ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಇದೇ ಮೇ 19 ರಂದು ನಡೆಯಲಿರುವ “ಪ್ರಗತಿಯತ್ತ ಕರ್ನಾಟಕ” ಮೂರು ವರ್ಷದ ಸಾಧನೆ – ಸೇವೆಯ ಸಮರ್ಪಣೆ ಕಾರ್ಯಕ್ರಮ ಮತ್ತು ಸಮಾವೇಶಕ್ಕೆ ಬರೋಬ್ಬರಿ 12 ಕೋಟಿ ರು ಅನುದಾನ ನೀಡಬೇಕು ಎಂದು ತುಮಕೂರು ಜಿಲ್ಲಾಡಳಿತವು ಕೋರಿದೆ!
ಈ ಸಮಾವೇಶಕ್ಕೆ ತಗಲುವ ವೆಚ್ಚವನ್ನು ಭರಿಸಲು ವಿಶೇಷ ಭೂ ಸ್ವಾಧೀನದ ಲೆಕ್ಕ ಶೀರ್ಷಿಕೆಯಲ್ಲಿ ಠೇವಣಿ ಇರಿಸಿದ್ದ ಮೊತ್ತದ ಮೇಲೆ ಗಳಿಸಿರುವ ಬಡ್ಡಿ ಹಣಕ್ಕೆ ಕೈ ಹಾಕಲಿದೆ!
ತುಮಕೂರಿನಲ್ಲಿ ಕಳೆದ ವರ್ಷದ ಹಿಂದೆಯಷ್ಟೇ ಗ್ಯಾರಂಟಿ ಸಮಾವೇಶಕ್ಕೆ 2 ಕೋಟಿ ರು ಖರ್ಚಾಗಿತ್ತು. ವರ್ಷ ಕಳೆಯುವಷ್ಟರಲ್ಲಿ 3ನೇ ವರ್ಷದ ಸಮಾವೇಶಕ್ಕೆ 12 ಕೋಟಿ ರು ಅನುದಾನ ಕೋರಿರುವುದು ಮುನ್ನೆಲೆಗೆ ಬಂದಿದೆ.
ಗ್ಯಾರಂಟಿ ಯೋಜನೆ ಅನುಷ್ಠಾನಗೊಂಡ ಆರಂಭಿಕ ವರ್ಷದಲ್ಲೇ ಸರ್ಕಾರವು 30 ಕೋಟಿ ರುಪಾಯಿಗಳನ್ನು ಖರ್ಚು ಮಾಡಿತ್ತು. ಸಮಾವೇಶಗಳಿಗಾಗಿ ಪ್ರತ್ಯೇಕ ಅನುದಾನವನ್ನು ಯಾವುದೇ ಲೆಕ್ಕ ಶೀರ್ಷಿಕೆಯಲ್ಲಿ ಒದಗಿಸಿರಲಿಲ್ಲ. ಆದರೂ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬಳಕೆಯಾಗದೇ ಉಳಿದಿದ್ದ ಹಣವನ್ನು ಬಳಸಿತ್ತು. ಈ ಹಣವನ್ನು ಮಾರ್ಗಪಲ್ಲಟಗೊಳಿಸಲು ಅಧಿಕಾರಿಗಳು ಹೈರಾಣರಾಗಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ 3ನೇ ವರ್ಷ ಪೂರ್ಣಗೊಳಿಸಿರುವ ಸಂದರ್ಭದಲ್ಲಿ ತುಮಕೂರಿನಲ್ಲಿ ನಡೆಯಲಿರುವ “ಪ್ರಗತಿಯತ್ತ ಕರ್ನಾಟಕ” ಮೂರು ವರ್ಷದ ಸಾಧನೆ – ಸೇವೆಯ ಸಮರ್ಪಣೆ ಕಾರ್ಯಕ್ರಮಕ್ಕೆ 12 ಕೋಟಿ ರುಪಾಯಿ ಹೊಂದಿಸಲು ಕಂದಾಯ ಮತ್ತು ಆರ್ಥಿಕ ಇಲಾಖೆಯು ತಲೆ ಮೇಲೆ ಕೈ ಹೊತ್ತು ಕುಳಿತಿದೆ.

ಈ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಚರ್ಚೆಯ ನಂತರ ಅಧಿಕಾರಿಗಳು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದಾರೆ. ತುಮಕೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಕೋರಿರುವ 12 ಕೋಟಿ ರುಪಾಯಿ ಹೊಂದಿಸುವುದು ಹೇಗೆ ಮತ್ತು ಒಂದು ದಿನದ ಸಮಾವೇಶಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಹೇಗೆ ಒದಗಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.
12 ಕೋಟಿ ರುಪಾಯಿ ಹೊಂದಿಸಲು ತಿಣುಕಾಡುತ್ತಿರುವ ಕಂದಾಯ ಇಲಾಖೆಯು ಇದಕ್ಕಾಗಿ ತುಮಕೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ವಿಶೇಷ ಭೂ ಸ್ವಾಧೀನ ವಿಭಾಗದಲ್ಲಿ ಠೇವಣಿ ಇರಿಸಿದ್ದ ಮೊತ್ತದ ಮೇಲೆ ಆಕರಿಸಿರುವ ಬಡ್ಡಿ ಮೊತ್ತವನ್ನು ಸಮಾವೇಶದ ವೆಚ್ಚ ಭರಿಸಲು ಮಾರ್ಗಪಲ್ಲಟ ಮಾಡಲು ಚಿಂತಿಸಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಸಮಾಲೋಚನೆ ನಡೆಸಬೇಕಿದೆ. ಇನ್ನೂ ಈ ಬಗ್ಗೆ ಇತ್ಯರ್ಥವಾಗಿಲ್ಲ ಎಂದು ಕಂದಾಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್”ಗೆ ಖಚಿತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. 2 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರದ ಬಗ್ಗೆ ಜನಾಭಿಪ್ರಾಯವನ್ನು ರೂಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಪೌತಿ ಖಾತೆ ಮತ್ತು ಪೋಡಿ ದುರಸ್ತಿಯಂತಹ ಕಂದಾಯ ಸೇವೆಗಳ ಮಹಾ ಸಮರ್ಪಣೆ ಮಾಡಲು ನಿರ್ಧರಿಸಿದೆ.
ಮೇ 20ರಂದು ತುಮಕೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಫಲಾನುಭವಿಗಳಿಗೂ ಅಂದೇ, ಆ ಕ್ಷಣದಲ್ಲೇ ಸವಲತ್ತುಗಳನ್ನು ಕಡ್ಡಾಯವಾಗಿ ವಿತರಿಸಬೇಕು ಎಂದು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಎಲ್ಲಾ 10 ತಾಲ್ಲೂಕುಗಳಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಈ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಸಂಬಂಧಿಸಿದ ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳನ್ನು ಆಯಾ ತಾಲ್ಲೂಕುಗಳ ಇತರೆ ಪ್ರದೇಶಗಳಿಂದ ಹೊರಡುವ ಜಾಗದಲ್ಲಿಯೇ ಫಲಾನುಭವಿಗಳಿಗೆ ಬೆಳಗಿನ ಉಪಹಾರ ನಂತರವೇ ಬಸ್ಸುಗಳು ಹೊರಡಬೇಕು. ಈ ಸಂಬಂಧ ಫಲಾನುಭವಿಗಳ ಸುರಕ್ಷತೆ ಹಾಗೂ ಉಪಚಾರದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
2 ಲಕ್ಷಕ್ಕೂ ಹೆಚ್ಚು ಭಾಗವಹಿಸುವ ನಿರೀಕ್ಷೆ
ಕಾರ್ಯಕ್ರಮಕ್ಕಾಗಿ ತುಮಕೂರು ನಗರಕ್ಕೆ ಜಿಲ್ಲೆಯ ಇತರೆ ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಕರೆತರಲು ಸರ್ಕಾರಿ, ಖಾಸಗಿ ಬಸ್ಸುಗಳು ಸೇರಿದಂತೆ ಸುಮಾರು 3000 ಬಸ್ಸುಗಳು ನಗರಕ್ಕೆ ಆಗಮಿಸಲಿವೆ. ಫಲಾನುಭವಿಗಳು ದೂರದಿಂದ ಕಾರ್ಯಕ್ರಮದ ಜಾಗಕ್ಕೆ ನಡೆದುಕೊಂಡು ಬರಲು ಅವಕಾಶ ನೀಡದೆ ಕಾರ್ಯಕ್ರಮದ ಜಾಗದಲ್ಲಿಯೇ ಬಸ್ಸುಗಳು ಫಲಾನುಭವಿಗಳನ್ನು ಇಳಿಸಿ, ಕಾರ್ಯಕ್ರಮದ ನಂತರ ಫಲಾನುಭವಿಗಳನ್ನು ಕರೆದೊಯ್ಯಲು ವ್ಯವಸ್ಥೆ ಆಗಬೇಕು. ನಗರ ಭಾಗದಲ್ಲಿ ವಾಹನ ಸಂಚಾರ ಅಥವಾ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ನಿಲುಗಡೆ ಪ್ರದೇಶ ಗುರುತಿಸಿ ನಿರ್ದಿಷ್ಟ ತಾಲ್ಲೂಕುಗಳ ವಾಹನಗಳು ನಿರ್ದಿಷ್ಟ ನಿಲುಗಡೆಯಲ್ಲಿಯೇ ನಿಲ್ಲುವಂತೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ತುಮುಲ್ ವತಿಯಿಂದ ಮಜ್ಜಿಗೆ, ನೀರಿನ ವ್ಯವಸ್ಥೆ ಆಗಬೇಕು. ಅಲ್ಲದೆ, ಫಲಾನುಭವಿಗಳು ಸುಲಭವಾಗಿ ತಮ್ಮ ಜಾಗಕ್ಕೆ ಹೋಗಿ ಕುಳಿತುಕೊಳ್ಳಲು ಅಥವಾ ನೀರು ಕುಡಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಸ್ವಚ್ಛತೆ ಹಾಗೂ ಸುಂದರವಾಗಿ ಕಾಣಿಸಲು ವ್ಯವಸ್ಥೆ ಕೈಗೊಳ್ಳಬೇಕು. ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಫಲಾನುಭವಿಗಳು ಆಗಮಿಸುವುದರಿಂದ ಅವರಿಗೆ ಸೂಕ್ತ ರೀತಿಯ ಸಂಚಾರಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಕಾರ್ಯಕ್ರಮಕ್ಕಾಗಿ ಸಚಿವ ಸಂಪುಟದ ಎಲ್ಲಾ ಸಚಿವರು, ಹಿರಿಯ ಅಧಿಕಾರಿಗಳು ಆಗಮಿಸುವುದರಿಂದ ಯಾವುದೇ ಕೊರತೆಯಾಗದಂತೆ ಅವರಿಗೆ ಆತಿಥ್ಯದ ವ್ಯವಸ್ಥೆಯಾಗಬೇಕು. ಈಗಾಗಲೇ ತುಮಕೂರು ಮಾದರಿ ಎಂಬ ಪರಿಕಲ್ಪನೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಜನಜನಿತವಾಗಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿರುವುದರಿಂದ ರಾಜ್ಯ ಸರ್ಕಾರಕ್ಕೆ ತುಮಕೂರಿನ ಬಗ್ಗೆ ವಿಶೇಷ ಆಸಕ್ತಿ ಹಾಗೂ ವಿಶ್ವಾಸ ಇರುತ್ತದೆ. ಈ ಹಿನ್ನೆಲೆಯಲ್ಲಿ ತುಮಕೂರು ಮಾದರಿ ಎಂಬ ಬಗ್ಗೆ ಯಾವುದೇ ಕೊರತೆಯಿಲ್ಲದಂತೆ ಅತ್ಯಂತ ಶಿಸ್ತುಬದ್ಧವಾಗಿ ಗೊಂದಲಗಳಿಗೆ ಆಸ್ಪದ ನೀಡದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
2023-24ರಲ್ಲಿ 30.92 ಕೋಟಿ ಖರ್ಚು
ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನಭಾಗ್ಯ, ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕಾಗಿ 2023-24ರಲ್ಲಿ ರಾಜ್ಯ ಸರ್ಕಾರವು ಬರೋಬ್ಬರಿ 30.92 ಕೋಟಿ ರುಪಾಯಿ ಒಟ್ಟು ಖರ್ಚು ಮಾಡಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಂಡು ವರ್ಷ ಕಳೆಯುವರಷ್ಟರಲ್ಲಿ ಗ್ಯಾರಂಟಿ ಸಮಾವೇಶಗಳನ್ನೂ ಹಮ್ಮಿಕೊಂಡಿತ್ತು. ಈ ಸಮಾವೇಶಕ್ಕೆ 2023-24ರಲ್ಲೇ ಒಟ್ಟಾರೆ 30.92 ಕೋಟಿ ರು ಖರ್ಚು ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.
ರಾಜ್ಯದ ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗಳಲ್ಲಿದ್ದ ಹಣಕ್ಕೂ ಸರ್ಕಾರವು ಕೈ ಹಾಕಿತ್ತು. ಅಲ್ಲದೆ 2023ರ ಆರ್ಥಿಕ ವರ್ಷ ಮುಕ್ತಾಯಗೊಂಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು 64,48, 55, 913 ರು.ಗಳ ಅನುದಾನವನ್ನು ಕೋರಿದ್ದರು. ಈ ಅನುದಾನದ ಪೈಕಿ 36 ಕೋಟಿ 95 ಲಕ್ಷ 43 ಸಾವಿರ 982 ರು.ಗಳನ್ನು ಗ್ಯಾರಂಟಿ ಸಮಾವೇಶ ನಡೆಸಲು ಅನುದಾನ ಬಿಡುಗಡೆ ಮಾಡಿತ್ತು.
ಗ್ಯಾರಂಟಿ ಸಮಾವೇಶಗಳಿಗಾಗಿ ಬಿಡುಗಡೆ ಮಾಡಿದ್ದ ಅನುದಾನವನ್ನು 23 ಜಿಲ್ಲೆಗಳಲ್ಲಿ ಖರ್ಚು ಮಾಡಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಅನುದಾನವನ್ನು ಬಳಕೆ ಮಾಡದ ಕಾರಣ ಲ್ಯಾಪ್ಸ್ ಆಗಿತ್ತು. ಇದರ ಮೊತ್ತ 6 ಕೋಟಿ 1 ಲಕ್ಷ 55 ಸಾವಿರ 727 ರು ಗಳಷ್ಟಿತ್ತು. ಅಲ್ಲದೇ 33 ಕೋಟಿ 67 ಲಕ್ಷ 57 ಸಾವಿರ 841 ರು ಅನುದಾನ ಕೊರತೆ ಇದೆ ಎಂದು ಜಿಲ್ಲಾಧಿಕಾರಿಗಳು ಹೆಚ್ಚುವರಿ ಮನವಿ ಮತ್ತು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.
ಜಿಲ್ಲಾಧಿಕಾರಿಗಳ ಕೋರಿಕೆಯಂತೆ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳ ಆಯೋಜನೆಗಾಗಿ 33 ಕೋಟಿ 67 ಲಕ್ಷ 57 ಸಾವಿರ 841 ರು.ಗಳ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಕೋರಿತ್ತು. ಈ ಪೈಕಿ 36 ಕೋಟಿ 95 ಲಕ್ಷ 43 ಸಾವಿರ 982 ರು.ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 30 ಕೋಟಿ 92 ಲಕ್ಷ 98 ಸಾವಿರ 072 ರು.ಗಳನ್ನು ಖರ್ಚು ಮಾಡಿತ್ತು. ಇದಾದ ಮೇಲೂ ಜಿಲ್ಲಾಧಿಕಾರಿಗಳು ಇನ್ನೂ 33 ಕೋಟಿ 67 ಲಕ್ಷ 57 ಸಾವಿರ 841 ರು.ಗಳನ್ನು ಕೋರಿತ್ತು.
ಶಿವಮೊಗ್ಗ ಜಿಲ್ಲಾಧಿಕಾರಿಗಳು 3,64,41,642 ರು ಅನುದಾನ ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 2,39,14,548 ರು ಖರ್ಚಾಗಿತ್ತು. 13,96,605 ರು ಲ್ಯಾಪ್ಸ್ ಆಗಿತ್ತು. ಆದರೂ ಹೆಚ್ಚುವರಿಯಾಗಿ 1,25,27,094 ರು ಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು. ಮಂಡ್ಯ ಜಿಲ್ಲಾಧಿಕಾರಿಗಳು 5,00,00,000 ರು ಕೋರಿದ್ದರು. ಇದರಲ್ಲಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. 2,53,11,153 ರು ಖರ್ಚು ಮಾಡಿದ್ದರು. ಹೆಚ್ಚುವರಿಯಾಗಿ 2,46,88,847 ರು ಗಳಿಗೆ ಪ್ರಸ್ತಾವ ಸಲ್ಲಿಸಿದ್ದರು.
ಕೋಲಾರ ಜಿಲ್ಲಾಧಿಕಾರಿಗಳು 3,24,00,000 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 2,53,11,153 ರು.ಗಳನ್ನು ವೆಚ್ಚ ಮಾಡಲಾಗಿತ್ತು. ಇನ್ನೂ 70,88,847 ರು ಒದಗಿಸಿ ಎಂದು ಹೆಚ್ಚುವರಿ ಪ್ರಸ್ತಾವ ಸಲ್ಲಿಸಿದ್ದರು. ಕಲಬುರಗಿ ಜಿಲ್ಲಾಧಿಕಾರಿಗಳು 12,50, 00,000 ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಿದ್ದ 2,53,11,15 ರು ಖರ್ಚಾಗಿತ್ತು. ಆದರೂ 9,96,88,847 ರು ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿದ್ದರು.
ಹಾಸನ ಜಿಲ್ಲಾಧಿಕಾರಿ 3,06,00,000 ಕೋಟಿ ರು ಬಿಡುಗಡೆಗೆ ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಆಗಿತ್ತು. ಖರ್ಚಿನ ಬಾಬತ್ತಿನಲ್ಲಿ ಶೂನ್ಯ ಎಂದು ತೋರಿಸಲಾಗಿದೆ. ಆದರೆ 3,06,00,000 ರು ಹೆಚ್ಚುವರಿ ಅನುದಾನ ಕೋರಿದ್ದರು. ಆದರೂ ಈ ಅನುದಾನವನ್ನು ಡ್ರಾ ಮಾಡಿರಲಿಲ್ಲ.
ಧಾರವಾಡ ಜಿಲ್ಲಾಧಿಕಾರಿಯು 4,90,60,665 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಅಗಿತ್ತು ಬಿಡುಗಡೆಯಾಗಿದ್ದ ಅನುದಾನ ಪೈಕಿ 2,53,09,885 ರು ಖರ್ಚಾಗಿತ್ತು. 1,268 ರು ಲ್ಯಾಪ್ಸ್ ಆಗಿತ್ತು. ಇದಾದ ನಂತರವೂ 2,37,50,780 ರು ಹೆಚ್ಚುವರಿಯಾಗಿ ಕೋರಿದ್ದರು.
ಬೀದರ್ ಜಿಲ್ಲಾಧಿಕಾರಿಯು 5,41,55,000 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಆಗಿತ್ತು. ಬಿಡುಗಡೆ ಆಗಿದ್ದ 2,53,11,153 ರು.ಗಳನ್ನು ಖರ್ಚು ಮಾಡಿದ್ದರು. ಆದರೂ ಹೆಚ್ಚುವರಿಯಾಗಿ 2,88,43,847 ಕೋರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯು 4,25,00,000 ರು ಕೋರಿದ್ದರು. 2,53,11,153 ರು ಬಿಡುಗಡೆಯಾಗಿತ್ತು. 1,40,00,001 ರು ಖರ್ಚಾಗಿತ್ತು. 1,13,11,152 ರು ಲ್ಯಾಪ್ಸ್ ಅಗಿತ್ತು. ಆದರೂ 2,84,99,999 ರು ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ವಿಜಯಪುರ ಜಿಲ್ಲಾಧಿಕಾರಿಯು 80,00,000 ರು ಕೋರಿದ್ದರು. ಕೋರಿಕೆಯಂತೆ 80,00,000 ರು ಬಿಡುಗಡೆಯಾಗಿತ್ತು. ಇದರಲ್ಲಿಯೂ 18,30,00 ಖರ್ಚಾಗಿತ್ತು. 61,70,000 ರು ಲ್ಯಾಪ್ಸ್ ಆಗಿತ್ತು. ಹೀಗಾಗಿ 61,70,000 ರು.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು.
ವಿಜಯನಗರ ಜಿಲ್ಲಾಧಿಕಾರಿಯು 9,35,000 ರು ಕೋರಿದ್ದರು. 9,35,000 ಬಿಡುಗಡೆ ಮಾಡಲಾಗಿತ್ತಾದರೂ 2,74,550 ರು ಖರ್ಚು ಮಾಡಿದ್ದರು. ಹೀಗಾಗಿ 6,60,450 ರು ಲ್ಯಾಪ್ಸ್ ಆಗಿತ್ತು. ಹೀಗಾಗಿ 6,60,450 ರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

ಉತ್ತರ ಕನ್ನಡ (ಕಾರವಾರ) ಜಿಲ್ಲಾಧಿಕಾರಿಯು 1,35,00,000 ರು ಕೋರಿದ್ದರು. 1,35,00,000 ರು ಬಿಡುಗಡೆಯಾಗಿತ್ತು. ಇದರಲ್ಲಿ 99,96,382 ರು ಖರ್ಚಾಗಿತ್ತು. 35,03,618 ಲ್ಯಾಪ್ಸ್ ಆಗಿತ್ತು. ಹೀಗಾಗಿ 35,03,618 ರುಗಳನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಯು ಪ್ರಸ್ತಾವ ಸಲ್ಲಿಸಿದ್ದರು.
ರಾಮನಗರ ಜಿಲ್ಲಾಧಿಕಾರಿ 68,92,065 ರು ಗೆ ಕೋರಿದ್ದರು. 68,92,065 ರು ಬಿಡುಗಡೆಯಾಗಿತ್ತು. ಬಿಡುಗಡೆ ಆಗಿದ್ದ 68,92,-065 ರು ಅನುದಾನವನ್ನು ಸೆಳೆದಿರಲಿಲ್ಲ. ಮೈಸೂರು ಜಿಲ್ಲಾಧಿಕಾರಿಯು 2,40,65,037 ರು ಕೋರಿದ್ದರು. 2,40,65,037 ರು ಬಿಡುಗಡೆಯಾಗಿತ್ತು. ಈ ಪೈಕಿ 2,40,10,776 ರು ಖರ್ಚಾಗಿತ್ತು. 54,261 ರು ಲ್ಯಾಪ್ಸ್ ಆಗಿತ್ತು. ಹೀಗಾಗಿ 54,261 ರು ಮಂಜೂರು ಮಾಡಬೇಕು ಎಂದು ಕೋರಿದ್ದರು. ಗದಗ ಜಿಲ್ಲಾಧಿಕಾರಿಯು 1,29,90,000 ರು ಅನುದಾನ ಕೋರಿದ್ದರು. 1,29,90,000 ರು ಬಿಡುಗಡೆ ಆಗಿತ್ತು. ಇಷ್ಟೂ ಅನುದಾನವನ್ನು ಖರ್ಚು ಮಾಡಲಾಗಿತ್ತು.
ಚಾಮರಾಜನಗರ ಜಿಲ್ಲಾಧಿಕಾರಿಯು 84,01,829 ರು ಅನುದಾನ ಕೋರಿದ್ದರು. 84,01,829 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ -84,01,829 ರು ಖರ್ಚು ಮಾಡಿದ್ದರು. ಆದರೂ ಹೆಚ್ಚುವರಿಯಾಗಿ 12,00,000 ರು ಕೋರಿದ್ದರು.
ಬಳ್ಳಾರಿ ಜಿಲ್ಲಾಧಿಕಾರಿಯು 49,24,855 ರು ಅನುದಾನ ಕೋರಿದ್ದರು. ಈ ಪೈಕಿ 48,55,155 ರು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಡ್ರಾ ಮಾಡಿರಲಿಲ್ಲ. ಹೀಗಾಗಿ ಲ್ಯಾಪ್ಸ್ ಆಗಿತ್ತು. ಇದೇ ಅನುದಾವನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲು ಕೋರಿದ್ದರು. ಉಡುಪಿ ಜಿಲ್ಲಾಧಿಕಾರಿಯು 95,31,500 ರು ಅನುದಾನ ಕೋರಿದ್ದರು. 95,31,500 ರು ಬಿಡುಗಡೆಯಾಗಿತ್ತು. 94,50,282 ರು ಖರ್ಚಾಗಿತ್ತು. ಆದರೂ 81,218 ರು.ಗಳನ್ನು ಹೆಚ್ಚುವರಿಯಾಗಿ ಕೋರಿದ್ದರು. ಹಾವೇರಿ ಜಿಲ್ಲಾಧಿಕಾರಿಯು 71,08,920 ರು ಕೋರಿದ್ದರು. 71,08,920 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯು 1,77,50,252 ರು ಕೋರಿದ್ದರು. ಈ ಪೈಕಿ 1,77,50,252 ರು ಬಿಡುಗಡೆ ಆಗಿತ್ತು. ಇದರಲ್ಲಿ 1,77,50,252 ರು ಖರ್ಚಾಗಿತ್ತು. ಚಿತ್ರದುರ್ಗ ಜಿಲ್ಲಾಧಿಕಾರಿಯು 94,00,000 ರು ಅನುದಾನ ಕೋರಿದ್ದರು. 94,00,000 ರು ಬಿಡುಗಡೆ ಆಗಿತ್ತು. ಈ ಪೈಕಿ 93,98,192 ರು ಖರ್ಚಾಗಿತ್ತು. ಹೆಚ್ಚುವರಿಯಾಗಿ 1,808 ರು ಕೋರಿದ್ದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿಯು 1,37,25,000 ರು ಕೋರಿದ್ದರು. 1,37,25,000 ರು ಬಿಡುಗಡೆಯಾಗಿತ್ತು. ಈ ಪೈಕಿ 1,37,17,843 ರು ಖರ್ಚಾಗಿತ್ತು. 7,157 ರು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಕೋರಿದ್ದರು.
ತುಮಕೂರು ಜಿಲ್ಲಾಧಿಕಾರಿಯು 2,00,00,000 ರು ಕೋರಿದ್ದರು. ಕೋರಿಕೆಯಂತೆ 2,00,000,000 ರು.ಗಳನ್ನು ಬಿಡುಗಡೆ ಮಾಡಿತ್ತು. ಇಷ್ಟೂ ಅನುದಾನವನ್ನೂ ಖರ್ಚು ಮಾಡಲಾಗಿತ್ತು. ದಾವಣಗೆರೆ ಜಿಲ್ಲಾಧಿಕಾರಿಯು 99,00,000 ರು ಕೋರಿದ್ದರು. ಇಷ್ಟೂ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತಲ್ಲದೇ ಈ ಹಣವೂ ಸಂಪೂರ್ಣವಾಗಿ ಖರ್ಚು ಮಾಡಲಾಗಿತ್ತು. ಕೊಪ್ಪಳ ಜಿಲ್ಲಾಧಿಕಾರಿಯು 75,74,148 ರು ಕೋರಿದ್ದರು. ಆದರೆ ಅನುದಾನವನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ 75,74,148 ರು ಒದಗಿಸಬೇಕು ಎಂದು ಎಂದು ಹೊಸ ಪ್ರಸ್ತಾವನೆ ಸಲ್ಲಿಸಿದ್ದರು.

ಅದೇ ರೀತಿ ರಾಯಚೂರು ಜಿಲ್ಲಾಧಿಕಾರಿಯು 3,00,00,000, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ 2,00,00,000 ಅನುದಾನ ಕೋರಿದ್ದರು. ಆದರೆ ಈ ಅನುದಾನವು ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಈ ಇಬ್ಬರೂ ಜಿಲ್ಲಾಧಿಕಾರಿಗಳು ಕ್ರಮವಾಗಿ 3 ಕೋಟಿ ಮತ್ತು 2 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ಹೊಸ ಪ್ರಸ್ತಾವ ಸಲ್ಲಿಸಿದ್ದರು.
ಒಟ್ಟಾರೆಯಾಗಿ ಈ 26 ಜಿಲ್ಲಾಧಿಕಾರಿಗಳು 64,48,55,913 ರು ಕೋರಿದ್ದರು. ಈ ಪೈಕಿ 35,95,43,982 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 30,92,98,072 ರು ಖರ್ಚಾಗಿತ್ತು. ಉಳಿದ 6,01,55,727 ರು ಲ್ಯಾಪ್ಸ್ ಅಗಿತ್ತು. ಹೀಗಾಗಿ ಇನ್ನೂ 33,67,57,841 ರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.




