ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಭಾಗಶಃ ಅನುಮತಿಸಿರುವ ಹೈಕೋರ್ಟ್, ಟ್ರಸ್ಟ್ ವಿರುದ್ಧ ಸಲ್ಲಿಸಿರುವ ಖಾಸಗಿ ದೂರನ್ನು ಮುಂದುವರೆಸಲು ಅನುಮತಿ ನೀಡಿದೆ.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ಖಾಸಗಿ ದೂರಿನ ಪ್ರಮಾಣ ಪತ್ರದಲ್ಲಿ ದೋಷಗಳಿವೆ ಎಂದು ಉಲ್ಲೇಖಿಸಿದ್ದ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ದೂರುದಾರ ವಿಜಯ ರಾಘವ ಮರಾಠೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.
ನ್ಯಾಯಪೀಠವು ಹೊರಡಿಸಿರುವ ಆದೇಶದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ, ದೂರುದಾರರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಾಂತ್ರಿಕ ಲೋಪಗಳಿವೆ. ಬಿಎನ್ಎಸ್ಎಸ್ ಸೆಕ್ಷನ್ 333ರ ಅಡಿ ಸರಿಯಾಗಿ ದೃಢೀಕರಿಲ್ಲ ಎಂದು ತಿಳಿಸಿ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸದೆ, ಬಿಎನ್ಎಸ್ಎಸ್ ಸೆಕ್ಷನ್ 223ರ ಅಡಿ ನ್ಯಾಯಾಲಯವೇ ನೇರವಾಗಿ ವಿಚಾರಣೆ ನಡೆಸಲು ನಿರ್ಧರಿಸಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


ಪ್ರಮಾಣ ಪತ್ರದಲ್ಲಿನ ಗೊಂದಲಗಳಿಂದ, ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸದೆ, ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದ್ದರು. ಇದಕ್ಕೆ ಪೀಠ, ಪ್ರಮಾಣ ಪತ್ರದಲ್ಲಿ ದೋಷವಿದೆ ಎಂಬ ಕಾರಣಕ್ಕೆ ವಿಶೇಷ ನ್ಯಾಯಾಧೀಶರೇ ವಿಚಾರಣೆ ನಡೆಸುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿತ್ತು. ಅಲ್ಲದೆ, ದೂರಿನ ಪ್ರತಿಯನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು. ಈ ಹಿಂದೆ ನಡೆದ ವಿಚಾರಣೆ ವೇಳೆ, ಪ್ರಕರಣ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.
ಇದಾದ ನಂತರ ಏಕಸದಸ್ಯ ನ್ಯಾಯಪೀಠವು ಬೆಂಗಳೂರು ನಗರದ 81ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಖಾಸಗಿ ದೂರಿನ ಕುರಿತು (P.C.R.No.28/2025) 2026ರ ಆಗಸ್ಟ್ 11ರಂದು ನೀಡಿದ್ದ ಆದೇಶವನ್ನು ಬಿಎನ್ಎಸ್ಎಸ್ ಕಲಂ 223 ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿರುವ ಮಟ್ಟಿಗೆ ರದ್ದುಪಡಿಸಲಾಗಿದೆ ಎಂದು ಹೇಳಿದೆ.

ಅದೇ ರೀತಿ ಈ ಪ್ರಕರಣವನ್ನು ಸಂಬಂಧಿತ ನ್ಯಾಯಾಲಯಕ್ಕೆ ಹಿಂತಿರುಗಿಸಿದೆ. ಕಾನೂನಿನಲ್ಲಿ ನಿಗದಿಪಡಿಸಿರುವ ಬಿಎನ್ಎಸ್ಎಸ್ ಕಲಂ 175ರ ಪ್ರಕ್ರಿಯೆಯನ್ನು ಅನುಸರಿಸಿ ಪ್ರಕರಣದಲ್ಲಿ ಮುಂದುವರಿಯಬೇಕು ಎಂದ ಆದೇಶದಲ್ಲಿ ಹೇಳಿದೆ. ಈ ಕಲಂನಲ್ಲಿ ಒಳಗೊಂಡಿರುವ ಪ್ರಕ್ರಿಯೆಯನ್ನು ಈ ಆದೇಶದ ಸಂದರ್ಭದಲ್ಲಿ ಮಾಡಲಾಗಿರುವ ಈ ಮೇಲಿನ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಅನುಸರಿಸಬೇಕು ಎಂದು ಆದೇಶಿಸಿರುವುದು ತಿಳಿದು ಬಂದಿದೆ.
ದೂರುದಾರರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕಾನೂನಿನ ಪ್ರಕಾರ ಅಗತ್ಯವಿರುವ ಪರಿಶೀಲನೆ/ದೃಢೀಕರಣದ ದೋಷವಿತ್ತು. ಆದರೆ ಆ ದೋಷವು ಸರಿಪಡಿಸಬಹುದಾದ ದೋಷವಾಗಿದೆ. ಪ್ರಮಾಣಪತ್ರದಲ್ಲಿನ ದೋಷದ ಕಾರಣಕ್ಕೆ ಪ್ರಕರಣವನ್ನು ಸಂಪೂರ್ಣವಾಗಿ ಬಿಎನ್ಎಸ್ಎಸ್ ಕಲಂ 223ರ ವಿಚಾರಣೆಗೆ ತಿರುಗಿಸುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ದೂರುದಾರರಿಗೆ ಪ್ರಮಾಣಪತ್ರದ ದೋಷವನ್ನು ಸರಿಪಡಿಸಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

ಇದಾದ ನಂತರ ಬಿಎನ್ಎಸ್ಎಸ್ ಕಲಂ 175(3) ಮತ್ತು ಅನ್ವಯಿಸಿದಲ್ಲಿ 175(4) ರ ಪ್ರಕ್ರಿಯೆಯನ್ನು ಅನುಸರಿಸಬೇಕು. ಆರೋಪಗಳು ನಿಜವೇ ಅಥವಾ ಸುಳ್ಳೇ ಎಂಬುದರ ಕುರಿತು ಹೈಕೋರ್ಟ್ ಈ ಹಂತದಲ್ಲಿ ಯಾವುದೇ ಅಂತಿಮ ಅಭಿಪ್ರಾಯ ನೀಡಿಲ್ಲ. ಆದ್ದರಿಂದ ಕ್ರಿಮಿನಲ್ ಅರ್ಜಿಯನ್ನು ಭಾಗಶಃ ಅನುಮತಿಸಿ, ಬಿಎನ್ಎಸ್ಎಸ್ ಕಲಂ 223ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ನೀಡಿದ್ದ ಆದೇಶದ ಭಾಗವನ್ನು ರದ್ದುಪಡಿಸಿ, ಪ್ರಕರಣವನ್ನು ಸಂಬಂಧಿತ ನ್ಯಾಯಾಲಯಕ್ಕೆ ಮರು ಕಳುಹಿಸಲಾಗಿದೆ ಎಂದು ಹೇಳಿರುವುದು ತಿಳಿದು ಬಂದಿದೆ.
ಭ್ರಷ್ಟಾಚಾರದ ಸಾಕ್ಷ್ಯಗಳು ಸಾಮಾನ್ಯವಾಗಿ ದೂರುದಾರನ ಕೈಯಲ್ಲಿ ಸಂಪೂರ್ಣವಾಗಿ ಲಭ್ಯವಿರುವುದಿಲ್ಲ. ಭ್ರಷ್ಟಾಚಾರದ ಕುರುಹುಗಳು ಸಾಮಾನ್ಯವಾಗಿ ಅಧಿಕೃತ ಕಡತಗಳು, ಟಿಪ್ಪಣಿಗಳು, ಪತ್ರವ್ಯವಹಾರ, ಪ್ರಸ್ತಾವನೆಗಳ ಚಲನವಲನ, ಸಮಿತಿಗಳ ನಿರ್ಧಾರಗಳು ಮತ್ತು ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗವಹಿಸಿದವರ ವರ್ತನೆಗಳಲ್ಲಿ ಚದುರಿಕೊಂಡಿರುತ್ತವೆ ಎಂದು ವಿವರಿಸಿದೆ. ಈ ಅಂಶವು ದೂರುದಾರರ ವಾದಗಳಿಗೆ ಒಂದಷ್ಟು ಬಲ ಬಂದಂತಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಕ್ರಿಮಿನಲ್ ಅರ್ಜಿಯನ್ನು ಬಿಎನ್ಎಸ್ಎಸ್ ಕಲಂ 528 ಅಡಿಯಲ್ಲಿ ಸಲ್ಲಿಸಲಾಗಿದ್ದು, ಬೆಂಗಳೂರು ನಗರದ 81ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು (CCH-82) ಖಾಸಗಿ ದೂರಿನ ( PCR No.28/2025ರಲ್ಲಿ 11.08.2026)ನ ಸಂಬಂಧ ನೀಡಿದ್ದ ಪ್ರಶ್ನಿತ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಈ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿತ್ತು.
ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಖಾಸಗಿ ದೂರಿನ ಪ್ರಮಾಣ ಪತ್ರದಲ್ಲಿ ದೋಷಗಳಿವೆ ಎಂದು ಉಲ್ಲೇಖಿಸಿರುವ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ದೂರುದಾರ ವಿಜಯ ರಾಘವ ಮರಾಠೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠವು 2026ರ ಆಗಸ್ಟ್ 19ರಂದು ವಿಚಾರಣೆ ನಡೆಸಿತ್ತು.
ಈ ಪ್ರಕರಣವು ಬಿಎನ್ಎಸ್ಎಸ್ 2023ರ ಕಲಂ 314, 316, 336 ಮತ್ತು 61, ಜೊತೆಗೆ ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಕಲಂ 13(1)(a) ಮತ್ತು 13(1)(b) ಅಡಿಯಲ್ಲಿ ಆರೋಪಿಸಲಾದ ಅಪರಾಧಗಳಿಗೆ ಸಂಬಂಧಿಸಿದೆ.

ವಿಶೇಷವಾಗಿ, ಆ ನ್ಯಾಯಾಲಯವು ಬಿಎನ್ಎಸ್ಎಸ್ ಕಲಂ 175 ಅಡಿಯಲ್ಲಿ ತನಿಖೆಯ ಮಾರ್ಗವನ್ನು ಅನುಸರಿಸುವಂತೆ ನಿರ್ದೇಶಿಸದೆ, ಬಿಎನ್ಎಸ್ಎಸ್ ಕಲಂ 223 ಅಡಿಯಲ್ಲಿ ತಾನೇ ವಿಚಾರಣೆ ನಡೆಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದನ್ನು ಪ್ರಶ್ನಿಸಲಾಗಿದೆ. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಹಾಗೂ ಪ್ರತಿವಾದಿ ಸಂಖ್ಯೆ 1 ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪರ ಹಾಜರಾದ ವೆಂಕಟೇಶ್ ಎಸ್. ಅರ್ಬಟ್ಟಿ ಅವರ ವಾದಗಳನ್ನು ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಾದಾಂಶಗಳನ್ನು ಆಲಿಸಿತು.
ಆರೋಪಿ ಸಂಖ್ಯೆ 1ರಿಂದ 5ರವರೆಗೆ ಪ್ರತಿವಾದಿ ಸಂಖ್ಯೆ 2ರಿಂದ 6ರವರೆಗೆ ಹೆಸರಿಸಲ್ಪಟ್ಟಿದ್ದರೂ, ಅವರು ಈ ಹಂತದಲ್ಲಿ ಕೇವಲ ಔಪಚಾರಿಕ ಪಕ್ಷಕಾರರಾಗಿರುವುದರಿಂದ ವಿಚಾರಣೆಯ ಹಕ್ಕನ್ನು ಹೊಂದಿರುವುದಿಲ್ಲ. ಆದ್ದರಿಂದ, ಪ್ರತಿವಾದಿಗಳಾದ ಪ್ರತಿವಾದಿ ಸಂಖ್ಯೆ 2ರಿಂದ 6ರವರೆಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂಬುದನ್ನು ನ್ಯಾಯಪೀಠವು ಗಮನಿಸಿತು.

ಸಂಬಂಧಿತ ವಾಸ್ತವಾಂಶಗಳು ಹೀಗಿವೆ
ಅರ್ಜಿದಾರರು 2025ರ ಜನವರಿ 21ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ವ್ಯಾಪ್ತಿಯ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆ ದೂರಿನ ಮುಖ್ಯ ಆರೋಪವೆಂದರೆ, ಸಿದ್ಧಾರ್ಥ ವಿಹಾರ್ ಟ್ರಸ್ಟ್ ಎಲ್ಲಾ ಸಮುದಾಯಗಳ ಜನರ, ಜಾತಿ, ಧರ್ಮ ಅಥವಾ ಪಂಥದ ಭೇದವಿಲ್ಲದೆ, ಹಿತಕ್ಕಾಗಿ ರಚಿಸಲಾದ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿದ್ದರೂ, ತಾನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮಾತ್ರ ಸ್ಥಾಪಿಸಲಾದ ಸಂಸ್ಥೆ ಎಂಬ ರೀತಿಯಲ್ಲಿ ತನ್ನನ್ನು ತಾನು ಬಿಂಬಿಸಿಕೊಂಡಿದೆ. ಅಂತಹ ಸಂಸ್ಥೆಗಳಿಗೆ ಮಾತ್ರ ಮೀಸಲಾದ ರಿಯಾಯಿತಿಗಳು ಮತ್ತು ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಈ ರೀತಿಯ ಪ್ರಾತಿನಿಧಿತ್ವ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಾತಿನಿಧಿತ್ವದ ಆಧಾರದ ಮೇಲೆ ಟ್ರಸ್ಟ್ ಬನಶಂಕರಿ 6ನೇ ಹಂತದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಕೋಟಾದಡಿ ನಾಗರಿಕ ಸೌಲಭ್ಯ ನಿವೇಶನ (Civic Amenity Site) ಮಂಜೂರು ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (BDA) ಸಂಪರ್ಕಿಸಿತು ಮತ್ತು ಲೀಸ್ ಮೊತ್ತದಲ್ಲಿ 50% ರಿಯಾಯಿತಿ ಪಡೆದಿದೆ ಎಂದು ಆರೋಪಿಸಲಾಗಿದೆ.

ಅರ್ಜಿದಾರರ ಪ್ರಕಾರ, ಈ ರಿಯಾಯಿತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮಾತ್ರ ಸ್ಥಾಪಿಸಲಾದ ಟ್ರಸ್ಟ್ಗಳಿಗೆ ಉದ್ದೇಶಿಸಲಾಗಿತ್ತು. ನಿವೇಶನ ಮಂಜೂರಾತಿ ಸಾಮಾನ್ಯ ಕ್ರಮದಲ್ಲಿ ನಡೆದಿಲ್ಲ; ಕೆಲವು ಟ್ರಸ್ಟಿಗಳು ಸಾರ್ವಜನಿಕ ಸೇವಕರೊಂದಿಗೆ ಸೇರಿ ತಮ್ಮ ಪ್ರಭಾವವನ್ನು ಬಳಸಿಕೊಂಡು, ಇಂತಹ ಮಂಜೂರಾತಿಗೆ ಅನ್ವಯಿಸುವ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ನಿವೇಶನ ಪಡೆಯುವಂತೆ ಮಾಡಿದರು ಎಂದು ದೂರಿನಲ್ಲಿ ಮತ್ತಷ್ಟು ಆರೋಪಿಸಲಾಗಿದೆ ಎಂದು ಏಕಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಈ ದೂರು ಸಲ್ಲಿಸಿದರೂ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಯಾವುದೇ ಅಪರಾಧ ಪ್ರಕರಣ ನೋಂದಣಿಯಾಗಲಿಲ್ಲ. ಆದ್ದರಿಂದ ಅರ್ಜಿದಾರರು 2025ರ ಜನವರಿ 30ರಂದು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರಿಗೆ ಮತ್ತೊಂದು ದೂರು ಸಲ್ಲಿಸಿದರು. ಇದಕ್ಕೂ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಆರೋಪಗಳು ಸಾರ್ವಜನಿಕ ಸೇವಕರ ವಿರುದ್ಧವೂ ಇದ್ದವು ಮತ್ತು ಅವು ಭ್ರಷ್ಟಾಚಾರ ತಡೆ ಕಾಯ್ದೆ, 1988ಕ್ಕೆ ಸಂಬಂಧಿಸಿದ್ದರಿಂದ ಅರ್ಜಿದಾರರು 2025ರ ಜುಲೈ 30ರಂದು ರಾಜ್ಯಪಾಲರ ಮುಂದೆ ಕಾಯ್ದೆಯ ಕಲಂ 17A ಅಡಿಯಲ್ಲಿ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದ್ದರು.
ಕಾನೂನಿನ ಪ್ರಕಾರ ತಟ್ಟಬೇಕಾದ ಎಲ್ಲ ಬಾಗಿಲುಗಳನ್ನು ತಟ್ಟಿದರೂ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ, ಅರ್ಜಿದಾರರು ಅಂತಿಮವಾಗಿ ವಿಶೇಷ ನ್ಯಾಯಾಲಯದ ಮುಂದೆ (P.C.R.No.28/2025ರಲ್ಲಿ) ಖಾಸಗಿ ದೂರು ದಾಖಲಿಸಿದ್ದಾರೆ. ನಾಗರಿಕ ಸೌಲಭ್ಯ ನಿವೇಶನಗಳ ಮಂಜೂರಾತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳಾಗಿವೆ ಎಂದು ದೂರಿನಲ್ಲಿ ಆರೋಪಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (BNSS)ರ ಕಲಂ 175(3) ಅಡಿಯಲ್ಲಿ ತನಿಖೆಗಾಗಿ ಪ್ರಕರಣವನ್ನು ಉಲ್ಲೇಖಿಸಬೇಕು ಎಂದು ಕೋರಿದ್ದರು.
ಆದರೆ ಸಂಬಂಧಿತ ನ್ಯಾಯಾಲಯವು ಬಿಎನ್ಎಸ್ಎಸ್ ಕಲಂ 175(3) ಅಡಿಯಲ್ಲಿ ತನಿಖೆಗೆ ಆದೇಶಿಸಬೇಕು ಎಂಬ ಬೇಡಿಕೆಯನ್ನು ಅಂಗೀಕರಿಸಲಿಲ್ಲ. ಬದಲಾಗಿ, ನ್ಯಾಯಾಲಯವೇ ಬಿಎನ್ಎಸ್ಎಸ್ ಕಲಂ 223 ಅಡಿಯಲ್ಲಿ ವಿಚಾರಣೆ ನಡೆಸುವುದಾಗಿ ನಿರ್ದೇಶಿಸಿತು. ಹೀಗಾಗಿ ತನಿಖಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸದ ಸಂಬಂಧಿತ ನ್ಯಾಯಾಲಯದ ಈ ಕ್ರಮವೇ, ವಿಶೇಷವಾಗಿ ಆದೇಶದ ಕಾರ್ಯನಿರ್ವಹಣಾ ಭಾಗವೇ, ಅರ್ಜಿದಾರರನ್ನು ಈ ನ್ಯಾಯಾಲಯದ ಮುಂದೆ ಬರಲು ಕಾರಣವಾಗಿದೆ ಎಂದು ಏಕಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ ವಿವರಿಸಿದೆ.

ಅರ್ಜಿದಾರರ ವಾದವೇನು?
ಅರ್ಜಿದಾರ-ದೂರುದಾರರ ಪರ ಹಾಜರಾದ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಅವರು, ದೂರಿನಲ್ಲಿ ಮಾಡಲಾದ ಆರೋಪಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಗಮನಿಸಿದರೆ BNSS ಕಲಂ 175(3) ಅಡಿಯಲ್ಲಿ ತನಿಖೆ ನಡೆಸುವ ಅಗತ್ಯ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಬಲವಾಗಿ ವಾದಿಸಿದರು. ಭ್ರಷ್ಟಾಚಾರ, ಸಾರ್ವಜನಿಕ ಹುದ್ದೆಯ ದುರುಪಯೋಗ ಮತ್ತು ನಿಯಮಗಳಿಗೆ ವಿರುದ್ಧವಾಗಿ ಸೌಲಭ್ಯಗಳನ್ನು ನೀಡಿದ ಆರೋಪಗಳನ್ನು ವಿಶೇಷ ನ್ಯಾಯಾಲಯವು ತಾನೇ ವಿಚಾರಣೆ ನಡೆಸುವ ಮೂಲಕ ಸೂಕ್ತವಾಗಿ ಪತ್ತೆಹಚ್ಚಲು ಸಾಧ್ಯವಿಲ್ಲ. ವಿಶೇಷವಾಗಿ, ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡಲು ಕಾನೂನಿನಲ್ಲಿ ವಿಶೇಷ ತನಿಖಾ ಸಂಸ್ಥೆಯೇ ಅಸ್ತಿತ್ವದಲ್ಲಿರುವ ಸಂದರ್ಭದಲ್ಲಿ, ಅದರ ಮೂಲಕ ತನಿಖೆ ನಡೆಯಬೇಕು ಎಂದು ಅವರು ವಾದಿಸಿದರು.
ದೂರಿನಲ್ಲಿ ಹೊರಹೊಮ್ಮಿರುವ ವಿಷಯಗಳು ದೂರುದಾರರ ಬಳಿ ಈಗಿರುವ ದಾಖಲೆಗಳಿಂದ ಮಾತ್ರ ಪತ್ತೆಹಚ್ಚಬಹುದಾದವುಗಳಲ್ಲ. ಅಧಿಕೃತ ದಾಖಲೆಗಳನ್ನು ಸಂಗ್ರಹಿಸುವುದು, ನಿವೇಶನ ಮಂಜೂರಾತಿಗೆ ಕಾರಣವಾದ ಪ್ರಕ್ರಿಯೆಯನ್ನು ಪರಿಶೀಲಿಸುವುದು, ಸಂಬಂಧಿತ ಸಾರ್ವಜನಿಕ ಸೇವಕರ ಪಾತ್ರವನ್ನು ಗುರುತಿಸುವುದು ಮತ್ತು ನಿರ್ದಿಷ್ಟ ವರ್ಗದ ಸಂಸ್ಥೆಗಳಿಗೆ ಮೀಸಲಾದ ರಿಯಾಯಿತಿಯನ್ನು ಟ್ರಸ್ಟ್ಗೆ ಹೇಗೆ ನೀಡಲಾಯಿತು ಎಂಬುದನ್ನು ತನಿಖೆ ಮಾಡುವುದು ಅಗತ್ಯವಾಗಿದೆ ಎಂದು ವಾದಿಸಿದರು.

ಹಿರಿಯ ವಕೀಲರು ಮುಂದುವರಿದು, ಪ್ರಮಾಣಪತ್ರ (affidavit) ಸಲ್ಲಿಸುವುದು ಅಥವಾ ಇತರ ಪ್ರಕ್ರಿಯಾತ್ಮಕ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಅಗತ್ಯವು ನ್ಯಾಯಾಲಯವು ದೂರನ್ನು ತನಿಖೆಗೆ ಉಲ್ಲೇಖಿಸುವ ಹಂತದಲ್ಲಿ ಉದ್ಭವಿಸುತ್ತದೆ ಎಂದು ವಾದಿಸಿದರು. ಆ ಕಾರಣವನ್ನು ಬಳಸಿಕೊಂಡು ದೂರನ್ನು ಸಂಪೂರ್ಣವಾಗಿ ಬಿಎನ್ಎಸ್ಎಸ್ ಕಲಂ 223 ಅಡಿಯಲ್ಲಿ ವಿಚಾರಣೆ ನಡೆಸುವುದು ಸರಿಯಲ್ಲ. ಆರೋಪಗಳ ಸ್ವರೂಪವೇ ವಿಶೇಷ ತನಿಖಾ ಸಂಸ್ಥೆಯಿಂದ ತನಿಖೆಯನ್ನು ನಡೆಸಬೇಕು ಎಂಬ ಸಂದರ್ಭದಲ್ಲಿ, ಸಂಬಂಧಿತ ನ್ಯಾಯಾಲಯವು ವಿಚಾರಣೆಯನ್ನು ಆಯ್ಕೆ ಮಾಡಿಕೊಂಡು ವಾಸ್ತವಾಂಶ ಮತ್ತು ಕಾನೂನು ಎರಡರಲ್ಲಿಯೂ ತಪ್ಪು ಮಾರ್ಗ ಹಿಡಿದಿದೆ ಎಂದು ಅವರು ವಾದಿಸಿರುವ ಅಂಶಗಳನ್ನು ಏಕಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ ವಿಸ್ತೃತವಾಗಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಕರ್ನಾಟಕ ಲೋಕಾಯುಕ್ತದ ವಾದವೇನು?
ಈ ಪ್ರಕರಣದಲ್ಲಿ ಮೊದಲನೇ ಪ್ರತಿವಾದಿಯಾಗಿರವ ಕರ್ನಾಟಕ ಲೋಕಾಯುಕ್ತರ ಪರ ಹಾಜರಾದ ವಕೀಲರಾದ ವೆಂಕಟೇಶ್ ಎಸ್. ಅರಬಟ್ಟಿ ಅವರು, ದೂರಿನಲ್ಲಿ ಮಾಡಿರುವ ಆರೋಪಗಳು ಭ್ರಷ್ಟಾಚಾರದ ಕೃತ್ಯಗಳು ಮತ್ತು ಸಾರ್ವಜನಿಕ ಸೇವಕರ ಪಾತ್ರಕ್ಕೆ ಸಂಬಂಧಿಸಿದ್ದೇ ಆಗಿವೆ ಎಂದು ನ್ಯಾಯಸಮ್ಮತವಾಗಿ ಒಪ್ಪಿಕೊಂಡರು. ಈ ರೀತಿಯ ಆರೋಪಗಳಿಗೆ ಸೂಕ್ತವಾಗಿ ತನಿಖೆಯ ಅಗತ್ಯವಿದೆ ಎಂದು ಅವರು ತಿಳಿಸಿದರು ಎಂದು ಆದೇಶದಲ್ಲಿ ವಿವರಿಸಿದೆ.
ಈ ವಾದವನ್ನು ಹೊರತುಪಡಿಸಿ, ಅವರು ಅರ್ಜಿದಾರರೊಂದಿಗೆ ಯಾವುದೇ ವಿವಾದವನ್ನು ಮುಂದುವರಿಸದೆ, ವಿಷಯವನ್ನು ಈ ನ್ಯಾಯಾಲಯದ ವಿವೇಚನಾತ್ಮಕ ನಿರ್ಧಾರಕ್ಕೆ ಬಿಟ್ಟಿರುವುದು ಆದೇಶದಿಂದ ತಿಳಿದು ಬಂದಿದೆ.

ಎರಡೂ ಕಡೆಯ ವಕೀಲರು ಮಂಡಿಸಿದ ವಾದಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠವು ದಾಖಲೆಯಲ್ಲಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿದೆ. ನಂತರ ಎರಡೂ ಕಡೆಯ ವಾದ-ಪ್ರತಿವಾದಗಳ ಹಿನ್ನೆಲೆಯಲ್ಲಿ, ಸಂಬಂಧಿತ ನ್ಯಾಯಾಲಯವು ಬಿಎನ್ಎಸ್ಎಸ್ ಕಲಂ 223 ಅಡಿಯಲ್ಲಿ ತಾನೇ ವಿಚಾರಣೆ ನಡೆಸುವಂತೆ ಆದೇಶಿಸಿದ್ದು ಸರಿಯೇ ಅಥವಾ ಬಿಎನ್ಎಸ್ಎಸ್ ಕಲಂ 175(3) ಅಡಿಯಲ್ಲಿ ಕ್ರಮ ಅನುಸರಿಸಬೇಕಾಗಿತ್ತೇ ಎಂಬ ಪ್ರಶ್ನೆಯೇ ಮುಖ್ಯವಾಗಿದೆ ಎಂದು ಏಕ ಸದಸ್ಯ ನ್ಯಾಯಪೀಠದ ಆದೇಶದಲ್ಲಿ ಚರ್ಚಿಸಿದೆ.
ಈ ಸಂಬಂಧ 2026ರ ಆಗಸ್ಟ್ 11ರಂದು ನೀಡಿದ್ದ ಆದೇಶವನ್ನು ಏಕ ಸದಸ್ಯ ನ್ಯಾಯಪೀಠವು ಗಮನಿಸಿದೆ.
“ದೂರುದಾರರಾದ ವಿಜಯರಾಘವ ಮರಾಠೆ ಅವರು ಬಿಎನ್ಎಸ್ಎಸ್ ಕಲಂ ಕಲಂ 175(3) ಜೊತೆಗೆ ಕಲಂ 2(1)(h) ಅಡಿಯಲ್ಲಿ ದೂರು ಪತ್ರವನ್ನು ಸಲ್ಲಿಸಿದ್ದು, ಲೋಕಾಯುಕ್ತದ ಪೊಲೀಸ್ ಅಧೀಕ್ಷಕರಿಗೆ ಆರೋಪಿಗಳ ವಿರುದ್ಧ ಬಿಎನ್ಎಸ್ 2023ರ ಕಲಂ 314, 316, 336 ಮತ್ತು 61 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಕಲಂ 13(1)(a) ಮತ್ತು 13(1)(b) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿದ್ದಾರೆ. ಈ ದೂರಿನಲ್ಲಿ, ಸಿದ್ಧಾರ್ಥ ವಿಹಾರ್ ಟ್ರಸ್ಟ್ ಅನ್ನು 1994ರ ಜುಲೈ 1ರಂದು ನೋಂದಾಯಿತ ಟ್ರಸ್ಟ್ ಡೀಡ್ ಮೂಲಕ ಐದು ಸದಸ್ಯರು ಸ್ಥಾಪಿಸಿದ್ದು, ಸಾರ್ವಜನಿಕರ ಸಾಮಾನ್ಯ ಹಿತಕ್ಕಾಗಿ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.

2010ರ ಮೇ 27ರಂದು ಪೂರಕ ಟ್ರಸ್ಟ್ ಡೀಡ್ ಮೂಲಕ ಶ್ರೀಮತಿ ರಾಧಾಬಾಯಿ ಎಂ. ಖರ್ಗೆ, ರಾಹುಲ್ ಎಂ. ಖರ್ಗೆ ಮತ್ತು ಪ್ರಿಯಾಂಕ್ ಎಂ. ಖರ್ಗೆ ಅವರನ್ನು ಟ್ರಸ್ಟಿಗಳಾಗಿ ಸೇರಿಸಲಾಯಿತು. ಬಿಡಿಎಯು 2009ರ ಜನವರಿ 30ರಂದು ಬನಶಂಕರಿ 6ನೇ ಹಂತ, 5ನೇ ಬ್ಲಾಕ್, ಬೆಂಗಳೂರಿನಲ್ಲಿ ನಾಗರಿಕ ಸೌಲಭ್ಯ ನಿವೇಶನಗಳ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿತು. ಸಿದ್ಧಾರ್ಥ ವಿಹಾರ್ ಟ್ರಸ್ಟ್ 8125 ಚದರ ಮೀಟರ್ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ಪರಿಶಿಷ್ಟ ಜಾತಿ ವರ್ಗದಡಿ ಪಡೆಯಲು 27.02.2009ರಂದು ಆರಂಭಿಕ ಠೇವಣಿಯೊಂದಿಗೆ ಅರ್ಜಿ ಸಲ್ಲಿಸಿತು.
ಈ ಟ್ರಸ್ಟ್, ಬಿಡಿಎಯು (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು, 1989ರ ನಿಯಮ 3(2) ರ ಅವಶ್ಯಕತೆಗಳನ್ನು ಪೂರೈಸಿರಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಅರ್ಜಿಯ ಪ್ರಶ್ನೆ ಸಂಖ್ಯೆ 9ರಲ್ಲಿ, ಟ್ರಸ್ಟ್ ಪರಿಶಿಷ್ಟ ಜಾತಿಗಾಗಿ ಬೇಡಿಕೆ ಸಲ್ಲಿಸಿತು; ಆದರೆ ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತಕ್ಕಾಗಿ ಮಾತ್ರ ಸ್ಥಾಪಿತವಾದ ಟ್ರಸ್ಟ್ ಆಗಿರಲಿಲ್ಲ. ನಿವೇಶನ ಮಂಜೂರಾತಿಯ ಸಮಯದಲ್ಲಿ ಆರೋಪಿ ಸಂಖ್ಯೆ 1 ಕೇಂದ್ರ ಸಚಿವರಾಗಿದ್ದು, ತಮ್ಮ ವೈಯಕ್ತಿಕ ಪ್ರಭಾವವನ್ನು ಬಳಸಿ ಅನ್ವಯಿಸುವ ನಿಯಮಗಳ ಪ್ರಕಾರದ ಪ್ರಕ್ರಿಯೆಯನ್ನು ಅನುಸರಿಸದೆ ನಿವೇಶನ ಮಂಜೂರು ಮಾಡಿಸಿಕೊಂಡರು ಎಂದು ಆರೋಪಿಸಲಾಗಿದೆ ಎಂದು ಏಕ ಸದಸ್ಯ ನ್ಯಾಯಪೀಠವು ವಿವರಿಸಿದೆ.
ಪರಿಶಿಷ್ಟ ಜಾತಿಯ ಕಲ್ಯಾಣಕ್ಕಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗಳಿಗೆ ಮೀಸಲಾಗಿದ್ದ ನಿವೇಶನವನ್ನು ಸಿದ್ಧಾರ್ಥ ವಿಹಾರ್ ಟ್ರಸ್ಟ್ಗೆ ನೀಡಿರುವುದು, ಆರೋಪಿ ಸಂಖ್ಯೆ 1ರಿಂದ 5ರವರೆಗಿನ ಟ್ರಸ್ಟಿಗಳು ತಮ್ಮ ಪ್ರಭಾವವನ್ನು ಬಳಸಿಕೊಂಡು ಬಿಡಿಎ ಅಧಿಕಾರಿಗಳೊಂದಿಗೆ ಸಂಚು ರೂಪಿಸಿರುವುದನ್ನು ತೋರಿಸುತ್ತದೆ ಎಂದು ಆರೋಪಿಸಲಾಗಿದೆ.

ನಿಯಮಗಳಲ್ಲಿ ನಿಗದಿಪಡಿಸಿದ ಕಡ್ಡಾಯ ಮಾನದಂಡಗಳನ್ನು ಪಾಲಿಸದೆ ಸಿದ್ಧಾರ್ಥ ವಿಹಾರ್ ಟ್ರಸ್ಟ್ಗೆ ಮಾಡಲಾದ ನಿವೇಶನ ಮಂಜೂರಾತಿ ಕಾನೂನುಬಾಹಿರವಾಗಿದೆ. ಟ್ರಸ್ಟ್ ತನ್ನನ್ನು ಪರಿಶಿಷ್ಟ ಜಾತಿಯ ನಿರ್ವಹಣೆಯಲ್ಲಿರುವ ಸಂಸ್ಥೆ ಎಂದು ಹೇಳಿಕೊಂಡು 2010ರ ಜೂನ್ 8ರಂದು ಬಿಡಿಎಗೆ ಲೀಸ್ ಮೊತ್ತದಲ್ಲಿ ರಿಯಾಯಿತಿ ನೀಡುವಂತೆ ಮನವಿ ಮಾಡಿತು. ಒಂದು ತಿಂಗಳೊಳಗೆ ಟ್ರಸ್ಟ್ಗೆ ಶೇ. 50ರಷ್ಟು ರಿಯಾಯಿತಿ ನೀಡುವಂತೆ ಆ ಮನವಿಯನ್ನು ಅಂಗೀಕರಿಸಲಾಯಿತು. ಇದು ನಿವೇಶನ ಮಂಜೂರಾತಿಯಲ್ಲಿ ಅನಗತ್ಯ ಪ್ರಭಾವ ಮತ್ತು BDA ಅಧಿಕಾರಿಗಳೊಂದಿಗೆ ಹೊಂದಾಣಿಕೆಯನ್ನು ತೋರಿಸುತ್ತದೆ ಎಂದು ಆರೋಪಿಸಲಾಗಿದೆ.
ಸಿದ್ಧಾರ್ಥ ವಿಹಾರ್ ಟ್ರಸ್ಟ್ 2010ರ ಸೆ.15ರಂದು ಬಿಡಿಎಗೆ ಪರ್ಯಾಯವಾಗಿ 8002 ಚದರ ಮೀಟರ್ ವಿಸ್ತೀರ್ಣದ ಬಿಎಟಿಎಂ 4ನೇ ಹಂತದ ನಿವೇಶನ ಸಂಖ್ಯೆ 5 ನೀಡುವಂತೆ ಮನವಿ ಮಾಡಿತು. 2010ರ ಸೆ.25ರಂದು ನಡೆದ ಸಮಿತಿ ಸಭೆಯಲ್ಲಿ ನಿರ್ಣಯ ಸಂಖ್ಯೆ 337/2010 ಮೂಲಕ ಆ ಪರ್ಯಾಯ ನಿವೇಶನವನ್ನು ಮಂಜೂರು ಮಾಡಲು ನಿರ್ಧರಿಸಲಾಯಿತು. ಈ ಅರ್ಜಿಯನ್ನು ಅತ್ಯಂತ ವೇಗದಲ್ಲಿ ಪ್ರಕ್ರಿಯೆಗೊಳಿಸಿ ಕೇವಲ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ದಿವ್ಯ ಫೌಂಡೇಶನ್ಗೆ ನೀಡಲಾಗಿದ್ದ ನಿವೇಶನದ ಮಂಜೂರಾತಿಯನ್ನು ರದ್ದುಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅದೇ ರೀತಿ ಆರೋಪಿ ಸಂಖ್ಯೆ 1 ಮತ್ತು 5ರಿಂದ ಅನಗತ್ಯ ಪ್ರಭಾವ ಮತ್ತು ಅಧಿಕಾರದ ದುರುಪಯೋಗದ ಮೂಲಕ ಸಿದ್ಧಾರ್ಥ ವಿಹಾರ್ ಟ್ರಸ್ಟ್ಗೆ ಅನ್ಯಾಯಕರ ಲಾಭ ದೊರಕಿಸುವ ಉದ್ದೇಶದಿಂದ ಈ ಅಕ್ರಮಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪರ್ಯಾಯ ನಿವೇಶನದ ಮಾರುಕಟ್ಟೆ ಮೌಲ್ಯ ಸುಮಾರು ರೂ.130 ಕೋಟಿ ಆಗಿದ್ದು, ಟ್ರಸ್ಟ್ ಅರ್ಹವಾಗಿದ್ದಕ್ಕಿಂತ ಹೆಚ್ಚು ಮೌಲ್ಯದ ನಿವೇಶನವನ್ನು ಬಿಡಿಎಯು ಮಂಜೂರು ಮಾಡಿದೆ ಎಂದು ಆರೋಪಿಸಲಾಗಿದೆ.
ಪರ್ಯಾಯ ನಿವೇಶನದ ಮಂಜೂರಾತಿಯ ನಂತರ ಮತ್ತೆ ಶೇ. 50 ರಿಯಾಯಿತಿ ನೀಡುವ ವಿಚಾರ ಉದ್ಭವಿಸಿತು. ಕಾನೂನು ಅಧಿಕಾರಿಯು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಪರಿಶಿಷ್ಟ ಜಾತಿಯ ಹಿತಕ್ಕಾಗಿ ಮಾತ್ರ ರಚಿಸಲ್ಪಟ್ಟಿಲ್ಲ ಮತ್ತು ರಿಯಾಯಿತಿಗೆ ಅರ್ಹವಲ್ಲ ಎಂದು ಅಭಿಪ್ರಾಯಪಟ್ಟರು. ಸಿದ್ಧಾರ್ಥ ವಿಹಾರ್ ಟ್ರಸ್ಟ್ ಮತ್ತು ಆರೋಪಿ ಸಂಖ್ಯೆ 1ರಿಂದ 5ರವರೆಗೆ ಮೇಲ್ಕಂಡ ನಿಯಮಗಳ ನಿಯಮ 10(7) ಉಲ್ಲಂಘಿಸಿ, ಮೂರು ವರ್ಷಗಳು ಕಳೆದರೂ ಯಾವುದೇ ಕಟ್ಟಡ ನಿರ್ಮಿಸಲಿಲ್ಲ ಎಂದು ಆರೋಪಿಸಲಾಗಿದೆ.
ಮೂರು ವರ್ಷಗಳು ಕಳೆದರೂ ಕಟ್ಟಡ ನಿರ್ಮಾಣವಾಗಿಲ್ಲ ಎಂಬುದನ್ನು 2022ರ ಮಾರ್ಚ್ 30ರ ಪತ್ರ ಒಪ್ಪಿಕೊಂಡಿದೆ. ಬಿಡಿಎಯ ಎಸ್ಟೇಟ್ ಅಧಿಕಾರಿಯು 2022ರ ಜೂನ್ 8ರ ಟಿಪ್ಪಣಿಯಲ್ಲಿ, ಸಿಎ ನಿವೇಶನ ಸಂಖ್ಯೆ 5ರಲ್ಲಿ ಯಾವುದೇ ಕಟ್ಟಡ ನಿರ್ಮಾಣವಾಗಿಲ್ಲ ಎಂದು ದಾಖಲಿಸಿದ್ದಾರೆ. ಅಕ್ರಮದ ಬಗ್ಗೆ ತಿಳಿದಿದ್ದರೂ ಬಿಡಿಎಯ ಅಧಿಕಾರಿಗಳು ನಿಯಮ 10(7)ರ ಪ್ರಕಾರ ಕ್ರಮ ಕೈಗೊಳ್ಳಲಿಲ್ಲ. ಮತ್ತು ಬಿಡಿಎ ಅಧಿಕಾರಿಗಳೊಂದಿಗೆ ಸೇರಿಕೊಂಡು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಅವರಿಗೆ ಮಂಜೂರಾದ ಭೂಮಿಯನ್ನು ಕಾನೂನುಬಾಹಿರವಾಗಿ ಉಳಿಸಿಕೊಂಡಿತು ಎಂದು ಆರೋಪಿಸಲಾಗಿದೆ.
ಆರೋಪಿ ಸಂಖ್ಯೆ 1ರಿಂದ 5ರವರೆಗೆ ತಮ್ಮ ವೈಯಕ್ತಿಕ ಪ್ರಭಾವವನ್ನು ಬಳಸಿ ಪರಿಶಿಷ್ಟ ಜಾತಿ ಕೋಟಾದಡಿ ನಿವೇಶನ ಪಡೆದರು; ನಂತರ ತಮಗೆ ಅನ್ವಯಿಸದ ರಿಯಾಯಿತಿಯನ್ನು ಪಡೆದರು; ಪರ್ಯಾಯ ನಿವೇಶನವನ್ನೂ ಪಡೆದರು; BDAಯಿಂದ ಲೀಸ್ ಪಡೆದ ಭೂಮಿಯನ್ನು ಉದ್ದೇಶಿತ ಕಾರ್ಯಕ್ಕಾಗಿ ಬಳಸಲಿಲ್ಲ ಎಂದು ಆರೋಪಿಸಲಾಗಿದೆ. ಆರೋಪಿ ಸಂಖ್ಯೆ 1ರಿಂದ 5ರವರೆಗೆ ಬಿಡಿಎ ಅಧಿಕಾರಿಗಳೊಂದಿಗೆ ಸೇರಿಕೊಂಡು ಕ್ರಿಮಿನಲ್ ಬ್ರಿಚ್ ಆಫ್ ಟ್ರಸ್ಟ್ ಎಸಗಿದ್ದಾರೆ. ಆಸ್ತಿಯನ್ನು ಕಾನೂನುಬಾಹಿರವಾಗಿ ತಮ್ಮ ವೈಯಕ್ತಿಕ ಬಳಕೆಗೆ ಪರಿವರ್ತಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ಉನ್ನತ ಹುದ್ದೆಗಳನ್ನು ಹೊಂದಿದ್ದ ಆರೋಪಿ ಸಂಖ್ಯೆ 1, 5 ಮತ್ತು 6 ಅವರು ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡು ಸಿದ್ಧಾರ್ಥ ವಿಹಾರ್ ಟ್ರಸ್ಟ್ಗೆ ಅನ್ಯಾಯಕರ ಲಾಭ ದೊರಕಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ದಾಖಲೆಗಳನ್ನು ಜಾಗರೂಕತೆಯಿಂದ ಪರಿಶೀಲಿಸಿದಾಗ, ದೂರುದಾರರು ವಿವರವಾದ ಆರೋಪಗಳನ್ನು ಒಳಗೊಂಡ ಪ್ರಮಾಣೀಕೃತ ಪ್ರಮಾಣಪತ್ರದೊಂದಿಗೆ ದೂರು ಸಲ್ಲಿಸಿರುವುದು ಕಂಡುಬರುತ್ತದೆ. ಟ್ರಸ್ಟ್ ಡೀಡ್ ಮತ್ತು ಪೂರಕ ಟ್ರಸ್ಟ್ ಡೀಡ್ಗಳ ಪ್ರತಿಗಳನ್ನು ಪರಿಶೀಲಿಸಿದಾಗ, ಆರೋಪಿ ಸಂಖ್ಯೆ 1ರಿಂದ 5ರವರೆಗೆ ಸಿದ್ಧಾರ್ಥ ವಿಹಾರ್ ಟ್ರಸ್ಟ್ನ ಟ್ರಸ್ಟಿಗಳಾಗಿದ್ದಾರೆ ಎಂಬುದು ಗೋಚರಿಸುತ್ತದೆ ಎಂದು ಏಕಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ ವಿವರಿಸಿದೆ.
ಈ ಟ್ರಸ್ಟ್ ಜಾತಿ, ಪಂಥ, ಧರ್ಮ, ಲಿಂಗ ಅಥವಾ ವರ್ಣದ ಭೇದವಿಲ್ಲದೆ ಎಲ್ಲರ ಹಿತಕ್ಕಾಗಿ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರುವ ಧಾರ್ಮಿಕೇತರ (secular) ದತ್ತಿ ಟ್ರಸ್ಟ್ ಆಗಿದೆ. 2009ರ ಮಾರ್ಚ್ 5ರಂದು ನಾಗರಿಕ ಸೌಲಭ್ಯ ನಿವೇಶನ ಮಂಜೂರಾತಿ ಅರ್ಜಿಯ ಪ್ರತಿಯನ್ನು ಪರಿಶೀಲಿಸಿದಾಗ, ಸಿದ್ಧಾರ್ಥ ವಿಹಾರ್ ಟ್ರಸ್ಟ್ ಶೈಕ್ಷಣಿಕ ಸಂಸ್ಥೆ ಪ್ರಾರಂಭಿಸಲು ನಾಗರಿಕ ಸೌಲಭ್ಯ ನಿವೇಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿರುವುದು ಕಂಡುಬರುತ್ತದೆ. 2010ರ ಏಪ್ರಿಲ್ 7ರ ಮಂಜೂರಾತಿ ಪತ್ರದ ಪ್ರತಿಯು ಬಿಡಿಎಯು ಬನಶಂಕರಿ 6ನೇ ಹಂತ, 5ನೇ ಬ್ಲಾಕ್ನಲ್ಲಿರುವ 8125 ಚದರ ಮೀಟರ್ CA Site No.3 ಅನ್ನು ಶೈಕ್ಷಣಿಕ ಸಂಸ್ಥೆ ಸ್ಥಾಪಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ಮಂಜೂರು ಮಾಡಿರುವುದನ್ನು ತೋರಿಸುತ್ತದೆ.
2010ರ ಜೂನ್ 8ರ 08 ಪತ್ರದಿಂದ, ಟ್ರಸ್ಟ್ ತನ್ನ ನಿರ್ವಹಣೆ ಪರಿಶಿಷ್ಟ ಜಾತಿಗೆ ಸೇರಿದವರದ್ದಾಗಿದೆ ಎಂಬ ಕಾರಣ ನೀಡಿ ಲೀಸ್ ಮೊತ್ತ ಪಾವತಿಯಲ್ಲಿ ರಿಯಾಯಿತಿ ಕೋರಿರುವುದು ಕಂಡುಬರುತ್ತದೆ. ಬಿಡಿಎಯ 9ನೇ (PCR No.28/2025ರ) ಟಿಪ್ಪಣಿ ಹಾಳೆಯ ಪ್ರತಿಯಿಂದ, ಲೀಸ್ ಮೊತ್ತದ ಶೇ. 50 ಪಾವತಿಗೆ ಕಮಿಷನರ್ ಅನುಮೋದನೆ ನೀಡಿರುವುದು ಕಂಡುಬರುತ್ತದೆ. 2010ರ ಸೆ.15 ರ ಪತ್ರದ ಮೂಲಕ ಟ್ರಸ್ಟ್ ಪರ್ಯಾಯ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದ್ದು, 2010ರ ಸೆ. 25ರ ಆದೇಶದ ಮೂಲಕ ಬಿಡಿಎಯು ಬಿಟಿಎಂ 4ನೇ ಹಂತ, 2ನೇ ಬ್ಲಾಕ್ನಲ್ಲಿ 8002 ಚದರ ಮೀಟರ್ ವಿಸ್ತೀರ್ಣದ ಪರ್ಯಾಯ ನಿವೇಶನ ಮಂಜೂರು ಮಾಡಿದೆ.
2022ರ ಮಾರ್ಚ್ 30ರಂದು ಸಿದ್ಧಾರ್ಥ ವಿಹಾರ್ ಟ್ರಸ್ಟ್ನ ಕಾರ್ಯದರ್ಶಿ, ಆರೋಪಿ ಸಂಖ್ಯೆ 2ರ ಮೂಲಕ ಬರೆದ ಪತ್ರದಿಂದ, ಆ ನಿವೇಶನವನ್ನು ಟ್ರಸ್ಟ್ ಬಳಸಿಲ್ಲ ಮತ್ತು ಮಂಜೂರಾದ ನಿವೇಶನದಲ್ಲಿ ಕಳೆಗಳು ಬೆಳೆದಿವೆ ಎಂಬುದು ತಿಳಿದುಬರುತ್ತದೆ. ಬಿಡಿಎನ ಅನಧಿಕೃತ ಟಿಪ್ಪಣಿಯ ಪ್ರತಿಯಿಂದ, ಎಸ್ಟೇಟ್ ಅಧಿಕಾರಿ ಆ ನಿವೇಶನದಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ ಎಂದು ವರದಿ ಮಾಡಿರುವುದನ್ನು ಏಕ ಸದಸ್ಯ ನ್ಯಾಯಪೀಠವು ಗಮನಿಸಿರುವುದು ಆದೇಶದಿಂದ ಕಂಡುಬಂದಿದೆ.
ಟಿ ಚಂದ್ರರೆಡ್ಡಿ ಮತ್ತಿತರರು BDA ವಿರುದ್ಧ (W.P.No.23199/2025 (LA-BDA)) ರಿಟ್ ಅರ್ಜಿ ಸಲ್ಲಿಸಿದ್ದು, ನಂತರ ಅರ್ಜಿದಾರರು ಅದನ್ನು ಹಿಂಪಡೆದಿದ್ದಾರೆ. ಇದಲ್ಲದೆ (W.P.No.6370/2020 (LA-BDA) ರಿಟ್ ಅರ್ಜಿ ಸಲ್ಲಿಸಲಾಗಿದ್ದು, ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೇ ನಂಬರ್ .50/2, 50/1 ಮತ್ತು 51/5ಗೆ ಸಂಬಂಧಿಸಿದ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ.
ದೂರುದಾರರು ಸಲ್ಲಿಸಿದ ರಿಟ್ ಅರ್ಜಿ (W.P.No.13011/2022 (LA-BDA) ಯಲ್ಲಿ 2022ರ ಸೆ. 2ರಂದು ನೀಡಲಾದ ಆದೇಶದ ಪ್ರತಿಯಿಂದ ಸಿದ್ಧಾರ್ಥ ವಿಹಾರ್ ಟ್ರಸ್ಟ್ ಮೇಲ್ಕಂಡ ರದ್ದತಿ ಆದೇಶವನ್ನು ಪ್ರಶ್ನಿಸಿರುವುದು ಕಂಡುಬರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಬಿಡಿಎಯು ಸಲ್ಲಿಸಿದ್ದ ರಿಟ್ ಅಪೀಲ್ ( W.A.No.252/2022) ಬಾಕಿ ಇರುವ ಸಂದರ್ಭದಲ್ಲಿ ಟ್ರಸ್ಟ್ನ್ನು ಅದರಲ್ಲಿ ಪಕ್ಷಕಾರನಾಗಿ ಸೇರಿಸಿಕೊಳ್ಳಲು ಅಥವಾ ಮೇಲ್ಮನವಿ ಮಾರ್ಗವನ್ನು ಅನುಸರಿಸಲು ಸ್ವಾತಂತ್ರ್ಯ ನೀಡಿ ಪ್ರಕರಣವನ್ನು ವಿಲೇವಾರಿ ಮಾಡಿರುವುದನ್ನು ಏಕ ಸದಸ್ಯ ನ್ಯಾಯಪೀಠವು ಗಮನಿಸಿದೆ.
ದೂರುದಾರರ ಪರ ಹಾಜರಾದ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಅವರು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಸಲ್ಲಿಸಿದ ನಾಗರಿಕ ಸೌಲಭ್ಯ ನಿವೇಶನದ ಅರ್ಜಿ ಮತ್ತು ಟ್ರಸ್ಟ್ ಡೀಡ್ನ ಉದ್ದೇಶಗಳನ್ನು ವಿವರಿಸಿದ್ದರು. ಟ್ರಸ್ಟ್ನ ಉದ್ದೇಶಗಳು ಪರಿಶಿಷ್ಟ ಜಾತಿಯ ಸದಸ್ಯರಿಗೆ ಮಾತ್ರ ಸೀಮಿತವಾಗಿಲ್ಲದಿದ್ದರೂ, ಟ್ರಸ್ಟ್ ಪರಿಶಿಷ್ಟ ಜಾತಿ ವರ್ಗದಡಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದೆ ಎಂದು ಅವರು ವಾದಿಸಿದ್ದರು. ಅರ್ಜಿಯ ಕಾಲಂ ಸಂಖ್ಯೆ 9 ಮತ್ತು ಟ್ರಸ್ಟ್ನ ಉದ್ದೇಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದು, ಟ್ರಸ್ಟ್ ಮೋಸಪೂರಿತವಾಗಿ ನಾಗರಿಕ ನಿವೇಶನಕ್ಕಾಗಿ ಬೇಡಿಕೆ ಸಲ್ಲಿಸಿದೆ ಎಂದು ಹೇಳಿದರು. ಟ್ರಸ್ಟಿಗಳು ಬಿಡಿಎಯನ್ನು ತಪ್ಪಾಗಿ ಪ್ರತಿನಿಧಿಸಿದ್ದಲ್ಲದೇ , ಬಿಡಿಎಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಮೋಸಪೂರಿತವಾಗಿ ನಿವೇಶನ ಪಡೆದು ಅನ್ಯಾಯಕರ ಲಾಭ ಗಳಿಸಿದ್ದಾರೆ ಎಂದು ವಾದಿಸಿದ್ದರು.

ಪರ್ಯಾಯ ನಿವೇಶನಕ್ಕಾಗಿ ಸಲ್ಲಿಸಿದ ಅರ್ಜಿಯನ್ನೂ ಉಲ್ಲೇಖಿಸಿ, ಟ್ರಸ್ಟ್ ತಾನು ಪರಿಶಿಷ್ಟ ಜಾತಿಯ ಟ್ರಸ್ಟ್ ಎಂದು ಹೇಳಿಕೊಂಡು ಪರ್ಯಾಯ ನಿವೇಶನವನ್ನು ಕೇಳಿದೆ ಮತ್ತು ತನ್ನ ನಿರ್ವಹಣೆ ಪರಿಶಿಷ್ಟ ಜಾತಿಗೆ ಸೇರಿದವರದ್ದೆಂಬ ಆಧಾರದ ಮೇಲೆ ರಿಯಾಯಿತಿಯನ್ನೂ ಪಡೆದಿದೆ. ಆದ್ದರಿಂದ ಪ್ರಾಥಮಿಕ ದೃಷ್ಟಿಯಿಂದ ಆರೋಪಿಗಳು ಅಪರಾಧಗಳನ್ನು ಎಸಗಿರುವುದು ಕಂಡುಬರುತ್ತಿದ್ದು, ವಿಷಯಕ್ಕೆ ತನಿಖೆಯ ಅಗತ್ಯವಿದೆ ಎಂದು ವಾದಿಸಿದ್ದರು.
ದೂರುದಾರರು 2025ರ ಜನವರಿ 21 ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಮತ್ತು 2025ರ ಜನವರಿ 30 ರಂದು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರಿಗೆ ಘಟನೆ ಮತ್ತು ಅಪರಾಧಗಳ ವಿವರಗಳನ್ನು ಒಳಗೊಂಡ ದೂರುಗಳನ್ನು ಸಲ್ಲಿಸಿದ್ದರು. ಆರೋಪಿ ಸಂಖ್ಯೆ 5, ಚುನಾಯಿತ ಶಾಸಕರಾಗಿರುವುದರಿಂದ, ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17-A ಅಡಿಯಲ್ಲಿ ಅನುಮೋದನೆಗಾಗಿ ಕರ್ನಾಟಕದ ರಾಜ್ಯಪಾಲರನ್ನೂ ಸಂಪರ್ಕಿಸಿದ್ದರು ಎಂದು ಆದೇಶದಲ್ಲಿ ವಿವರಿಸಿದೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ ಕುರಿತು ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿತ್ತು.




