Monday | November 16, 2026 |

ಕನ್ನಾಳೆಗೆ ಪೆನ್‌ಡ್ರೈವ್‌ನಲ್ಲಿ ಪ್ರಶ್ನೆ, ಉತ್ತರ ಹಂಚಿಕೆ, ಟ್ಯಾಬ್ಲೆಟ್‌ ತುಂಡುತುಂಡಾಗಿಸಿ ನಾಶಪಡಿಸಿದ್ದ ಗ್ಯಾನೇಂದ್ರ ; ಅಕ್ರಮದ ಹಿಂದಿನ ರಹಸ್ಯ ಬಯಲು ಮಾಡಿದ ಚಾರ್ಜ್ ಶೀಟ್‌

ಬೆಂಗಳೂರು; ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ  ಸಾಮಾನ್ಯ ವಿಜ್ಞಾನ ಮತ್ತು ನಿರ್ದಿಷ್ಟ ವಿಷಯದ ಪ್ರಶ್ನೆಪತ್ರಿಕೆಗಳಿಂದ ಸುಮಾರು 70ರಿಂದ 80 ಪ್ರಶ್ನೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‍‌ ಗಂಗ್ವಾರ್ ಅವರು  ಪೆನ್‌ಡ್ರೈವ್‌ನಲ್ಲಿ  ಬಸವರಾಜ್ ಕನ್ನಾಳೆ ಅವರಿಗೆ ಹಂಚಿಕೊಂಡಿದ್ದರು.

ಅಲ್ಲದೇ ಈ ಪೆನ್‌ ಡ್ರೈವ್‌ನ್ನು ತಮ್ಮದೇ ನಿವಾಸದಲ್ಲಿ ನೀಡಿದ್ದರು. ಹಾಗೆಯೇ ಮುದ್ರಣಕ್ಕೆ ಅನುಮತಿ ನೀಡುವ ಅಂತಿಮ ಕರಡು ಹಂತದಲ್ಲಿ, ತಮ್ಮ ಕಚೇರಿ ಕೊಠಡಿಯಲ್ಲಿ Xiaomi ಟ್ಯಾಬ್ಲೆಟ್ ಬಳಸಿ ಪ್ರಶ್ನೆಪತ್ರಿಕೆಗಳ ಚಿತ್ರಗಳನ್ನು ಕಾಪಿ ಮಾಡಿಕೊಂಡಿದ್ದರು.  ಅದೇ ದಿನ ಟ್ಯಾಬ್ಲೆಟ್ ಅನ್ನು ತುಂಡುಗಳಾಗಿ ಒಡೆದು ಕಸದ ಬುಟ್ಟಿಗೆ ಎಸೆಯುವ ಮೂಲಕ ಅದನ್ನು  ನಾಶಪಡಿಸಿದ್ದರು.

ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿನ ಅಕ್ರಮಗಳು ಮತ್ತು ಹಣಕಾಸಿನ ವಹಿವಾಟಿನ ಜಾಡನ್ನು ತನಿಖೆ ಮಾಡಿರುವ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಜ್ಞಾನೇಂದ್ರ ಗಂಗ್ವಾರ್‍‌ ನೀಡಿರುವ ಹೇಳಿಕೆಯಲ್ಲಿ ಹಲವು ಕುತೂಹಲಕಾರಿಯಾದ ಮಾಹಿತಿ ಇದೆ.

ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಪಿಎಂಎಲ್‌ಎ 2022ರ ಸೆಕ್ಷನ್‌ 50ರ ಅಡಿಯಲ್ಲಿ 2026ರ ಸೆ.13, 16, 17, 22, 23, 24, 25, 26, 29ರಂದು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದರು.

 

 

 

ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣ

ಜನವರಿ/ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ ಹೆಚ್ಚುವರಿ ಹೊಣೆಗಾರಿಕೆಯಾಗಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸಿದ್ಧತೆ, ಮೌಲ್ಯಮಾಪನ ಪ್ರಕ್ರಿಯೆಗಳು ಮತ್ತು ಮೆರಿಟ್ ಪಟ್ಟಿಗಳ ತಯಾರಿಕೆಯಲ್ಲಿ ಭಾಗಿಯಾಗಿದ್ದರು. ಪ್ರಶ್ನೆಪತ್ರಿಕೆಗಳನ್ನು ಮುದ್ರಣ ಮಾಡುವ ಮುದ್ರಣಾಲಯವನ್ನು ಆಯ್ಕೆ ಮಾಡುವ ಅಧಿಕಾರ ತಮ್ಮ ಬಳಿ ಇತ್ತು.  ಮತ್ತು ಮುದ್ರಣಾಲಯದೊಂದಿಗೆ ತಾವೇ ಸಂಪರ್ಕ ಸಾಧಿಸುತ್ತಿದ್ದರು. ಅಲ್ಲದೇ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಮುದ್ರಣ ಕಾರ್ಯವನ್ನು ರಾಜಸ್ಥಾನದ ಜೈಪುರದಲ್ಲಿರುವ ಮುದ್ರಣಾಲಯಕ್ಕೆ ವಹಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಖುದ್ದು ಜ್ಞಾನೇಂದ್ರಕುಮಾರ್ ಗಂಗ್ವಾರ್‍‌ ಅವರು ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

 

 

ಚರ-ಸ್ಥಿರಾಸ್ತಿ ಎಷ್ಟಿದೆ?

ಜ್ಞಾನೇಂದ್ರ ಕುಮಾರ್ ಗಂಗ್ವಾರ್‍‌ ಅವರು ಹೊಂದಿರುವ ಚರ ಮತ್ತು ಸ್ಥಿರಾಸ್ತಿಗಳ ಕುರಿತು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ಪ್ರಶ್ನಿಸಿದ್ದರು. ಇದಕ್ಕೆ ಗಂಗ್ವಾರ್‍‌, 2023–2024ರಲ್ಲಿ ಬರೇಲಿ ನಗರದಲ್ಲಿ ಸುಮಾರು ರೂ.25 ಲಕ್ಷಕ್ಕೆ ಮನೆಯನ್ನು ಖರೀದಿಸಿದ್ದಾಗಿ ತಿಳಿಸಿದ್ದರು. 2022ರಲ್ಲಿ ಬರೇಲಿಯಲ್ಲಿ ಸುಮಾರು ರೂ.6 ಲಕ್ಷಕ್ಕೆ ಕೃಷಿ ಭೂಮಿಯನ್ನು ಖರೀದಿಸಿದ್ದರು. ಬೆಂಗಳೂರಿನ ಸೀಗೆಹಳ್ಳಿ ಗ್ರಾಮದಲ್ಲಿ ಆಕ್ಸಿಸ್ ಬ್ಯಾಂಕ್‌ನಿಂದ ಪಡೆದ ಸಾಲದ ಮೂಲಕ ನಿವೇಶನದಲ್ಲಿ ಹೂಡಿಕೆ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಆ ನಿವೇಶನ ಇನ್ನೂ ತಮ್ಮ ಹೆಸರಿಗೆ ನೋಂದಣಿಯಾಗಿಲ್ಲ ಎಂದು ತನಿಖಾಧಿಕಾರಿ ಮುಂದೆ  ಹೇಳಿದ್ದಾರೆ. ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿಗಳ ಸಂಪೂರ್ಣ ವಿವರಗಳು ನೆನಪಿಲ್ಲ ಎಂದು ತಿಳಿಸಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

 

 

ಷೇರು, ಸ್ಟಾಕ್‌ಗಳಲ್ಲಿ ಹೂಡಿಕೆ ವಿವರ ಬಹಿರಂಗ

ಇಂಡಿಮನಿ (IndiMoney) ಅಪ್ಲಿಕೇಶನ್ ಮತ್ತು ಝೆರೋಧಾ (Zerodha) ಮೂಲಕ ಷೇರುಗಳು ಮತ್ತು ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿರುವ ವಿವರಗಳನ್ನು ತನಿಖಾಧಿಕಾರಿ ಮುಂದೆ ಗಂಗ್ವಾರ್  ಬಹಿರಂಗಪಡಿಸಿದ್ದಾರೆ. ಸಿಐಡಿಯಿಂದ ಬಂಧನಕ್ಕೊಳಗಾಗುವ ಮೊದಲು ತಾವು ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಮತ್ತು ಮೊಬೈಲ್ ಫೋನ್‌ಗಳ ಪಟ್ಟಿಯ ಕುರಿತು ತನಿಖಾಧಿಕಾರಿಯು ವಿಚಾರಿಸಿದ್ದರು. ನಿಯಮಿತವಾಗಿ 9650740431 ಮತ್ತು 8748896539 ಸಂಖ್ಯೆಗಳ ಮೊಬೈಲ್‌ಗಳನ್ನು ಬಳಸುತ್ತಿದ್ದೆ ಎಂದು ತಿಳಿಸಿದ್ದಾರೆ. ಇದಲ್ಲದೆ, 7892795267 ಸಂಖ್ಯೆಯನ್ನು ತಾತ್ಕಾಲಿಕವಾಗಿ ಬಳಸಿದ್ದಾಗಿಯೂ ತಿಳಿಸಿದ್ದಾರೆ. 8748896539 ಮತ್ತು 7892795267 ಮೊಬೈಲ್ ಸಂಖ್ಯೆಗಳು ತಮ್ಮ ಹೆಸರಿನಲ್ಲಿ ನೋಂದಣಿಯಾಗಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ನಿಯಂತ್ರಕರಾಗಿ ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ವಿವರಣೆ ನೀಡಿದ್ದರು.  ವಿಚಾರಿಸಿದಾಗ ‘ತಾವು ಗೌಪ್ಯ ಶಾಖೆ–I (Confidential Branch-I)ಯ ಸದಸ್ಯರೊಂದಿಗೆ ಸೇರಿ ಸರ್ಕಾರಿ ವಿಶ್ವವಿದ್ಯಾಲಯಗಳ ವಿಷಯ ತಜ್ಞರನ್ನು ಆಯ್ಕೆ ಮಾಡುತ್ತಿದ್ದೆವು ಮತ್ತು ಅವರಿಂದ ಕರಡು ಪ್ರಶ್ನೆಗಳನ್ನು ಪಡೆಯುತ್ತಿದ್ದೆವು,’ ಎಂದು ತಿಳಿಸಿದ್ದಾರೆ.

 

 

ಪ್ರಶ್ನೆಪತ್ರಿಕೆಗಳನ್ನು ಭದ್ರತೆ ಹಾಗೂ tamper-evident ವ್ಯವಸ್ಥೆಯುಳ್ಳ ಪ್ಯಾಕಿಂಗ್‌ನಲ್ಲಿ ಹಸ್ತಾಂತರಿಸಲಾಗುತ್ತಿತ್ತು. ನಿಗದಿತ ಭದ್ರತಾ ವ್ಯವಸ್ಥೆಗಳ ಅಡಿಯಲ್ಲಿ ಅವುಗಳನ್ನು ಸಂಬಂಧಿತ ಖಜಾನೆ ಕಚೇರಿಗಳು ಮತ್ತು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲಾಗುತ್ತಿತ್ತು ಎಂದು ವಿವರಿಸಿದ್ದಾರೆ.

ಪರೀಕ್ಷೆಯ ನಂತರ ಅಭ್ಯರ್ಥಿಗಳ ವೈಯಕ್ತಿಕ ವಿವರಗಳು ಮತ್ತು ಅವರ ಉತ್ತರಗಳನ್ನು ಪ್ರತ್ಯೇಕ ಭಾಗಗಳಲ್ಲಿ ಒಳಗೊಂಡ OMR ಹಾಳೆಗಳನ್ನು ಸ್ವೀಕರಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಈ ಹಾಳೆಗಳನ್ನು ಭದ್ರತಾ ಕೊಠಡಿಯಲ್ಲಿ (Strong Room) ಸಂಗ್ರಹಿಸಲಾಗುತ್ತಿತ್ತು. ಸ್ಕ್ಯಾನಿಂಗ್ ಕಾರ್ಯವನ್ನು M/s ಎಂಬೆಡೆಡ್ ಕಂಟ್ರೋಲ್ ಸಿಸ್ಟಮ್ಸ್ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿತ್ತು ಎಂದು ವಿವರ ಹಂಚಿಕೊಂಡಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

ಸ್ಕ್ಯಾನಿಂಗ್ ಮತ್ತು ಬಾರ್‌ಕೋಡ್ ಹೊಂದಾಣಿಕೆಯ ನಂತರ ಅಭ್ಯರ್ಥಿಗಳ ಅಂಕಗಳು ಹಾಗೂ ವೈಯಕ್ತಿಕ ವಿವರಗಳನ್ನು CDಗಳಲ್ಲಿ ದಾಖಲಿಸಲಾಗುತ್ತಿತ್ತು. ಈ CDಗಳು ತಮ್ಮ ವಶದಲ್ಲಿರುತ್ತಿದ್ದವು. ನಂತರ ತಾತ್ಕಾಲಿಕ 1:3 ಪಟ್ಟಿಯನ್ನು ಸಿದ್ಧಪಡಿಸುವುದಕ್ಕಾಗಿ ಅವುಗಳನ್ನು ಕಂಪ್ಯೂಟರ್ ವಿಭಾಗಕ್ಕೆ ಹಸ್ತಾಂತರಿಸಲಾಗುತ್ತಿತ್ತು. ಅದಾದ ನಂತರ ದಾಖಲೆ ಪರಿಶೀಲನೆ ನಡೆಸಲಾಗುತ್ತಿತ್ತು. ಬಳಿಕ ತಾತ್ಕಾಲಿಕ 1:1 ಪಟ್ಟಿಯನ್ನು ಸಿದ್ಧಪಡಿಸಿ, ಆಯೋಗವು ಅಂತಿಮ ಫಲಿತಾಂಶವನ್ನು ಪ್ರಕಟಿಸುತ್ತಿತ್ತು ಎಂದು ತಿಳಿಸಿದ್ದಾರೆ.

ಜ್ಞಾನೇಂದ್ರ ಅವಧಿಯಲ್ಲಿ ಎಷ್ಟು ಪರೀಕ್ಷೆಗಳು ನಡೆದಿದ್ದವು?

ಕೆಪಿಎಸ್‌ಸಿ  ಪರೀಕ್ಷಾ ನಿಯಂತ್ರಕರಾಗಿದ್ದ ತಮ್ಮ ಅಧಿಕಾರಾವಧಿಯಲ್ಲಿ ಯಾವ ಪರೀಕ್ಷೆಗಳನ್ನು ನಡೆಸಲಾಗಿತ್ತು ಮತ್ತು ಯಾವ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿತ್ತು ಎಂಬ ವಿವರಗಳನ್ನು ತನಿಖಾಧಿಕಾರಿಗೆ ಒದಗಿಸಿದ್ದಾರೆ.  ವಾಣಿಜ್ಯ ತೆರಿಗೆ ನಿರೀಕ್ಷಕರು (Commercial Tax Inspector) – ಫಲಿತಾಂಶ ಪ್ರಕಟಿಸಲಾಗಿದೆ.  ಪಂಚಾಯತ್ ಅಭಿವೃದ್ಧಿ ಅಧಿಕಾರಿ (Panchayat Development Officer) – ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ. ಬಿ-ಗುಂಪು (BBMP AE, BBMP JE, ADLR ಮುಂತಾದ ವಿವಿಧ ಪರೀಕ್ಷೆಗಳು) – ಪರೀಕ್ಷೆ ನಡೆಸಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ.  ಕೆಎಎಸ್ ಮುಖ್ಯ ಪರೀಕ್ಷೆ – ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ. ಪಶುವೈದ್ಯಕೀಯ ಪರೀಕ್ಷೆ – ಪರೀಕ್ಷೆ ನಡೆಸಿ 1:3 ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು ಎಂದು ವಿವರ ಒದಗಿಸಿರುವುದು ಗೊತ್ತಾಗಿದೆ.

 

 

ಕನ್ನಾಳೆ ಸಂಪರ್ಕಕ್ಕೆ ಬಂದಿದ್ದು ಹೇಗೆ?

ಬಸವರಾಜ್ ಕನ್ನಾಳೆ ಅವರೊಂದಿಗಿನ ಸಂಬಂಧದ ಬಗ್ಗೆಯೂ ತನಿಖಾಧಿಕಾರಿ ವಿಚಾರಣೆ  ನಡೆಸಿದ್ದರು. 2023ರಲ್ಲಿ ತಾವು ಆಹಾರ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದಾಗಿನಿಂದ ಅವರ ಪರಿಚಯವಿದೆ ಎಂದು ತಿಳಿಸಿದರು. ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸದ ನಿಮಿತ್ತ  ಬಸವರಾಜ್ ಕನ್ನಾಳೆ ತಮ್ಮ ಕಚೇರಿಗೆ ಭೇಟಿ ನೀಡಿದ್ದರು ಮತ್ತು ಆ ನಂತರವೂ ಅವರೊಂದಿಗೆ ಸಂಪರ್ಕದಲ್ಲಿದ್ದೆವು ಎಂದು ತಿಳಿಸಿದ್ದಾರೆ.

 

 

ಪೆನ್‌ ಡ್ರೈವ್‌ನಲ್ಲಿ 70-80  ಪ್ರಶ್ನೆ ಕನ್ನಾಳೆಗೆ ಹಂಚಿಕೆ

2026ರ ಸೆ.13ರಂದು ಬಸವರಾಜ ಕನ್ನಾಳೆ ಅವರು ನೀಡಿದ್ದ ಹೇಳಿಕೆಯನ್ನು ಗಂಗ್ವಾರ್‍‌ ಗೆ ತನಿಖಾಧಿಕಾರಿ ತೋರಿಸಿದ್ದರು. 2026ರ ಜನವರಿ 7ರಂದು  ಪೆನ್‌ಡ್ರೈವ್‌ನಲ್ಲಿ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಅವರಿಂದ ಪಡೆದುಕೊಂಡಿದ್ದಾಗಿ ಬಸವರಾಜ್ ಕನ್ನಾಳೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ  ಗಂಗ್ವಾರ್, ತಮ್ಮ ಸಹೋದರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವಂತೆ  ಬಸವರಾಜ್ ಪದೇಪದೇ ಮನವಿ ಮಾಡಿದ್ದರು. ಹೀಗಾಗಿ  70ರಿಂದ 80 ಪ್ರಶ್ನೆಗಳನ್ನು ಪೆನ್‌ಡ್ರೈವ್‌ನಲ್ಲಿ  ಬಸವರಾಜ್ ಅವರಿಗೆ ಹಂಚಿಕೊಂಡಿದ್ದಾಗಿ ಎಂದು ತಿಳಿಸಿದರು.

 

 

ಮೊದಲು ನಿರಾಕರಣೆ, ನಂತರ ಒಪ್ಪಿಗೆ

‘ಆರಂಭದಲ್ಲಿ ತಾವು ನಿರಾಕರಿಸಿದ್ದರೂ, ನಿರಂತರ ಮನವಿಗಳಿಂದಾಗಿ ಕೊನೆಗೆ ಒಪ್ಪಿಕೊಂಡು ಬಸವರಾಜ್ ಅವರ ಸಹೋದರನಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಶ್ನೆಪತ್ರಿಕೆಯನ್ನು ಹಸ್ತಾಂತರಿಸಿದ್ದನ್ನು ಹೇಳಿಕೆಯಲ್ಲಿ ವಿವರಿಸಿದ್ದಾರೆ. ಪ್ರಶ್ನೆಪತ್ರಿಕೆಯನ್ನು ಬೇರೆಯವರಿಗೆ ಹಂಚಬಾರದೆಂದು ಬಸವರಾಜ್ ಅವರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದೆ ಮತ್ತು ನಂತರ ಅದನ್ನು ಯಾರಿಗೆಲ್ಲ ಹಂಚಲಾಯಿತು ಎಂಬುದು ತಮಗೆ ತಿಳಿದಿಲ್ಲ ಎಂದು ತನಿಖಾಧಿಕಾರಿ ಮುಂದೆ ಹೇಳಿಕೊಂಡಿರುವುದು ಗೊತ್ತಾಗಿದೆ.

ಕನ್ನಾಳೆಯಿಂದ ಹಣ ಪಡೆದಿಲ್ಲವೆಂದ ಗಂಗ್ವಾರ್‍‌

ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಒದಗಿಸಿದ್ದಕ್ಕಾಗಿ ಬಸವರಾಜ್ ಕನ್ನಾಳೆ ಅವರಿಂದ ಯಾವುದೇ ಹಣ ಸ್ವೀಕರಿಸಿದ್ದೀರಾ ಎಂದು ತನಿಖಾಧಿಕಾರಿ ಪ್ರಶ್ನಿಸಿದ್ದರು. ಅವರಿಂದ ಯಾವುದೇ ಹಣ ಪಡೆದಿಲ್ಲ ಎಂದು ನಿರಾಕರಿಸಿದರು. ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಹೊರತಾಗಿ, ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆಗೆ ಅನುಕೂಲ ಮಾಡಿಕೊಡಲು ತಾವು ಅಥವಾ  ಬಸವರಾಜ್ ಕನ್ನಾಳೆ ಬೇರೆ ಯಾವುದೇ ವಿಧಾನಗಳನ್ನು ಅನುಸರಿಸಿದ್ದೀರಾ ಎಂದೂ ತನಿಖಾಧಿಕಾರಿಯು ವಿಚಾರಿಸಿದ್ದರು. ನೇಮಕಾತಿ ಪರೀಕ್ಷೆಗಳಲ್ಲಿ ಯಾರಿಗೂ ಆಯ್ಕೆಯಾಗಲು ಸಹಾಯ ಮಾಡಿಲ್ಲ ಎಂದು ಗಂಗ್ವಾರ್‍‌ ತಿಳಿಸಿದ್ದರು.

 

 

ಆನ್‌ಲೈನ್‌ನಲ್ಲಿ ಹಣ ಸ್ವೀಕಾರ- ಮೂಲ ನೆನಪಿಲ್ಲವೆಂದ ಗಂಗ್ವಾರ್‍‌

ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಪರವಾಗಿ ವಿವಿಧ ವ್ಯಕ್ತಿಗಳಿಗೆ ತಾವು ಪಾವತಿಗಳನ್ನು ಮಾಡಿದ್ದಾಗಿ ಬಸವರಾಜ್ ಕನ್ನಾಳೆ 2026ರ ಸೆ.13ರಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ತನಿಖಾಧಿಕಾರಿಯು ಗಂಗ್ವಾರ್‍‌ ಮುಂದಿರಿಸಿ ವಿಚಾರಿಸಿದ್ದರು. ‘ತಮಗೆ  ಪರಿಚಯವಿರುವ ವ್ಯಕ್ತಿಗಳಿಗೆ ಆನ್‌ಲೈನ್ ಮೂಲಕ ಹಣ ಪಾವತಿಸುವಂತೆ  ಬಸವರಾಜ್ ಅವರಿಗೆ ತಿಳಿಸಿದ್ದೆ ಮತ್ತು ನಂತರ ಆ ಮೊತ್ತವನ್ನು ನಗದು ರೂಪದಲ್ಲಿ ಹಿಂದಿರುಗಿಸಿದ್ದೆ ಎಂದು ಹೇಳಿದರು. ಆದರೆ, ಆ ಹಣವನ್ನು ಹಿಂದಿರುಗಿಸಲು ಬಳಸಿದ ನಗದಿನ ಮೂಲದ ಬಗ್ಗೆ ಕೇಳಿದಾಗ, ಅದರ ಮೂಲ ನೆನಪಿಲ್ಲ ಮತ್ತು ನಂತರ ವಿವರಿಸುವುದಾಗಿ ತಿಳಿಸಿದ್ದರು.

ಆರ್‍‌ಡಿಪಿಆರ್‍‌ ಎಇಇಗಳ ನೇಮಕದ ಬಗ್ಗೆ ಗಂಗ್ವಾರ್‍‌ ಹೇಳಿಕೆಯಲ್ಲೇನಿತ್ತು?

ಪಶುವೈದ್ಯಾಧಿಕಾರಿಗಳ ಪರೀಕ್ಷೆಯನ್ನು ಹೊರತುಪಡಿಸಿ, ಕೆಪಿಎಸ್‌ಸಿ ನಡೆಸಿದ ಇತರ ನೇಮಕಾತಿ ಪರೀಕ್ಷೆಗಳಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಸರಿಸಿದ ಇತರ ವಿಧಾನಗಳ ಬಗ್ಗೆಯೂ ತನಿಖಾಧಿಕಾರಿಯು ಪ್ರಶ್ನಿಸಿದ್ದಾರೆ. ಗ್ರಾಮೀಣ ಕುಡಿಯುವ ನೀರು ಸರಬರಾಜು–2023ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯ ಪರೀಕ್ಷೆಯಲ್ಲಿ ಒಎಂಆರ್ ಉತ್ತರ ಪತ್ರಿಕೆಗಳನ್ನು ತಿದ್ದಿರುವ ಆರೋಪದ ಪ್ರಕರಣ ವರದಿಯಾಗಿತ್ತು.  ಕೆಪಿಎಸ್‌ಸಿ ಸದಸ್ಯರಾದ  ಮೊಹಮ್ಮದ್ ಮುಸ್ತಫಾ ಅವರ ನೇತೃತ್ವದ ಸಮಿತಿಯು ಸುಮಾರು ಒಂಬತ್ತರಿಂದ ಹತ್ತು ಅಭ್ಯರ್ಥಿಗಳ ಒಎಂಆರ್ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿರುವುದನ್ನು ದೃಢಪಡಿಸಿತ್ತು ಎಂದು ಮಾಹಿತಿ ನೀಡಿದ್ದರು.

 

 

ಯಾರ ವಿರುದ್ಧವೂ ಕ್ರಮವಾಗಿಲ್ಲ

‘ತಮ್ಮ ತಿಳಿವಳಿಕೆಯ ಪ್ರಕಾರ, ಆ ಅಭ್ಯರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಮತ್ತು ಅವರು ಹುದ್ದೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು. ಆ ಸಮಯದಲ್ಲಿ ಕೆಪಿಎಸ್‌ಸಿಯ ಕಾರ್ಯದರ್ಶಿಯಾಗಿ  ಲತಾ ಕುಮಾರಿ, ಐಎಎಸ್, ಕಾರ್ಯನಿರ್ವಹಿಸುತ್ತಿದ್ದರು ಎಂದರು. ಒಎಂಆರ್ ಪತ್ರಿಕೆಗಳ ಮೌಲ್ಯಮಾಪನವನ್ನು ಪರೀಕ್ಷಾ ನಿಯಂತ್ರಕರ ವ್ಯಾಪ್ತಿಗೆ ಒಳಪಡುವ ಸಿ-2 ವಿಭಾಗವು ನಿರ್ವಹಿಸುತ್ತಿತ್ತು,’ ಎಂದು ಹೇಳಿಕೆ ನೀಡಿದ್ದರು.

ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ವಿಷಯದಲ್ಲಿ ಮುದ್ರಣಾಲಯವು ಕರಡು ಪ್ರಶ್ನೆಪತ್ರಿಕೆಯನ್ನು ಪರಿಶೀಲಿಸಿ ಕರಡು ಪ್ರಶ್ನೆಪತ್ರಿಕೆಯಲ್ಲಿ ತಾವು ಸೂಚಿಸಿದ ತಿದ್ದುಪಡಿಗಳನ್ನು ಒಳಗೊಂಡ ಕರಡನ್ನು ಸಿದ್ಧಪಡಿಸುತ್ತಿತ್ತು. ಮುದ್ರಣಾಲಯದಿಂದ ಕರಡು ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿದ ನಂತರ, ತಿದ್ದುಪಡಿಗಳನ್ನು ಗುರುತಿಸುವ ಉದ್ದೇಶದಿಂದ ಕರಡನ್ನು ಪರಿಶೀಲಿಸುವಂತೆ  ಸುಜಾತಾ ಅವರಿಗೆ ಸೂಚಿಸಲಾಗಿತ್ತು.  ಇದಲ್ಲದೆ, ಉತ್ತರ ಕೀಲಿಗಳೊಂದಿಗೆ ಕರಡು ಪ್ರಶ್ನೆಪತ್ರಿಕೆಗಳು ಸಿದ್ಧವಾದ ಬಳಿಕ, ಅಂತಿಮ ಕರಡಿನ ಒಂದು ಪ್ರತಿಯನ್ನು ಪರೀಕ್ಷಾ ನಿಯಂತ್ರಕರ (CoE) ಸುರಕ್ಷಿತ ವಶದಲ್ಲಿಡಲಾಗುತ್ತಿತ್ತು ಮತ್ತು ಮತ್ತೊಂದು ಪ್ರತಿಯನ್ನು ಮುದ್ರಣಾಲಯಕ್ಕೆ ಕಳುಹಿಸಲಾಗುತ್ತಿತ್ತು.

 

 

ಮುದ್ರಿತ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳು ಬೆಂಗಳೂರಿನಲ್ಲಿದ್ದರೆ ಪರೀಕ್ಷಾ ನಿಯಂತ್ರಕರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಇತರ ಸ್ಥಳಗಳಲ್ಲಿದ್ದರೆ, ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳ ಜಿಲ್ಲಾ ಖಜಾನೆ ಕಚೇರಿಗಳಿಗೆ ಪರೀಕ್ಷೆಗೆ ಎರಡು ಅಥವಾ ಮೂರು ದಿನಗಳ ಮುಂಚಿತವಾಗಿ ತಲುಪಿಸಲಾಗುತ್ತಿತ್ತು.

ಸಿಸಿಟಿವಿ ದೃಶ್ಯಾವಳಿಗಳೇ ಇಲ್ಲ

ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಅಂತಿಮಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿಲ್ಲ ಎಂಬ ಕುರಿತು ಸಿ-1 ವಿಭಾಗದ ಸಹಾಯಕ ಕಾರ್ಯದರ್ಶಿ  ಸುಜಾತಾ ಎಚ್.ಎನ್. ಅವರು 2026ರ ಆಗಸ್ಟ್‌ 19ರಂದು ನೀಡಿದ್ದ  ಹೇಳಿಕೆಯನ್ನು ಮುಂದಿಟ್ಟು ಗಂಗ್ವಾರ್ ರನ್ನು ವಿಚಾರಿಸಿದ್ದರು. ತಮ್ಮ ಕೊಠಡಿ ಮತ್ತು ಮುಂಭಾಗದ ಕೊಠಡಿಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳ ಮೂಲಕ ಪ್ರಕ್ರಿಯೆಗಳನ್ನು ದಾಖಲಿಸಲಾಗಿತ್ತು.  ಆದರೆ, ಪ್ರಶ್ನೆಪತ್ರಿಕೆಗಳ ರಚನೆ ಮತ್ತು ಅಂತಿಮಗೊಳಿಸುವಿಕೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕೆಂಬ ನಿಯಮವಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಿದ್ದರು.

 

 

ಕ್ಯಾಮೆರಾಗಳ ಸಂಗ್ರಹಣಾ ಸಾಮರ್ಥ್ಯ ಕೇವಲ 30 ದಿನಗಳಾಗಿದ್ದರಿಂದ ದೃಶ್ಯಾವಳಿಗಳನ್ನು ಉಳಿಸಿಕೊಳ್ಳಲಾಗಿರಲಿಲ್ಲ.  ಒಎಂಆರ್ ಸ್ಕ್ಯಾನಿಂಗ್ ಮತ್ತು ಸ್ಟ್ರಾಂಗ್ ರೂಮ್‌ಗಳಿಗೆ ಸಿಸಿಟಿವಿ ವ್ಯವಸ್ಥೆ ಅನ್ವಯವಾಗುತ್ತಿತ್ತು. ಆದರೆ, ಪ್ರಶ್ನೆಪತ್ರಿಕೆಗಳ ಸಿದ್ಧತೆ ಮತ್ತು ಅಂತಿಮಗೊಳಿಸುವಿಕೆಯ ಸಂದರ್ಭದಲ್ಲಿ ಸಿಸಿಟಿವಿ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂಬ ನಿರ್ದಿಷ್ಟ ನಿಯಮ ತಮ್ಮ ತಿಳಿವಳಿಕೆಯ ಪ್ರಕಾರ ಇರಲಿಲ್ಲ.

ಟ್ಯಾಬ್ಲೆಟ್‌ ನಾಶಪಡಿಸಿದ್ದ ಗಂಗ್ವಾರ್

ಮುದ್ರಣಕ್ಕೆ ಅನುಮತಿ ನೀಡುವ ಅಂತಿಮ ಕರಡು ಹಂತದಲ್ಲಿ, ತಮ್ಮ ಕಚೇರಿ ಕೊಠಡಿಯಲ್ಲಿ Xiaomi ಟ್ಯಾಬ್ಲೆಟ್ ಬಳಸಿ ಪ್ರಶ್ನೆಪತ್ರಿಕೆಗಳ ಚಿತ್ರಗಳನ್ನು ಗಂಗ್ವಾರ್ ಕಾಪಿ ಮಾಡಿಕೊಂಡಿದ್ದರು. ಮತ್ತು  ಅದೇ ದಿನ ಟ್ಯಾಬ್ಲೆಟ್ ಅನ್ನು ತುಂಡುಗಳಾಗಿ ಒಡೆದು ಕಸದ ಬುಟ್ಟಿಗೆ ಎಸೆಯುವ ಮೂಲಕ ನಾಶಪಡಿಸಲಾಗಿತ್ತು ಎಂದು  ತಿಳಿಸಿದರು. ಸಿಐಡಿ ಅಧಿಕಾರಿಗಳೂ ಆ ಸಾಧನವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ ಎಂದರು.

 

 

ಹಣ ಸಂಗ್ರಹ ನಿರ್ಧಾರವಾಗಿರಲಿಲ್ಲ

ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ  ಬಸವರಾಜ್ ಕನ್ನಾಳೆ ಮೂಲಕ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸುವ ಉದ್ದೇಶಿತ ಯೋಜನೆಯ ಬಗ್ಗೆ ತನಿಖಾಧಿಕಾರಿ ವಿಚಾರಿಸಿದ್ದರು.  ಪ್ರತಿ ಅಭ್ಯರ್ಥಿಯಿಂದ ಎಷ್ಟು ಹಣ ಸಂಗ್ರಹಿಸಬೇಕು ಎಂಬುದನ್ನು ಯಾವುದೇ ಹಂತದಲ್ಲಿಯೂ ನಿರ್ಧರಿಸಿರಲಿಲ್ಲ ಎಂದು ತಿಳಿಸಿದರು.  ಕ್ರಮಸಂಖ್ಯೆ 57ರಿಂದ 88ರವರೆಗೆ ನಮೂದಿಸಲಾದ ಬಿಡಿ ಹಾಳೆಗಳ ಬಗ್ಗೆ ವಿಚಾರಿಸಿದಾಗ, ಅವು 2021ರಲ್ಲಿ ನಡೆದ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದ ಉತ್ತರ ಪತ್ರಿಕೆಗಳಾಗಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಉಲ್ಲೇಖ ಸಾಮಗ್ರಿಯಾಗಿ ಮುದ್ರಣಾಲಯಕ್ಕೆ ಹಂಚಿಕೆಯಾಗಿದ್ದವು ಎಂದು ತಿಳಿಸಿದರು.

 

 

 

 

 

ಗಂಗ್ವಾರ್ ನಿವಾಸದಲ್ಲಿದ್ದವು ಉತ್ತರಪತ್ರಿಕೆಗಳ ಮುಖಪುಟಗಳು

ಗಂಗ್ವಾರ್  ನಿವಾಸದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ನಡೆಸಿದ್ದರು. ಈ ವೇಳೆಯಲ್ಲಿ ಉತ್ತರ ಪುಸ್ತಕಗಳ ಖಾಲಿ ಖಾಲಿ ಮುಖಪುಟಗಳಿದ್ದವು. ಇದರ ಬಗ್ಗೆ ಗಂಗ್ವಾರ್‍‌ ವಿವರಣೆ ನೀಡಿದ್ದಾರೆ. ‘ಅವು 2021ರ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದ ಉತ್ತರ ಪುಸ್ತಕಗಳ ಖಾಲಿ ಮುಖಪುಟಗಳು ಮತ್ತು ಖಾಲಿ ಉತ್ತರ ಪತ್ರಿಕೆಗಳಾಗಿವೆ.

 

 

ಉಲ್ಲೇಖ ಸಾಮಗ್ರಿಯಾಗಿ ಮುದ್ರಣಾಲಯಕ್ಕೆ ಹಂಚಿಕೆ ಮಾಡಲಾಗಿತ್ತು. “QPCode Wise NA Reports” ಎಂಬ ಶೀರ್ಷಿಕೆಯುಳ್ಳ ವಶಪಡಿಸಿಕೊಂಡ ಬಿಡಿ ಹಾಳೆ ಸಂಖ್ಯೆ 96 ಅನ್ನು ತೋರಿಸಿದಾಗ, ಅದರ ಮೇಲೆ ಹಸಿರು ಶಾಯಿಯಲ್ಲಿ ಮಾಡಲಾಗಿದ್ದ ಟಿಪ್ಪಣಿಗಳು ತಮ್ಮ ಕೈಬರಹದಲ್ಲಿವೆ,’ ಎಂದು ಗಂಗ್ವಾರ್‍‌ ದೃಢಪಡಿಸಿದ್ದರು.

Hot this week

ರಾಷ್ಟ್ರೀಯ ವಿದ್ಯಾರ್ಥಿ ವೇತನ; ಕೊನೆ ದಿನಾಂಕ ಸಮೀಪಿಸಿದರೂ ರಾಜ್ಯದ 2,418 ಶಾಲೆಗಳ ಒಟ್ಟು 6,991 ಅರ್ಜಿಗಳು ಪರಿಶೀಲನೆಗೆ ಬಾಕಿ

ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ...

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ; ಸಾಹುಕಾರ್, ಗೀತಾ, ಗಂಗ್ವಾರ್‍‌ಗೆ ಸೇರಿದ 1.22 ಕೋಟಿ ರೂ. ಮೌಲ್ಯದ ಚರ, ಸ್ಥಿರಾಸ್ತಿ ಜಪ್ತಿ

ಬೆಂಗಳೂರು;  ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ...

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು...

65 ಕೋಟಿ ರು ಮೌಲ್ಯದ ಪುಸ್ತಕಗಳಿಗೆ ಮೆತ್ತಿಕೊಂಡ ಧೂಳು; ಬೊಕ್ಕಸಕ್ಕೆ ನಷ್ಟ, ಗ್ರಂಥಾಲಯಗಳ ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ?

ಬೆಂಗಳೂರು; ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಕಳೆದ 5 ವರ್ಷಗಳಲ್ಲಿ  ಖರೀದಿಸಿರುವ 65...
Please Scan to make Your Contribution

Topics

ರಾಷ್ಟ್ರೀಯ ವಿದ್ಯಾರ್ಥಿ ವೇತನ; ಕೊನೆ ದಿನಾಂಕ ಸಮೀಪಿಸಿದರೂ ರಾಜ್ಯದ 2,418 ಶಾಲೆಗಳ ಒಟ್ಟು 6,991 ಅರ್ಜಿಗಳು ಪರಿಶೀಲನೆಗೆ ಬಾಕಿ

ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ...

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ; ಸಾಹುಕಾರ್, ಗೀತಾ, ಗಂಗ್ವಾರ್‍‌ಗೆ ಸೇರಿದ 1.22 ಕೋಟಿ ರೂ. ಮೌಲ್ಯದ ಚರ, ಸ್ಥಿರಾಸ್ತಿ ಜಪ್ತಿ

ಬೆಂಗಳೂರು;  ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ...

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು...

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ...

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್...

Related Articles

Popular Categories

error: Content is protected !!