ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು ಚಾಲ್ತಿಯಲ್ಲೇ ಇಲ್ಲದ 35,280 ಬ್ಯಾಂಕ್ ಖಾತೆಗಳಲ್ಲಿ 239.66 ಕೋಟಿ ರು ಮೊತ್ತವಿಟ್ಟಿವೆ. ಈ ಬ್ಯಾಂಕ್‌ನಲ್ಲಿ ಅನುಪಯುಕ್ತವಾಗಿರುವ ಮೊತ್ತವನ್ನು ಬಡ್ಡಿ ಹೆಸರಿನಲ್ಲಿ ಠೇವಣಿ ಇರಿಸಿಲ್ಲ. ಹೀಗಾಗಿ ವಾರ್ಷಿಕ 14.37 ಕೋಟಿಯಷ್ಟು ವಾರ್ಷಿಕ ಬಡ್ಡಿ ನಷ್ಟವಾಗಿರುವುದನ್ನು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು ಪತ್ತೆ ಹಚ್ಚಿದೆ.
ಅದೇ ರೀತಿ 8 ಜಿಲ್ಲೆಗಳ 19 ಪಂಚಾಯ್ತಿಗಳು ಆದಾಯ ಸಂಗ್ರಹಣೆಗೆ ಸಂಬಂಧಿಸಿದಂತೆ ರಸೀದಿ ಪುಸ್ರಕಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ. ಹೀಗಾಗಿ ಈ ಪಂಚಾಯ್ತಿಗಳಲ್ಲಿ ಆದಾಯ ಸೋರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಬಯಲು ಮಾಡಿದೆ.
ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿ ಅಂದರೇ 2023-24ನೇ ಸಾಲಿಗೆ 2024ರ ಮಾರ್ಚ್ ಅಂತ್ಯಕ್ಕೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಕ್ರೋಢಿಕೃತ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಮಾಹಿತಿ ಇದೆ. ಗ್ರಾಮ ಪಂಚಾಯ್ತಿಗಳ ಹಣಕಾಸು ಆಡಳಿತದಲ್ಲಿ ಹೇಗೆ ದುರಾಡಳಿತ ನಡೆದಿದೆ ಎಂದು ಲೆಕ್ಕ ಪರಿಶೋಧಕರು ದಾಖಲೆ ಸಹಿತ ಹೊರಗೆಡವಿದ್ದಾರೆ.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು ಸಲ್ಲಿಸಿರುವ ವಾರ್ಷಿಕ ಕ್ರೋಢಿಕೃತ ಲೆಕ್ಕ ಪರಿಶೋಧನೆ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು ) ನಿಯಮ 2006ರ ನಿಯಮ 21ರ ಪ್ರಕಾರ ಗ್ರಾಮ ಪಂಚಾಯ್ತಿಯ ಆದಾಯಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ನಗದು ಸಂಗ್ರಹ, ಚೆಕ್‌ಗಳ ಅಥವಾ ಬ್ಯಾಂಕ್ ಡ್ರಾಫ್ಟ್‌ಗಳ ಮೂಲಕ ಆದಾಯ ಸಂಗ್ರಹಣೆ, ರಸೀದಿ ಪುಸ್ತಕಗಳು ಹಾಗೂ ಹಣ ಪಾವತಿಸಿದವರಿಗೆ ರಸೀದಿಗಳನ್ನು ಪರಿಶೀಲಿಸಬೇಕು. ಆದರೆ ರಾಜ್ಯದ 19 ಗ್ರಾಮ ಪಂಚಾಯ್ತಿಗಳು ಈ ನಿಯಮಗಳನ್ನು ಪಾಲಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಅಲ್ಲದೇ ಈ ಗ್ರಾಮ ಪಂಚಾಯ್ತಿಗಳು ರಸೀದಿಗಳನ್ನು ನಮೂನೆ 3ರಲ್ಲಿ ಇಟ್ಟಿಲ್ಲ. ಬದಲಾಗಿ ಗ್ರಾಮ ಪಂಚಾಯ್ತಿ ನಿಯಮಗಳು 1996ರಲ್ಲಿ ತಿಳಿಸಿರುವ ನಮೂನೆ 1ರಲ್ಲಿಯೇ ರಸೀದಿಗಳನ್ನು ನಿರ್ವಹಿಸಿದೆ. ಪರಿಷ್ಕೃತ ನಿಯಮಗಳನ್ನು ಈ ಪಂಚಾಯ್ತಿಗಳು ಅಳವಡಿಸಿಕೊಂಡಿಲ್ಲ. ರಸೀತಿ ಪುಸ್ತಕಗಳ ದಾಸ್ತಾನು ವಹಿಯನ್ನು ಸಹ ಭಾಗಶಃ ಗ್ರಾಮ ಪಂಚಾಯ್ತಿಗಳು ಮಾತ್ರ ನಿರ್ವಹಿಸಿವೆ. ಈ ಕ್ರಮವು ಆದಾಯಗಳ ಸೋರುವಿಕೆಯಾಗಿ ಪರಿಣಿಮಿಸಬಹುದು ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.
ನಿಯಮ 21ರ ಅನ್ವಯ ಹಾಗೂ ಸರ್ಕಾರವು ಹೊರಡಿಸಿರುವ ಸುತ್ತೋಲೆ (ಸಂಖ್ಯೆ; ಗ್ರಾಅಪ/264/ಗ್ರಾಪಂಅ/2003/4565 ದಿನಾಂಕ 15-12-2003) ಗ್ರಾಮ ಪಂಚಾಯ್ತಿಗಳೀಗೆ ಅವಶ್ಯವಿರುವ ರಸೀದಿ ಪುಸ್ತಕಗಳು, ಟಿಕೆಟ್ ಪುಸ್ತಕಗಳನ್ನು, ಲೈಸೆನ್ಸ್ ನೂನೆಗಳ ಮತ್ತು ಇನ್ನಿತರೆ ನಮೂನೆಗಳನ್ನು ಸರ್ಕಾರಿ ಮುದ್ರಣಾಲಯ ಮತ್ತು ಜಿಲ್ಲಾ ಪಂಚಾಯತ್ ಕಚೇರಿಯಿಂದ ಪಡೆದು ಉಪಯೋಗಿಸಬೇಕು ಎಂದು ತಿಳಿಸಿದೆ.

ಆದರೆ ಲೆಕ್ಕ ಪರಿಶೋಧನೆಗೆ ಒಳಪಡಿಸಿರುವ ಗ್ರಾಮ ಪಂಚಾಯ್ತಿಗಳಲ್ಲಿ ಕೆಲವು ಗ್ರಾಮ ಪಂಚಾಯ್ತಿಗಳು ರಸೀದಿ ಪುಸ್ತಕಗಳನ್ನು ಖಾಸಗಿ ಮುದ್ರಣಾಲಯಗಳಿಂದ ಖರೀದಿಸಿ ಉಪಯೋಗಿಸುತ್ತಿವೆ. ಈ ಪದ್ಧತಿಗೆ ಲೆಕ್ಕ ಪರಿಶೋಧಕರು ಈ ಹಿಂದೆಯೂ ಆಕ್ಷೇಪಿಸಿದ್ದರೂ ಸಹ ಈಗಲೂ ಖಾಸಗಿ ಮುದ್ರಣಾಲಯಗಳಿಂದಲೇ ರಸೀದಿ ಪುಸ್ತಕಗಳನ್ನು ಖರೀದಿಸುತ್ತಿವೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿದೆ.
ನಿಯಮ 22ರ ಅನ್ವಯ ಕಾಲಕಾಲಕ್ಕೆ ಹಣ ಪಾವತಿ ಮಾಡಿದ ವ್ಯಕ್ತಿಗಳಿಂದ ದ್ವಿಪ್ರತಿ ನಗದು ರಸೀದಿಗಳನ್ನು ಸಂಗ್ರಹಿಸಿ 100 ರುಪಾಯಿಗಿಂತ ಹೆಚ್ಚಿನ ಮೊತ್ತಗಳಿದ್ದಲ್ಲಿ ಕಚೇರಿಯ ಮೂಲ ರಸೀದಿಗಳೊಂದಿಗೆ ತಾಳೆ ಮಾಡಬೇಕು. ಅಲ್ಲದೇ 100 ರು ಗಿಂತ ಕಡಿಮೆ ಮೊತ್ತಗಳ ಸಂದರ್ಭಗಳಲ್ಲಿ ದ್ವಿಪ್ರತಿ ರಸೀದಿಗಳ ಶೇ. 25ರಷ್ಟಾದರೂ ತಾಳೆ ಮಾಡಬೇಕು. ತಾಳೆ ಮಾಡಿದ ಫಲಿತಾಂಶಗಳನ್ನು ನಮೂನೆ 6ರಲ್ಲಿ ದಾಖಲಿಸಬೇಕು ಮತ್ತು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಹಾಜರುಪಡಿಸಬೇಕು. ಆದರೆ ಗರಿಷ್ಠ ಗ್ರಾಮ ಪಂಚಾಯ್ತಿಗಳು ಈ ಕ್ರಮವನ್ನು ಅನುಸರಿಸಿಲ್ಲ.
‘ಈ ನಿಯಮಗಳ ಉಲ್ಲಂಘನೆಯು ಆದಾಯಗಳ ಸೋರುವಿಕೆಗೆ ಅನುವು ಮಾಡಿಕೊಡಬಹುದಾಗಿದೆ. ಈ ಸೋರುವಿಕೆಯು ಗ್ರಾಮ ಪಂಚಾಯ್ತಿಯ ಗಮನಕ್ಕೆ ಬರದೇ ಇರುವ ಸಾಧ್ಯತೆ ಕೂಡ ಇದೆ,’ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ನಿಯಮ 25 ಮತ್ತು 26ರ ಅನ್ವಯ ಅದಾಯ ವಸೂಲಿಯನ್ನು ನಿಯಮಿತವಾಗಿ ಪರಿಶೀಲಿಸಿಲ್ಲ. ಮತ್ತು ಬ್ಯಾಂಕ್‌ಗೆ ಜಮೆ ಮಾಡುವಲ್ಲಿಯೂ ಸಹ ನಿಗದಿಪಡಿಸಿದ ಕ್ರಮಗಳನ್ನು ಕ್ರಮಬದ್ಧವಾಗಿ ಪಾಲಿಸಿಲ್ಲ. 2023-24ನೇ ಸಾಲಿನಲ್ಲಿ ಗ್ರಾಮ ಪಂಚಾಯ್ತಿಗೆ ಬಂದಿರುವ ಆದಾಯಕ್ಕೆ ರಸೀದಿಗಳನ್ನು ಪಾಸು ಮಾಡಿರುವ ಪುಸ್ತಕಗಳನ್ನು, ರಸೀದಿ ಪುಸ್ತಕಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ. ರಾಜ್ಯದ 8 ಜಿಲ್ಲೆಗಳ 19 ಪಂಚಾಯ್ತಿಗಳು ಲೆಕ್ಕ ಪರಿಶೋಧನೆಗೆ ಈ ದಾಖಲೆಗಳನ್ನು ಹಾಜರುಪಡಿಸಿಲ್ಲ. ಇದರ ಮೊತ್ತವು 3.18 ಕೋಟಿಯಷ್ಟು ಇದೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೂಣಿಹಾಳ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 5 ರಸೀದಿ ಪುಸ್ತಕಗಳನ್ನು ಉಪಯೋಗಿಸಿದೆ. ಆದರೆ ಲೆಕ್ಕ ಪರಿಶೋಧನೆಗೆ ಕೇವಲ 3 ರಸೀದಿ ಪುಸ್ತಕಗಳನ್ನು ಮಾತ್ರ ಪೂರ್ಣವಾಗಿ ಒದಗಿಸಿದೆ. ಬಾಕಿ 02 ರಸೀದಿ ಪುಸ್ತಕಗಳಲ್ಲಿ ಭಾಗಶಃ ರಸೀದಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ದಿನವಹಿ ಮತ್ತು ಬ್ಯಾಂಕ್ ನಗದು ಪುಸ್ತಕದಲ್ಲಿ ಈ ರಸೀದಿ ಪುಸ್ತಕಗಳ ಮೊತ್ತಗಳನ್ನು ನಮೂದಿಸಿದೆ. ಜಮೆ ಮೊತ್ತಗಳನ್ನು ಪರಿಶೀಲಿಸಲು ಲೆಕ್ಕ ಪರಿಶೋಧಕರಿಗೆ ಆಗಿಲ್ಲ. ಏಕೆಂದರೇ ರಸೀದಿ ಪುಸ್ತಕಗಳನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ. ಹೀಗಾಗಿ ಈ ಪಂಚಾಯ್ತಿಯಲ್ಲಿ 6.95 ಲಕ್ಷ ರು .ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಹಾಗೆಯೇ ಗ್ರಾಮ ಪಂಚಾಯ್ತಿಗಳು 84,966 ಬ್ಯಾಂಕ್ ಖಾತೆಗಳನ್ನು ಹೊಂದಿವೆ. ಈ ಪೈಕಿ 49,686 ಬ್ಯಾಂಕ್ ಖಾತೆಗಳು ಮಾತ್ರ ಚಾಲ್ತಿಯಲ್ಲಿವೆ. 35,280 ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿಲ್ಲ. ಹೀಗೆ ಚಾಲ್ತಿಯಲ್ಲೇ ಇಲ್ಲದ ಬ್ಯಾಂಕ್ ಖಾತೆಗಳಲ್ಲಿ 239.66 ಕೋಟಿ ರು ಮೊತ್ತವಿದೆ.

2023-24ನೇ ಸಾಲಿನಲ್ಲಿ ಯೋಜನೆಗಳು ಮುಕ್ತಾಯಗೊಂಡರೂ ಸಹ ಚಾಲ್ತಿಯಲ್ಲಿಲ್ಲದ ಬ್ಯಾಂಕ್ ಖಾತೆಗಳನ್ನು ಗ್ರಾಮ ಪಂಚಾಯ್ತಿಗಳು ಮುಕ್ತಾಯಗೊಳಿಸಿಲ್ಲ. ಅಲ್ಲದೇ ಅನಗತ್ಯವಾಗಿ ಯಾವುದೇ ವ್ಯವಹಾರವಿಲ್ಲದೇ ಇದ್ದರೂ ಸಹ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿವೆ. ಸರ್ಕಾರದ ಆದೇಶದ ಪ್ರಕಾರ (ಸಂಖ್ಯೆ; ಎಫ್‌ಡಿ 5 ಟಿಎಆರ್ 2017 ದಿನಾಂಕ 30-01-2017)ರ ಅನ್ವಯ ಮುಕ್ತಾಯವಾದ ಯೋಜನೆಗಳ ಅನುದಾನವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ ವ್ಯವಹಾರವಿಲ್ಲದ ಬ್ಯಾಂಕ್ ಖಾತೆಗಳನ್ನು ಮುಕ್ತಾಯಗೊಳಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಹ ಸೂಕ್ತ ಕ್ರಮ ವಹಿಸಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಈಗಾಗಲೇ ಮುಕ್ತಾಯಗೊಂಡಿರುವ ಹಲವಾರು ಯೋಜನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಗಳನ್ನು ಸರ್ಕಾರದ ಆದೇಶದಂತೆ ಮುಕ್ತಾಯಗೊಳಿಸಬೇಕಿತ್ತು. ಬಾಕಿ ಉಳಿದಿರುವ ಯೋಜನಾ ಅನುದಾನಗಳನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಿಲ್ಲ. ಸುಮಾರು 35,280 ಬ್ಯಾಂಕ್ ಖಾತೆಗಳಲ್ಲಿ ಒಟ್ಟು 239.66 ಕೋಟಿ ರು ಇದೆ. ಈ ಮೊತ್ತವು ಅನುಪಯುಕ್ತವಾಗಿದೆ. ಅಲ್ಲದೇ ಈ ಬ್ಯಾಂಕ್ ಖಾತೆಗಳನ್ನು ಲೆಕ್ಕ ಮರುಸಮನ್ವಯಗೊಳಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧಕರು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.

35,280 ಅನುಪಯುಕ್ತ ಬ್ಯಾಂಕ್ ಖಾತೆಗಳಲ್ಲಿ 239.66 ಕೋಟಿ ರು ಮೊತ್ತವು ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳಿಗೆ ಉಪಯೋಗಿಸಿಲ್ಲ. ಅಲ್ಲದೇ ಈ ಮೊತ್ತಕ್ಕೆ ಬ್ಯಾಂಕ್‌ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಬಡ್ಡಿ ದರ ಶೇ.6ರಂತೆ ಲೆಕ್ಕ ಹಾಕಿದ್ದಲ್ಲಿ 14.37 ಕೋಟಿ ವಾರ್ಷಿಕ ಬಡ್ಡಿಯೂ ನಷ್ಟವಾಗಿದೆ ಎಂದು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.




