ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್ ಸಂಘಟನೆಗೆ ಒಟ್ಟಾರೆ 856.95 ಕೋಟಿ ಯಷ್ಟು ವೆಚ್ಚವಾಗಲಿದೆ.
ಈ ಯೋಜನೆಗೆ ಅಗತ್ಯವಿರುವಂತೆ ಒಟ್ಟು 1,022 ಹೊಸ ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆಯು ಈಗಾಗಲೇ ಸಹಮತಿ ನೀಡಿದೆ. ಸಚಿವ ಸಂಪುಟವೂ ಈ ಪ್ರಸ್ತಾವಕ್ಕೆ ಅನುಮೋದಿಸಿದೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಬೆನ್ನಲ್ಲೇ ಐದು ಪೊಲೀಸ್ ಆಯುಕ್ತಾಲಯಗಳ ರಚನೆಗೆ ಆಗಲಿರುವ ವೆಚ್ಚದ ಅಂಕಿಅಂಶಗಳು ಮುನ್ನೆಲೆಗೆ ಬಂದಿವೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಡಿಯಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಿ ಪುನರ್ ರಚಿಸಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದರು. ಆದರೆ ಇದರ ವೆಚ್ಚದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.
ಐದು ಪೊಲೀಸ್ ಆಯುಕ್ತಾಲಯಗಳನ್ನು ರಚಿಸಿದಲ್ಲಿ ಆಗಲಿರುವ ಆರ್ಥಿಕ ಪರಿಣಾಮಗಳ ಕುರಿತಾದ ಅಂಕಿ ಅಂಶಗಳು ಇದೀಗ ಮುನ್ನೆಲೆಗೆ ಬಂದಿವೆ. ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ಐದು ಪೊಲೀಸ್ ಆಯುಕ್ತಾಲಯಗಳಾಗಿ ಪುನರ್ಸಂಘಟಿಸಲಿದೆ. ಇವು ಪ್ರಸ್ತಾವಿತ ಪೊಲೀಸ್ ಮುಖ್ಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಲಿವೆ. ಅಂತಿಮ ಕಚೇರಿವಾರು ಸಿಬ್ಬಂದಿ ವಿವರದ ಪ್ರಕಾರ, ಹೆಚ್ಚುವರಿಯಾಗಿ ಒಟ್ಟು 6,550 ಹುದ್ದೆಗಳನ್ನು ಸೃಜಿಸಲು ಪ್ರಸ್ತಾಪಿಸಲಾಗಿದೆ.
ಪೂರ್ವ ವಿಭಾಗವು 2,734 ಹುದ್ದೆಗಳೊಂದಿಗೆ ಅತಿದೊಡ್ಡ ಪ್ರಸ್ತಾವಿತ ಪೊಲೀಸ್ ಆಯುಕ್ತಾಲಯವಾಗಿದೆ. ನಂತರ ಪಶ್ಚಿಮ (1,192), ದಕ್ಷಿಣ (987), ಉತ್ತರ (944) ಮತ್ತು ಕೇಂದ್ರ (692) ವಿಭಾಗಗಳಿವೆ. ಡಿಸಿಪಿ ಸಿಎಆರ್ ಪೂರ್ವ (DCP CAR East) ಘಟಕವನ್ನು ಹೊಸದಾಗಿ ಸೃಜಿಸುವ ಘಟಕವೆಂದು ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಇದರಲ್ಲಿ 1,399 ಕಾರ್ಯನಿರ್ವಾಹಕ ಹುದ್ದೆಗಳು ಮತ್ತು 53 ಸಚಿವಾಲಯದ ಹುದ್ದೆಗಳು ಸೇರಿವೆ ಎಸಿಪಿ (ACP) ಮಟ್ಟದ ಒಂಬತ್ತು ಘಟಕಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಪ್ರತಿಯೊಂದಕ್ಕೂ ಆರು ಹುದ್ದೆಗಳಂತೆ ಪ್ರಸ್ತಾಪಿಸಲಾಗಿದೆ.

ಪ್ರತ್ಯೇಕವಾಗಿ ಎಂಟು ಹೊಸ ಸಂಚಾರ ಪೊಲೀಸ್ ಠಾಣೆಗಳಿಗೆ ಒಟ್ಟು 800 ಹುದ್ದೆಗಳ ಅಗತ್ಯವಿದೆ ಎಂದು ಲೆಕ್ಕಹಾಕಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯನ್ನು ಎಸಿಪಿ (ಎಸ್ಎಚ್ಒ) ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಲಾಗಿದೆ.

ಇದಕ್ಕಾಗಿ ಹೆಚ್ಚುವರಿಯಾಗಿ 80 ಹುದ್ದೆಗಳನ್ನು ಸೃಜಿಸಿ, ಪಿಐ ಹುದ್ದೆಯನ್ನೂ ಒಳಗೊಂಡಂತೆ ಒಟ್ಟು 250 ಹುದ್ದೆಗಳ ಬಲವನ್ನು ಹೊಂದಲು ಉದ್ದೇಶಿಸಿದೆ.

ಒಟ್ಟು ಹುದ್ದೆಗಳ ಸಮಗ್ರ ವಿವರದ ಪ್ರಕಾರ, ಹೆಚ್ಚುವರಿಯಾಗಿ 9 ಸಿವಿಲ್ ಡಿಸಿಪಿ, 21 ಎಸಿಪಿ, 43 ಪಿಐ, 235 ಪಿಎಸ್ಐ, 744 ಎಎಸ್ಐ, 1,422 ಹೆಡ್ ಕಾನ್ಸ್ಟೆಬಲ್ (HC) ಮತ್ತು 2,418 ಪೊಲೀಸ್ ಕಾನ್ಸ್ಟೆಬಲ್ (PC) ಹುದ್ದೆಗಳನ್ನು ಪ್ರಸ್ತಾಪಿಸಿದೆ.
856.95 ಕೋಟಿ ವೆಚ್ಚ
ಸಿಎಆರ್ (CAR) ವಿಭಾಗದಲ್ಲಿ ಹೆಚ್ಚುವರಿಯಾಗಿ 1 ಡಿಸಿಪಿ, 3 ಎಸಿಪಿ, 6 ಆರ್ಪಿಐ (RPI), 28 ಆರ್ಎಸ್ಐ (RSI), 56 ಎಆರ್ಎಸ್ಐ (ARSI), 225 ಎಎಚ್ಸಿ (AHC) ಮತ್ತು 1,080 ಎಪಿಸಿ (APC) ಹುದ್ದೆಗಳನ್ನು ಪ್ರಸ್ತಾಪಿಸಲಾಗಿದೆ. ಅಂತಿಮವಾಗಿ, ಈ ಪ್ರಸ್ತಾವನೆಯಿಂದ ಉಂಟಾಗುವ ಒಟ್ಟು ಆರ್ಥಿಕ ಹೊಣೆಗಾರಿಕೆ ಅಂದಾಜು ₹856.95 ಕೋಟಿ ಆಗಲಿದೆ. ಇದರಲ್ಲಿ ₹459.02 ಕೋಟಿ ಪುನರಾವರ್ತಿತ ವೆಚ್ಚವಾಗಿದ್ದು, ₹397.93 ಕೋಟಿ ಪುನರಾವರ್ತಿತವಲ್ಲದ ವೆಚ್ಚವಾಗಿದೆ ಎಂದು ತಿಳಿದು ಬಂದಿದೆ.

ಅದೇ ರೀತಿ ಹೊಸ ಹುದ್ದೆಗಳ ಸೃಷ್ಟಿ, ವರ್ಗಾವಣೆ, ಪುನರ್ಸಂಘಟನೆ, ಮರುನಾಮಕರಣ ಮತ್ತು ಮೇಲ್ದರ್ಜೆಗೇರಿಸುವಿಕೆಗಳನ್ನು ಪ್ರತ್ಯೇಕ ವರ್ಗಗಳಾಗಿ ಪರಿಗಣಿಸಬೇಕು. ಇದರಿಂದ ಒಂದೇ ಹುದ್ದೆಯನ್ನು ಎರಡು ಬಾರಿ ಲೆಕ್ಕಹಾಕುವುದನ್ನು ತಡೆಯಬಹುದು. ಹೆಚ್ಚುವರಿಯಾಗಿ ಪ್ರಸ್ತಾಪಿಸಲಾದ 9 ಸಿವಿಲ್ ಡಿಸಿಪಿ ಹುದ್ದೆಗಳ ಒಟ್ಟು ಸಂಖ್ಯೆ ಸ್ಪಷ್ಟವಾಗಿದೆ. ಆದರೆ ಪ್ರತಿ ಹೆಚ್ಚುವರಿ ಡಿಸಿಪಿ ಹುದ್ದೆಯ ವಿವರವಾದ ಹಂಚಿಕೆಯನ್ನು ಕಚೇರಿವಾರು ಪಟ್ಟಿಗಳಲ್ಲಿ ಒಂದೇ ರೀತಿಯಲ್ಲಿ ಸ್ಟಾರ್ ಚಿಹ್ನೆಯೊಂದಿಗೆ ಗುರುತಿಸಿಲ್ಲ.
ಹೆಚ್ಚುವರಿಯಾಗಿ ಪ್ರಸ್ತಾಪಿಸಲಾದ 21 ಸಿವಿಲ್ ಎಸಿಪಿ ಹುದ್ದೆಗಳು ಒಟ್ಟು ಸಂಖ್ಯೆಯನ್ನು ಸೂಚಿಸುತ್ತವೆ. ವಿವರವಾದ ಪಟ್ಟಿಗಳಲ್ಲಿ ಪ್ರತ್ಯೇಕವಾಗಿ ಸ್ಟಾರ್ ಚಿಹ್ನೆಯೊಂದಿಗೆ ಗುರುತಿಸಲಾದ ಎಸಿಪಿ ಕಚೇರಿಗಳಿಗೆ ಮಾತ್ರ ಪ್ರತ್ಯೇಕ ಹುದ್ದೆಗಳ ಸಂಖ್ಯೆಯನ್ನು ನೀಡಲಾಗಿದೆ. ಇಂದಿರಾನಗರಕ್ಕೆ ಸಂಬಂಧಿಸಿದ ವಿವರಣೆಯಲ್ಲಿ ಹೊಸ ಮಹಿಳಾ ಪೊಲೀಸ್ ಠಾಣೆ ಮತ್ತು ಸಿಸಿಟಿಪಿಎಸ್ (CCTPS) ಪೊಲೀಸ್ ಠಾಣೆಗಳ ಉಲ್ಲೇಖವಿದೆ.
ಆದರೆ ವಿವರವಾದ ಪಟ್ಟಿಯಲ್ಲಿ ಈ ಎರಡೂ ಠಾಣೆಗಳಿಗೆ ಪ್ರತ್ಯೇಕವಾಗಿ ಸ್ಟಾರ್ ಚಿಹ್ನೆಯೊಂದಿಗೆ ಗುರುತಿಸಲಾದ ಹಾಗೂ ನಿಖರ ಸಂಖ್ಯೆಯನ್ನು ಸೂಚಿಸುವ ಸಾಲುಗಳಿಲ್ಲ. ಆದ್ದರಿಂದ ಮಂಜೂರಾತಿಗೂ ಮುನ್ನ ಈ ಅಂಶವನ್ನು ಸ್ಪಷ್ಟಪಡಿಸಬೇಕು. ಈ ಪ್ರಸ್ತಾವನೆಯ ಅಪ್ಲೋಡ್ ಮಾಡಲಾದ ಆವೃತ್ತಿಯ ಅಂತಿಮ ಕಚೇರಿವಾರು ಪಟ್ಟಿಯಲ್ಲಿ ನಮೂದಿಸಿರುವ ಒಟ್ಟು 6,550 ಹುದ್ದೆಗಳ ಸಂಖ್ಯೆಯನ್ನೇ ಅಧಿಕೃತ ಲೆಕ್ಕಾಚಾರದ ಆಧಾರವಾಗಿ ಪರಿಗಣಿಸಬೇಕು ಎಂದು ಪೊಲೀಸ್ ಇಲಾಖೆಯು ಪ್ರಸ್ತಾಪಿಸಿತ್ತು.
ಅಂತಿಮ ಮಂಜೂರಾತಿಗೂ ಮುನ್ನ, ಪ್ರತಿಯೊಂದು ಹೆಚ್ಚುವರಿ ಹುದ್ದೆಯನ್ನು ನಿರ್ದಿಷ್ಟ ಹೊಸ ಕಚೇರಿ / ಪೊಲೀಸ್ ಠಾಣೆ, ಮೇಲ್ದರ್ಜೆಗೇರಿಸಲಾದ ಘಟಕ, ಪ್ರಧಾನ ಕಚೇರಿ / ವಿಶೇಷ ಘಟಕ ಅಥವಾ ಇತರ ಅನುಮೋದಿತ ವರ್ಗಕ್ಕೆ ಸ್ಪಷ್ಟವಾಗಿ ಜೋಡಿಸಬೇಕು ಎಂದು ಹೇಳಿತ್ತು.
ಪ್ರ ಸ್ತುತ ಪೊಲೀಸ್ ಆಯುಕ್ತರ ಹುದ್ದೆಯನ್ನು ‘ಮುಖ್ಯ ಪೊಲೀಸ್ ಆಯುಕ್ತರು’ ಎಂದು ಉನ್ನತೀಕರಿಸಲಾಗುವುದು. ಜಂಟಿ ಅಥವಾ ಅಪರ ಪೊಲೀಸ್ ಆಯುಕ್ತರು (ಸಂಚಾರ) ಹುದ್ದೆಯನ್ನು ‘ಪೊಲೀಸ್ ಆಯುಕ್ತರು (ಸಂಚಾರ)’ ಎಂದು ಮರು ಪದನಾಮೀಕರಿಸಲಾಗುವುದು.
ಪ್ರಸ್ತಾವಿತ ಘಟಕಗಳಲ್ಲಿ ಅಪರಾಧ ಪ್ರಕರಣಗಳ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕ ಭದ್ರತೆಗಾಗಿ ಒಟ್ಟು 6,550 ಹುದ್ದೆಗಳ ಅಗತ್ಯವಿದ್ದು, ಹೊಸ ಹುದ್ದೆಗಳ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಗಳನ್ನು ಮರು ನಿಯೋಜಿಸಿ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಎಂದು ಸಚಿವರು ಹೇಳಿದ್ದರು.
ಅದೇ ರೀತಿ, ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಕೇಂದ್ರ ಸಂಚಾರ ವಿಭಾಗಕ್ಕೆ 2, ಪಶ್ಚಿಮ ಸಂಚಾರ ವಿಭಾಗಕ್ಕೆ 1, ಉತ್ತರ ಸಂಚಾರ ವಿಭಾಗಕ್ಕೆ 1 ಮತ್ತು ಪಶ್ಚಿಮ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ 2 ರಂತೆ ಒಟ್ಟು 6 ಹೊಸ ಎಸಿಪಿ ಹುದ್ದೆಗಳನ್ನು ಸೃಜಿಸಲಾಗುವುದು. ಪ್ರತಿಯೊಂದು ಎಸಿಪಿ ಕಚೇರಿಗೆ ತಲಾ 5 ಕಾರ್ಯಕಾರಿ ಹುದ್ದೆಗಳನ್ನು ಹೊಸದಾಗಿ ನೀಡಲಾಗುವುದು. ಆಡಳಿತಾತ್ಮಕ ವೆಚ್ಚವನ್ನು ಸರಳೀಕರಿಸಲು, ಪ್ರಸ್ತುತ ಇರುವ ಸಿಎಆರ್ ಘಟಕಗಳಿಂದಲೇ ಹುದ್ದೆಗಳನ್ನು ಮರುನಿಯೋಜಿಸಿ ಪೂರ್ವ ವಿಭಾಗಕ್ಕಾಗಿ ಹೊಸ ಸಿಎಆರ್ ಘಟಕವನ್ನು ರಚಿಸಲಾಗುವುದು ಎಂದೂ ಸಚಿವರು ತಿಳಿಸಿದ್ದನ್ನು ಸ್ಮರಿಸಬಹುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರು ಪೊಲೀಸ್ ಠಾಣೆಗಳಾದ ಸರ್ಜಾಪುರ, ಜಿಗಣಿ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ ಮತ್ತು ಸೂರ್ಯನಗರಗಳು ಬೆಂಗಳೂರು ದಕ್ಷಿಣ ಕಮಿಷನರೇಟ್ನ ಡಿಸಿಪಿ (ಎಲೆಕ್ಟ್ರಾನಿಕ್ಸ್ ಸಿಟಿ) ವಿಭಾಗದ ವ್ಯಾಪ್ತಿಗೆ ಬರಲಿದ್ದು, ಪ್ರಸ್ತುತ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಅಧೀನದಲ್ಲಿರುವ ಕಗ್ಗಲಿಪುರ ಪೊಲೀಸ್ ಠಾಣೆ ಡಿಸಿಪಿ (ದಕ್ಷಿಣ) ವಿಭಾಗದ ವ್ಯಾಪ್ತಿಗೆ ಬರಲಿದೆ.
ಪಶ್ಚಿಮ ಕಮಿಷನರೇಟ್ನಲ್ಲಿ ಅಂದ್ರಹಳ್ಳಿ ಮತ್ತು ಕಡಬಗೆರೆ ಡಿಸಿಪಿ (ಪೀಣ್ಯ) ವಿಭಾಗದ ಅಡಿಯಲ್ಲಿ ಹೊಸ ಪೊಲೀಸ್ ಠಾಣೆಗಳು. ಏಳು ಹೊಸ ಸಂಚಾರ ಪೊಲೀಸ್ ಠಾಣೆಗಳೆಂದರೆ ಕೊತ್ತನೂರು, ಮಾರತ್ತಹಳ್ಳಿ, ಆವಲಹಳ್ಳಿ, ಹೆಬ್ಬಗೋಡಿ, ಅತ್ತಿಬೆಲೆ, ಆರ್ಆರ್ ನಗರ ಮತ್ತು ಮಾದನಾಯಕನಹಳ್ಳಿ ಸೇರಲಿದೆ.
ಜಿಬಿಎ ಮುಖ್ಯವಾಗಿ ಆಡಳಿತಾತ್ಮಕ ಮತ್ತು ನಾಗರಿಕ ಆಡಳಿತ ವ್ಯವಸ್ಥೆಯಾಗಿದೆ. ಆದರೆ ಪೊಲೀಸ್ ವ್ಯವಸ್ಥೆಯು ಕಾನೂನು ಸುವ್ಯವಸ್ಥೆ, ಅಪರಾಧ ತನಿಖೆ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಒಳಗೊಂಡ ವಿಶೇಷ ಕಾರ್ಯವ್ಯಾಪ್ತಿಯಾಗಿದೆ. ಹೀಗಾಗಿ ಎರಡೂ ವ್ಯವಸ್ಥೆಗಳನ್ನು ನೇರವಾಗಿ ಹೋಲಿಕೆ ಮಾಡಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಯ ಪುನರ್ರಚನೆ ಜಿಬಿಎ ಮಾದರಿಗೆ ಹೊಂದಿಸುವುದಕ್ಕಿಂತ ಪೊಲೀಸ್ ವ್ಯವಸ್ಥೆಯ ನೈಜ ಅಗತ್ಯಗಳನ್ನು ಆಧರಿಸಿರಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.




