ವೆಚ್ಚದ ಕಾಮಗಾರಿಗೆ ಪರಿಗಣಿಸಿದೆ. ಪಾಲಿಕೆ ಅಧಿಕಾರಿಗಳ ಈ ನಡೆಯೂ ಸಹ ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಗೆ ಪೂರ್ಣ ಪ್ರಮಾಣದ ದಾಖಲೆಗಳನ್ನೂ ನೀಡಿಲ್ಲ. ಹೀಗಾಗಿ ಲೆಕ್ಕ ಪರಿಶೋಧನೆಗೆ ತೊಡಕಾಗಿದೆ ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯಿಸಿದ್ದಾರೆ.

2023-24ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಮುಖ್ಯ ಲೆಕ್ಕ ಪರಿಶೋಧಕರು ನೀಡಿರುವ ವರದಿಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆರ್ಥಿಕ ಅಶಿಸ್ತಿನ ಹಲವು ಮುಖಗಳನ್ನು ತೆರೆದಿಟ್ಟಿದೆ. ಮುಖ್ಯ ಲೆಕ್ಕ ಪರಿಶೋಧಕರು ನೀಡಿದ್ದ ವರದಿಯನ್ನು ನಗರಾಭಿವೃದ್ಧಿ ಸಚಿವರೂ ಆಗಿರುವ  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಸಹ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

2023-24ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲೆಕ್ಕ ಪರಿಶೋಧನೆಯ ತೊಡಕುಗಳು

ನಗದು ಪುಸ್ತಕವನ್ನು ಅಸಮಪರ್ಕವಾಗಿ ನಿರ್ವಹಣೆ ಮಾಡಲಾಗಿದೆ. ಪೂರ್ಣ ಪ್ರಮಾಣದ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಲಭ್ಯವಾಗಿಲ್ಲ. ಪಾವತಿ ವೋಚರ್‍‌ಗಳು ಹಾಗೂ ಪೂರಕ ದಾಖಲೆಗಳನ್ನು ಪರಿಶೀಲನೆಗೆ ಹಾಜರುಪಡಿಸಿಲ್ಲ. ಅಸಮರ್ಪಕ ಕಾರಣಗಳನ್ನು ನೀಡಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿ ವರ್ಗವು  ಲೆಕ್ಕ ತನಿಖೆಯನ್ನು ಮುಂದೂಡಲು ಕೋರಿತ್ತು. ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ಲೆಕ್ಕ ಪರಿಶೋಧನೆ ವೇಳೆಯಲ್ಲಿ  ಹಾಜರಿರಲಿಲ್ಲ. ಅಧಿಕಾರಿ ವರ್ಗದ ಅಸಹಕಾರ ಮನೋಭಾವನೆಯಿಂದ ನಿಗದಿತ ಅವಧಿಯಲ್ಲಿ ದಾಖಲೆಗಳು ಲೆಕ್ಕ ಪರಿಶೋಧನೆಗೆ ಲಭ್ಯವಾಗಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ವಾರ್ಷಿಕ ಲೆಕ್ಕ ಪತ್ರಗಳನ್ನು ನಿಗದಿತ ಅವಧಿಯಲ್ಲಿ ಸಿದ್ಧಪಡಿಸಿಲ್ಲ ಮತ್ತು ಅದನ್ನು ಸಮುಚಿತ ಮಾರ್ಗದಲ್ಲಿ ಮುಖ್ಯ ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ. ನಿಯಮಾನುಸಾರ ಲೆಕ್ಕ ಪತ್ರಗಳನ್ನೂ ಸಮನ್ವಯಗೊಳಿಸಿಲ್ಲ. ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳು, ಪೂರಕ ದಾಖಲೆಗಳು ಮತ್ತು ನಿಗದಿತ ನಮೂನೆಯ ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಅದೇ ರೀತಿ ತಂತ್ರಾಂಶಗಳಲ್ಲಿ ಲಾಗಿನ್ ಐಡಿಗಳನ್ನು ಲೆಕ್ಕ ಪರಿಶೋಧಕರಿಗೆ ಸೃಜಿಸಿ ನೀಡಿರಲಿಲ್ಲ. ಹೀಗಾಗಿ ಲೆಕ್ಕ ಪರಿಶೋಧನೆಗೆ ಪೂರ್ಣ ಪ್ರಮಾಣದ ಮಾಹಿತಿ, ದಾಖಲೆಗಳೇ ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

ಹಾಗೆಯೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಲೆಕ್ಕ ಪತ್ರಗಳ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಕಾಯ್ದೆ 2020ರ ಅಧ್ಯಾಯ 14ರ ಪ್ರಕಾರ 2023-24ನೇ ಸಾಲಿನ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ ಗುಣಮಟ್ಟ 1ರಿಂದ 32ರ ವರೆಗಿನ ನಮೂನೆಗಳಲ್ಲಿ ಸಿದ್ಧಪಡಿಸಬೇಕು. ಆದರೆ ಈ ರೀತಿ ಕ್ರಮವಹಿಸಿಲ್ಲ ಎಂದು ಹೇಳಿರುವ ಲೆಕ್ಕ ಪರಿಶೋಧಕರು ಈ ಸಾಲಿನಲ್ಲಿಯೂ ಕೂಡ ಸಿಗ್ನಲ್ ಎಂಟ್ರಿ ಕ್ಯಾಷ್ ಬೇಸಿಸ್ ಸಿಸ್ಟಂ ವಿಧಾನದ ಮೂಲಕವೇ ಲೆಕ್ಕಪತ್ರಗಳ ನಿರ್ವಹಣೆ ಮಾಡಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಿದೆ.

ಮತ್ತೊಂದು ವಿಶೇಷವೆಂದರೇ 1964-65ರಿಂದ 2023-24ನೇ ಸಾಲಿನವರೆಗೆ ವಾರ್ಷಿಕ ಲೆಕ್ಕ ಪರಿಶೋಧನೆ ವರದಿಗಳಲ್ಲಿ 14,653.62 ಕೋಟಿ ರುಪಾಯಿ ಆಕ್ಷೇಪಿಸಿತ್ತು. ಈ ಪೈಕಿ 4,245.02 ಕೋಟಿ ರು  ವಸೂಲಾಗದೇ ಬಾಕಿ ಉಳಿದಿದೆ.

 

 

2023-24ರ ವರ್ಷವೊಂದರಲ್ಲೇ ಸಾಮಾನ್ಯ ಆಡಳಿತ, ಕಾಮಗಾರಿ, ಕಂದಾಯ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಒಟ್ಟಾರೆ 173 ಆಕ್ಷೇಪಣೆ ಕಂಡಿಕೆಗಳಿವೆ. 105.62 ಕೋಟಿ ರು ಮೊತ್ತಕ್ಕೆ ಲೆಕ್ಕಪರಿಶೋಧಕರು ಆಕ್ಷೇಪಣೆ ಮಾಡಿದ್ದರು. ಈ ಪೈಕಿ 2,90,21,734 ರು ಮಾತ್ರ ವಸೂಲಾಗಿದೆ.

 

 

ಅಲ್ಲದೇ 2023-24ನೇ ಸಾಲಿನ ತೀರುವಳಿ ನಂತರ ಕ್ರೋಢಿಕೃತ ವರದಿಯಲ್ಲಿ 1704,69,63,162  ರು ಗಳಿಗೆ ಆಕ್ಷೇಪಣೆ ಇತ್ತು. ಈ ಪೈಕಿ 246,12,59,186 ರು ವಸೂಲಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿದೆ.

ಕಾಮಗಾರಿ ವಿಭಾಗದಲ್ಲಿ ಒಟ್ಟು 207 ಆಕ್ಷೇಪಣೆ ಕಂಡಿಕೆಗಳಿವೆ. ಇದರಲ್ಲಿ  459, 55, 08, 828 ರು.ಗಳನ್ನು ಆಕ್ಷೇಪಣೆ ವ್ಯಕ್ತಪಡಿಸಿದೆ. ಈ ಪೈಕಿ 32,76,57,952 ರು ವಸೂಲಾಗಿದೆ. ಹಣಕಾಸು ವಿಭಾಗದಲ್ಲಿ 44 ಕಂಡಿಕೆಗಳಲ್ಲಿ 10004, 28, 34,763 ರು ಆಕ್ಷೇಪಣೆ ಪೈಕಿ 62,27,86,733 ರು ವಸೂಲು ಮಾಡಿದೆ. ಕಂದಾಯ ವಿಭಾಗದಲ್ಲಿ  42 ಆಕ್ಷೇಪಣೆಗಳಲ್ಲಿ 22,39,82,149 ರು ಆಕ್ಷೇಪಣೆ ಮಾಡಿತ್ತು. ಈ ಪೈಕಿ 84, 98,23,136 ವಸೂಲಾಗಿದೆ. ನಗರ ಯೋಜನೆಯಲ್ಲಿ 140, 20,46,742 ರು ಆಕ್ಷೇಪಣೆ ಪೈಕಿ 10,13,05,457 ರು ವಸೂಲು ಮಾಡಲಾಗಿತ್ತು. ಆರೋಗ್ಯ ವಿಭಾಗದಲ್ಲಿ 31,08,91,573 ರು ಆಕ್ಷೇಪಿಸಿತ್ತು. ಈ ಪೈಕಿ 3,51,85,969 ರು ವಸೂಲಾಗಿತ್ತು. ಶಿಕ್ಷಣ ವಿಭಾಗದಲ್ಲಿ 55,15,190 ರು ಆಕ್ಷೇಪಣೆ ಮೊತ್ತದ ಪೈಕಿ 24,220 ರು ಮಾತ್ರ ವಸೂಲಾಗಿತ್ತು.

 

 

ಕಲ್ಯಾಣ ವಿಭಾಗದಲ್ಲಿ 39,22,72,963 ರು ಆಕ್ಷೇಪಣೆ ಮೊತ್ತದ ಪೈಕಿ 3,79,000 ರು ವಸೂಲಾಗಿತ್ತು. ಅರಣ್ಯ ವಿಭಾಗದಲ್ಲಿ 31,613 ರು ಆಕ್ಷೇಪಣೆ ಮಾಡಲಾಗಿತ್ತಾದರೂ ಈ ಪೈಕಿ ನಯಾ ಪೈಸೆಯೂ ವಸೂಲಾಗಿಲ್ಲ. ತೋಟಗಾರಿಕೆ ವಿಭಾಗದಲ್ಲಿ 9,46,920 ರು ಆಕ್ಷೇಪಣೆ ಮೊತ್ತದ ಪೈಕಿ 13,61,938 ರು ವಸೂಲಾಗಿತ್ತು. ಸಾಮಾನ್ಯ ವಿಭಾಗದಲ್ಲಿ 7,29,32,421 ರು ಆಕ್ಷೇಪಣೆ ಮೊತ್ತದ ಪೈಕಿ 52,27,34,781 ರು ವಸೂಲಾಗಿತ್ತು.

ಜಿಬಿಎಯ ಆರ್ಥಿಕ ಪರಿಸ್ಥಿತಿ ಹೇಗಿದೆ?

2023-24ನೇ ಸಾಲಿನ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ವಾರ್ಷಿಕ ಲೆಕ್ಕ ಪತ್ರಗಳನ್ನು ದೃಢೀಕರಿಸಿ 2025ರ ಏಪ್ರಿಲ್‌ 29ರಂದು ವಿಶೇಷ ಆಯುಕ್ತರು ಮುಖ್ಯ ಲೆಕ್ಕಾಧಿಕಾರಿಗಳಿಗೆ ಸಲ್ಲಿಸಿದ್ದರು. ಇದರ ಪ್ರಕಾರ ಸ್ವೀಕೃತಿ ರೂಪದಲ್ಲಿ  10,744.00 ಕೋಟಿ ರು ಇದ್ದರೇ   ಪಾವತಿ ರೂಪದಲ್ಲಿ 10,079 ಕೋಟಿ ರು ಇತ್ತು ಎಂದು ವಿವರಿಸಿದ್ದರು.

 

2023ರ ಏಪ್ರಿಲ್‌ 1ರಂದು ಜಿಬಿಎ (ಅಂದಿನ ಬಿಬಿಎಂಪಿ)ಯಲ್ಲಿ  2,507.18 ಕೋಟಿ ರು ಆರಂಭಿಕ ಶಿಲ್ಕಿನ ರೂಪದಲ್ಲಿತ್ತು. 2023-24ನೇ ಸಾಲಿನಲ್ಲಿ ಸ್ವೀಕೃತಿ ರೂಪದಲ್ಲಿ (operating receipt)  5,324.74 ಕೋಟಿ, 2023-24ನೇ ಸಾಲಿನಲ್ಲಿ ಸ್ವೀಕೃತಿ (Non-Operating Receipt) 5,420.18 ಕೋಟಿ ರು ಸೇರಿ ಒಟ್ಟಾರೆ 13,252.10 ಕೋಟಿ ರು ಇತ್ತು.

 

 

2023-24ನೇ ಸಾಲಿನಲ್ಲಿ ಪಾವತಿಗಳು (OPERATING PAYMENTS) 3,949.23 ಕೋಟಿ ರು ಇದ್ದರೇ ಇದೇ ಸಾಲಿನಲ್ಲಿ ಪಾವತಿಗಳು (NON OPERATING PAYMENTS) 6,130.92  ಕೋಟಿ ರು ಇತ್ತು. ಒಟ್ಟಾರೆ 10,080.15 ಕೋಟಿ ರು ಇತ್ತು. 2024ರ ಮಾರ್ಚ್‌ 31ರ ಅಂತ್ಯಕ್ಕೆ ಅಂತಿಮ ಶಿಲ್ಕಿನ ರೂಪದಲ್ಲಿ 3,171.95 ಕೋಟಿ ರು ಇತ್ತು ಎಂದು ಮುಖ್ಯ ಲೆಕ್ಕಪರಿಶೋಧಕರು ವಿವರಿಸಿರುವುದು ಗೊತ್ತಾಗಿದೆ.

ಲೆಕ್ಕಪತ್ರಗಳಲ್ಲಿ ನೈಜತೆ ಇದೆಯೇ?

2023-24ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ವಿಶೇಷ ಆಯುಕ್ತರು ಸಲ್ಲಿಸಿದ್ದ  ವಾರ್ಷಿಕ ಲೆಕ್ಕ ಪತ್ರಗಳನ್ನು ಮುಖ್ಯ ಲೆಕ್ಕಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಲೆಕ್ಕ ಪತ್ರಗಳ ನೈಜತೆ ಕುರಿತು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ವಿಶೇಷ ಆಯುಕ್ತರು ಒದಗಿಸಿದ್ದ  ಸ್ವೀಕೃತಿ, ಪಾವತಿ, ತಃಖ್ತೆ, ಆದಾಯ, ವೆಚ್ಚದ ಲೆಕ್ಕ, ಬ್ಯಾಲೆನ್ಸ್ ಶೀಟ್‌ಗಳನ್ನು ಒದಗಿಸಿದ್ದಾರಾದರೂ ಅವುಗಳಿಗೆ ಸಂಬಂಧಿಸಿದ ಅನುಸೂಚಿಗಳ ಪೂರ್ಣ ಮಾಹಿತಿಯು ಲಭ್ಯವಿರಲಿಲ್ಲ. ಲೆಕ್ಕಪತ್ರಗಳ ಅಲಭ್ಯತೆ ಕಾರಣದಿಂದಾಗಿ ಲೆಕ್ಕಪತ್ರಗಳ ನೈಜತೆಯನ್ನು ಪರಿಶೀಲಿಸಲು ಸಾಧ್ಯವಾಗಿರುವುದಿಲ್ಲ ಎಂದು ಮುಖ್ಯ ಲೆಕ್ಕಾಧಿಕಾರಿಗಳು ತಮ್ಮ ವರದಿಯಲ್ಲಿ  ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

42,208.74 ಕೋಟಿ ಮೌಲ್ಯದ ಸ್ಥಿರಾಸ್ತಿಗೆ ವಿವರಣೆಗಳೇ ಇಲ್ಲ

2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಬ್ಯಾಲೆನ್ಸ್‌ ಶೀಟ್‌ ಪ್ರಕಾರ ಒಟ್ಟಾರೆ 42,208.74 ಕೋಟಿ ರು ಮೌಲ್ಯದ ಸ್ಥಿರಾಸ್ತಿ ಹೊಂದಿದೆ. ಆದರೆ ಇಷ್ಟು ಮೊತ್ತದ ಸ್ಥಿರಾಸ್ತಿಗಳು ಯಾವುವು, ಇವುಗಳ ಸ್ವಾಧೀನದ ದಿನಾಂಕ, ಸ್ವತ್ತಿನ  ಮೌಲ್ಯ, ಸ್ಥಿರಾಸ್ತಿ ನೋಂದಣಿ ವಿವರ, ಅಳತೆ, ಸ್ಥಳ ವಿವರ ಇತ್ಯಾದಿಗಳ ವಿವರಗಳು ಮುಖ್ಯ ಲೆಕ್ಕಾಧಿಕಾರಿಗಳಿಗೆ ಲಭ್ಯವಿರಲಿಲ್ಲ. ಈ ಎಲ್ಲಾ ಸ್ಥಿರಾಸ್ತಿಗಳನ್ನು ಈ ಮೇಲಿನ ಅಂಶಗಳನ್ನು ಆಧರಿಸಿದ ವಹಿಯಲ್ಲಿ ನಿರ್ವಹಿಸಿದ್ದಲ್ಲಿ ಮಾತ್ರವೇ ಈ ಅಂಶವನ್ನು ಪರಿಗಣಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯ ಲೆಕ್ಕಾಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ಅಲ್ಲದೆ ಪಾವತಿಗಳನ್ನು ಪರಿಗಣಿಸಿ ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸಿರುವುದನ್ನು ಮುಖ್ಯ ಲೆಕ್ಕಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ವಾ‍ರ್ಷಿಕ ನೈಜ ಮೌಲ್ಯಮಾಪನ ವ್ಯವಸ್ಥೆ ಅಳವಡಿಸಿಕೊಂಡಿಲ್ಲವೇಕೆ?

ನಕ್ಷೆ ಮಂಜೂರಾತಿ ಸಂದರ್ಭದಲ್ಲಿ ಉಚಿತವಾಗಿ ಪಾಲಿಕೆ ಹೆಸರಿಗೆ ರಿಲಿಂಕ್ವಿಶ್‌ಮೆಂಟ್‌ ಡೀಡ್‌ ಮೂಲಕ ವರ್ಗಾವಣೆಯಾದ ಸ್ವತ್ತುಗಳನ್ನು ಪರಿಗಣಿಸಿಲ್ಲ. ಅಲ್ಲದೇ ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‍‌) ನಿಧಿ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಹಿಸಿದ್ದ ಕಾಮಗಾರಿಗಳು, ನೀಡಿದ ಕೊಡುಗೆಗಳನ್ನು ಪರಿಗಣಿಸಿಲ್ಲ. ಪಾಲಿಕೆಯು ಹೊಂದಿರುವ ಪಾರಂಪರಿಕ ಕಟ್ಟಡಗಳು ಸೇರಿದಂತೆ ಎಲ್ಲಾ ಆಸ್ತಿಗಳ ವಾರ್ಷಿಕ ನೈಜ್ಯ ಮೌಲ್ಯಮಾಪನ ಮಾಡುವಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಈ ಸಂಬಂಧ ಯಾವುದೇ ದಾಖಲೆಗಳನ್ನೂ ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಹೀಗಾಗಿ ವಾರ್ಷಿಕ ಲೆಕ್ಕಗಳಲ್ಲಿನ ಈ ಮೊತ್ತವು ಕ್ರಮಬದ್ಧವಾಗಿದೆ ಎಂದು ದೃಢೀಕರಿಸಲು ಸಾಧ್ಯವಾಗಿರುವುದಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮತ್ತೊಂದು ವಿಶೇಷವೆಂದರೇ ಪಾಲಿಕೆಯು ತನ್ನ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚರಂಡಿ ಕಾಮಗಾರಿಗಳು ಮೇಲು ಸೇತುವೆಗಳು, ಸೇತುವೆಗಳು, ಸುರಂಗ ಮಾರ್ಗಗಳು, ಕಟ್ಟಡಗಳ ನಿರ್ಮಾಣ ಸೇರಿದಂತೆ ಇತರೆ ಎಲ್ಲಾ ಕಾಮಗಾರಿಗಳಿಗೆ ವಾರ್ಷಿಕವಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಹಾಗೆಯೇ ಸರ್ಕಾರವೂ ಕೂಡ ಬಂಡವಾಳ ವೆಚ್ಚದ ಕಾಮಗಾರಿಗಳಿಗೆ ಅನುದಾನವನ್ನೂ ನೀಡುತ್ತಿದೆ. ಹೀಗಿದ್ದರೂ ಕೂಡ ಹಿಂದಿನ ಸಾಲಿನ ಮೊತ್ತ 17.16 ಕೋಟಿ ರು ಮಾತ್ರ ಚಾಲ್ತಿ ಬಂಡವಾಳ ವೆಚ್ಚದ ಕಾಮಗಾರಿ ಎಂದು ಪರಿಗಣಿಸಿರುವುದನ್ನು ಮುಖ್ಯ ಲೆಕ್ಕಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

 

 

ಈ ಸಂಬಂಧ ಯಾವುದೇ ವಿವರಗಳನ್ನು ಲೆಕ್ಕ ಪರಿಶೋಧಕರಿಗೆ ವಿವರಗಳನ್ನು ಒದಗಿಸಿಲ್ಲ. ಹೀಗಾಗಿ ವಾರ್ಷಿಕ ಲೆಕ್ಕಗಳಲ್ಲಿನ ಈ ಮೊತ್ತವು ಕ್ರಮಬದ್ಧವಾಗಿದೆ ಎಂದು ದೃಢೀಕರಿಸಲು ಸಾಧ್ಯವಾಗಿರುವುದಿಲ್ಲ ಎಂದು ಮುಖ್ಯ ಲೆಕ್ಕಾಧಿಕಾರಿಗಳು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.

Hot this week

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

Topics

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

Related Articles

Popular Categories

error: Content is protected !!