Monday | August 17, 2026 |

ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ಖರೀದಿ; 2 ತಿಂಗಳಾದರೂ ಬಿಡುಗಡೆಯಾಗದ 104 ಕೋಟಿ, 12.59 ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಶೂ, ಸಾಕ್ಸ್?

ಬೆಂಗಳೂರು; ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಮತ್ತು  ಸಾಕ್ಸ್‌ ಖರೀದಿಗೆ 104 ಕೋಟಿ ರು ಅನುಮೋದನೆಯಾಗಿದೆಯಾದರೂ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅಲ್ಲದೇ ಟೆಂಡರ್ ನಿಯಮಾವಳಿಗಳ ಪ್ರಕಾರ ಜುಲೈ 31ರೊಳಗೆ ಪೂರೈಸಬೇಕಾಗಿತ್ತು. ಆದರೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಶೂ ಮತ್ತು ಸಾಕ್ಸ್‌ ಸರಬರಾಜಾಗಿಲ್ಲ.

ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಮತ್ತು ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಕೋಟಿ ಕೋಟಿ ರುಪಾಯಿ ಖರ್ಚು ಮಾಡುತ್ತಿದೆ. ಇದಕ್ಕೆ ಅನುದಾನವನ್ನೂ ಸಕಾಲದಲ್ಲಿ ಬಿಡುಗಡೆ ಮಾಡುತ್ತಿದೆ. ಆದರೆ 2026ರ-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 2 ತಿಂಗಳಾದರೂ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸರ್ಕಾರಕ್ಕೆ ನೀಡಿರುವ ವರದಿ ಪ್ರಕಾರ 2026 ಆಗಸ್ಟ್‌ 10ರಲ್ಲಿ 36, 61,267 ಕಾರ್ಯಾದೇಶಗಳನ್ನು ಹೊರಡಿಸಿದೆ. ಈ ಪೈಕಿ 21,92,529 ವಿತರಣೆ ಪೂರ್ಣಗೊಂಡಿದೆ.  12,59,298 ಸಂಖ್ಯೆಯ  ಶೂ ಮತ್ತು ಸಾಕ್ಸ್‌ಗಳು ಇನ್ನು ಸಾಗಣೆ ಹಂತದಲ್ಲಿವೆ. ಉತ್ಪಾದನಾ ಹಂತದಲ್ಲಿರುವ  2,09,440 ಸಂಖ್ಯೆಯ ಶೂ ಮತ್ತು ಸಾಕ್ಸ್‌ಗಳು   2026ರ ಆಗಸ್ಟ್‌ 21ರ ಹೊತ್ತಿಗೆ ವಿತರಣೆ ಆಗುವ ನಿರೀಕ್ಷೆಯಲ್ಲಿದೆ.

 

 

ಟೆಂಡರ್ ನಿಯಮಾವಳಿಗಳ ಪ್ರಕಾರ ಶೂ ಮತ್ತು ಸಾಕ್ಸ್‌ಗಳನ್ನು ಜುಲೈ 31ರೊಳಗೆ ಸರಬರಾಜು ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆಗಸ್ಟ್‌ 15ರವರೆಗೆ ಜಿಲ್ಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಳತೆಗಳಿಗೆ ಅನುಗುಣವಾಗಿ ಬದಲಾಯಿಸಿ ಒದಗಿಸುವ ವಿತರಿಸುವ ಸರಬರಾಜು ಪ್ರಕ್ರಿಯೆ ಚಾಲ್ತಿಯಲ್ಲಿರಬೇಕು. 2026ರ ಜುಲೈ 31ರವರೆಗೆ ದಾಖಲಾತಿ ಪ್ರಕ್ರಿಯೆ ಮುಂದುವರೆದಿದೆ. ಮಕ್ಕಳ ಸಂಖ್ಯೆಗೆ ಮತ್ತು ಪಾದದ ಅಳತೆಗೆ ಅನುಗುಣವಾಗಿ ಸರಬರಾಜು ಮಾಡಲಾಗುತ್ತಿದೆ. ಒಂದು ವಾರ ವಿಳಂಬವಾಗುತ್ತಿದೆ. ನಿಗದಿತ ಅವಧಿಯಲ್ಲಿ ಸರಬರಾಜು ಮಾಡದೇ ಇದ್ದಲ್ಲಿ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಆಯಕ್ತ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಗೊತ್ತಾಗಿದೆ.

 

 

2026-27ನೇ ಸಾಲಿನ ಶೈಕ್ಷಣಿಕ ಸಾಲಿನ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ 36,56,613 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಒಂದು ಜೋಡಿ ಉತ್ತಮ ಗುಣಮಟ್ಟದ ಶೂಗಳು, ಎರಡು ಜೋಡಿ ಸಾಕ್ಸ್ ಮತ್ತು ಪಾದರಕ್ಷೆಗಳನ್ನು ಒದಗಿಸಲು ತೀರ್ಮಾನಿಸಿತ್ತು. ಈ ಸಂಬಂಧ 36.61 ಲಕ್ಷ ವಿದ್ಯಾರ್ಥಿಗಳಿಗೆ ಒಂದು ಜೋಡಿ ಉತ್ತಮ ಗುಣಮಟ್ಟದ ಶೂಗಳು ಮತ್ತು ಎರಡು ಜೋಡಿ ಸಾಕ್ಸ್‌, ಪಾದರಕ್ಷೆಗಳನ್ನು ಒದಗಿಸಲು ಕಾರ್ಯಾದೇಶ  ನೀಡಿದೆ.

ಅನುದಾನಿತ ಶಾಲೆಗಳಿಗೆ ಉಚಿತ ಶೂ ಮತ್ತು ಸಾಕ್ಸ್‌ಗಳನ್ನು ಸರ್ಕಾರವು ವಿತರಿಸುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಮಟ್ಟದ ಶಾಲಾ ಮಟ್ಟದ ಸಮಿತಿಗಳನ್ನು ರಚಿಸಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ.

ಕಳೆದ ವರ್ಷದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಸಾಕ್ಸ್‌  ಖರೀದಿಗೆ ಬಿಡುಗಡೆ ಮಾಡುತ್ತಿರುವ ಅನುದಾನದಲ್ಲಿಯೂ ಕ್ರಮೇಣ ಇಳಿಕೆ ಮಾಡಿತ್ತು.  ಈ ಅಂಕಿ ಅಂಶಗಳ ಪ್ರಕಾರ ಹಿಂದಿನ ಬಿಜೆಪಿ ಸರ್ಕಾರವು ಒದಗಿಸಿದ್ದ ಅನುದಾನಕ್ಕಿಂತಲೂ ಕಡಿಮೆ ಅನುದಾನವನ್ನು ನೀಡುತ್ತಿದೆ. ಮತ್ತು 2023-24 ಮತ್ತು 2024-25ನೇ ಸಾಲಿಗೆ ಹೋಲಿಸಿದರೆ 2025-26ರಲ್ಲಿ ಅನುದಾನವನ್ನು ಮತ್ತಷ್ಟು ಕಡಿಮೆ ಮಾಡಿತ್ತು.

 

 

 

 

2022-23ರಲ್ಲಿ 132 ಕೋಟಿ, 2023-24ರಲ್ಲಿ 125 ಕೋಟಿ, 2024-25ರಲ್ಲಿ 125 ಕೋಟಿ, 2025-26ರಲ್ಲಿ 111.88 ಕೋಟಿ ರು ಅನುದಾನ ಮೀಸಲಿರಿಸಿತ್ತು.

 

 

2025-26ರಲ್ಲಿ ಮೀಸಲಿರಿಸಿದ್ದ 111.88 ಕೋಟಿ ರು ಅನುದಾನದ ಪೈಕಿ ಇನ್ನೂ 13.20 ಕೋಟಿ ರು ಬಿಡುಗಡೆ ಮಾಡಲು ಕ್ರಮವಹಿಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು.

 

 

ಅದೇ ರೀತಿ  2022-23ರಲ್ಲಿ ಮೊದಲನೇ ಜತೆ ಸಮವಸ್ತ್ರ ಖರೀದಿಸಲು 89.72 ಕೋಟಿ, ಎರಡನೇ ಜೊತೆಗೆ  97.36 ಕೋಟಿ, 2023-24ರಲ್ಲಿ ಮೊದಲ ಜತೆ 75.40 ಕೋಟಿ ರು., ಎರಡನೇ ಜತೆ ಖರೀದಿಸಲು 73.66 ಕೋಟಿ ರು., 2024-25ರಲ್ಲಿ ಮೊದಲ ಜತೆ ಖರೀದಿಸಲು 84.33 ಕೋಟಿ, ಎರಡನೇ ಜತೆ ಖರೀದಿಸಲು 82.33 ಕೋಟಿ, 2025-26ರಲ್ಲಿ ಮೊದಲ ಜತೆ ಖರೀದಿಸಲು 84.50 ಕೋಟಿ, ಎರಡನೇ ಜತೆ ಖರಿದಿಸಲು 81.50 ಕೋಟಿ ರು ಖರ್ಚಾಗಿತ್ತು.

ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ 44,525 ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಬಾಕಿ ಉಳಿದ 1,587 ಶಾಲೆಗಳಿಗೆ ಮೊದಲನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಎರಡನೇ ಹಂತದ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಿತ್ತು.

 

 

 

ಬೆಂಗಳೂರು ನಗರ ಜಿಲ್ಲೆಯ ವಲಯ – 4ರಲ್ಲಿ 2,208 ಸರಕಾರಿ ಶಾಲೆಗಳು, 208 ಅನುದಾನಿತ ಶಾಲೆಗಳಿವೆ. ಇವುಗಳಲ್ಲಿ 7,24,862 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.   ಶೂ, ಸಾಕ್ಸ್‌ ಖರೀದಿಗೆಂದು ಶಿಕ್ಷಣ ಇಲಾಖೆ ಕೆಲ ಶಾಲೆಗಳಿಗೆ ಶೇ. 40ರಷ್ಟು, ಕೆಲ ಶಾಲೆಗಳಿಗೆ ಶೇ. 20ರಷ್ಟು ಹಣವನ್ನು ಆನ್‌ಲೈನ್‌ ಮೂಲಕ ಎಸ್‌ಡಿಎಮ್‌ಸಿ ಖಾತೆಗೆ ಜಮಾ ಮಾಡಿತ್ತು. ‘ಬಂದ ಹಣದಲ್ಲಿ ಕೆಲವರಿಗಷ್ಟೇ ಶೂ, ಸಾಕ್ಸ್‌ ಕೊಡಿಸಿದರೆ ತಾರತಮ್ಯ ಮಾಡಿದಂತಾಗುತ್ತದೆ.  ಪೂರ್ಣ ಪ್ರಮಾಣ ಅನುದಾನ ಸಿಕ್ಕರೆ ಮಾತ್ರ ಶೂ, ಸಾಕ್ಸ್‌ ಖರೀದಿಸಲು ಸಾಧ್ಯವಿದೆ. ಹೀಗಾಗಿ ಸರಕಾರ ಮಂಜೂರು ಮಾಡಿದ ಅನುದಾನ ಬ್ಯಾಂಕ್‌ನಲ್ಲೇ ಇರುವಂತಾಗಿದೆ,’ ಎನ್ನುತ್ತಾರೆ ಮುಖ್ಯ ಶಿಕ್ಷಕರೊಬ್ಬರು.

ಅಲ್ಲದೇ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌  ಖರೀದಿಸಲು ಹೆಚ್ಚುವರಿ ಧನ ಸಹಾಯ ನೀಡಿಲ್ಲ.  ಬದಲಿಗೆ ಹೆಚ್ಚುವರಿ ಧನ ಸಹಾಯಕ್ಕಾಗಿ ಖಾಸಗಿ ಸಂಘ ಸಂಸ್ಥೆ ಮತ್ತು ದಾನಿಗಳ ಬಳಿ ಶಿಕ್ಷಕರು ಅನಿವಾರ್ಯವಾಗಿ ಕೈಯೊಡ್ಡಿಸಿತ್ತು.  ಕಾಂಗ್ರೆಸ್‌ ಸರ್ಕಾರವು ಹೊರಡಿಸಿದ್ದ  ಸುತ್ತೋಲೆಯು  ಹಿಂದಿನ ಬಿಜೆಪಿ ಸರ್ಕಾರವು ಹೊರಡಿಸಿದ್ದ ಸುತ್ತೋಲೆಯನ್ನೇ  ಮರು ಜಾರಿಗೊಳಿಸಿತ್ತು.

ವಿಶೇಷವೆಂದರೇ 2017-18ನೇ ಸಾಲಿನಲ್ಲಿಯೂ ಅಧಿಕಾರದಲ್ಲಿದ್ದ ಇದೇ ಕಾಂಗ್ರೆಸ್‌ ಸರ್ಕಾರವು ಆಗ ನಮೂದಿಸಿದ್ದ ದರವನ್ನೇ 2023-24ನೇ ಸಾಲಿನಲ್ಲಿಯೂ ನಮೂದಿಸಿತ್ತು.   ಪ್ರಸಕ್ತ ಸಾಲಿನಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನೂ ಪರಿಗಣಿಸದೇ ಆದೇಶ ಹೊರಡಿಸಿರುವುದು ನಗೆಪಾಟಲಿಗೀಡಾಗಿತ್ತು.   ಹಾಗೆಯೇ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY)ದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದ  ಕಾಂಗ್ರೆಸ್‌  ಸರ್ಕಾರವು ಇದಕ್ಕಾಗಿ ಹೆಚ್ಚುವರಿ ಧನ ಸಹಾಯ ನೀಡದೇ ಖಾಸಗಿ ಸಂಘ, ಸಂಸ್ಥೆ, ದಾನಿಗಳ ಬಳಿ ಕೈಯೊಡ್ಡಲು ನಿಲ್ಲಿಸಿರುವುದು ಶಿಕ್ಷಕರನ್ನು  ಪೇಚಿಗೆ ಸಿಲುಕಿಸಿತ್ತು.

ವಿದ್ಯಾವಿಕಾಸ ಯೋಜನೆಯಡಿ 2023-24ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಉಚಿತ ಶೂ ಮತ್ತು ಸಾಕ್ಸ್‌ ವಿತರಣೆಗೆ (ಲೆಕ್ಕ ಶೀರ್ಷಿಕೆ; 2202-01-109-0-03-221 ಮತ್ತು 2202-01-109-03-422) 125.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಆದೇಶಿಸಿತ್ತು. 01ರಿಂದ 8ನೇ ತರಗತಿ  ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಕೆ-2 ಮೂಲಕ ಒಟ್ಟರು 99.70 ಕೋಟಿ ರು.ಗಳನ್ನು ಅನುದಾನವನ್ನು  ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆ ಮಾಡಿತ್ತು.

ಹಾಗೆಯೇ 09 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ  ಶೂ ಮತ್ತು ಸಾಕ್ಸ್‌ ಖರೀದಿಗೆ 2023ರ ಜೂನ್‌ 19ರ ಅಂತ್ಯದವರೆಗೂ  ಅನುದಾನ ಬಿಡುಗಡೆ ಮಾಡಿರಲಿಲ್ಲ.  ಆದರೂ  ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕರುಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯು ಅಧಿಕೃತ ಜ್ಞಾಪನ ಪತ್ರ ಹೊರಡಿಸಿತ್ತು.

‘2023-24ನೇ ಸಾಲಿನ ಈ ಯೋಜನೆ ಅನುಷ್ಠಾನಕ್ಕೆ ಆಯಾ ಶಾಲೆಗಳಲ್ಲಿನ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೆ-2 ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ  ಅನುದಾನ ಬಿಡುಗಡೆ ಮಾಡಿತ್ತು.  ಶಾಲೆಗಳು ಪ್ರಾರಂಭವಾಗಿದ್ದರ  ಹಿನ್ನೆಲೆಯಲ್ಲಿ ಕೂಡಲೇ ಮಕ್ಕಳ ಪಾದರಕ್ಷೆ  ಅಳತೆ ತೆಗೆದುಕೊಂಡು ಅಳತೆಗನುಗುಣವಾಗಿ ಜುಲೈ 30ರೊಳಗಾಗಿ ಖರೀದಿ  ಪ್ರಕ್ರಿಯೆ ಪೂರ್ಣಗೊಳಿಸಬೇಕು,’ ಎಂದು 2023ರ ಜೂನ್‌ 22ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು.

 

 

ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಏರಿಕೆಯಾಗಿರುವ ಕಾರಣ ಎಲ್ಲಾ ರೀತಿಯ ಸರಕು, ಸಾಮಗ್ರಿ, ಉತ್ಪನ್ನಗಳ ದರವೂ ಸಹಜವಾಗಿ ಸ್ಥಳೀಯ ಮಟ್ಟದಲ್ಲಿಯೂ ಏರಿಕೆ ಕಂಡಿದೆ. ಹೀಗಿರುವಾಗ ಕಳೆದ 6 ವರ್ಷದ ಹಿಂದಿನ ದರವನ್ನೇ ಈಗಲೂ ನಮೂದಿಸಿ ಬಿಡುಗಡೆ ಮಾಡಿರುವುದಕ್ಕೆ ಶಿಕ್ಷಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

2023ರ ಜೂನ್‌ 22ರಂದು ಹೊರಡಿಸಿದ್ದ  ಸುತ್ತೋಲೆ ಪ್ರಕಾರ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ  ವಿದ್ಯಾರ್ಥಿಗಳಿಗೆ ತಲಾ 295 ರು., 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳೀಗೆ ತಲಾ 325 ರು. ಎಂದು ದರ ನಿಗದಿಪಡಿಸಿತ್ತು.

 

 

 

‘ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿಂತೆ ಸೇವಾ ದೃಷ್ಟಿಯಿಂದ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ಹೆಚ್ಚುವರಿ ಧನ ಸಹಾಯ ಮಾಡಿದಲ್ಲಿ ಅದನ್ನೂ ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ‍ಷೂ ಮತ್ತು ಸಾಕ್ಸ್‌ಗಳನ್ನು ಖರೀದಿಸಬಹುದು. ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY)ದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು,’ ಎಂದು ಆದೇಶದಲ್ಲಿ ಹೇಳಿತ್ತು.

ಆದರೆ 2023ರ ಜೂನ್‌ 22ರಂದು ಹೊರಡಿಸಿರುವ ಅದೇಶದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಕಂಪನಿ/ಸಂಸ್ಥೆಗಳ ಮೊದಲ ಗುಣಮಟ್ಟದಿಂದ ಕೂಡಿರುವ ಶೂ, ಸಾಕ್ಸ್‌ಗಳನ್ನು ಖರೀದಿ ಮಾಡಬೇಕು ಎಂದು ಹೇಳಿರುವುದು ಶಿಕ್ಷಕರನ್ನು ಪೇಚಿಗೆ ಸಿಲುಕಿಸಿದಂತಾಗಿತ್ತು.

 

 

2019ರ ಮೇ 6ರಲ್ಲಿಯೂ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಪ್ಯಾರಾಗಾನ್‌,ಕರೋನ, ಆಕ್ಷನ್‌, ಲಕಾನಿ ಕಂಪನಿಗಳ ಅಧಿಕೃತ ಮಾರಾಟಗಾರರಿಂದ ಶೂ- ಸಾಕ್ಸ್‌ಗಳನ್ನು ಖರೀದಿಸಬೇಕು ಎಂದು ಸೂಚಿಸಿತ್ತು.

 

2019ರಲ್ಲಿ ಹೊರಡಿಸಿದ್ದ ಆದೇಶದ ಪ್ರತಿ

 

 

2022ರ ಜುಲೈ 8ರಂದು ಹೊರಡಿಸಿದ್ದ  ಆದೇಶದಲ್ಲಿಯೂ  ಬ್ರ್ಯಾಂಡೆಡ್‌ ಉತ್ಪನ್ನಗಳ ಕುರಿತು ಉಲ್ಲೇಖಿಸಿರಲಿಲ್ಲ. ಅಲ್ಲದೆ ಹಿಂದಿನ  ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಹಲವು ಶಿಕ್ಷಕರು ಹೇಳಿದ್ದರು.

 

ಶಾಲಾ ಮಕ್ಕಳಿಗೆ ಶೂ ಖರೀದಿ; 5 ವರ್ಷದ ಹಿಂದಿನ ದರ ನಮೂದು, ದಾನಿಗಳ ಬಳಿ ಕೈಯೊಡ್ಡಬೇಕಿರುವ ಶಿಕ್ಷಕರು

 

ಮುಕ್ತ ಮಾರುಕಟ್ಟೆಯಲ್ಲಿಯೇ ತಲಾ ಒಂದು ಜತೆ ಶೂಗೆ ಕನಿಷ್ಠ 425 ರು.ಗಳಿವೆ. ಹೀಗಾಗಿ ಸರ್ಕಾರ ತಲಾ ವಿದ್ಯಾರ್ಥಿಗೆ ಬಿಡುಗಡೆ ಮಾಡಿರುವ ಮೊತ್ತಕ್ಕೆ ಹೋಲಿಸಿದರೆ 160 ರು. ಕಡಿಮೆ ಇತ್ತು.

 

 

 

 

2017-18ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿ ಸಂಬಂಧ ಶಾಲಾ ಎಸ್.ಡಿ.ಎಂ.ಸಿ ಖಾತೆಗಳಿಗೆ ರೂ.129.84 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಹೊರಡಿಸಿದ್ದ ಆದೇಶದಲ್ಲಿದ್ದ ದರವನ್ನೇ 2022-23ನೇ ಸಾಲಿನಲ್ಲಿಯೂ ನಮೂದಿಸಿ ಪ್ರಸಕ್ತ ಸ್ಥಳೀಯ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ  ಪರಿಗಣಿಸಿರಲಿಲ್ಲ.

 

ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌; ಹಳೆಯ ಸುತ್ತೋಲೆ ಜಾರಿ, ಹೆಚ್ಚುವರಿ ಹಣವಿಲ್ಲ, ದಾನಿಗಳ ಬಳಿ ಕೈಯೊಡ್ಡಿಸಿದ ಸರ್ಕಾರ

 

ಕಳೆದ 5  ವರ್ಷದ ಹಿಂದೆ ಬಿಡುಗಡೆ ಮಾಡಿದ್ದ ಅನುದಾನಕ್ಕೆ ಹೋಲಿಸಿದರೆ 2022-23ನೇ   ಶೈಕ್ಷಣಿಕ ಸಾಲಿನಲ್ಲಿ ಬಿಡುಗಡೆ ಮಾಡಿದ್ದ   ಅನುದಾನದಲ್ಲಿ 2.16 ಕೋಟಿ ರು. ಮಾತ್ರ ಹೆಚ್ಚಳವಾಗಿತ್ತು.   ಅಲ್ಲದೆ 2017-18ನೇ ಸಾಲಿನಲ್ಲಿ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರು., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರು.ಗಳಂತೆ ಬಿಡುಗಡೆ ಮಾಡಿತ್ತು. ಇದೇ ದರವು 2019-20ರಲ್ಲಿಯೂ ಮುಂದುವರೆದಿತ್ತು. ಇದೀಗ 2022-23ನೇ ಶೈಕ್ಷಣಿಕ ಸಾಲಿನಲ್ಲಿಯೂ ಅದೇ ಮೊತ್ತವನ್ನು ಎಸ್‌ಡಿಎಂಸಿಗಳಿಗೆ ಬಿಡುಗಡೆ ಮಾಡಲು ಸೂಚಿಸಿತ್ತು.

ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಪ್ಯಾರಾಗಾನ್‌, ಕರೋನ, ಆಕ್ಷನ್‌, ಲಕಾನಿ ಸೇರಿದಂತೆ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳ ದರವು ಕಳೆದ 6  ವರ್ಷಕ್ಕೆ ಹೋಲಿಸಿದರೆ ಸ್ಥಳೀಯ ಮಟ್ಟದಲ್ಲಿಯೂ ಈ ಬಾರಿ ಹೆಚ್ಚಳವಾಗಿತ್ತು. ಆದರೆ ಸರ್ಕಾರವು ಚಾಲ್ತಿ ದರಗಳನ್ನು ನಮೂದಿಸದಿರುವುದು ಹೆಚ್ಚುವರಿ ಹಣಕ್ಕಾಗಿ ಶಿಕ್ಷಕರು ದಾನಿಗಳು, ಖಾಸಗಿ ಸಂಸ್ಥೆಗಳ ಬಳಿ ಕೈಯೊಡ್ಡಿದ್ದರು.

 

ಡೆಸ್ಕ್‌, ವಿದ್ಯುತ್‌ ಬಿಲ್‌ ಖರ್ಚುಗಳಿಗೆ ಪೋಷಕರಿಂದಲೇ 100 ರು ವಸೂಲಿ; ಸರ್ಕಾರ ದಿವಾಳಿಯಾಗಿದೆಯೇ?

 

‘6 ವರ್ಷದ ಹಿಂದಿನ ದರವನ್ನೇ ಆದೇಶದಲ್ಲಿ ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ಈಗಲೂ ಅದೇ ದರ ಇರುವುದಿಲ್ಲ. ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಸುಮಾರು 35  ರಿಂದ 40 ರು. ಹೆಚ್ಚಳವಾಗಿದೆ. ಎಲ್ಲಾ ಸರಕು ಸಾಮಗ್ರಿಗಳ ದರವೂ ಏರಿಕೆಯಾಗಿರುತ್ತದೆ. ಹೀಗಿರುವಾಗ 6 ವರ್ಷದ ಹಿಂದಿನ ದರವನ್ನು ಪರಿಷ್ಕರಿಸಿ ಚಾಲ್ತಿ ದರವನ್ನು ನಮೂದಿಸಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಈಗಿನ ಸರ್ಕಾರವು 6  ವರ್ಷದ ಹಿಂದಿನ ದರವನ್ನೇ ನಮೂದಿಸಿ ಶಿಕ್ಷಕರನ್ನು ಮತ್ತೊಮ್ಮೆ ಕೈಚಾಚುವಂತೆ ಮಾಡಿದೆ. ಒಂದೊಮ್ಮೆ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ನೆರವು ನೀಡದಿದ್ದರೇ ಕೆಳದರ್ಜೆಯ ಶೂ ಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ,’ ಎನ್ನುತ್ತಾರೆ ಮುಖ್ಯ ಶಿಕ್ಷಕರೊಬ್ಬರು.

Hot this week

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

ಮಹಿಳಾ ಸ್ವೀಕಾರ ಕೇಂದ್ರದಿಂದ ಹೆಣ್ಣು ಮಕ್ಕಳ ಬಿಡುಗಡೆ; ಐಎಎಸ್ ಅಧಿಕಾರಿಗಳ ಹೆಸರು ಉಲ್ಲೇಖ, ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ದೂರು ಸಲ್ಲಿಸಿದ ಸಮಿತಿ

ಬೆಂಗಳೂರು; ಮಹಿಳಾ ಸ್ವೀಕಾರ ಕೇಂದ್ರಗಳಲ್ಲಿನ ಹೆಣ್ಣು ಮಕ್ಕಳನ್ನು ಐಎಎಸ್‌ ಅಧಿಕಾರಿಗಳ ಮನೆಗೆಲಸಕ್ಕೆ...
Please Scan to make Your Contribution

Topics

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

ಮಹಿಳಾ ಸ್ವೀಕಾರ ಕೇಂದ್ರದಿಂದ ಹೆಣ್ಣು ಮಕ್ಕಳ ಬಿಡುಗಡೆ; ಐಎಎಸ್ ಅಧಿಕಾರಿಗಳ ಹೆಸರು ಉಲ್ಲೇಖ, ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ದೂರು ಸಲ್ಲಿಸಿದ ಸಮಿತಿ

ಬೆಂಗಳೂರು; ಮಹಿಳಾ ಸ್ವೀಕಾರ ಕೇಂದ್ರಗಳಲ್ಲಿನ ಹೆಣ್ಣು ಮಕ್ಕಳನ್ನು ಐಎಎಸ್‌ ಅಧಿಕಾರಿಗಳ ಮನೆಗೆಲಸಕ್ಕೆ...

Related Articles

Popular Categories

error: Content is protected !!