ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ ರಿಯಾಯಿತಿದಾರರ ನೇಮಕಾತಿಯಲ್ಲಿ ನಿಯಮಬಾಹಿರ ಚಟುವಟಿಕೆ, ಪಕ್ಷಪಾತ, ವಂಚನೆ ಸೇರಿದಂತೆ ಇನ್ನಿತರೆ ಗಂಭೀರ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಈ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಲೋಕಾಯುಕ್ತರಿಗೂ ಪತ್ರ ಬರೆದಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆ ಟೆಂಡರ್‍ಗೆ ಸಂಬಂಧಿಸಿದಂತೆ ಈಚೆಗಷ್ಟೇ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದ ಆರೋಪವೊಂದು ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲದೇ ಹೈಕೋರ್ಟ್‌ನಲ್ಲಿ ವಿಚಾರಣೆಯು ನಡೆಯುತ್ತಿದೆ. ಈ ಮಧ್ಯೆ ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ ರಿಯಾಯಿತಿದಾರರ ನೇಮಕಾತಿಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು 2026ರ ಏಪ್ರಿಲ್ 30 ಬರೆದಿರುವ ಎರಡು ಪತ್ರಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ (MSW) ದ್ವಿತೀಯ ಸಾಗಾಣಿಕೆ ಹಾಗೂ ಅದರ ಮುಂದಿನ ಸಂಸ್ಕರಣೆ, ಮತ್ತು ವಿಲೇವಾರಿ ಕಾರ್ಯಗಳನ್ನು ಜಿಬಿಎಯ ಉತ್ತರ ಮತ್ತು ದಕ್ಷಿಣದ ಪ್ಯಾಕೇಜ್ ಕೈಗೊಳ್ಳುವುದರಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಯತ್ನಾಳ್ ಅವರು ಸರ್ಕಾರದ ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಎಲ್ಲಾ ವಿಧದ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ, ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕಾರ್ಯಯೋಜನೆ ರೂಪಿಸಲಾಗಿದೆ. ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಪ್ರತಿ ಟನ್‌ಗೆ 2,343.00 ರು ಹಾಗೂ ಸಂಸ್ಕರಣೆ ಮತ್ತು ವಿಲೇವಾರಿಗಾಗಿ ಪ್ರತಿ ಟನ್‌ಗೆ 650.00 ರು ವೆಚ್ಚ ಎಂದು ನಿಗದಿಪಡಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸಂಗ್ರಹಣೆ ಮತ್ತು ನಿರ್ವಹಣೆಗೆ ನಾಲ್ಕು ಪ್ಯಾಕೇಜುಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ನಿರ್ಧರಿಸಿರುವುದು ಪತ್ರದಿಂದ ಗೊತ್ತಾಗಿದೆ.
ಈ ಹಿಂದೆ ಬಿಬಿಎಂಪಿ ಎಂದು ಕರೆಯಲ್ಪಡುತ್ತಿದ್ದ ಸಂದರ್ಭದಲ್ಲಿ ಇದೇ ಬಿಬಿಎಂಪಿ ವ್ಯಾಪ್ತಿಯಲ್ಲಿ 25 ವರ್ಷಗಳ ಅವಧಿಗೆ ಪ್ರತಿ ಟನ್ ತ್ಯಾಜ್ಯಕ್ಕೆ ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಹಾಗೂ ಸರ್ಕಾರದ ಭೂಮಿ ಲಭ್ಯವಿಲ್ಲದಿದ್ದಲ್ಲಿ, ಬೆಂಗಳೂರು ನಗರದ ಹೊರವಲಯದಲ್ಲಿ ಪ್ರತಿ ಭಾಗದಲ್ಲಿ ಸುಮಾರು 100 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ದರದಲ್ಲಿ ಖರೀದಿಸಲು ಯೋಜಿಸಿತ್ತು.
ಈ ವಿಸ್ತೃತ ಕಾರ್ಯ ಯೋಜನೆ (ಡಿಪಿಆರ್) ಯನ್ನು ರೈಟ್ಸ್ ಲಿಮಿಟೆಡ್ ಸಿದ್ಧಪಡಿಸಿದೆ. ಒಟ್ಟು ಟಿಪ್ಪಿಂಗ್ ಶುಲ್ಕವನ್ನು ಪ್ರತಿ ಟಿಪಿಡಿಗೆ 2,998.00 ರು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ಪ್ರಾಥಮಿಕ ಸಂಗ್ರಹಣೆ ಮತ್ತು ಸಾರಿಗೆಗೆ ಸುಮಾರು 1600.00 ರು, ದ್ವಿತೀಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ರೂ.743.00 ಹಾಗೂ ಸಂಸ್ಕರಣೆ ಮತ್ತು ವಿಲೇವಾರಿಗೆ 655.00 ರು ಒಳಗೊಂಡಿದೆ. ಈ ಮೊತ್ತವನ್ನು ಬಿಎಸ್‌ಡಬ್ಲ್ಯೂಎಂಎಲ್ ನ 4ನೇ ಮತ್ತು 5ನೇ ತಾಂತ್ರಿಕ ಸಮಿತಿ ಸಭೆಯಲ್ಲಿ ಉಪಸಮಿತಿಯು ಸಮಗ್ರವಾಗಿ ಪರಿಶೀಲಿಸಿದೆ. ಅಲ್ಲದೇ ಈ ಬಗ್ಗೆ ಚರ್ಚಿಸಿ, ಮಾನದಂಡಗಳಿಗೆ ಅನುಗುಣವಾಗಿ ಪರಿಷ್ಕರಿಸಿ ಅನುಮೋದಿಸಿದೆ. ಅಂದರೆ ದ್ವಿತೀಯ ಸಂಗ್ರಹಣೆ ಮತ್ತು ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿಗಾಗಿ ರೂ.1398.00 ಟಿಪ್ಪಿಂಗ್ ಶುಲ್ಕ ನಿಗದಿಪಡಿಸಲಾಗಿದೆ ಎಂದು ಯತ್ನಾಳ್ ಅವರು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಬಿಬಿಎಂಪಿಯಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದ ಎನ್.ಆರ್. ರಮೇಶ್ ಅವರು 2024ರ ಜುಲೈ 16ರಂದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಬಿಬಿಎಂಪಿಯು ಬೆಂಗಳೂರು ನಗರದಲ್ಲಿ ಐಎಸ್‌ಡಬ್ಲ್ಯೂಎಂ ವ್ಯವಸ್ಥೆಯನ್ನು 25 ವರ್ಷಗಳ ಅವಧಿಗೆ 45,000.00 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಯೋಜನೆ ರೂಪಿಸಿದೆ. ಹಾಗೂ ಅದೇ ಟೆಂಡರ್ ಅನ್ನು ರಾಮ್ಕಿ ಇನ್ಫ್ರಾಸ್ಟಕ್ಚರ್ ಪ್ರೈವೈಟ್ ಲಿಮಿಟೆಡ್ ಗೆ ನೀಡಲು ನಿರ್ಧರಿಸಿದೆ ಎಂದು ಆರೋಪಿಸಿದ್ದಾರೆ.
ಈ ಸಂಸ್ಥೆಯನ್ನು ತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಯಕ್ಷಮತೆಯ ಕೊರತೆಯಿಂದ ಕೂಡಿತ್ತು ಎಂದು ಬಿಬಿಎಂಪಿಯು ಕಪ್ಪುಪಟ್ಟಿಗೆ ಸೇರಿಸಿತ್ತು. 2021ರ ಡಿಸೆಂಬರ್ 8ರಂದು ವಿಶ್ವ ಬ್ಯಾಂಕ್ ಗುಂಪು ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲಿಮಿಟೆಡ್ ಭಾರತದಲ್ಲಿ ಕೈಗಾರಿಕಾ ಮಾಲಿನ್ಯ ನಿರ್ವಹಣಾ ಸಾಮರ್ಥ್ಯವೃದ್ಧಿ ಯೋಜನೆಗೆ ಸಂಬಂಧಿಸಿದ ಮೋಸದ ಪ್ರಕ್ರಿಯೆ ಹಿನ್ನೆಲೆಯಲ್ಲಿ ಡಿಬಾರ್ ಮಾಡಿತ್ತು ಎಂದು ಸರ್ಕಾರದ ಗಮನಸೆಳೆದಿದೆ.
2019ರ ಏಪ್ರಿಲ್ 18ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಕೇಂದ್ರ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಂಯುಕ್ತ ಸಮಿತಿಗೆ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲಿಮಿಟೆಡ್ , ತ್ಯಾಜ್ಯ ಸಂಸ್ಕರಣೆ, ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂಬ ಆರೋಪಗಳ ಕುರಿತು ವಾಸ್ತವ ಪರಿಶೀಲನೆ ನಡೆಸುವಂತೆ ನಿರ್ದೇಶಿಸಿತ್ತು.

2024ರ ಸೆ.9 ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಬಿಬಿಎಂಪಿ, ಬಿಎಸ್‌ಡಬ್ಲ್ಯೂಎಂಎಲ್ ಕೈಗೊಳ್ಳಲಾಗುವ ಸಮಗ್ರ ಘನ ತ್ಯಾಜ್ಯ ನಿರ್ವಹಣೆಯ 4 ಪ್ಯಾಕೇಜುಗಳ ಕಾರ್ಯಕ್ಕೆ ಅಗತ್ಯವಿರುವ ಭೂಮಿ ಯಾವುದೇ ಬಾಧ್ಯತೆ, ನ್ಯಾಯಾಂಗ ವ್ಯಾಜ್ಯ ಮತ್ತು ಸ್ಥಳೀಯ ವಿವಾದಗಳಿಂದ ಮುಕ್ತವಾಗಿದೆ. ಮತ್ತು ಸಂಪೂರ್ಣವಾಗಿ ಬಿಬಿಎಂಪಿ ವಶದಲ್ಲಿದೆ ಎಂಬುದು ಖಚಿತವಾದ ನಂತರವೇ ಟೆಂಡರ್ ಕರೆಯಬೇಕೆಂದು ಆದೇಶಿಸಲಾಗಿದೆ.
ಜೊತೆಗೆ, ಆಯ್ಕೆಯಾದ ಸಂಸ್ಥೆಗೆ ಮಾತ್ರ ಒಪ್ಪಂದ ನೀಡಬೇಕು ಹಾಗೂ ಬಿಬಿಎಂಪಿ, ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಗಳು ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2016 ಮತ್ತು ಪ್ರಚಲಿತ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದಾಗ್ಯೂ, ಈ ಮಹತ್ವದ ಷರತ್ತುಗಳನ್ನು ಟೆಂಡರ್ ಅಧಿಸೂಚನೆ ಅಥವಾ ಟೆಂಡರ್ ದಾಖಲೆಗಳಲ್ಲಿ ಒಳಗೊಂಡಿಲ್ಲದೆ ಟೆಂಡರ್ ಕರೆಯಲಾಗಿದೆ ಎಂದು ಸರ್ಕಾರದ ಗಮನಸೆಳೆದಿರುವುದು ಪತ್ರದಿಂದ ಗೊತ್ತಾಗಿದೆ.

ಪ್ರಸ್ತುತ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ತುಷಾರ್ ಗಿರಿನಾಥ್ (ಹಿಂದೆ BBMP ಮುಖ್ಯ ಆಯುಕ್ತರು ಹಾಗೂ ಬಿಎಸ್‌ಡಬ್ಲ್ಯೂಎಂಲ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು) ಅವರು ಐಎಸ್‌ಡಬ್ಲ್ಯೂಎಂ ಕಾಮಗಾರಿಗಳನ್ನು ರಾಮ್ಕಿ ಗ್ರೂಪ್ ಆಫ್ ಕಂಪನೀಸ್‌ನ ಅಯೋಧ್ಯ ರಾಮರೆಡ್ಡಿ ಅವರಿಗೆ ನೀಡಲು ನಿರ್ಧರಿಸಿದ್ದರು. ಅಯೋಧ್ಯ ರಾಮರೆಡ್ಡಿ ಅವರು ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಬಿಎಸ್‌ಡಬ್ಲ್ಯೂಎಂಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅನೇಕ ಬಾರಿ ಭೇಟಿ ಮಾಡಿದ್ದರು. ಆ ಅವಧಿಯಲ್ಲಿಯೇ ಐಎಸ್‌ಡಬ್ಲ್ಯೂಎಂ ಟೆಂಡರ್ ಕುರಿತು ಚರ್ಚೆ ನಡೆಸಿದ್ದಾರೆ. ಮತ್ತು ಟೆಂಡರ್ ಷರತ್ತುಗಳನ್ನು ರಾಮ್ಕಿ ಗ್ರೂಪ್ ಆಫ್ ಕಂಪನೀಸ್ ಗೆ ರೂಪಿಸಲಾಗಿದೆ ಎಂದು ಪತ್ರದಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.
ಐಎಸ್‌ಡಬ್ಲ್ಯೂಎಂ ಕಾಮಗಾರಿಗಳಿಗಾಗಿ ಮೊದಲ ಬಾರಿ ಕರೆಯಲಾದ ಟೆಂಡರ್ ಅನ್ನು ತಾಂತ್ರಿಕ ಕಾರಣಗಳಿಂದ ರದ್ದುಪಡಿಸಲಾಗಿತ್ತು. ಇದರ ಮುಖ್ಯ ಕಾರಣವೆಂದರೆ ಟಿಪ್ಪಿಂಗ್ ಶುಲ್ಕದ ಅಂದಾಜು ಮೊತ್ತ ಕಡಿಮೆಯಿತ್ತು. ಇದರಿಂದ ಅಯೋಧ್ಯ ರಾಮರೆಡ್ಡಿ ಅಸಮಾಧಾನಗೊಂಡಿದ್ದರು ಮತ್ತು ಅದು ಅವರಿಗೆ ಲಾಭದಾಯಕವಾಗಿರಲಿಲ್ಲ ಎಂದೂ ಯತ್ನಾಳ್ ಅವರು ತಮ್ಮ ಆರೋಪಗಳನ್ನು ವಿಸ್ತರಿಸಿರುವುದು ಗೊತ್ತಾಗಿದೆ.

ಅಯೋಧ್ಯ ರಾಮರೆಡ್ಡಿ ಅವರು ತುಷಾರ್ ಗಿರಿನಾಥ್ ಅವರನ್ನು ಭೇಟಿಯಾದ ನಂತರ ಈ ಮೊದಲು ಡಿಪಿಆರ್ ಸಲಹೆಗಾರರಾಗಿದ್ದ ರೈಟ್ಸ್ ಲಿಮಿಟೆಡ್‌ನಿಂದ ಬಿಸಿಜಿಗೆ (ಬಿಬಿಎಂಪಿಗೆ ತಂತ್ರಜ್ಞಾನ ನಿರ್ವಹಣೆ ಸಲಹೆಗಾರ) ಗೆ ಏಕಾಏಕೀ ಬದಲಾಯಿಸಿತ್ತು. ಇದು ಕೆಟಿಪಿಪಿ ನಿಯಮ 2000ರ (ಅಧ್ಯಾಯ VIIA) ಸಲಹಾ ಸೇವೆಗಳ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಬಿಸಿಜಿ ಸಂಸ್ಥೆ ಅಂದಾಜಿಸಿ ಸೂಚಿಸಿರುವ ಟಿಪ್ಪಿಂಗ್ ಶುಲ್ಕಕ್ಕೆ ಮಾನ್ಯತೆ ಇಲ್ಲ.
ಡಿಪಿಆರ್ ಸಲಹೆಗಾರರ ನೇಮಕಾತಿಯಲ್ಲಿ ಉಲ್ಲಂಘನೆ ನಡೆದಿದ್ದರೂ ಸಹ, ಸರ್ಕಾರವು ಬಿಸಿಸಿ ಸಂಸ್ಥೆ ಸೂಚಿಸಿದ್ದ ಪರಿಷ್ಕೃತ ಟಿಪ್ಪಿಂಗ್ ಶುಲ್ಕವನ್ನು (ಉತ್ತರ ಪ್ಯಾಕೇಜ್‌ಗೆ ರೂ.2151.00 ಮತ್ತು ದಕ್ಷಿಣ ಪ್ಯಾಕೇಜ್‌ಗೆ ರೂ.1801.00) 2025ರ ಜೂನ್ 9ರಂದು ಅನುಮೋದಿಸಿದೆ.

ಅದೇ ರೀತಿ ಐಎಸ್‌ಡಬ್ಲ್ಯೂಎಂ ಟೆಂಡರ್‌ನ 2ನೇ ಕರೆಯಲ್ಲಿ ಉತ್ತರ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಮೂರು ಬಿಡ್ಡರ್‌ಗಳು ಭಾಗವಹಿಸಿದ್ದರು. ಚೆವಿರೆಡ್ಡಿ ಚಂದ್ರಶೇಖರ್ ರೆಡ್ಡಿ (ಪಿಎಲ್‌ಆರ್ ಪ್ರಾಜೆಕ್ಟ್ಸ್ ಪ್ರೈ ಲಿ., ) ಸಂಜೀವ್ ಕುಮಾರ್ (ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್) ರಮನ್ ಗೋಯಲ್ (ಬಿಆರ್‍ಐಜೆ ಗೋಪಾಲ್ಸ್ ಕನಸ್ಟ್ರಕ್ಷನ್ಸ್ ಕಂಪನಿ ಪ್ರೈ ಲಿ., ) ಈ ಮೂವರನ್ನೂ ಬಿಎಸ್‌ಡಬ್ಲ್ಯೂಎಂಎಲ್ ತಾಂತ್ರಿಕವಾಗಿ ಅನರ್ಹರೆಂದು ಘೋಷಿಸಿತ್ತು.
ಅದೇ ರೀತಿ ದಕ್ಷಿಣ ಪ್ಯಾಕೇಜ್‌ಗೆ ವೆಂಕಟ ಸಾಂಬಶಿವರಾವ್ ಬೆಲ್ಲಂಕೊಂಡ ( ಕೆಪಿಸಿ ಪ್ರಾಜೆಕ್ಟ್ಸ್ ಲಿಮಿಟೆಡ್) ಸಂಜೀವ್ ಕುಮಾರ್ (ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್) ಮತ್ತು ರಮನ್ ಗೋಯಲ್ (ಬಿಆರ್‍ಐಜೆ ಗೋಪಾಲ್ಸ್ ಕನಸ್ಟ್ರಕ್ಷನ್ಸ್ ಕಂಪನಿ ಪ್ರೈ ಲಿ., ) ಭಾಗವಹಿಸಿದ್ದರು. ಈ ಮೂವರನ್ನೂ ಸಹ ಇದೇ ಬಿಎಸ್‌ಡಬ್ಲ್ಯೂಎಂಎಲ್ ತಾಂತ್ರಿಕವಾಗಿ ಅನರ್ಹರೆಂದು ಘೋಷಿಸಿತ್ತು. ಈ ಸಂಬಂಧ 2025ರ ಡಿಸೆಂಬರ್ 12ರಂದೇ ಬಿ ಇ ಶ್ರೀಧರ್ ಎಂಬವರು ಆರೋಪಿಸಿದ್ದರು.
ಇದೇ ಐಎಸ್‌ಡಬ್ಲ್ಯೂಎಂ ಟೆಂಡರ್‌ಗಳನ್ನು ರಾಮ್ಕಿ ಇನ್ಫ್ರಾಸ್ಟಕ್ಚರ್ ಪ್ರೈ ಲಿ..,ಗೆ ಆಪ್ತ ಸಂಬಂಧ ಹೊಂದಿರುವ ಬಿಆರ್‍ಐಜೆ ಗೋಪಾಲ್ ಕನ್ಸ್ಟ್ರಕ್ಷನ್ಸ್ ಪ್ರೈ ಲಿ ಮತತು ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್‌ಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು.
ಈ ಮಧ್ಯೆ ಬಿಎಸ್‌ಡಬ್ಲ್ಯೂಎಂಲ್, ಐಎಸ್‌ಡಬ್ಲ್ಯೂಎಂಗೆ 3ನೇ ಬಾರಿ ಟೆಂಡರ್‍ನ್ನು 2025ರ ನವೆಂಬರ್ 6ರಂದು ಆಹ್ವಾನಿಸಿತ್ತು. ಕೆಟಿಪಿಪಿ ನಿಯಮ ನಿಯಮ 2000ರ ಅಧ್ಯಾಯ-III ಪ್ರಚಾರ (10)(1) ಪ್ರಕಾರ ಟೆಂಡರ್ ಆಹ್ವಾನ ಸೂಚನೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದು ಕಡ್ಡಾಯ. ಆದರೆ 3ನೇ ಟೆಂಡರ್ ಅಧಿಸೂಚನೆಯನ್ನು ಪತ್ರಿಕೆಗಳ ಮೂಲಕ ಪ್ರಕಟಿಸಲಾಗಿಲ್ಲ. ಹೀಗಾಗಿ ಈ ಸಂಪೂರ್ಣ ಟೆಂಡರ್ ಪ್ರಕ್ರಿಯೆಯೇ ಅಮಾನ್ಯವಾಗಿದೆ ಎಂದು ಸರ್ಕಾರದ ಗಮನಸೆಳೆದಿರುವುದು ಗೊತ್ತಾಗಿದೆ.
1ನೇ, 2ನೇ ಮತ್ತು 3ನೇ ಟೆಂಡರ್ ಕರೆಗಳ ನಡುವಿನ ಅವಧಿಯಲ್ಲಿ, ತುಷಾರ್ ಗಿರಿನಾಥ್ ಅವರ ಅನೌಪಚಾರಿಕ ಸೂಚನೆಗಳನ್ನು ಪಾಲಿಸದ ಅನೇಕ ಕಾರ್ಯಕ್ಷಮ ಮುಖ್ಯ ಇಂಜಿನಿಯರ್‌ಗಳನ್ನು ಯಾವುದೇ ಮಾನ್ಯ ಕಾರಣವಿಲ್ಲದೆ ವರ್ಗಾವಣೆ ಮಾಡಲಾಗಿದೆ. 3ನೇ ಐಎಸ್‌ಡಬ್ಲ್ಯೂಎಂ ಟೆಂಡರ್‌ಗಳನ್ನು 2025ರ ಡಿಸೆಂಬರ್ 15ರಂದು ತೆರೆದಿತ್ತು. ಉತ್ತರ ಮತ್ತು ದಕ್ಷಿಣ ಪ್ಯಾಕೇಜ್‌ಗಳಿಗೆ ಮೂರು ಬಿಡ್ಡರ್‌ಗಳು ಭಾಗವಹಿಸಿದ್ದರು. ಚೆವಿರೆಡ್ಡಿ ಚಂದ್ರಶೇಖರ್ ರೆಡ್ಡಿ (PLR Projects Pvt Ltd), ಸಂಜೀವ್ ಕುಮಾರ್ (Delhi MSW Solutions Ltd) … Solutions Ltd) ಮತ್ತು ರಮನ್ ಗೋಯಲ್ (BRIJ Gopal Const Co Pvt Ltd). 3 ಮಂದಿ ಬಿಡ್ಡರ್‌ಗಳಲ್ಲಿ 2 ಮಂದಿಯ ಹೆಸರುಗಳನ್ನು ಟೆಂಡರ್ ತೆರೆಯುವ ಮೊದಲೇ ವಕೀಲ ಬಿ.ಇ. ಶ್ರೀಧರ್ ಅವರು ಮುಂಚಿತವಾಗಿ ಊಹಿಸಿದ್ದರು.
ಜೊತೆಗೆ ಸಂಜೀವ್ ಕುಮಾರ್ (Delhi MSW Solutions Ltd) ಮತ್ತು ರಮನ್ ಗೋಯಲ್ (BRIJ Gopal Const Co Pvt Ltd) ಅವರು ನೇರವಾಗಿ ರಾಮ್ಕಿ ಗ್ರೂಪ್ ಆಫ್ ಕಂಪನೀಸ್ ಗೆ ಸಂಬಂಧ ಹೊಂದಿದ್ದಾರೆ. ಇದರಿಂದ ಎನ್.ಆರ್. ರಮೇಶ್ ಹಾಗೂ ವಕೀಲ ಬಿ.ಇ. ಶ್ರೀಧರ್ ಅವರ ಊಹೆಗಳು ನಿಜವೆಂಬುದು ಸ್ಪಷ್ಟವಾಗುತ್ತದೆ ಎಂದು ಯತ್ನಾಳ್ ಅವರು ಸಹ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2ನೇ ಟೆಂಡರ್ ಕರೆಯಲ್ಲಿ ತಾಂತ್ರಿಕವಾಗಿ ಅನರ್ಹರೆಂದು ಘೋಷಿಸಲ್ಪಟ್ಟವರನ್ನೇ 3ನೇ ಟೆಂಡರ್ ಕರೆಯಲ್ಲಿ ಅರ್ಹ ಬಿಡ್ಡರ್‌ಗಳೆಂದು ಪರಿಗಣಿಸಲಾಗಿದೆ. ಇದು ಬಿಎಸ್‌ಡಬ್ಲ್ಯೂಎಂಲ್ ಸಂಸ್ಥೆಯ ತಾಂತ್ರಿಕ ಮೌಲ್ಯಮಾಪನ ಪ್ರಕ್ರಿಯೆಯ ಬಗ್ಗೆ ಅನುಮಾನ ಹುಟ್ಟಿಸುತ್ತದೆ. ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಯು ಉತ್ತರ ಮತ್ತು ದಕ್ಷಿಣ ಪ್ಯಾಕೇಜುಗಳ ಹಣಕಾಸು ಬಿಡ್ ತೆರೆದಿದ್ದರು. ಆ ನಂತರ ಸಂಜೀವ್ ಕುಮಾರ್ (Delhi MSW Solutions Limited) ಅವರನ್ನು ಎರಡೂ ಪ್ಯಾಕೇಜುಗಳ ಕನಿಷ್ಠ ದರದ ಬಿಡ್ಡರ್ ಎಂದು ಘೋಷಿಸಿತ್ತು.
ಉತ್ತರ ಮತ್ತು ದಕ್ಷಿಣ ಪ್ಯಾಕೇಜುಗಳಿಗೆ ಕ್ರಮವಾಗಿ ಶೇ. 52.30, ಮತ್ತು ಶೇ. 80.40 ಹೆಚ್ಚುವರಿ ಟೆಂಡರ್ ಪ್ರೀಮಿಯಂ ಅನ್ನು ಕನಿಷ್ಠ ಬಿಡ್ಡರ್ ಉಲ್ಲೇಖಿಸಿದ್ದಾರೆ. ಕನಿಷ್ಠ ಬಿಡ್ಡರ್ ಬಹಳ ಹೆಚ್ಚಿನ ದರ ಉಲ್ಲೇಖಿಸಿದ್ದರಿಂದ ಸರ್ಕಾರವು 2026ರ ಮಾರ್ಚ್ 3ರಂದು ದರ ಮಾತುಕತೆಗೆ ಸಮಿತಿಯನ್ನು ರಚಿಸಿತ್ತು. ಆದರೆ ಅದೇ ಸಮಿತಿಯನ್ನು ವರ್ಷದ ಹಿಂದೆಯೇ ಅಮಾನ್ಯಗೊಳಿಸಿತ್ತು.
2-3 ಸುತ್ತಿನ ಮಾತುಕತೆ ಸಭೆಗಳ ನಂತರ, ಉತ್ತರ ಮತ್ತು ದಕ್ಷಿಣ ಪ್ಯಾಕೇಜುಗಳಿಗೆ ಕ್ರಮವಾಗಿ ಶೇ. 19.24 ಮತ್ತು ಶೇ. 19.43 ಹೆಚ್ಚುವರಿ ಟೆಂಡರ್ ಪ್ರೀಮಿಯಂ ಅನ್ನು ಬಿಎಸ್‌ಡಬ್ಲ್ಯುಎಂಎಲ್ ಅಂತಿಮವಾಗಿ ಅಂಗೀಕರಿಸಿತ್ತು. ಈ ಶಿಫಾರಸ್ಸನ್ನು ಬಿಸಿಜಿ ಕನ್ಸ್‌ಲ್ಟೆಂಟ್ ನ ಸಮಾಲೋಚಕ ಸಮಿತಿ ಮತ್ತು ಬಿಎಸ್‌ಡಬ್ಲ್ಯೂಎಂಲ್‌ನ ವ್ಯವಸ್ಥಾಪಕ ನಿರ್ದೇಶಕರು ಮಾಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಹಣಕಾಸು ಇಲಾಖೆಯ ಪತ್ರದ ( FD 128 Exp-12/2021, ದಿನಾಂಕ: 10.05.2022) ಪ್ರಕಾರ ‘ಟೆಂಡರ್‌ನಲ್ಲಿ ಬಂದ ಮೊತ್ತವು ಅಂದಾಜು ಮೊತ್ತಕ್ಕಿಂತ ಶೇ 10 ಕ್ಕಿಂತ ಹೆಚ್ಚು ಇದ್ದಲ್ಲಿ, ಅದನ್ನು ಹೆಚ್ಚಿನ ಹೆಚ್ಚುವರಿ ಟೆಂಡರ್ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಎಲ್ಲಾ ಟೆಂಡರ್‌ಗಳನ್ನು ರದ್ದುಪಡಿಸಿ ಮರು-ಟೆಂಡರ್ ಕರೆಯುವುದು ಮೊದಲ ಆಯ್ಕೆಯಾಗಿರಬೇಕು.’ ಎಂದಿದೆ.
ಆರ್ಥಿಕ ಇಲಾಖೆಯು ಈ ಅಭಿಪ್ರಾಯವನ್ನು ನೀಡಿದ್ದರೂ ಸಹ ಬಿಎಸ್‌ಡಬ್ಲ್ಯೂಎಂಎಲ್ ಮಂಡಳಿಯು ಉತ್ತರ ಮತ್ತು ದಕ್ಷಿಣ ಪ್ಯಾಕೇಜುಗಳಿಗೆ ಕ್ರಮವಾಗಿ ಶೇ. 19.24 ಮತ್ತು ಶೇ. 19.43 ಹೆಚ್ಚುವರಿ ಟೆಂಡರ್ ಪ್ರೀಮಿಯಂ ಅನ್ನು ಅನುಮೋದಿಸಿದೆ. ಆದರೆ ಬಿಎಸ್‌ಡಬ್ಲ್ಯೂಎಂಎಲ್ ಮಂಡಳಿ ಸ್ಥಾಪನೆಯಾದ ದಿನದಿಂದ ಇಂದಿನವರೆಗೆ ಯಾವುದೇ ಟೆಂಡರ್‌ಗಳಿಗೆ ಶೇ 5.00 ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂನ್ನು ನೀಡಿರಲಿಲ್ಲ.
ಪ್ರಸ್ತುತ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ತುಷಾರ್ ಗಿರಿನಾಥ್ ಅವರು ಈ ಎರಡೂ ಕಾಮಗಾರಿಗಳನ್ನು ರಾಮ್ಕಿ ಇನ್ಫ್ರಾಸ್ಟಕ್ಚರ್ ಪ್ರೈ ಲಿ. ಗೆ ಸಂಬಂಧ ಹೊಂದಿರುವ ಸಂಜೀವ್ ಕುಮಾರ್ (Delhi MSW Solutions Limited) ಅವರಿಗೆ ನೀಡಲು ನಿರ್ಧರಿಸಿದ್ದರು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆರಂಭದಲ್ಲಿ ರೈಟ್ಸ್ ಲಿಮಿಟೆಡ್ ಪ್ರತಿ ಟಿಪಿಡಿಗೆ 1,398.00 ಟಿಪ್ಪಿಂಗ್ ಶುಲ್ಕವನ್ನು ಅಂದಾಜಿಸಿತ್ತು. ನಂತರ ಅದನ್ನು ಬಿಸಿಜಿ ಸಂಸ್ಥೆಯು ಅದನ್ನು 2,151 ರುಗೆ ಪರಿಷ್ಕರಿಸಿತ್ತು. ಅಂದರೆ ಶೇ. 53.87ರಷ್ಟು ಹೆಚ್ಚಳವಾಗಿದೆ. ನಂತರ ಬಿಎಸ್‌ಡಬ್ಲ್ಯುಎಂಲ್ ಮಂಡಳಿಯು ಉತ್ತರ ಪ್ಯಾಕೇಜ್‌ಗೆ ಪ್ರತಿ ಟಿಪಿಡಿಗೆ 2,565.00 ಟಿಪ್ಪಿಂಗ್ ಶುಲ್ಕವನ್ನು ಅನುಮೋದಿಸಿತು. ಇದು ಸಹ ರೈಟ್ಸ್ ಲಿಮಿಟೆಡ್ ಅಂದಾಜಿಸಿದ್ದ ಮೊತ್ತಕ್ಕಿಂತ ಶೇ. 83.47ರಷ್ಟು ಹೆಚ್ಚಾಗಿದೆ.
ಕರ್ನಾಟಕ ಸರ್ಕಾರವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ಸಹ ಬಿಎಸ್‌ಡಬ್ಲ್ಯೂಎಂಎಲ್ ಶೇ. 19.24 ಮತ್ತು ಶೇ 19.43ರಷ್ಟು ಹೆಚ್ಚುವರಿ ಟೆಂಡರ್ ಪ್ರೀಮಿಯಂ ಅನ್ನು ಅನುಮೋದಿಸಿದೆ. ಈ ಮೂಲಕ ತುಷಾರ್ ಗಿರಿನಾಥ್ ಅವರು ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅದೇ ರೀತಿ ಪ್ರಸ್ತುತ ಜಿಬಿಎ (ಹಿಂದೆ ಬಿಬಿಎಂಪಿ) ಬಿಎಸ್‌ಡಬ್ಲ್ಯೂಎಂಲ್ ಸಂಸ್ಥೆಯು ಐಎಸ್‌ಡಬ್ಲ್ಯೂಎಂ(ಉತ್ತರ ಪ್ಯಾಕೇಜ್) ಯೋಜನೆಗಾಗಿ ಟೆರ್‍ರಾ ಫಾರ್ಮಾ ಬಯೋ ಟೆಕ್ನಾಲಜಿ ಸಂಸ್ಥೆಗೆ ಸೇರಿದ ಭೂಮಿಯನ್ನು ಖರೀದಿಸಲು ನಿರ್ಧರಿಸಿತ್ತು. ಈ ಭೂಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡನಹಳ್ಳಿ ಗ್ರಾಮದಲ್ಲಿದೆ. ಈ ಸಂಬಂಧ ಬಿಬಿಎಂಪಿಯು ಪ್ರತಿ ಎಕರೆಗೆ ರೂ.1.50 ಕೋಟಿ ಭೂ ಪರಿಹಾರವನ್ನು ನೀಡಲು ಆದೇಶ ಹೊರಡಿಸುವಂತೆ ಪ್ರಸ್ತಾವನೆ ಕಳುಹಿಸಿತ್ತು.
ಪ್ರಸ್ತುತ ಜಿಬಿಎ, ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಯು ಐಎಸ್‌ಡಬ್ಲ್ಯೂಎಂ (ಉತ್ತರ ಪ್ಯಾಕೇಜ್) ಉದ್ದೇಶಕ್ಕಾಗಿ ಟೆರ್‍ರಾ ಫಾರ್ಮಾ ಬಯೋ ಟೆಕ್ನಾಲಜಿ ಸಂಸ್ಥೆಯ ಭೂಮಿಯನ್ನು ಪಡೆಯುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಟೆಂಡರ್ ಕೂಡ ಆಹ್ವಾನಿಸಿತ್ತು. ಆದರೆ ಹಣಕಾಸು ಇಲಾಖೆಯು ಅದನ್ನು ಈಗಾಗಲೇ ತಿರಸ್ಕರಿಸಿದೆ.

ಪ್ರಸ್ತುತ ಜಿಬಿಎಯು, ಐಎಸ್‌ಡಬ್ಲ್ಯೂಎಂ (ಉತ್ತರ ಪ್ಯಾಕೇಜ್) ಟೆಂಡರ್ ಉದ್ದೇಶಕ್ಕಾಗಿ ಭೂಮಿ ಖರೀದಿಸಲು ಪ್ರತಿ ಎಕರೆಗೆ ರೂ.1.50 ಕೋಟಿ ಭೂ ಪರಿಹಾರ ಪಾವತಿಸಲು ಆದೇಶ ಹೊರಡಿಸುವಂತೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ. ಭೂಮಿ ಪಡೆಯದೇ ಟೆಂಡರ್ ಅಂತಿಮಗೊಳಿಸುವುದು ಮಾನವ ಸಂಪನ್ಮೂಲ ಮತ್ತು ಸಮಯದ ವ್ಯರ್ಥವೆನಿಸುತ್ತದೆ ಎಂದು ಯತ್ನಾಳ್ ಅವರು ಸರ್ಕಾರದ ಗಮನಸೆಳೆದಿದ್ದಾರೆ.
ಲೋಕಾಯುಕ್ತಕ್ಕೂ ದೂರು
ಬೆಂಗಳೂರು ಉತ್ತರ ಮತ್ತು ದಕ್ಷಿಣ ಪ್ಯಾಕೇಜುಗಳ ಅಡಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಟೆಂಡರ್ ನೀಡಿಕೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು, ಪಕ್ಷಪಾತ ಹಾಗೂ ಶಂಕಿತ ವಂಚನೆ ಕುರಿತು ತನಿಖೆ ನಡೆಸಬೇಕು ಎಂದು ಯತ್ನಾಳ್ ಅವರು ದೂರು ಸಲ್ಲಿಸಿದ್ದಾರೆ.
ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ ನಿಯಮಗಳು, 2000 (KTPP Rules, 2000) ಅಡಿಯಲ್ಲಿ ಸಲಹಾ ಸೇವೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದೇ, ಡಿಪಿಆರ್ ಸಲಹೆಗಾರರನ್ನು ಏಕಾಏಕಿ ಬೋಸ್ಟನ್ ಕನ್ಸ್‌ಲ್ಟಿಂಗ್ ಗೆ ಬದಲಾಯಿಸಲಾಗಿದೆ. ನಂತರ ನೀಡಲಾದ ಪರಿಷ್ಕೃತ ಅಂದಾಜುಗಳು ಬಹಳ ಮಟ್ಟಿಗೆ ಹೆಚ್ಚಾಗಿವೆ. ಇದರಿಂದ ಸ್ವೈಚ್ಛಿಕತೆ ಮತ್ತು ಆರ್ಥಿಕ ಅಕ್ರಮಗಳ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ ಎಂದು ಲೋಕಾಯುಕ್ತರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ವಿವಿಧ ವರದಿಗಳು ಮತ್ತು ಸಾರ್ವಜನಿಕ ಆರೋಪಗಳು ಪ್ರಮುಖ ವ್ಯಕ್ತಿಗಳ ನಡುವೆ ಅನವಶ್ಯಕ ಪ್ರಭಾವ ಹಾಗೂ ಪುನರಾವರ್ತಿತ ಸಂಪರ್ಕಗಳಿದ್ದುದನ್ನು ಸೂಚಿಸುತ್ತವೆ.ಆ ಗುಂಪಿನ ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ನಡೆದ ಸಂಪರ್ಕಗಳು ಪಕ್ಷಪಾತ ಹಾಗೂ ಹಿತಾಸಕ್ತಿ ಸಂಘರ್ಷದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಟೆಂಡರ್ ಪ್ರಕ್ರಿಯೆಯಲ್ಲಿಯೇ ಅನೇಕ ಅಕ್ರಮಗಳು ನಡೆದಿವೆ. ವಿಶೇಷವಾಗಿ, ಮೂರನೇ ಟೆಂಡರ್ ಕರೆಯನ್ನು ಕೆಟಿಪಿಪಿ ನಿಯಮಗಳ ಉಲ್ಲಂಘನೆಯಾಗಿ ಪತ್ರಿಕೆಗಳಲ್ಲಿ ಕಡ್ಡಾಯ ಪ್ರಕಟಣೆ ನೀಡದೇ ಹೊರಡಿಸಲಾಗಿದೆ. ಇದರಿಂದ ಪ್ರಕ್ರಿಯೆಯ ಕಾನೂನುಬದ್ಧತೆಯೇ ಪ್ರಶ್ನಾರ್ಥಕವಾಗಿದೆ. ಜೊತೆಗೆ, ಮೊದಲು ತಾಂತ್ರಿಕ ಕಾರಣಗಳಿಂದ ಅನರ್ಹರೆಂದು ಘೋಷಿಸಲ್ಪಟ್ಟ ಬಿಡ್ಡರ್‌ಗಳನ್ನು ಯಾವುದೇ ಪಾರದರ್ಶಕ ಕಾರಣವಿಲ್ಲದೆ ನಂತರ ಅರ್ಹರೆಂದು ಘೋಷಿಸಲಾಗಿದೆ. ಇದು ಮೌಲ್ಯಮಾಪನ ಪ್ರಕ್ರಿಯೆಯ ನಂಬಿಕೆಯನ್ನು ಕುಂದಿಸುತ್ತದೆ ಎಂದು ದೂರಿನಲ್ಲಿ ಹೇಳಿರುವುದು ಗೊತ್ತಾಗಿದೆ.
‘ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯೂ ಅನಿಶ್ಚಿತತೆಯಿಂದ ಕೂಡಿದೆ. ಸ್ಪಷ್ಟ ಭೂ ಲಭ್ಯತೆ ಇಲ್ಲ. ಹಾಗೂ ಹಣಕಾಸು ಇಲಾಖೆ ಪರಿಹಾರ ಪ್ರಸ್ತಾವನೆಗಳನ್ನು ತಿರಸ್ಕರಿಸಿತ್ತು. ಆದರೂ ಸಹ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ. ಇದು ಸಮರ್ಪಕ ಪರಿಶೀಲನೆಯ ಕೊರತೆ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ದುರುಪಯೋಗದ ಸಾಧ್ಯತೆಯನ್ನು ತೋರಿಸುತ್ತದೆ,’ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಒಟ್ಟಾರೆ ಈ ಎಲ್ಲಾ ಸಂಗತಿಗಳು ಸಾರ್ವಜನಿಕ ಹಿತಾಸಕ್ತಿಯ ಬೆಲೆಯಲ್ಲಿ ಕೆಲವು ಆಯ್ದ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಪ್ರಕ್ರಿಯೆಯನ್ನು ತಿರುಚಲಾಗಿದೆ. ಇದರಿಂದ ರಾಜ್ಯ ಖಜಾನೆಗೆ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಯತ್ನಾಳ್ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಪ್ಯಾಕೇಜುಗಳ ಐಎಸ್‌ಡಬ್ಲ್ಯೂಎಂ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿಚಾರದಲ್ಲಿ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಬೇಕು. ಕೆಟಿಪಿಪಿ ನಿಯಮಗಳ ಉಲ್ಲಂಘನೆಯಾಗಿರುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಬೇಕು. ಡಿಪಿಆರ್ ಸಲಹೆಗಾರರ ಬದಲಾವಣೆ ಮತ್ತು ಯೋಜನಾ ವೆಚ್ಚದ ಹೆಚ್ಚಳಕ್ಕೆ ಕಾರಣವಾದ ಸಂದರ್ಭಗಳನ್ನು ತನಿಖೆಗೊಳಪಡಿಸಬೇಕು ಎಂದು ಲೋಕಾಯುಕ್ತರಲ್ಲಿ ಕೋರಿದ್ದಾರೆ.

ಆಯ್ಕೆಯಾದ ಬಿಡ್ಡರ್‌ಗಳ ಅರ್ಹತೆ ಹಾಗೂ ಅವರ ಸಂಪರ್ಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಯಾವುದೇ ದುರುಳತೆ, ಅಕ್ರಮ ಅಥವಾ ಹುದ್ದೆಯ ದುರುಪಯೋಗಕ್ಕೆ ಹೊಣೆಗಾರರಾಗಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಷಯವು ಮಹತ್ತರ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ನಿಧಿಗಳ ರಕ್ಷಣೆಯನ್ನು ಖಚಿತಪಡಿಸಲು ಲೋಕಾಯುಕ್ತರು ತುರ್ತು ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಘನತ್ಯಾಜ್ಯ; ಸರ್ಕಾರಿ ಜಾಗವಿದ್ದರೂ ಖಾಸಗಿ ಜಾಗ ಖರೀದಿಗೆ ಒಲವು, ಆರ್ಥಿಕ ಇಲಾಖೆ ಅಭಿಪ್ರಾಯಕ್ಕಿಲ್ಲ ಮನ್ನಣೆ
ಟೆರ್‍ರಾ ಫಾರ್ಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ನಗರಾಭಿವೃದ್ದಿ ಇಲಾಖೆಯು ಬದಿಗೊತ್ತಿತ್ತು. ಈ ಕುರಿತು ದಿ ಫೈಲ್ 2025ರ ಏಪ್ರಿಲ್ 24ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




