ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಯೋಜನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಸಮಗ್ರ ಘನ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಮತ್ತು ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಬೆನ್ನಲ್ಲೇ ಇದೀಗ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ರಾಜ್ಯಪಾಲರಿಗೆ ನೀಡಿರುವ ಮನವಿಯು ಮುನ್ನೆಲೆಗೆ ಬಂದಿದೆ.
ರಾಜ್ಯಪಾಲರಿಗೆ ಮನವಿ ನೀಡುವ ಮುನ್ನ ಆರ್ ಅಶೋಕ್ ಅವರು ಈ ಹಗರಣದ ಬಗ್ಗೆ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಟೆಂಡರ್ ಪ್ರಕ್ರಿಯೆಯಲ್ಲಿ 10,000 ಕೋಟಿ ಕಿಕ್ ಬ್ಯಾಕ್ ಹೋಗಿದೆ ಎಂದು ಗುರುತರವಾಗಿ ಆಪಾದಿಸಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು, ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.
ಹಣಕಾಸು ಅಕ್ರಮ- ಸಮಗ್ರ ತನಿಖೆಗೆ ಒತ್ತಾಯ
ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ಹಾಗೂ ಸಂಭವನೀಯ ಹಣಕಾಸು ಅಕ್ರಮಗಳು ನಡೆದಿರಬಹುದೆಂಬ ಬಲವಾದ ಪ್ರಾಥಮಿಕ (prima facie) ಆಧಾರಗಳಿವೆ. ಈ ವಿಷಯವು ಗಣನೀಯ ಪ್ರಮಾಣದ ಸಾರ್ವಜನಿಕ ಹಣದ ವೆಚ್ಚವನ್ನು ಒಳಗೊಂಡಿದೆ. ಹೀಗಾಗಿ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಮನವಿಯಲ್ಲಿ ಕೋರಿರುವುದು ಗೊತ್ತಾಗಿದೆ.

ಬಿಎಸ್‌ಡಬ್ಲ್ಯೂಎಂಎಲ್ ಹಾಗೂ ಸಂಬಂಧಿತ ಪ್ರಾಧಿಕಾರಗಳು ಕೈಗೊಂಡಿರುವ ಸಂಪೂರ್ಣ ಐಎಸ್‌ಡಬ್ಲ್ಯೂಎಂ ಟೆಂಡರ್ ಪ್ರಕ್ರಿಯೆಯ ಕುರಿತು ಸ್ವತಂತ್ರ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವ ಹಾಗೇ ತನಿಖೆ ನಡೆಸಲು ಆದೇಶಿಸಬೇಕು. ಟೆಂಡರ್ ಷರತ್ತುಗಳನ್ನು ಸಡಿಲಗೊಳಿಸಿರುವ ಕ್ರಮದ ಕಾನೂನುಬದ್ಧತೆಯನ್ನು ಹಾಗೂ ಹಿಂದೆ ಅನರ್ಹರೆಂದು ಘೋಷಿಸಲ್ಪಟ್ಟಿದ್ದ ಬಿಡ್ದಾರರಿಗೆ ಅರ್ಹತೆ ನೀಡಿರುವ ಕ್ರಮವನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ವಿವರವಾದ ಯೋಜನಾ ವರದಿ (ಡಿಪಿಆರ್) ಮತ್ತು ಟಿಪ್ಪಿಂಗ್ ಶುಲ್ಕದ ಲೆಕ್ಕಾಚಾರಗಳಲ್ಲಿ ಮಾಡಲಾದ ಪರಿಷ್ಕರಣೆಗಳ ಬಗ್ಗೆ ತನಿಖೆ ನಡೆಸಬೇಕು. ಟೆಂಡರ್ ಪ್ರೀಮಿಯಂಗಳ ಅನುಮೋದನೆಗೆ ಸಂಬಂಧಿಸಿದ ಸಂದರ್ಭಗಳನ್ನು ಪರಿಶೀಲಿಸಿ, ಸ್ಥಾಪಿತ ಖರೀದಿ (Procurement) ಮಾರ್ಗಸೂಚಿಗಳ ಉಲ್ಲಂಘನೆ ಆಗಿದೆಯೇ ಎಂಬುದನ್ನು ನಿರ್ಧರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಟೆರಾ ಫಾಸ್ಮಾ ಬಯೋಟೆಕ್ನಾಲಜೀಸ್ ಸಂಸ್ಥೆಯಿಂದ ಭೂಸ್ವಾಧೀನಕ್ಕೆ ಸಂಬಂಧಿಸಿದ ನಿರ್ಧಾರಗಳು ಹಾಗೂ ಪರಿಹಾರದ ಮೊತ್ತವನ್ನು ಹೆಚ್ಚಿಸಿರುವ ಕ್ರಮವನ್ನು ಪರಿಶೀಲಿಸಬೇಕು. ಈ ಎಲ್ಲಾ ಆರೋಪಗಳ ಕುರಿತು ಸಮಗ್ರ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಅಂತಿಮ ಅನುಮೋದನೆ ಅಥವಾ ಗುತ್ತಿಗೆ ಮಂಜೂರಾತಿ ನೀಡದಂತೆ ಖಚಿತಪಡಿಸಬೇಕು. ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಲು ಹಾಗೂ ರಾಜ್ಯದ ಖಜಾನೆಯನ್ನು ಸಂರಕ್ಷಿಸಲು ಅಗತ್ಯವಿರುವ ಇತರೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್ ಅಶೋಕ್ ಅವರು ಕೋರಿರುವುದು ತಿಳಿದು ಬಂದಿದೆ.
ಈ ಟೆಂಡರ್ ಪ್ರಕ್ರಿಯೆಗಳಲ್ಲಿನ ಆರೋಪಗಳು ಗಂಭೀರವಾಗಿವೆ. ಹಾಗೂ ಇದರಲ್ಲಿ ಮಹತ್ತರ ಪ್ರಮಾಣದ ಸಾರ್ವಜನಿಕ ಸಂಪನ್ಮೂಲಗಳು ಒಳಗೊಂಡಿವೆ. ಹೀಗಾಗಿ ಈ ಅಂಶಗಳನ್ನು ಪರಿಗಣಿಸಿ ಪಾರದರ್ಶಕತೆಗಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ಅಶೋಕ್ ಅವರು ಕೋರಿರುವುದು ಗೊತ್ತಾಗಿದೆ.

ಸಮಗ್ರ ಘನ ತ್ಯಾಜ್ಯ ನಿರ್ವಹಣಾ (ISWM) ಯೋಜನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ಮತ್ತು ಉಲ್ಲಂಘನೆಗಳಾಗಿವೆ. ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಸಂದರ್ಭಗಳು, ಟಿಪ್ಪಿಂಗ್ ಶುಲ್ಕದ ನಿರ್ಧಾರ, ಭೂಸ್ವಾಧೀನದ ನಿರ್ಣಯಗಳು ಹಾಗೂ ನಂತರ ಕೈಗೊಳ್ಳಲಾದ ಆಡಳಿತಾತ್ಮಕ ಕ್ರಮಗಳು ಪಾರದರ್ಶಕತೆ, ಹಣಕಾಸು ಶಿಸ್ತು ಮತ್ತು ಕಾನೂನುಬದ್ಧ ಖರೀದಿ ಪ್ರಕ್ರಿಯೆಗಳ ಅನುಸರಣೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿವೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಮೂಲಕ, ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ನಗರ ಘನ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಮತ್ತು ವಿಲೇವಾರಿಗಾಗಿ ಸಮಗ್ರ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಸ್ತಾವಿಸಿದೆ. ಆದರೆ, ಅಧಿಕೃತ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲುವೇ ಹೈದರಾಬಾದ್ ಮೂಲದ ರಾಮ್ಕಿ ಗ್ರೂಪ್ ಸಂಸ್ಥೆಗೆ ಯೋಜನೆಯನ್ನು ನೀಡುವ ಅನೌಪಚಾರಿಕ ಮಾತುಕತೆಗಳು ನಡೆದಿವೆ ಎಂಬುದು ಗೋಚರಿಸಿವೆ.
ವಿವರವಾದ ಯೋಜನಾ ವರದಿ (DPR) ಹಾಗೂ ಟಿಪ್ಪಿಂಗ್ ಶುಲ್ಕದ ಅಂದಾಜುಗಳನ್ನು ಮೂಲತಃ ರೈಟ್ಸ್ ಲಿಮಿಟೆಡ್ ಸಂಸ್ಥೆಯು ಸಿದ್ಧಪಡಿಸಿತ್ತು. ನಂತ ಬಿಎಸ್‌ಡಬ್ಲ್ಯೂಎಂಎಲ್‌ನ ತಾಂತ್ರಿಕ ಸಮಿತಿ ಮತ್ತು ಉಪಸಮಿತಿಗಳು ಅದನ್ನು ಪರಿಶೀಲಿಸಿತ್ತು. 13ನೇ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿತ್ತು. ಅಲ್ಲದೇ ಅನುಮೋದಿತ ಡಿಪಿಆರ್ ಪ್ರಕಾರ, ಟಿಪ್ಪಿಂಗ್ ಶುಲ್ಕವನ್ನು ಪ್ರತಿ ಟನ್‌ಗೆ ₹2,998 ಎಂದು ನಿಗದಿಪಡಿಸಿತ್ತು. ಇದರಲ್ಲಿ ಸುಮಾರು ₹1,600 ಪ್ರಾಥಮಿಕ ಸಂಗ್ರಹಣೆ ಮತ್ತು ಸಾಗಣೆಗೆ, ₹743 ದ್ವಿತೀಯ ಹಂತದ ಸಾಗಣೆಗೆ ಹಾಗೂ ₹655 ಸಂಸ್ಕರಣೆ ಮತ್ತು ವಿಲೇವಾರಿಗೆ ಮೀಸಲಿರಿಸಿತ್ತು ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಮೊದಲ ಟೆಂಡರ್ ಆಹ್ವಾನದಲ್ಲಿ ಯಾವುದೇ ಬಿಡ್ದಾರರು (bidders) ಭಾಗವಹಿಸಿರಲಿಲ್ಲ. ಆದರೆ, ಎರಡನೇ ಟೆಂಡರ್ ಆಹ್ವಾನದಲ್ಲಿ ಉತ್ತರ ಹಾಗೂ ದಕ್ಷಿಣ ಪ್ಯಾಕೇಜುಗಳಿಗಾಗಿ ಮೂವರು ಬಿಡ್ದಾರರು ಭಾಗವಹಿಸಿದ್ದರು. ಆದರೂ ಎಲ್ಲಾ ಬಿಡ್ದಾರರನ್ನೂ ತಾಂತ್ರಿಕವಾಗಿ ಅನರ್ಹರೆಂದು ಘೋಷಿಸಲಾಗಿತ್ತು. ಆಶ್ಚರ್ಯಕರ ಎಂದರೇ ಎರಡನೇ ಟೆಂಡರ್ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ಅನರ್ಹರೆಂದು ಪರಿಗಣಿಸಲ್ಪಟ್ಟಿದ್ದ ಅದೇ ಬಿಡ್‌ದಾರರನ್ನು ಮೂರನೇ ಟೆಂಡರ್ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ಅರ್ಹರೆಂದು ಘೋಷಿಸಲಾಗಿದೆ. ಇಂತಹ ಹಠಾತ್ ಬದಲಾವಣೆ ಮೌಲ್ಯಮಾಪನ ಪ್ರಕ್ರಿಯೆಯ ಸಮಗ್ರತೆ ಮತ್ತು ನಿಷ್ಪಕ್ಷಪಾತತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಶಂಕೆ ವ್ಯಕ್ತಪಡಿಸಿರುವುದು ಮನವಿಯಿಂದ ಗೊತ್ತಾಗಿದೆ.

ಟೆಂಡರ್ ಷರತ್ತುಗಳಲ್ಲಿ ಯಾವುದೇ ತಿದ್ದುಪಡಿ ಅಥವಾ ಸಡಿಲಿಕೆ ಮಾಡುವ ಅಧಿಕಾರ ಸಾಮಾನ್ಯವಾಗಿ ಹಣಕಾಸು ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಆದರೆ, ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಯೇ ಹಿಂದೆ ತಾಂತ್ರಿಕವಾಗಿ ಅನರ್ಹರೆಂದು ಘೋಷಿಸಲ್ಪಟ್ಟಿದ್ದ ಬಿಡ್‌ದಾರರನ್ನು ಅರ್ಹಗೊಳಿಸುವ ಉದ್ದೇಶದಿಂದ ಹಲವು ಟೆಂಡರ್ ಷರತ್ತುಗಳನ್ನು ಸಡಿಲಗೊಳಿಸಿರುವುದು ಕಂಡುಬರುತ್ತೆ ಎಂದು ವಿವರಿಸಿದ್ದಾರೆ.
ತಾಂತ್ರಿಕವಾಗಿ ಅರ್ಹತೆ ಪಡೆದ ಬಿಡ್‌ದಾರರಲ್ಲಿ, ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ರಾಮ್ಕಿ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಅದು ಎಲ್ 1 ಬಿಡ್‌ದಾರನಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ. ರಾಮ್ಕಿ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಪ್ರಯತ್ನಗಳ ಕುರಿತು ಈ ಹಿಂದೆ ಜನಪ್ರತಿನಿಧಿಗಳು, ಅದರಲ್ಲೂ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ಹಲವು ದೂರುಗಳಲ್ಲಿ ಆರೋಪಿಸಿದ್ದರು. ಈ ಬಗ್ಗೆ ಪದೇ ಪದೇ ದೂರುಗಳು ಬಂದಿದ್ದರೂ, ಸಂಬಂಧಿತ ಅಧಿಕಾರಿಗಳು ಯಾವುದೇ ಅರ್ಥಪೂರ್ಣ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವುದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ರಾಮ್ಕಿ ಸಂಸ್ಥೆಯ ಹಿಂದಿನ ಕಾರ್ಯಾಚರಣೆಗಳ ಹಿನ್ನೆಲೆಯೂ ಸಹ ಸೂಕ್ಷ್ಮ ಪರಿಶೀಲನೆಗೆ ಅರ್ಹವಾಗಿದೆ. ರಾಮ್ಕಿ ಸಂಸ್ಥೆಯು ಈ ಹಿಂದೆ ಮಾವಳ್ಳಿಪುರ ಭೂ ಭರ್ತಿ (ಲ್ಯಾಂಡ್‌ಫಿಲ್) ಯೋಜನೆ ನಿರ್ವಹಣೆಗೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಗಿತ್ತು. ಪರಿಸರ ನಿಯಮಗಳ ಅನುಸರಣೆ, ತ್ಯಾಜ್ಯ ಸಂಸ್ಕರಣಾ ಮಾನದಂಡಗಳು ಹಾಗೂ ಕಾರ್ಯಾಚರಣಾ ಕ್ರಮಗಳಿಗೆ ಸಂಬಂಧಿಸಿದ ಹಲವು ಆತಂಕಗಳು ವ್ಯಕ್ತವಾಗಿದ್ದವು. ನಿಯಂತ್ರಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ವಿವಿಧ ಪರಿಶೀಲನೆಗಳಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣಾ ಕ್ರಮಗಳಲ್ಲಿ ಕಂಡುಬಂದ ಕೊರತೆಗಳನ್ನು ದಾಖಲಿಸಲಾಗಿದೆ.
ಟಿಪ್ಪಿಂಗ್ ಶುಲ್ಕದ ಅಂದಾಜುಗಳಲ್ಲಿ ಮಾಡಲಾದ ಮಹತ್ವದ ಪರಿಷ್ಕರಣೆಗಳನ್ನು ಪರಿಗಣಿಸಿದಾಗ ಪರಿಸ್ಥಿತಿ ಇನ್ನಷ್ಟು ಆತಂಕಕಾರಿ ಸಂಗತಿಗಳಿವೆ. ರೈಟ್ಸ್ ಲಿಮಿಟೆಡ್ ಸಂಸ್ಥೆಯು ಆರಂಭದಲ್ಲಿ ಟಿಪ್ಪಿಂಗ್ ಶುಲ್ಕವನ್ನು ಪ್ರತಿ ಟನ್‌ಗೆ ಸುಮಾರು ₹1,398 ಎಂದು ಅಂದಾಜಿಸಿತ್ತು. ನಂತರ, ಸಲಹೆಗಾರರ ಶಿಫಾರಸುಗಳ ಆಧಾರದ ಮೇಲೆ ಈ ಶುಲ್ಕವನ್ನು ಪ್ರತಿ ಟನ್‌ಗೆ ₹2,151ಕ್ಕೆ ಪರಿಷ್ಕರಿಸಲಾಗಿದೆ. ಇದು ಶೇ. 53 ಕ್ಕಿಂತ ಹೆಚ್ಚು ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ತದನಂತರ, ಬಿಎಸ್‌ಡಬ್ಲ್ಯೂಎಂಲ್ ಸಂಸ್ಥೆಯು ಉತ್ತರ ಪ್ಯಾಕೇಜ್‌ಗೆ ಪ್ರತಿ ಟನ್‌ಗೆ ₹2,565 ಹಾಗೂ ದಕ್ಷಿಣ ಪ್ಯಾಕೇಜ್‌ಗೆ ಪ್ರತಿ ಟನ್‌ಗೆ ₹2,151 ಟಿಪ್ಪಿಂಗ್ ಶುಲ್ಕವನ್ನು ಅನುಮೋದಿಸಿತ್ತು. ಇದು ಮೂಲ ಅಂದಾಜಿನ ಹೋಲಿಕೆಯಲ್ಲಿ ಕ್ರಮವಾಗಿ ಸುಮಾರು ಶೇ. 83 ಮತ್ತು ಶೇ. 53 ಹೆಚ್ಚಳವಾಗಿದೆ.
ರೈಟ್ಸ್ ಸಂಸ್ಥೆಯು ಸಿದ್ಧಪಡಿಸಿದ್ದ ವಿವರವಾದ ಯೋಜನಾ ವರದಿಯಲ್ಲಿ ಕೊರತೆಗಳಿದ್ದರೆ, ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಾವಳಿಗಳ ಪ್ರಕಾರ ಸಲಹಾ ಸೇವೆಗಳಿಗಾಗಿ ಹೊಸ ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕಿತ್ತು. ಅಲ್ಲದೇ ಇದೇ ಸರಿಯಾದ ಕ್ರಮವಾಗುತ್ತಿತ್ತು. ಆದರೆ, ಅದನ್ನು ಮಾಡುವ ಬದಲು ಮತ್ತೊಬ್ಬ ಸಲಹೆಗಾರರನ್ನು ಡಿಪಿಆರ್ ಪರಿಶೀಲಿಸಲು ಹಾಗೂ ಪರಿಷ್ಕೃತ ದರಗಳನ್ನು ಶಿಫಾರಸು ಮಾಡಲು ನೇಮಿಸಲಾಗಿದೆ ಎಂದು ವರದಿಯಾಗಿದೆ. ಇದರಿಂದ ಸಲಹಾ ಸೇವೆಗಳ ಖರೀದಿಯನ್ನು ನಿಯಂತ್ರಿಸುವ ನಿಯಮಗಳ ಪಾಲನೆ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಗಣನೀಯ ಪ್ರಮಾಣದ ಟೆಂಡರ್ ಪ್ರೀಮಿಯಂಗಳ ಅನುಮೋದನೆಯಿಂದಲೂ ಹೆಚ್ಚುವರಿ ಆತಂಕಗಳು ಎದುರಾಗಿವೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಉಲ್ಲೇಖಿತ ದರಗಳು ಅಂದಾಜು ವೆಚ್ಚಗಳನ್ನು ಗಣನೀಯವಾಗಿ ಮೀರಿದಲ್ಲಿ, ಅತಿಯಾದ ಪ್ರೀಮಿಯಂಗಳನ್ನು ಅಂಗೀಕರಿಸುವುದಕ್ಕಿಂತ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಿ ಮರು ಟೆಂಡರ್ ಆಹ್ವಾನಿಸುವುದೇ ಸೂಕ್ತ ಕ್ರಮವಾಗಿದೆ. ಆದರೂ ಪ್ರಕ್ರಿಯೆಯಲ್ಲಿರುವ ಹಲವಾರು ಕೊರತೆಗಳ ನಡುವೆಯೂ ಸುಮಾರು ಶೇ. 19ರಷ್ಟು ಟೆಂಡರ್ ಪ್ರೀಮಿಯಂ ಗೆ ಅನುಮೋದನೆ ಪಡೆಯಲು ಪ್ರಯತ್ನಿಸಿರುವುದು ಕಂಡುಬಂದಿದೆ ಎಂದು ಮನವಿಯಲ್ಲಿ ರಾಜ್ಯಪಾಲರ ಗಮನಸೆಳೆದಿರುವುದು ಗೊತ್ತಾಗಿದೆ.
ಪ್ರಸ್ತಾವಿತ ಯೋಜನೆಗಾಗಿ ಟೆರಾ ಫಾಸ್ಮಾ ಬಯೋಟೆಕ್ನಾಲಜೀಸ್ ಸಂಸ್ಥೆಗೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯವೂ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಹಣಕಾಸು ಇಲಾಖೆಯು ಪ್ರತಿ ಏಕರೆಗೆ ₹1.50 ಕೋಟಿ ಪರಿಹಾರವನ್ನು ನಿಗದಿಪಡಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಏಕೆಂದರೆ, ಆ ದರವು ಅನ್ವಯವಾಗುವ ಕಾನೂನು ಚೌಕಟ್ಟಿನಡಿ ನಿರ್ಧರಿಸಲಾದ ಮೌಲ್ಯಮಾಪನವನ್ನು ಮೀರಿತ್ತು. ಭವಿಷ್ಯದ ಭೂಸ್ವಾಧೀನಗಳಿಗೆ ಅನಪೇಕ್ಷಿತ ಮಾದರಿಯನ್ನು ಸೃಷ್ಟಿಸಬಹುದು ಎಂದು ಇಲಾಖೆ ಅಭಿಪ್ರಾಯಪಟ್ಟಿತ್ತು. ಆದರೂ ಈ ಆಕ್ಷೇಪಣೆಗಳ ನಡುವೆಯೂ ನೇರ ಖರೀದಿ ವಿಧಾನದಲ್ಲಿ ಪ್ರತಿ ಏಕರೆಗೆ ₹1.50 ಕೋಟಿ ದರದಲ್ಲಿ ಭೂಸ್ವಾಧೀನಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದೆ ಎಂದು ಗಮನಸೆಳೆದಿದ್ದಾರೆ.
ನಂತರ, ಹಣಕಾಸು ಇಲಾಖೆಯು ಪ್ರತಿ ಏಕರೆಗೆ ₹1.50 ಕೋಟಿ ದರವೇ ಅತಿಯಾದದ್ದು ಎಂದು ಮೊದಲೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೂ ಪರಿಹಾರದ ಮೊತ್ತವನ್ನು ಪ್ರತಿ ಏಕರೆಗೆ ₹1.57 ಕೋಟಿಗೆ ಹೆಚ್ಚಿಸಲಾಗಿದೆ. ಇಂತಹ ಹೆಚ್ಚುವರಿ ಪರಿಹಾರವು ಹಣಕಾಸಿನ ಶಿಸ್ತು ಮತ್ತು ಸಾರ್ವಜನಿಕ ಖಜಾನೆಗೆ ಸಂಭವಿಸಬಹುದಾದ ನಷ್ಟದ ಕುರಿತು ಗಂಭೀರ ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ.
ಪ್ರಸ್ತಾವಿತ ಯೋಜನಾ ಸ್ಥಳದಲ್ಲಿ ಗಮನಾರ್ಹ ಪ್ರಮಾಣದ ಹಳೆಯ (Legacy) ತ್ಯಾಜ್ಯ ಸಂಗ್ರಹವಾಗಿರುವುದನ್ನೂ ಗಮನಿಸಬೇಕಿದೆ. ಅಂದಾಜಿನ ಪ್ರಕಾರ 4 ರಿಂದ 5 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ತ್ಯಾಜ್ಯವನ್ನು ಘನ ತ್ಯಾಜ್ಯ ನಿರ್ವಹಣಾ ನಿಯಮಗಳು, 2016 ರ ಪ್ರಕಾರ ಬಯೋಮೈನಿಂಗ್ (Biomining) ಮೂಲಕ ವಿಲೇವಾರಿ ಮಾಡಬೇಕಾಗಿದೆ. ಈ ತ್ಯಾಜ್ಯದ ಸಮಸ್ಯೆಯನ್ನು ಮೊದಲು ಪರಿಹರಿಸದೆ ಯೋಜನಾ ಸ್ಥಳವನ್ನು ಹಸ್ತಾಂತರಿಸಿದರೆ, ಆಯ್ಕೆಯಾದ ಗುತ್ತಿಗೆದಾರರಿಂದ ಹೆಚ್ಚುವರಿ ಪಾವತಿಗಳ ಬೇಡಿಕೆಗಳು ಮುಂದಿನ ದಿನಗಳಲ್ಲಿ ಉದ್ಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇದರಿಂದ ರಾಜ್ಯದ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಹಣಕಾಸು ಇಲಾಖೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ, ಹಿರಿಯ ಅಧಿಕಾರಿಗಳ ಸಮಿತಿಯಿಂದ ಸಮಗ್ರ ವಿಮರ್ಶೆ ನಡೆಸುವಂತೆ ಶಿಫಾರಸು ಮಾಡಿತ್ತು ಎಂದು ವರದಿಯಾಗಿದೆ. ಆದರೆ, ಇಲಾಖೆಯ ಆತಂಕಗಳನ್ನು ಸಮರ್ಪಕವಾಗಿ ಪರಿಹರಿಸುವ ಮುನ್ನವೇ ಟೆಂಡರ್ ಪ್ಯಾಕೇಜುಗಳ ಅನುಮೋದನೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಯಿತು. ಈ ಪ್ರಸ್ತಾವನೆ ಕುರಿತು ಸರ್ಕಾರದೊಳಗೇ ಮಹತ್ವದ ಆಕ್ಷೇಪಣೆಗಳು ವ್ಯಕ್ತವಾಗಿದ್ದವು ಎಂಬ ಮಾಹಿತಿಯೂ ಲಭ್ಯವಾಗಿದೆ.

ನಂತರ, ವಿಷಯವನ್ನು ಪರಿಶೀಲಿಸಿ ವರದಿ ಸಲ್ಲಿಸಲು ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಆದರೆ, ಆ ಸಮಿತಿಯ ರಚನೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ವರದಿ ಸಲ್ಲಿಸಲು ನೀಡಲಾದ ಅವಧಿಯನ್ನು ಹದಿನೈದು ದಿನಗಳಿಂದ ಏಳು ದಿನಗಳಿಗೆ ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಟೆಂಡರ್ ಪ್ರಕ್ರಿಯೆಯ ವ್ಯಾಪ್ತಿ ಮತ್ತು ಸಂಕೀರ್ಣತೆಯನ್ನು ಪರಿಗಣಿಸಿದರೆ, ಇಷ್ಟು ಕಡಿಮೆ ಅವಧಿಯು ದಾಖಲೆಗಳು ಮತ್ತು ಸಂಬಂಧಿತ ವಿಷಯಗಳ ಸಮಗ್ರ ಪರಿಶೀಲನೆಗೆ ಸಾಕಾಗುವುದಿಲ್ಲ ಎಂದು ಕಾಣಿಸುತ್ತದೆ.
ಬೆಂಗಳೂರು ಜನರ ಮೇಲೆ ತೆರಿಗೆ ಭಾರ ಹಾಕಲು ರೆಡಿ ಆಗ್ತಿರೋ ಹಗರಣ ಇದು. ಜನಪ್ರತಿನಿಧಿಗಳಿಲ್ಲದ ಜಿಬಿಎ ನಲ್ಲಿ ನಡೆಯುತ್ತಿರೋ ಹಗರಣ ಇದು ಎಂದು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದರು.

ಬಲಾಢ್ಯ ಕಂಪನಿಗಳಿಗೆ ಇದರ ಟೆಂಡರ್ ಕೊಡಲಾಗ್ತಿದೆ. ಹಿಂದೆ ಇವೆಲ್ಲ ಕರ್ನಾಟಕದ ಜನಕ್ಕೆ ಸಿಕ್ತಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಈ ಹಗರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಟೆಂಡರ್ ಪರಿಶೀಲಿಸಲು ರಚಿಸಿದ್ದ ಸಮಿತಿಗೆ ಕೇವಲ 7 ದಿನ ಗಡುವು ಕೊಟ್ಟಿತ್ತು.
ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರು ಸಹ ಪತ್ರ ಬರೆದಿದ್ದರು. ಆದರೆ ಅಶೋಕ್ ಅವರು ತುಟಿ ಬಿಚ್ಚಿರಲಿಲ್ಲ.
ಕಸ ವಿಲೇವಾರಿ ಟೆಂಡರ್‍ನಲ್ಲಿ ಬಹು ಅಕ್ರಮಗಳು ನಡೆದಿವೆ. ಇದರಲ್ಲಿ 10 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಅಶೋಕ್ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.
ಸಮಗ್ರ ಘನ ತ್ಯಾಜ್ಯ ವಿಲೇವಾರಿ ಕುರಿತು ‘ದಿ ಫೈಲ್’ ಕಳೆದ ಹಲವು ದಿನಗಳಿಂದಲೂ ದಾಖಲೆ ಸಹಿತ ಸರಣಿ ವರದಿಗಳನ್ನು ಪ್ರಕಟಿಸಿರುವುದನ್ನು ಸ್ಮರಿಸಬಹುದು.




